ಪುಸ್ತಕದ ಶೀರ್ಷಿಕೆ : ಮಂಜು ಮುಸುಕಿದ ದಾರಿ
ಲೇಖಕರು : ವಿ. ಎಂ. ಇನಾಂದಾರ್
ಪ್ರಕಾಶಕರು : ಗೀತಾ ಬುಕ್ ಹೌಸ್
ಪ್ರಥಮ ಮುದ್ರಣ : 1965
ಮೂರನೇ ಮುದ್ರಣ : 1991 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 250
ಮಂಜು ಮುಸುಕಿದ ದಾರಿಯಲ್ಲಿ ಮುಂದಿನ ಒಂದು ಹೆಜ್ಜೆ ಮಾತ್ರ ಕಾಣುತ್ತದೆ. ಮುಂದಿನ ದಾರಿ ಹೇಗೋ.. ಎಂತೋ..?! ದಾರಿ ಇದೆಯೋ.. ಇಲ್ಲವೋ..?! ಎಂಬ ಚಿಂತೆಯನ್ನು ಬಿಟ್ಟು, ಹೆಜ್ಜೆ ಇಡಲೇಬೇಕು. ಹೆಜ್ಜೆ ಸರಿಯಾಗಿರಬಹುದು ಅಥವಾ ಇಲ್ಲದಿರಬಹುದು, ಎಡವಲೂಬಹುದು. ಆ ಕ್ಷಣದ ನಿರ್ಧಾರ ಮುಂದಿನ ಹೆಜ್ಜೆಯನ್ನು ನಿರ್ಧರಿಸಲಾರದು. ಆದರೆ, ಪ್ರತಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ಯೋಚನೆ ಮಾಡುವುದು ಅತ್ಯಗತ್ಯ. ಎಷ್ಟೇ ಯೋಚನೆ ಮಾಡಿದರೂ.. ಮನುಷ್ಯನ ಯೋಚನೆಗಿಂತ ದೇವರ ನಿರ್ಣಯವೇ ಇಲ್ಲಿ ದೊಡ್ಡದು. ಈ ಕಾದಂಬರಿಯನ್ನು ಕೇವಲ ಮನುಷ್ಯನ ಬದುಕನ್ನು ಮಾತ್ರ ಚಿತ್ರಿಸದೆ ಆಧ್ಯಾತ್ಮ ಹಾಗೂ ಕರ್ಮಫಲಗಳ ವಿಚಾರವಾಗಿಯೂ ಚಿತ್ರಿಸಿದ್ದಾರೆ.
ಈ ಕಾದಂಬರಿಯನ್ನು ಕೇವಲ ಕಾದಂಬರಿಯ ಕಥೆಯಾಗಿಯೇ ನೋಡುವುದಕ್ಕೂ.. ಅದರ ಒಳಹೊಕ್ಕು ಅದರ ಒಳ ಮರ್ಮವನ್ನು ಅರಿತು ಆಲೋಚನೆ ಮಾಡಿದಾಗ ದಕ್ಕುವ ಸಂದೇಶಕ್ಕೂ ಆಳವಾದ ಆಲೋಚನೆಯಂತೆ ಬೇಕೇ ಬೇಕು. ಹಾಗೆಂದು, ಈ ಕಥೆ ತೀವ್ರ ತಾಳ್ಮೆಯನ್ನು ಬೇಡುವುದಿಲ್ಲ. ಇವರ ಬರಹದ ಶೈಲಿ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ನಾವೇ ಅಲ್ಲಿನ ಪಾತ್ರದಂತೆ ಯೋಚಿಸುವಂತೆ ಮಾಡುತ್ತದೆ.
"ಮನುಷ್ಯನ ಬುದ್ಧಿಗೆ ಧಾತುಗತವಾಗಿ ಮುಸುಕಿದ ಮಂಜು ಸರಿಯಬೇಕು. ಮಾನವ ತ್ರಿಕಾಲ ಜ್ಞಾನಿಯಾಗಬೇಕು. ಅಲ್ಲಿಯವರೆಗೆ ಬುದ್ಧಿಯ ಪರಿಮಿತವಾದ ಕಾಣಿಕೆ ಅನೇಕ ಸಂದರ್ಭಗಳಲ್ಲಿ ವಿಪರೀತ ಪರಿಣಾಮಗಳಿಗೆ ಎಡೆ ಕೊಡುತ್ತದೆ. ಆ ಪರಿಹಾರವಲ್ಲದ ದುಃಖಕ್ಕೆ ಅವಕಾಶವನ್ನು ಕಲ್ಪಿಸುತ್ತದೆ." ಎಂದು ತಮ್ಮ ಮುನ್ನುಡಿಯಲ್ಲಿ ಲೇಖಕರು ಹೇಳುತ್ತಾರೆ.
ಇಲ್ಲಿ ಮುಖ್ಯವಾಗಿ ಶ್ರೀಕಾಂತ ಹಾಗೂ ಗೋಪಾಲರ ಜೀವನಗಳು ಕಂಡುಬರುತ್ತವೆ. ಇಬ್ಬರೂ ಜೀವದ ಗೆಳೆಯರು. ಗೋಪಾಲ ಡಾಕ್ಟರ್ ಆದರೆ ಶ್ರೀಕಾಂತ ತಲೆಮಾರುಗಳಿಂದ ಬಂದ ಜಮೀನುಗಳ ಸಿರಿವಂತ. ಗೋಪಾಲನ ತಂದೆ ಇದ್ದುದೆಲ್ಲವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಸದ್ಯಕ್ಕೆ ಆತನ ಮೇಲೆ ಸಾಲವನ್ನೇ ಬಿಟ್ಟು ಹೋಗಿದ್ದರು. ಆದರೆ, ಗೋಪಾಲ ಅದಕ್ಕೆ ತಲೆಕೆಡಿಸಿಕೊಂಡವನಲ್ಲ. ವೃತ್ತಿ ಬದುಕಿನಿಂದ ಎಲ್ಲವನ್ನೂ ತಹಬಂದಿಗೆ ತಂದವನು. ಜನಸೇವೆಯಲ್ಲಿಯೇ ಬದುಕಿನ ತೃಪ್ತಿ ಅರಸುತ್ತಿದ್ದವನು. ಗೋಪಾಲ ಆಧ್ಯಾತ್ಮವನ್ನು ಆಳವಾಗಿ ವಿಮರ್ಶಿಸುತ್ತಾ ಜೀವನಕ್ಕೂ ಅಳವಡಿಸಿಕೊಂಡಂತೆ ಕಾಣುವವನು. ಆದರೆ, ಲೌಕಿಕದ ಕಷ್ಟ-ಸುಖಗಳು ಅವನನ್ನು ಮತ್ತೆ ಸಂಸಾರಕ್ಕೆ ಕಾರುತ್ತರುತ್ತಿರುತ್ತವೆ. ಶ್ರೀಕಾಂತನ ಕಷ್ಟಕ್ಕೆ ಗೋಪಾಲ ಹಾಗೂ ಗೋಪಾಲನ ಕಷ್ಟಕ್ಕೆ ಶ್ರೀಕಾಂತ ಒದಗುವವರು. ಇಬ್ಬರ ಸ್ನೇಹದಲ್ಲಿ, ಬದುಕಿನಲ್ಲಿ ಸ್ವಾರ್ಥವಿಲ್ಲ. ನಿಸ್ವಾರ್ಥವಾದ ಸಂಬಂಧವಿದು.
ಶ್ರೀಕಾಂತನ ವಿವಾಹವಾಗಿ ಹನ್ನೊಂದು ವರ್ಷಗಳ ನಂತರ ಲಕ್ಷ್ಮಿಯ ಹೊಟ್ಟೆಯಲ್ಲಿ ಅವರಿಬ್ಬರ ಕನಸಿನ ಕೂಸು ಪಡಿ ಮೂಡುತ್ತಿತ್ತು. ಅದೇ ಸಂದರ್ಭದಲ್ಲಿ ಶ್ರೀಕಾಂತ ಪ್ರೀತಿಯಿಂದ ಸಾಕಿದ್ದ ನಾಯಿಯ ವರ್ತನೆ ವಿಪರೀತಕ್ಕೇರಿತ್ತು. ಲಕ್ಷ್ಮಿಯ ಯೋಗಕ್ಷೇಮ ನೋಡಿಕೊಳ್ಳಲು ಅವರ ಚಿಕ್ಕಮ್ಮ ತಾಯವ್ವ ಬಂದಿದ್ದರು. ಲಕ್ಷ್ಮಿಗೋ ನಾಯಿಯ ಭಯನ ಅದರಲ್ಲಿಯೂ ಅದರ ವರ್ತನೆ ಕಂಡು ಕೆಲಸದ ಬೂಬುವಿನ ಕೈಯಲ್ಲಿ ಹೇಳಿದಾಗ ಅವರಿಬ್ಬರ ಒಂದು ತಪ್ಪಿನಿಂದ ನಾಯಿ ಜೀವ ಬಿಟ್ಟಿತ್ತು. ಆದರೆ, ಹಾಗೆಯೇ ಇದ್ದಿದ್ದರೆ ನಾಯಿ ಎಷ್ಟು ದಿನ ಬದುಕುತ್ತಿತ್ತು ಎನ್ನುವುದನ್ನು ಅವರು ಆಲೋಚಿಸಬೇಕಿತ್ತು.
ಶ್ರೀಕಾಂತನಿಗೆ ಈ ನಿಜ ವಿಚಾರ ತಿಳಿಯದಿದ್ದರೂ ನಾಯಿಯ ಸಾವಿಗೆ ಇವರೇ ಕಾರಣವಿರಬಹುದು ಎಂಬ ಸಂದೇಹವಂತೂ ಇತ್ತು. ಆದರೆ, ಗರ್ಭಿಣಿಯಾದವಳನ್ನು ನೋಯಿಸುವ ಇರಾದೆ ಇರಲಿಲ್ಲ. ತಾಯವ್ವನಿಗೆ ಈ ವಿಚಾರ ತಿಳಿಯದಿದ್ದರೂ.. ಲಕ್ಷ್ಮಿಯ ಮನಸ್ಸಿನಲ್ಲಿ ಮೂಡಿದ್ದ ಆಲೋಚನೆಯಿಂದ ಗರ್ಭದಲ್ಲಿದ್ದ ಮಗುವಿಗೂ ತೊಂದರೆ ಆಗಬಹುದು ಎಂಬ ಆತಂಕವಿತ್ತು.
ಹುಟ್ಟಿದ ಮಗು ಸುಮತಿ. ಆಕೆ ಗರ್ಭದಲ್ಲಿದ್ದಾಗನಿಂದಲೂ ಆಕೆಯ ಯೋಗಕ್ಷೇಮ ನೋಡುತ್ತಿದ್ದದ್ದೇ ಗೋಪಾಲ. ಆದರೆ, ಅವಳ ಹುಟ್ಟಿನ ಸಮಯದಲ್ಲಿ ಗೋಪಾಲನಲ್ಲಿ ಮೂಡಿದ ಅಸಹಜ ಭಯವೇ ಮುಂದೆ ನಿಜವಾಗುತ್ತದೆ. ಸುಮತಿ ದೇಹದಲ್ಲಿ ಬೆಳೆಯುತ್ತಾ ಹೋದರೂ ಬುದ್ಧಿಯಲ್ಲಿ ಇನ್ನೂ ಮಗುವಿನಂತೆ. ಮುಂದೆ ಶ್ರೀಕಾಂತ ಹಾಗೂ ಲಕ್ಷ್ಮಿಯರಿಗೆ ಹುಟ್ಟಿದ ಶಾರದಾ ಹಾಗೂ ಮೋಹನ. ಆ ಇಬ್ಬರು ಮಕ್ಕಳು ಸದೃಢರಾಗಿ, ಬುದ್ಧಿವಂತರಾಗಿ ಬೆಳೆಯುವುದು ಅವರಿಗೆ ನೆಮ್ಮದಿ ತರುತ್ತದಾದರೂ.. ಶ್ರೀಕಾಂತನೇ ಸುಮತಿಯ ಪ್ರತಿಯೊಂದು ವಿಚಾರದಲ್ಲಿಯೂ ತಾಳ್ಮೆಯಿಂದ ಪೋಷಿಸುವ ತಾಯಿಯಾಗಿದ್ದ.
ಗೋಪಾಲನಿಗೆ ಮದುವೆಯ ಮನಸ್ಸಿರಲಿಲ್ಲವಾದರೂ ನಂತರದಲ್ಲಿ.. ಮದುವೆಯಾದರೂ ಆಗಬಹುದು ಎನ್ನುವ ಭಾವದಲ್ಲಿದ್ದಾಗ ಶ್ರೀಕಾಂತನೇ ಮುಂದೆ ನಿಂತು ತಮ್ಮ ಹೊಲಗಳ ಉಸ್ತುವಾರಿ ವಹಿಸಿಕೊಂಡಿದ್ದ ಶಂಕರಪ್ಪನ ಮಗಳು ಸುಮಿತ್ರಳನ್ನು ವಿವಾಹ ಮಾಡಿಸಿದ್ದ. ಗೋಪಾಲನದ್ದು ನಿರ್ಲಿಪ್ತ ಸ್ವಭಾವವಾದರೆ, ಸುಮಿತ್ರೆಯದ್ದು ಅತಿ ಉತ್ಸಾಹ ಹಾಗೂ ಯೌವ್ವನದ ಚಿಲುಮೆ. ಒಬ್ಬರು ಹಾಗಿದ್ದರೆ ಸರಿ ಎಂಬ ಭಾವವೂ ಅದರಲ್ಲಿತ್ತು. ಸುಮಿತ್ರ ಗೋಪಾಲನನ್ನು ಸಂಸಾರಸ್ಥನಾಗಿ ಮಾಡಿ ಆತನ ಭಾವನೆಗಳನ್ನು ಉದ್ದೀಪಿಸಿದಳು ಎಂದರೂ ತಪ್ಪಾಗಲಾರದು. ಆದರೆ, ಗೋಪಾಲನ ಮನಸ್ಸಿನಲ್ಲಿ ಮಗುವಿನ ವಿಚಾರದಲ್ಲಿ ಸಾಕಷ್ಟು ತಾಕಲಾಟವಿತ್ತು. ತಮ್ಮ ಹಿರಿಯರ ಕರ್ಮಫಲದಿಂದ ತಮ್ಮ ಮಗು ಏನಾಗುವುದೋ ಎಂಬ ಆತಂಕವಿತ್ತು. ಸುಮತಿಯ ಪರಿಸ್ಥಿತಿ ಇನ್ನೂ ಯೋಚಿಸುವಂತೆ ಮಾಡಿತ್ತು. ಆತನ ಭಯವೇ ನಿಜವಾಗುವಂತೆ ಮದುವೆಯಾದ ಐದು ವರ್ಷದ ನಂತರ ಹುಟ್ಟಿದ ಮಗು ಹುಟ್ಟಿದಾಗಲೇ ಸತ್ತುಹೋಗಿತ್ತು.
ಸುಮತಿಯನ್ನು ನೋಡಿದಾಗಲೆಲ್ಲಾ ಮಗು ಸತ್ತು ಹೋದದ್ದೇ ಒಳ್ಳೆಯದಾಯ್ತು ಎನ್ನುವ ಗೋಪಾಲನ ಮನಸ್ಥಿತಿ ಮುಂದೆ ಆತನಿಗೆ ಮಕ್ಕಳ ಆಸೆಯನ್ನು ಕಮರಿಸಿತು. ಅಲ್ಲದೆ, ಆತ ಅದಕ್ಕಾಗಿ ತೆಗೆದುಕೊಂಡ ನಿರ್ಧಾರ ಬದುಕಿನಲ್ಲಿ ಬಹಳ ದೊಡ್ಡ ಬೆಲೆ ತೆರುವಂತೆ ಮಾಡಿತು.
ಗೋಪಾಲನ ಮನಸ್ಥಿತಿ ಎಲ್ಲದರಲ್ಲೂ ಆಯ್ತು ಎಂದರೂ ಆಯ್ತು .ಬೇಡವೆಂದರೆ ಬೇಡ. ಇಂಥಹದ್ದೇ ಬೇಕು ಎನ್ನುವ ಮನಸ್ಥಿತಿವನಲ್ಲ. ಅವನ ನಿರ್ಲಿಪ್ತತೆಗೆ ಸುಮಿತ್ರ ಕೆಲವು ಕಾಲ ಮದ್ದಾದಳಾದರೂ ನಂತರದ ದಿನಗಳಲ್ಲಿ ಸುಮಿತ್ರಳಿಗೆ ತನಗೆ ಮಗು ಬೇಕು ಎನ್ನುವ ಹಂಬಲ ಹೆಚ್ಚಾಗುತ್ತಲೇ ಹೋಯಿತು. ಮೊದಲ ಮಗುವಿನ ಸಾವಿನ ನಂತರ ಅದು ಅವರ ದಾಂಪತ್ಯದ ಮೇಲೂ ಪರಿಣಾಮ ಬೀರುತ್ತದೆ. ಆಸ್ಪತ್ರೆ ಕಟ್ಟಿಸಲು ಬರುವ ಕಾಂಟ್ರಾಕ್ಟರ್ ಸುಬ್ಬರಾಯನ ಮನಸ್ಥಿತಿ ಸುಮಿತ್ರಳಿಗೆ ಬಹಳ ಹೊಂದುತ್ತದೆ. ಅವರ ಆತ್ಮೀಯತೆ ಆತನೊಂದಿಗೆ ಗೆಳೆತನವಾಗಿಯೇ ಉಳಿಯಿತೇ ಓದಿ ನೋಡಿ.
ಮಧ್ಯಮ ವರ್ಗದ ಕುಟುಂಬದಿಂದ ವಿವಾಹ ಕಷ್ಟವಾಗಿತ್ತು ಎನ್ನುವ ಸಂದರ್ಭದಲ್ಲಿ ಮದುವೆಯಾದ ಸುಮಿತ್ರ ತನ್ನತನವನ್ನು ಹೆಚ್ಚಿಸಿಕೊಂಡು ಇಡೀ ಕಾದಂಬರಿಯಲ್ಲಿ ತನ್ನದೇ ಛಾಪು ಮೂಡಿಸುವ ಪರಿ ಅವಕಾಶ ಸಿಕ್ಕರೆ ಹೆಣ್ಣು ಹೇಗೆ ಬೇಕಾದರೂ ಬದಲಾಗುತ್ತಾಳೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ಸುಮತಿ ದೊಡ್ಡವಳಾಗುತ್ತಾ ಹೋದಂತೆ ಅವಳ ಹಾಗೂ ಮನೆಯವರ ಕಷ್ಟಗಳ ಪರಂಪರೆಯು ದೊಡ್ಡದಾಗುತ್ತಲೇ ಹೋಯಿತು. ಅಪಸ್ಮಾರ, ನಂತರ ಶಾರದೆಗೆ ಗಂಡು ಹುಡುಕುವ ಸಂದರ್ಭದಲ್ಲಿ ಸುಮತಿಯ ಪರಿಸ್ಥಿತಿ ಅವಳ ಸಂಬಂಧಕ್ಕೂ ತೊಡಕಾಗಿ ನಿಂತಿತು. ಚಿಕ್ಕಂದಿನಲ್ಲಿ ಆಯುರ್ವೇದ ವೈದ್ಯರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ತಿರಸ್ಕರಿಸಿದ ಪರಿಣಾಮ ಶ್ರೀಕಾಂತ ಬೇರೆಯದ್ದೇ ನಿರ್ಧಾರ ತಳೆಯುವಂತೆ ಮಾಡಿತು. ಇದಕ್ಕೆ ಲಕ್ಷ್ಮಿ ಒಪ್ಪಿದಳೇ? ಶಾರದೆ ಹಾಗೂ ಮೋಹನರ ಮನಸ್ಥಿತಿ ಹಾಗೂ ಪರಿಸ್ಥಿತಿಗಳು ಏನಿದ್ದವು..?
ಇಂದಿನ ದಿನಗಳಲ್ಲಿ ಸುಮತಿಯಂತಹ ಮಕ್ಕಳನ್ನು ಗರ್ಭದಲ್ಲಿಯೇ ಪರೀಕ್ಷಿಸಿ ಅಂತಹ ಮಕ್ಕಳಿಗೆ ಜೀವ ನೀಡದಿರುವ ಆಯ್ಕೆಗಳಿವೆ. ಆದರೆ, ಅಂದಿನ ದಿನಗಳು ಹಾಗಿರಲಿಲ್ಲ. ಈ ಪರಿಸ್ಥಿತಿಯನ್ನು ಮನುಷ್ಯ ಬದಲಾಯಿಸಬಲ್ಲನಾದರೂ.. ಸುಮಿತ್ರಿಯ ಗರ್ಭದಲ್ಲಿ ಎಲ್ಲವೂ ಸರಿಯಾಗಿದ್ದ ಕೂಸು ಹುಟ್ಟದೆ ಅಲ್ಲಿಗೆ ಮುರುಟಿದ್ದಕ್ಕೆ ಕರ್ಮಫಲ ಎನ್ನಬಹುದೇ..?
ಇಲ್ಲಿ ಈ ಕಥೆಯನ್ನು ಗೋಪಾಲ ಹಾಗೂ ಶ್ರೀಕಾಂತರ ಮನಸ್ಥಿತಿಯನ್ನು ಹಾಗೂ ಅವರ ಪರಿಸ್ಥಿತಿಯನ್ನು ಆಲೋಚಿಸಿ 30 ವರ್ಷಗಳಲ್ಲಿ ಕಟ್ಟಿಕೊಟ್ಟ ಕಥಾನಕ. ಇಲ್ಲಿ ಹೊರಗಿನವರ ದೃಷ್ಟಿ ಹಾಗೂ ಹೊರಗಿನವರ ಪ್ರವೇಶವಿಲ್ಲ. ಹೊರಗಿನವರ ಚಾಡಿ ಮಾತುಗಳಿಲ್ಲ. ಚುಚ್ಚು ಮಾತುಗಳಿಲ್ಲ ಬದಲಾಗಿ ಮನಸ್ಥಿತಿಯೇ ಇದೆಲ್ಲವನ್ನು ಪರಾಮರ್ಶಿಸುವ ಪರಿ ಕಾಣುತ್ತದೆ.
ಸರಳ ಹಾಗೂ ಸರಾಗವಾದ ಓದು ಇದಾದರೂ ಗಂಭೀರವಾದ ಆಲೋಚನೆ ಹುಟ್ಟಿಸುವ ಕಾದಂಬರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ