ಪುಸ್ತಕದ ಶೀರ್ಷಿಕೆ : ಕೃತಾಕೃತ
ಲೇಖಕರು : ಯತಿರಾಜ್ ವೀರಾಂಬುಧಿ
ಪ್ರಕಾಶಕರು : ಜಾಗೃತಿ ಪ್ರಿಂಟರ್ಸ್
ಗೌರವ ಸಂಪಾದಕರು : ನಿಡಸಾಲೆ ಪುಟ್ಟಸ್ವಾಮಯ್ಯ
ಪ್ರಥಮ ಮುದ್ರಣ : 2008
ಪುಟಗಳು : 192
ಬೆಲೆ : 110 ರೂ.
ಈ ಕಥಾ ಸಂಕಲನದಲ್ಲಿ ಮೂರು ಸೊಗಸಾದ ನೀಳ್ಗತೆಗಳಿವೆ. ನಿರೀಕ್ಷೆ, ಪತ್ತೆ ಹಾಗೂ ಕೃತಾಕೃತ.
ನಿರೀಕ್ಷೆ : ಲೇಖಕರ ನುಡಿಯಲ್ಲಿ ಯತಿರಾಜ್ ವೀರಾಂಬುಧಿಯವರು ನಿರೀಕ್ಷೆ ಅವರ ಮೊತ್ತ ಮೊದಲ ಫಿಕ್ಷನಲ್ ಬರವಣಿಗೆ ಎನ್ನುತ್ತಾರೆ. ಇದು 1992ರ ಸೆಪ್ಟಂಬರ್‌ನ ರಾಗಸಂಗಮ ದಲ್ಲಿ ಪ್ರಕಟವಾಗಿದೆ.
ಯತಿರಾಜ್ ಸರ್ ಅವರ ಕಥೆಗಳ ಹುಟ್ಟುವಿಕೆಯ ಕುರಿತು ಕೇಳುವುದೇ ಸೊಗಸು. ಇವು ವಾಸ್ತವದ ಘಟನೆಗಳಿಗೆ ಕಲ್ಪನೆಯ ರೂಪದೊಂದಿಗೆ ಅರಳಿರುತ್ತವೆ. ಲೇಖಕರು ಕೇಳಿದ ಇಬ್ಬರು ನತದೃಷ್ಟ ಯುವತಿಯರ ನಿಜ ಜೀವನದ ಘಟನೆಗಳಿಗೆ ಕಲ್ಪನೆ ಬೆರೆಸಿ ಬರೆದ ಕಥೆ ನಿರೀಕ್ಷೆ ಎಂದು ಹೇಳಿದ್ದಾರೆ.
ದೀಪಾಳ ಜೀವನ ದರ್ಶನ ಮಾಡಿಸಿರುವ ಈ ಕಥೆಯಲ್ಲಿ ಸುಕುಮಾರಿಯಾಗಿ ಬೆಳೆದಿದ್ದ ಅವಳು ತನ್ನ ಅತ್ತೆಯ ಮನೆಯಲ್ಲಿ ಅನುಭವಿಸುತ್ತಿದ್ದ ಗೋಳನ್ನು ಹಾಗೂ ಅವಳ ನತದೃಷ್ಟ ಬದುಕನ್ನು ತೆರೆದಿಟ್ಟಿದ್ದಾರೆ. ಮದ್ದೂರಿನ ಅಕ್ಕಿ ಗಿರಣಿ ಮಾಲೀಕರಾಗಿದ್ದ ಶಂಕರ್ ರಾವ್ ಅವರ ಇಬ್ಬರು ಮಕ್ಕಳಲ್ಲಿ ದೀಪಾ ಮೊದಲನೆಯವಳು. ಓದಿನಲ್ಲಿ ಆಕೆ ಆಸಕ್ತಿ ತೋರದಿದ್ದರೂ.. ಸಂಗೀತ, ಸಾಹಿತ್ಯ ಅದರಲ್ಲಿಯೂ ದಾಸಸಾಹಿತ್ಯ ಆಕೆಯನ್ನು ಸೆಳೆದಿತ್ತು. ದೀಪಾ ಆಗಾಗ ತನ್ನ ಬದುಕಿಗೆ ಹೊಂದಿಕೆಯಾಗುವ ದಾಸರ ಪದಗಳನ್ನು ನೆನೆಯುವ ಪರಿ ಈ ಕಥೆಯಲ್ಲಿ ವಿಶೇಷವೆನಿಸುತ್ತದೆ.
ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ ಇದ್ದವಳಿಗೆ ಸಿಕ್ಕಿದ್ದು ತದ್ವಿರುದ್ಧವಾದ ಪತಿ ಹಾಗೂ ಪತಿಗೃಹ. "ಆದದ್ದೆಲ್ಲಾ ಒಳಿತೇ ಆಯಿತು" ಎಂಬ ದಾಸವಾಣಿಯನ್ನು ನೆನೆಯುತ್ತಿದ್ದವಳ ಬದುಕಲ್ಲಿ ವಿಷ್ಣು ಆಕೆಯನ್ನು ಇಷ್ಟಪಟ್ಟು ಮದುವೆಯಾದರೂ ಅತ್ತೆ ಮನೆಯಲ್ಲಿ ಅಂತಹ ದೊಡ್ಡ ಸ್ವಾಗತವೇನೂ ಅವಳಿಗೆ ಸಿಕ್ಕಲಿಲ್ಲ. ಅತ್ತೆ ಮೀನಾಕ್ಷಮ್ಮನ ಕ್ಷಣಕ್ಷಣದ ಕಾಟ, ಜಯಶ್ರೀಯ ಕಿರುಕುಳ, ಇದೆಲ್ಲದರ ಜೊತೆಗೆ ವಿಷ್ಣುವಿನ ಚುಚ್ಚು ಮಾತು. ಇವೆಲ್ಲವನ್ನು ಸಹಿಸಿ ಬದುಕುತ್ತಿದ್ದವಳ ಬದುಕಲ್ಲಿ ಮಗಳು ಜ್ಯೋತಿ ಬಂದಿದ್ದಳು. ಮಾವನಿಗೆ ಎಲ್ಲವೂ ಅರಿವಿದ್ದರೂ ಮೂಕಜೀವಿ.
ಇಂತಹ ದೀಪಾಳ ಕಡು ಕಷ್ಟದ ಬದುಕು ಸಹ ಮತ್ತೊಂದು ಜೀವದ ಬದುಕಲ್ಲಿ ತನ್ನ ಕಷ್ಟವನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ಹಾಗೂ ಬದುಕನ್ನು ನೋಡುವ ರೀತಿಯಲ್ಲಿ ಬದಲಿಸುತ್ತದೆ. ಅದು ಹೇಗೆ..? ಅವಳ ಬದುಕಲ್ಲಿ ಅವಳು ನಿರೀಕ್ಷಿಸಿದ ನೆಮ್ಮದಿ ಸಿಗುತ್ತದೆಯೇ ಓದಿ ನೋಡಿ.
ಪತ್ತೆ : ಈ ಕಥೆಯೂ ನಿಜ ಜೀವನಕ್ಕೆ ಸಂಬಂಧಪಟ್ಟದ್ದೇ ಎಂದು ಹೇಳಿದ್ದಾರೆ. 1997ರ ಅಕ್ಟೋಬರ್ ನ ಮಧುರ ಪಲ್ಲವಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.
ಈ ಕಥೆಯಲ್ಲಿ ರಮ್ಯಾ ಹಾಗೂ ಕೌಂಡಿನ್ಯರ ಅನ್ಯೋನ್ಯತೆಯ ದಾಂಪತ್ಯ ಹಾಗೂ ಅವರ ಮಾತುಗಳು ಚೇತೋಹಾರಿಯಂತಿವೆ. ಪುಟ್ಟ ಮಗು ನಿಖಿಲ್ ಇವರಿಬ್ಬರನ್ನು ನೋಡಿ ಅನುಸರಿಸುವ ಹಾಗೂ ಅನುಕರಣೆ ಮಾಡುವ ಚಿತ್ರಣ ಮಕ್ಕಳಿರುವ ಮನೆಮನೆಯ ದೈನಂದಿನ ದಿನಚರಿಯನ್ನು ನೆನಪಿಸುತ್ತದೆ.
ರಮ್ಯಾಳಿಗೆ ಅವಳ ಆತ್ಮೀಯ ಗೆಳತಿ ಶರ್ಮಿಲಾ ಎಸ್. ಸುಂದರ್ ತೀರಿಕೊಂಡಳೆಂಬ ಬರಸಿಡಿಲಿನಂತಹ ಸುದ್ದಿ ಮಹಿಳಾ ಸಮಾಜದ ಕಾರ್ಯದರ್ಶಿ ಶಾಲಿನಿಂದ ತಿಳಿಯುತ್ತದೆ. ಅವಳಿಗೆ ಆಕೆಯ ನಾದಿನಿ ಕೋಮಲಾ ಹೇಳಿದ್ದು.
ಇತ್ತೀಚೆಗೆ ಅವಳು ಬರೆದ ಪತ್ರಕ್ಕೆ ಬಾರದ ಪ್ರತ್ಯುತ್ತರ, ಜೊತೆಗೆ ಈ ಸುದ್ದಿಯೂ ಸೇರಿ ಆಕೆಯನ್ನು ದುಃಖದ ಮಡುವಿನಲ್ಲಿ ನೂಕುತ್ತದೆ.
ಆದರೆ, ಕೌಂಡಿನ್ಯ ಇಲ್ಲಿ ಎಲ್ಲೋ ತಪ್ಪು ತಿಳಿವಳಿಕೆ ಆಗಿರಬಹುದು ಎಂದೇ ಹೇಳುತ್ತಾನೆ. ಹೀಗೆ ಶರ್ಮಿಲಾಳ ಸಾವಿನ ಸುದ್ದಿಯಿಂದ ಶುರುವಾಗುವ ಈ ಪತ್ತೇದಾರಿ ಕಥೆ ರೋಚಕವಾಗಿ ಸಾಗುತ್ತದೆ. ಈ ಪತ್ತೇದಾರಿಕೆಯಲ್ಲಿ ಕೌಂಡಿನ್ಯ ಯಾವ ಹಾದಿಯಲ್ಲಿ ಸಾಗುತ್ತಾನೆ..? ರಮ್ಯಾ ಇದಕ್ಕೆ ಜೊತೆಯಾಗುವುದು ಹೇಗೆ..? ಓದಿ ನೋಡಿ.
ಕೃತಾಕೃತ : ಇಂಧನ ತಯಾರಿಸಿರುವೆನೆಂದು ಹೇಳಿಕೆ ನೀಡಿ, ನಂತರ ತಮಾಷೆಗೆ ಎಂದು ಮತ್ತೆ ಹೇಳಿಕೆ ನೀಡಿದ್ದ ನಿಜ ಘಟನೆಯಲ್ಲಿ ಒಂದು ವೇಳೆ ಮೊದಲನೆಯ ಹೇಳಿಕೆ ನಿಜವಾಗಿದ್ದಿದ್ದರೆ..?! ಈ ಕಲ್ಪನೆಯೇ ಕಥೆಯ ಮೂಲ ದ್ರವ್ಯ ಎನ್ನುತ್ತಾರೆ. ಇದು ಸಂಜೆವಾಣಿ ಚೇತನ ಮಾಸಪತ್ರಿಕೆಯ ಏಪ್ರಿಲ್ 1998ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.
ಉತ್ತುಂಗಗಿರಿಯಲ್ಲಿ ಯುವಕನೊಬ್ಬ ಕೆಲವು ಗಿಡಮೂಲಿಕೆಗಳನ್ನು ಉಪಯೋಗಿಸಿ ನೀರಿನಿಂದ ಪೆಟ್ರೋಲ್ ತಯಾರಿಸಿ ದ್ವಿಚಕ್ರ ವಾಹನಗಳಿಗೆ ಹಾಕಿ ಓಡಿಸಿ ತೋರಿಸಿದ ಘಟನೆ ದೊಡ್ಡದಾಗಿಯೇ ಸದ್ದು ಮಾಡಿತ್ತು.
ಪಾರ್ಥಸಾರಥಿಯವರ ಮೊದಲ ಮಗ ಪ್ರಫುಲ್ ತನ್ನ ಸಂಶೋಧನೆಯ ಫಲವಾಗಿ ಇದನ್ನು ಕಾರ್ಯರೂಪಕ್ಕೆ ತಂದಿದ್ದು, ಮೂವರು ಗೆಳೆಯರ ಒತ್ತಾಯದ ಮೇರೆಗೆ ಬಹಿರಂಗಗೊಳಿಸಿದ್ದನು.
ಈ ಸುದ್ದಿ ನೇಪಥ್ಯಸತ್ಯದಲ್ಲಿ ಕೆಲಸ ಮಾಡುತ್ತಿದ್ದ ಸೂರ್ಯನಿಗೆ ಹೆಚ್ಚೇ ಅಚ್ಚರಿ ಹಾಗೂ ಖುಷಿ ತಂದಿತ್ತು. ಪ್ರಫುಲ್ಲ ಸೂರ್ಯನ ಬಾಲ್ಯ ಸ್ನೇಹಿತ. ಈಗಿದ್ದ ಸ್ನೇಹಿತ ಚಂದ್ರನ ಜೊತೆಗೂಡಿ ಪ್ರಫುಲ್ಲನನ್ನು ಕಾಣಲು ಉತ್ತುಂಗಗಿರಿಗೆ ಹೋದಾಗ ಅಲ್ಲಿ ಅಚ್ಚರಿ ಕಾದಿತ್ತು. ಅವರ ಮನೆಗೆ ಹೋದಾಗ ಮೊದಮೊದಲು ಆತನ ತಂದೆ-ತಾಯಿ ಸುದ್ದಿ ಮುಚ್ಚಿಟ್ಟರೂ ನಂತರ ಆತ ಕಾಣೆಯಾಗಿದ್ದು ತಿಳಿದು ಸೂರ್ಯ ಹಾಗೂ ಚಂದ್ರರೂ ನಡೆಸುವ ಪತ್ತೇದಾರಿಕೆಯ ಫಲವಾಗಿ ಮುಂದೇನಾಯಿತು..? ಅಷ್ಟಕ್ಕೂ ಆ ಸಂಶೋಧನೆ ನಿಜವೇ ಓದಿ ನೋಡಿ.
ಪ್ರಫುಲನ ಮೂವರು ಸ್ನೇಹಿತರಾದ ಕ್ವಾಟೆ, ಫಣಿಶಾಹಿ ಹಾಗೂ ಅಜೇಯ ಇವರುಗಳಲ್ಲಿ ಆತನಿಗೆ ಮೋಸ ಮಾಡಿದ್ದು ಯಾರು..?
ಪ್ರಫುಲನ ಜ್ಞಾನ ಆತನ ಸ್ನೇಹವಲಯದಲ್ಲಿಯೂ ವಿಭಿನ್ನವಾಗಿಯೇ ಕಾಣುತ್ತದೆ. ಆತ ಪಾರಿಜಾತಳಿಗೆ ಇಟ್ಟ ಹೆಸರು ಮಿಮೋಸಾ ಪ್ಯೂಡಿಕಾ, ಅಂದರೆ ಮುಟ್ಟಿದರೆ ಮುನಿ ಲಾಜವಂತಿ ಗಿಡ.
ಇಲ್ಲಿನ ಸಂಭಾಷಣೆಗಳೆಲ್ಲವೂ ಚೇತೋಹಾರಿಯಾಗಿ ಸಾಗುತ್ತವೆ.
ಎಲ್ಲಿಯೂ ಬೇಸರ ತರಿಸದಂತೆ.. ಮತ್ತಷ್ಟು ಕುತೂಹಲ ಮೂಡಿಸುವಂತೆ, ಸಂಭಾಷಣೆಗಳಲ್ಲಿ ಒಂದಲ್ಲಾ ಒಂದು ಹೊಸತನವಿಟ್ಟು ಕಥೆಗಳನ್ನು ಕಟ್ಟಿಕೊಡುವ ಪರಿ ನನಗಿಷ್ಟ. ಅಂತೆಯೇ ಕತೆಗಳಲ್ಲಿ ಬರುವ ಹೆಸರುಗಳು ಸಹ, ಪತ್ತೇದಾರಿ ಕಥೆಗಳನ್ನು ಇಷ್ಟಪಡುವವರಂತೂ ಈ ಕತೆಗಳನ್ನು ತಪ್ಪದೇ ಓದಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ