ಪುಸ್ತಕದ ಶೀರ್ಷಿಕೆ : ಆಟ
ಲೇಖಕರು : ಯಶವಂತ ಚಿತ್ತಾಲ
ಪ್ರಕಾಶಕರು : ಪ್ರಿಸಮ್ ಬುಕ್ಸ್ ಪ್ರೈ. ಲಿ.
ಪ್ರಥಮ ಮುದ್ರಣ :1969
ಮೂರನೇ ಮುದ್ರಣ : 2012 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 84
ಬೆಲೆ : 75 ರೂ.
ಯಶವಂತ ಚಿತ್ತಾಲರ ಕಥೆಗಳ ಕುರಿತು ಮುನ್ನುಡಿಯಲ್ಲಿ ಗೋಪಾಲಕೃಷ್ಣ ಅಡಿಗರು ಒಂದು ಮಾತನ್ನು ಹೇಳುತ್ತಾರೆ. "ಈ ಕಥೆಗಳೆಲ್ಲದಕ್ಕೂ ಚಿತ್ತಾಲತನದ ಮುದ್ರೆ ಬಿದ್ದಿದೆ ಎಂಬುದನ್ನು ಒತ್ತಿ ಹೇಳಬೇಕು." ಎಂದು. ಅದು ನಿಜಕ್ಕೂ ಹೌದು. ಇಲ್ಲಿನ ಪಾತ್ರ ವರ್ಣನೆ, ಜೊತೆಗೆ ರೂಪಕಗಳಲ್ಲಿ ಹೊಸ ಹೊಳವು ಕಾಣುತ್ತದೆ. ಕಣ್ಮುಂದೆಯೇ ಕಂಡಂತೆ ನಡೆಯುವ ಕಥೆಯ ಸಹಜತೆಯನ್ನು ಕಾಣಬಹುದು. ಇಲ್ಲಿನ ಕಥೆಗಳು ವಿಶಿಷ್ಟ ಮಾತ್ರವಲ್ಲ.. ಇಂದಿನ ಕಥೆಗಾರರಿಗೆ ಒಂದು ಪಾಠದಂತೆಯೂ ಇವೆ. ಹೇಳಿಯೂ ಹೇಳದ ಎಷ್ಟೋ ವಿಚಾರಗಳು ಮತ್ತೊಂದು, ಮಗದೊಂದು ಓದಿಗೆ ಹೊಸ ಹೊಳಹನ್ನೇ ದಾಟಿಸುತ್ತವೆ ಎನಿಸಿತು.
ಇದು ನಾನು ಓದಿದ ಯಶವಂತ ಚಿತ್ತಾಲರ ಮೂರನೇ ಪುಸ್ತಕ. ಮೂರನೇ ಕಥಾಸಂಕಲನವೂ ಹೌದು. ಓಡಿ ಹೋದ ಮುಟ್ಟಿ ಬಂದ, ಪುಟ್ಟನ ಹೆಜ್ಜೆ ಕಾಣೋದಿಲ್ಲ ನಂತರ ಓದಿದ ಈ ಪುಸ್ತಕದಲ್ಲಿ ಅನುಕ್ರಮವಾಗಿಯೇ ಆರು ಕಥೆಗಳಿದ್ದು.. ಸೆರೆ ಹಾಗೂ ಹಾವು ಕಥೆಗಳನ್ನು ಒಂದು ವಿಭಾಗದಲ್ಲಿಯೂ ಅದೃಷ್ಟ, ಪಯಣ, ಆಟ ಕಥೆಗಳನ್ನ ಮತ್ತೊಂದು ವಿಭಾಗವೆಂದೂ ಛಲ ಕಥೆಯನ್ನು ಮತ್ತೊಂದು ವಿಭಾಗವೆಂದು ವಿಂಗಡಿಸಿದ್ದಾರೆ.
**************
ಸೆರೆ : ಶಂಕರರಾಯರ ಮನೆಯ ಕೆಲಸದ ಹುಡುಗಿ ದೇವಿಯ ಕಣ್ಣಲ್ಲಿ ಕಾಣುವ 'ಬರ್ಮಾಚಾರಿ ಒಡೆದಿರು' ನಮಗೂ ದರ್ಶನವಾಗುತ್ತಾ ಹೋಗುತ್ತಾರೆ. ಪರಿಚಯವೆಂದರೆ ಕೇವಲ ಅವರ ಬಾಹ್ಯದ ಚಲನೆಗಳು ಮಾತ್ರವಲ್ಲದೇ.. ಅವರ ಅಂತರಂಗದ ಭಾವನೆಗಳ ಮೂಲಕವೂ ಪರಿಚಯವಾಗುತ್ತಾರೆ. ಪಿತೃಪಕ್ಷದ ದಿನದಂದು, ಅಂಗಡಿ ಬಾಗಿಲು ಮುಚ್ಚಿ ಮನೆಯಲ್ಲಿ ಅಡ್ಡಾದವರಿಗೆ ತನ್ನ ಮದುವೆಯ ಪುರಾಣ ಬಿಚ್ಚಿದ ಅಮ್ಮನ ಮಾತು ಕೇಳಿ ಕಿಡಿಕಿಡಿಯಾಗಿ ಹೊರಟವರಿಗೆ ಹಳೆ ಮನೆಗೆ ಹೋಗಬೇಕೆಂಬ ನಿರ್ಧಾರ ತಕ್ಷಣಕ್ಕೆ ಬಂದದ್ದಾ..? ಅಷ್ಟಕ್ಕೂ ಹಳೆಮನೆಯನ್ನು ಬಿಟ್ಟು ಬಂದು ಈ ಮನೆಯನ್ನು ಸೇರಿದ್ದಾದರೂ ಏಕೆ..? ಈಗ ಆ ಮನೆಯ ರಿಪೇರಿ ಕೆಲಸಕ್ಕೆ ಹೊರಟದ್ದು ಏಕೆ ನೀವೇ ಓದಿ ತಿಳಿಯಿರಿ.
ಹೊನ್ನಪ್ಪಾಚಾರಿಯ ಮನೆಗೆ ಹೋದಾಗ ಸಿಕ್ಕಿದ್ದು ಆತನ ಪತ್ನಿ. ಆಕೆಯ ಹಾಗೂ ದೇವಿಯ ಕುರಿತು ಬರ್ಮಾಚಾರಿಯ ಮನಸ್ಸಿನಲ್ಲಿ ಬಂದ ಮಾತುಗಳೇನು..?
ಹಳೆಮನೆಯ ರಿಪೇರಿ ಎಂದು ಒಳಹೊಕ್ಕವರು ಕೊನೆಯ ಮೂಳೆ ಹೊಡೆದು ಮುಗಿದ ನಂತರ ಆ ಮನೆಯಲ್ಲಿಯೇ ಬಂದಿಯಾದ ಭಾವ ಬಂದಿದ್ದಾದರೂ ಏಕೆ..?
ಮನುಷ್ಯನ ಭಯ ಹಾಗೂ ಬದಲಾಗುವ ಭಾವನೆಗಳನ್ನೂ ಇಲ್ಲಿ ಸ್ಪಷ್ಟವಾಗಿ ಕಾಣಬಹುದು. ಜೊತೆಗೆ, ತನ್ನ ಆಲೋಚನೆಗಳಲ್ಲಿಯೇ ಸೆರೆಯಾಗುವವರನ್ನೂ..!
ಹಾವು : ಇಲ್ಲಿ ಹಾವು ರೂಪಕವಾಗಿ ಬಳಕೆಯಾದಂತೆನ್ನಿಸಿತು. ಆ ಮನೆಯಲ್ಲಿದ್ದು ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಕೆಲಸಕ್ಕೆಂದು ಇದ್ದ ದೇವಿ. ಚಿಕ್ಕಮ್ಮನ ಅನಾರೋಗ್ಯದ ಸಂದರ್ಭದಲ್ಲಿ ಆತ ಅವರ ಮನೆಗೆ ಹೋದಾಗ ಆತನಿಗೆ ಬೇಸರವಾಗಬಾರದೆಂದು ಲವಲವಿಕೆಯಿಂದ ಇರುವ ಚಿಕ್ಕಮ್ಮ. ಪುರುಷೋತ್ತಮನ ಕಣ್ಣಲ್ಲಿ ಕಾಣುವ ಮನೆಯ ಚಿತ್ರಣ ಬೇರೆಯದ್ದೇ ನೋಟವನ್ನು ತೆರೆದಿಡುತ್ತದೆ. ಪುರುಷೋತ್ತಮ ಇಲ್ಲಿ ಹೊರಗಡೆಯಿಂದ ನೋಡುವವ. ಸಮಾಜದ ದೃಷ್ಟಿ ಆತನ ಮಾತುಗಳಲ್ಲಿ ವ್ಯಕ್ತವಾಗಿದೆ. ಹೀಗಿದ್ದ ಮನೆಯಲ್ಲಿ ಹಾವು ಕಂಡಂತೆಯೂ.. ಸರ್ರನೆ ಶಬ್ದವಾದರೆ ಅದೇ ಭಯದಲ್ಲಿರುವಂತೆಯೂ.. ಒಟ್ಟಿನಲ್ಲಿ ಹಾವಿನ ವಿಚಾರವೇ ಎಲ್ಲರ ತಲೆಯಲ್ಲೂ... ಈ ನಾಲ್ಕರ ವಿಭಿನ್ನ ಆಲೋಚನೆಗಳು ಹಾಗೂ ಆ ರಾತ್ರಿಯ ಕಥೆ ಇಲ್ಲಿದೆ. ಪ್ರತಿಯೊಬ್ಬರ ಮನದ ಭಾವನೆಗಳಿಗೂ ಹಾಗೂ ಸಮಾಜದ ನೋಟಕ್ಕೂ ಎಷ್ಟು ತಾಳೆಯಾಗುತ್ತದೆ ನೀವೇ ಓದಿ ನೋಡಿ.
ಈ ಎರಡು ಕಥೆಗಳು ಮನಸ್ಸಿನ ಭಾವನೆಗಳನ್ನು, ಒಳತೋಟಿಗಳನ್ನು ಹೆಚ್ಚಾಗಿ ತೆರೆದಿಟ್ಟ ಕಥೆಗಳಂತೆ ಭಾಸವಾದವು. ಆದರೆ, ಮನಸ್ಸಿನ ಭಾವನೆಗಳು ವ್ಯಕ್ತವಾದಷ್ಟು.. ಮನಸ್ಸಿನ ಮಾತನ್ನು ಕೇಳಿದ್ದರೆ ಅವರ ನಡೆ ಹೇಗಿರುತ್ತಿತ್ತು.. ಪಾತ್ರಗಳ ಬುದ್ಧಿಯ ವಿಶ್ಲೇಷಣೆ ನಂತರ ಕಂಡು ಬರುತ್ತದೆ.
**************
ಅದೃಷ್ಟ : ನೀಲಕಂಠನಿಗೆ ಜ್ವರ ಬಂದ ಸಂದರ್ಭ. ಅದರಲ್ಲಿಯೂ.. ಅದು ಮೈಲಿಬೇನೆ ಹೆಚ್ಚು ಚಾಲ್ತಿಯಲ್ಲಿದ್ದ ಕಾಲ. ಪೊಕ್ಕ ನೀಲಕಂಠನಿಗೆ ಹೊಸ ಸುದ್ದಿಯೊಂದನ್ನು ಹೊತ್ತು ತಂದಿದ್ದ. ಪೊಕ್ಕನಿಗೆ ಈಗ ಹೊಸ ಅಣ್ಣ ಬಂದಿದ್ದ. ನೀಲಕಂಠನಿಗೆ ಗೊತ್ತಿದ್ದಂತೆ ಆತನಿಗೆ ಇಬ್ಬರೇ ಅಣ್ಣಂದಿರು. ಈ ಹೊಸ ಅಣ್ಣನ ಸಮಾಚಾರ, ಆತನನ್ನು ಹುಡುಕಿ ಬಂದ ಪೊಲೀಸರು.. ಇದೆಲ್ಲದರ ಜೊತೆಗೆ ಜ್ವರದಲ್ಲಿ ಕಾಣುವ ಅಪ್ಪ, ಅಮ್ಮ, ಅಜ್ಜನ ನೆನಪು, ನೀಲಕಂಠನ ಹೆದರಿಕೆ, ಆತನ ಅಣ್ಣಂದಿರು ರಜಕ್ಕೆ ಬರದೆ ಅಲ್ಲಿಯೇ ಉಳಿದದ್ದು.. ಇದೆಲ್ಲವೂ ನೀಲಕಂಠನ ದೃಷ್ಟಿಯಲ್ಲಿ ಕಾಣುತ್ತದೆ. ಪೊಕ್ಕನ ಹೊಸ ಅಣ್ಣ ಬಂದಂತೆಯೇ ಹೊರಟು ಹೋದದ್ದಾದರೂ ಏಕೆ..? ಓದಿ ನೋಡಿ. ಇಲ್ಲಿ ಯಾರ ಅದೃಷ್ಟ ಹೇಗಿದೆ ತಿಳಿಯಿರಿ.
ಪಯಣ : ಅಂದು ಮೂರುಸಂಜೆಯ ಹೊತ್ತಿಗೆ ಭೇಟಿಯಾಗಲು ಬಂದಾತ ಹೇಳಿದಂತೆ ನಾಳೆ ನಸುಕಿನಲ್ಲಿ ಕೋಳಿ ಕೂಗುವ ಮೊದಲೇ ಹೊರಡುವ ಆಲೋಚನೆಯಲ್ಲಿದ್ದವನಿಗೆ ನಂತರದಲ್ಲಿ ಬಂದ ಆಲೋಚನೆ "ಕೋಳಿ ಕೂಗುವ ಮೊದಲು ಎಂದರೆ ಯಾವ ಹೊತ್ತು..?" ಟ್ರಾವೆಲಿಂಗ್ ಸೇಲ್ಸ್ ಮ್ಯಾನ್ ಆಗಿ ಕಲ್ಕತ್ತಕ್ಕೆ ಬಂದಿದ್ದವನು ಹೋಟೆಲ್ ನಲ್ಲಿ ಉಳಿದಿದ್ದ. ಈಗ ಇದ್ದಕ್ಕಿದ್ದಂತೆ ತನ್ನ ಬಟ್ಟೆಬರೆಯನ್ನು ಹೊಂದಿಸಿಕೊಂಡು ದಿಢೀರನೆ ನಾಳೆ ಹೊರಡುತ್ತೇನೆಂದು ಎಲ್ಲರಿಗೂ ಹೇಳಿಟ್ಟಿದ್ದನು. ಅಷ್ಟಕ್ಕೂ ಅದು ಕೆಲಸದ ಕರೆಯಲ್ಲ. ಹಾಗಾದರೆ, ವೈಯಕ್ತಿಕವಾ..? ಪಯಣ ಎಲ್ಲಿಗೆ..? ಒಂದು ರೀತಿಯ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿಯೂ ಯೋಚಿಸುವಂತೆ ಮಾಡುವ ಕತೆಯಿದು..?
ಆಟ : ಬುಡಣಸಾಬರು ತುಂಬಾ ಮುದುಕರು. ಆ ಹಳ್ಳಿಯಲ್ಲಿಯೇ ಎಲ್ಲರ ಆದರ-ಪ್ರೀತಿಗೆ ಪಾತ್ರರಾದ ಹಿರಿಯರು. ಅವರು ಒಬ್ಬೊಬ್ಬರಿಗೆ ಒಂದೊಂದು ರೀತಿಯಂತೆ ಕಾಣುತ್ತಿದ್ದರು. ಪೂರ್ವ ತುದಿಯಲ್ಲಿರುತ್ತಿದ್ದ ಮೊಮ್ಮಗ ಕಾಸಿಮ ಹಾಗೂ ಹಳ್ಳಿಯ ಇನ್ನೊಂದು ತುದಿಯಲ್ಲಿ ಇರುತ್ತಿದ್ದ ಮೊಮ್ಮಗಳು ಫಾತಿಮಾ ಇವರಿಬ್ಬರ ಮನೆಗೆ ಓಡಾಟ ಮಾಡಿಕೊಂಡಿದ್ದವರು. ಅಂದು ಸಂಜೆ ಅಡ್ಡಮಳೆಯ ಸಂದರ್ಭದಲ್ಲಿ ಓಣಿಯಲ್ಲಿ ಹೊರಟ ಅವರಿಗೆ ಅಂದು ಒಂದು ರೀತಿಯ ವಿಭಿನ್ನ ನೋಟವೇ ಕಾಣುತ್ತಿತ್ತು. ಓಣಿಯಲ್ಲಿ ಎದುರಾದವರು ನಾಲ್ಕು ಜನ. ನಾಲ್ಕು ಜನರು ನರಸಿಂಹನ ಮನೆಗೆ ಹೋಗುತ್ತಿದ್ದವರು. ಇವರು ಮೊಮ್ಮಗಳ ಮನೆಗೆ ಸಾಗಿದರೆ, ಅವರು ನರಸಿಂಹನ ಮನೆಯಲ್ಲಿ ಆಟಕ್ಕೆ ಸೇರಿದರು. ಆದರೆ, ನಸುಕಿಗೆ ಚಿತ್ರಣ ಬದಲಾಗಿತ್ತು. ಬುಡಣಸಾಬರ ಭಯ ನಿಜವಾಯಿತೇ..?! ಇದು ಯಾರ ಆಟ ಹಾಗೂ ನಿಜಕ್ಕೂ ಯಾವ ಆಟ ಆ ನಾಲ್ವರು ಯಾರ ಸಂಕೇತ..? ನಾಲ್ವರಿಗೆ ಕಂಡದ್ದಾದರೂ ಯಾರು..? ಇದು ವಿಭಿನ್ನ ನೋಟವನ್ನೇ ತೆರೆದಿಡುವ ಕಥೆ.
ಈ ಮೂರೂ ಕತೆಗಳಲ್ಲಿ ಸಾವನ್ನು ವಿಭಿನ್ನವಾಗಿ ಕಾಣಬಹುದು.
**************
ಛಲ : ಅಪ್ಪನ ಉತ್ತರ ಕ್ರಿಯೆಗೆಂದು ಗೋಕರ್ಣಕ್ಕೆ ಬಂದಿದ್ದವರಿಗೆ ಕುಟುಂಬದ ಬೇರು ಎಡವಿತು ಎಂಬಂತೆ ಮತ್ತೆ ಪದ್ಧಕ್ಕನ ಪ್ರಸಂಗ ಬಿಚ್ಚಿಕೊಂಡಿತು. ಪದ್ಮಾವತಿಯ ಪತಿ ಗೋಕರ್ಣದ ಜಾಗವನ್ನು ತಮ್ಮ ದಾಯಾದಿಗಳಿಗೆ ಮಾರಿದ್ದು ಅವರಿಗೆ ಸರಿ ಬಂದಿರಲಿಲ್ಲ. ಅಂದೇ ಮನೆಯಲ್ಲಿ ಮಾತಿಗೆ ಮಾತು ಬೆಳೆದು ಪದ್ದಕ್ಕ ಒಂದು ಪ್ರತಿಜ್ಞೆ ಮಾಡಿದರು. ಅದೇ ಜಾಗ ಅಥವಾ ಅದರ ಮಗ್ಗುಲಲ್ಲಿಯ ಜಾಗ ಕೊಂಡು ತಮ್ಮದೇ ಮನೆ ಕಟ್ಟುವ ತನಕ ಈ ಬೆಂಕಿಯ ಮೇಲೆ ಬೇಯಿಸಿದ ಅಣ್ಣ ಉಣ್ಣಲಾರೆ ಎಂದು. ಈಗ ಪದ್ಧಕ್ಕನಿಗೊಂದು ಮನೆಯಾಗಿತ್ತು. ಆದರೂ.. ಆಕೆ ಈಗಲೂ ಛಲದಲ್ಲಿಯೇ ಇದ್ದಳು. ಪದ್ದಕ್ಕ ಸಾಧಿಸ ಹೊರಟ ವೈರ ಈ ಜನ್ಮದಲ್ಲ ಎಂದು ಲೇಖಕರೇ ಒಂದು ಕಡೆ ಹೇಳುತ್ತಾರಾದರೂ.. ಅದು ಕೇವಲ ವೈರವಾ ಅಥವಾ ಬದುಕುವ ಛಲವಾ ಎನ್ನಿಸುತ್ತದೆ. ಆಕೆಯ ಪ್ರತಿಜ್ಞೆಯನ್ನು ತುಚ್ಚವಾಗಿ ಕಂಡವರೇ ಮೂಗಿನ ಮೇಲೆ ಬೆರಳಿಡುವಂತೆ ಅದರಲ್ಲಿಯೂ.. ಹೆಣ್ಣಾಗಿ ತನ್ನ ಪ್ರತಿಜ್ಞೆಯನ್ನು ಮುರಿಯದಂತೆ ಕಾಪಾಡಿಕೊಂಡ ಬಂದ ಪದ್ದಕ್ಕನ ಛಲವಾದರೂ ಎಂತಹದ್ದು..?
ಈ ಕಥಾ ಸಂಕಲನದಲ್ಲಿ ಬಹಳ ಕಾಡಿದ ಹಾಗೂ ವಿಚಿತ್ರ ಆಲೋಚನೆಗಳನ್ನು ಮೂಡಿಸಿದ ಕಥೆ ಇದು.
ಮತ್ತೆ ಮತ್ತೆ ಓದುವಂತಹ ಹಾಗೂ ಓದಿದಷ್ಟು ಬೇರೆ ಬೇರೆ ಹೊಳಹುಗಳನ್ನು ಕೊಡುವಂತಹ ಕಥೆಗಾರರ ಕಥಾಸಂಕಲನದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ