ಪುಸ್ತಕದ ಶೀರ್ಷಿಕೆ : ಶ್... ಶ್... ಸುಮ್ನಿರಿ ಇದು ಅಮ್ಮಂದಿರಿಗೆ
ಲೇಖಕರು : ಪವಿತ್ರಾ ರಘುನಂದನ ಹೆಗಡೆ
ಪ್ರಥಮ ಮುದ್ರಣ : 2025
ಪುಟಗಳು : 24
ಬೆಲೆ : 55 ರೂ.
ತಾಯಂದಿರಿಗೆ ಎಂದು ಇದ್ದ ವೇದಿಕೆ ಮಾಮ್ಸ್ ಪ್ರೆಸ್ಸೋದಲ್ಲಿ ಬರೆಯುತ್ತಿದ್ದ ಲೇಖಕಿ ಪವಿತ್ರ ಗಾಂವ್ಕರ್ / ಪವಿತ್ರ ರಘುನಂದನ ಹೆಗಡೆಯವರ ಚೊಚ್ಚಲ ಪುಸ್ತಕ ಇದು. ಪುಟ ಸಂಖ್ಯೆಯಲ್ಲಿ ಕಡಿಮೆ ಇದ್ದರೂ.. ತಾಯ್ತನವನ್ನು ಹೊರೆಯಾಗಿಸಿಕೊಳ್ಳದೆ, ಜವಾಬ್ದಾರಿಯನ್ನು ಅತಿಯಾಗಿ ಚಿಂತಿಸದೆ, ವರ್ತಮಾನದಲ್ಲಿ ಬದುಕುತ್ತಾ.. ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಕಾಪಿಟ್ಟುಕೊಳ್ಳಲು ತಾಯಂದಿರಿಗೆ ಒಂದು ಉತ್ತಮ ಮಾರ್ಗದರ್ಶಿಯಂತಿದೆ. ಹಾಗೆಂದು, ಇದನ್ನು ಲೇಖನಗಳ ಗುಚ್ಛ ಎಂದು ಮಾತ್ರವೇ ನೋಡಲಾಗದು. ಬದಲಾಗಿ ಇದನ್ನು ಅನುಭವಗಳ ಗುಚ್ಛ ಎನ್ನಬಹುದು.
ತಾಯ್ತನ ಹೊರೆಯಲ್ಲ.. ಹಾಗೆಯೇ ಅದು ಸುಲಭವೂ ಅಲ್ಲ. ಹೊಸ ತಾಯಂದಿರಿಗೆ ಅನುಭವಗಳಿಂದ ಪಾಠ ಕಲಿಯಲು ಸಾಧ್ಯವಾಗದು. ಏಕೆಂದರೆ, ಕೇಳಿದ ಅನುಭವಗಳು ಒಬ್ಬರಿಗಿಂತ ಮತ್ತೊಬ್ಬರಲ್ಲಿ ವಿಭಿನ್ನ. ಎದುರಿಸುವ ಪರಿಸ್ಥಿತಿಗಳು, ಕೌಟುಂಬಿಕ ಸ್ಥಿತಿಗತಿಗಳು, ಆರೋಗ್ಯ, ಮಾನಸಿಕ ಪರಿಸ್ಥಿತಿ, ಸಂಗಾತಿಯ ಸಹಕಾರ ಹೀಗೆ ಪ್ರತಿಯೊಂದು ವಿಭಿನ್ನವೇ. ಆದರೆ, ಮುಖ್ಯವಾಗಿ ತಮಗೆ ತಾವೇ ಆಶಾವಾದಿಗಳಾಗಿ ಪರಿಸ್ಥಿತಿಯನ್ನು ಎದುರಿಸುವುದು ಅತ್ಯವಶ್ಯಕ. ತಾಯ್ತನದಲ್ಲಿ ಸವಾಲುಗಳು ಬಂದಾಗ ಅದನ್ನು ಬೇರೆಯವರು ಬಗೆಹರಿಸಲು ಸಾಧ್ಯವಿಲ್ಲ. ತಾಯಿಯಾದವಳು ಆ ಜವಾಬ್ದಾರಿಯಿಂದ ಹೆದರಿ ಓಡಿ ಹೋಗಲು ಸಾಧ್ಯವಾಗದು. ಅದನ್ನು ದಿಟ್ಟವಾಗಿ ಸಂತಸದಿಂದಲೇ, ಸಹಜವಾಗಿ ಸ್ವೀಕರಿಸಲು ಇಲ್ಲಿನ ಓದು ಸಹಾಯ ಮಾಡುತ್ತದೆ. ಇದು ತಾಯಿಯೊಳಗಿನ ಆಂತರಿಕ ಯುದ್ದಕ್ಕೆ ಸಿದ್ಧತೆಯೂ ಹೌದು.
ಇಂದೇ ಬದುಕದಿದ್ದರೆ ? ನಾಳೆ ಎಲ್ಲಿ ? :
ಗೆಳತಿಯ ಮದುವೆಗೆ ಹೋಗಲು ಹಿಂದೇಟು ಹಾಕುತ್ತಿದ್ದ ದಿತಿ ತನ್ನ ಮಗುವನ್ನು ನೋಡಿಕೊಳ್ಳುವುದರಲ್ಲಿ ತನ್ನನ್ನೇ ತಾನು ಕಳೆದುಕೊಂಡು ಬಿಟ್ಟಿದ್ದಳು. ಮತ್ತೆ ಅವಳು ಚಿಗುರಿ, ಇಂದಿನ ಬದುಕನ್ನು ಬದುಕಲು ತಯಾರಿ ಮಾಡಿಕೊಂಡ ಹಾಗೂ ಧೈರ್ಯ ತುಂಬಿಕೊಂಡ ಪರಿ ಮಾದರಿ.
ಎಲ್ರೂ ಹೇಳೋದು ಕೇಳೋದಾ ? :
ಮಗು ಇದ್ದಾಗಲಂತೂ ಎಲ್ಲರೂ ಒಂದೊಂದು ರೀತಿಯ ಸಲಹೆ ಕೊಡುವುದು ಸರ್ವೇಸಾಮಾನ್ಯ. ಹಾಗೆಂದು, ಎಲ್ಲವನ್ನು ಪಾಲಿಸಲಾಗದು. ಹಾಗೆಯೇ ಎಲ್ಲದಕ್ಕೂ ಸಮಜಾಯಿಷಿ ಹಾಗೂ ಪ್ರತ್ಯುತ್ತರ ಕೊಡುತ್ತಾ ಕೂರಲೂ ಆಗದು. ಮನಸ್ಸಿನ ಡೋಲಾಯಮಾನ ಪರಿಸ್ಥಿತಿಯನ್ನು ನಿಭಾಯಿಸುವ ರೀತಿಯನ್ನು ಹೇಳುವ ಕಿವಿಮಾತು ಇಲ್ಲಿದೆ.
ನನ್ನ ಕಾಳಜಿ ನನಗೆ ಇಲ್ಲದಿದ್ದರೆ ? :
ಹೆರಿಗೆ ನಂತರ, ಬಾಣಂತನದ ಸಂದರ್ಭದಲ್ಲಿ ಬೇರೆಯವರಿಂದ ಹೆಚ್ಚು ಪ್ರೀತಿ, ಕಾಳಜಿ ನಿರೀಕ್ಷಿಸುವುದು ಹೌದಾದರೂ.. ನನ್ನ ಕಾಳಜಿ ನನಗೆ ಇಲ್ಲದಿದ್ದರೆ..? ಬೇರೆಯವರು ನನಗೆ ಕಾಳಜಿ ತೋರಿಸಬೇಕು ಅಂತ ಅಂದುಕೊಳ್ಳೋದ್ರಲ್ಲಿ ಅರ್ಥ ಇದೆಯಾ ಎಂದು ಕೇಳುತ್ತಾರೆ. ಮಗುವಿನ ಆರೋಗ್ಯದ ಜೊತೆಗೆ ತಾಯಿಯ ಆರೋಗ್ಯವೂ ಮುಖ್ಯವಾಗುತ್ತದೆ ಎನ್ನುತ್ತಾ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತು ತಿಳಿ ಹೇಳುತ್ತಾರೆ.
ನಿನ್ನ ಮಗು ಸೈಲೆಂಟ್ ಬಿಡು :
ಸೈಲೆಂಟ್ ಮಗುವಿನ ಅಮ್ಮನ ಪಟ್ಟ ಹೊತ್ತಿರುವ ಅಮ್ಮನ ಪಾಡು ಹೇಗಿರುತ್ತದೆ ಹಾಗೂ ಅದನ್ನು ಅವರು ಒಪ್ಪುವುದು ಹೇಗೆ ಎನ್ನುತ್ತಾ ಬದಲಾವಣೆಯ ಹಾದಿ ತೆರೆಯುತ್ತಾರೆ.
ಸಮಯ ಹೇಗೆ ಹೊಂದಿಸಿಕೊಳ್ಳೋದು ? :
ಕೆಲಸಕ್ಕೆ ಹೋಗುವ ತಾಯಂದಿರು ಹಾಗೂ ಮನೆಯಲ್ಲಿಯೇ ಕೆಲಸ ಮಾಡಿಕೊಳ್ಳುವ ತಾಯಂದಿರು ಇಬ್ಬರೂ ಎದುರಿಸುವ ಮುಖ್ಯ ಸಮಸ್ಯೆ ಮಗುವಿನ ಜೊತೆಗೆ ಸಮಯ ಹೊಂದಿಸಿಕೊಳ್ಳುವುದು ಹೇಗೆ ಎಂಬುದನ್ನು. ತಾಯಂದಿರ ದಿನಚರಿಯ ಜೊತೆಗೆ ಪ್ರಕೃತಿಯ ಜೊತೆ ಬೆರೆಯುವಿಕೆಯ ಜಾಣತನದ ದಾರಿ ಇಲ್ಲಿದೆ.
ಸೌಂದರ್ಯಕ್ಕೆ ಆರೈಕೆ ಬೇಕಾ ? :
ಇಲ್ಲಿ ಸೌಂದರ್ಯ ಎಂಬುದಕ್ಕೆ ಚಂದ ಎಂಬುದು ಮಾತ್ರ ಅರ್ಥವಲ್ಲ. ಬದಲಾಗಿ ತಮ್ಮನ್ನು ತಾವು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಬಗ್ಗೆ ಹೇಳುತ್ತಾರೆ ಜೊತೆಗೆ ಆಂತರಿಕ ಮತ್ತು ಬಾಹ್ಯ ಸೌಂದರ್ಯ ಎರಡರ ಆರೈಕೆಯ ಕುರಿತು ಹೇಳುತ್ತಾರೆ.
ತಾಳ್ಮೆ ಎಷ್ಟು ಮುಖ್ಯ ? :
"ಸಹನೆ ಎಂದರೆ ಪರಿಸ್ಥಿತಿಗೆ ತಲೆಬಾಗಿ ಶರಣಾಗುವುದಲ್ಲ. ಸಹನೆ ಎಂದರೆ ಪರಿಸ್ಥಿತಿಯನ್ನ ಯಾರ ಮೇಲೂ ವ್ಯತಿರಿಕ್ತ ಪರಿಣಾಮ ಬೀರದಂತೆ ನಿಭಾಯಿಸೋ ಕಲೆ." ಎನ್ನುತ್ತಲೇ ತಾಯಂದಿರು ಆ ಘಟ್ಟದಲ್ಲಿ ಕಲಿಯುವ ತಾಳ್ಮೆ, ಬದಲಾಗುವ ಪರಿ, ತಾಳ್ಮೆ ಎಲ್ಲಿ ಹಾಗೂ ಎಷ್ಟು ಮುಖ್ಯ ಎನ್ನುವುದನ್ನು ನೂಪುರಾಳ ಮೂಲಕ ಹೇಳುತ್ತಾರೆ.
ಪುಟ್ಟ ಪುಟ್ಟ ಹೊಳವುಗಳ.. ಆದರೆ, ಹೆಚ್ಚು ಪಾಸಿಟಿವ್ ಆಲೋಚನೆಗಳ ಪುಟ್ಟ ಪುಸ್ತಕದ ಚೇತೋಹಾರಿ ಓದು. ಆಪ್ತ ಗೆಳತಿಯೊಬ್ಬರು ನಮ್ಮ ಜೊತೆ ಮಾತಾಡಿದಂತಹ ಶೈಲಿಯ ಬರವಣಿಗೆ. ಲೇಖಕಿಯ ಮುಂದಿನ ಪುಸ್ತಕಗಳಿಗೆ ಶುಭವಾಗಲಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ