ಪುಸ್ತಕದ ಶೀರ್ಷಿಕೆ : ಚಿರಬಾಂಧವ್ಯ
ಲೇಖಕರು : ಪದ್ಮಾ ಗುರುರಾಜ್
ಪ್ರಕಾಶಕರು : ಪ್ರಕಾಶ ಸಾಹಿತ್ಯ
ಪ್ರಥಮ ಮುದ್ರಣ : 1998
'ಚಿರಬಾಂಧವ್ಯ', 'ದ್ವಂದ್ವಗಳು' ಮತ್ತು 'ಭ್ರಮೆಯ ಬದುಕಿನ ಸುತ್ತ' ಎಂಬ ಮೂರು ಸಂಯುಕ್ತ ಕಾದಂಬರಿಗಳ ಸಂಪುಟ ಈ ಪುಸ್ತಕ.
ಇಂದು ನಾನು 'ಚಿರಬಾಂಧವ್ಯ' ಕಾದಂಬರಿಯನ್ನು ಪರಿಚಯಿಸಲಿದ್ದೇನೆ.
ಯೌವ್ವನದಲ್ಲಿ ಅರಳಿದ ಪ್ರೇಮವೊಂದು ವಿವಾಹದಲ್ಲಿ ಮುಕ್ತಾಯವಾಗದೆ, ಅದರಾಚೆಗೆ ಮತ್ತೆ ಬಾಂಧವ್ಯ ಬೆಸೆದುಕೊಳ್ಳುವ ಬಗೆ ಈ ಕಾದಂಬರಿಯಲ್ಲಿ ಚೆಂದವಾಗಿ ಚಿತ್ರಿತವಾಗಿದೆ.
ವಿಭಾ ಹಾಗೂ ವಿಶ್ವಾಸ್ ಇಬ್ಬರೂ ಸಹಪಾಠಿಗಳು. ಪರೀಕ್ಷೆ ಎಂಬ ದೊಡ್ಡ ಕಂಟಕವನ್ನು ಎದುರಿಸಿ ಪಾರಾಗಿದ್ದರು. ಜೀವನ ಎಂಬ ಬೃಹತ್ ಪರೀಕ್ಷೆ ಅವರಿಬ್ಬರನ್ನು ಬ್ರಹ್ಮರಾಕ್ಷಸರಂತೆ ಬೆಳೆದು ನಿಂತು ಬೆದರಿಸುತ್ತಿತ್ತು.
"ಪ್ರೀತಿ, ಪ್ರೇಮಗಳು ಅವರಿಬ್ಬರ ಅಂತರಂಗಕ್ಕೆ ಸೇರಿದ ವಿಷಯಗಳಾದರೆ, ಮದುವೆ ತಮ್ಮ ಸುತ್ತಮುತ್ತಲಿನವರನ್ನೆಲ್ಲಾ ಒಳಗೊಂಡ ಸಾಮಾಜಿಕ ಕಟ್ಟುಪಾಡುಗಳ ಏಳು ಸುತ್ತಿನ ಕೋಟೆ."
ಇಬ್ಬರದ್ದೂ ಮಾಧ್ಯಮ ವರ್ಗದ ಕುಟುಂಬ. ಆರ್ಥಿಕ ಸ್ವಾವಲಂಬನೆ ಇಲ್ಲದೆ ಮದುವೆಯಾಗುವುದು ಅಸಾಧ್ಯವಾಗಿತ್ತು. ಎಂ .ಎ ಅಂತಿಮ ಪರೀಕ್ಷೆ ಬರೆದಿದ್ದರಾದರೂ ಜಾತೀಯತೆ ಹಾಗೂ ಭ್ರಷ್ಟ ವ್ಯವಸ್ಥೆಯಲ್ಲಿ ಖಾಯಂ ಉದ್ಯೋಗ ಸಿಗುವುದು ಸುಲಭವಿರಲಿಲ್ಲ.
ವಿಭಾಳ ತಂದೆ ನರಸಿಂಹಯ್ಯನವರಿಗೆ ನಾಲ್ವರು ಹೆಣ್ಣುಮಕ್ಕಳು. ಈಕೆಯೇ ಹಿರಿಯವಳು. ತಾಯಿ ನರಸಿಂಹಾವತಾರದ ನಾನಾ ರೂಪಗಳನ್ನು ಕಂಡು ಅನುಭವಿಸಿ ಮೆತ್ತಗಾಗಿದ್ದರು. ನರಸಿಂಹಯ್ಯನವರದ್ದೇ ಮನೆಯಲ್ಲಿ ಕೊನೆಯ ಮಾತು. ಹೆಣ್ಣುಮಕ್ಕಳು ಹಾಗೂ ಹೆಂಡತಿಯನ್ನು ಅತಿ ಶಿಸ್ತಿನಿಂದ ಹದ್ದುಬಸ್ತಿನಲ್ಲಿಟ್ಟಿದ್ದೇನೆ ಎಂಬ ಅತಿ ಆತ್ಮವಿಶ್ವಾಸಕ್ಕೆ ಈಗ ವಿಭಾ ಪೆಟ್ಟು ಕೊಟ್ಟಿದ್ದಳು.
ತನಗೀಗಲೇ ವಿವಾಹ ಬೇಡವೆಂದು ನಿರಾಕರಿಸಿ, ಅತ್ತು ಕರೆದು ಉಪವಾಸ ಸತ್ಯಾಗ್ರಹ ಮಾಡಿದಾಗಲೂ ಅವಳ ಆಗ್ರಹಕ್ಕೆ ಮಣಿದಿರಲಿಲ್ಲ ಅವಳ ತಂದೆ. ಕಷ್ಟಪಟ್ಟು ಒಂದು ಸಂಬಂಧ ಹೊಂದಿಸಿದ್ದರು. ಹುಡುಗ ನವದೆಹಲಿಯಲ್ಲಿ ರಕ್ಷಣಾ ಖಾತೆಯಲ್ಲಿ ಕಿರಿಯ ಅಧಿಕಾರಿ ಆಗಿದ್ದವನು. ತಂದೆ ಇಲ್ಲ, ಅಕ್ಕ ಮದುವೆಯಾಗಿ ಶಿಖಾಗೋದಲ್ಲಿದ್ದಳು. ತಾಯಿ, ಮಗ ಇಬ್ಬರೇ.. ಅತಿಯಾಸೆ ಇಲ್ಲದ ಈ ವಿವಾಹವನ್ನು ಪೂರೈಸಿದರೆ ಉಳಿದ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಸುಲಭವಾಗುತ್ತಿತ್ತು ನರಸಿಂಹಯ್ಯನವರಿಗೆ. ಸುಭಾಷ್ ಗೆ ವಿಭಾ ಮೊದಲ ನೋಟದಲ್ಲಿಯೇ ಒಪ್ಪಿಗೆಯಾಗಿದ್ದಳು.
ಇದು ಕುತ್ತಿಗೆಗೆ ಬಂದಾಗ ವಿಭಾಳಿಗೆ ಗೆಳತಿ ಅನಸೂಯಾಳ ಸಹಾಯ ಹೇಗೋ ಸಿಕ್ಕಿತು. ಹುಟ್ಟೂರಿಗೆ ಹೋಗಿದ್ದ ವಿಶ್ವಾಸನಿಗೆ ವಿಷಯ ತಿಳಿಸಲು ಹೊರಟವಳಿಗೆ ಆತ ಸಿಕ್ಕಿರಲಿಲ್ಲ. ಕಾಯಿಲೆ ತಾಯಿಯ ಕೊನೆಯ ಆಸೆಯನ್ನು ನೆರವೇರಿಸಲು, ಆಕೆಯನ್ನು ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಲು ಪ್ರವಾಸ ಹೊರಟಿದ್ದ. ಬರುವುದು ಇನ್ನೂ 10 ದಿನವಾಗುತ್ತಿತ್ತು.
ತಂದೆಯೊಡನೆ ಪ್ರೀತಿಯ ವಿಷಯ ಬಾಯಿಬಿಟ್ಟಳಾದರೂ, ಯಾವುದೋ ಕ್ಷಣದಲ್ಲಿ ಯಾವುದೋ ಪವಾಡ ನಡೆಯುತ್ತದೆ ಎಂದುಕೊಂಡರೂ ಅದು ನಡೆಯಲಿಲ್ಲ. ಮದುವೆ ನಿಲ್ಲಲಿಲ್ಲ. ಮುಂದೆ ಸುಭಾಷ್ ವಿಭಾರ ವಿವಾಹವಾಯಿತು.
ಹಿತಮಿತವಾದ ಮೃದುವಚನಗಳು, ಸುಸಂಸ್ಕೃತ ನಡವಳಿಕೆ ಕ್ರಮೇಣ ವಿಭಾ ಬಾಳನ್ನು ಅವನ ಹತ್ತಿರ ಕರೆತಂದಿತು. ಅವಳ ಬಾಳಿನಲ್ಲಿಯೂ ನೂತನ ಅಧ್ಯಾಯ ಶುರುವಾಯಿತು. ಮುಂದೆ ಹಲವಾರು ಬಾರಿ ವಿಶ್ವಾಸನ ನೆನಪು ಬಂದರೂ ಸುಭಾಷ್ ನಿಗೆ ಮೋಸ ಮಾಡಲಾರೆನೆಂದು ಸಂಸಾರದಲ್ಲಿ ತೊಡಗಿಕೊಂಡಳು. ಕಾಲೇಜಿನ ಕೆಲಸದಲ್ಲಿಯೂ ತಲ್ಲೀನಳಾದಳು. ಆದರೆ, ಆಕೆಗೆ ತಾಯ್ತನದ ಭಾಗ್ಯ ಸಿಗಲಿಲ್ಲ.
ತಂಗಿಯರಾದ ಉಷಾ, ನಿಶಾರ ಮದುವೆಗೆ ಹೋಗುವಷ್ಟರಲ್ಲಿ ನರಸಿಂಹಯ್ಯನವರ ಆರ್ಭಟ ಇಳಿದಿತ್ತು. ತಂದೆ ಸಾಕಷ್ಟು ಬದಲಾಗಿದ್ದರು. ನವದೆಹಲಿಯಿಂದ ಸುಭಾಷ್ ನಿಗೆ ಬೆಂಗಳೂರಿಗೆ ವರ್ಗವಾಗಿತ್ತು. ವಿಶ್ವಾಸ್ ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿಯೇ ವಿಭಾಳಿಗೆ ತಾತ್ಕಾಲಿಕವಾಗಿ ಕೆಲಸವೂ ಸಿಕ್ಕಿತು. ವಿಶ್ವಾಸನಿಗೆ ಅದಾಗಲೇ ವಿವಾಹವಾಗಿತ್ತು. ಅವನ ಬಾಳಿನಲ್ಲಿ ವಿಭಾಳ ಪ್ರವೇಶ ಬೇಡವೆಂದು ಗೆಳತಿ ಅನುಸೂಯಾಳಿಂದ ಹಿತವಚನವೂ ಸಿಕ್ಕಿತ್ತು.
'ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ' ಎಂಬ ಮಾತು ವಿಭಾ ಪಾಲಿಗೆ ಅಕ್ಷರಶಃ ಸತ್ಯವಾಗಿತ್ತು. ಆರೋಗ್ಯವಾಗಿಯೇ ಧೃಡಕಾಯನಾಗಿಯೇ ಇದ್ದ ಸುಭಾಷ್ ಇದ್ದಕ್ಕಿದ್ದ ಹಾಗೆ ನಿಶ್ಯಕ್ತಿ, ಆಯಾಸ, ವಾಂತಿ, ತಲೆಸುತ್ತುಗಳಿಂದ ಬಳಲಾರಂಭಿಸಿದ್ದ. ಆಗಾಗ ಜ್ವರ ಜೊತೆಗೆ ತೂಕ ಕಳೆದುಕೊಂಡು ನಿತ್ರಾಣನಾದ. ದಿನೇದಿನೇ ಕಾಯಿಲೆ ಉಲ್ಬಣಿಸತೊಡಗಿತ್ತು, ಮುಂದೆ ತಿಳಿದದ್ದು ಸುಭಾಷ್ ನ ಮೂತ್ರಪಿಂಡಗಳು ಎರಡೂ ಸಮರ್ಪಕವಾಗಿ ಕೆಲಸ ಮಾಡುತ್ತಿರಲಿಲ್ಲ. ಔಷಧಿ, ಮಾತ್ರೆಗಳು, ಇಂಜೆಕ್ಷನ್ ಗಳು ಕೆಲಸ ಮಾಡದೆ ಅವನ ದೇಹಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಅಂತೆಯೇ ಮನಸ್ಥಿತಿಯೂ.. ಅವನ ರಜೆ ಮುಗಿದು, ವಿಭಾಳ ರಜೆಯೂ ಮುಗಿದು ಆತನ ಆರೋಗ್ಯ ಸ್ಥಿತಿಯೂ ಸುಧಾರಿಸದಾದಾಗ ವಿಭಾಳಿಗೆ ಬೇರಾವ ದಾರಿಯೂ ಉಳಿದಿರಲಿಲ್ಲ. ಶಿಕಾಗೋದಿಂದ ಸುಭಾಷ ನ ಅಕ್ಕನಿಂದ ಹಣದ ಸಹಾಯ ಒದಗಿದರೂ ಎಲ್ಲದಕ್ಕೂ ಅವರನ್ನೇ ಅವಲಂಬಿಸುವಂತಿರಲಿಲ್ಲ.
ವಿಭಾ ಕಷ್ಟಕ್ಕೆ ಧಾವಿಸಿ ಬಂದ ವಿಶ್ವಾಸನಿಗೆ ವಿಭಾಳ ಈ ಸ್ಥಿತಿ ತಿಳಿದದ್ದು ಹೇಗೆ..? ಆತನ ದಾಂಪತ್ಯ ಬದುಕು ಹೇಗಿತ್ತು.? ವಿಭಾಳನ್ನು ಮತ್ತೆ ಭೇಟಿಯಾದಾಗ ವಿಶ್ವಾಸ ಆಕೆಯನ್ನು ಕಂಡ ಬಗೆ ಹೇಗೆ..?
ವಿಧಿಯಾಟದ ಗೊಂಬೆಗಳಾಗಿದ್ದ ವಿಭಾ ಹಾಗೂ ವಿಶ್ವಾಸರ ಬಾಳಿನಲ್ಲಿ ಚಿರಬಾಂಧವ್ಯ ಬೆಳೆದದ್ದು ಹೇಗೆ..?
ನೈತಿಕತೆಯ ಹಾದಿಯಲ್ಲಿ ಅವರಿಬ್ಬರ ಬಾಂಧವ್ಯವನ್ನು ಲೇಖಕಿ ಕಟ್ಟಿಕೊಟ್ಟಿರುವ ಬಗೆ ಹಾಗೂ ಕಾದಂಬರಿಗೆ ಕೊಟ್ಟಿರುವ ತಿರುವು ಒಳ್ಳೆಯ ಸಂದೇಶವನ್ನು ನೀಡುತ್ತಾ ಇಷ್ಟವಾಗುತ್ತದೆ.
ಮನುಷ್ಯನ ನಡವಳಿಕೆಯ ಮೇಲೆ ಆತನ ಆರೋಗ್ಯ ಯಾವ ರೀತಿಯ ಪರಿಣಾಮ ಬೀರುತ್ತದೆ ಹಾಗೂ ಸಂತೃಪ್ತ ಜೀವನಕ್ಕೆ ಕೇವಲ ಹಣ ಮಾತ್ರವಲ್ಲ, ಆರೋಗ್ಯವೂ ಎಷ್ಟು ಮುಖ್ಯ ಎಂಬುದನ್ನು ಸುಭಾಷ ನ ಜೀವನವನ್ನು ಕಟ್ಟಿಕೊಟ್ಟಿರುವ ಮೂಲಕ ಲೇಖಕಿ ತಿಳಿಸುತ್ತಾರೆ. ಆರೋಗ್ಯವೆಂದರೆ ಇಲ್ಲಿ ಕೇವಲ ದೈಹಿಕ ಆರೋಗ್ಯವಲ್ಲ.. ಮಾನಸಿಕ ಆರೋಗ್ಯವೂ ಸಹ ಎಂಬುದನ್ನು ಕಾಣಬಹುದು
ಬದಲಾದ ನರಸಿಂಹಯ್ಯನವರ ಗುಣ ಮನುಷ್ಯನ ಬದಲಾವಣೆಯ ದಿನಗಳನ್ನು ಹಾಗೂ ಪರಿಸ್ಥಿತಿಯನ್ನು ತೋರಿದರೆ.. ಪ್ರತಿ ಪರಿಸ್ಥಿತಿಗೂ ಹೊಂದಿ ಬಾಳಬೇಕು ಎನ್ನುವ ಸಂದೇಶ ವಿಭಾ, ವಿಶ್ವಾಸರ ಬದುಕಿನಲ್ಲಿ ಕಾಣುತ್ತದೆ. ಪ್ರತಿ ಕಷ್ಟಗಳಿಗೂ ಒಂದು ಕೊನೆ ಇದ್ದೇ ಇರುತ್ತದೆ. ಅಂತಹ ಕಷ್ಟಗಳಲ್ಲಿಯೂ ಧೈರ್ಯ ಕಳೆದುಕೊಳ್ಳದ ವಿಭಾ ಗಟ್ಟಿ ಹೆಣ್ಣಾಗಿ ಇಷ್ಟವಾಗುತ್ತಾಳೆ.
ಚಿಕ್ಕ ಕಾದಂಬರಿಯ ಚೆಂದದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ