ಭಾನುವಾರ, ಏಪ್ರಿಲ್ 26, 2026

ಅನಿರೀಕ್ಷಿತ ಗುರುಗಳು (ಪುಸ್ತಕ ಯಾನ - 411)


ಪುಸ್ತಕದ ಶೀರ್ಷಿಕೆ : ಅನಿರೀಕ್ಷಿತ ಗುರುಗಳು 

ಲೇಖಕರು : ಡಾ|| ಶಾಂತಲಾ

ಪ್ರಕಾಶಕರು : ಹರಿವು ಬುಕ್ಸ್ 

ಪ್ರಥಮ ಮುದ್ರಣ : 2025

ಪುಟಗಳು : 132

ಬೆಲೆ : 150 ರೂ.


ಡಾ|| ಶಾಂತಲಾ ಅವರ ಈ ಕಥಾ ಸಂಕಲನಕ್ಕೆ "ಡಾ. ಸುನಂದಾ ಕುಲಕರ್ಣಿ ಹಸ್ತಪ್ರತಿ 2025" ಪ್ರಶಸ್ತಿ ದೊರೆತಿದೆ. 


ಬದುಕು ಕಲಿಸುವ ಹಲವಾರು ಪಾಠಗಳಲ್ಲಿ.. ಎಷ್ಟೋ ಗೊತ್ತಿಲ್ಲದ ಅಥವಾ ಗುರುಗಳು ಎಂದು ನಾವು ಭಾವಿಸಿರದ ವ್ಯಕ್ತಿಗಳಿಂದ ಒಳ್ಳೆಯ ಜೀವನ ಪಾಠಗಳು ಸಿಗುತ್ತವೆ. ಕಲಿಕೆಯ ನಿರೀಕ್ಷೆ ಇಲ್ಲದಿರುವಾಗ ಅಂತಹ ಪಾಠಗಳು ಬಂದೊದಗುತ್ತವೆ. ಅದನ್ನು ಗುರುತಿಸುವ ಸಾಮರ್ಥ್ಯ ನಮ್ಮಲ್ಲಿರಬೇಕು. ಅಷ್ಟೇ ಅಲ್ಲದೆ, ಕಲಿಯುವ ವಿನಮ್ರತೆಯೂ ಇರಬೇಕು. ಇಲ್ಲಿನ ಕಥೆಗಳಲ್ಲಿ ವಿಭಿನ್ನ ದೃಷ್ಟಿಕೋನದ ಆಲೋಚನೆಗಳಿವೆ. ಬದುಕು ರೂಪುಗೊಂಡ ಬಗ್ಗೆ ಧನ್ಯತೆ ಹಾಗೂ ಸಕಾರಾತ್ಮಕತೆ ಕಾಣುತ್ತದೆ. ಒಂದು ವೇಳೆ ನಕಾರಾತ್ಮಕ ಆಲೋಚನೆ ಇದ್ದರೂ.. ನಮ್ಮ ಆಲೋಚನಾ ಶೈಲಿಯನ್ನೇ ಬದಲಿಸಿಕೊಳ್ಳಬಹುದಾದಂತಹ ಕಥೆಗಳು ಇಲ್ಲಿವೆ. 


ಚೇತನ : 

ನಗರದಲ್ಲಿ ಚೇತನ ಹಾಸ್ಪಿಟಲ್ ಪ್ರತಿಷ್ಠಿತವಾಗಿತ್ತು. ಅಲ್ಲಿಗೆ ಹೆರಿಗೆಗೆಂದು ಬಂದಾಗ ಕೆಲವರು ತಮಗೆ ಹುಟ್ಟಿದ ಹೆಣ್ಣು ಮಗು ಬೇಡವಾದರೆ ಆಸ್ಪತ್ರೆಯಲ್ಲಿಯೇ ಬಿಟ್ಟು ಯಾವುದೋ ಮಾಯದಲ್ಲಿ ಪರಾರಿ ಆಗುತ್ತಿದ್ದ ಸಂದರ್ಭಗಳೂ ಇದ್ದವು. ಅಂತಹದ್ದೇ ಮತ್ತೊಂದು ಸಂದರ್ಭ. ಮಗುವಿನ ವಿಕೃತ ಹಾಗೂ ಕುರೂಪ ರೂಪ ವೈದ್ಯರಲ್ಲಿ ಹುಟ್ಟಿಸಿದ ಭಾವಗಳೇನು..? ಅದು ಹೆಚ್ಚು ಹೊತ್ತು ಬದುಕುವ ಯಾವ ಲಕ್ಷಣಗಳೂ ಇರಲಿಲ್ಲವಾಗಿದ್ದರೂ ಅದನ್ನು ಬದುಕಿಸುವ ಹಾಗೂ ಆ ಪ್ರಯತ್ನದಲ್ಲಿ ಅವರಿಗೆ ಆಗುವ ವಿಚಿತ್ರ ಅನುಭವಗಳು ಜೊತೆಗೆ, ಬದಲಾದ ಅವರ ಆಲೋಚನಾಲಹರಿಗಳು, ಆಂತರಿಕ ಸೌಂದರ್ಯ ಹಾಗೂ ಒಳ ಮನಸ್ಸಿನ ಚೈತನ್ಯದ ಚೇತನ ಉದ್ದೀಪನಗೊಳ್ಳುವ ಕಥೆ ಇಲ್ಲಿದೆ. ಅಷ್ಟಕ್ಕೂ ಮಗು ಏನಾಯ್ತು..? ಓದಿ ನೋಡಿ.


ಎರಡು ರೇಖೆಗಳು ಮತ್ತು ಡಾಪ್ಲರ್ ಸಿದ್ಧಾಂತ : 

ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆಗೆಂದು ಹೋದವಳು ಮತ್ತೊಬ್ಬರನ್ನು ಕಂಡು ಅವರ ಬದುಕನ್ನು ಉಳಿಸುವ ಸಂದರ್ಭದಲ್ಲಿ ಬದಲಾದ ಬಗೆ ಹೇಗೆ..? ಹತಾಶೆ, ದುಃಖದ ಸ್ಥಾಯಿ ಭಾವವೂ.. ಜೀವನೋತ್ಸಾಹ, ಡಾಪ್ಲರ್ ಸಿದ್ಧಾಂತಕ್ಕೆ ಒಂದಕ್ಕೊಂದು ಹೊಂದಿಕೊಂಡಿರುವ ಕಥೆ ಇಲ್ಲಿದೆ. ಸುಳ್ಳು ಸಹ ಒಬ್ಬರ ಬದುಕಲ್ಲಿ ಆಶಾಕಿರಣ ಮೂಡಿಸಿದ ಕತೆ ಇದು.


ಅಮಾವಾಸ್ಯೆಯ ಬೆಳಕು : 

ಎರಡನೇ ಬಾರಿ ಗರ್ಭಿಣಿಯಾಗಿದ್ದ ಪತ್ನಿಯ ಗರ್ಭದಲ್ಲಿ ಹೆಣ್ಣು ಮಗುವಿದ್ದರೆ ಅದನ್ನು ತೆಗೆಸಬೇಕು ಎನ್ನುವ ಆಲೋಚನೆಯಲ್ಲಿಯೇ ಇದ್ದವನಿಗೆ ವೈದ್ಯರ ಮಾತು ಎಲ್ಲವನ್ನೂ ತಲೆಕೆಳಗಾಗಿಸಿತ್ತು. ಅಷ್ಟಕ್ಕೂ.. ವೈದ್ಯರು ಇಲ್ಲಿ ಲಿಂಗ ಪರೀಕ್ಷೆ ಮಾಡಲಿಲ್ಲ. ಇನ್ನೂ ಹುಟ್ಟದ ಆ ಮಗು ಮನಸ್ಸಿಗೆ ಬೆಳಕು ಚೆಲ್ಲಿದ ಬಗೆ ಹೇಗೆ..? ಗಂಡು ಮಕ್ಕಳೇ ಬೇಕೆಂದು ಬಯಸುವ ಆತ ಹೆಣ್ಣುಮಕ್ಕಳ ಸಬಲತೆಯನ್ನು ಸಕಾರಾತ್ಮಕವಾಗಿ ಕಂಡ ಪ್ರಸಂಗ ಇಲ್ಲಿದೆ. ಓದಿ ನೋಡಿ.


ವಾರಾನ್ನದ ಹುಡುಗ : 

ಹಳ್ಳಿಯಿಂದ ಬೆಂಗಳೂರಿಗೆ ಬಂದು ಮಾವನ ಮನೆಯಲ್ಲಿ ವಾಸವಿದ್ದು, ವಾರಾನ್ನದ ದೆಸೆಯಿಂದ ಅವನ ಓದು ಸರಾಗವಾಗಿ ಸಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ವಾರಾನ್ನಕ್ಕೆ ಹೋಗಿದ್ದ ಮನೆಯೊಂದರಲ್ಲಿ ಆತ ಆಸೆಪಟ್ಟು ಕೈಗಡಿಯಾರವನ್ನು ನೋಡುತ್ತಿದ್ದ. ಆದರೆ, ಸಂಜೆ ಬರುವಷ್ಟರಲ್ಲಿ ಆ ಕೈಗಡಿಯಾರ ಕಳುವಾದ ಸುದ್ದಿ ಕಾಯುತ್ತಿತ್ತು. ಅಲ್ಲದೆ, ಆತನ ಬ್ಯಾಗಿನಲ್ಲಿ ಒಂದು ಕೈಗಡಿಯಾರವಿತ್ತು. ಇಲ್ಲಿ ಯಾವುದು ಸುಳ್ಳು ಯಾವುದು ನಿಜ..? ನೀವೇ ಓದಿ ತಿಳಿಯಿರಿ. ಇಲ್ಲಿ ವಾರಾನ್ನ ಕಲಿಸುವ ವಿನಮ್ರತೆಯ ಪಾಠ ಬಹಳವಾಗಿ ತಟ್ಟುತ್ತದೆ.


ನಕ್ಷತ್ರದ ಉಸುಕು :

ಕೊನೆಯ ದಿನಗಳನ್ನು ಎಣಿಸುತ್ತಿದ್ದ ರೋಗಿ ಮಲ್ಲಿಕಾಳನ್ನು ಚಿಕಿತ್ಸೆ ಮಾಡುತ್ತಿದ್ದ ವೈದ್ಯ ಭರತ್ ಅನುಪಸ್ಥಿತಿಯಲ್ಲಿ ಕೆಲ ದಿನಗಳಿಗಾಗಿ ಅವಳನ್ನು ಚಿಕಿತ್ಸೆ ಮಾಡಲು ಅಥವಾ ನೋಡಲು ನಿಯೋಜಿತರಾಗಿದ್ದ ವೈದ್ಯರ ನಡುವೆ ನಡೆಯುವ ಘಟನೆಗಳಿವೆ. ಇಬ್ಬರಲ್ಲಿಯೂ ಉಂಟಾಗುವ ಭಾವನೆಗಳು, ಸ್ಪಂದನೆ- ಪ್ರತಿಸ್ಪಂದನೆ ಹಾಗೂ ವಾಸ್ತವದ ನಡುವಿನ ಕಥೆ ಇಲ್ಲಿವೆ. ಮಲ್ಲಿಕಾಳ ಜೀವನೋತ್ಸಾಹ ನಮ್ಮಲ್ಲಿಯೂ ಹೊಸ ಹುರುಪು ಮೂಡಿಸುತ್ತದೆ.


ಆಟೀನ್ ರಾಜ : 

ಪದ್ಮನಾಭ ಅಂದು ಕೆಲಸ ಮುಗಿಸಿಕೊಂಡು ಬಂದಾಗ ಹಿರಿಯರಾಗಿದ್ದ ಕಿಟ್ಟು ಮಾವ ಬಂದಿದ್ದರು. ಅವರು ಆತನ ತಂದೆ ವೆಂಕಟೇಶ್ ಅವರ ಬಾಲ್ಯ ಸ್ನೇಹಿತರು. ಅಪ್ಪ ಇನ್ನೂ ಬಂದಿರಲಿಲ್ಲವಾದ್ದರಿಂದ ಮಾತುಕತೆ ಸಾಗಿತ್ತು. ಅಪ್ಪನ ಇಸ್ಪೀಟಿನ ಚಟವನ್ನು ದ್ವೇಷಿಸುತ್ತಿದ್ದ ಪದ್ಮನಾಭ, ಕಿಟ್ಟು ಮಾವನ ಜೊತೆ ಮಾತನಾಡಿದ ನಂತರ ತನ್ನ ದೃಷ್ಟಿಕೋನವನ್ನೇ ಬದಲಿಸಿಕೊಂಡ ಕಥೆ ಇಲ್ಲಿದೆ. ಕೆಲವೊಮ್ಮೆ ನಾವು ನೋಡುವ ನೋಟಕ್ಕೂ, ಅವರ ನಡೆಯ ಹಿಂದಿನ ಕಾರಣಕ್ಕೂ ಎಷ್ಟೊಂದು ವ್ಯತ್ಯಾಸಗಳಿರುತ್ತವಲ್ಲವಾ ಎನ್ನಿಸಿತು.


ನಂಬಿಕೆ : 

ಕೆಲಸವನ್ನರಸುತ್ತಾ ನೇಪಾಳದಿಂದ ಬಂದಿದ್ದ ಖೇಮ್ ಬಹದ್ದೂರ್ ತನ್ನ ನವವಧುವಿನೊಂದಿಗೆ ವೈದ್ಯರ ಬಳಿ ಬಂದಿದ್ದ. ಆತ ತನ್ನ ಗರ್ಭಿಣಿ ಪತ್ನಿಯ ಅಂದಿನ ಸ್ಥಿತಿಯ ಕುರಿತು ಯಾವ ತೀರ್ಮಾನ ತಳೆಯುತ್ತಾನೆ ಎಂದು ಆತನ ದೃಷ್ಟಿಕೋನದಲ್ಲಿ ಯೋಚಿಸುತ್ತಿದ್ದ ವೈದ್ಯರ ಆಲೋಚನೆಯನ್ನು ತಲೆ ಕೆಳಗಾಗಿಸುತ್ತಾನೆ ಅವನು. ವೈದ್ಯರು ತಮ್ಮ ವೈಯಕ್ತಿಕ ಬದುಕಿನಲ್ಲಿ ತಮ್ಮ ಪತ್ನಿಯನ್ನು ನೋಡಿಕೊಳ್ಳುವ ಹಾಗೂ ನಡೆಸಿಕೊಳ್ಳುವ ರೀತಿಯನ್ನು ಬದಲಾಯಿಸಿದ ಹಾಗೂ ಅವರ ತಪ್ಪನ್ನು ಅರಿವಾಗಿರುವ ಖೇಮ್ ಬಹದ್ದೂರ್ ತಿಳುವಳಿಕೆಯಲ್ಲಿ ಎತ್ತರವಾಗುತ್ತಾನೆ. ಓದಿಗಿಂತ ಆಲೋಚನೆ ಎತ್ತರವೆನ್ನಿಸುವ ಕತೆ ಇದು.


ಕನ್ಯಾಪಿತೃ :

ಮಂಜುನಾಥನನ್ನು ಹುಡುಕಿಕೊಂಡು, ಎಫ್. ಡಿ. ಸಿ ಆಗಿದ್ದಾನೆಂದು ಕೇಳಿಕೊಂಡು ಹೋಗಿದ್ದವರಿಗೆ ತಿಳಿದದ್ದು ಆತ ಮೋಸ ಮಾಡಿದ್ದು ಹಾಗೂ ಇವರು ಮೋಸ ಹೋಗಿದ್ದು. ಅವಿವಾಹಿತ ಮಗಳು ಭಾಗ್ಯಲಕ್ಷ್ಮಿ ಹಾಗೂ ಅವಿವಾಹಿತ ಮಗ ಶ್ರೀನಿವಾಸ ಇಬ್ಬರೂ ಅಪ್ಪನ ಆಸೆಯನ್ನು ಅರಿತು ಚಕಾರವೆತ್ತದಂತೆ ದುಡಿಯುತ್ತಿದ್ದವರು. ಅದರಲ್ಲಿಯೂ ಭಾಗ್ಯಲಕ್ಷ್ಮಿಯ ವಿವಾಹದ ವಯಸ್ಸು ಮೀರಿ ಹೋಗುವ ಸಂದರ್ಭದಲ್ಲಿ ಕನ್ಯಾಪಿತೃವಾಗಿ ಯೋಚಿಸಿದ ಮೂರ್ತಿಗಳು ತೆಗೆದುಕೊಂಡ ನಿರ್ಧಾರ ಯಾವುದಕ್ಕೆ ದಾರಿಯಾಯಿತು..? ಮಗಳ ಮದುವೆ ಮರೀಚಿಕೆಯಾಯಿತು ಎಂದುಕೊಳ್ಳುವಷ್ಟರಲ್ಲಿ ಬದಲಾದ ಕಾಲ ಹಾಗೂ ಪರಿಸ್ಥಿತಿಯ ಪಾಠವನ್ನು ಕಾಲವೇ ಮಗಳ ಮೂಲಕ ಕಲಿಸಿದ ಬಗೆ ಹೇಗಿದೆ..?


ಕಾಲವ್ಯೂಹದ ಅಂತರ್ಜೀವಿಗಳು : 

"ಬದುಕೆಂದರೆ ನಿರ್ದಿಷ್ಟ ಕಾಲ, ತಾಣಗಳಲ್ಲಿ ಹೀಗೆ ಹುಟ್ಟಿ ಹಾಗೆ ಸತ್ತು ಹೋಗುವುದರ ಮಧ್ಯೆ ಜರುಗುವ ಕ್ರಿಯೆ ಅಷ್ಟೆಯೇ? ತೃಪ್ತಿ, ಹೊಂದಾಣಿಕೆ, ಜೀವನದೊಂದಿಗೆ ರಾಜಿಯಾಗಿ ಬದುಕು ನಡೆಸಿಕೊಂಡು ಹೋದಂತೆ ಹೆಜ್ಜೆ ಹಾಕುವುದೆಲ್ಲವನ್ನೂ ನನ್ನ ಜೀವನ ಅದಾಗಲೇ ಕಲಿಸಿತ್ತು"

ಹೀಗೆ ಹಲವಾರು ಆಲೋಚನಾ ಲಹರಿಗಳಲ್ಲಿ ಮುಳುಗಿದವರಿಗೆಗೆ ಜಪಾನೀಯನೊಬ್ಬ ವಿಮಾನ ನಿಲ್ದಾಣದ ಕೆಫೆಟೇರಿಯಾದಲ್ಲಿ ಸಿಗುತ್ತಾನೆ. ಇಲ್ಲಿಂದ ಮುಂದಿನ ಕತೆಯೇ ವಿಭಿನ್ನ ಪ ಇವರಿಬ್ಬರ ಮಾತುಕತೆ, ಆಲೋಚನಾ ಲಹರಿಗಳು ಹಾಗೂ ಕನೆಕ್ಷನ್ ಗಳು ಬೇರೆಯದ್ದೇ ಕಥೆಯನ್ನು ತೆರೆದಿಡುತ್ತದೆ. ಈ ಕಥಾಸಂಕಲನದ ವಿಭಿನ್ನ ಕಥೆ ಇದು. ಜಪಾನಿನ ಹಲವಾರು ವಿಚಾರಗಳನ್ನು, ವಿಚಾರಧಾರೆಗಳನ್ನು ಇಲ್ಲಿ ಕಾಣಬಹುದು.


ಪ್ರತಿಷ್ಠೆ :

ಉದ್ಯಮಿ ಕೃಷ್ಣ ಪಾಟೀಲ್ ಅವರನ್ನು ಅಪರಿಚಿತ ಊರಿನಲ್ಲಿ ಆಸ್ಪತ್ರೆಯ ತೀವ್ರಚಿಕಿತ್ಸಾ ಘಟಕಕ್ಕೆ ಸೇರಿಸಲೇಬೇಕಾದ ತುರ್ತು ಪರಿಸ್ಥಿತಿ ಬಂದೊದಗಿತ್ತು. ಆ ಪರಿಸ್ಥಿತಿಯಲ್ಲಿ ಅವರಿಗೆ ಪರಿಚಿತರೆಂಬುವವರು ಯಾರೂ ಇರಲಿಲ್ಲವೆಂದುಕೊಂಡರೂ ಅವರಿಗೆ ಸಿಕ್ಕ ಆಪ್ತತೆ ಹಾಗೂ ಮುಗ್ಧ ಮನಸ್ಸಿನ ಆತನನ್ನು ಪ್ರತಿಷ್ಠೆಯ ಕಾರಣದಿಂದಲೇ ದೂರವಿಟ್ಟಿದ್ದರು. ಆತ ಸೀಳುತುಟಿಯ ಕಿಟ್ಟಿ . ಆತನಿಗೆ ಸಹಾಯ ಮಾಡಬೇಕೆಂದು ಹೊರಡುವ ಅವರಿಗೆ ಆ ಅವಕಾಶ ಕೈ ತಪ್ಪಿ ಹೋಯಿತೇ..? ಬದುಕು ಕೆಲವೊಮ್ಮೆ ಒಂದೇ ಅವಕಾಶ ಕೊಡುತ್ತದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಆ ಅವಕಾಶವಂತೂ ಮತ್ತೆ ಬಾರದು. ಕಿಟ್ಟಿಯ ಹಿರಿತನ, ಕೃಷ್ಣ ಪಾಟೀಲರ ಪ್ರತಿಷ್ಠೆಯನ್ನು ಒಂದೇ ಕ್ಷಣದಲ್ಲಿ ಮಣ್ಣು ಮುಕ್ಕಿಸಿದ ಬಗೆ ಹೇಗಿದೆ ಓದಿ ನೋಡಿ.


ಭಾಗ್ಯ : 

"ನಿನ್ನ ಬಲಗೈನ ಈ ಒಂದು ಸೊಟ್ಟ ಗೀರಿನಿಂದಲೇ ನಿನಗೆ ತೊಂದರೆ," ಎಂದು ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಹೇಳಿದ್ದ ಪದ್ಮಾವತಿಯ ಮಾತು ಭಾಗ್ಯಳ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟಿತ್ತು. ಅವಳ ತಪ್ಪಿ ಹೋದ ಅವಕಾಶವೆಲ್ಲದಕ್ಕೂ ಅದನ್ನೇ ಮುಂದು ಮಾಡಿಕೊಂಡು ಆಲೋಚಿಸುತ್ತಿದ್ದ ಅವಳ ನಕಾರಾತ್ಮಕ ಆಲೋಚನೆ ಬದಲಾಗಿದ್ದು ಬಹಳ ವರ್ಷಗಳ ನಂತರ, ಬದಲಾಯಿಸಿದವರಾದರು ಯಾರು..? ಇಲ್ಲಿ ಹಸ್ತರೇಖೆ ಬದಲಾಗಲಿಲ್ಲ. ಬದಲಾಗಿ ದೃಷ್ಟಿಕೋನ ಬದಲಾಯಿತು. ಅದನ್ನು ಬದಲಾಯಿಸಿದ್ದು ಒಬ್ಬರು ಡಾಕ್ಟರ್. ಅವರಿಬ್ಬರ ಭೇಟಿ ಹೇಗಾಯಿತು ಓದಿ ನೋಡಿ. 


ಇಲ್ಲಿನ ಹೆಚ್ಚಿನ ಕಥೆಗಳಲ್ಲಿ ವೈದ್ಯರು ಕಾಣಿಸಿಕೊಳ್ಳುತಾರೆ. ಲೇಖಕರ ವೃತ್ತಿ, ಅನುಭವ ಬರಹದೊಡನೆ ಮಿಳಿತವಾಗಿದೆ. ಇಲ್ಲಿ ಓದಿದವರೆಲ್ಲರೂ ತಿಳಿದವರಲ್ಲ. ಬದಲಾಗಿ ಹೆಚ್ಚು ಓದಿದ್ದರೂ.. ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇರುವ ಕೆಲವರು ಕಾಣುತ್ತಾರೆ. ಕೆಲವೇ ಸಮಯದ ಭೇಟಿಯಲ್ಲಿ ಕೆಲ ವ್ಯಕ್ತಿಗಳು ಮೂಡಿಸುವ ಛಾಪು ಬಹಳ ದೊಡ್ಡದು. ಅದರ ಪರಿಣಾಮ ಅಚ್ಚಳಿಯದಂತೆ ಉಳಿಯುವಂತದ್ದು. ಅಂತಹ ಚೆಂದದ ಪಾಠಗಳು ಇಲ್ಲಿವೆ. 


ಕಥಾವಸ್ತು, ಆಲೋಚನೆ, ನಿರೂಪಣೆ ಎಲ್ಲವೂ ಸೊಗಸಾಗಿದೆ. ಲೇಖಕರು ಅಥವಾ ಪ್ರಕಾಶಕರು, ಅಕ್ಷರ ದೋಷಗಳು ಹಾಗೂ ಪದಗಳ ಸ್ಪೇಸಿಂಗ್ ಕುರಿತು ಗಮನ ಹರಿಸಿದರೆ ಮತ್ತಷ್ಟು ಸರಾಗವಾದ ಓದು ಇದಾಗುತ್ತದೆ ಎನ್ನಿಸಿತು..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ