ಭಾನುವಾರ, ಏಪ್ರಿಲ್ 26, 2026

ಕೆಂಪಾದ ದೀಪ (ಪುಸ್ತಕ ಯಾನ - 404)


ಪುಸ್ತಕದ ಶೀರ್ಷಿಕೆ : ಕೆಂಪಾದ ದೀಪ 

ಲೇಖಕರು : ಚಿತ್ರಲೇಖ 

ಪ್ರಕಾಶಕರು : ಶ್ರೀ ಸಾಹಿತ್ಯ ಮಾಲೆ

ಪ್ರಥಮ ಮುದ್ರಣ : 2023

ಪುಟಗಳು : 154

ಬೆಲೆ : 150 ರೂ. 


ವನಿತಾ ಪತ್ರಿಕೆಯಲ್ಲಿ ಓದುಗರ ಅಪಾರ ಮನ್ನಣೆ ಪಡೆದಿರುವ ಈ ಕಾದಂಬರಿಯನ್ನು ಶ್ರೀಮತಿ ಶಾರದಾ ಎಂಬುವವರು ತೆಲುಗು ಭಾಷೆಗೆ ಅನುವಾದ ಮಾಡಿದ್ದಾರೆ. 


ಚಿತ್ರಲೇಖ ಮೇಡಂ ಅವರು ಈ ಕಾದಂಬರಿ ಹುಟ್ಟಿದ ಬಗೆಯನ್ನು ಲೇಖಕಿಯ ನುಡಿಯಲ್ಲಿ ಹೀಗೆ ಹೇಳುತ್ತಾರೆ. 80ರ ದಶಕದಲ್ಲಿ ವನಿತಾ ಪತ್ರಿಕೆಯ ಸಂಪಾದಕರು ಅವರಿಂದ ಒಂದು ಕಾದಂಬರಿಯನ್ನು ಅಪೇಕ್ಷಿಸಿದಾಗ ಕಥಾವಸ್ತು ಏನಿರಬೇಕೆಂದು ಯೋಚಿಸುತ್ತಿದ್ದಾಗ.. ಆ ಸಮಯದಲ್ಲಿ ಸವದತ್ತಿ ಯಲ್ಲಮ್ಮನ ಗುಡಿ ದೇವದಾಸಿಯರ ಬದುಕಿಗೊಂದು ನೆಲೆ ಕಲ್ಪಿಸಲು ಹಾಗೂ ಅನಿಷ್ಟ ಪದ್ದತಿಯನ್ನು ತೊಲಗಿಸಲು ಹೋರಾಟ ನಡೆಯುತ್ತಿತ್ತು. ಅದೇ ಹೊತ್ತಿಗೆ ಇವರು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ದೈಹಿಕ ಶಿಕ್ಷಣ ಅಧ್ಯಾಪಕರಾಗಿದ್ದವರು ವಯಸ್ಕ ವಿದ್ಯಾರ್ಥಿನಿಯರ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಮೂರು ತಿಂಗಳ ಕಾಲ ಎಲ್ಲರೂ ಹೋರಾಡಿ ಆತನನ್ನು ಹೊರಗಟ್ಟಲು ಪಟ್ಟ ಶ್ರಮ ಬರೆಯಲಸಾಧ್ಯ ಎನ್ನುತ್ತಾ.. ಈ ಎರಡರ ಮಿಳಿತವಾಗಿ ವಿಭಿನ್ನ ಕಥಾವಸ್ತುವೊಂದನ್ನು ರೂಪಿಸುತ್ತಾರೆ. ಅದೇ ಕೆಂಪಾದ ದೀಪ ಎಂಬ ಕಾದಂಬರಿ.


ಕೆಂಪಾದ ದೀಪ ಕಾದಂಬರಿ ಹೆಣ್ಣುಮಕ್ಕಳು ಬೇಕೆಂದು ಹೋಗದ ವೇಶ್ಯಾವಾಟಿಕೆಯ ಜಾಲದ ಕುರಿತಾಗಿ ಹಾಗೂ ಹೆಣ್ಣು ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಎದುರಿಸುವ ಸವಾಲು ಹಾಗೂ ಸಮಸ್ಯೆಯ ಕುರಿತಾಗಿ ಬರೆಯುತ್ತಾ ಸಮಾಜದ ಹುಳುಕುಗಳಿಗೆ ಕನ್ನಡಿ ಹಿಡಿಯುತ್ತಾರೆ.


ಈ ಕಾದಂಬರಿಯಲ್ಲಿ ಡಾಕ್ಟರ್ ಅರ್ಜುನ್ ನ ಪಾತ್ರ ಉದಾತ್ತವಾದುದು. ಡಾಕ್ಟರ್ ಅರ್ಜುನ್ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಕಷ್ಟದಿಂದ ಓದಿ ಮುಂದೆ ಬಂದ ತರುಣ. ಚಿಕ್ಕಂದಿನಿಂದಲೂ ಓದಿನೆಡೆಗೆ ಆತನ ಆಸಕ್ತಿ. ಅಣ್ಣಂದಿರಂತೆ ವ್ಯವಸಾಯದಲ್ಲಿ ಆಸಕ್ತಿ ಇಲ್ಲದ ಆತ ಮುಂದೆ ಕಷ್ಟಪಟ್ಟು ಓದಿ ಹೊಸ ಊರು, ಹೊಸ ಜನ, ಹೊಸ ಭಾಷೆಗೆ ತನ್ನನ್ನು ತಾನು ಸಮರ್ಪಿಸಿಕೊಂಡು ವಿದ್ಯಾರ್ಥಿ ವೇತನ ಹಾಗೂ ಸೌಲಭ್ಯಗಳನ್ನು ಪಡೆದು ಅಧ್ಯಾಪಕರ ಮೆಚ್ಚಿನ ವಿದ್ಯಾರ್ಥಿಯಾಗಿ ನಂತರ ಡಾಕ್ಟರ್ ಸಹ ಆಗುತ್ತಾನೆ. ಹಣದ ದುರಾಸೆ ತೋರಿಸದ, ಹಾಗೆಯೇ ಕೆಳ ಮತ್ತು ಮಧ್ಯಮ ವರ್ಗಕ್ಕೆ ಹತ್ತಿರವಾದ ಡಾಕ್ಟರ್. ಆತನ ಕೈಗುಣವೂ ಚೆನ್ನಾಗಿತ್ತು. ಬಂದ ಹಣದಲ್ಲಿ ಅರ್ಧವನ್ನು ಮನೆಗೆ ಕಳುಹಿಸಿ, ಉಳಿದ ಹಣದಲ್ಲಿ ಬಾಡಿಗೆ ಮನೆ ಪಡೆದು ಅಲ್ಲಿಯೇ ಕ್ಲಿನಿಕ್ ಅನ್ನು ಮಾಡಿಕೊಂಡಿದ್ದ. ಕ್ಲಿನಿಕ್ ಹಾಗೂ ಮನೆ ಕೆಲಸದ ಸಹಾಯಕ್ಕಾಗಿ ಸುಬ್ಬು ಇದ್ದನು. 


ತನ್ನ ಆಪ್ತಮಿತ್ರ ವಾಸುದೇವನ ವಿವಾಹದ ಕರೆಯೋಲೆಗೆ ಓಗೊಟ್ಟು ಹೋಗಿದ್ದ ಅರ್ಜುನ್ ಬರುವಾಗ ದಾರಿ ಮಧ್ಯದಲ್ಲಿ ಪ್ರಜ್ಞೆ ತಪ್ಪೆ ಬಿದ್ದಿದ್ದ ಹೆಣ್ಣು ಕಾಣುತ್ತಾಳೆ. ಅವನಿಗಿಂತ ಮುಂದೆ ಹೋದ ಲಾರಿಯವನು ಅಪಘಾತ ಮಾಡಿರಬಹುದು ಅಥವಾ ಆಕೆ ಅದರಿಂದ ಹಾಕಿರಬಹುದು ಎಂದು ಏನೆಲ್ಲಾ ಯೋಚಿಸಿದರೂ ಆತನಿಗೆ ಉತ್ತರ ದೊರಕುವುದಿಲ್ಲ. ನಂತರ ಪ್ರಜ್ಞೆ ತಪ್ಪಿದ್ದ ಆಕೆಯನ್ನು ತನ್ನ ಕಾರಿಯಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುತ್ತಾನೆ. ಆಕೆಯನ್ನು ರೋಗಿಯಾಗಿ ಮಾತ್ರವೇ ನೋಡುವ ಅವನು ಮೊದಲು ಚಿಕಿತ್ಸೆ ಶುರು ಮಾಡುತ್ತಾನೆ. ಆಕೆಯ ಕಾಲಿಗೆ ಹೆಚ್ಚು ಪೆಟ್ಟಾಗಿರುತ್ತದೆ. ಮರುದಿನ ಆಕೆಗೆ ಜ್ವರವು ಬರುತ್ತದೆ. ಅಲ್ಲಿಯೇ ಉಳಿಯುವ ಸಂದರ್ಭ. ಆಕೆಗೆ ಸಂಕೋಚವಾದರೂ.. ಅಲ್ಲಿಂದ ಹೋಗಬೇಕೆಂದು ಹೊರಟರೂ ಆಕೆ ಹೋಗುವಂತಿರಲಿಲ್ಲ. ಸದ್ಯಕ್ಕೆ ದಮಯಂತಿ ಕ್ಲಿನಿಕ್ಕಿನಲ್ಲಿಯೇ ಆಕೆಯ ವಾಸ. 


ಆಕೆಯ ಕುರಿತ ಯಾವುದೇ ಪ್ರಶ್ನೆಗೂ ಅವಳು ಉತ್ತರಿಸುವುದಿಲ್ಲ. ಪೊಲೀಸರಿಗೆ ಹೇಳುತ್ತೇನೆ ಎಂದರೆ ಅದಕ್ಕೂ ಒಪ್ಪುವುದಿಲ್ಲ. ಕೊನೆಗೆ ಅಗತ್ಯಕ್ಕೆ ಮಾತ್ರ ಬೇಕಿದ್ದ ನನ್ನ ಹೆಸರನ್ನು ಹೇಳಿದಳು. ಆಕೆಯೇ ದೀಪ. ಮುಂದೆ ನೆರೆಹೊರೆಯವರು ಆ ತರುಣಿಯ ಕುರಿತಾಗಿ ಕುತೂಹಲ ತೋರುತ್ತಾರೆ. ಆಕೆ ಮನೆಯಲ್ಲಿ ಕಾಣದಾದಾಗ ಆಕೆಯನ್ನು ಹುಡುಕಿಕೊಂಡು ರೌಡಿಗಳು ಸಹ ಬರುತ್ತಾರೆ. ಆದರೆ, ಚಂಪಾ ಎಲ್ಲಿ ಎಂದೇ ಕೇಳುವುದು. ಅವರು ಹೋದ ನಂತರ ದೀಪಾ ವಾಪಾಸು ಬರುತ್ತಾಳೆ.


ಚಂಪಾ ತನ್ನ ವೈಯಕ್ತಿಕ ಮಾಹಿತಿ, ವಿಳಾಸವನ್ನು ಹಂಚಿಕೊಳ್ಳದಿದ್ದರೂ ಆಕೆ ತಾನು ಮನೆಯಿಂದ ಹೊರಡುವಾಗ ಡಾಕ್ಟರಿಗೆ ಹೇಳಿ ಹೊರಡದಿದ್ದರೂ.. ೫೦೦ ಫೀಸು ಜೊತೆಗೆ ಅವಳ ಬದುಕಿನ ಕಥೆಯನ್ನು ಹಾಳೆಯಲ್ಲಿ ಬರೆದಿಟ್ಟು ಹೊರಟಿರುತ್ತಾಳೆ. 


ಅರ್ಜುನ್ ಆಕೆಯ ಬದುಕಿನ ಕಥೆಯನ್ನು ಓದುತ್ತಾ ಸಾಗುತ್ತಾನೆ.


 ಮಧ್ಯಮ ವರ್ಗದ ಕುಟುಂಬದಲ್ಲಿ ನಾಗರತ್ನ ಹಾಗೂ ನಾಗರಾಜ ದಂಪತಿಗಳ ಮಗಳಾಗಿ ಜನಿಸಿದ್ದ ದೀಪ ಮುಂದೆ ಪ್ರೌಢಾವಸ್ಥೆಗೆ ಬಂದಾಗ.. ಪಕ್ಕದ ಮನೆಯ ಜಾನಿ ಮಾಮನಿಂದ ಆಕೆಯ ಮುಗ್ಧತೆಯನ್ನು ಹಾಗೂ ಸೌಂದರ್ಯವನ್ನು ಕಂಡು ಮಾಡಿದ ವರ್ತನೆಗೆ ದೀಪಾ ವಿಪರೀತಾರ್ಥ ಕಲ್ಪಿಸಿ ಉಂಟಾದ ಘಟನೆ, ಶಾಲೆಯಲ್ಲಿ ವ್ಯಾಯಾಮದ ಅಧ್ಯಾಪಕ ಸಣ್ಣಪ್ಪನಿಂದ ನಡೆದ ಕಿರುಕುಳ ಎಲ್ಲವೂ ಸೇರಿ ಆಕೆಯನ್ನು ಕುಗ್ಗಿಸುತ್ತಾ ಹೋಗುತ್ತದೆ. ತನ್ನದೇ ಓದು ಹಾಗೂ ಕಥಾ ಬದುಕನ್ನು ಮಾತ್ರ ಓದಿಕೊಂಡಿದ್ದ ಅವಳಿಗೆ ತಾನು ಮಲಿನವಾದೆ ಎಂಬ ವಿಚಾರ ತಲೆಯಲ್ಲಿ ಕೂತಿರುತ್ತದೆ. ಅದನ್ನು ಯಾರೊಡನೆಯೂ ಹಂಚಿಕೊಳ್ಳಲಿಲ್ಲ ಅವಳು.


ದೈಹಿಕ ಶಿಕ್ಷಕ ಸಣ್ಣಪ್ಪನ ಕಿರುಕುಳ ದೂರವಾದದ್ದು ಹೇಗೆ ಓದಿ ನೋಡಿ. ಅದು ದೀಪಾಳ ಕಾರಣದಿಂದಲ್ಲವಾದರೂ ವಿದ್ಯಾರ್ಥಿಯೊಬ್ಬಳ ಧೈರ್ಯವೇ ಅದಕ್ಕೆ ಕಾರಣವಾದ ಘಟನೆ ಇಲ್ಲಿದೆ. 


ದೀಪ ಮನಸ್ಸಿನ ಮೇಲೆ ಇದೆಲ್ಲವೂ ಪರಿಣಾಮ ಬೀರಿ ಆಕೆ ಓದಿನಲ್ಲಿ ಹಿಂದುಳಿದಾಗ.. ಜಾನಿಯ ಮನೆಗೆ ಬಂದ ದಂಪತಿಗಳು ಸೀತಾರಾಮ ಹಾಗೂ ರಾಧಮ್ಮ ನ ಮೈದುನ ನಂದಕುಮಾರ್ ಬಳಿ ಆಕೆಗೆ ಟ್ಯೂಷನ್ ಹೇಳಿಸುವ ವ್ಯವಸ್ಥೆಯಾಗುತ್ತದೆ. ಮುಂದೆ ಆತ ಆಕೆಯ ಕುರಿತು ಆಸ್ಥೆ ತೋರಿಸಿ ಅವಳ ಮಂಕಾಗುವಿಕೆಯನ್ನು ಒಡೆದೋಡಿಸಲು ಮನ ಬಿಚ್ಚಿ ಮಾತನಾಡಿದಾಗ.. ಆತನ ಬಳಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾಳೆ. ಆಕೆಯ ಮನದ ಭವಣೆಯನ್ನು ನಿವಾರಿಸುತ್ತನಾದರೂ.. ನಂದಕುಮಾರ್ ಹಾಗೂ ದೀಪ ಪ್ರೇಮಿಗಳಂತೆ ಪ್ರೇಮಿಸಲು ಶುರು ಮಾಡುತ್ತಾರೆ. ದೀಪಾಳ ಎಸ್ ಎಸ್ ಎಲ್ ಸಿ ಮುಗಿಯುತ್ತದೆ. ಆ ಸಂದರ್ಭದಲ್ಲಿ ನಡೆದ ಒಂದು ಘಟನೆ ಅವಳ ತಂದೆಯ ಕಣ್ಣಲ್ಲಿ ಅವಳು ಹಾಗೂ ನಂದಕುಮಾರ್ ನನ್ನು ಅಪರಾಧಿಯನ್ನಾಗಿಸುತ್ತದೆ. ಆ ವಿಚಾರ ದೊಡ್ಡದಾಗಿ ಎಲ್ಲರೂ ದೀಪಳನ್ನು ನೋಡುವ ರೀತಿಯೇ ಬದಲಾಗುತ್ತದೆ. ಮುಂದೆ ದೀಪಾಳಿಗೆ ವಿವಾಹ ಮಾಡಲು ಹೋದರೂ.. ಈ ವಿಚಾರ ತಿಳಿದು ವಿವಾಹವೂ ಆಗುವುದಿಲ್ಲ. 


ಉಳಿದ ಮಕ್ಕಳ ಬದುಕಿಗೆ ಆಕೆ ಕಪ್ಪು ಚುಕ್ಕಿ ಆಗಬಾರದೆಂದುಕೊಂಡು ಆಕೆಯನ್ನು ಕಾಲೇಜಿಗೆ ಕಳಿಸಲು ಶುರು ಮಾಡುತ್ತಾರೆ. ಯಾಂತ್ರಿಕವಾಗಿ ಕಾಲೇಜಿಗೆ ಹೋಗುತ್ತಾಳಾದರೂ ಓದಿನಲ್ಲಿ ಆಸಕ್ತಿ ಇರುವುದಿಲ್ಲ. ಆಗ ತನಗಿಂತಲೂ ವಯಸ್ಸಿನಲ್ಲಿ ದೊಡ್ಡವಳಂತಿರುವ ಶ್ರೀಮಂತೆಯಂತೆ ಕಾಣುವ ಸರಿತಾಳ ಪರಿಚಯವಾಗುತ್ತದೆ. 


ಸರಿತಾಳ ಪರಿಚಯವೇ ಮುಂದೆ ದೀಪಾ ಬದುಕಿನಲ್ಲಿ ದೊಡ್ಡ ತಿರುವಿಗೆ ಕಾರಣವಾಗುತ್ತದೆ. ಮನೆಯಲ್ಲಿ ತಂದೆ-ತಾಯಿಯರ ಪ್ರೀತಿ ಸಿಗದ ದೀಪಾಳ ಮನಸ್ಸನ್ನು ಉಪಯೋಗಿಸಿಕೊಂಡು ಆಟವಾಡುವ ಸರಿತಾ ಹಾಗೂ ಪುಷ್ಪವನ ಆಕೆಗೆ ಒಳ್ಳೆಯವರಂತೆ ಕಾಣುತ್ತಾರೆ. ಮುಂದೆ ಪುಷ್ಪವನಳ ಹಿಡಿತಕ್ಕೆ ಸಿಗುವ ದೀಪ ಚಂಪಾ ಆಗುತ್ತಾಳೆ.


ಈಗ ಅದೇ ಚಂಪಾ ಅರ್ಜುನನ ಮುಂದೆ ತನ್ನ ಬದುಕನ್ನು ಬಿಚ್ಚಿಟ್ಟಿರುವುದು ಆತನ ನಿಸ್ವಾರ್ಥ ಸೇವೆ, ಒಳ್ಳೆಯ ಮನಸ್ಸನ್ನು ಕಂಡು ಹಾಗೂ ತಾನು ಹಾಗೂ ಆತ ಇನ್ನೆಂದೂ ಭೇಟಿಯಾಗಲಾರೆವು ಎಂದು. ಆದರೆ, ವಿಧಿಲಿಖಿತ ಹಾಗಿರುವುದಿಲ್ಲ. ಮತ್ತೆ ಅರ್ಜುನ್ ಹಾಗೂ ಚಂಪಾ ಭೇಟಿಯಾಗುವ ಸಂದರ್ಭ ಯಾವುದು..? ಆಕೆಯ ಬದುಕಿನ ಕಥೆಯನ್ನು ಓದಿದ ಅರ್ಜುನ್ ಯಾವ ರೀತಿ ಆಲೋಚಿಸುತ್ತಾನೆ? ಪುಷ್ಪವನಳ ಪರಿಸ್ಥಿತಿ ಹೇಗಿರುತ್ತದೆ ಹಾಗೂ ಇಂತಹ ಹೆಣ್ಣು ಮಕ್ಕಳ ಬದುಕು ಯಾವ ರೀತಿ ಇರುತ್ತದೆ..? ದೀಪ ಅಂದು ಅರ್ಜುನ್ ಗೆ ಸಿಕ್ಕ ಪರಿಸ್ಥಿತಿಯ ಮುಂಚೆ ನಡೆದಿದ್ದ ಘಟನೆ ಏನು..? 


ಕೆಂಪು ದೀಪದ ಬೆಳಕಿನಲ್ಲಿರುವ ದೀಪಾಳ ಬದುಕಿನ ಕಥೆ ಇಲ್ಲಿದೆ. ಆದರೆ, ಎಲ್ಲರಿಗೂ ಇಂತಹ ಅದೃಷ್ಟ ಸಿಗಲಾರದು. ಕರುಣಾಕನಕ ಹಾಗೂ ಮಾನವೀಯತೆಯ ಕಥೆ. ಜೊತೆಗೆ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಹಾಗೂ ಭವಿಷ್ಯವನ್ನು ರೂಪಿಸುವ ತಂದೆ-ತಾಯಿಯರ ನಡೆ ಹೇಗಿರಬಾರದು ಎಂಬುದನ್ನು ಹೇಳುವ ಕಾದಂಬರಿ ಇದು. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ