ಭಾನುವಾರ, ಏಪ್ರಿಲ್ 26, 2026

ಧವಳ ನಕ್ಷತ್ರ (ಪುಸ್ತಕ ಯಾನ - 361)


ಪುಸ್ತಕದ ಶೀರ್ಷಿಕೆ : ಧವಳ ನಕ್ಷತ್ರ

ಲೇಖಕರು : ಸಾಯಿಸುತೆ 

ಪ್ರಕಾಶಕರು : ಸುಧಾ ಎಂಟರ್ಪ್ರೈಸಸ್

ಪ್ರಥಮ ಮುದ್ರಣ : 1990

ನಾಲ್ಕನೇ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 152

ಬೆಲೆ : 150 ರೂ. 


'ಯಾವ ಸಮಾಜದಲ್ಲಿ ಮನುಷ್ಯ ಸಂಬಂಧಗಳು ಗಟ್ಟಿಯಾಗಿರುತ್ತದೋ ಆ ಸಮಾಜ ಅತ್ಯಂತ ಆರೋಗ್ಯಕರ, ಅಷ್ಟೇ ಸನ್ನಡತೆ ಕೂಡ. ಸಂಬಂಧಗಳು ಹೇಗೆ ಹುಟ್ಟುತ್ತದೆ, ಹೇಗೆ ಕೊನೆಗೊಳ್ಳುತ್ತವೆಯೆಂದು ಹೇಳಲಾಗುವುದಿಲ್ಲ. ಇದೊಂದು ರೀತಿಯಲ್ಲಿ ಬೀಜ ಮೊಳಕೆಯೊಡೆದು, ಭೂಮಿಯಾಳಕ್ಕೆ ಬೇರು ಬಿಟ್ಟು ತಲೆ ಎತ್ತಿ ನಿಲ್ಲುವ ಗಿಡದಂತೆ.' ಎನ್ನುವ ಮಾತನ್ನು ಹೇಳುವ ಲೇಖಕಿ ಸಂಬಂಧಗಳ ಸರಳೀಕರಣ, ಬೆಸೆದುಕೊಳ್ಳುವಿಕೆ ಹಾಗೂ ಸಂಕೀರ್ಣತೆಯನ್ನು ಈ ಕಾದಂಬರಿಯಲ್ಲಿ ತೆರೆದಿಟ್ಟಿದ್ದಾರೆ.


ಇಂದಿನ ವಾಸ್ತವಕ್ಕಂತೂ ಬಹಳವೇ ಹತ್ತಿರವೆನಿಸುವ ಕಾದಂಬರಿ ಇದು. ಮನುಷ್ಯನ ಬಳಿ ಹಣ, ಅಧಿಕಾರವಿದ್ದಾಗ ಬೆಲ್ಲದ ಸುತ್ತ ಇರುವೆಗಳು ಮುತ್ತುವಂತೆ ಮುತ್ತುವ ಜನ ಅಧಿಕಾರ, ಹಣ ಕಳೆದುಕೊಂಡಾಗ ಅವರನ್ನು ಹೇಗೆ ನೋಡುತ್ತಾರೆ ಎನ್ನುವುದನ್ನು ತೆರೆದಿಟ್ಟಿದ್ದಾರೆ. 


ದೊಡ್ಡ ಜನರೆಂದು ಸಮಾಜದಲ್ಲಿ ಮೆರೆಯುವ ವ್ಯಕ್ತಿಗಳ ಧಿಮಾಕು ರೋಹಿಣಿಗೆ ರೋಷಕ್ಕಿಂತಲೂ ಜಿಗುಪ್ಸೆಯನ್ನು ಹುಟ್ಟಿಸಿತು. ಈಗ ಅವಳು ರಘುವೀರ ಪತ್ರಿಕೆಯ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ಅದಕ್ಕೂ ಮುನ್ನಿನ ಅವಳ ಹಿನ್ನೆಲೆ ಧೀಮಂತಿಕೆ ಹಾಗೂ ಶ್ರೀಮಂತಿಕೆಯಿಂದ ಕೂಡಿತ್ತು. 


ರೋಹಿಣಿಯ ತಾತನ ಕಾಲದಲ್ಲಿ 30-40 ಜನರು ವಾಸಿಸುತ್ತಿದ್ದಂತಹ ಮನೆ, ಶ್ರೀಮಂತಿಕೆ ಆಳಿದ ನಂತರ ಅವರು ಎಲ್ಲೆಲ್ಲೋ ಹೋಗಿಬಿಟ್ಟಿದ್ದರು. ಈಗ ವೈಭವ ಗತಕಾಲದ ನೆನಪು ಮಾತ್ರ. ಪರಶುರಾಮ್ ಅದೇ ಶ್ರೀಮಂತಿಕೆಯ ಗುಂಗಿನಲ್ಲಿದ್ದರು. ಈಗ ಮನೆಯಲ್ಲಿ ಉಳಿದಿದ್ದವರು ಪರಶುರಾಮ್, ಅವರ ತಂಗಿ ಅನ್ನಪೂರ್ಣ ಹಾಗೂ ಮಗಳು ರೋಹಿಣಿ ಮಾತ್ರ. ತಂದೆಯ ದೇಹಸ್ಥಿತಿಯಂತೆ ಮನಸ್ಸು ಕೂಡ ಹದಗೆಟ್ಟಿರುವುದು ರೋಹಿಣಿಗೆ ಅರಿವಿತ್ತು. ಅವರ ಕರುಣಾಮಯಿ ವ್ಯಕ್ತಿತ್ವವೇ ಇಂದಿನ ಅವರ ಪರಿಸ್ಥಿತಿಗೆ, ಎಡವಟ್ಟುಗಳಿಗೆ ಕಾರಣ ಕೂಡ. ಮನಸ್ಸು ಹದ ತಪ್ಪಿದಾಗಲೆಲ್ಲಾ ಡಾಕ್ಟರ್ ಅನ್ನು ಕರೆತಂದು ಚಿಕಿತ್ಸೆ ಕೊಡಿಸಬೇಕಾಗಿತ್ತು. ಅವರು ಹೀಗಾಗಿ 5 ವರ್ಷವೇ ಕಳೆದು ಹೋಗಿತ್ತು. 


ಪರಶುರಾಮ್ ಅವರಿಗೆ ವಾಸ್ತವವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿತ್ತು. ಅವರ ಪಾಲಿಗೆ ಮಗಳು ಇನ್ನೂ ಕಾಲೇಜಿಗೆ ಹೋಗುತ್ತಿದ್ದವಳು. ಅವಳು ಕಾರಿನಲ್ಲಿಯೇ ಮನೆ ಬಿಡಬೇಕಿತ್ತು, ಅದಕ್ಕಾಗಿ ಡ್ರೈವರನ್ನು ನಿರೀಕ್ಷಿಸುತ್ತಿದ್ದರು ಸಹ. ರೋಹಿಣಿ ವಾಸ್ತವವನ್ನು ಅರ್ಥ ಮಾಡಿಸುವ ಬದಲಾಗಿ ಅವರ ಮನಸ್ಸಿಗೆ ಘಾಸಿಯಾಗದಂತೆ ನಡೆದುಕೊಳ್ಳುತ್ತಿದ್ದಳು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಕೆಟ್ಟು ಹೋಗುತ್ತಿದ್ದ, ಕೆಲವೊಮ್ಮೆ ಸ್ಟಾರ್ಟ್ ಮಾಡಲೇ ಕಷ್ಟವಾಗುತ್ತಿದ್ದ ಕಾರನ್ನು ಬೀದಿಯ ಕೊನೆಯಲ್ಲಿದ್ದ ಗ್ಯಾರೇಜ್ ನಲ್ಲಿ ಬಿಟ್ಟು ಅಲ್ಲಿಂದ ಮೊಪೆಡ್ ನಲ್ಲಿ ಹೋಗುತ್ತಿದ್ದಳು. ಕೆಲವೊಮ್ಮೆ ಅವಳೇ ಮೆಕ್ಯಾನಿಕ್ ಕೂಡ ಆಗುತ್ತಿದ್ದಳು. ಆಗಾಗ ಕೆಲಸದವರು ಬಂದು ಹೋಗುವಂತೆ ವ್ಯವಸ್ಥೆ ಮಾಡಿದ್ದಳು. ಮೆಕ್ಯಾನಿಕ್ ಅಂಗಡಿಯಲ್ಲಿದ್ದ ಅನಾಥ ಹುಡುಗ ಕೀರ್ತಿಯ ಪಾಲಿಗೆ ಇವಳು ಬೇರೆಯದ್ದೆ ರೀತಿ ಕಾಣಿಸಿದ್ದಳು. ಎಲ್ಲರಂತಲ್ಲದ, ಮೃದುವಾಗಿ ಮಾತನಾಡಿಸುವ, ಪ್ರೀತಿ ತೋರುವ ಈಕೆ ಅವನ ಪಾಲಿಗೆ ಪ್ರೀತಿಯ ಅಕ್ಕ. ಎಷ್ಟೋ ಬಾರಿ ಇವರ ಮನೆಯಲ್ಲಿ ಊಟ ಮಾಡುತ್ತಿದ್ದ. ಅವರಿವರು ಕೊಡುವ ಭಕ್ಷೀಸನ್ನು ಇವರ ಮನೆಗೆ ಏನಾದರೂ ಕೊಂಡು ತರಲು ಖರ್ಚು ಮಾಡುತ್ತಿದ್ದ. ಆದರೆ, ರೋಹಿಣಿ ಅದನ್ನೆಲ್ಲ ಲೆಕ್ಕವಿಟ್ಟು ಅವನದ್ದಾಗಿ ಶೇಖರಿಸುತ್ತಿದ್ದಳು.


ಅವರ ಮನೆಯಂಗಳದಲ್ಲಿ ಬಾಡಿಗೆ ನೀಡುವಂತಹ ಮನೆಯಿತ್ತು. ಕಹಿ ನೆನಪುಗಳೇ ಇದ್ದುದರಿಂದ ಅವಳಿಗೆ ಆ ಮನೆಯನ್ನು ಬಾಡಿಗೆ ನೀಡಲು ಇಷ್ಟವಿರಲಿಲ್ಲ. ಈಗ ಅನ್ನಪೂರ್ಣಮ್ಮನವರು ಆ ಮನೆಯನ್ನು ಒಂಟಿ ಹುಡುಗನೊಬ್ಬನಿಗೆ ಬಾಡಿಗೆ ನೀಡಿದ್ದರು. ಆತನೇ ಶ್ರೀಕಾಂತ ಶಶಿಕಾಂತ್ ನಿಶಾಂತ್ ಬಾಪಟ್. ಸದ್ಯಕ್ಕೆ ಪ್ರೈವೇಟ್ ಪ್ರಸೊಂದರಲ್ಲಿ ಕಾಂಪೋಸಿಟರಾಗಿ ಕೆಲಸ ಮಾಡುತ್ತಿದ್ದ. ರೋಹಿಣಿಗೆ ಆತ ತನ್ನ ತಂದೆಯ ಬಳಿ ಹೆಚ್ಚು ಬೆರೆಯುವುದು ಇಷ್ಟವಿರಲಿಲ್ಲ. ಆತನಿಗೆ ಅದನ್ನು ಹೇಳಿದಳು ಸಹ. 


ಬಂದ ಒಂದೆರಡು ದಿನದಲ್ಲಿ ನಿಶಾಂತ್ ಪ್ರಾಣಕ್ಕೆ ಸಂಚಕಾರ ತರುವಂತಹ ಪ್ರಯತ್ನ ನಡೆದುಹೋಗಿತ್ತು. ಮನೆಯ ಮುಂದಿನ ಮರಗಳನ್ನು ಕಡಿದಿದ್ದು ಅಸಹಜವೆನ್ನಿಸದಿದ್ದರೂ.. ಆತಂಕದ ವಿಷಯವಾಗಿತ್ತು.


ಒಂದಾನೊಂದು ಕಾಲದಲ್ಲಿ ನಗರದಲ್ಲಿ ದೊಡ್ಡದೊಡ್ಡ ಸ್ಥಾನದಲ್ಲಿದ್ದ ವ್ಯಕ್ತಿಗಳೆಲ್ಲಾ ಅವಳ ತಂದೆಯಿಂದ ಉಪಕೃತರಾದವರೇ.. ಆದರೆ, ಇಂದು ಎಲ್ಲರೂ ಅಪರಿಚಿತರೇ. ಜೊತೆಗೆ ಆಕೆಯನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡುತ್ತಿದ್ದವರೇ.. ಬೇಕೆಂದೇ ಮಾಡುತ್ತಿದ್ದ ಅವಮಾನ ಬೇರೆ. ರೋಹಿಣಿಯದ್ದು ಬದುಕಿನ ಜೊತೆಗೆ ಮೌನದ ಹೋರಾಟ.


ಎಲ್ಲಾ ಸರಿಯಾಗಿದ್ದಿದ್ದರೆ ಅವಳ ಮದುವೆಯಾಗಿ ಎರಡು ವರ್ಷವಾಗಬೇಕಾಗಿತ್ತು. ಆದರೆ, ಅದಾಗಿರಲಿಲ್ಲ.

ಆಕೆ ಮದುವೆಯಾಗಿದ್ದಿದ್ದರೆ.. ಮಂತ್ರಿಯ ಸೊಸೆ, ಮಹೇಂದ್ರನಂತಹ ಇಂಡಸ್ಟ್ರಿಯಲಿಸ್ಟ್ ಮಡದಿಯಾಗಬೇಕಾಗಿತ್ತು. ರೋಹಿಣಿ ಈಗ ಮಹೇಂದ್ರ ಮಗುವಿನ ಹುಟ್ಟುಹಬ್ಬಕ್ಕೆ ಹೊರಟಿದ್ದಳು. ಮಹೇಂದ್ರನಂತೂ ಇಂದಿಗೂ ಅವಳ ಮೇಲೆ ಪ್ರೀತಿ ಇಟ್ಟುಕೊಂಡಿದ್ದ. ಆದರೆ, ಅವನ ತಂದೆ ಭೀಮರಾವ್ ಅವರಿಗೆ ಅವಳ ನೈತಿಕತೆ, ಸ್ವಾಭಿಮಾನವನ್ನು ಕಂಡರೆ ಅಂಜಿಕೆ. ಹಾಗಾಗಿ, ಅವಳನ್ನು ಹತ್ತಿರ ಬಿಟ್ಟುಕೊಳ್ಳುವುದೂ ಅವರಿಗೆ ದುಗುಡ ತರುತ್ತಿತ್ತು. ಮಹೇಂದ್ರನ ಪತ್ನಿ ರಜನಿ ಮಾವನಿಗೆ ತಕ್ಕ ಸೊಸೆ. ಮಹೇಂದ್ರನ ಒಳ್ಳೆಯತನಕ್ಕೆ ಬೆಲೆಕೊಟ್ಟು ಅಲ್ಲಿಗೆ ಬಂದಿದ್ದಳಷ್ಟೇ.. ಅಲ್ಲಿ ನೋಡಿದರೆ ಅಣ್ಣ ಜಯಚಂದ್ರ ಇದ್ದ. ಅತ್ತಿಗೆ ಹಾಗೂ ಮಗುವಿನ ಭೇಟಿಯಾಗಿರಲಿಲ್ಲ. ಬಂದವರು ಮಿನಿಸ್ಟರ್ ಮನೆಯಲ್ಲಿ ಇಳಿದುಕೊಂಡಿದ್ದರು. 


ಅವಳ ಆಹ್ವಾನದಂತೆ ಮರುದಿನ ಅಣ್ಣ-ಅತ್ತಿಗೆ ಮನೆಗೆ ಬಂದಿದ್ದರು. ಅದರ ಹಿಂದೆ ಮಹಾನ್ ಸ್ವಾರ್ಥವಿತ್ತು. ಪರಶುರಾಮರವರ ಇಂದಿನ ಸ್ಥಿತಿಗೆ ಇವರೇ ಕಾರಣವೆಂದರೆ ತಪ್ಪಾಗಲಾರದು. ಗಂಡ-ಹೆಂಡತಿ ಪ್ರತಿ ಕೋಣೆಯನ್ನೂ ತಪಾಸಣೆ ಮಾಡಿ, ಅದರಲ್ಲಿರುವ ಆಸನಗಳಿಂದ ಹಿಡಿದು ಪ್ರತಿಯೊಂದು ಸಾಮಾನುಗಳನ್ನು ಪಟ್ಟಿ ಮಾಡಿದ್ದರು. ಲಕ್ಷಾಂತರ ಬೆಲೆಬಾಳುವ ಅವೆಲ್ಲವನ್ನೂ ತಮ್ಮದಾಗಿಸಿಕೊಳ್ಳುವ ಹುನ್ನಾರ ಶುರುವಾಗಿತ್ತು. ತಂದೆಯ ಕುರಿತು ಅಂತಃಕರಣವೇ ಇಲ್ಲದವನಿಗೆ ತಂದೆಯ ಅಳಿದುಳಿದ ಆಸ್ತಿ ಬೇಕಿತ್ತು. ಅಪ್ಪನಿಗೆ ಹುಚ್ಚನ ಪಟ್ಟ ಕಟ್ಟಿ ಕೋರ್ಟಿಗೆ ಹೋಗಿದ್ದವನು ಈಗ ಮತ್ತೆ ತಕರಾರು ತೆಗೆಯುವುದರಲ್ಲಿದ್ದ. ತಂದೆಯ ಮಾನಸಿಕ ನೆಮ್ಮದಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದಳು. ಈ ಮನೆಯೊಂದನ್ನು ಬಿಟ್ಟು. ಈಗ ಅದಕ್ಕೂ ಸಂಚಕಾರ ಬಂದಿತ್ತು. 


ಅನ್ನಪೂರ್ಣಮ್ಮನವರನ್ನಂತೂ ಲೀಲಾ ನಡೆಸಿಕೊಂಡ ಪರಿ ಸರಿಯಿರಲಿಲ್ಲ. ಮನೆ ಮಾರಿ ರೋಹಿಣಿಯ ಪಾಲಿನ ಹಣ ಕೊಡಲು ನಿಂತಿದ್ದರು ಇಬ್ಬರು. ಆದರೆ, ಅದಕ್ಕೆ ಒಪ್ಪದೇ ಅಪ್ಪನ ನಂತರ ಒಂದು ಕ್ಷಣವೂ ಮನೆಯಲ್ಲಿರುವುದಿಲ್ಲ ಎನ್ನುವುದನ್ನು ಪತ್ರದಲ್ಲಿ ಬರೆದು ಸಹಿ ಹಾಕಿ ಕೊಟ್ಟಿದ್ದಳು. ಆಗ ಒಪ್ಪಿದ್ದರೂ ಮತ್ತಷ್ಟು ಬಂಡತನ ತೋರುತ್ತಿದ್ದರು ದಂಪತಿಗಳು. ಆದರೆ, ಆಗಲೇ ಆ ಪತ್ರ 'ಧವಳ ನಕ್ಷತ್ರ'ದ ಭವಿಷ್ಯ ಉಜ್ವಲವಾಗುವಂತೆ ರೂಪಿತವಾಗಿತ್ತು.


ರೋಹಿಣಿಯ ಮೇಲೆ ನಡೆದ ಕೊಲೆ ಪ್ರಯತ್ನ, ಬಾರಿಬಾರಿಗೂ ಅವಳನ್ನು ಮನೆಯಿಂದ ಖಾಲಿ ಮಾಡಿಸಲು ಮಾಡುತ್ತಿದ್ದ ಸಂಚುಗಳು, ಆಗಾಗ ಬಂದು ಮನಃಶಾಂತಿ ಕೆಡಿಸುತ್ತಿದ್ದ ಅಣ್ಣ-ಅತ್ತಿಗೆ, ಇವೆಲ್ಲವನ್ನೂ ಸಹಿಸಿಕೊಂಡರೂ.. ಭೀಮರಾವ್ ಅವರ ಜೀವಕ್ಕೂ ಸಂಚಕಾರ ತರುವ ಹುನ್ನಾರ ಮಾಡಿದಾಗ ಕುಸಿದೇ ಹೋಗಿದ್ದಳು ರೋಹಿಣಿ. ಆದರೆ, ಎಲ್ಲಾ ಸಮಯದಲ್ಲಿಯೂ ಕಾಕತಾಳೀಯ ಎಂಬಂತೆ ಅವೆಲ್ಲಾ ಸಂಕಷ್ಟಗಳಿಂದ ಪಾರು ಮಾಡಿದ್ದನು ನಿಶಾಂತ್. ಆದರೆ, ರೋಹಿಣಿಗೆ ಅದನ್ನು ಕಾಕತಾಳೀಯವೆಂದು ನಂಬಲು ಕಷ್ಟವಾಗುತ್ತಿತ್ತು. ಅಷ್ಟಕ್ಕೂ.. ನಿಶಾಂತ್ ಆಕೆಗೆ ಆಪತ್ಬಾಂಧವನಂತೆ, ಆಕೆಯ ನೆರಳಿನಂತೆ ನಿಂತಿದ್ದರ ಉದ್ದೇಶವೇನಿತ್ತು..?


ನಿಶಾಂತ್ ನ ಹಿನ್ನೆಲೆಯನ್ನು ಪರೀಕ್ಷಿಸುವವನಂತೆ ಮಹೇಂದ್ರ ಆಗಾಗ ವಿಚಾರಿಸುತ್ತಿದ್ದನಾದರೂ.. ನಿಶಾಂತ್ ನ ಹಿನ್ನೆಲೆ ಆತನಿಗೆ ತಿಳಿದ ಪರಿಸ್ಥಿತಿಯೇ ವಿಚಿತ್ರವಾಗಿತ್ತು, ವಿಭಿನ್ನವಾಗಿತ್ತು. 


ಜಯಚಂದ್ರ ಹಾಗೂ ಲೀಲಾ ಉದ್ದೇಶವೇ ತಲೆಕೆಳಗಾಗುವಂತೆ ನಡೆದ ಪ್ರಸಂಗವಾದರೂ ಏನು..? ಪರಶುರಾಮ್ ಅವರ ಸಾವು ಸಂಭವಿಸಿದ್ದು ಹೇಗೆ..? ಪರಶುರಾಮ್ ಅವರ ಸಾವಿನ ನಂತರ ರೋಹಿಣಿ ಹೊರಟದ್ದು ಎಲ್ಲಿಗೆ..? ಪರಶುರಾಮ್ ನಿಶ್ಚಿಂತೆಯಾಗಿರುವಂತೆ ಮಾಡಿದವರಾದರು ಯಾರು..? ಅನ್ನಪೂರ್ಣಮ್ಮನವರ ಮುಂದಿನ ಬದುಕು ಏನಾಯಿತು..? ಕೀರ್ತಿ ಏನಾದ..?


ಯಾವುದನ್ನು ಅಳಿಸಿ ಹಾಕಬೇಕೆಂದಿದ್ದರೋ ಆ ಅಕ್ಷರಗಳು ಸ್ಪಷ್ಟವಾಗಿದ್ದವು. ಅದೇ 'ಧವಳ ನಕ್ಷತ್ರ'. 


ಮಹೇಂದ್ರನ ವ್ಯಕ್ತಿತ್ವ ಒಮ್ಮೆ ಒಳ್ಳೆಯವನಂತೆ ಭಾಸವಾದರೆ ಮತ್ತೊಮ್ಮೆ ಗೊಂದಲ ಮೂಡಿಸುವಂತಿದೆ. ರೋಹಿಣಿ ಆತನಿಗೆ ಜೋಡಿಯಾಗದೇ ಇದ್ದಿದ್ದೇ ಒಳ್ಳೆಯದಾಯಿತು ಎಂಬ ಭಾವನೆಯಂತೂ ಮೂಡುತ್ತದೆ. 


ಒಂದೆಡೆ ಆಸ್ತಿಗಾಗಿ, ಹಣಕ್ಕಾಗಿ ಏನು ಬೇಕಾದರೂ ಮಾಡುವಂತಹ ಜನರು. ಸ್ವಂತದವರೇ... ಉಪಕೃತರಾದವರೇ.. ಹತ್ತಿದ ಏಣಿಯನ್ನು ಒದೆಯುವಂತಹ ಪ್ರಸಂಗಗಳು. ಇನ್ನೊಂದೆಡೆ ತಂದೆಯ ಶಾಂತ ಮನಸ್ಥಿತಿ, ಸಮಚಿತ್ತತೆಗೆ ಏನು ಬೇಕಾದರೂ ಮಾಡುವೆನೆನ್ನುವ ಮಗಳು. ಬದುಕಿನ ಜೊತೆಜೊತೆಗೆ ಸಾಗುತ್ತಾ.. ಎಲ್ಲದರ ಅರಿವಿದ್ದರೂ ಅದನ್ನು ತೋರಿಸಿಕೊಳ್ಳದಂತೆ ತಂದೆಯ ಮನಸ್ಸಿಗೆ ಘಾಸಿಯಾಗದಂತೆ ಬದುಕಿದ ಮಗಳು. 


ಸಂಬಂಧಗಳ ಎರಡು ಮುಖಗಳ ಚಿತ್ರಣ ಇಲ್ಲಿದೆ. ಅಪಕಾರ ಮಾಡುವವರು ಅಪರಿಚಿತರಲ್ಲ. ಬದಲಿಗೆ ಹತ್ತಿರದವರು, ಸ್ವಂತದವರು ಹಾಗೂ ತೀರಾ ಜೊತೆಗಿದ್ದವರೇ.. ಆದರೆ, ಸಹಾಯಕ್ಕೆ ನಿಲ್ಲುವವರು ಸಹ ಇದೇ ಗುಂಪಿಗೆ ಸೇರುವವರು. ಅಂತಹವರ ಸಂಖ್ಯೆ ವಿರಳ. ಇಲ್ಲಿ ಅಂತಹ ಆಪತ್ಬಾಂಧವನಿದ್ದಾನೆ. ಧವಳ ನಕ್ಷತ್ರವನ್ನು ಮಿನುಗುವಂತೆ ಮಾಡುವ ಸುಂದರ ಕಾದಂಬರಿಯ ಚಂದದ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ