ಪುಸ್ತಕದ ಶೀರ್ಷಿಕೆ : ಶ್ರದ್ಧಾಂಜಲಿ
ಲೇಖಕರು : ಚಿತ್ರಲೇಖ
ಪ್ರಕಾಶಕರು : ಪ್ರಕಾಶ ಸಾಹಿತ್ಯ
ಪ್ರಥಮ ಮುದ್ರಣ : 1992
ಪುಟಗಳು : 152
ಈ ಕಾದಂಬರಿ ಮಹಿಳಾ ಸಂಗಮ ಮಾಸಪತ್ರಿಕೆಯಲ್ಲಿ ಕಿರು ಕಾದಂಬರಿಯಾಗಿ ಪ್ರಕಟವಾಗಿದ್ದು.. ನಂತರ ಕಾದಂಬರಿ ರೂಪದಲ್ಲಿ ಓದುಗರ ಕೈಸೇರಿತು. ಈ ಕಾದಂಬರಿ ಮರುಮುದ್ರಣ ಕಂಡು ಮತ್ತಷ್ಟು ಸಾಹಿತ್ಯಪ್ರಿಯರ ಕೈ ಸೇರಲೆಂದು ಆಶಿಸುವೆ.
ಶ್ರದ್ಧಾಂಜಲಿ ಎಂಬ ಶೀರ್ಷಿಕೆ ಈ ಕಾದಂಬರಿಗೆ ಎರಡು ರೀತಿಯಲ್ಲಿ ಹೊಂದುತ್ತದೆ. ಅದನ್ನು ಈ ಅವಲೋಕನದ ಕೊನೆಯಲ್ಲಿ ಕಾಣಬಹುದು.
ಶ್ರದ್ಧಾ ಎಂಬ ಮುಗ್ಧ ಹುಡುಗಿಯೇ ಈ ಕಾದಂಬರಿಯ ಕೇಂದ್ರಬಿಂದು. ಸುಖಕರವಾಗಿ, ಸಂತೋಷವಾಗಿ ಸಾಗುತ್ತಿದ್ದ ಆಕೆಯ ಬದುಕಲ್ಲಿ ಸತ್ಯದ ಬಿರುಗಾಳಿಯನ್ನು ಹೊತ್ತು ತರುವವನು ಅಜಿತ್. ಸತ್ಯ ಎಂದಿಗೂ ಕಹಿಯೇ ಆದರೂ.. ಅಷ್ಟು ಕಟು ಸತ್ಯವನ್ನು ಅರಗಿಸಿಕೊಳ್ಳುವುದು ಮಗಳಾದವಳಿಗೆ ಅಷ್ಟು ಸುಲಭವಲ್ಲ. ಮೊದಲಿಗೆ ಆ ಸತ್ಯವನ್ನು ಒಪ್ಪಿಕೊಳ್ಳಲು ಶ್ರದ್ಧಾ ಸಿದ್ದಳಿರಲಿಲ್ಲ. ಅಷ್ಟು ವರ್ಷ ತಾನು ನಂಬಿಕೊಂಡು ಬಂದಿದ್ದ ಜಗನ್ನಾಥ್ ಆಕೆಯ ತಂದೆಯಲ್ಲ.. ತಾನೇ ಆಕೆಯ ತಂದೆಯೆಂದು ಅಜಿತ್ ಹೇಳಿದ್ದು.
ಅಡ್ವೋಕೇಟ್ ಆಗಿದ್ದ ಜಗನ್ನಾಥ್ ಹಾಗೂ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿದ್ದ ಪ್ರಿಯಾಂಕಳ ಏಕೈಕ ಮಗಳೆಂದು ನಂಬಿಕೊಂಡಿದ್ದ ಶ್ರದ್ಧಾ ಏಕಾಏಕಿ ಆಗಂತುಕನ ಮಾತಲ್ಲಿ ನಂಬಿಕೆ ಇಡಲಾದರೂ ಸಾಧ್ಯವಿತ್ತೇ..? 'ಶ್ರದ್ಧಾ ನಿವಾಸ್ ' ಎಂಬ ಭವ್ಯ ಬಂಗಲೆಯಲ್ಲಿ ವಾಸಿಸುತ್ತಿದ್ದವಳಿಗೆ ತಂದೆ - ತಾಯಿಯ ತೀರಾ ಅತ್ಯಾಪ್ತ ಒಡನಾಟ ಇಲ್ಲದಿದ್ದರೂ.. ಅವರ ರಕ್ಷೆಯಂತೂ ಸದಾ ಕಾಲವಿತ್ತು. ಅವಳ ಮೇಲ್ವಿಚಾರಣೆಗೆ ಪೂವಮ್ಮ ಇದ್ದಳು. ಅವಳ ಒಡನಾಟಕ್ಕೆ ಮುದ್ದಿನ ನಾಯಿ ಫ್ರಾಂಕಿ ಇದ್ದೇ ಇತ್ತು. ಅದುವರೆಗೂ ಅನುಮಾನಿಸುವಂತಹದ್ದೇನೂ ಶ್ರದ್ಧಾ ದೃಷ್ಟಿಗೆ ಬಿದ್ದಿರಲಿಲ್ಲ.
ಆದರೆ, ಅಜಿತ್ ಹೇಳಿದ ಮಾತುಗಳಲ್ಲಿ ಸುಳ್ಳಿರಲಿಲ್ಲ. ಆತ ಪ್ರಿಯಾಂಕಳ ಮೊದಲ ಪತಿ. ಮುಂಬಯಿಯಲ್ಲಿ ಆತ ಬ್ಯಾಂಕ್ ನಲ್ಲಿ ಫ್ಯೂನ್ ಆಗಿದ್ದವನು. ಬಡತನದ ಬದುಕು ಇದ್ದರೂ.. ಕೆಲಸದಲ್ಲಿ ಶ್ರದ್ಧೆ, ವಿನಮ್ರತೆ ಇತ್ತು. ಓದುವ ಆಸೆ ಇದ್ದರೂ ಪರಿಸ್ಥಿತಿಯ ಕಾರಣಕ್ಕೆ ಅದು ಸಾಧ್ಯವಾಗಿರಲಿಲ್ಲ. ಆದರೆ, ಕಲಾದೇವಿ ಆತನ ಕೈಹಿಡಿದಿದ್ದಳು. ಆತ ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲಿ ಆತನಿಗಿಂತ ಉನ್ನತ ಹುದ್ದೆಗೆ ಸೇರಿದ್ದಳು ಪ್ರಿಯಾಂಕ. ಸೌಂದರ್ಯದಲ್ಲಿ ಅಪ್ಸರೆಯಂತಿದ್ದವಳು ಅಜಿತ್ ಕಲಾ ಬದುಕಲ್ಲಿ ರೂಪದರ್ಶಿಯಾದಳು. ನಂತರ, ಆತನ ಬದುಕಲ್ಲಿ ಸಂಗಾತಿಯಾಗಿಯೂ ಕಾಲಿಟ್ಟಳು. ಇದಕ್ಕೆ ಆಕೆಯ ತಾಯಿ ರುಕ್ಮಿಣಿಬಾಯಿಯ ವಿರೋಧವಿತ್ತು. ಅಲ್ಲದೇ, ಆಡಿಕೊಳ್ಳುವವರು ಈ ಅಸಮ ಜೋಡಿಯನ್ನು ಕಂಡು ಕುಹಕವಾಡಿದರು. ಅವರೆಲ್ಲರ ಬಾಯಿ ಮುಚ್ಚಿಸುವಂತೆ ಬದುಕಲು ಶುರುವಿಟ್ಟವರ ಬದುಕಲ್ಲಿ ಶ್ರದ್ದಾಳ ಪ್ರವೇಶವಾಯಿತು.
ನಂತರ, ಪ್ರಿಯಾಂಕ ವರಸೆ ಬದಲಾಗುತ್ತಾ ಬಂದಿತು. ಆಗ ಕಾಣದಿದ್ದ ಅಜಿತ್ ಬಡತನ ಈಗ ಕಣ್ಣು ತೆರೆಸತೊಡಗಿತು. ಮನೆಯಲ್ಲಿ ಜಗಳಗಳು ಹೆಚ್ಚಾಗಿ ಅದು ವಿಚ್ಛೇದನದವರೆಗೂ ಹೋಗಿ ನಿಂತಿತು. ಆಗ ಪ್ರಿಯಾಂಕ ಸಂಪರ್ಕಿಸಿದ್ದೇ ಅಡ್ವೋಕೇಟ್ ಜಗನ್ನಾಥ್ ನನ್ನು. ಜಗನ್ನಾಥ್ ನಿಗೆ ಅದಾಗಲೇ ಶಾಂತಮ್ಮನ ಜೊತೆಗೆ ವಿವಾಹವಾಗಿ ರಮೇಶ್ - ಉಮೇಶ್ ಎಂಬ ಅವಳಿ ಗಂಡು ಮಕ್ಕಳಿದ್ದರು. ಆದರೂ, ಪ್ರಿಯಾಂಕ ಜೊತೆಗೆ ಆತನ ಸಂಬಂಧ ಬೆಳೆಯತೊಡಗಿತು. ಇದು ಮುಂದುವರಿದು.. ಶ್ರದ್ದಾಳನ್ನು ತನ್ನೊಡನೆ ಕರೆದುಕೊಂಡ ಪ್ರಿಯಾಂಕ ಜಗನ್ನಾಥ್ ಜೊತೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದಳು. ರಮೇಶ್ - ಉಮೇಶ್ ರನ್ನು ಬೋರ್ಡಿಂಗ್ ಸ್ಕೂಲ್ ಗೆ ಸೇರಿಸಿದ ಜಗನ್ನಾಥ್. ಅನಾಥಳಾಗಿದ್ದ ಶಾಂತಮ್ಮ ಮಕ್ಕಳ ಮೇಲಿನ ಆಸೆಗೆ, ಅವರ ಭವಿಷ್ಯಕ್ಕಾಗಿ ಜಗನ್ನಾಥ್ ಹಾಗೂ ಪ್ರಿಯಾಂಕ ಮನೆಯಲ್ಲಿ ಪೂವಮ್ಮ ಎಂಬ ಹೆಸರಿನಲ್ಲಿ ಮನೆಕೆಲಸದವಳಾಗಿ ಬದುಕು ಸಾಗಿಸುತ್ತಿದ್ದಳು. ಎಸ್ಟೇಟ್ ಬಂಗಲೆಯಲ್ಲಿ ರಜೆಗೆಂದು ಬರುತ್ತಿದ್ದ ಗಂಡುಮಕ್ಕಳನ್ನು ನೋಡುತ್ತಿದ್ದುದಷ್ಟೇ ಪೂವಮ್ಮ / ಶಾಂತಮ್ಮನ ಪಾಲಿನ ನೆಮ್ಮದಿ. ಹಾಗೆಂದು, ಎಂದಿಗೂ ಶ್ರದ್ಧಾಳ ಕಾಳಜಿಯಲ್ಲಿ ಕಡಿಮೆ ಮಾಡಿರಲಿಲ್ಲ ಪೂವಮ್ಮ. ಇಂತಹಾ ಅಸಹಾಯಕ ಸ್ಥಿತಿಯಲ್ಲಿರುವ ಸಹೃದಯಿ ಹೆಣ್ಣುಮಗಳ ಪರಿಸ್ಥಿತಿ ಮನತಟ್ಟದಿರದು.
ಅಜಿತ್ ನಿಂದ ಎಲ್ಲಾ ಸತ್ಯ ತಿಳಿದ ಶ್ರದ್ಧಾ ಸೂಕ್ಷ್ಮವಾಗಿ ಗಮನಿಸುತ್ತಾ.. ಪೂವಮ್ಮಳನ್ನು ಹಿಂಬಾಲಿಸಿದಾಗ ಆಕೆಗೆ ಸತ್ಯದ ಅರಿವಾಗಿತ್ತು. ಅಜಿತ್ ನೊಂದಿಗೆ ಶ್ರದ್ಧಾಳ ಒಡನಾಟ ಹೆಚ್ಚಾಗಿ, ಮತ್ತೆ ತಂದೆ - ಮಗಳ ಬಾಂಧವ್ಯ ಬೆಸೆಯಿತು. ಈಗ ಶ್ರದ್ಧಾ ಕೆಲವೊಮ್ಮೆ ಶಾಲೆ ತಪ್ಪಿಸಿ ತಂದೆಯ ಒಡನಾಟದಲ್ಲಿ ಖುಷಿ ಪಡತೊಡಗಿದಳು. ಈಗ ಇಲ್ಲಿಂದ ಮತ್ತೆ ಮುಂಬಯಿಗೆ ಹೋಗಬೇಕೆಂದು ತಂದೆ ಮಗಳು ತೀರ್ಮಾನಿಸಿ ಅದಕ್ಕೆಂದು ಎಲ್ಲಾ ತಯಾರಿ ನಡೆಸಿದರು. ಪ್ರಿಯಾಂಕ ಶ್ರದ್ಧಾಳನ್ನು ಬೆಂಗಳೂರಿಗೆ ಕರೆತರುವಾಗ ಆಕೆಗೆ ಸತ್ಯದ ಅರಿವಿರಲಿಲ್ಲ. ಆದರೆ, ಈಗ ಕಾಲಚಕ್ರ ಬದಲಾಗಿತ್ತು. ಅಜಿತ್ ಮತ್ತೆ ಶ್ರದ್ಧಾಳನ್ನು ಮುಂಬಯಿಗೆ ಕರೆದುಕೊಂಡು ಹೋಗುವಾಗ ಆಕೆಗೆ ಸಂಪೂರ್ಣ ಸತ್ಯದ ಅರಿವಿತ್ತು.
ಆದರೆ, ಆದಷ್ಟು ಸುಲಭವಾಗಿರಲಿಲ್ಲ. ಜಗನ್ನಾಥ್ ಕಣ್ಣಿಗೆ ಮಣ್ಣೆರಚಿ ಪಾರಾಗುವುದು ಅಸಾಧ್ಯವಾಗಿತ್ತು. ಪ್ರಿಯಾಂಕಳಿಗೂ ವಿಷಯ ತಿಳಿದು ಶ್ರದ್ಧಾ ಪಾಲಿಗೆ ಮನೆ ಗೃಹಬಂಧನವಾಯಿತು. ಅದಯುರಿಂದಲೂ ತಪ್ಪಿಸಿಕೊಂಡು ಹೋಗುವ ಶ್ರದ್ಧಾ ಪ್ರಯತ್ನಕ್ಕೆ ಪೂವಮ್ಮನ ಸಹಕಾರ ದೊರೆಯಿತು. ಆದರೆ, ಆ ಪ್ರಯತ್ನ ಸಂಪೂರ್ಣ ಫಲಕಾರಿಯಾಗಲಿಲ್ಲ. ಇನ್ನೇನು ಅಜಿತ್ ಹಾಗೂ ಶ್ರದ್ಧಾ ರೈಲು ಹತ್ತುವ ಸಮಯಕ್ಕೆ ಸರಿಯಾಗಿ ಪೊಲೀಸರೊಂದಿಗೆ ಬಂದ ಜಗನ್ನಾಥ್ ಅಜಿತ್ ನನ್ನು ಬಂಧನಕ್ಕೊಳಪಡಿಸುವಲ್ಲಿ ಸಫಲನಾಗುತ್ತಾನೆ. ಶ್ರದ್ಧಾ ತಾನು ಸ್ವ - ಇಚ್ಛೆಯಿಂದ ತನ್ನ ತಂದೆಯೊಂದಿಗೆ ಹೊರಟಿದ್ದೇನೆಂದರೂ.. ಆಕೆ ಇನ್ನೂ ಮೇಜರ್ ಆಗಿರದ ಕಾರಣ ಹಾಗೂ ಸಮಾಜ ಜಗನ್ನಾಥ್ ನನ್ನೇ ಆಕೆಯ ತಂದೆಯೆಂದು ಗುರುತಿಸುವ ಕಾರಣ ಆ ಸಾಕ್ಷಿ ನಿಲ್ಲುವುದಿಲ್ಲ.
ಸುಳ್ಳು ಕೇಸಿನಲ್ಲಿ ಅಜಿತ್ ನನ್ನು ಸಿಲುಕಿಸಲಾಗುತ್ತದೆ. ಆತ ನಾಲ್ಕು ವರ್ಷ ಜೈಲು ಶಿಕ್ಷೆ ಮುಗಿಸಿ ವಾಪಾಸ್ ಶ್ರದ್ಧಾಳನ್ನು ನೋಡಲು ಬರುವ ವೇಳೆಗೆ ಪರಿಸ್ಥಿತಿ ಬಹಳಷ್ಟು ಬದಲಾಗಿರುತ್ತದೆ. ನಾಲ್ಕು ವರ್ಷ ಎನ್ನುವುದೇನೂ ಕಡಿಮೆ ಸಮಯವಲ್ಲವಲ್ಲ.
ಶ್ರದ್ಧಾ ಅದಾಗಲೇ ಇಹಲೋಕ ಸೇರಿರುತ್ತಾಳೆ. ಶ್ರದ್ಧಾ ಸಾವಿಗೆ ಕಾರಣವೇನು..? ಶ್ರದ್ಧಾ ಸತ್ತ ನಂತರ ಫ್ರಾಂಕಿ ಸಾಯುವುದು ಮನುಷ್ಯ ಮನುಷ್ಯರಿಗಿಂತ, ನಿಯತ್ತಿನ ಪ್ರಾಣಿಯ ಪ್ರೀತಿಯನ್ನು ತೋರುತ್ತದೆ. ಶ್ರದ್ಧಾ ತಾನು ಮುಂಬಯಿಗೆ ಹೋಗುವಾಗ ಫ್ರಾಂಕಿಯನ್ನೂ ತಮ್ಮೊಡನೆ ಕರೆದುಕೊಂಡು ಹೋಗುವ ಇಚ್ಛೆ ವ್ಯಕ್ತಪಡಿಸುವುದು ಆಕೆಯೂ ಫ್ರಾಂಕಿಗಾಗಿ ತೋರುವ ಪ್ರೇಮವನ್ನು ತೋರುತ್ತದೆ.
ಪ್ರಿಯಾಂಕ ಈಗ ಶ್ರದ್ಧಾ ನಿವಾಸ್ ನಲ್ಲಿ ಒಂಟಿಯಾಗಿದ್ದಾಳೆ. ಒಂದು ಕಾಲದಲ್ಲಿ ಜಗನ್ನಾಥ್ ಗಾಗಿ ಬೇಕಾದ್ದೆಲ್ಲವನ್ನೂ ಮಾಡಿದವಳು ಈಗ ಒಬ್ಬಂಟಿಯಾಗಿದ್ದೇಕೆ..? ಅಜಿತ್ ಮನಸ್ಸಲ್ಲಿ ಪ್ರಿಯಾಂಕಳ ಮೇಲೆ ಮೂಡಿದ ಭಾವನೆಗಳೇನು..? ಸಮಾಜದ ದೃಷ್ಟಿಯಲ್ಲಿ ಪ್ರಿಯಾಂಕ ಚಿತ್ರಿತವಾಗಿದ್ದೇಗೆ..? ಪ್ರಿಯಾಂಕಳ ಅಂತ್ಯ ಹೇಗಾಯಿತು..?
ಅಡ್ವೋಕೇಟ್ ಜಗನ್ನಾಥ್ ಈಗ ಜಸ್ಟೀಸ್ ಜಗನ್ನಾಥ್ ಆಗಿದ್ದನು. ಪೂವಮ್ಮ ಶಾಂತಮ್ಮಳಾಗಿ ಜಗನ್ನಾಥ್ ಧರ್ಮಪತ್ನಿಯಾಗಿದ್ದಳು. ಇದಕ್ಕೆ ಆಕೆಯ ಮಕ್ಕಳ ಪ್ರತಿಕ್ರಿಯೆ ಏನಿತ್ತು..?
ಶ್ರದ್ಧಾಳನ್ನು ಕಳೆದುಕೊಂಡಿದ್ದ ಅಜಿತ್ ಬದುಕಲ್ಲಿ ಎಲ್ಲವನ್ನೂ ಕಳೆದುಕೊಂಡ ಎನ್ನುವಷ್ಟರಲ್ಲಿ ಅಂಜಲಿ ಎಂಬ ಹುಡುಗಿ ಮಗಳ ರೂಪದಲ್ಲಿ ಆತನ ಬದುಕಲ್ಲಿ ಬಂದದ್ದರ ಹಿಂದೆ ಅಂಜಲಿಯ ದುರಂತಗಾಥೆಯೂ ಸೇರಿತ್ತು. ಅದಕ್ಕೆ ಕಾರಣವಾಗಿದ್ದು ಮತ್ತಾರೂ ಅಲ್ಲ.. ಜಸ್ಟೀಸ್ ಜಗನ್ನಾಥ್. ಅಂಜಲಿ ಹಾಗೂ ಅಜಿತ್ ಭೇಟಿಯಾಗಿದ್ದೇಗೆ..? ಅಂಜಲಿಯ ಬದುಕಿನ ಕತೆಯೇನು..? ಅಜಿತ್ ಆಕೆಯ ಬದುಕನ್ನು ಸರಿಪಡಿಸುವುದರಲ್ಲಿ ಯಾವ ಪಾತ್ರ ವಹಿಸಿದ..?
ಶ್ರದ್ಧಾಳ ಸಾವಿಗೆ ಅಜಿತ್ ಶ್ರದ್ಧಾಂಜಲಿ ಅರ್ಪಿಸಿದ್ದೇಗೆ..? ಶ್ರದ್ಧಾ ಹಾಗೂ ಅಂಜಲಿ ಎನ್ನುವ ಹೆಣ್ಣುಮಕ್ಕಳ ಬದುಕು ಬೆಸೆದ ಒಂದು ಬಂಧದ ಪರಿಯೂ ಈ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಎಲ್ಲವನ್ನೂ ತಿಳಿಯಲು ಓದಿ ನೋಡಿ ಚಿತ್ರಲೇಖ ಮೇಡಂ ಅವರ ಶ್ರದ್ಧಾಂಜಲಿ ಕಾದಂಬರಿಯನ್ನು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ