ಭಾನುವಾರ, ಏಪ್ರಿಲ್ 26, 2026

ಹೂಮಾಲೆಯಾದ ಆಂಡಾಳು (ಪುಸ್ತಕ ಯಾನ - 417)


ಪುಸ್ತಕದ ಶೀರ್ಷಿಕೆ : ಹೂಮಾಲೆಯಾದ ಆಂಡಾಳು

ಲೇಖಕರು : ಆಶಾ ರಘು

ಪ್ರಕಾಶಕರು : ಉಪಾಸನಾ ಬುಕ್ಸ್

ಪ್ರಥಮ ಮುದ್ರಣ : 2025

ಪುಟಗಳು : 64

ಬೆಲೆ : 120 ರೂ.


ಏಳನೇ ಶತಮಾನದಲ್ಲಿ ಜೀವಿಸಿದ್ದ ಆಂಡಾಳು 12 ಜನ ಆಳ್ವಾರುಗಳಲ್ಲಿ ಒಬ್ಬಳು. ಈಕೆಯ ಮತ್ತೊಂದು ಹೆಸರು ಗೋದಾದೇವಿ. ಕಟಕ ಮಾಸದ ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಸಾಕ್ಷಾತ್ ಭೂದೇವಿ ಎಂದು ಪರಿಭಾವಿಸಲಾಗಿರುವ ಈಕೆಯ ಜನ್ಮದಿನೋತ್ಸವವನ್ನು ಆಚರಿಸಲಾಗುತ್ತದೆ. 


ಆಂಡಾಳು 'ತಿರುಪ್ಪಾವೈ' ಎಂಬ ಮೂವತ್ತು ಬಿಡಿ ಪದ್ಯಗಳ ಗೀತೆ ಮತ್ತು 'ನಾಚ್ಚಿಯಾರ್ ತಿರುಮೊಳಿ' ಎಂಬ ನೂರಾ ನಲವತ್ತೇಳು ಬಿಡಿ ಪದ್ಯಗಳನ್ನು ರಚಿಸಿದ್ದಾರೆ ಎನ್ನಲಾಗಿದೆ. ಇವೆಲ್ಲವೂ ಭಕ್ತಿ ಸಾಹಿತ್ಯದಲ್ಲಿ ಪ್ರಖ್ಯಾತವಾಗಿವೆ. 'ತಿರು' ಎಂದರೆ ಮೋಕ್ಷ. 'ಪಾವೈ' ಎಂದರೆ ವ್ರತ. ಮೋಕ್ಷ ನೀಡುವ ವ್ರತಾಚರಣೆಯಲ್ಲಿ ಆಂಡಾಳು ರಚಿಸಿದ ಗೀತೆಗಳು ಇವು. ನಂದಗೋಕುಲದಲ್ಲಿದ್ದ ಗೋಪಿಕೆಯರು ಮಾರ್ಗಶಿರ ಮಾಸದಲ್ಲಿ ಕಾತ್ಯಾಯಿನಿ ವ್ರತವನ್ನು ಮಾಡಿ ಶ್ರೀ ಕೃಷ್ಣನನ್ನು ಪತಿಯಾಗಿ ಪಡೆದಿದ್ದನ್ನು ಕೇಳಿ ಸ್ಪೂರ್ತಿಗೊಂಡ ಆಂಡಾಳು ಭಗವಂತನೇ ತನ್ನ ಪತಿಯನ್ನಾಗಿಸಿಕೊಳ್ಳಲು ಮಾರ್ಗಶಿರ ಮಾಸದಲ್ಲಿ ವ್ರತವನ್ನು ಆಚರಿಸುತ್ತಾಳೆ. ಆಗ ರಚಿಸಿದ ಗೀತೆಗಳು ಇವು. ರಾಮಾನುಜಾಚಾರ್ಯರು ತಿರುಪ್ಪಾವೈಯನ್ನು ಆಗಾಗ ಹೇಳುತ್ತಾ ಕಣ್ಣೀರಿಡುತ್ತಿದ್ದರಂತೆ. 


ನನಗೆ ಆಂಡಾಳುವಿನ ಕಥೆಯನ್ನು ಮೊದಲು ಸಂಕ್ಷಿಪ್ತವಾಗಿ ಕೇಳಿದಾಗ ಮೀರಾಬಾಯಿಯ ನೆನಪಾಯಿತು. ಅಂತಹ ಮತ್ತೊಬ್ಬಳು ಭಕ್ತೆಯ ಈ ಪೌರಾಣಿಕ ಕಥೆಯಲ್ಲಿ ಭಗವಂತನ ಸಾನಿಧ್ಯ ಪಡೆದ ಭಕ್ತೆ ಹಾಗೂ ಆಕೆಯ ಉನ್ನತ ಭಕ್ತಿಯ ಕಥೆ ಇದೆ.


ಈ ಪುಸ್ತಕದಲ್ಲಿ ಆಂಡಾಳುವಿನ ಕಥೆ ನೀಳ್ಗತೆಯಾಗಿ ಪ್ರಕಟವಾಗಿದೆ. ಇದರ ಜೊತೆಗೆ ತಿರುಪ್ಪಾವೈಗಳನ್ನು ಕಥೆಯಲ್ಲಿ  ಕನ್ನಡದಲ್ಲಿ ಅರ್ಥವಾಗುವಂತೆ ಆಂಡಾಳುವಿನ ಮಾತುಗಳಲ್ಲಿಯೇ ಅದರ ಸಾರವನ್ನು ಬಿಡಿಸಿಟ್ಟು, ಆಸಕ್ತ ಓದುಗರಿಗೆ ತೆರೆದಿಟ್ಟಿದ್ದಾರೆ ಲೇಖಕಿ ಆಶಾ ರಘು ಆವರು. ತಮಿಳು ಭಾಷೆ ಅರಿತವರು.. ಆದರೆ, ತಮಿಳು ಲಿಪಿಯನ್ನು ಅರಿಯದವರು ಈ ತಿರುಪ್ಪಾವೈಗಳನ್ನು ಓದಬಹುದು. 


ಆಂಡಾಳುವಿನ ಸಾಕು ತಂದೆ ಪೆರಿಯಾಳ್ವರ್ ಹಾಗೂ ಸಾಕು ತಾಯಿ ವ್ರಜೈ. ಪುತ್ತೂರು ಗ್ರಾಮದಿಂದ ಸಿರಿವಿಲ್ಲಿಪುತ್ತೂರಿಗೆ ಬಂದು ನೆಲೆಸಿದವರಲ್ಲಿ ಇವರ ಪೂರ್ವಿಕರೂ ಇದ್ದರು. ಇವರ ಮೊದಲ ಹೆಸರು ವಿಷ್ಣುಚಿತ್ತ. ವೇದಾಧ್ಯಯನಕ್ಕಿಂತಲೂ ಆ ಸಮಯವನ್ನು ಮನೆಯ ಸುತ್ತಮುತ್ತಲು ಹೂಗಿಡಗಳನ್ನು, ತುಳಸಿಪತ್ರೆಯ ಗಿಡಗಳನ್ನು ಬೆಳೆಸಿ ಅವುಗಳಿಂದ ನಿತ್ಯವೂ ಹೂಮಾಲೆ ಮಾಡಿ ಭಗವಂತನಿಗೆ ಅರ್ಪಿಸುವಾಗ ಅವರಿಗೆ ಹೆಚ್ಚು ಸಾರ್ಥಕತೆ ಸಿಗುತ್ತಿತ್ತು. ತಂದೆಗೆ ಮಗ ವೇದ ಪಾಠ ಕಲಿಯಲು ಇಲ್ಲವೆಂಬ ಕೊರತೆ ಇದ್ದರೂ ಆತನ ಭಕ್ತಿಯ ಕುರಿತು ಹೆಚ್ಚೇ ಹೆಮ್ಮೆ ಇತ್ತು. 


ಇಂತಹ ಮಹಾನ್ ಭಕ್ತನಿಗೆ ಪತ್ನಿಯಾಗಿ ಬಂದ ವ್ರಜೈಗೆ ಯೌವ್ವನದಲ್ಲಿ ಚಿನ್ನದ ವ್ಯಾಮೋಹವಿತ್ತು. ಪತಿಯ ಭಕ್ತಿಯಿಂದ ಸಿಕ್ಕ ಸಂಪತ್ತು ಆಕೆಯ ಅತಿಯಾಸೆಯನ್ನು, ವ್ಯಾಮೋಹವನ್ನು ತೊಲಗಿಸಿ ಪತಿಗೆ ತಕ್ಕ ಪತ್ನಿಯನ್ನಾಗಿಸಿದ ಪ್ರಸಂಗ ನೀವೇ ಓದಿ ನೋಡಿ.


ದೊರೆ ವಲ್ಲಭದೇವನಿಂದ 'ಭಟ್ಟರ್ ಪಿರಾನ್' (ಪಂಡಿತೋತ್ತಮ) ಎಂಬ ಬಿರುದು ಸಿಕ್ಕಿದ್ದು, ಮೆರವಣಿಗೆಯ ಸಮಯದಲ್ಲಿ ವಟಪತ್ರಶಾಹಿಯ ದೇವಾಲಯದಲ್ಲಿ ಆಲದಲೆಯ ಮೇಲೆ ಮಲಗಿದ ಶಿಶು ಕಂಡಾಗ ಆದ ಅನುಭವಗಳು ಹಾಗೂ ಪೆರಿಯಾಳ್ವರ್ ಆದ ಕಥೆ ಪೆರಿಯಾರ್ ಮನದ ಮಾತಿನಲ್ಲಿ ಸಾಗುತ್ತದೆ.


ಹೂಮಾಲೆಯ ಸೇವೆ ತಡೆಯಿಲ್ಲದೆ ಸಾಗುತ್ತಿದ್ದಾಗ ಭಗವಂತನ ಹೂಮಾಲೆಯಲ್ಲಿ ಕೂದಲು ಕಂಡಾಗಿನಿಂದ ಅವರ ಚಿತ್ತ ಕದಡಿತ್ತು. ಅದಕ್ಕೆ ಕಾರಣರು ಯಾರು.. ?


ಇತ್ತ ಗೋದೆ ಈ ದಂಪತಿಗಳಿಗೆ ಸಿಕ್ಕ ದಿನದಿಂದ ರಂಗನಾಥನಲ್ಲಿ ಹೃದಯ ನೆಟ್ಟು ಆತನನ್ನೇ ವಿವಾಹವಾಗಲು ಸಪ್ತಪದಿ ತುಳಿದಂತೆ ಕನಸಾಗುವ ದಿನಗಳು, ಭಗವಂತನಿಗೆ ಅರ್ಪಿಸುವ ಹೂಮಾಲೆಯನ್ನು ತಾನು ತೊಟ್ಟರೆ ತಪ್ಪೇನು ಎಂಬ ಭಾವವಿದ್ದರೂ.. ಆಕೆಗೆ ಇದು ತನ್ನ ತಂದೆಗೆ ತಿಳಿದರೆ ಎಂಬ ಭಾವವೂ ಇತ್ತು. ಆ ದಿನ ಬಂದಾಗ ಏನಾಯಿತು ..?


ಮಾರ್ಗಶಿರ ಮಾಸದಲ್ಲಿ ವ್ರತಭಂಗ ಮಾಡಿಕೊಳ್ಳದೆ 30 ದಿನಗಳ ಕಾಲ ವ್ರತ ಮಾಡಲು ನಿಶ್ಚಯಿಸಿದಾಗ ಹಿರಿಯಜ್ಜಿಯೊಬ್ಬರು ಬಂದು ಆಕೆಗೆ ನೀಡಿದ ಸಲಹೆಗಳು ಹಾಗೂ ತಿರುಪ್ಪಾವೈಗಳು, ಭಾವಾರ್ಥಗಳು ಎಲ್ಲವನ್ನು ಓದಿ ನೋಡಿ.


ಒಂದೆರಡು ಸಾಲುಗಳನ್ನು ಉಲ್ಲೇಕಿಸುತ್ತೇನೆ


"ಇರಿಸಿದ ಕಳಶಗಳೆಲ್ಲ ಉಕ್ಕಿ ಬಂದು ಹೊರಗೆ ಚೆಲ್ಲುವ ಹಾಗೆ ಎಡೆಬಿಡದೆ ಹಾಲು ಕರೆಯುವ ಔದಾರ್ಯವುಳ್ಳ ದೊಡ್ಡ ಹಸುಗಳನ್ನು ಬೇಕಾದ ಹಾಗೆ ಪಡೆದಿರುವ ನಂದಗೋಪಾಲನ ಮಗನೇ, ಎಚ್ಚರಗೊಂಡು ಏಳು.


"ಈಗ ಇಷ್ಟಾರ್ಥದ ವರವನ್ನು ಪಡೆಯುವುದಕ್ಕಾಗಿ ಬಂದವರಲ್ಲವಯ್ಯಾ ಗೋವಿಂದಾ... ಎಂದೆಂದಿಗೂ ಏಳೇಳು ಜನ್ಮಗಳಿಗೂ ನಿನ್ನೊಡನೆಯೇ ಅನನ್ಯಾರ್ಹವಾಗಿ ಬಾಳುವೆವು. ನಿನಗೇ ನಾವು ಕೈಂಕರ್ಯ ಮಾಡುವೆವು. ಇನ್ನಿತರ ನಮ್ಮ ಮನೋರಥಗಳನ್ನು ಹೋಗಲಾಡಿಸು. ಶ್ಲಾಘ್ಯವೂ, ಅದ್ವಿತೀಯವು ಆದ ನಮ್ಮ ವ್ರತವು ಸಾರ್ಥಕವಾಗುವುದು"


ಶ್ರೀರಂಗದ ಸನ್ನಿಧಿಗೆ ಮದುವಣಗಿತ್ತಿಯಂತೆ ಹೋಗುವ ಆಂಡಾಳು ಭಗವಂತನನ್ನು ಸೇರಿದ್ದು ಹೇಗೆ..? ಭಕ್ತಿಪೂರ್ವಕವಾದ ಈ ಕಥೆಯನ್ನು ನೋಡಿ. 


ಕಥೆಯ ಜೊತೆಗೆ ಪೂರಕವಾದ ಚಿತ್ರಗಳನ್ನು ಇಲ್ಲಿ ಕಾಣಬಹುದು. ಈ ಕಥೆ ಚಿಕ್ಕದಾಗಿ ಉಪಕತೆಯಾಗಿ ಆಶಾ ರಘು ಅವರ 'ವಕ್ಷಸ್ಥಲ' ಕಾದಂಬರಿಯಲ್ಲಿ ಉಲ್ಲೇಖವಾಗಿದೆ. ಆಸಕ್ತರು ಆ ಕಾದಂಬರಿಯನ್ನೂ ಓದಬಹುದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ