ಭಾನುವಾರ, ಏಪ್ರಿಲ್ 26, 2026

ವಿಳಾಸ ಬದಲಾಗುತ್ತಿದೆ (ಪುಸ್ತಕ ಯಾನ - 352)


ಪುಸ್ತಕದ ಶೀರ್ಷಿಕೆ : ವಿಳಾಸ ಬದಲಾಗುತ್ತಿದೆ

ಲೇಖಕರು : ವಸುಮತಿ ಉಡುಪ 

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2020

ಪುಟಗಳು : 96

ಬೆಲೆ : 95 ರೂ 


ವಸುಮತಿ ಉಡುಪ ಅವರ ಕಥಾಸಂಕಲನಗಳು ಹಾಗೂ ಕಾದಂಬರಿಗಳು ಎರಡೂ ಇಷ್ಟವಾಗುತ್ತವೆ. ಅವರ ಬರಹದ ಶೈಲಿ, ಕಥಾವಸ್ತು, ವಾಸ್ತವಕ್ಕೆ ಹತ್ತಿರವಾಗಿರುವ ಪರಿ ಇದಕ್ಕೆ ಕಾರಣವೆಂದರೂ ತಪ್ಪಾಗಲಾರದು. 


ವಿಳಾಸ ಬದಲಾಗುತ್ತಿದೆ ಎಂದು ಸ್ಪಷ್ಟವಾಗಿ ಶೀರ್ಷಿಕೆಯೇ ಧೃಢಪಡಿಸಿದರೂ.. ವಿಳಾಸ ಬದಲಾಗುತ್ತಿರುವುದು ಹೇಗೆ ಎನ್ನುವ ಕುತೂಹಲ ಕೊನೆಯವರೆಗೂ ಕಾಯ್ದುಕೊಂಡು ಓದಿಸಿಕೊಂಡು ಹೋಗುತ್ತದೆ. ಸಾಮಾನ್ಯವಾಗಿ ಮನೆ ಬದಲಾದಾಗ ಬದಲಾಗುವ ವಿಳಾಸ ಹೆಣ್ಣುಮಕ್ಕಳ ಪಾಲಿಗೆ ಮದುವೆಯಾದಾಗ ಬದಲಾಗುತ್ತದೆ. ಪರ್ಯಾಯ ವಾಸಸ್ಥಳವಿಲ್ಲದಿದ್ದಲ್ಲಿ ಅಥವಾ ವರ್ಗಾವಣೆಯಾಗುವ ಕೆಲಸವಾಗಿದ್ದಲ್ಲಿ ಆಗಾಗ ನಿರ್ವಾಹವಿಲ್ಲದೆ ವಾಸಸ್ಥಳ ಬದಲಾಯಿಸುತ್ತಲೇ ಇರುತ್ತದೆ. ಆಗ ವಿಳಾಸ ಬದಲಾಗುತ್ತಲೇ ಇರುತ್ತದೆ. ಆದರೆ, ಬದಲಾದ ವಿಳಾಸವೇ ಖಾಯಂ ವಿಳಾಸವಾಗುವ ಸಾಧ್ಯತೆಯೂ ಇರುತ್ತದೆ. 


ಈ ಕಾದಂಬರಿಯಲ್ಲಿ ಮುಖ್ಯಪಾತ್ರವಾಗಿರುವ ನಳಿನಾಕ್ಷಿಯ ವಿವಾಹ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಅಂದಿನಿಂದ ಇಂದಿನವರೆಗೂ ಬದಲಾಗಿಲ್ಲ. 'ಶ್ಯಾನುಭೋಗರ ಮಗಳು ' ಭಾವಗೀತೆಯಲ್ಲಿ ಬರುವ ಸಾಲು 'ತಡವಾದರೇನಂತೆ ನಷ್ಟವಿಲ್ಲ ' ಎನ್ನುವುದು ಹೆಣ್ಣುಮಕ್ಕಳ ಕುರಿತ ವೈವಾಹಿಕ ಜೀವನದ ಕಾಳಜಿಯನ್ನು ತೋರುತ್ತದೆ. ಇಂದಿಗೂ ಕೆಲ ಹೆಣ್ಣುಮಕ್ಕಳ ಪೋಷಕರು ಮಗಳ ಮದುವೆ ನಿಶ್ಚಯವಾಗುವುದು ತಡವಾಗುತ್ತಿದೆ ಎನ್ನುವಾಗ ನಾನೂ ಇದನ್ನೇ ಹೇಳುತ್ತೇನೆ.. "ತಪ್ಪಾದ ಸಂಗಾತಿಯ ಆಯ್ಕೆಗಿಂತ ತಡವಾಗಿಯಾದರೂ ಒಳ್ಳೆಯ ಸಂಗಾತಿ ಸಿಗುವುದು ಸರಿಯಲ್ಲವೇ..?? " ಹಾಗೆಂದು ಸಂಗಾತ್ಯವೇ ಬೇಡವೆಂದು ಬದುಕಲು ಹೊರಟರೆ ಬದುಕು ಕಷ್ಟವೇ.. ಬದುಕಿನ ಅನಿವಾರ್ಯ ಪರಿಸ್ಥಿತಿಗಳನ್ನು ಸ್ವೀಕರಿಸಿ ಹೊಂದಿಕೊಂಡು ಹೋಗಬಹುದು. ಆದರೆ, ಕೈಯ್ಯಾರೆ ಅಂತಹ ಪರಿಸ್ಥಿತಿಯನ್ನು ತಂದುಕೊಂಡರೆ ಕಷ್ಟವೇ..


ಈ ಕಾದಂಬರಿಯಲ್ಲಿ ನಾನು ಗಮನಿಸಿದ ಮತ್ತೊಂದು ಸಕಾರಾತ್ಮಕ ಅಂಶ ಎಂದರೆ ಹೆಣ್ಣುಮಕ್ಕಳ ನಡುವೆ ಮತ್ಸರವಿಲ್ಲ. ಸಾಮಾನ್ಯವಾಗಿ ಎಲ್ಲರ ಮನೆಯ ದೋಸೆ ತೂತು ಎನ್ನುವಂತೆ ಕಾಣುವ ಅತ್ತೆ - ಸೊಸೆಯ ಜಗಳ, ಅತ್ತಿಗೆ - ನಾದಿನಿಯರ ವೈಮನಸ್ಯ ಇಲ್ಲಿಲ್ಲ. ಆದರೆ, ಇಲ್ಲಿ ತೀರಾ ಅತ್ಯಾಪ್ತ ಬಾಂಧವ್ಯ ಬೆಸೆದಿತ್ತೇ ಅಥವಾ ಅವರವರ ಅನುಕೂಲಕ್ಕೆ ತಕ್ಕಂತೆ ಬಂಧಗಳನ್ನು ಉಪಯೋಗಿಸಿಕೊಂಡರೇ ನೀವೇ ಓದಿ ಅರಿಯಿರಿ.


ಅಗಲಿದ ಅಮ್ಮನ ಫೋಟೋ ಜೊತೆಗೆ ನಿತ್ಯದಂತೆ ಸಂಭಾಷಿಸುತ್ತಿದ್ದ ನಳಿನಾಕ್ಷಿ ಅಳಿದವರ ಜೊತೆಗೆ ನಿರಂತರ ಮಾತುಕತೆ ಎಂಬುದನ್ನು ನೆನಪಿಸುತ್ತಾಳೆ. ನಾಗಮ್ಮನವರ ಇಬ್ಬರು ಮಕ್ಕಳಲ್ಲಿ ನಾಗರಾಜ ಹಿರಿಯವನಾದರೆ, ನಳಿನಾಕ್ಷಿ ಎರಡನೆಯವಳು. ತಂದೆ ತೀರಿಕೊಂಡ ನಂತರ ನಾಗರಾಜ ತನ್ನ ಓದಿಗೆ ವಿರಾಮ ಹಾಕಿ ಮನೆಯ ಜವಾಬ್ದಾರಿ ಹೊತ್ತರೆ, ನಳಿನಾಕ್ಷಿ ಕೂಡಾ ಅದೇ ದಾರಿ ಹಿಡಿಯುತ್ತಾಳೆ. ಅಮ್ಮನಿಗೆ ಅದರಿಂದ ಬೇಸರವೇನೂ ಆಗುವುದಿಲ್ಲ. ಬದಲಾಗಿ ಮಗಳ ವಿವಾಹದ ಚಿಂತೆ ಆರಂಭವಾಗುತ್ತದೆ. ಜೊತೆಗೆ ಆಕೆಯನ್ನು ಮನೆವಾರ್ತೆಯಲ್ಲಿ ಪಳಗಿಸುತ್ತಾಳೆ. ಎಲ್ಲದರಲ್ಲಿಯೂ ಬಹಳ ಅಚ್ಚುಕಟ್ಟು ನಳಿನಾಕ್ಷಿ. 


ನಾಗರಾಜು ವರಾನ್ವೇಷಣೆಗೆ ತೊಡಗಿದ ಸಂದರ್ಭದಲ್ಲಿಯೇ ನಾಗಮ್ಮ ತನ್ನಣ್ಣನಿಗೂ ಈ ಕುರಿತು ತಿಳಿಸುತ್ತಾಳೆ. ಆದರೆ, ನಳಿನಾಕ್ಷಿಯ ಸೋದರಮಾವ ಇಳಿದುಕೊಳ್ಳುವುದು ಆತನ ಮಗಳ ಮದುವೆಯನ್ನು ನಾಗರಾಜನ ಜೊತೆ ನಿಶ್ಚಯಿಸುವುದಕ್ಕಾಗಿ. ನಾಗಮ್ಮ ಖಡಾಖಂಡಿತವಾಗಿ ಮಗಳ ಮದುವೆಯೇ ಮೊದಲೆಂದು ಹೇಳಿದಾಗ ಭ್ರಮನಿರಸನವಾದ ಆತ ಮಗಳ ಮದುವೆಯನ್ನು ಬೇರೆಡೆಗೆ ನಿಶ್ಚಯಿಸುತ್ತಾನೆ. ತವರಿನ ಸಂಬಂಧ ಉಳಿಸಿಕೊಳ್ಳಲು ಅಣ್ಣನನ್ನು ಕಾಯುವಂತೆ ಹೇಳಬಹುದಾಗಿದ್ದರೂ ನಾಗಮ್ಮ ನಿರಾಕರಿಸಿದ್ದೇಕೆ..?


ಈ ನಡುವೆ ನಾಗರಾಜ ನರ್ಮದಾಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಇವರಿಬ್ಬರ ಮದುವೆಗೆ ತಾಯಿಯನ್ನು ಒಪ್ಪಿಸಲು ನಳಿನಾಕ್ಷಿಯೇ ಮಧ್ಯಸ್ಥಿಕೆ ವಹಿಸಿದ್ದು ವಿಪರ್ಯಾಸ. ಮನಸ್ಸಿನಲ್ಲಿ ಕಹಿ ಉಳಿಸಿಕೊಳ್ಳದೆ, ಅತ್ತಿಗೆಯನ್ನು ಸ್ವಾಗತಿಸಲು ಸಿದ್ದವಾಗುತ್ತಾಳೆ ನಳಿನಾಕ್ಷಿ. ಈ ಸಂದರ್ಭದಲ್ಲಿಯೇ ಆಕೆಯ ಅಮ್ಮನ ಮನಸ್ಸಿಗೊಂದು ಆಲೋಚನೆ ಬಂದಿರುತ್ತದೆ. ನರ್ಮದಾಳ ಅಣ್ಣ ಚಿದಂಬರನಿಗೆ ನಳಿನಾಕ್ಷಿಯನ್ನು ಕೊಟ್ಟರೆ.. ಕೊಟ್ಟು - ತೆಗೆದುಕೊಳ್ಳುವ ಸಂಬಂಧ ಮಾಡಬಹುದೆಂದು. ಅದನ್ನು ಮಗನೊಟ್ಟಿಗೆ ಹಂಚಿಕೊಂಡಾಗ ಆತ ತಿಳಿಸಿದ್ದು.. ಚಿದಂಬರನಿಗೆ ಮತ್ತೊಬ್ಬಳು ತಂಗಿ ಇದ್ದು ಆಕೆ ಪೋಲಿಯೋ ಪೀಡಿತೆ. ಅಲ್ಲದೇ, ಮನೆಯಲ್ಲಿ ಬಡತನ. ನಳಿನಾಕ್ಷಿ ಈ ಎಲ್ಲದಕ್ಕೂ ಹೊಂದಿಕೊಂಡು ಬಾಳುವುದು ಕಷ್ಟವಾಗಬಹುದೆಂದು. ನಾಗಮ್ಮನಿಗೂ ಅದು ಸರಿಯೆನಿಸಿ ಆ ಆಲೋಚನೆಯನ್ನು ಕೈ ಬಿಡುತ್ತಾರೆ. ಆದರೆ, ಇದನ್ನು ಕೇಳಿಸಿಕೊಂಡಿದ್ದ ನಳಿನಾಕ್ಷಿಯ ಮನಸ್ಸಿನಲ್ಲಿ ನವಿರಾದ ಭಾವವೊಂದು ಅರಳಿ ಆಗಿರುತ್ತದೆ.


ನಾಗರಾಜ ಹಾಗೂ ನರ್ಮದಾ ವಿವಾಹದ ನಂತರ ನಾಗಮ್ಮನ ಮನಸ್ಸಿನಲ್ಲಿ ಮುಳ್ಳು ಮುರಿದಂತೆ ಮಗಳು ಇನ್ನೂ ವಿವಾಹವಾಗದ ಕೊರಗು ಉಳಿದಿರುತ್ತದೆ. ಮಗ ಹಾಗೂ ಸೊಸೆ ಹೊತ್ತಿಲ್ಲದ ಹೊತ್ತಲ್ಲಿ ಉಪ್ಪರಿಗೆ ಸೇರುವುದು ಅಮ್ಮನ ಕಣ್ಣಲ್ಲಿ ಹಾಗೂ ಇನ್ನೂ ಅವಿವಾಹಿತ ತಂಗಿಯ ಮನಸ್ಸಲ್ಲಿ ಮೂಡಿಸುವ ಭಾವ ಎಂತಹದ್ದೆಂಬುದು ಅವರಿಗೆ ಅರಿವೇ ಇರುವುದಿಲ್ಲ. ನಾಗರಾಜ ತನ್ನ ವಿವಾಹದ ನಂತರ ತಂಗಿಯ ಮದುವೆಯನ್ನು ಮರೆತೇ ಹೋದನೇನೋ ಎನ್ನಿಸುತ್ತಿರುವಾಗ ಆಗೀಗ ಬರುತ್ತಿದ್ದ ವಿಧುರ, ಎರಡನೇ ವಿವಾಹದ ಸಂಬಂಧಗಳನ್ನು ನಿರಾಕರಿಸಿದಳು.  ತಂಗಿಯ ಮನೆಗೆ ಆಗಾಗ ಬರುತ್ತಿದ್ದ ಚಿದಂಬರನ ಮನದಲ್ಲಿಯೂ ನಳಿನಾಕ್ಷಿ ಕುರಿತು ನವಿರಾದ ಭಾವ. ಮೌನದಲ್ಲಿ ಈ ಪ್ರೇಮರಾಗ ಸಾಗುತ್ತಿತ್ತು. 


ನರ್ಮದಾ ಗರ್ಭಿಣಿಯಾದಳು. ಬಾಣಂತನ ಮುಗಿಸಿ ಬರುವಷ್ಟರಲ್ಲಿ ಬಂದ ಸುದ್ದಿ ನಳಿನಾಕ್ಷಿಯ ಮನಸ್ಸನ್ನು ಮುರಿದಿತ್ತು. ಪೋಲಿಯೋ ಪೀಡಿತ ತಂಗಿಯನ್ನು ಮದುವೆಯಾಗುವ ಮನೆಯ ಮಗಳನ್ನು ಚಿದಂಬರ ಮಾಡುವೆಯಾಗುತ್ತಿದ್ದ. ಆತನಿಗೆ ನಿರ್ವಾಹವಿರಲಿಲ್ಲ. ಶ್ರೀಮಂತ ಕುಟುಂಬ ಎಂದು ಒಪ್ಪದಿದ್ದರೂ.. ತಂಗಿಯ ಬದುಕನ್ನು ಸರಿಪಡಿಸಬೇಕಿತ್ತು. ಆತನ ವಿವಾಹ ನಡೆದಿತ್ತು. ನಳಿನಾಕ್ಷಿಯ ಮನಸ್ಸು ಮುರಿದಿತ್ತು. 


ಕಾಲ ಕಳೆದಂತೆ ನರ್ಮದಳಿಗೆ ಎರಡನೇ ಮಗು ಹುಟ್ಟಿತ್ತು. ಮಗಳು ಸೌಮ್ಯಳಂತೆ, ಮಗ ಶ್ರೀಕಾಂತನೂ ಅತ್ತೆಯ ಮಡಿಲು ಸೇರಿದರು. ನರ್ಮದಾ ಮನೆಯ ಯಜಮಾನಿಯ ದರ್ಪದವಳಾಗಿರಲಿಲ್ಲ. ನಳಿನಾಕ್ಷಿಯ ಗೆಳತಿಯಂತಾಗಿದ್ದಳು. ನಳಿನಾಕ್ಷಿ ಎಲ್ಲವನ್ನೂ ಮಕ್ಕಳ ಮುಖ ನೋಡಿ ಅವರಿಗಾಗಿಯೇ ಬದುಕು ಎಂಬಂತಿದ್ದಳು. 


ನರ್ಮದಾ ತವರಲ್ಲಿ ತಂದೆ - ತಾಯಿ ತೀರಿಕೊಂಡರು. ಚಿದಂಬರನ ಪತ್ನಿ ಆತ್ಮಹತ್ಯೆ ಮಾಡಿಕೊಂಡಳು. ಅದಕ್ಕೆ ಕಾರಣವೇನು..? ಆತನ ಮಗಳ ಪಾಡು ಏನಾಯಿತು..? ನರ್ಮದಾ ನಳಿನಾಕ್ಷಿಯನ್ನು ಕೇಳಿದಾಗ ಆಕೆ ಚಿದಂಬರನನ್ನು ವಿವಾಹವಾಗಲು ನಿರಾಕರಿಸಿದ್ದೇಕೆ..? 


ಸೌಮ್ಯಳ ಮದುವೆಯ ಸಂದರ್ಭದಲ್ಲಿ, ಬದಲಾದ ಪರಿಸ್ಥಿತಿಯಲ್ಲಿ ವರಾನ್ವೇಷಣೆ ಹೇಗಿತ್ತು..? ನಾಗಮ್ಮನವರ ಪ್ರತಿಕ್ರಿಯೆ ಏನು..? ನಾಗಮ್ಮನವರ ಸಾವಿನ ನಂತರ.. ಶ್ರೀಕಾಂತನೊಡನೆ ಪಟ್ಟಣದಲ್ಲಿಯೇ ನೆಲೆಸಲು ನಿರ್ಧರಿಸಿದ ನಾಗರಾಜ ಹಾಗೂ ನರ್ಮದಾ ನಿರ್ಧರಿದಾಗ ನಳಿನಾಕ್ಷಿಯ ಮನಸ್ಸಲ್ಲಿ ಮೂಡಿದ ಭಾವವೇನು..? ಅವರು ಪಟ್ಟಣಕ್ಕೆ ಹೋದ ದಿನ ನಡೆದ ಘಟನೆ ಆಕೆಯ ಬದುಕನ್ನು, ವಿಳಾಸವನ್ನು ಬದಲಾಯಿಸಲು ಕಾರಣವಾಗಿದ್ದೇಗೆ ..? ಎಲ್ಲವನ್ನೂ ಅರಿಯಲು ಓದಿ ವಿಳಾಸ ಬದಲಾಗುತ್ತಿದೆ ಕಾದಂಬರಿಯನ್ನು.


ಕಾದಂಬರಿ ಮುಗಿದ ನಂತರವೂ ನಳಿನಾಕ್ಷಿ ಕಾಡುತ್ತಾಳೆ. ಅಂತಹಾ ಹೆಣ್ಣುಮಕ್ಕಳು ಕಾಡುತ್ತಾರೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ