ಪುಸ್ತಕದ ಶೀರ್ಷಿಕೆ : ಎಲ್ಲೆಗಳ ದಾಟಿದವಳು
ಲೇಖಕರು : ಶ್ರುತಿ ಬಿ. ಆರ್
ಪ್ರಕಾಶಕರು : ಜೀರುಂಡೆ ಪುಸ್ತಕ
ಪ್ರಥಮ ಮುದ್ರಣ : 2024
ಪುಟಗಳು : 88
ಬೆಲೆ : 110 ರೂ.
ಶೃತಿ ಬಿ. ಆರ್ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರು. ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಪ್ರಥಮ ರ್ಯಾಂಕ್ ಮತ್ತು ಐದು ಚಿನ್ನದ ಪದಕಗಳೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿ. ಎಚ್. ಡಿ ಪದವಿಯನ್ನು ಪಡೆದಿದ್ದಾರೆ. ಕೆ.ಎ.ಎಸ್ ಪರೀಕ್ಷೆ ಪಾಸು ಮಾಡಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
2020ರಲ್ಲಿ ಪ್ರಕಟವಾಗಿರುವ ಝೀರೋ ಬ್ಯಾಲೆನ್ಸ್ ಇವರ ಮೊದಲ ಕವನ ಸಂಕಲನ) ಇದಕ್ಕೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ದೊರೆತಿವೆ. ಜೊತೆಗೆ 2024ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ದೊರೆತಿದೆ. ಎಲ್ಲೆಗಳ ದಾಟಿದವಳು ಶ್ರುತಿ ಅವರ ಮೊದಲ ಕಥಾ ಸಂಕಲನ ಹಾಗೂ ಎರಡನೇ ಪುಸ್ತಕ. ಇದು ನಾನು ಓದುತ್ತಿರುವ ಇವರ ಮೊದಲ ಪುಸ್ತಕ.
ಈ ಕಥಾ ಸಂಕಲನದಲ್ಲಿ ಒಟ್ಟು ಒಂಬತ್ತು ಕಥೆಗಳಿವೆ.
ದೇವರು ಬಂತು : ದೇವರು, ದೆವ್ವ ಎರಡನ್ನೂ ಇಷ್ಟಿಷ್ಟೇ.. ಒಮ್ಮೊಮ್ಮೆ ಮಾತ್ರ ನಂಬುವ, ಯಾವುದನ್ನೂ ಹೆಚ್ಚು ನಂಬದವಳು ತನ್ನ ಗೆಳತಿ ಗೀತಾಳ ಕಷ್ಟ ಪರಿಹಾರಕ್ಕಾಗಿ ಬಲವಂತದಿಂದ ಒಂದು ಜಾಗಕ್ಕೆ ಬಂದಿದ್ದರು. ಗೀತಾಳಿಗೆ ಅವರ ಪರಿಚಯದವರು ಹೇಳಿದ ಪರಿಹಾರವಿದು. ತಮ್ಮ ಸಂಬಂಧಿಕರ ಮನೆಯಲ್ಲಿಯೇ ಬಾಡಿಗೆಗಿದ್ದ ಹೆಂಗಸಿನ ಮೈಮೇಲೆ ಪ್ರತಿ ಹುಣ್ಣಿಮೆಯಂದು ದೇವರು ಬರುತ್ತದೆ. ನಮ್ಮ ಸಮಸ್ಯೆಗೆ ಅದು ಪರಿಹಾರ ನೀಡುತ್ತದೆಂದು. ನಂಬಿಕೆ, ಅಪನಂಬಿಕೆ, ಮೂಢನಂಬಿಕೆ ಇದೆಲ್ಲದರಾಚೆಗೂ ಚಾಚಿಕೊಂಡಿರುವ ಈ ಕಥೆಯ ಅಂತ್ಯ ಸುಲಭಕ್ಕೆ ಊಹಿಸಲಾಗುವುದಿಲ್ಲ. ಗೀತಾಳ ಸಮಸ್ಯೆಯಾದರೂ ಏನಿತ್ತು..? ಅದಕ್ಕೆ ಅಂದು ಸಿಕ್ಕ ಉತ್ತರವಾದರೂ ಏನು ಓದಿ ನೋಡಿ.
ದ್ಯಾವಮ್ಮನೂ... ಸತ್ಯನಾರಾಯಣನೂ... : ಹೆಂಡತಿ ತೀರಿಹೋದ ನಂತರ, ಮಗ-ಮಗಳು ಇಬ್ಬರೂ ತಮ್ಮೊಂದಿಗಿರುವಂತೆ ಕರೆದಿದ್ದರೂ.. ಅಲ್ಲಿಗೆ ಹೋಗಿರದಿದ್ದ ಸತ್ಯನಾರಾಯಣನಿಗೆ ಕರೋನ ಕಾಲ ಹೊಸ ಸಮಸ್ಯೆಯನ್ನು ತಂದೊಡ್ಡಿತ್ತು. ಒಂದು ಏಕಾಕಿತನವಾದರೆ ಮತ್ತೊಂದು ಕರೋನ ಸಮಯದಲ್ಲಿ ತಮ್ಮ ಬೀದಿಗೆ ಬಂದು ನಾಯಿಗಳಿಗೆಲ್ಲ ಬಿರಿಯಾನಿ ಉಣಬಡಿಸುತ್ತಿದ್ದ ದ್ಯಾವಮ್ಮ. ಇಬ್ಬರ ನಡುವೆ ಶುರುವಾದ ಜಟಾಪಟಿ ಏನಾಯ್ತು..? ಕರೋನ ಕಾಲದ ಮಾನವೀಯತೆಯ ಕಥೆ.
ಎಲ್ಲೆಗಳ ದಾಟಿದವಳು : ಅಜ್ಜಿಯ ನೆನಪಿನ ತಿಜೋರಿಯ ಕೀಲಿಕೈಯಂತಿದ್ದ ಮೊಮ್ಮಗಳು ಕೇಳುತ್ತಿದ್ದ ಕಥೆಗೆ ಎಷ್ಟೋ ಬಾರಿ ಅಜ್ಜಿಯ ವಂಶಾವಳಿಯ ಚರಿತ್ರೆ ಬಿಚ್ಚಿಕೊಳ್ಳುತ್ತಿತ್ತು. ಹೀಗೆ ಹೇಳುವಾಗ ಅಜ್ಜಿಯ ದೊಡ್ಡಮ್ಮನ ಕಥೆ ಬಿಚ್ಚಿಕೊಳ್ಳುತ್ತದೆ. ನಿದ್ದೆಯಲ್ಲಿ ನಡೆಯಲು ಶುರು ಮಾಡಿದ್ದ ದೊಡ್ಡಪ್ಪನ ಸಾವು ದೊಡ್ಡಮ್ಮನನ್ನು ಮನೆಯಲ್ಲಿ ಆಳಿಗಿಂತಲೂ ಕಡೆಯಾಗಿ ಕಾಣುವಂತೆ ಮಾಡುತ್ತದೆ. ದೊಡ್ಡಮ್ಮ ಎಲ್ಲೆ ದಾಟಿದ್ದು ಸರಿಯಾಯಿತೇ..? ದೊಡ್ಡಮ್ಮನ ದೃಷ್ಟಿಯಿಂದ ಆಲೋಚಿಸಿದಾಗ ಆಕೆಯ ತೀರ್ಮಾನ ಹೇಗೆ ಕಾಣುತ್ತದೆ ಓದಿ ನೋಡಿ.
ಶಕುನದ ಹಕ್ಕಿ : ಸುಮಾಳಿಗೆ ಡೈರಿ ಬರೆಯುವ ಹವ್ಯಾಸ. ಡೈರಿಯ ಹವ್ಯಾಸದೊಡನೆ ಸಾಗುವ ಕಥೆ. ಜೊತೆಗೆ ಆಕೆಯ ಗೆಳತಿ ವಾಣಿ ಹೇಳುತ್ತಿದ್ದ ಹಕ್ಕಿಗಳ ವಿಷಯ ಸುಮಾಳ ಬದುಕಿನಲ್ಲಿ ಬಹಳಷ್ಟು ವಿಷಯಗಳಿಗೆ ತಾಳೆಯಾಗುತ್ತಿತ್ತು ಅಥವಾ ಸುಮಾ ಹಾಗೆ ಹೋಲಿಸಿಕೊಳ್ಳುತ್ತಿದ್ದಳು. ಸುಮಾಳ ಪತಿ ರಾಕಿ ಕಣ್ಮರೆಯಾದದ್ದು, ಹಾಗೂ ಹಕ್ಕಿಗಳ ಜೊತೆಗಾರನಲ್ಲಿಯೂ ಮತ್ತೊಂದು ಹಕ್ಕಿ ಕಾಣದಿದ್ದದ್ದು ಎಲ್ಲವೂ ತಾಳೆಯಾಗುತ್ತದೆ. ಸುಮಾಳ ಆತಂಕ ಜೊತೆಗೆ ಮುಂದೇನಾಯಿತು ಓದಿನೋಡಿ.
ಅನಾಮಧೇಯ : ಇತ್ತ ಕುಗ್ರಾಮವೂ ಅಲ್ಲದ, ಪೇಟೆಯೂ ಅಲ್ಲದ.. ಊರವರೆಲ್ಲ ಒಬ್ಬರಿಗೊಬ್ಬರು ಪರಿಚಿತರೇ ಆಗಿದ್ದ ಊರಿನಲ್ಲಿ ಲಕ್ಷ್ಮಿ ಟೀಚರ್ ಮನೆಯ ಮುಂದಿನ ಗೋಡೆಯ ಮೇಲೆ ಆಕೆಯ ಕುರಿತು ತಪ್ಪಾಗಿ ಬರೆಯಲಾಗಿತ್ತು. ಇದ್ದಲಿನಲ್ಲಿ ಬರೆದಿದ್ದ ಅದನ್ನು ಆಕೆ ಹಾಗೂ ಅವಳ ಅತ್ತೆ ಅಳಿಸಿದರಾದರೂ.. ಮರುದಿನ ಶಾಲೆಗೆ ಹೊರಟಾಗ ನೀರಿನ ಟ್ಯಾಂಕಿನ ಮೇಲೆ, ಬೇರೆಯವರ ಮನೆ ಗೋಡೆಯ ಮೇಲೂ ಅಂತಹದ್ದೇ ಕೆಟ್ಟ ಬರಹ. ಮೈದುನ ಶಶಿಧರ ಉಪಾಯದಿಂದ ಆತನನ್ನು ಕಂಡುಹಿಡಿದು ಬುದ್ಧಿ ಕಲಿಸಿದ್ದ. ಈಗ ಮತ್ತೊಂದು ಸಮಸ್ಯೆ ಎದುರಾಗಿತ್ತು. ಶಶಿಧರನ ಗೆಳೆಯ ವಿಶ್ವನಾಥ್ ತಂಗಿ ಚಂದ್ರಿಯ ಹಿರಿಮಗಳ ಸುಧಾಳ ಮದುವೆ ಕಗ್ಗಂಟಾಗಿ ಕೂತಿತ್ತು. ಆ ಪತ್ರದಲ್ಲಿ ಇದ್ದದ್ದೇನು..? ಅದನ್ನು ಬರೆದ ಅನಾಮಧೇಯ ಯಾರು ? ಅವಳ ಮದುವೆಗೆ ಕಲ್ಲು ಹಾಕಲು ನೋಡುತ್ತಿದ್ದದ್ದೇಕೆ ? ಈ ಸಮಸ್ಯೆ ಪರಿಹಾರವಾದ ಬಗೆ ಹೇಗೆ ಓದಿ ನೋಡಿ.
ಅವಳು ಮತ್ತು ಹದಿನೈದು ಜೊತೆ ಕಣ್ಣುಗಳು : ಇಪ್ಪತ್ತೈದು ವರ್ಷವೂ ಮೀರದ ಅವರು ನೇಪಾಳದ ಯಾವುದೋ ಹಳ್ಳಿಗಾಡಿನ ಊರಿನಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬಂದವರು. ಜೊತೆಗೆ ಒಂದು ಪುಟ್ಟ ಗಂಡು ಮಗು ಹಾಗೂ ಮೂರು ನಾಲ್ಕು ವರ್ಷದ ಹೆಣ್ಣು ಮಗು. ಅಪಾರ್ಟ್ಮೆಂಟ್ ಒಂದರ ಕಟ್ಟಡ ಕಟ್ಟುವ ಸಾಮಾನುಗಳ ಉಸ್ತುವಾರಿ ಕೆಲಸ ಅವನಿಗೆ. ತಗಡಿನ ಶೆಡ್ಡಿನಲ್ಲಿ ವಾಸ. ಆರು ತಿಂಗಳಲ್ಲಿ ಬೆಂಗಳೂರಿಗೆ ಹೊಂದಿಕೊಂಡರು ಎನ್ನುವಷ್ಟರಲ್ಲಿ ಇವರು ವಾಸವಾಗಿದ್ದ ಸಣ್ಣ ಶೆಡ್ಡಿಗೆ ಎದುರಾಗಿ ಮತ್ತೆ ನಾಲ್ಕು ಹೊಸ ಶೆಡ್ಡುಗಳೆದ್ದಿದ್ದವು. 15 ಮಂದಿ ಹಿಂದಿ ಮಾತನಾಡುವ ಜನರು ಕೆಲಸಕ್ಕೆಂದು ಬಂದಿದ್ದರು. ಅವಳು ಅನುಭವಿಸಿದ ವಿಚಿತ್ರ ಭಯ, ಇರಿಸುಮುರಿಸು ಇವೆಲ್ಲವನ್ನು ತೆರೆದಿಡುವ ಕಥೆ. ಗಂಡನ ಅಸೂಕ್ಷ್ಮತೆ ಅವಳನ್ನು ಯಾವ ಪರಿಸ್ಥಿತಿಗೆ ದೂಡಿತು.. ಮುಂದೇನಾಯಿತು ಓದಿ ನೋಡಿ.
ಕೆಂಪಾದವೋ ಎಲ್ಲಾ... ಕೆಂಪಾದವೋ : ಇಪ್ಪತ್ತೊಂಬತ್ತು ತುಂಬಿ ಮೂವತ್ತಕ್ಕೆ ಕಾಲಿಡುತ್ತಿದ್ದರೂ ಇನ್ನು ಮೈನೆರೆಯದ ಹೇಮ ತನ್ನ ತಪ್ಪಿಲ್ಲದಿದ್ದರೂ ಮನೆಯಲ್ಲಿ ಹಾಗೂ ಹೊರಗಿನಿಂದ ಎಲ್ಲೆಡೆಯಲ್ಲಿಯೂ ಕುಹಕಗಳಿಗೆ, ಅವಮಾನಗಳಿಗೆ ಗುರಿಯಾಗಿದ್ದಳು. ಶಿಕ್ಷಕಿಯಾಗಿದ್ದರೂ.. ಶಾಲೆಯ ವಾತಾವರಣದಲ್ಲಿಯೂ ಸಹೋದ್ಯೋಗಿ, ಆಪ್ತ ಗೆಳತಿಯಿಂದ ಸಿಕ್ಕ ನೋವು ಅವಳನ್ನು ಮತ್ತಷ್ಟು ಕುಗ್ಗಿಸಿತ್ತು. ಹೇಮಳಿಗೂ ಕನಸುಗಳಿತ್ತು. ವಾಸ್ತವಕ್ಕೆ ಹೊಂದಿಕೊಂಡು ಬದುಕು ಇಷ್ಟೇ ಎಂದುಕೊಂಡಿದ್ದವಳಿಗೆ ಅವನ ಜೀವನದಲ್ಲಿಯೂ ಒಬ್ಬ ಗಂಡು ಬಂದಿದ್ದನು. ಅದೂ ಅವಳ ಪರಿಸ್ಥಿತಿ ಗೊತ್ತಿದ್ದೇ ಮದುವೆಗೆ ಒಪ್ಪಿದ್ದನು. ಮುಂದೆ..? ಈ ಕಥೆಯ ಸುಖಾಂತ್ಯ ನೆಮ್ಮದಿ ಮೂಡಿಸುತ್ತದೆ.
ದರಕಾಸ್ತು : ಹೊಸ ತಹಸೀಲ್ದಾರರ ಬಳಿ ಹನುಮಪ್ಪ ತನ್ನ ಕಷ್ಟವನ್ನು ತೋಡಿಕೊಂಡಿದ್ದ. 15 ವರ್ಷದಿಂದ ಅಲೆದರೂ ಅವನ ಹೆಸರಿಗೆ ಅವನದ್ದೆಂದುಕೊಂಡ ಜಾಗ ಖಾತೆಯಾಗಿರಲಿಲ್ಲ. ಅವನ ಹಳ್ಳಿಗೆ ಸಂಬಂಧಿಸಿದ ದರಕಾಸ್ತು ಫೈಲ್ ನಳನ್ನು ತರಲು ಹೇಳಿ ಪರೀಕ್ಷಿಸಿದರೆ ಅದರಲ್ಲಿ ಇವರ ತಂದೆಗೆ ಮಂಜೂರಾಗಿರುವ ಡೀಟೇಲ್ಸ್ ಇಲ್ಲವೆಂದು ಹೇಳಿದ ಗುಮಾಸ್ತನ ಮಾತುಗಳಲ್ಲಿ ಎಷ್ಟು ಸತ್ಯವಿತ್ತು..? ಈ ಸಮಸ್ಯೆಗೆ ಪರಿಹಾರ ಸಿಕ್ಕಿತೇ..? ಓದಿ ನೋಡಿ.
ಧಾರೆ : ಸುನಂದಳ ಗಂಡನಾಗಿದ್ದ ಮಲ್ಲಿಕಾರ್ಜುನಯ್ಯ ಯಾವತ್ತಿಗೂ ಕಷ್ಟಜೀವಿಯಾಗಿರಲಿಲ್ಲ. 45 ವರ್ಷಗಳಿಂದ ಒಂಟಿಯಾಗಿ ಹಳ್ಳಿಯಲ್ಲಿ ಗಂಡ ಬಿಟ್ಟವಳೆನಿಸಿಕೊಂಡು, ಜಮೀನನ್ನು ಜೋಪಾನ ಮಾಡಿಕೊಂಡು, ಪಡಬಾರದ ಕಷ್ಟಪಟ್ಟಿದ್ದಳು. ಪ್ರೀತಿಯ ಮೊಮ್ಮಗಳ ಮದುವೆಯ ಸಂಭ್ರಮವಿದ್ದರೂ ಅವಳಿಗೆ ಮಾತ್ರ ತಳಮಳ ತಪ್ಪಿರಲಿಲ್ಲ. ಎಲ್ಲಾ ಜವಾಬ್ದಾರಿ ತೊರೆದು ಸ್ವಾರ್ಥಿಯಂತೆ ಹೊರಟು ಹೋದವನ ಮುಖ ನೋಡಲು ಇಷ್ಟವಿಲ್ಲದಿದ್ದವಳಿಗೆ ಈಗ ಮಗ ಒತ್ತಾಯ ಮಾಡುತ್ತಿದ್ದ. ಅದಕ್ಕೆ ಕಾರಣವಿತ್ತು. ಆತನ ಮಗಳ ಮದುವೆಗೆ ಮಲ್ಲಿಕಾರ್ಜುನಯ್ಯನೇ ಮುಂದೆ ನಿಂತು ಮದುವೆ ಮಾಡಬೇಕೆಂದು ಗಂಡಿನ ಮನೆಯವರು ಕಡಾಖಂಡಿತವಾಗಿ ಹೇಳಿದ್ದರು. ಅದಕ್ಕೆ ಕಾರಣವೇನು..? ಗಂಡನೊಡನೆ ಧಾರೆ ಮಾಡಲು ಸುನಂದ ಒಪ್ಪಿದಳೇ.. ಓದಿ ನೋಡಿ.
ಸಾಮಾಜಿಕ ಸಮಸ್ಯೆಗಳ, ಕೌಟುಂಬಿಕ ಸಮಸ್ಯೆಗಳ ಕಥೆಗಳೇ ಆಗಿದ್ದರೂ.. ಹೆಣ್ಣಿನ ದೃಷ್ಟಿಕೋನದಿಂದ ನೋಡಬೇಕಾದ ಹಾಗೂ ಅವಳು ಅನುಭವಿಸಿದ ಭಾವಗಳಿಗೆ, ತಳಮಳಗಳಿಗೆ, ಅವಮಾನಗಳಿಗೆ ಅವಳು ತನ್ನದೇ ರೀತಿಯಲ್ಲಿ ಉತ್ತರ ಕಂಡುಕೊಳ್ಳುವ ಕಥೆಗಳಿವು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ