ಪುಸ್ತಕದ ಶೀರ್ಷಿಕೆ : ಚಿತ್ರಕಾರನ ಬೆರಳು
ಲೇಖಕರು : ಶಾಂತಿ ಕೆ. ಅಪ್ಪಣ್ಣ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2025
ಪುಟಗಳು : 136
ಬೆಲೆ : 175 ರೂ.
ಶಾಂತಿ ಕೆ. ಅಪ್ಪಣ್ಣ ಅವರು ಕಥೆಗಳನ್ನು ಕಟ್ಟಿಕೊಡುವ ರೀತಿ ನನಗೆ ಇಷ್ಟವಾಗುತ್ತದೆ. ಇವರ 'ಮನಸು ಅಭಿಸಾರಿಕೆ' ಮತ್ತು 'ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು' ಕಥಾಸಂಕಲನಗಳು ಹೆಚ್ಚೇ ಆವರಿಸಿದ್ದವು.
ಚಿತ್ರಕಾರನ ಬೆರಳು ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ.
ಉದ್ದೇಶ : ಈ ಕಥೆಯಲ್ಲಿ ಮರಕುಟಿಕದ ಕುರಿತು ಒಂದು ಮಾಹಿತಿ ಬರುತ್ತದೆ. ಅದು ಮರದ ಕಾಂಡವನ್ನು ಕುಟ್ಟುತ್ತಾ ಇರುವುದು ಪೊಟರೆ ಮಾಡಿಕೊಳ್ಳಲು ಎಂದು ನಾನು ಭಾವಿಸಿದ್ದೆ. ಆದರೆ, ಅವು ಮರಕುಟುಕಿ ಹುಳುಹುಪ್ಪಟೆಗಳನ್ನಷ್ಟೇ ಅಷ್ಟೇ ಹುಡುಕುತ್ತವೆ. ಪೊಟರೆ ಮಾಡುವುದಿಲ್ಲ ಎಂಬ ಮಾತು ಜೀರ್ಣಿಸಿಕೊಳ್ಳಲು ಇಂದಿಗೂ ಕಷ್ಟವೇ..! ಇನ್ನು ಕಥೆಯ ವಿಚಾರಕ್ಕೆ ಬರುವುದಾದರೆ.. ಕಾಣೆಯಾದ ಹುಡುಗಿಯೊಬ್ಬಳನ್ನು ಹುಡುಕಿಕೊಂಡು ಇವರ ಮನೆಗೆ ಬಂದ ಪೊಲೀಸರಿಗೆ ಆ ಮನೆಯ ಮನುಷ್ಯ ಇವರ ಕುರಿತ ಎಲ್ಲವನ್ನೂ ಹೇಳುತ್ತಿದ್ದ. ಅದಕ್ಕೆ ಆತನಿಷ್ಟ ಇವರ ಕುರಿತು ಕುತೂಹಲ ತೋರಿಸಬಹುದು ಎಂಬ ದೃಷ್ಟಿಕೋನ ಒಂದಡೆಯಾದರೆ ಇವರ ಆಲೋಚನೆ ಹೇಗಿತ್ತು ಇವರ ನಡೆಗಳು ಹೇಗಿದ್ದವು. ವಾಸ್ತವದೊಂದಿಗೆ ಭೂತಕಾಲ ಕಟ್ಟಿಕೊಟ್ಟ ದೃಶ್ಯಗಳು ಒಂದೆಡೆಯಾದರೆ ಆಲೋಚನೆಗಳು ಮತ್ತೊಂದೆಡೆ.
ಕಥೆಯೊಳಗೊಂದು ಕತೆ : ದೊಡ್ಡತ್ತಿಗೆ ಹಾಗೂ ಚಿಕ್ಕತ್ತಿಗೆಯರ ಮಾತು-ಕಥೆಗಳ ನಡುವೆ ಗೊತ್ತಾದ ಸತ್ಯವೊಂದು ಅವರ ಭಾವನೆಗಳನ್ನು ಬಿಡಿಸಿಟ್ಟ ಕಥೆ ಇಲ್ಲಿದೆ. ಸರಿ-ತಪ್ಪುಗಳನ್ನು ಬದಿಗಿಟ್ಟು ಓದುವ ಈ ಕಥೆಯಲ್ಲಿ ಪ್ರೇಮದ ವಿಭಿನ್ನ ವೈಖರಿಯನ್ನು ಕಾಣಬಹುದು. ಪ್ರೀತಿ ಮರೆಯುವುದು ಹೇಗೆ ಹಾಗೂ ನಿಷ್ಕಲ್ಮಶ ಪ್ರೀತಿ ಇರಬಹುದಾದರೂ ಹೇಗೆ ಎಂಬ ಆಲೋಚನೆಯಲ್ಲಿಯೇ ಆತ್ಮಸಖಿ ಎಂದು ಉಲ್ಲೇಖಿಸಿ ಬರೆದ ಡೈರಿ ಇಷ್ಟವಾಗುತ್ತದೆ.
ಪದ್ದು ನಕ್ಕಳು : ವಾಸು ಹಾಗೂ ವಲ್ಲಿ ಎಂಬ ದಂಪತಿಗಳ ಜೊತೆಗೆ ವಾಸುವಿನ ತಾಯಿ ಸುಗುಣಮ್ಮ ವಾಸಿಸುತ್ತಿದ್ದಳು. ಮತ್ತೊಬ್ಬ ಮಗ ಪ್ರಭು ಹಾಗೂ ಪದ್ದು ವಾಸಿಸುತ್ತಿದ್ದರು. ಸುಗುಣಮ್ಮನ ಮಗಳು ಪುಷ್ಪ. ಇಬ್ಬರು ಮಕ್ಕಳ ವಾಸ್ತವದ ಜೊತೆಗೆ ಸುಗುಣಮ್ಮನ ಮಾತುಗಳು ಅವರ ಸಂಸಾರದಲ್ಲಿಯೇ ಅಲ್ಲೋಲಕಲ್ಲೋಲ ಎಬ್ಬಿಸುವಂತಿತ್ತು. ಕಥೆಯ ಕೊನೆಯಲ್ಲಿ ಅರಿವಾಗುವ ಸುಗುಣಮ್ಮನ ಮನಸ್ಥಿತಿ ಅಚ್ಚರಿ ತರುತ್ತದೆ. ಪದ್ದು ಮಾತನಾಡದೆ ಸೊಟ್ಟಗೆ ನಕ್ಕ ನಗೆ ಈ ಕಥೆಯಲ್ಲಿ ನ ಪ್ರಶ್ನೆಗಳೆಲ್ಲದಕ್ಕೂ ಉತ್ತರ ಕೊಡುವಂತಿದೆ.
ಚಿತ್ರಕಾರನ ಬೆರಳು : ಮದುವೆ ಮಾಡಿ ಕೊಟ್ಟಾಗ ಅವಳಿಗೆ ಆಯ್ಕೆಯ ಪ್ರಶ್ನೆಗಳಿರಲಿಲ್ಲ. ಹಾಗೆ ನೋಡಿದರೆ ಈಗಲೂ ಇಲ್ಲ. ಯಾವುದಕ್ಕೂ ಕೊರತೆ ಇಲ್ಲದ ನೆಮ್ಮದಿಯ ಜೀವನ. ಸುತ್ತಲೂ ಪ್ರೀತಿ ತೋರುವ ಕುಟುಂಬ, ಮುದ್ದಾದ ಮಕ್ಕಳು. ಸಮಾಜದ ನಿಯಮಗಳಿಗೆ ಎಲ್ಲ ರೀತಿಯಿಂದಲೂ ಅನ್ವಯವಾಗುವ ಮಾದರಿ ಬದುಕು. ಆದರೆ, ಅವಳಿಗೆ ಹೇಳತೀರದ ಸಂಕಟ. ಇಂತಹ ಸಂಕಟವನ್ನು ಬಿಡುವುದಕ್ಕೆ ಹುಡುಕಿದ್ದು ಚಿತ್ರಗಳನ್ನು. ಆಗ ಸಿಕ್ಕ ಚಿತ್ರಕಾರರನ್ನು ಹುಡುಕಿ ಹೊರಟವಳಿಗೆ ಆ ಚಿತ್ರಕಾರ ಸಿಕ್ಕನೇ ಓದಿ ನೋಡಿ. ಚಿತ್ರಗಳು, ಆ ಕ್ಯಾಪ್ಷನ್ಗಳು ಹಾಗೂ ಮನಸ್ಥಿತಿ ಅದೆಷ್ಟು ಚಂದದ ಹೊಂದಿಕೆಯಾಗಿದೆ. ಕತೆ ಇಷ್ಟವಾಯಿತು.
ಪ್ರಾರ್ಥನೆ : ರಾಮಣ್ಣನ ಅಂಗಡಿ ಆ ಊರಿನ ಮುಖ್ಯ ಬೀದಿಯಲ್ಲೊಂದು ಮುಖ್ಯ ಅಂಗಡಿಯಾಗಿತ್ತು ಒಂದು ಚಿಕನ್ ಸೆಂಟರ್ ಅದು. ಅಲ್ಲಿದ್ದ ಹುಂಜ ರಾಜಗಾಂಭೀರ್ಯದಲ್ಲಿ ತಾನೇ ನಾಯಕನೆಂಬಂತೆ ಬೇರಾವ ಪ್ರಾಣಿಗಳನ್ನೂ ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ಈಗ ನಾಯಿಕುನ್ನಿ ಅದರ ಜಾಗದ ಪರಿಧಿಗೆ ಬಂದಿತ್ತು. ಮೊದಮೊದಲಿಗೆ ಹುಂಜಕ್ಕೂ ನಾಯಿ ಕುನ್ನಿ ಆಗುತ್ತಿರಲಿಲ್ಲವಾದರೂ.. ನಂತರ ದಯೆ ತೋರಿತು. ರಾಮಣ್ಣ ಅದರ ಜೊತೆ ಹಾಗೇಕಿದ್ದ.. ನಾಯಿ ಕುನ್ನಿ ಮಾತನಾಡಿದ ನಂತರ ಮುಂಜಾನೆಗೆ ಹುಂಜನಿಗೆ ಹೊಳೆದದ್ದೇನು..? ಅದೃಷ್ಟದ ಹುಂಜವೆಂದು ಭಾವಿಸುತ್ತಿದ್ದ ರಾಮಣ್ಣನ ವರ್ತನೆ ಬದಲಾದದ್ದಾದರೂ ಏಕೆ..? ಹುಂಜನ ಪ್ರಾರ್ಥನೆ "ಅಪ್ಪಿತಪ್ಪಿ ಕೂಡ ಮನುಷ್ಯನನ್ನಾಗಿ ಹುಟ್ಟಿಸಿಬಿಡಬೇಡ" ಎಂಬುದರ ಆಂತರ್ಯವೇನು..? ಓದಿ ನೋಡಿ.
ನಾವು ಕೊಂದ ಹುಡುಗಿ : ಅಪ್ಪ-ಅಮ್ಮ, ತಮ್ಮ, ಅಮ್ಮಿಣಿ ಅಕ್ಕ ಹಾಗೂ ಅವಳ ಚಂದದ ಕುಟುಂಬದಲ್ಲಿ ಅಮ್ಮಣಿಯಕ್ಕನೆಂದರೆ ಬಹಳವೇ ಪ್ರೀತಿ. ಅಲ್ಲದೆ, ಅವಳ ಕುರಿತು ಅಚ್ಚರಿ. ಅಮ್ಮಿಣಿಯಕ್ಕನಿಗೆ ಇವಳಂತಹ ಮಗಳು ಹುಟ್ಟಬೇಕೆಂಬ ಪ್ರಾರ್ಥನೆ ಇದ್ದರೆ.. ಈಕೆಗೆ ಆ ಪ್ರಾರ್ಥನೆ ಫಲಿಸದಿರಲೆಂಬ ಮರು ಪ್ರಾರ್ಥನೆ. ಏಕೆಂದರೆ, ಮಗಳು ಹುಟ್ಟಿದರೆ ಈಕೆಯ ಮೇಲಿನ ಪ್ರೀತಿ ಕಡಿಮೆಯಾದರೆ..! ಆದರೆ, ಅಮ್ಮಿಣಿ ಅವಳ ನಿಜ ಅಕ್ಕನಾಗಿರಲಿಲ್ಲ. ಮನೆಯವರೆಲ್ಲರಿಗೂ ಅಮ್ಮಿಣಿಯ ಮೇಲೆ ಅದೇನೋ ಅಕ್ಕರೆ. ಆದರೆ, ಅಮ್ಮಿಣಿಯ ಬದಲಾದ ಬದುಕು ಆಕೆಯನ್ನು ಮತ್ತೆಲ್ಲಿಕೋ ಸೆಳೆದೊಯ್ದಿತ್ತು. ಅಮ್ಮಿಣಿ ಅಕ್ಕನ ಸಾವು, ಅವಳ ಮಾತುಗಳು ಹಾಗೂ ಅಮ್ಮನಿಗೆ ಹಾಗೂ ಈಕೆಗಷ್ಟೇ ತಿಳಿದಿದ್ದ ಸತ್ಯ ಎಲ್ಲವೂ ಸೇರಿ ಕಾಡುವಂತೆ ಮಾಡಿದ ಕಥೆ.
ಒಂದು ಕಿರು ಭೇಟಿ: ಆತ ಬರೆದಿದ್ದ ಕಥೆಯ ಪಾತ್ರ ಇಂದುಮತಿ ಆತನ ಎದುರಿಗೆ ಬಂದು ಪರಿಚಯಿಸಿಕೊಂಡಾಗ ಆತನಿಗೆ ಅಪರಿಚಿತ ಭಾವ. ಎಂದಿಗೂ ನಿಲ್ಲದ ಪಾತ್ರವೊಂದು ಕಣ್ಣೆದುರಿಗೆ ಬಂದರೆ ಬಂದು "ನನ್ನ ಕಥೆಯನ್ನೇ ಬರೆದಿದ್ದೀರ. ನನ್ನದೇ ಹೆಸರು ಬಳಸಿದ್ದೀರ. ಆದರೆ, ಆ ಕಥೆಯಲ್ಲೊಂದು ಕಡೆ ತಪ್ಪಾಗಿದೆ." ಎಂದು ಹೇಳಿದ ಅವಳ ಮಾತಿಗೆ ಆತನ ಪ್ರತಿಕ್ರಿಯೆ ಏನಿತ್ತು? ಅಷ್ಟಕ್ಕೂ ಅವಳು ಬಂದಿದ್ದು ತಪ್ಪಿನ ಬಗ್ಗೆ ಹೇಳಲೆಂದು ಎಂದಾಗ, ಮುಂದುವರಿಯುವ ಮಾತುಕತೆ ಹೊಸ ಕಥಾಲೋಕವೊಂದನ್ನೇ ಮುಂದಿಟ್ಟಿದೆ.
ಆಕೆ ಹೇಳುವ ಮಾತು ಹೀಗಿದೆ "ನೀವು ಕಥೆಗಾರರು ಸೂಕ್ಷ್ಮ ಒಳನೋಟ ಉಳ್ಳವರು ಎಂಬ ಒಂದು ಟ್ಯಾಗ್ ಲೈನ್ ಇಟ್ಟುಕೊಂಡು ಯಾರ ಬದುಕಿನೊಳಗಾದರೂ ಬೆಳಕು ಹಾಯಿಸಿ, ಹೊರ ಜಗತ್ತಿಗೆ ತೋರಿಸಿ ಮುಗುಮ್ ಆಗಿ ಬಿಡಬಲ್ಲಿರಿ. ಅವರು ಮಾತ್ರ ಜಗತ್ತಿನ ಕಣ್ಣಿನಿಂದ ಬೆತ್ತಲಾಗುತ್ತಾರೆ. ನಿಮ್ಮ ಅಂತಃಕರಣದ ಕಣ್ಣಿಗೆ ಅದೆಲ್ಲಾ ಕಾಣುವುದಿಲ್ಲ. ನಿಜ ಹೇಳಬೇಕೆಂದರೆ ಈ ಕಥೆಗಾರರ ಬಳಿ ಯಾವ ಕಾರಣಕ್ಕೂ ಕಷ್ಟ-ಸುಖ ಹೇಳಿಕೊಳ್ಳಬಾರದು. ನಮ್ಮ ಕಷ್ಟ ಅವರಿಗೆ ಕಥೆಯಂತೆ ಕಾಣಿಸುತ್ತದೆ."
ಇದು ಓದುಗರು ಹಾಗೂ ಕಥೆಗಾರನಾಗಿ ಎರಡು ಕಡೆಯಿಂದಲೂ ವಿಭಿನ್ನ ತರ್ಕ ಹುಟ್ಟಿಸುವ ಮಾತು.
ಗೋಪಣ್ಣ, ಇಂದುಮತಿ, ಆಲ್ ಇಂಡಿಯಾ ರೇಡಿಯೋ, ಶಾಂತಿ, ಸೀತ ಹೀಗೆ ಎಲ್ಲರೂ ಇರುವ ಕಥೆ ಇಲ್ಲಿದೆ.
ಮೊದೆ : ಅಪ್ಪ-ಅಮ್ಮನ ಜೊತೆ ಅತ್ತೆ ವಿಧವೆಯಾದ ನಂತರ ಅವರ ಮಕ್ಕಳು ಸರಸ್ವತಿ , ದಿನೇಶರೊಂದಿಗೆ ಬಂದಿದ್ದ ದಿನಗಳಲ್ಲಿ ಅತ್ತೆ ಮಗಳು ಹಾಗೂ ಅವನ ನಡುವೆ ಇದ್ದ ಪ್ರೀತಿ.. ಮನೆಯವರಲ್ಲರ ಸಮ್ಮತದೊಂದಿಗೆ ಪ್ರೀತಿಸುತ್ತಿದ್ದ ಅವನು ಮತ್ತು ಸರಸ್ವತಿ. ಸ್ವಂತ ಮನೆ, ತೋಟ, ಊರಿನಲ್ಲಿನ ಗೌರವ, ನೆಮ್ಮದಿಯ ಬದುಕು. ಆದರೆ, ಅದೆಲ್ಲವನ್ನೂ ಬಿಟ್ಟು ಒಂದೇ ದಿನದಲ್ಲಿ ನೆಲಕಚ್ಚಿದ ಮನೆಯ ವಾತಾವರಣದಿಂದ ಎದ್ದು ಹೊರಟಿದ್ದ. ಅವನಿಗೆ ಇದ್ದಿದ್ದ ಯೋಚನೆಯಾದರೂ ಏನು..? ಅಷ್ಟಕ್ಕೂ ಅಷ್ಟೊಂದು ವರ್ಷಗಳ ನಂತರ ಮರಳಿ ಬಂದದಾದರೂ ಏಕೆ..? ನೆನಪು ಹಾಗೂ ನೋವಿನ ಕಥೆಯ ಜೊತೆ ಅನಿರೀಕ್ಷಿತ ಸನ್ನಿವೇಶದ ಸತ್ಯ ಹಾಗೂ ಅಸತ್ಯತೆಗಳು ಇಲ್ಲಿವೆ. ಹೊನ್ನಿ ಅಕಸ್ಮಾತ್ ಸಿಕ್ಕು ಸತ್ಯವನ್ನು ಅರುವದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಓದಿ ನೋಡಿ.
ಎರಡು ಹಕ್ಕಿಗಳು :
ಅಮೃತ ಅವಳಿಗೆ ಅಕ್ಕ. ಅಮ್ಮುವಿನ ಹೆರಿಗೆಯಲ್ಲಿ ಅವಳ ತಾಯಿ ತೀರಿ ಹೋಗಿದ್ದ ನಂತರ ಅಮ್ಮುವಿನ ಅಪ್ಪ ನೇಣು ಹಾಕಿಕೊಂಡು ಸತ್ತು ಹೋಗಿದ್ದ. ಒಳ್ಳೆಯ ಮನುಷ್ಯ ಹಾಗೂ ಅಪರೂಪದ ಚೆಲುವೆ, ದೊಡ್ಡಮ್ಮನ ಮಗಳು ಅಮೃತ ಮೇಲೆ ಅಜ್ಜಿಗೆ ಬಹಳ ಕೋಪ. ಅಪ್ಪ-ಅಮ್ಮನನ್ನು ತಿಂದುಕೊಂಡವಳೆಂದು. ಆದರೆ, ಈಕೆಯ ತಾಯಿ ಮಾತ್ರ ತನ್ನ ಸ್ವಂತ ಮಗುವೇ ಎಂಬಂತೆ ಸಾಕಿದಳು. ಕಾಲಚಕ್ರ ಅಲ್ಲಿಂದ ಬಹಳಷ್ಟು ಮುಂದೆ ಓಡಿತು. ಈಗ ಸಾವಿನಂಚಿನಲ್ಲಿದ್ದ ಅಮ್ಮು ಈಕೆಗೆ "ನನ್ನ ಬಗ್ಗೆ ಕಥೆ ಬರೆ. ನನಗೆ ಇನ್ನೂ ಬದುಕಬೇಕು. ನಿನ್ನ ಕಥೆಗಳಲ್ಲಿ ಬದುಕುವೆ. ನಿಜವನ್ನು ಮಾತ್ರ ಬರೆ. ನಮ್ಮಿಬ್ಬರ ಬಗ್ಗೆ ಮಾತ್ರ ಬರೆ." ಎಂದಿದ್ದಳು. ಅವಳ ಸಾವು ಪಾರುವನ್ನು ತಲ್ಲಣಗೊಳ್ಳುವಂತೆ ಮಾಡಿದ್ದು ಹಾಗೂ ಹೆಚ್ಚು ಕಾಡಿದ್ದಕ್ಕೆ ಕಾರಣ ಅವರಿಬ್ಬರ ಮಧ್ಯೆ ಇದ್ದ ಪ್ರೀತಿಯಲ್ಲ ಹಾಗಾದರೆ ಮತ್ತೇನು..? ಮಾನವೀಯತೆ ಸತ್ತ, ಗೋಮುಖ ವ್ಯಾಘ್ರದಂತಹ ಮುಖವಾಡ ಹಾಕಿಕೊಂಡ ಪಾತ್ರಗಳನ್ನು ಕಂಡಾಗ ತಲ್ಲಣವಾಗಿದ್ದಂತೂ ನಿಜ.
ಬೇಟೆ : ಮಾಲಿಂಗ ಸಣ್ಣವ್ವನನ್ನು ಮದುವೆಯಾಗಿ ಕರೆತಂದು ಒಂದೇ ವಾರಕ್ಕೆ ಮನೆ ಬಿಟ್ಟು ಎತ್ತಲೋ ಕಾಣೆಯಾಗಿದ್ದ. ಆದರೆ, ಅವನು ವಾಪಸ್ ಬಂದಾಗ ಆತನ ಲೋಕವೇ ಬೇರೆಯಾಗಿತ್ತು. ಸಣ್ಣಮ್ಮ ನಂತರ ಊರಿನಲ್ಲಿ ಏನು ಭೇಟಿದ್ದಳು ಎಲ್ಲರ ಮನೆ ಹೊಕ್ಕು ಬರುತ್ತಿದ್ದಳು. ಅದಕ್ಕೆ ಊರಿನಲ್ಲಿ ಒಬ್ಬರಿಗೆ ಒಂದಲ್ಲ ಒಂದು ಬಗೆಯಲ್ಲಿ ಅವಶ್ಯಕತೆ ಇರುತ್ತಿತ್ತಾದರೂ ಅವಳ ಮೇಲೆ ಏನೋ ಒಂದು ಕಣ್ಣಿತ್ತು. ಆಕೆ ತನ್ನಷ್ಟಕ್ಕೆ ತಾನು ಸಂತೋಷವಾಗಿರುವುದು ಹಲವರಿಗೆ ಒಂದು ರೀತಿಯ ಕಸಿವಿಸಿ ಉಂಟು ಮಾಡುತ್ತಿದ್ದು. ಆಕೆ ಊರು ಬಿಡುವ ಮುನ್ನ ಬಿಡಿಬಿಡಿಯಾಗಿ ಕಂಡ ಅವಳ ಚಿತ್ರಗಳನ್ನು ಜೋಡಿಸಿದಾಗ ಸಿಕ್ಕ ಚಿತ್ರ ತಲ್ಲಣಿಸುವಂತೆ ಮಾಡುತ್ತದೆ
ಈ ಕತೆಗಳಲ್ಲಿ ಹೆಣ್ಮನದ ಅಂತರಂಗದ ತಲ್ಲಣಗಳ ತಣ್ಣನೆಯ ಚಿತ್ರಣ ಕಾಣುತ್ತದೆ. ಸರಿ-ತಪ್ಪುಗಳನ್ನು ಬದಿಗಿಟ್ಟು ಆಯಾ ಪಾತ್ರಗಳ ಮುಖೇನ ನೋಡಿದರೆ ಇಲ್ಲಿನ ಕಥೆಗಳು ಹೆಚ್ಚು ಗಾಢವಾಗುತ್ತಾ ಕಾಡುತ್ತವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ