ಕತೆ : ಕಟ್ಟಿಟ್ಟ ವೈಧವ್ಯ
ಲೇಖಕಿ : ಎಸ್. ಮಂಗಳಾ ಸತ್ಯನ್
ಲೇಖಕಿ ಎಸ್. ಮಂಗಳಾ ಸತ್ಯನ್ ಅವರು ಈ ಕತೆಯಲ್ಲಿ ಬೆಳಗಾಗುತ್ತಿರುವುದನ್ನು ಕಟ್ಟಿಕೊಟ್ಟಿರುವ ಸಾಲುಗಳು ಇಂತಿವೆ.
"ಸರಿದು ಹೋದ ಇರುಳಿನ ನೆನಪೆಂಬಂತೆ ಆಗಸದಲ್ಲಿ ಇನ್ನೂ ಅಲ್ಲೊಂದು ಇಲ್ಲೊಂದು ತಾರೆಗಳು ಮಿನುಗುಟ್ಟುತ್ತಿವೆ. ಆಗ ತಾನೆ ಗೂಡು ತೊರೆದ ಹಕ್ಕಿಗಳು ಭಾನುವಪ್ಪಿ ನಡೆದಿದೆ. ಹೆಣ್ಣುಮಕ್ಕಳು ಪೈಪೋಟಿ ಎಂಬಂತೆ ಮನೆಯ ಮುಂದೆ ಸಾರಣೆ, ಕಾರಣೆ ಮಾಡಿ ರಂಗವಲ್ಲಿಗಳನ್ನು ಹಾಕುತ್ತಿದ್ದಾರೆ."
ಹೀಗೆ ನಸುಕಿನಲ್ಲಿ ಊರು ಎಚ್ಚರವಾಗುವುದರ ಜೊತೆಗೆ ತಿರುಮಕೂಡಲಿನಲ್ಲಿ ಪ್ರೇಮಾನಂದಜೀಯವರ ಭಜನೆಯೂ ಸಾಗುತ್ತಿತ್ತು. ಪ್ರೇಮಾನಂದಜೀಯವರು ತಿರುಮಕೂಡಲಿಗೆ ಬಂದದ್ದು ಇದು ಎರಡನೆಯ ಬಾರಿ. ಆದರೆ, ಈ ಬಾರಿ ಊರಿನ ಜನತೆಗೆ ಅತೃಪ್ತಿ, ಅಸಮಾಧಾನವಿತ್ತು. ಆದರೆ, ಅವರ ಸ್ಥಾನಮಾನಕ್ಕೆ ಬೆಲೆ ಕೊಟ್ಟು ಅದನ್ನು ಹೇಳಿರಲಿಲ್ಲವಷ್ಟೇ..
ಸ್ವಾಮೀಜಿ ಮೊದಲ ಬಾರಿ ಬಂದಾಗ ಊರಿನವರ ಆಗ್ರಹದಿಂದ ಒಂದು ತಿಂಗಳ ಕಾಲ ಮಾತ್ರ ಇದ್ದವರು. ಈ ಬಾರಿ ಮೂರು ತಿಂಗಳಾದರೂ ಹೊರಡುವ ಸೂಚನೆಯನ್ನೇ ಕೊಟ್ಟಿರಲಿಲ್ಲ. ಪಟೇಲ ರಾಮಪ್ಪನವರು ಪ್ರೇಮಾನಂದರ ವಿಚಾರದಲ್ಲಿ ಹೆಚ್ಚು ಆತ್ಮೀಯತೆ ಹೊಂದಿದವರಾಗಿದ್ದರಿಂದ ಊರಿನಲ್ಲಿ ಅತೃಪ್ತಿ, ಅಸಮಾಧಾನಗಳನ್ನು ತೋರ್ಪಡಿಸಿಕೊಳ್ಳುವ ಧೈರ್ಯವಿರಲಿಲ್ಲ.
ನೆರೆಹಳ್ಳಿಗೆ ಕಾರ್ಯವಾಸಿಯಾಗಿ ಹೋಗಿದ್ದ ಪಟೇಲ ರಾಮಪ್ಪನವರು ಊರಿನ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ ನಸುಕಿನಲ್ಲಿ ಇನ್ನೂ ಕಾರ್ಗತ್ತಲೆ. ಧನುರ್ಮಾಸದ ಆ ಸಮಯದಲ್ಲಿ ಪಟೇಲರು ತಮ್ಮಿಂದ ಎರಡು ಫರ್ಲಾಂಗ್ ದೂರದಲ್ಲಿದ್ದ ಒಂದು ಮನೆಯಿಂದ ಇಳಿದು ಹೋದ ವ್ಯಕ್ತಿಯನ್ನು ಕಂಡು ಬೆಚ್ಚಿದ್ದರು. ಮನೆಯ ಅರಿವಾದರೂ ಆ ವ್ಯಕ್ತಿಯ ಕುರಿತು ತಾವು ನೋಡಿದ್ದು ನಿಜವೇ ಎಂಬಷ್ಟು ಸಂಶಯ.
ಅರೆಮನಸ್ಸಿನಿಂದಲೇ ಪೂಜೆ ಮುಗಿಸಿ ತಮ್ಮ ಸಂದೇಹವನ್ನು ಯಾರನ್ನು ಹೇಳಿಕೊಳ್ಳಲಾಗದೆ ಸುಮ್ಮನಿದ್ದವರು, ರಾತ್ರಿ ತಮ್ಮ ಪತ್ನಿ ಪಾರ್ವತಿಯನ್ನು ತಾವು ನೋಡಿದ್ದ ಮನೆಯ ಶಾರದಮ್ಮನ ನಡತೆಯ ಕುರಿತು ವಿಚಾರಿಸಿದರು. ಊರಿಗೆ ಊರೇ ಮಾತನಾಡುತ್ತಿದ್ದ ವಿಚಾರ ಪಟೇಲರಿಗೆ ಈಗ ತಿಳಿದಿತ್ತಷ್ಟೇ..
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುತ್ತಾ ಈಗಲೇ ಪರೀಕ್ಷಿಸಲು ಶಾರದಮ್ಮನ ಮನೆ ಬಾಗಿಲು ಬಡಿದರು. ಪ್ರೇಮಾನಂದಜೀಯವರು ಸಿಕ್ಕಿಬಿದ್ದಿದ್ದರು.
ನಂತರ ತಿಳಿದ ವಿಚಾರವೆಂದರೆ.. ಆತ ಪ್ರೇಮಾನಂದನ ವೇಷದಲ್ಲಿದ್ದ ಶಾರದಮ್ಮನ ಗಂಡ ಸುಬ್ಬರಾಯಪ್ಪ, ಕೊಲೆಯ ಆಪಾದನೆಯಿಂದ ತಲೆಮರೆಸಿಕೊಂಡು ಹೋಗಿದ್ದವನು. ಮಲ್ಪೆಯ ಸಮುದ್ರದ ದಂಡೆಯಲ್ಲಿ ಸುಬ್ಬರಾಯಪ್ಪನ ಶವ ಸಿಕ್ಕಿ ಅಂತ್ಯಸಂಸ್ಕಾರವು ಆಗಿತ್ತು. ಮುಖ ಕಾಣದಿದ್ದರಿಂದ ಆತನ ಬಟ್ಟೆ ಗುರುತಿನ ಮೇಲೆ ಆತನನ್ನು ಸುಬ್ಬರಾಯಪ್ಪನೆಂದು ತೀರ್ಮಾನಿಸಿದರು.
ನಿಜವನ್ನು ತಿಳಿಯದ ಜನ ಸುಳ್ಳನ್ನು ತಪ್ಪಾಗಿ ತಿಳಿದಿದ್ದರಿಂದ ಸುಳ್ಳಿನ ಪರದೆಯನ್ನು ತೆಗೆಯಲೇಬೇಕಾಗಿ ಬಂದಿತು. ಸುಬ್ಬರಾಯಪ್ಪ ಪೊಲೀಸರ ವಶವಾಗಿ ಮರಣದಂಡನೆಗೂ ಗುರಿಯಾಗಿದ್ದ. ಶಾರದಮ್ಮ ಈ ಬಾರಿ ನಿಜಕ್ಕೂ ವಿಧವೆಯಾಗಿದ್ದಳು.
ಆದರೆ, ಇದಾದ ನಂತರ ಪಟೇಲರಿಗೆ ಪಾಪಪ್ರಜ್ಞೆ ಕಾಡತೊಡಗಿತ್ತು. ಶಾರದಮ್ಮನ ಬಳಿ ನಿಜ ವಿಚಾರ ತೆರೆದಿಟ್ಟರು. ಈ ವೈಧವ್ಯ ಅನುಭವಿಸಬೇಕಾಗಿದ್ದು ನಿಜವಾಗಿಯೂ ಶಾರದಮ್ಮನಲ್ಲ.. ಪಟೇಲರ ಪತ್ನಿ ಪಾರ್ವತಮ್ಮ.
ಕೊಲೆಯಾದ ಹುಡುಗಿ ಚೆನ್ನಿಯನ್ನು ಪಟೇಲರು ಬಲಾತ್ಕರಿಸಲು ಹೋಗಿ ಆಕೆ ಪ್ರತಿಭಟಿಸಿದಾಗ ಯಾರೋ ಮರೆಯಿಂದ ಕವಣೆಯ ಕಲ್ಲನ್ನು ಬಲವಾಗಿ ಬೀಸಿದ್ದರು. ಅದೇ ಸಂದರ್ಭವನ್ನು ಉಪಯೋಗಿಸಿಕೊಂಡು ತಪ್ಪಿಸಿಕೊಳ್ಳಲಿದ್ದ ಚೆನ್ನಿಯನ್ನು ಕೈಲಿದ್ದ ಕೋಲಿನಿಂದ ಹೊಡೆದಾಗ ಬಲವಾಗಿ ಪೆಟ್ಟು ತಿಂದು ಶವವಾಗಿದ್ದಳು. ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದ ಸುಬ್ಬರಾಯಪ್ಪ ತಾನೇ ಹೊಡೆದ ಕವಣೆಕಲ್ಲಿನಿಂದ ಪೆಟ್ಟು ತಿಂದು ಸತ್ತಿದ್ದಾಳೆಂದು.. ತಾನೇ ಕೊಲೆ ಮಾಡಿದ್ದೇನೆಂದು ತಿಳಿದು ತಪ್ಪಿಸಿಕೊಂಡಿದ್ದ.
ನಿರಪರಾಧಿಯೊಬ್ಬ ತಾನೇ ಅಪರಾಧಿ ಎಂದು ಒಪ್ಪಿಕೊಂಡಾಗ ಸ್ಥಾನಮಾನಗಳಿಗಾಗಿ ಸುಮ್ಮನಾಗಿದ್ದ ಪಟೇಲರು ಈಗ ಶಾರದಮ್ಮನ ಬಳಿ ಬಂದಿದ್ದರು.
"ತಪ್ಪು ಮಾಡೋವಾಗ ಬರದಿದ್ದ ಸ್ಥಾನಮಾನಗಳ ಯೋಚನೆ ಅದರ ಪ್ರತಿಫಲ ಅನುಭವಿಸಬೇಕಾಗಿ ಬಂದಾಗ ಬರೋದು ಸಹಜ ತಾನೆ? ಹೋಗಲಿ ಬಿಡಿ. ಒಬ್ಬ ಗಣ್ಯವ್ಯಕ್ತಿಗಳ ಗೌರವ ಉಳಿಸೋದಕ್ಕೋಸ್ಕರ, ನನ್ನವರು ದೊಡ್ಡ ತ್ಯಾಗವನ್ನೇ ಮಾಡಿದ್ದಾರೆ ಅಂತ ನಾನು ಹೆಮ್ಮೆ ಪಡಬೇಕಾಗಿದೆ."
ಹೀಗೆ ಶಾರದಮ್ಮನಿಂದ ಹಲವಾರು ಮಾತುಗಳ ಚಾಟಿಯೇಟು ಪಟೇಲರಿಗೆ ಸಿಗುತ್ತಿತ್ತು. ಕೊನೆಯಲ್ಲಿ ಆಕೆ ಮಾಡಿದ ಮಾತುಗಳು ಪಟೇಲರ ಹೃದಯವನ್ನು ಪಾಪದ ಅಗ್ನಿ ದಹಿಸುತ್ತಲೇ ಇರುವಂತೆ ಮಾಡುವ ಶಕ್ತಿ ಹೊಂದಿತ್ತು.
ಮಾಡಿದ ತಪ್ಪಿಗೆ ಶಿಕ್ಷೆಗಿಂತಲೂ ಹೆಚ್ಚು ಅವಶ್ಯಕವಾದದ್ದು ಕ್ಷಮೆ ಎನ್ನುವ ಸಂದೇಶ ನೀಡುವ ಕತೆ ಇದು.
1982-83 ರಲ್ಲಿ ಡಾ|| ವೀಣಾ ಶಾಂತೇಶ್ವರ ಅವರು ಸಂಪಾದಿಸಿರುವ 'ಲೇಖಕಿಯರ ಕಥಾಸಂಕಲನ' ಪ್ರಕಟಿತವಾಗಿರುವ ಕತೆ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ