ಭಾನುವಾರ, ಏಪ್ರಿಲ್ 26, 2026

ಮಾಯೆ (ಪುಸ್ತಕ ಯಾನ - 410)


ಪುಸ್ತಕದ ಶೀರ್ಷಿಕೆ : ಮಾಯೆ

ಲೇಖಕರು : ಆಶಾ ರಘು 

ಪ್ರಕಾಶಕರು : ಸಾಹಿತ್ಯಲೋಕ ಪ್ರಕಾಶನ 

ಪ್ರಥಮ ಮುದ್ರಣ : 2021

ಪುಟಗಳು : 240

ಬೆಲೆ : 250 ರೂ. 


ಆಶಾ ರಘು ಅವರ ಈ ಕಾದಂಬರಿಗೆ ಡಾ. ಕೆ. ಎನ್. ಗಣೇಶಯ್ಯ ಅವರ ಬೆನ್ನುಡಿ ಇದೆ. ಈ ಕಾದಂಬರಿಯ ಕಥಾವಸ್ತು ಅಲ್ಲಮಪ್ರಭುವಿನ ವಚನದಿಂದ ಪ್ರೇರಿತವಾದದ್ದು..


ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ

ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ 

ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ 

ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರ || 

ಎಂಬ ಅಲ್ಲಮಪ್ರಭುವಿನ ವಚನ ಮಾಯೆಯ ಕುರಿತು ಹೇಳುತ್ತದೆ.


ಹೆಣ್ಣು, ಹೊನ್ನು, ಮಣ್ಣುಗಳ ಹಿಂದೆ ಹೋದವರು ನೆಮ್ಮದಿಯನ್ನು ಕಳೆದುಕೊಳ್ಳುವುದು ಹೌದು. ಇದು ಇತಿಹಾಸ ಹಾಗೂ ಪುರಾಣಗಳ ಕಥೆಗಳಲ್ಲಿ ಒಂದಲ್ಲಾ ಒಂದು ಬಗೆಯಲ್ಲಿ ಚಿತ್ರಿತವಾಗಿದೆ. ಆದರೆ, ಈ ಮೂರರ ಅತಿಯಾಸೆಯನ್ನು ತೊರೆದರೆ ಮನುಷ್ಯನಿಗೆ ನಿಜವಾದ ಸುಖ ಅನುಭವಕ್ಕೆ ಬರುತ್ತದೆ. ಆ ಬದಲಾವಣೆಯ ಘಟ್ಟ ಅವನ ಜೀವನದಲ್ಲಿ ಮಹತ್ವವಾದದು. ಈ ಕಾದಂಬರಿಯಲ್ಲಿ ಇಂತಹ ಬದಲಾವಣೆಯನ್ನು ಪ್ರಮುಖವಾಗಿ ಗುರುತಿಸಬಹುದು. ಇಲ್ಲಿ ಕಳೆದು ಹೋದ ತನ್ನ ಗತದ ನೆನಪುಗಳನ್ನು ಮೆಲುಕು ಹಾಕುವ ಪಾತ್ರಗಳು ಕಾಣಸಿಗುತ್ತಾರೆ. ಚಾರಿತ್ರಿಕ ಹಿನ್ನೆಲೆಯಲ್ಲಿ ಕಥಾಹಂದರ ಬೆಳೆಯುತ್ತಾ ಸಾಗುತ್ತದೆ. ಮನುಷ್ಯನ ಬದುಕು ಯಾವುದರಿಂದ ಉತ್ತಮವಾಗಬೇಕು ಹಾಗೂ ಯಾವೆಲ್ಲಾ ಬದಲಾವಣೆಗಳಿಂದ ಹಾಗೂ ಯಾವೆಲ್ಲಾ ಮಾಯೆಗಳಿಂದ ಪಾರಾಗಿ ಮುಂದೆ ಸಾಗಬೇಕು ಎಂಬ ನೀತಿಯುತ ಕಾದಂಬರಿ ಇದು.


ಜಯಕೀರ್ತಿ ತನಗೆ ಬಂದಿದ್ದ ವಿಷಮಶೀತ ಜ್ವರದಿಂದ ಬಳಲುತ್ತಿರುವಾಗ.. ತಾನು ಸತ್ತು ವೈಶಾಲಿಯ ಬಳಿಗೆ ಸಾಗಲಿ ಎಂದು ಆಶಿಸುತ್ತಾನೆ. ವೈಶಾಲಿಯ ತಂಪಾದ ನೆನಪುಗಳು ಕಾಡಲು ಶುರುವಾಗುತ್ತವೆ. ಹೆಣ್ಣುಮಕ್ಕಳಿಲ್ಲದ ಜಯಕೀರ್ತಿಯ ತಾಯಿ ವೈಶಾಲಿಯನ್ನು ಆದರಿಸುವ ಬಗೆ, ಅಕ್ಕ-ಪಕ್ಕದ ಮನೆಯವರಾದ ಅವರಿಬ್ಬರ ಒಡನಾಟ, ಅತ್ತೆಯ ಮಗಳೆಂದೇ ಆಕಿಯನ್ನು ಎಲ್ಲರೊಡನೆ ಪರಿಚಯಿಸುತ್ತಾ ಸಾಗುವ ಅವರಿಬ್ಬರ ಬದುಕು ಹರೆಯಕ್ಕೆ ಬರುವಷ್ಟರಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಪ್ರೇಮಪೂರಿತವಾಗಿರುತ್ತದೆ. ಇದು ಅವರಿಬ್ಬರ ಪೋಷಕರಿಗೂ ಬಾಯಿಬಿಟ್ಟು ಹೇಳದಿದ್ದರೂ ಅರಿವಾಗಿರುತ್ತದೆ. ಅದಕ್ಕೂ ಅವರ ಆಕ್ಷೇಪಣೆ ಏನೂ ಇರುವುದಿಲ್ಲ.


ಪ್ರೀತಿ ಇದ್ದಂತೆ ದ್ವೇಷವೂ ಪಕ್ಕದಲ್ಲಿಯೇ ಇತ್ತು. ಪಕ್ಕದಲ್ಲಿಯೇ ದೊಡ್ಡಪ್ಪ ಮೇರಕಯ್ಯ ಹಾಗೂ ಆತನ ನಾಲ್ವರೂ ಮಕ್ಕಳು. ತಮ್ಮನಿಗೆ ಸರಿಯಾದ ಪಾಲನ್ನು ನೀಡದೆ ಮೋಸ ಮಾಡಿರುವುದಲ್ಲದೆ, ಇವರ ಜಮೀನನ್ನು ಒತ್ತರಿಸಿಕೊಂಡು ತೊಂದರೆ ಕೊಡುತ್ತಲೇ ಇರುತ್ತಾರೆ. ಒಮ್ಮೆ ವೈಶಾಲಿಕೆ ತೊಂದರೆ ಕೊಟ್ಟಾಗ ಅವರಿಗೆ ಸರಿಯಾದ ಪಾಠ ಕಲಿಸಿದ ಜಯಕೀರ್ತಿಯ ರೋಷವನ್ನು ಕಾಣಬಹುದು.


ಜಯಕೀರ್ತಿಯ ಆಪ್ತಮಿತ್ರ ಮದನಕುಮಾರ. ಗರಡಿ ಮನೆಯಲ್ಲಿ ಒಂದೂವರೆ ವರ್ಷದ ನಂತರ ಕಣ್ಣಿಗೆ ಬಿದ್ದವನು. ದೇಹಧಾರ್ಢ್ಯವಿಲ್ಲದ, ಕೀರಲು ಧ್ವನಿಯ, ಜಯಕೀರ್ತಿಯ ಬಾಹುಬಲಕ್ಕೆ ಹೊಂದಿಕೆಯೇ ಆಗದ ಮದನಕುಮಾರ. ಇವರಿಬ್ಬರ ಸ್ನೇಹ ಬೆಳೆದದ್ದೇ ಒಂದು ರೋಚಕ ಕಥೆ ಓದಿನೋಡಿ.


ತಾಯಿ ಇಳಾದೇವಿ ಹಾಗೂ ತಂದೆ ಸಾನಗರು ಒಪ್ಪಿ ಮುತ್ತಳ್ಳಿಯ ಹೆಣ್ಣು ಮಂಗಳೆಯನ್ನು ಜಯಕೀರ್ತಿಗೆ ವಿವಾಹ ಮಾಡಿಸುತ್ತಾರೆ. ಅಷ್ಟು ಪ್ರೇಮಿಸುತ್ತಿದ್ದ ವೈಶಾಲಿ ಹಾಗೂ ಜಯಕೀರ್ತಿಯ ವಿವಾಹ ಏಕಾಗಲಿಲ್ಲ..? ವೈಶಾಲಿಯ ವಿವಾಹ ಯಾರೊಂದಿಗಾಯಿತು..? ಪ್ರೇಮವೈಫಲ್ಯವನ್ನು ಅನುಭವಿಸುತ್ತಿದ್ದ ಜಯಕೀರ್ತಿ ಮಂಗಳೆಯನ್ನು ಒಪ್ಪಿದ್ದು ಹೇಗೆ..? ಸುರೆಯ ದಾಸನಾಗಿದ್ದವನು ಸೈನ್ಯಕ್ಕೆ ಸೇರಿದ ನಂತರ ಹೇಗೆ ಬದಲಾದ..? ಡಕಾಯಿತ ಸೇಸನಾಯಕನನ್ನು ಹಿಡಿಯಲು ಜಯಕೀರ್ತಿಯನ್ನು ತಂಡದ ನಾಯಕನನ್ನಾಗಿಸಿ ಒಪ್ಪಿಸಿದ ಕಾರ್ಯ ಎಷ್ಟು ಸಫಲವಾಯಿತು ಓದಿ ನೋಡಿ.


ಮುಂದೆ ಜಯಕೀರ್ತಿ ಬಹಳವೇ ಬದಲಾಗುತ್ತಾನೆ. ಆತನಿಗೆ ಮಂಗಳೆಯ ಪ್ರಭಾವದಿಂದ ತನ್ನ ದಾಯಾದಿಗಳಿಂದ ತನಗೆ ಬರಬೇಕಾಗಿದ್ದ ಭೂಮಿಯನ್ನು ಆವರಿಸಿಕೊಳ್ಳುವ ಮನಸ್ಸಾಗುತ್ತದೆ. ಅದನ್ನು ವಶಪಡಿಸಿಕೊಂಡದ್ದಷ್ಟೇ ಅಲ್ಲ... ಮುಂದೆ ಅದನ್ನು ಬತ್ತರಿಸಿ ಬೇಲಿ ಹಾಕಿಕೊಳ್ಳುವ ಕಾರ್ಯವನ್ನು ಮಾಡುತ್ತಾನೆ. ಅದಷ್ಟೇ ಅಲ್ಲದೆ, ಎಷ್ಟೋ ಭೂಮಿಗಳು ಈತನ ಪಾಲಾಗುತ್ತವೆ.


ಮಂಗಳೆಗೆ ವೈಶಾಲಿಯ ವಿಚಾರ ತಿಳಿದಿದ್ದರೂ ಆಕೆ ಅದು ತಿಳಿದಿದೆ ಎಂದು ತೋರಿಸಿಕೊಳ್ಳುವುದಿಲ್ಲ. ಆದರೆ, ಯಾವುದೋ ಒಂದು ಸಂದರ್ಭದಲ್ಲಿ ಅವಳಾಡಿದ ಮಾತಿನ ಪ್ರಭಾವದಿಂದ ಪತಿಗೃಹದಲ್ಲಿ ಪುಟ್ಟ ಮಗುವಿನೊಂದಿಗೆ ಸಾಂಗತ್ರಿಯಲ್ಲಿ ನೆಮ್ಮದಿಯಾಗಿದ್ದ ವೈಶಾಲಿಯನ್ನು ಶಿವಾಲಯಕ್ಕೆ ಬಂದಾಗ ಅಪಹರಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ತನ್ನವಳನ್ನಾಗಿಸಿಕೊಳ್ಳುವ ಪ್ರಯತ್ನ ನಡೆಸುತ್ತಾನೆ. ಮಂಗಳೆಯಾಡಿದ ಅಂತಹ ಮಾತಾದರೂ ಏನು..?


ವೈಶಾಲಿಗೆ ಮಹೇಶ್ವರಿಯನ್ನು ಕಾವಲಿಡುತ್ತಾನೆ. ಪತ್ನಿ ಮತ್ತು ಮಕ್ಕಳಿಗೂ ಈ ವಿಚಾರ ಹೊರಹೋಗದಂತೆ ಗೃಹಬಂಧನವಾಗುತ್ತದೆ. ಏನಾದರೂ ವೈಶಾಲಿ ಅವನಿಗೆ ಒಲಿಯುವುದಿಲ್ಲ. ಮುಂದೆ ನಿಧಿ ಶೋಧದ ಕಾರ್ಯಕ್ಕೆ ತೆರಳುವಾಗ ಆಕೆಯನ್ನು ಕೊಂಡಜ್ಜಿಯ ಮನೆಯಲ್ಲಿ ಇರಿಸಿ ಬಂದೋಬಸ್ತು ಮಾಡಿ ಹೊರಡುತ್ತಾನೆ ಜಯಕೀರ್ತಿ.


ಅಷ್ಟಕ್ಕೂ ಆತ ನಿಧಿ ಶೋಧಿಸಲು ಹೊರಡುವ ಕಥೆಯ ಹಿಂದೆ ಮದನಕುಮಾರನ ಗತ ಬಿಟ್ಟಿಕೊಳ್ಳುತ್ತದೆ. ಮದನಕುಮಾರ ರಾಜ ಕೀರ್ತಿ ದೇವನ ಮಗ ಗುಣ. ಕೀರ್ತಿದೇವನ ತಮ್ಮ ನಿತ್ಯದೇವನ ದುಷ್ಕೃತ್ಯದಿಂದ ಉಂಟಾದ ಕ್ರಿಯೆ ಮತ್ತು ಯುದ್ಧದಲ್ಲಿ ತಂದೆ-ತಾಯಿಗಳಿಂದ ದೂರಾಗಿ ವೇಷ ಮರೆಸಿಕೊಂಡು ಬದುಕಬೇಕಾದ ಅನಿವಾರ್ಯತೆ ಇರುತ್ತದೆ. ಆತನಿಗೂ ನಿಜ ವಿಚಾರ ತಿಳಿದಿರುವುದಿಲ್ಲ. ಮದನಕುಮಾರನ ಸಾಕು ತಂದೆ ಆತನಿಗೆ ಸತ್ಯವನ್ನು ಹೇಳಿ ಜಯಕೀರ್ತಿ ಆತನ ಜೊತೆಯಾಗುವಂತೆ ಕೇಳಿಕೊಂಡು ಪ್ರಾಣ ಬಿಡುತ್ತಾನೆ. ಅಷ್ಟು ಆಪ್ತನಾಗಿದ್ದ ಮಿತ್ರ ಮದನಕುಮಾರನಿಗೆ ದ್ರೋಹ ಬಗೆಯುತ್ತಾನೆ ಜಯಕೀರ್ತಿ. ಜಯಕೀರ್ತಿ ನಿಧಿ ಶೋಧನೆಗೆ ಹೋಗುವ ಘಟನೆ, ಅದಕ್ಕೆ ಸಿಗುವ ಸುಳಿವುಗಳು ಆತನನ್ನು ಎಲ್ಲಿಗೆ ಕರೆದೊಯುತ್ತವೆ..? ನಿಧಿ ಶೋಧನೆಯ ಹಂತ ರೋಚಕ ಘಟ್ಟ.


ಈ ಪಯಣದಲ್ಲಿ ಆತನಿಗೆ ತನ್ನ ಮಿತಿಯ ಅರಿವಾಗುತ್ತದೆ. ಅರಿವು ಮೂಡಿಸಿದ ಘಟನೆ ಏನು..?


ಮದನಕುಮಾರ ತನ್ನ ಮಿತ್ರನನ್ನು ಕ್ಷಮಿಸುತ್ತಾನಾದರೂ.. ಮದನಕುಮಾರನ ಬದುಕು ಅರಮನೆಯೊಂದಿಗೆ ತಳುಕು ಹಾಕಿಕೊಳ್ಳುವುದಿಲ್ಲ. ಬದಲಾಗಿ ಆತ ಸಾಮಾನ್ಯನಂತೆ ಬದುಕು ಸಾಗಿಸಲು ಇಚ್ಚಿಸುವ ಪರಿ ಆದರ್ಶವೆನಿಸುತ್ತದೆ. ದೊರಕಿದ ನಿಧಿ ವಿನಿಯೋಗವಾದದ್ದು ಹೇಗೆ..? ನಿತ್ಯದೇವ ಬದಲಾಗಿದ್ದನೇ..? ಮದನಕುಮಾರನ ಬದುಕು ಹೇಗಿತ್ತು..?


ತಿರುಗಿ ಬಂದ ಜಯಕೀರ್ತಿಗೆ ಆಘಾತಗಳ ಸರಮಾಲೆಯೇ ಕಾದಿತ್ತು. ವೈಶಾಲಿಯ ಸಮಾಧಿ ಆತನಿಗೆ ಮತ್ತಷ್ಟು ಆಘಾತವನ್ನು ತರುತ್ತದೆ. ಈತನಿಲ್ಲದ ಸಂದರ್ಭದಲ್ಲಿ ಮಂಗಳೆ ಹಾಗೂ ಮಕ್ಕಳಿದ್ದ ಮನೆಗೆ, ಉತ್ತರಿಸಿಕೊಂಡಿದ್ದ ಭೂಮಿಗೆ ಸಂಚಕಾರ ಬಂದಿರುತ್ತದೆ. ಮುಂದೆ ವಿಚಾರಣೆ ನಡೆಯುತ್ತದೆ. ಈತನಿಗೆ ಶಿಕ್ಷೆ ಜಾರಿಯಾಗುತ್ತದೆ. ಮದನಕುಮಾರ ತನ್ನ ಪ್ರಭಾವ ಬಳಸಿ ಆತನನ್ನು ಪಾರು ಮಾಡುತ್ತಾನಾ..? 


ಹೆಣ್ಣು, ಹೊನ್ನು, ಮಣ್ಣು ಋಣವಿದ್ದಷ್ಟೇ ದಕ್ಕುವುದು. ಅದಕ್ಕೆ ಅತಿಯಾಸೆ ಮಾಡಲು ಹೊರಟರೆ, ಅದರ ಹಿಂದೆ ಬಿದ್ದವರು ಏನಾಗುತ್ತಾರೆ ಎಂಬುದು ಜಯಕೀರ್ತಿಯ ಬದುಕಿನಿಂದ ಅರಿವಾಗುತ್ತದೆ. ಆದರೆ, ಇಲ್ಲಿಂದ ಮುಂದೆ ಜಯಕೀರ್ತಿಯ ಬದುಕು ಹೇಗಿತ್ತು ಎಂಬುದು ಕಾದಂಬರಿಯಲ್ಲಿ ನಾವು ಗಮನಿಸಬೇಕಾದ ಪ್ರಮುಖ ಘಟ್ಟವಾಗುತ್ತದೆ. 


ಬದಲಾವಣೆ ಅಷ್ಟು ಸುಲಭವಲ್ಲ. ನಾವು ಬದಲಾದರೂ ಸುತ್ತಮುತ್ತಲಿನವರು ಅದನ್ನು ಅಷ್ಟು ಸುಲಭವಾಗಿ ಸ್ವೀಕರಿಸುತ್ತಾರೆಯೇ..? ಮಂಗಳೆ ಹಾಗೂ ಮಕ್ಕಳಾದ ಲಕ್ಷ್ಮಿ ಮತ್ತು ದಿಲೀಪರ ಬದುಕಿನಲ್ಲಿ ಉಂಟಾದ ಪ್ರಭಾವಗಳೇನು..? ಜಯಕೀರ್ತಿಯ ತೀರ್ಮಾನಕ್ಕೆ ಅವರೆಲ್ಲರ ಪ್ರತಿಕ್ರಿಯೆ ಹೇಗಿತ್ತು..?


ವೈಶಾಲಿಯ ಬದುಕು ಮಂಗಳೆಯ ಬದುಕು.. ಇಬ್ಬರ ಬದುಕಿನ ಬದಲಾವಣೆಗಳು ಇಲ್ಲಿ ಚಿತ್ರಿತವಾಗಿದೆ. ಈ ಕಾದಂಬರಿಯನ್ನು ನಾವು ವೈಶಾಲಿಯ ದೃಷ್ಟಿಯಲ್ಲಿ, ಮದನಕುಮಾರನ ದೃಷ್ಟಿಯಲ್ಲಿ, ಜಯಕೀರ್ತಿಯ ದೃಷ್ಟಿಯಲ್ಲಿ ಹಾಗೂ ಮಂಗಳೆಯ ದೃಷ್ಟಿಯಲ್ಲಿ ಕಾಣುತ್ತೇವೆ. ಆದರೆ, ಜಯಕೀರ್ತಿಯ ನಿರೂಪಣೆ ಪ್ರಮುಖವಾಗಿದೆ. ಒಂದೇ ಪ್ರಸಂಗಗಳು ಆಯಾ ವ್ಯಕ್ತಿಗಳ ಕಣ್ಣಲ್ಲಿ ಚತ್ರಿತವಾಗಿದ್ದನ್ನು ಇಲ್ಲಿ ಕಾಣಬಹುದು.


ಜಯಕೀರ್ತಿ ತನ್ನ ನೆನಪುಗಳಿಂದ ಹೊರಬಂದ ಸಂದರ್ಭವೇನು...? ಅವನ ವಾಸ್ತವ ಜೀವನದ ಚಿತ್ರಣವನ್ನು ಇಲ್ಲಿ ಓದಬಹುದು.


ಸುತ್ತಲಿರುವ ಸುಖವನ್ನು ಗ್ರಹಿಸದೆ, ಅದನ್ನು ಅನುಭವಿಸದೆ, ಮತ್ತಷ್ಟು ಮಗದಷ್ಟು ಎನ್ನುತ್ತಾ ಅತಿಯಾಸೆ ಪಡುತ್ತಾ ಮನದ ಆಸೆಗಳನ್ನು ಹಿಂಬಾಲಿಸಿ ಹೊರಟಾಗ ಉಂಟಾಗುವ ಮಾಯೆಗೆ ಬಲಿಯಾಗುವವರಿಗೆ ಎಚ್ಚರಿಕೆಯ ಪಾಠದಂತಿದೆ ಈ ಕಾದಂಬರಿ.


ಆಸಕ್ತಿಯಿಂದ ಓದಿಸಿಕೊಂಡು ಹೋಗುವ ನಿರರ್ಗಳ ನಿರೂಪಣಾ ಶೈಲಿ, ಚಂದದ ಕಥಾಹಂದರ ಜೊತೆಗೆ ಗಟ್ಟಿತನದ ಪಾತ್ರಗಳು ಓದಿನುದಕ್ಕೂ ಆವರಿಸುತ್ತವೆ. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ