ಪುಸ್ತಕದ ಶೀರ್ಷಿಕೆ : ಸಂಧ್ಯಾದೀಪ
ಲೇಖಕರು : ರಜನಿ ಭಟ್ ಕಲ್ಮಡ್ಕ
ಪ್ರಕಾಶಕರು : ನಿಮ್ಮ ಪುಸ್ತಕ ಪಬ್ಲಿಕೇಷನ್ಸ್
ಪ್ರಥಮ ಮುದ್ರಣ : 2022
ಪುಟಗಳು : 186
ಬೆಲೆ : 170 ರೂ.
ಈ ಕಾದಂಬರಿ ಓದಿ ಮುಗಿಸಿದಾಗ ಮನಸಲ್ಲಿ ಉಪ್ಪರಿಗೆಯ ವಾತಾವರಣ, ಕಪಾಟು, ಸಂಧ್ಯಾದೀಪ, ಶಾಂಭವಿ ಟೀಚರ್ ನ ಕಲ್ಪಿತ ರೂಪ ಎಲ್ಲವೂ ಅಚ್ಚಳಿಯದಂತೆ ಉಳಿದು ಹೋಯಿತು. ಅಲ್ಲದೆ, ಇದು ಲೇಖಕಿಯ ಮೊದಲ ಕಾದಂಬರಿ ಎಂದೆನ್ನಿಸಲಿಲ್ಲ. ಅಲೌಕಿಕ ಹಾಗೂ ಕೌಟುಂಬಿಕ ಚಿತ್ರಣ ಎರಡನ್ನು ಮಿಳಿತಗೊಳಿಸಿದಂತೆ ಚಿತ್ರಿಸಿರುವ ಈ ಕಾದಂಬರಿ ಹೆಚ್ಚು ಹಿಡಿಸಿತು. ಮುಂದೇನು.. ಮುಂದೇನು.. ಎಂದು ಊಹಿಸಲಾಗದಂತೆ, ಸುಲಭಕ್ಕೆ ಕಥೆಯನ್ನು ಹೀಗೆಯೇ ಎಂದು ನಿರ್ಧರಿಸಲಾಗದಂತೆ ಓದುಗರಲ್ಲಿ ಕುತೂಹಲದ ಅಂಶವನ್ನು ಮೂಡಿಸುತ್ತಲೇ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲಲ್ಲಿ ಮಲಯಾಳಂ ಮಾತುಗಳು ಹಾಗೂ ಕೇರಳದ ಶೈಲಿಯ ವಿಭಿನ್ನ ವಾತಾವರಣವೂ ಬಂದು ಹೋಗುವುದು ಕಾದಂಬರಿಯ ವಿಶೇಷ.
ಶ್ರೀನಿವಾಸ ಕಾಮತರು, ಜವಾನ ಅಯ್ಯಪ್ಪ ಇಬ್ಬರೂ ಜೊತೆಯಲ್ಲಿಯೇ ಶಾಲೆಯಿಂದ ಹೊರಬರುವುದು. ಕಾಮತ್ ಮೇಷ್ಟ್ರು ತಮ್ಮ ಕೆಲಸದಲ್ಲಿ ಅಚ್ಚುಕಟ್ಟು. ಅಂತೆಯೇ.. ಸಂಸಾರದಲ್ಲಿಯೂ ಅಮ್ಮನಿಗೆ ಮೆಚ್ಚಿನ ಮಗ. ರಾಮನವಮಿಯ ಪ್ರಯುಕ್ತ ವಿಶೇಷ ಮೀಟಿಂಗ್ ಎಂದು ಊರ ಕಮಿಟಿಯವರ ಮೀಟಿಂಗಿಗೆ ಕಮಿಟಿ ಅಧ್ಯಕ್ಷನಾಗಿ ಹಾಜರಾಗಲು ಹೊರಟಿದ್ದವರು ಅಯ್ಯಪ್ಪನಿಗೆ ಶಾಲೆಯ, ಅದರಲ್ಲಿಯೂ ಏಳನೇ ತರಗತಿಯ ಬಾಗಿಲ ಬೀಗವನ್ನು ಸರಿಯಾಗಿ ಹಾಕಲು ಹೇಳಿ ಹೊರಟರು.
ಶ್ರೀನಿವಾಸ ಕಾಮತರಿಗೆ ತಕ್ಕ ಪತ್ನಿ ಶಾಂಭವಿ ಟೀಚರ್. ಅವರಿಬ್ಬರೂ ಶಿಕ್ಷಕರಾಗಿದ್ದರಿಂದ ಕಾಮತರ ತಾಯಿಯನ್ನು ನೋಡಿಕೊಳ್ಳಲು ಚಂದಮ್ಮ ನೇಮಕವಾಗಿದ್ದರು. ಚಂದಮ್ಮನನ್ನು ತಮ್ಮ ಮನೆಯವರೆಂದೇ ಭಾವಿಸಿ ಆಕೆಯನ್ನು ಪ್ರೀತಿಯಿಂದ ವಿಚಾರಿಸಿಕೊಳ್ಳುತ್ತಿದ್ದರು ಶಾಂಭವಿ ಟೀಚರ್.
ಕಾಮತರ ತಾಯಿಯಂತೂ.. ಯಾವಾಗಲೂ ಮಗನನ್ನು ಕರೆತುತ್ತಿರುವುದು, ಮರೆವು ಅಷ್ಟೇ ಅಲ್ಲದೆ.. ತುರಿಕೆ ಎನ್ನುತ್ತಾ ವಿಪರೀತವಾಗಿ ಹಿಂಸೆ ಅನುಭವಿಸಿತ್ತಿದ್ದರು. ಇದೆಲ್ಲವೂ ವಯೋಸಹಜವೆಂದು ಸೊಸೆ ಅತ್ತೆಯನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು. ಅತ್ತೆಗೂ ಸೊಸೆಯ ಮೇಲೆ ಅಷ್ಟೇ ಪ್ರೀತಿ.
ರಾಮನವಮಿಗೆ ಇನ್ನು 9 ದಿನಗಳು ಇರುವಾಗ ಶಾಂಭವಿ ಟೀಚರಿಗೆ ರಾಮಮಾಸ ಆರಂಭವಾಯಿತು ಎಂದು ಲೆಕ್ಕ. ರಾಮಾಯಣ ಓದುವುದನ್ನು ಶುರು ಮಾಡುತ್ತಿದ್ದರು. ಅಲ್ಲದೇ, ಸಂಜೆ ಸಂಧ್ಯಾದೀಪವಿಡುವುದು ಅವರ ರೂಢಿ.
ಶ್ರೀನಿವಾಸ ಕಾಮತ್ ಹಾಗೂ ಶಾಂಭವಿ ಟೀಚರ್ ರದ್ದು ಅನುರೂಪದ ದಾಂಪತ್ಯ. ಕಾಮತ್ ಸರ್ ಮೂಲತಃ ಮಂಗಳೂರಿನವರಾದರೆ, ಶಾಂಭವಿ ಟೀಚರ್ ಕೇರಳದವರು. ಇವರಿಬ್ಬರ ವಿವಾಹವಾಗಿ 25 ವರ್ಷಗಳೇ ಸಂದಿದ್ದವು. ಕೇರಳದ ಸಂಪ್ರದಾಯವಾದ ನಿಳವಿಳಕ್ಕು ಅಥವಾ ಸಂಧ್ಯಾದೀಪವೆಂದರೆ ಶಾಂಭವಿ ಟೀಚರ್ ಗೆ ರಕ್ತದಲ್ಲಿ ಬಂದ ಪದ್ಧತಿ. ಅದನ್ನು ಅವರು ತಪ್ಪಿಸುತ್ತಿರಲಿಲ್ಲ. ಶಾಂಭವಿ ಟೀಚರ್ ಗೆ ಮಲಯಾಳಂ ಹಾಗೂ ಇಂಗ್ಲಿಷ್ ಎರಡರಲ್ಲಿಯೂ ಪರಿಣಿಯಿತ್ತು. ಇವರ ಆಪ್ತ ಸ್ನೇಹಿತೆ ಮೀನಾಕ್ಷಿ ಟೀಚರ್. ಎಷ್ಟೋ ಆಪ್ತವಿಚಾರ, ಗೊಂದಲಗಳನ್ನು ಅವರ ಬಳಿಯೇ ಹಂಚಿಕೊಳ್ಳುತ್ತಿದ್ದದ್ದು.
ಈ ಬಾರಿಯ ರಾಮನವಮಿಯಲ್ಲಿ ಅವರಿಗೆ ಬೇರೆಯದೇ ಅನುಭವವಾಗಿತ್ತು. ರಾಮನವಮಿಯ ನಾಟಕಕ್ಕಾಗಿ ಮೇಷ್ಟ್ರ ಮಾವನ ಪುಸ್ತಕ ಬೇಕೆಂದು ನಾಣಪ್ಪ ಶಾಂಭವಿ ಟೀಚರ್ ಬಳಿ ಮೇಷ್ಟ್ರೇ ಹೇಳಿ ಕಳುಹಿಸಿದ್ದಾರೆಂದು, ಅಟ್ಟದ ಮೇಲಿನಿಂದ ತೆಗೆಸಿಕೊಂಡಿದ್ದು.. ಜೊತೆಗೆ, ಅಲ್ಲಿ ಅವರಿಗೆ ನಿಗೂಢತೆಯ ಅನುಭವವಾಗಿದ್ದು, ಜೊತೆಗೆ ಪುಟ್ಟದಾದ ಹಣತೆಯಂತಹ ಬೆಳಕು ಸಹ ಖಂಡಿದ್ದು.. ಹೀಗೆ ಶುರುವಾದ ಈ ನಿಗೂಢತೆಯ ಕಥೆ ಮುಂದುವರೆದಿತ್ತು.
ಮೇಷ್ಟ್ರ ಮಾವ ಆನಂದ ಭಟ್ಟರು ತಮ್ಮ ಏಕಮಾತ್ರ ತಂಗಿ ಹಾಗೂ ಮಗನಿಗೆ ಆಶ್ರಯ ಕೊಟ್ಟ ಮನೆಯದು. ಆದರೆ, ಶ್ರೀನಿವಾಸ ಕಾಮತರನ್ನು ಅದೇ ಮನೆಯಿಂದ ಅವರ ಮಾವ ಆನಂದ ಭಟ್ಟರು ಹೊರಗೆ ಹಾಕಿದ್ದರು ಎಂಬುದು ಅಂದಿನ ಸಂಗತಿ. ನಂತರ, ಶ್ರೀನಿವಾಸ ಕಾಮತ್ ಈಗ ಇರುವ ರೀತಿ ಬೇರೆಯದ್ದೇ ಕಥೆ. ಕೈಯಲ್ಲಿ ಒಂದು ನಯಾಪೈಸೆಯೂ ಇರದ ಆನಂದ್ ಭಟ್ಟರ ಅಳಿಯನೆಂದು ಪ್ರಖ್ಯಾತಿ ಹೊಂದಿದ್ದವನು ರುಕ್ಮಿಣಿ ಭಟ್ಟರ ಮಗ. ರುಕ್ಮಿಣಿ ಪ್ರೇಮಿಸಿ ಮದುವೆಯಾದದ್ದು ರಥಬೀದಿಯ ನರಸಿಂಹ ಕಾಮತ್ ನನ್ನು. ಪ್ರೀತಿಯನ್ನರಸಿ ಹೊರಟ ರುಕ್ಮಿಣಿ ತವರನ್ನು ತೊರೆದರು. ಆದರೆ, ರುಕ್ಮಿಣಿಗೆ ಗಂಡನ ಮನೆಯಲ್ಲಿಯೂ ಸಂತೋಷ ದಕ್ಕಲಿಲ್ಲ. ರಥಬೀದಿಯಿಂದ ಹೊರಬಿದ್ದವರನ್ನು ಮತ್ತೆ ಸ್ವಾಗತಿಸಿದ್ದು ಇದೇ ಮನೆ.
ಮಾವ ಆನಂದ ಭಟ್ಟರು, ಶಾಂತತ್ತೆ ಹಾಗೂ ಮಗಳು ಶ್ರೀಲಲಿತಾಳ ಜೊತೆಯಾಗಿತ್ತು. ಇಬ್ಬರು ಮಕ್ಕಳು ಜೊತೆಯಲ್ಲಿಯೇ ಬೆಳೆದರು. ಸುಖದಲ್ಲಿ ಸಾಗುತ್ತಿದ್ದ ಬದುಕು ಹಠಾತ್ತನೆ ತಿರುವು ತೆಗೆದುಕೊಂಡಿತ್ತು.
ಶಾಂಭವಿ ಟೀಚರ್ ಎಂದಿಗೂ ಕಾಮತ್ ಮೇಷ್ಟರ ಗತವನ್ನು ಕೆದಕಿದವರಲ್ಲ. ಇಷ್ಟಕ್ಕೂ ಅವರಲ್ಲಿ ವಯಸ್ಸಿನ ಅಂತರ ಹೆಚ್ಚಿದ್ದರೂ ಅದು ಸಮಸ್ಯೆಯಾಗಿರಲಿಲ್ಲ. ಆದರೆ, ಅವರ ಒಂದೇ ಕಂಡೀಶನ್ ಇದ್ದದ್ದು. ಅವರ ಹಿಂದಿನ ವಿಚಾರವನ್ನು ಕೇಳಬಾರದೆಂದು. ಮದುವೆಯಾಗಿ 25 ವರ್ಷದವರೆಗೂ ಹಾಗೆಯೇ ನಡೆಯುತ್ತಿತ್ತು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದವರು ಮತ್ತೆ ಉಪ್ಪರಿಗೆ ಮನೆಗೆ ಬಂದ ನಂತರ ನಡೆದ ಘಟನೆಗಳು ಶಾಂಭವಿ ಟೀಚರ್ ಮನಸ್ಸಿನಲ್ಲಿ ಕಸಿವಿಸಿ ತರತೊಡಗಿದ್ದವು.
ಶ್ರೀನಿವಾಸ ಕಾಮತರು ಊರಲ್ಲಿರಲಿಲ್ಲದ ಅದೇ ಸಮಯದಲ್ಲಿ ನಿಗೂಢತೆಯನ್ನು ಭೇದಿಸಲು ಹೊರಟವರಿಗೆ ಮತ್ತಷ್ಟು ಸಂಗತಿಗಳು ಗೊಂದಲ ತರತೊಡಗಿದವು. ಆಗ ಅವರ ಜೊತೆಯಾಗಿದ್ದು ಅವರ ಏಕೈಕ ಮಗ ಮನೋಜ್. ಮನಶಾಸ್ತ್ರಜ್ಞನಾಗಿದ್ದ ಆತ ಈಗ ಇಲ್ಲಿ ಜೊತೆಯಾಗಿದ್ದ. ಆದರೆ, ಆತನ ಪ್ರಯತ್ನಕ್ಕೆ ಮತ್ತಷ್ಟು ಬೆಂಬಲವಾಗಿ ಹೇಳಿ ಕಳುಹಿಸಿದಂತೆ ಬಂದದ್ದು ಶಾಂಭವಿಯವರ ಹಿರಿಯಣ್ಣ ಶಾಂತರಾಮ್ ನಂಬೂದಿರಿಪ್ಪಾಡ್. ಮುಂದೆ ಅವರ ಸಲಹೆ ಸೂಚನೆಯಂತೆ ಆ ನಿಗೂಢವನ್ನು ಭೇದಿಸಲು ಹೊರಟ ತಾಯಿ-ಮಗನ ಪ್ರಯಾಣ ಹೇಗಿತ್ತು..?
ಏಳನೇ ತರಗತಿಯ ಬೀಗದ ವಿಚಾರವೇನು..? ನಾಣಪ್ಪ, ಚಂದಮ್ಮರ ಆ ನಡೆಗೆ ಕಾರಣವೇನು..? ರುಕ್ಮಿಣಿಯಮ್ಮನ ತುರಿಕೆ ನಿಜದ ತುರಿಕೆಯಲ್ಲ.. ಮತ್ತೆ..??
ಆನಂದ್ ಭಟ್ಟರ ಕುಟುಂಬದ ಕಥೆ ಏನು..? ಅವರೆಲ್ಲರೂ ಹೇಗಿದ್ದರು..?
ಇವರ ಈ ಪಯಣದಲ್ಲಿ ಎದುರಾದದ್ದು ಶ್ರೀನಿವಾಸ ಕಾಮತರ ಮತ್ತೊಂದು ಬದುಕಿನ ಅನಾವರಣ. ಅಲ್ಲಿ ಸಂಧ್ಯಾ ಕೂಡ ಸಿಕ್ಕಳು. ಸಂಧ್ಯಾಳ ಹಿನ್ನೆಲೆಯೇನು..?
ರಥಬೀದಿಯ ಮನೆಗೂ ಇವರೆಲ್ಲರ ಪಯಣ ಸಾಗುತ್ತದೆ. ರುಕ್ಮಿಣಿ ಭಟ್ಟರ ಪತಿ ಮತ್ತೆ ಅವರನ್ನು ಹೇಗೆ ಸ್ವಾಗತಿಸಿದರು..?
ಉಪ್ಪರಿಗೆಯಿಂದ ಶುರುವಾದ ಮನೆಯ ಕತೆ ಪಾತಾಳಕ್ಕೂ ಸಾಗುತ್ತದೆ. ಏರಿಳಿತದ ಬದುಕು ಹಾಗೂ ಭಾವನೆಗಳು ನಮ್ಮನ್ನು ಆಳವಾಗಿ ಆವರಿಸಿಕೊಳ್ಳುತ್ತವೆ. ಶಾಂಭವಿ ಟೀಚರ್ ವ್ಯಕ್ತಿತ್ವ ಬಹಳವೇ ಇಷ್ಟವಾಯಿತು. ಮನೋಜ ತನ್ನ ತಾಯಿಯನ್ನು ಕರೆಯುವ ಪ್ರೀತಿಯ ರೀತಿ, ಎಷ್ಟೇ ನೋವಿದ್ದರೂ ಶಾಂಭವಿ ಟೀಚರ್ ತಮ್ಮನ್ನು ತಾವು ಮತ್ತೆ ವಾಸ್ತವಕ್ಕೆ ತಂದುಕೊಳ್ಳುವ ಹಾಗೂ ಅನುಸರಿಸಿಕೊಂಡು ಹೋಗುವ ಪರಿ ಅನುಕರಣೀಯ. ಶ್ರೀನಿವಾಸ ಕಾಮತರದ್ದು ನೋವುಂಡು ಬದುಕಿದ ಜೀವವೇ.. ಇವರಿಬ್ಬರ ಅನುರೂಪದ ದಾಂಪತ್ಯ ಇಷ್ಟವಾಗುತ್ತದೆ.
ಚೋಟಾನಿಕ್ಕರ ಭಗವತಿ ಅಮ್ಮ ಹಾಗೂ ಸಂಧ್ಯಾ ದೀಪದ ಬೆಳಕು ಕಾದಂಬರಿ ಮುಗಿದ ನಂತರವೂ ಸಕಾರಾತ್ಮಕ ಭಾವ ಮೂಡಿಸುತ್ತದೆ.
ಆಧ್ಯಾತ್ಮ ಜೊತೆಗೆ ನಿಗೂಢತೆ ಇದ್ದರೂ.. ಇಲ್ಲಿ ನನಗೆ ಹೆಚ್ಚು ಇಷ್ಟವಾದದ್ದು ಕೌಟುಂಬಿಕ ಮೌಲ್ಯಗಳನ್ನು ಇದೆಲ್ಲದರ ಜೊತೆಗೆ ಹೆಣೆದ ರೀತಿ. ಇದನ್ನು ದೇವರ ಪವಾಡಗಳ ದೃಷ್ಟಿಯಿಂದಲೂ ಹಾಗೂ ಮನುಷ್ಯತ್ವದ ದೃಷ್ಟಿಯಿಂದಲೂ ಎರಡು ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ಹೊರಟ ಪರಿ ಹಾಗೂ ಎರಡರ ನೋಟ ವ್ಯಾಖ್ಯಾನ ಎಲ್ಲವೂ ಸಮರ್ಥನೀಯವೆನ್ನಿಸಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ