ಭಾನುವಾರ, ಏಪ್ರಿಲ್ 26, 2026

ಇಷ್ಟಕಾಮ್ಯ (ಪುಸ್ತಕ ಯಾನ - 363)


ಪುಸ್ತಕದ ಶೀರ್ಷಿಕೆ : ಇಷ್ಟಕಾಮ್ಯ 

ಲೇಖಕರು : ದೊಡ್ಡೇರಿ ವೆಂಕಟಗಿರಿರಾವ್

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 1987

ದ್ವಿತೀಯ ಮುದ್ರಣ : 2016 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 184

ಬೆಲೆ : 150 ರೂ.


ದೊಡ್ಡೇರಿ ವೆಂಕಟರಾವ್ ಅವರ ಇಷ್ಟಕಾಮ್ಯ ಕಾದಂಬರಿ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿದೆ. ಈಗ ನಾನಿಲ್ಲಿ ಕಾದಂಬರಿಯ ಕುರಿತಾಗಿ ಮಾತ್ರ ಉಲ್ಲೇಖಿಸುತ್ತೇನೆ. 


ಇಷ್ಟಕಾಮ್ಯ ಕಾದಂಬರಿ ಒಂದು ನವಿರಾದ ಪ್ರೇಮ ಕಥೆಯೂ ಹೌದು. ಕೌಟುಂಬಿಕ ಕತೆಯೂ ಹೌದು. ಪ್ರೇಮದಲ್ಲಿ ಹಾಗೂ ಜೀವನದಲ್ಲಿನ ನೈತಿಕತೆಯನ್ನು ಎತ್ತಿಹಿಡಿಯುವ ಕಥಾಹಂದರ ಇಲ್ಲಿದೆ. ಇಲ್ಲಿ ಮುಖ್ಯವಾಗಿ ಮೂರು ಪಾತ್ರಗಳಿವೆ. ವಿಕ್ರಾಂತ, ವಿನೀತಾ ಹಾಗೂ ವಿಭಾ. ಈ ಪಾತ್ರಗಳ ಚಿತ್ರಣ ಸಹಜವಾಗಿ ಮೂಡಿಬಂದಿದೆ. ಏಕೆಂದರೆ, ಇಲ್ಲಿ ಯಾವ ಪಾತ್ರವೂ ಪರ್ಫೆಕ್ಟ್ ಎಂಬಂತಿಲ್ಲ. ಬದಲಾಗಿ, ಪರಿಪೂರ್ಣತೆಯತ್ತ ಹೆಜ್ಜೆ ಹಾಕುವ ಪಾತ್ರಗಳು. ಅವರ ಮನೋತುಮುಲಗಳನ್ನು ಅವರವರ ದೃಷ್ಟಿಯಲ್ಲಿ.. ಜೊತೆಗೆ ಮತ್ತೊಬ್ಬರ ದೃಷ್ಟಿಯಲ್ಲಿ ತೆರೆದಿಟ್ಟಿರುವ ಪರಿ ಎರಡೂ ರೀತಿಯ ಚಿತ್ರಣವನ್ನು ಕಟ್ಟಿಕೊಡುತ್ತದೆ.


ವಿಭಿನ್ನ ಅಭಿರುಚಿಗಳುಳ್ಳ ಅದರಲ್ಲಿಯೂ ಪರಸ್ಪರ ವಿರುದ್ಧ ಅಭಿರುಚಿಗಳೇ ಇರುವಂತಹ ವಿಕ್ರಾಂತ ಹಾಗೂ ವಿಭಾ ಜೋಡಿಯಾಗಿದ್ದರು. 

"ಪ್ರೀತಿ! ಪ್ರೇಮ! ಅದು ಮಾನವನ ಅದ್ಭುತ ಭ್ರಾಮಕ ಕಲ್ಪನೆಯಂತೆ! ಮನಸ್ಸಿಗೆ ಒಂದು ತೊಡಕಿನ ಸಂಕೋಲೆಯಂತೆ!"

ಎನ್ನುವ ಮಾತನ್ನು ಒಪ್ಪಲಾರೆ ಎನ್ನುತ್ತಲೇ ಈ ಇಬ್ಬರ ವಿವಾಹದ ಹಿಂದೆ ಇದ್ದ ಪ್ರೇಮ ಕಾಣಸಿಗುತ್ತದೆ. 


ಎರಡು ವಿಭಿನ್ನ ಧ್ರುವಗಳು ವಿವಾಹದ ಮೂಲಕ ಒಂದಾಗಿದ್ದರು. ಆರ್ಥಿಕ ಮಟ್ಟದಿಂದ ವಿಕ್ರಾಂತ ಸಂಪತ್ಗಿರಿರಾಯರ ಅಳಿಯ ಆಗಲಾರ ಎನ್ನಿಸಿದರೂ.. ವೃತ್ತಿಯಲ್ಲಿದ್ದ ಸ್ಥಾನಮಾನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಮತ್ತೊಬ್ಬರ ಮಧ್ಯಸ್ಥಿಕೆಯಿಂದ ಈ ಸಂಬಂಧ ಕುದುರಿತು. ವಿಕ್ರಾಂತನಿಗೆ ವಿಭಾ ಬಹಳ ಕುರಿತು ಪ್ರೇಮವಿತ್ತು. ವಿಭಾಳಿಗೂ ಈತನ ಕುರಿತು ಅಷ್ಟೇ ಪ್ರೇಮವಿತ್ತೇ..?! ವಿಭಾಳ ಹೆಚ್ಚಿನ ಪರಿಚಯಕ್ಕಾಗಿ ವಿಕ್ರಾಂತ ಪ್ರಯತ್ನಿಸಲಿಲ್ಲ. ಅದಕ್ಕೆ ಸಮಯವೂ ಇರಲಿಲ್ಲ. ಇದು ವಿಧಿಯ ಸಂಚು ಎನ್ನುವಂತೆ ವಿವಾಹ ನಡೆದಿತ್ತು ಅಷ್ಟೇ.. ಅಭಿರುಚಿ, ಸಮಾನತೆ ಇರದ ಎಷ್ಟೋ ದಂಪತಿಗಳು ಸುಖವಾಗಿದ್ದಾರಲ್ಲ ಎನ್ನುವ ಭಾವ ಅವನಲ್ಲಿತ್ತು. ಆತನ ಸ್ನೇಹಿತ ಈ ಕುರಿತು ಎಚ್ಚರಿಸಿದ್ದರೂ.. ವಿಕ್ರಾಂತ ಅದಕ್ಕೆ ಮನಸ್ಸು ಕೊಟ್ಟಿರಲಿಲ್ಲ. 


ವಿಭಾ ಜೊತೆಗಿನ ಸ್ನೇಹಭರಿತ ಒಡನಾಟದಲ್ಲಿ ಆಕೆಯ ಮನಸ್ಸಿಗೆ ಬಂದುದನ್ನು ಹೇಳುವ ಗುಣ ಅರಿವಾಗಿದ್ದರೂ ಅದು ದುಡುಕು ಸ್ವಭಾವ ಎಂದು ಅರಿವಾಗುವುದರ ಬದಲಿಗೆ, ಅದನ್ನು ಬಾಲಿಶ ಸ್ವಭಾವ ಎಂದು ಮೆಚ್ಚಿದ. ಒಬ್ಬಳೇ ಮಗಳಾಗಿದ್ದ ಅವಳ ಹಠಮಾರಿತನ ಸ್ಟ್ರಾಂಗ್ ವಿಲ್ ಆಗಿ ಕಂಡಿತ್ತು. 


ಕಾಫಿ ತೋಟದ ವ್ಯವಸ್ಥಾಪಕರಾಗಿದ್ದ ವಿಕ್ರಾಂತನ ತಂದೆ ಕಾಲವಾಗಿದ್ದರು. ತಾಯಿ ಮಾತ್ರ ಇದ್ದದ್ದು. ಜೊತೆಗೆ ತಮ್ಮನಿದ್ದ. ತಂದೆಯ ಮುಂಜಾಗ್ರತೆ ಹಾಗೂ ಮುಂದಾಲೋಚನೆಯಿಂದ ಸಂಸಾರದ ವಹಿವಾಟು, ಜಮೀನು, ಕೃಷಿ ವ್ಯವಹಾರದ ನಿರ್ವಹಣೆಯನ್ನು ತಮ್ಮ ನೋಡಿಕೊಳ್ಳುತ್ತಿದ್ದರೆ.. ಈತ ತನ್ನ ಆಸೆಯಂತೆ ವೈದ್ಯಕೀಯದ ಹಾದಿ ಹಿಡಿದಿದ್ದ. ವಿವಾಹಕ್ಕೂ ಮನೆಯಲ್ಲಿ ಅಡ್ಡಿ ಇರಲಿಲ್ಲ. ವಿಭಾ ವಿವಾಹದ ನಂತರ ಹಳ್ಳಿಯ ಪರಿಸರಕ್ಕೆ ಒಂದು ದಿನವೂ ಹೊಂದಿಕೊಳ್ಳಲಿಲ್ಲ. ಆದರೆ, ವಿಕ್ರಾಂತನ ತಾಯಿ ಅರ್ಥ ಮಾಡಿಕೊಂಡು ಅದನ್ನು ದೊಡ್ಡದಾಗಿಸಲಿಲ್ಲ. 


ಹೀಗೆ ಸಣ್ಣದಾಗಿ ಶುರುವಾಗಿದ್ದ ಇರುಸು- ಮುರುಸುಗಳು ದಿನೇದಿನೇ ದೊಡ್ಡದಾಗುತ್ತಲೇ ಇದ್ದವು. ಆಕೆಯ ಅಭಿರುಚಿಯಂತೆಯೇ ಮನೆ ಮಾಡಿದ್ದರೂ ಆಕೆಯ ತಂದೆಯ ಮನಯೂ ಅದೇ ಊರಿನಲ್ಲಿದ್ದುದರಿಂದ ಆ ಮನೆಯಲ್ಲಿದ್ದದ್ದೇ ಹೆಚ್ಚು ಅವಳು. ಸ್ನೇಹಮಹಿ ವ್ಯಕ್ತಿತ್ವ ಅವಳದ್ದಾದರೂ ಅದೇಕೋ ವಿಕ್ರಾಂತ ಹಾಗೂ ಆಕೆಯ ಸಂಬಂಧ ಹೊಂದಿಕೆಯಾಗಲೇ ಇಲ್ಲ. ದಿನೇದಿನೇ ದೊಡ್ಡದಾದ ಬಿರುಕು ಹಾಗೂ ಇಬ್ಬರಲ್ಲಿ ಬೆಳೆದ ಕಂದಕ ಅದೇ ಊರಿನಲ್ಲಿದ್ದರೂ.. ಬೇರೆ ಬೇರೆ ವಾಸಿಸುವಂತೆ ಮಾಡಿತ್ತು. ಡಾಕ್ಟರ್ ವಸುಧಾ ವಿಕ್ರಾಂತನ ಬಳಿ ಚರ್ಚಿಸಿದ ವಿಷಯ ವಿಕ್ರಾಂತನ ಮನಸ್ಸನ್ನು ಮತ್ತಷ್ಟು ಫಾಸಿಗೊಳಿಸಿತ್ತು. ಆ ವಿಷಯವಾದರೂ ಏನು..? ವಿಕ್ರಾಂತನೇ ಡಾಕ್ಟರ್ ಆಗಿದ್ದರೂ.. ವಿಭಾ ವಸುಧಾ ಬಳಿ ತೆರಳಿದ್ದೇಕೆ..?


ಒಂದು ಸಂಧರ್ಭದಲ್ಲಿ ವಿಕ್ರಾಂತ ರೋಗಿಯೊಬ್ಬರಿಗೆ ಚಿಕಿತ್ಸೆ ಮಾಡಿ ಬೈಕಿನಲ್ಲಿ ಬರುತ್ತಿರುವಾಗ, ಸೈಕಲ್ಲಿನಲ್ಲಿ ಬರುತ್ತಿದ್ದ ಹುಡುಗಿಯೊಬ್ಬಳು ಬಿದ್ದು ಕೈ ಏಟು ಮಾಡಿಕೊಂಡದ್ದು ಕಾಣಿಸಿತ್ತು. ಆತನ ತಪ್ಪಿಲ್ಲದಿದ್ದರೂ.. ಆಕೆಯ ಚಿಕಿತ್ಸೆಯ ಹೊಣೆ ಹೊತ್ತ. ಅವಳೇ ವಿನೀತ. ಬ್ಯಾಂಕಿನಲ್ಲಿ ಬೆರಳಚ್ಚು ಕೆಲಸ ಮಾಡುತ್ತಿದ್ದಳು. ಮನೆಯಲ್ಲಿ ತೀರ ಅನುಕೂಲವಂತರೇನಲ್ಲ. ಹಾಗಾಗಿ, ಅವರಿಗೆ ಆ ಕೆಲಸ ಅನಿವಾರ್ಯವಾಗಿತ್ತು. ಆದರೆ, ಈ ಅಪಘಾತದಿಂದಾಗಿ ಆಕೆ ಬ್ಯಾಂಕಿನ ಕೆಲಸಕ್ಕೆ ರಜೆ ಹಾಕುವ ಹಾಗಾಗಿತ್ತು. ಡಾಕ್ಟರ್ ತೋರಿದ ಕರುಣೆಗೆ ಮುಗ್ಧ ಜನ ಕೊಟ್ಟಿದ್ದ ಅರ್ಥವೇ ಬೇರೆ. ಅವರ ತಪ್ಪಿಲ್ಲದೆ ಅವರೇಕೆ ಚಿಕಿತ್ಸೆ ಮಾಡುತ್ತಿದ್ದಾರೆ ಎಂದು...?


ಆಕೆಯ ಮುಗ್ಧತೆ ಹಾಗೂ ಆಕೆಯ ಕಷ್ಟಕ್ಕೆ ನೆರವಾಗುವ ಸಲುವಾಗಿ ಎಲ್ಲರಿಗೂ ಸಹಾಯ ಮಾಡುವಂತೆ ವಿಕ್ರಾಂತ ಆಕೆಗೂ ಸಹಾಯ ಮಾಡಲು ತನ್ನ ಕ್ಲಿನಿಕ್ ನಲ್ಲಿಯೇ ರಿಸೆಫ್ಷನಿಸ್ಟ್ ಆಗಿ ಕೆಲಸ ಮಾಡುವಂತೆ ಹೇಳಿದ. ಪ್ರಾಮಾಣಿಕತೆ, ನಂಬಿಕೆ, ನಿಷ್ಠೆಯಿಂದ ಆತನ ನಂಬಿಕೆ ಉಳಿಸಿಕೊಳ್ಳುವಂತೆ ಈಕೆಯೂ ಕೆಲಸ ಮಾಡಿದಳು. ಹೊಸ ಕೆಲಸದಲ್ಲಿ ವಾಕ್ಚಾತುರ್ಯ ಹಾಗೂ ಸಂಯಮ ಬೇಕಿತ್ತು. ಅದನ್ನು ನಿಧಾನವಾಗಿ ಕಲಿಯುತ್ತಲೇ ನರ್ಸ್ ಜಲಜಮ್ಮನ ಕೆಲಸವನ್ನು ಸಾಧ್ಯವಾದಷ್ಟು ಕಲಿಯುತ್ತಿದ್ದಳು. ಜಲಜಮ್ಮ ಆಕೆಗೆ ಕಟುವಾಗಿಯೇ ಪ್ರತಿಕ್ರಿಯಿಸುತ್ತಿದ್ದಳು. ಪ್ರಶ್ನೆಯಲ್ಲಿ ಮೊನಚು, ವ್ಯಂಗ್ಯವೆರಡೂ ಇರುತ್ತಿತ್ತು. ಅದಕ್ಕೆ ಕಾರಣವೇ ಬೇರೆ ಇತ್ತು. 


ಆಕೆಯ ಕಷ್ಟಕ್ಕೆ ನೆರವಾಗುವಂತಿದ್ದ ಆಸ್ಪತ್ರೆಯ ರಿಸೆಪ್ಷನಿಸ್ಟ್ ಹುದ್ದೆಯನ್ನು ಬಿಟ್ಟು ಮತ್ತೆ ಆಕೆ ತನ್ನ ಬ್ಯಾಂಕ್ ಕೆಲಸಕ್ಕೆ ಮರಳಲೇ ಬೇಕಿತ್ತು. ಅಷ್ಟರೊಳಗೆ ಡಾಕ್ಟರ್ ವಿಕ್ರಾಂತ್ ಗೆ ಆಕೆಯ ಮೇಲೆ ಪ್ರೇಮವಾಗಿತ್ತು. ವಿನೀತಾಳಿಗೂ ಆತನ ಮೇಲೆ ಸೆಳೆತ ಮೂಡಿದ್ದು ಸುಳ್ಳಲ್ಲ. ಇತರ ಮಧ್ಯೆ ವಿಭಾ ವಿಕ್ರಾಂತನಿಲ್ಲದಾಗ ವಿನೀತಾಳನ್ನು ನೋಡಲು ಬಂದು ಹೋಗಿದ್ದಳು. 


ಇಲ್ಲಿ ತ್ರಿಕೋನ ಪ್ರೇಮ ಕಥೆಯೊಂದು ಮೂಡುತ್ತಿದೆ ಎನ್ನುವ ಸಂದರ್ಭದಲ್ಲಿ ಎಚ್ಚೆತ್ತುಕೊಂಡದ್ದು ಯಾರು..? ವಿಕ್ರಾಂತ್ ಹಾಗೂ ವಿನೀತಾಳ ಸಂಬಂಧ ಬೇರೆಯವರ ಕಣ್ಣಲ್ಲಿ ಕಂಡದ್ದು ಹೇಗೆ..?


ಹಣವಂತ ಹಾಗೂ ಗುಣವಂತ ವಿಕ್ರಾಂತನನ್ನು ಆಯ್ಕೆ ಮಾಡಿಕೊಂಡು ಆತನ ಜೊತೆ ಮುಂದುವರಿಯುವ ಆಯ್ಕೆ ವಿನೀತಾಳಿಗಿದ್ದರೂ.. ಆ ಹಾದಿ ತುಳಿಯದ ವಿನೀತಾ ಮಾದರಿಯಾಗುತ್ತಾಳೆ. 


ಇತ್ತೀಚೆಗೆ ಹೆಚ್ಚಾಗಿ ವಿಚ್ಛೇದನ, ಎರಡನೇ ವಿವಾಹ ಹಾಗೂ ವಿವಾಹಬಾಹಿರ ಸಂಬಂಧಗಳ ಸುದ್ದಿ ಕೇಳುತ್ತಿರುವಾಗ.. ಸಂಬಂಧಗಳನ್ನು ಉಳಿಸಿಕೊಳ್ಳಲು ಇಲ್ಲಿ ಪ್ರಯತ್ನ ಪಡುವ ವಿಕ್ರಾಂತ ಹಾಗೂ ವಿಭಾ, ಬೇರೆ ಹಾದಿ ತುಳಿಯಲಿಚ್ಚಿಸದ ವಿನೀತಾ ಪಾತ್ರಗಳು ಇಷ್ಟವಾಗುತ್ತವೆ. 


ವಿಭಾ ಹಾಗೂ ವಿಕ್ರಾಂತ ವಿಚ್ಛೇದನದ ಹಾದಿ ತುಳಿಯುವ ಬದಲಾಗಿ, ತಮ್ಮ ಸಂಬಂಧಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಡುವ ಹೆಜ್ಜೆಗಳು ಎಷ್ಟರ ಮಟ್ಟಿಗೆ ಸಫಲವಾಗುತ್ತವೆ ನೀವೇ ಓದಿ ನೋಡಿ. 


ವಿಭಾಳ ನಡೆಗಳಿಗೆ ಕಥೆಯಲ್ಲಿ ಸಮರ್ಥನೆ ಸಿಕ್ಕಿಲ್ಲ ಎಂದು ನನಗನ್ನಿಸಿತು. ಕಾದಂಬರಿ ಓದಿದ ನಂತರ ಲೇಖಕರ ಮಾತನ್ನು ಓದಿದಾಗ ಇದಕ್ಕೊಂದು ಸ್ಪಷ್ಟನೆ ಸಿಕ್ಕಿತು. ಅವರ ಮಾತುಗಳಲ್ಲಿ ಇದನ್ನು ತಿಳಿಯುವುದಾದರೆ.. "ಹಲವು ಆತ್ಮೀಯರನ್ನು ಸಂಪೂರ್ಣವಾಗಿ ತಿಳಿದಿದ್ದೇವೆ ಎಂದುಕೊಂಡರೂ ಅವರ ಜೀವನದ ಹಲವು ಮುಖಗಳು ಕಾಣದಿರಬಹುದುಮ್ ಹಲವು ಮನೋವ್ಯಾಪಾರಗಳು ಅರ್ಥವಾಗದಿರಬಹುದು. ಅದನ್ನು ವಿಷದೀಕರಿಸಲು ಅಸಾಧ್ಯ. ಕಲ್ಪನಾ ಸಾಮರ್ಥ್ಯ ಎಂಥ ಹೆಚ್ಚಿನದ್ದಾದರೂ.. ಪ್ರಾಕೃತಿಕ ಅಸತ್ಯವನ್ನು ಸತ್ಯವನ್ನಾಗಿಸಲಾರದು. ವಿಭಾಳ ಅವ್ಯಕ್ತ ಮತ್ತು ಸಂಕೀರ್ಣ ಮನೋಭಾವದ ವಿಶೇಷಣೆ ಇಲ್ಲಿ ಅಪ್ರಸ್ತುತ ಎನ್ನುತ್ತಾರೆ.


ವಿಭಿನ್ನ ಮನಸ್ಥಿತಿಗಳ ಚಿತ್ರಣವನ್ನು ಸಮರ್ಥವಾಗಿ ಚಿತ್ರಿಸಿರುವ ಕಾದಂಬರಿಯ ವಿಭಿನ್ನ ಓದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ