ಪುಸ್ತಕದ ಶೀರ್ಷಿಕೆ : ಆನೆ ಕಥೆ
ಲೇಖಕರು : ನಾಗರಾಜ್ ನವೀಮನೆ
ಪ್ರಕಾಶಕರು : ಅಭಿನವ
ಪ್ರಥಮ ಮುದ್ರಣ : 2019
ಪುಟಗಳು : 76
ಬೆಲೆ : 50 ರೂ.
ನಾಗರಾಜ್ ನವೀಮನೆಯವರು ಮೂಲತಃ ಹಾಸನದವರು. ಕನ್ನಡಪ್ರಭ ಪತ್ರಿಕೆಯಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜಿಲ್ಲಾ ವರದಿಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾವ್ಯದ ಬಗ್ಗೆ ವಿಶೇಷ ಆಸಕ್ತಿ. ವನ್ಯಜೀವಿ, ಪರಿಸರ, ಕಾಡು ಇಷ್ಟದ ಸಂಗತಿಗಳು. ಆನೆ ಕಥೆ ಇವರ ಮೊದಲ ಪುಸ್ತಕ.
ಆನೆ ಎಂದರೆ ಮೊದಲಿಗೆ ನೆನಪಾಗುವುದು ಮೈಸೂರು ದಸರಾ ಎನ್ನುತ್ತಲೇ ಆನೆಗಳ ತಾಲೀಮು ನೋಡುವ ಸೋಜಿಗವನ್ನು ಹೇಳುತ್ತಲೇ.. ಆನೆ ಎನ್ನುವ ಬುದ್ಧಿಜೀವಿ ಮನುಷ್ಯರೊಂದಿಗೆ ಬೆಸೆದುಕೊಳ್ಳುವ ಬಾಂಧವ್ಯವನ್ನು ತೋರುತ್ತಾರೆ. ಸಾಕಾನೆ ಹಾಗೂ ಕಾಡಾನೆಗಳ ನಡುವಿನ ವ್ಯತ್ಯಾಸದ ಅರಿವನ್ನು ನಮ್ಮೊಟ್ಟಿಗೆ ಹಂಚಿಕೊಳ್ಳುತ್ತಾರೆ. ಈ ಪುಸ್ತಕದಲ್ಲಿ ದಸರಾ ಆನೆಗಳು, ಅವುಗಳ ಸಾಹಸ, ಅವು ದಸರೆಯಲ್ಲಿ ಪಾಲ್ಗೊಳ್ಳಲು ಬಂದ ಹಿನ್ನೆಲೆ, ಮಾವುತರ ಕಾಳಜಿ, ಮಾವುತರ ಕುಟುಂಬಗಳು, ಮಾವುತರ ಮಕ್ಕಳ ಶಿಕ್ಷಣದ ಕುರಿತ ಕಾಳಜಿ, ಮಾವುತರ ಮಕ್ಕಳ ಶಿಕ್ಷಣದ ಕ್ಯಾಂಪ್, ಮಾವುತರ ಮಕ್ಕಳ ಸೈಕಲ್ ಪ್ರೀತಿ, ದಸರಾ ಆನೆಗಳ ಅಲಂಕಾರ, ದಸರಾ ಆನೆಗಳ ವಿಶೇಷ ಊಟೋಪಚಾರ, ದಸರಾ ನಂತರ ಅವುಗಳ ಆರೈಕೆ, ಅವುಗಳನ್ನು ಇತರ ಕೆಲಸಕ್ಕೆ ಬಳಕೆ ಮಾಡಿಕೊಳ್ಳುವ ಪರಿ, ಅವುಗಳು ಕಾಡಾನೆಯನ್ನು ಪಳಗಿಸುವ ಬಗೆ ಹೀಗೆ ಹಲವಾರು ವಿಭಿನ್ನ ನೋಟಗಳನ್ನು ತೆರೆದಿರುತ್ತಾರೆ.
ಈ ಪುಸ್ತಕಕ್ಕೆ ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿಯವರ ಮುನ್ನುಡಿ ಇದೆ. ಅದರಲ್ಲಿ ಅವರು ಒಂದು ಪ್ರಸಂಗವನ್ನು ಅವರು ದಾಖಲಿಸುತ್ತಾರೆ. ಅದು ಹೀಗಿದೆ. ತಮಿಳುನಾಡಿನ ಮುದುಮಲೈ ಕಾಡಿನ ಸಾಕಾನೆ ಶಿಬಿರದಲ್ಲಿದ್ದ ಒಂದು ಅಪರೂಪದ ಆನೆ ಮುದುಮಲೈ. ಅದರ ಮಾವುತ ಮಾರ. ಅವರಿಬ್ಬರ ನಡುವೆ ಅದೆಷ್ಟು ಬಾಂಧವ್ಯವಿತ್ತೆಂದರೆ ಆತ ಎಂದಿಗೂ ಅಂಕುಶವನ್ನೇ ಬಳಸಿರಲಿಲ್ಲ. ಬದಲಾಗಿ ತನ್ನ ಸನ್ನೆಯನ್ನು ತಿಳಿಸಲು ಸಣ್ಣನೆಯ ಬೆತ್ತದ ಕಡ್ಡಿಯನ್ನು ಮಾತ್ರ ಬಳಸುತ್ತಿದ್ದ. ಒಮ್ಮೆ ಮಾರ ಹೊರವಲಯ ಅರಣ್ಯಾಧಿಕಾರಿ ಕಛೇರಿಯ ಬಳಿ ತನ್ನ ಆನೆಯೊಂದಿಗೆ ಹೋಗಿದ್ದ. ಅದು ಸಂಬಳದ ಸಮಯ. ಉಳಿದ ಹಲವು ಮಾವುತರು ತಮ್ಮ ತಮ್ಮ ಆನೆಗಳೊಂದಿಗೆ ಬಂದಿದ್ದರು. ಅಧಿಕಾರಿಯ ಪುಟ್ಟ ಮಗ ಚೆಂಡಿನೊಡನೆ ಆಟವಾಡುತ್ತಿದ್ದ. ಚೆಂಡು ಆನೆಗಳ ಬಳಿ ಹೋದಾಗ ಆತ ಬೆಚ್ಚುತ್ತಿದ್ದನಾದರೂ.. ಅವು ತಾಳ್ಮೆಯಿಂದ ಏನು ಮಾಡದನ್ನು ಕಂಡು ಆನಂದಿಸುತ್ತಿದ್ದ. ಮಾರ ಅಧಿಕಾರಿಯ ಕಛೇರಿಯಿಂದ ಹೊರ ಬಂದಾಗ ಸಂಬಳದ ಕುರಿತಾಗಿ ಆತನಿಗೆ ಅಲ್ಲಿ ಕಿರಿಕಿರಿಯಾಗಿತ್ತು. ಅದೇ ಸಮಯದಲ್ಲಿ ಹುಡುಗ ಒದ್ದ ಚೆಂಡು ಮುದುಮಲೈ ಆನೆಯ ಬಳಿ ಉರುಳಿ ಹೋಗಿತ್ತು. ಮಾರ ಮುದುಮಲೈನತ್ತ ನೋಡಿದ್ದ. ಅಷ್ಟೇ.. ಮುದುಮಲೈ ತನ್ನ ಬೃಹದಾಕಾರದ ಪಾದವನ್ನು ಆ ಚೆಂಡಿನ ಮೇಲೆ ಮೃದುವಾಗಿ ಊರಿತ್ತು. ಅಷ್ಟೇ..! ಭಯ ಹುಟ್ಟಿಸಲು ಇದಿಷ್ಟು ಸಾಕಲ್ಲವೇ..!? ಇಲ್ಲಿ ಭಯಕ್ಕಿಂತಲೂ ಹೆಚ್ಚಾಗಿ ಆನೆ ಮತ್ತು ಮಾವುತನ ನಿಗೂಢ ಸಂಬಂಧವನ್ನು ಕಾಣಬಹುದು.
ಇಂತಹ ಹಲವಾರು ಬಾಂಧವ್ಯಗಳ ನೋಟ ಈ ಪುಸ್ತಕದಲ್ಲಿದೆ. ಮೈಸೂರಿಗೂ ಹಾಗೂ ಆನೆಗಳಿಗೂ ಇರುವ ನಂಟನ್ನು ನಾವು ನೋಡಿದರೂ.. ಆನೆಗಳನ್ನು ದಸರೆಗೆ ತಯಾರು ಮಾಡುವ ಪರಿಯೇ ವಿಭಿನ್ನ. ಅವುಗಳ ತಾಲೀಮು ಹೇಗಿರುತ್ತದೆ..? ಗಜಪಡೆ ಮತ್ತು ಅರಮನೆಯ ಆವರಣದಲ್ಲಿ ಅವುಗಳ ಗಾಂಭೀರ್ಯದ ನಡವಳಿಕೆ, ಆಹಾರ ಹಾಗೂ ಮಾವುತರ ನಡೆ ಹೇಗಿರುತ್ತದೆ ಎಂಬುದನ್ನು ಕಾಣಬಹುದಾಗಿದೆ. ತಂತ್ರಜ್ಞಾನವನ್ನು ಉಪಯೋಗಿಸಿ ಮ್ಯಾಗ್ನೆಟ್ ಟ್ರಾಲಿಯನ್ನು ಬಳಸಿ ಗಜಪಡೆಗೆ ರಕ್ಷಣೆ ನೀಡುವ ಪರಿ ಶ್ಲಾಘನೀಯವೆನಿಸಿತು.
ಅಂಬಾರಿ ಹೊತ್ತ ದ್ರೋಣ, ಬಲರಾಮ, ಅರ್ಜುನ ಹಾಗೂ ಅಭಿಮನ್ಯುವಿನ ಜೀವನ ಕ್ರಮಗಳು ಹಾಗೂ ಜೀವನಗಾಥೆಯನ್ನು ಕಾಣಬಹುದು.
ಸಾಮಾನ್ಯವಾಗಿ ಮಾವುತರು ಎಂದಾಕ್ಷಣ ನಾವು ಆನೆಗಳ ಕ್ಯಾಂಪ್ ಗಳಲ್ಲಿ ಹಾಗೂ ಕಾಡುಗಳಲ್ಲಿರುವ ಮಾವುತರನ್ನೇ ನೆನೆಸಿಕೊಳ್ಳುವಾಗ ಹಾಲಿವುಡ್ ಗೆ ಹಾರಿದ ಮೈಸೂರಿನ ಕಾವಾಡಿಯನ್ನು ತೋರುತ್ತಾರೆ. ಇಂಡೋನೇಷ್ಯಾದವರೆಗೂ ಹೋಗಿಬಂದ ನಮ್ಮ ಮಾವುತರು ಅಲ್ಲಿ ಆನೆಗಳ ಕುರಿತ ತಮ್ಮ ದೇಶೀಯ ಜ್ಞಾನವನ್ನು ತೋರಿ ಅಲ್ಲಿಯವರನ್ನು ಅಚ್ಚರಿಗೊಳಿಸಿದ ಸಂದರ್ಭವನ್ನು ಹೇಳುತ್ತಲೇ.. ಮಾವುತರ ದೇಶೀಯ ಜ್ಞಾನ ಮಾತ್ರವಲ್ಲ.. ಅವರು ಆನೆಗಳ ಕುರಿತು ತೋರುವ ಪ್ರೀತಿಯನ್ನು ವರ್ಣಿಸುತ್ತಾರೆ. ಮನೆಯವರಿಗಿಂತಲೂ ಹೆಚ್ಚಾಗಿ ಆನೆಗಳನ್ನು ಹಚ್ಚಿಕೊಂಡಿರುವ ಪರಿಯಂತೂ ಸೆಳೆಯುತ್ತದೆ.
ಆನೆ ಕಾರ್ಯಾಚರಣೆ ಹೇಗಿರುತ್ತದೆ? ಖೆಡ್ಡಾ ತೊಡುವ ಕ್ರಮ, ಕಾಡಾನೆಯ ಬದುಕು, ಕಾಡಾನೆ ಸಾಕಾನೆಯಾಗಿ ಬದಲಾಗುವ ಸಂದರ್ಭದಲ್ಲಿ ಅವುಗಳ ಜೀವನ ಕ್ರಮ, ಆನೆಗಣತಿ, ಆನೆ ಡಾಕ್ಟರ್ ಹೀಗೆ ಹಲವಾರು ಘಟನೆಗಳನ್ನು ಸರಳವಾಗಿ ಕಟ್ಟಿಕೊಟ್ಟಿದ್ದಾರೆ.
ಮಕ್ಕಳು ಸಹ ಆರಾಮವಾಗಿ ಓದಿ ತಿಳಿದುಕೊಳ್ಳಬಹುದಾದಷ್ಟು ಸುಲಲಿತ ಭಾಷೆ ಇಲ್ಲಿದೆ. ಆನೆಗಳ ಕುರಿತ ಬೇಸಿಕ್ ಮಾಹಿತಿಯನ್ನು ತಿಳಿದುಕೊಳ್ಳಲು ಬಹಳವೇ ಉಪಯುಕ್ತವಾಗಿದೆ ಈ ಪುಸ್ತಕ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ