ಭಾನುವಾರ, ಏಪ್ರಿಲ್ 26, 2026

ಅಪ್ರತಿಮ ರಾಣಿ ಮಹಾರಾಣಿಯರು (ಪುಸ್ತಕ ಯಾನ - 397)


ಪುಸ್ತಕದ ಶೀರ್ಷಿಕೆ : ಅಪ್ರತಿಮ ರಾಣಿ ಮಹಾರಾಣಿಯರು 

ಲೇಖಕರು : ಗೀತಾ ಶೆಣೈ

ಪ್ರಕಾಶಕರು : ನಿರಂತರ ಸಾಯಿ ಕಮ್ಯೂನಿಕೇಷನ್ ಪ್ರೈ. ಲಿ 

ಪ್ರಥಮ ಮುದ್ರಣ : 2019

ಪುಟಗಳು : 100

ಬೆಲೆ : 100 ರೂ. 


ರಾಜ್ಯಾಡಳಿತದಲ್ಲಿ ರಾಜರಷ್ಟೇ ಶಕ್ತವಾಗಿ ಹಾಗೂ ಅವರಿಗಿಂತಲೂ ಪ್ರತಿಭಾನ್ವಿತೆಯರಾದ ರಾಣಿಯರನ್ನು ಕಾಣಬಹುದಾಗಿದೆ. ಕೆಲವೊಮ್ಮೆ ಅವರ ಸಲಹೆಗಳು, ರಾಣಿಯರ ಧಾರ್ಮಿಕ ಕಾರ್ಯಗಳು, ಅವರ ಸೌಂದರ್ಯ, ಯುದ್ಧದಲ್ಲಿ ನೆರವಾಗುವಿಕೆ, ದೇಶದ ರಕ್ಷಣೆಗೆ ಅವರು ನೀಡುತ್ತಿದ್ದ ಕೊಡುಗೆ, ಅವರಲ್ಲಿದ್ದ ತ್ಯಾಗ ಮನೋಭಾವಗಳು, ರಾಜ್ಯದ ಉತ್ತರಾಧಿಕಾರಿಗಳನ್ನು ಬೆಳೆಸಬೇಕಾಗಿ ಬರುತ್ತಿದ್ದ ಸಂದರ್ಭಗಳು, ರಾಣಿಯರ ದೇಶಭಕ್ತಿ, ರಾಜರ ಅನುಪಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಘನ ನಿರ್ಧಾರಗಳು ಹೀಗೆ ಹಲವಾರು ವಿಚಾರಗಳನ್ನು ಗಮನಿಸಬಹುದು. ಐತಿಹಾಸಿಕ ಕಾಲದ ಆಡಳಿತಾತ್ಮಕ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ 15 ರಾಣಿ, ಮಹಾರಾಣಿಯರ ವ್ಯಕ್ತಿ ಚಿತ್ರಣಗಳನ್ನು ಡಾ. ಗೀತಾ ಶೆಣೈ ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. 


ಎಲ್ಲಾ ಲೇಖನಗಳು ಮಹಿಳಾ ಪತ್ರಿಕೆ 'ಮಂತಣಿ'ಯಲ್ಲಿ ಏಪ್ರಿಲ್ 2015 ರಿಂದ ನವೆಂಬರ್ 2016ರವರೆಗೆ ಮುಖಪುಟ ಲೇಖನವಾಗಿ ಪ್ರಕಟವಾಗಿದ್ದವು. 


ಲೋಕೋತ್ತರ ಸುಂದರಿ ಟ್ರಾಯ್ ನಗರದ ಹೆಲೆನ್ :

ಟ್ರಾಯ್ ನಗರದ ಹೆಲೆನ್ ದಂತಕಥೆಯೇ ಅಥವಾ ವಾಸ್ತವವೇ ಎನ್ನುವುದರಾಚೆಗೆ ಚರಿತ್ರಕಾರರು 10 ವರ್ಷಗಳ ಸುದೀರ್ಘ ಯುದ್ಧ ನಡೆದದನ್ನು ಹೇಳುತ್ತಾರೆ. ಹೆಲೆನ್ ತನ್ನ ತಂದೆಯ ರಾಜಕೀಯ ಆಯ್ಕೆಯಾಗಿದ್ದ ಶ್ರೀಮಂತ ರಾಜನನ್ನು ಒಪ್ಪಿಕೊಳ್ಳುತ್ತಾಳೆ. ಆದರೆ ಅವಳ ಮುಂದಿನ ಬದುಕು ಹೇಗಿತ್ತು..? ಪುರುಷಪ್ರಧಾನ, ಪಿತೃಪ್ರಧಾನ ಸಮಾಜದ ಚದುರಂಗದಾಟದಲ್ಲಿ ಸೌಂದರ್ಯವತಿ ರಾಣಿಯ ಬದುಕು ಹೇಗಿತ್ತು ಓದಿ ನೋಡಿ.


ಈಜಿಪ್ತಿನ ವರ್ಣರಂಜಿತ ಚಕ್ರವರ್ತಿನಿ ಕ್ಲಿಯೋಪಾತ್ರ :

ವಂಶಪಾರಂಪರ್ಯವಾಗಿ ಅಧಿಕಾರ ಕ್ಲಿಯೋಪಾತ್ರಳ ಕೈ ಸೇರಿದ್ದರೂ ಆಕೆ ತನ್ನ ಬದುಕಿನ ಪ್ರತಿಯೊಂದು ಕ್ಷಣವನ್ನು ಸಂಘರ್ಷಪೂರ್ಣವಾಗಿ ಕಳೆಯುತ್ತಾಳೆ. ಆಕೆಯ ಶೂರತನ, ರಾಜಕೀಯ ಮುತ್ಸದಿತನ, ಚಾಣಾಕ್ಷ ನೀತಿಗಳು ಅಷ್ಟೇ ಅಲ ಆಕೆಯ ಅಂತ್ಯವೂ ನೆನಪಿಡುವಂತಹದ್ದು. ಸ್ಮರಣೀಯ ಚಕ್ರವರ್ತಿನಿಯ ಆಡಳಿತಗಾಥೆ ಇಲ್ಲಿದೆ


ಹೊಯ್ಸಳ ರಾಣಿ ನೃತ್ಯ ಸರಸ್ವತಿ ಶಾಂತಲಾ :

ಹೊಯ್ಸಳ ಸಾಮ್ರಾಜ್ಯದ ಕೀರ್ತಿಯುತ ದೊರೆ ವಿಷ್ಣುವರ್ಧನನ ಪಟ್ಟದರಾಣಿ ಶಾಂತಲೆ. ಈಕೆಯ ಕುರಿತ ಚರಿತ್ರೆ, ಕಲ್ಪನೆಯ ಕಾದಂಬರಿಗಳೆಲ್ಲವೂ ಆಸಕ್ತಿಯುತ. ವೈಯಕ್ತಿಕ ಬದುಕಿನಲ್ಲಿ ಶಾಂತಲೆ ಎದುರಿಸಿದ ಸಂಘರ್ಷಗಳು, ವಿಷ್ಣುವರ್ಧನ ಚಕ್ರವರ್ತಿಯಾದಾಗ ಆಕೆ ನಿಭಾಯಿಸಿದ ಸಂದಿಗ್ಥೆಗಳು, ಆಕೆಯ 'ಸವತಿ ಗಂಧವಾರಣೆ' ಎಂಬ ಬಿರುದು, ದಾನಶೀಲತೆ, ನೃತ್ಯ ಎಲ್ಲದರ ಕುರಿತ ಚಿತ್ರಣ ಇಲ್ಲಿದೆ.


ದೆಹಲಿಯ ಪ್ರಥಮ ಸಾಮ್ರಾಜ್ಞಿ-ರಜಿಯಾ ಸುಲ್ತಾನ :

ರಜಿಯಾ ಸುಲ್ತಾನಳ ಆಳ್ವಿಕೆ ಅಲ್ಪಾವಧಿಯಾದರೂ.. ಅದನ್ನು ಚರಿತ್ರೆಗಾರರು ಬಿಚ್ಚು ಮನಸ್ಸಿನಿಂದ ಹೊಗಳಿರುವುದಕ್ಕೆ ಆಕೆಯ ಆಡಳಿತವೇ ಕಾರಣ. ದೆಹಲಿಯ ಮೊದಲ ಸುಲ್ತಾನ ಕುತುಬುದ್ದೀನ್‌ ಐಬಕನ ಮೊಮ್ಮಗಳಾಗಿ, ಇಲ್ತಮಿಷನ ಮಗಳಾಗಿದ್ದ ಅವಳು ನುರಿತ ಆಡಳಿತಗಾರ್ತಿ ಹಾಗೂ ಯೋಧೆಯಾಗಿ ರೂಪುಗೊಂಡ ಬಗೆ, ಆಡಳಿತ ಸೂತ್ರವನ್ನು ಕೈಗೆತ್ತಿಕೊಂಡ ನಂತರ ದೇಶದ ಅಭಿವೃದ್ಧಿಯತ್ತ ಗಮನ ಕೊಟ್ಟದ್ದು ಎಲ್ಲವನ್ನು ಹೇಳುತ್ತಲೇ.. ಅಂತಹ ಸಾಮ್ರಾಜ್ಞಿಯನ್ನು ಹೆಣ್ಣೆಂದು ಹತ್ತಿಕ್ಕಲು ನೋಡಿದವರ ಕುರಿತು ಇಲ್ಲಿ ತೆರೆದಿಡುತ್ತಾರೆ


ಸ್ಪೇನ್ ದೇಶದ ಅಸಾಮಾನ್ಯ ರಾಣಿ ಇಸಬೆಲ್ಲಾ :

ಸ್ಪೇನ್ ನ ರಾಜಕೀಯ ಏಕೀಕರಣಕ್ಕೆ ಭದ್ರ ಬುನಾದಿ ಹಾಕುವುದಕ್ಕೆ ಪ್ರಮುಖ ಪಾತ್ರವಹಿಸಿದ ರಾಜತಾಂತ್ರಿಕ ನಿಪುಣ ರಾಣಿ. 15ನೇ ಶತಮಾನದಲ್ಲಿ ತನ್ನ ದೇಶವನ್ನು ಅಪರಾಧ ಮುಕ್ತವಾಗಿಸಲು ಅನೇಕ ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಿ, ಪ್ರಜಾಪರ ನಿಲುವಿನಿಂದ ಜಗತ್ತಿನ ಗಮನ ಸೆಳೆದ ರಾಣಿ. ಸ್ಪೇನ್ ದೇಶದ ಪ್ರಗತಿಗೆ ಈಕೆಯ ನುರಿತ ರಾಜ್ಯಭಾರವೇ ಕಾರಣವೆಂದು ಹೇಳುವುದರಲ್ಲಿ ಅತಿಶಯೋಕ್ತಿ ಇಲ್ಲ. ಇಸಬೆಲ್ಲಾ ಅಧಿಕಾರದ ಚುಕ್ಕಾಣಿ ಹಿಡಿದ ದಿನಗಳ ಚಿತ್ರಣವೆಲ್ಲವೂ ಇಲ್ಲಿದೆ.


ವೀರವನಿತೆ ಉಳ್ಳಾಲದ ರಾಣಿ ಅಬ್ಬಕ್ಕ  :

ಪೋರ್ಚುಗೀಸರನ್ನು ಹೆಮ್ಮೆಟ್ಟಿಸಿದ ವೀರ ವನಿತೆ ಅಬ್ಬಕ್ಕ ರಾಣಿಯ ಹೆಸರು ಹಾಗೂ ಸಾಹಸಗಾಥೆ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರುವುದು ಹೌದು. ಈ ರಾಣಿಯ ರಾಜಕೀಯ ಮುತ್ಸದ್ಧಿತನವನ್ನು ಬ್ರಿಟಿಷ್ ರಾಣಿ ಎಲಿಜಬೆತ್ ಜೊತೆಗೆ ಹೋಲಿಸಲಾಗಿದೆ ಎನ್ನುತ್ತಾರೆ. ಈಕೆಯ ವೀರಾವೇಶ ಹಾಗೂ ದಿಟ್ಟತನವನ್ನು ಗಮನಿಸಿ ಪೋರ್ಚುಗೀಸರು ಅವಳನ್ನು 'ಸೊಕ್ಕಿನ ರಾಣಿ' ಎಂದು ಕರೆಯುತ್ತಿದ್ದರಂತೆ. ಇಲ್ಲಿ ಮಾತ್ರವಲ್ಲದೆ ಪರ್ಷಿಯಾ ದೇಶದವರೆಗೂ ಹಬ್ಬಿಕೊಂಡಿರುವ ವಿಷಯ, ಸಾಧನೆಯ ವಿವರಗಳು ಹಾಗೂ ಇಬ್ಬರು ಅಬ್ಬಕ್ಕನವರು ರಾಣಿಗಳಾಗಿರುವ ಕುರಿತ ವಿಚಾರಗಳು ಇಲ್ಲಿವೆ.


ಯುಗಪ್ರವರ್ತಕಿ ಸಾಮ್ರಾಜ್ಞಿ ಎಲಿಜಬೆತ್ :

ಇಂಗ್ಲೆಂಡ್ ನಂತಹ ಪ್ರಬಲ ರಾಷ್ಟ್ರದಲ್ಲಿ ನಾಲ್ಕುವರೆ ದಶಕಗಳ ಕಾಲ ಸಾಮ್ರಾಜ್ಞಿಯಾಗಿದ್ದು, ಎಲಿಜಬೆತ್ ಯುಗವೆಂದೇ ಕರೆಯಲು ಕಾರಣವಾದ ರಾಣಿ ಈಕೆ. ಹಾಗೆಂದು ಆಕೆಯದ್ದು ಹೂವಿನ ಹಾದಿಯಲ್ಲ. ಆಕೆಯನ್ನು ಅಧಿಕಾರಿಗಳಿಂದಲೇ ದೂರವಿಡಲು ಮಾಡಿದ ಹುನ್ನಾರಗಳೆಲ್ಲವೂ ವಿಫಲವಾಗಿ, ಸಂಕೀರ್ಣ ಪರಿಸ್ಥಿತಿಯಲ್ಲಿ ರಾಣಿ ಪಟ್ಟವನ್ನು ಪಡೆದರೂ ತನ್ನ ಸ್ವಂತತೆ, ಪ್ರಜಾಪ್ರೇಮ, ದೂರಗಾಮಿತ್ವದಿಂದಲೇ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ರಾಣಿ ಈಕೆ. ಇಂಗ್ಲೆಂಡ್ ಅನ್ನು ಆಡಿದ ಟುಡೊರ್ ರಾಜಮನೆತನದ ಕೊನೆಯ ರಾಣಿಯೂ ಹೌದು.


ಶೂರ ಯೋಧರಾಣಿ ಚಾಂದ ಬೀಬಿ :

ಮೊಗಲ್ ಚಕ್ರವರ್ತಿ ಅಕ್ಬರನು ಅಹಮದನಗರದ ಮೇಲೆ ದಾಳಿ ನಡೆಸಿದಾಗ, ಅಸಾಧಾರಣ ಸಾಹಸ ಮೆರೆದು ಅಹಮದನಗರದ ರಾಜ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ ಚಾಂದ್ ಬೀಬಿ ವೈರಿಗಳಿಂದ 'ಚಾಂದ್ ಸುಲ್ತಾನಾ' ಎಂಬ ಬಿರುದನ್ನು ಪಡೆದಿದ್ದಾಳೆ. ಕರ್ನಾಟಕದ ಚರಿತ್ರೆಯಲ್ಲಿನ ಶೂರ ಯೋಧರಾಣಿ, ಬಹುಭಾಷಾ ಕೋವಿದೆ ಕುರಿತು ಓದಿ ನೋಡಿ.


ಅಪ್ರತಿಮ ಮಹಾರಾಣಿ ತಾರಾಬಾಯಿ :

ಪಶ್ಚಿಮ ಭಾರತದ ಮರಾಠಾ ಆಳ್ವಿಕೆಯ ಇತಿಹಾಸದ ಸಂಕೀರ್ಣ ಕಾಲಘಟ್ಟದಲ್ಲಿ ರಾಜ ಪ್ರತಿನಿಧಿಯಾಗಿ ಸಿಂಹಾಸನದ ಅಧಿಕಾರವನ್ನು ಸ್ವೀಕರಿಸಿದ ಈಕೆ ಮರಾಠ ವಂಶದ ಅರಸನ ಪತ್ನಿ. ಯಕಶ್ಚಿತ್ ಒಬ್ಬ ವಿಧವೆ ಹೆಣ್ಣುಮಗಳು ಎಂದು ತಾತ್ಸಾರ ದೃಷ್ಟಿಯಿಂದ ಕಂಡ ಔರಂಗಜೇಬನಿಗ ದುಃಸ್ವಪ್ನವಾಗಿ ಪರಿಣಮಿಸಿದ ಬಗೆ ಹೇಗೆ.. ವೀರರಾಣಿಯ ಯಶೋಗಾಥೆ ಓದಿ ನೋಡಿ.


ಆಧುನಿಕ ಆಸ್ಟ್ರೀಯಾ ದೇಶದ ರಾಣಿ ಮಾರಿಯಾ ತೆರೆಜಾ :

ಜಗತ್ತಿನ ಶ್ರೇಷ್ಠ ನೂರು ರಾಜ-ರಾಣಿಯರಲ್ಲಿ ಒಬ್ಬಳಾಗಿ ಪರಿಗಣಿಸಲ್ಪಟ್ಟಿರುವುದು ಆಸ್ಟ್ರೀಯಾ ದೇಶದ ರಾಣಿ ಮಾರಿಯಾ ತೆರೆಜಾ. ಹೆಣ್ಣು ಮಕ್ಕಳಿಗೆ ಸಿಂಹಾಸನದ ಉತ್ತರದಾಯಿತ್ವ ನೀಡದ ಕಾನೂನು ಜಾರಿಯಲ್ಲಿದ್ದ ಸಂದರ್ಭದಲ್ಲಿ ಆರನೇಯ ಚಾರ್ಲ್ಸ್ ದೊರೆಗೆ ಗಂಡು ಸಂತಾನವಿಲ್ಲದ್ದಕ್ಕೆ ವಿಶೇಷ ಅನುಮತಿಯೊಂದಿಗೆ ರಾಜ್ಯಾಧಿಕಾರದ ಪಟ್ಟವನ್ನೇರಿದ ಅದೃಷ್ಟಶಾಲಿಯಾದರೂ.. ತನ್ನ ಸ್ವಂತ ಬಲ ಹಾಗೂ ಚಾತುರ್ಯದ ಮೂಲಕ ತನ್ನನ್ನು ಹಾಗೂ ದೇಶವನ್ನು ಉಳಿಸಿಕೊಟ್ಟ ಐತಿಹಾಸಿಕ ಮಹತ್ವದ ಘಟನೆ ಇಲ್ಲಿದೆ. ಇಂದು ಆಸ್ಟ್ರೀಯಾ ದೇಶ ರಾಣಿ ಮಾರಿಯಾಳನ್ನು ಯೋಧರಾಣಿ ಮತ್ತು ಮಹಾಮಾತೆಯೆಂದು ಸ್ಮರಿಸುವುದೇಕೆ ಓದಿ ನೋಡಿ.


ಪ್ರಜಾಪರ ಮಹಾರಾಣಿ ಅಹಲ್ಯಾಬಾಯಿ ಹೋಳಕರ :

ಮಹಾರಾಣಿಯಾಗಿದ್ದರೂ ಸಂತ ಮಹಿಳೆಯಂತೆ ಬದುಕಿ ಪ್ರಜಾನುವಾತ್ಸಲ್ಯದಿಂದ ಜನಾನುರಾಗಿಯಾಗಿದ್ದ ಅಹಲ್ಯಾಬಾಯಿ ಹೋಳಕರ ಹಿಂದೆ ಹುಟ್ಟಿನಲ್ಲಿ ರಾಜಮನೆತನದ ಹಿನ್ನೆಲೆಯಿಲ್ಲದಿರುವುದು ಗಮನೀಯ. ಇಂದೋರಿನ ಮಹಾರಾಣಿಯಾಗಿ ಅಧಿಕಾರ ಸ್ವೀಕರಿಸಿದ ಅಹಲ್ಯಾಬಾಯಿ ಆನಂತರದ ಮೂರು ದಶಕಗಳಲ್ಲಿ ಬಂಗಾರದ ಯುಗವನ್ನು ದಾಖಲಿಸಿದವಳು. ಆಕೆಯ ನಿಸ್ವಾರ್ಥ ಆಳ್ವಿಕೆ ಹಾಗೂ ಜನಾನುರಾಗಿ ಸರಳ ಜೀವನದ ಬದುಕು ಆದರ್ಶನೀಯ. ಹಲವಾರು ಪ್ರಜಾಪರ ಕಾರ್ಯಗಳನ್ನು ನಡೆಸಿದ ರಾಣಿಯ ಬದುಕನ್ನು ಕಾಣಬಹುದು.


ಸಾರ್ವಭೌಮತೆಯನ್ನು ಮೆರೆದ ಎರಡನೆಯ ಕ್ಯಾಥರೀನ್ ದಿ ಗ್ರೇಟ್ : 

ರಷ್ಯಾದಲ್ಲಿ ಹುಟ್ಟದೆ ರಷ್ಯಾದ ರಾಣಿಯಾದವಳು ಈಕೆ. ಮಹಾರಾಣಿ, ಕ್ಯಾಥರೀನ್ ಆಡಳಿತಾವಧಿಯನ್ನು ರಷ್ಯಾದ ಚಿನ್ನದ ಯುಗವೆಂದೇ ಚರಿತ್ರಕಾರರು ಬಣ್ಣಿಸಿದ್ದಾರೆ. ಈಕೆಯ ಜಾಣತನ ಹಾಗೂ ಕುಶಲಮತಿ ಸೆಳೆಯುತ್ತದೆ. ಧಾರ್ಮಿಕ ಶಿಕ್ಷಣದೊಂದಿಗೆ ಜರ್ಮನ್, ಫ್ರೆಂಚ್ ಮತ್ತು ರಷ್ಯನ್ ಭಾಷೆಗಳನ್ನು ತಿಳಿದುಕೊಂಡವಳು. ಜನರನ್ನು ಬೇಗನೆ ಆಕರ್ಷಿಸುವ ಛಾತಿಯುಳ್ಳವಳು. ಈಕೆಯ ವೈಯಕ್ತಿಕ ಬದುಕಿಗಿಂತಲೂ ಆಡಳಿತ ಬದುಕು ಸೆಳೆಯುತ್ತದೆ.


ಅಪೂರ್ವ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ :

ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಸಾಧಿಸಿದ ಗೆಲುವು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರು ಅನುಭವಿಸಿದ ಏಕಮಾತ್ರ ಸೋಲು ಎಂಬುದು ಗಮನೀಯ. ರಾಜ್ಯದ ನಕ್ಷೆಯಲ್ಲಿ ಪುಟ್ಟ ಊರಾದರೂ.. ಸಮರ್ಥ ರಾಜರುಗಳ ಸಂಸ್ಥಾನ ಅದು. ಅಂತಹ ರಾಜ್ಯವನ್ನು ಆಳಿದ ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯಗಾಥೆ ಓದಿ ನೋಡಿ


ಝಾನ್ಸಿಯ ವೀರರಾಣಿ ಲಕ್ಷ್ಮೀಬಾಯಿ :

ಭಾರತದ ಪ್ರಥಮ ಸ್ವಾತಂತ್ರ್ಯ ಸಮರದಲ್ಲಿ ಹೆಸರು ಪಡೆದ ಪಟ್ಟಣ ಝಾನ್ಸಿ. ಝಾನ್ಸಿಯ ವೀರರಾಣಿ ಲಕ್ಷ್ಮೀಬಾಯಿ ಎಂದರೆ ಆಕೆಯ ವೇಷಭೂಷಣ, ದತ್ತು ಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ತನ್ನ ಪ್ರೀತಿಯ ಕುದುರೆಯನ್ನು ಹತ್ತಿ ಪುರುಷ ಪೋಷಾಕಿನಲ್ಲಿ ಕಾಣುವ ರಾಣಿಯ ಚಿತ್ರಣ ಕಣ್ಮುಂದೆ ಬರುತ್ತದೆ. ಆಕೆಯ ಬಾಲ್ಯದ ದಿನಗಳು, ಶೌರ್ಯ, ಆಕೆಯ ಕನಸುಗಳು ಎಲ್ಲದರ ಚಿತ್ರಣ ಇಲ್ಲಿದೆ.


ಯುಗಕ್ಕೆ ನಾಂದಿ ಹಾಡಿದ ರಾಣಿ ವಿಕ್ಟೋರಿಯಾ:

63 ವರ್ಷಗಳಷ್ಟು ದೀರ್ಘಕಾಲ ಗ್ರೇಟ್ ಬ್ರಿಟನ್ನಿನ ರಾಣಿಯಾಗಿ ಮೆರೆದು ಅಪರೂಪದ ಯುಗಕ್ಕೆ ನಾಂದಿ ಹಾಡಿದ ರಾಣಿ ವಿಕ್ಟೋರಿಯಾ ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತದ ಚಕ್ರವರ್ತಿನಿಯ ಸ್ಥಾನವನ್ನು ಅಲಂಕರಿಸಿದ ರಾಣಿ. ಈಕೆಯ ಕಿರೀಟಧಾರಣೆಯ ಸಮಾರಂಭದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಸಂಖ್ಯೆಯ ಅತಿಥಿಗಳು ಭಾಗವಹಿಸಿದ್ದರು. ವಿಕ್ಟೋರಿಯಾ ಉತ್ತಮ ಲೇಖಕಿಯೂ ಆಗಿದ್ದವಳು. ಪ್ರತಿದಿನ ಸರಾಸರಿ ಎರಡೂವರೆ ಸಾವಿರ ಪದಗಳನ್ನು ಬರೆದಿಟ್ಟುಕೊಳ್ಳುವ ಹವ್ಯಾಸವಿತ್ತು. ಹೀಗಾಗಿ ಆಕೆಯ ಸ್ವಂತ ಬರವಣಿಗೆ ಸುಮಾರು 122 ಸಂಪುಟಗಳಷ್ಟು ಆಗಿತ್ತು ಎನ್ನುತ್ತಾರೆ. ಆದರೆ, ಇದರಲ್ಲಿ ಖಾಸಗಿ ವಿವರಗಳಿದ್ದ ಕಾರಣದಿಂದ ಅನೇಕ ಸಂಪುಟಗಳನ್ನು ನಾಶಪಡಿಸಲಾಗಿತ್ತು. ಹೀಗೆ ವಿಕ್ಟೋರಿಯಾಳ ಹಾಗೂ ವಿಕ್ಟೋರಿಯಾ ಯುಗದ ಹಲವಾರು ವೈಶಿಷ್ಟ್ಯಗಳು ಇಲ್ಲಿವೆ. 


ದೇಶಭಕ್ತಿ, ತ್ಯಾಗ ಮನೋಭಾವ, ಧೈರ್ಯ, ಎಲ್ಲವನ್ನೂ ಎದುರಿಸಿ ನಿಲ್ಲುವ ಛಾತಿ, ಸೌಂದರ್ಯ, ಜನಾನುರಾಗಿ ಹೀಗೆ ಒಂದಿಲ್ಲೊಂದು.. ಇಲ್ಲವೇ ಹಲವಾರು ಗುಣವಿಶೇಷಗಳಿಂದ ಇಲ್ಲಿನ ಮಹಾರಾಣಿಯರು ಅಪ್ರತಿಮ ರಾಣಿ ಮಹಾರಾಣಿಯಾಗಿ ಸೆಳೆಯುತ್ತಾರೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ