ಭಾನುವಾರ, ಏಪ್ರಿಲ್ 26, 2026

ಸನ್ನಿವೇಶ (ಪುಸ್ತಕ ಯಾನ - 358)


ಪುಸ್ತಕದ ಶೀರ್ಷಿಕೆ : ಸನ್ನಿವೇಶ

ಲೇಖಕರು : ಕೆ. ಟಿ. ಗಟ್ಟಿ

ಪ್ರಕಾಶಕರು : ಭಾಗೀರಥಿ ಪ್ರಕಾಶನ

ಪ್ರಥಮ ಮುದ್ರಣ : 1993

ಪುಟಗಳು : 115


ಇದು ನಾನು ಓದಿದ ಕೆ.ಟಿ ಗಟ್ಟಿಯವರ ಎರಡನೇ ಕಾದಂಬರಿ. ಮೊದಲನೆಯದ್ದು ಅಶ್ರುತಗಾನ ಅದಕ್ಕಿಂತ ಇದು ವಿಭಿನ್ನವಾಗಿ ಓದಿಗೆ ಸಿಕ್ಕಿತು. ಅದಕ್ಕೆ ಕಾರಣ, ಇಲ್ಲಿ ಕಥಾವಸ್ತುವಿಗಿಂತ ಮುಖ್ಯವಾಗಿ ಆಯಾ ಸನ್ನಿವೇಶಕ್ಕೆ ತಕ್ಕಂತ ವಿವಿಧ ದೃಷ್ಟಿಕೋನಕ್ಕೆ ಒತ್ತು ನೀಡಿದ್ದಾರೆ. ಈ ಕಥೆ ಎಲ್ಲಿಂದಲೋ ಆರಂಭವಾಗಿ ಎಲ್ಲೋ ನಿಂತು ಹೋಗುತ್ತದೆ ಎಂದೆನಿಸುತ್ತದೆ. ಲೇಖಕರು ಸಹ ಅದನ್ನೇ ಹೀಗೆ ಧ್ವನಿಸುತ್ತಾರೆ. ಯಾವುದೇ ಮನುಷ್ಯನ ಬದುಕಿನ ಆರಂಭ ಅಥವಾ ಅಂತ್ಯ ಮುಖ್ಯ ವಸ್ತುವಲ್ಲ. ಇಲ್ಲಿನ ಅವಲೋಕನದಲ್ಲಿ ಕ್ರಮಾನುಸಾರ ಹೇಳಲು ಯತ್ನಿಸಿದ್ದೇನೆ.


ಪ್ರತಿ ಮನುಷ್ಯನ ಬದುಕಿನಲ್ಲಿ ನಡೆಯುವ ಸಂಗತಿಗಳು, ಅವರ ಅನುಭವಕ್ಕೆ ಬರುವ ಸಂದರ್ಭ ಒಬ್ಬರ ದೃಷ್ಟಿಯಲ್ಲಿ ಸರಿಯೆನಿಸಿದರೆ.. ಮತ್ತೊಬ್ಬರ ದೃಷ್ಟಿಯಲ್ಲಿ ಅದು ಬೇರೆ ರೀತಿಯಲ್ಲಿ ಭಾಸವಾಗಬಹುದು. ಅದು ತಪ್ಪಾಗಿಯೂ ಇರಬಹುದು ಅಥವಾ ವಿಕಾರವೂ ಆಗಿರಬಹುದು. ಒಬ್ಬರಂತೆ ಮತ್ತೊಬ್ಬರು ಯೋಚಿಸದೆ ಇರುವುದು ಅದಕ್ಕೆ ಕಾರಣ ಮಾತ್ರವಲ್ಲ. ಬದಲಾಗಿ, ಅವರ ಅರಿವು ಹಾಗೂ ಅನುಭವಕ್ಕೆ ಬರುವ ಸಂಗತಿಗಳು ಅದನ್ನು ತೀರ್ಮಾನಿಸುವಂತೆ ಮಾಡುತ್ತದೆ. ಆದರೆ, ಇಲ್ಲಿ ಇಂತಹ ಸನ್ನಿವೇಶಗಳನ್ನು ಇದು ಯಾಕೆ ಹೀಗೆ..? ಎಂಬ ಆಲೋಚನಾತ್ಮಕ ದೃಷ್ಟಿಯಲ್ಲಿ ಕಟ್ಟಿಕೊಡಲಾಗಿದೆ.


ಸನ್ನಿವೇಶಗಳು ಬದಲಾಗುತ್ತಿರುತ್ತವೆ. ಅದಕ್ಕೆ ಕಾರಣ ಕಾಲವೂ ಆಗಿರುತ್ತದೆ. 70 ವರ್ಷಗಳ ಹಿಂದೆ ಚಂದ್ರೋಜಿ ಬಲ್ಲಾಳರ ತಂದೆ ಅಪ್ಪಾಜಿ ಬಲ್ಲಾಳರ ಕಾಲದಲ್ಲಿ ಕಟ್ಟಿಸಿದ ಉಪ್ಪರಿಗೆ ಮನೆ "ಊರು ಅಳಿದರೂ.. ನಾನು ಉಳಿಯುವೆ" ಎಂಬಂತಿದ್ದ ಮಹಡಿ ಮನೆ ಈಗ ಸಂಪೂರ್ಣವಾಗಿ ಬದಲಾಗುತ್ತಿತ್ತು. ಈಗ ಅದರಲ್ಲಿ ಮೂರನೇ ತಲೆಮಾರಿನವರು ವಾಸ ಮಾಡುತ್ತಿರುವುದು. ಮೊಮ್ಮಗ ಶಶಿರಾಜ ತನ್ನ ಅಜ್ಜ ಹೇಗೆ ಜೀವಿಸುತ್ತಿರಬಹುದು ಅವರ ಠೀವಿ ಹೇಗಿದ್ದಿರಬಹುದು ಎಂದೆಲ್ಲಾ ಯೋಚಿಸುತ್ತಲೇ ಆ ಊರಿನ ಬೆಟ್ಟದಲ್ಲಿ ಆಲೋಚನೆಯಲ್ಲಿ ಮುಳುಗಿದ್ದಾನೆ. 


ಈ ಕಾದಂಬರಿಯಲ್ಲಿ ಶಶಿರಾಜನ ಆಲೋಚನೆಗಳೇ ಹೆಚ್ಚು ಬಿಂಬಿತವಾಗಿವೆ. ಆತನಿಗೆ ಕೆಲವು ದೃಶ್ಯಾತೀತವಾದ ದೃಶ್ಯಗಳು ಕಂಡರೆ, ಕೆಲವು ಶ್ರವಣಾತೀತ ಧ್ವನಿಗಳ ವಿಚಾರಗಳೆಲ್ಲವೂ ಕೇಳಿಸಿರುವಂತೆ ಭಾಸವಾಗುತ್ತದೆ. ಅದಕ್ಕೆ ಕಾರಣ ತಾನು ಕೇಳಿಸಿದೆಲ್ಲಾ ಭಾಷೆಯಾಗಿರಬೇಕು ಎಂಬ ಅವನ ಆಲೋಚನಾಲಹರಿ. ಅಷ್ಟೇ ಅಲ್ಲದೆ, ಅದು ತನ್ನದೇ ಭಾಷೆಯಾಗಿರಬೇಕು ಎಂದುಕೊಳ್ಳುವವನಿಗೆ ಲೋಕದಲ್ಲಿ ಬೇರೆ ಬದುಕು ಹಾಗೂ ಬೇರೆ ಧ್ವನಿಯ ಬೇರೊಂದು ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಹಪಾಹಪಿ. ಅದು ಆಗದಿದ್ದಾಗ ಅದನ್ನು ತನ್ನದೇ ರೀತಿಯಲ್ಲಿ ತನ್ನ ಭಾಷೆಯಲ್ಲಿ ಯೋಚಿಸಿಕೊಳ್ಳುತ್ತಿದ್ದ. ಶಶಿರಾಜನ ಆಲೋಚನೆಗಳಿಗೆ ಎಲ್ಲೆ ಇಲ್ಲ. ಅದು ಹುಟ್ಟು- ಸಾವು, ಲೌಕಿಕ- ಅಲೌಕಿಕ ಎಲ್ಲವನ್ನು ಒಳಗೊಂಡಿರುತ್ತಿತ್ತು. ಆತನ ಮೂಲಕ ಹಲವಾರು ಆಲೋಚನೆಗಳನ್ನು ಓದುಗರಿಗೆ ದಾಟಿಸುತ್ತಾರೆ ಲೇಖಕರು. 


ಶಶಿರಾಜ ಹೀಗೆ ಕಳಲೆ ಬೆಟ್ಟದ ತಪ್ಪಲಿನಲ್ಲಿ, ಬೆಟ್ಟದ ಮೇಲಿನ ಬಸದಿಯಲ್ಲಿ ಯಾವಾಗಲೂ ಆಲೋಚನೆಗೆ ತೊಡಗುತ್ತಿದ್ದ. ಈಗ ತಂದೆಯ ಸಾವು ಸಂಭವಿಸಿದ ಸಂದರ್ಭದಲ್ಲಿಯೂ ಆತ ಹಾಗೆಯೇ ಮಾಡಿದ್ದ. ತಂದೆಗೆ ಹುಷಾರಿಲ್ಲ ಪರಿಸ್ಥಿತಿ ಗಂಭೀರವಿದೆ ಎಂಬ ಅಣ್ಣನ ತಾರು ಬಂದಿದ್ದರಿಂದ ತನ್ನ ಬ್ಯಾಂಕ್ ಕೆಲಸಕ್ಕೆ ರಜೆ ಹಾಕಿ ವಿಮಾನ ಹತ್ತಿ ಬಂದಿದ್ದ. ಆದರೆ, ಮನೆ ತಲುಪಿದಾಗ ತಿಳಿದದ್ದು ಅಪ್ಪನ ಸಾವು ಸಂಭವಿಸಿತ್ತೆಂದು. 


ಆದರೆ, ಆ ಸಂದರ್ಭದಲ್ಲಿಯೂ ಅವನು ತನ್ನ ನೀಲುವನ್ನು ಹುಡುಕುತ್ತಿದ್ದ. ಆದರೆ, ನೀಲು ಮಾತ್ರವಲ್ಲ ಅವಳ ತಾಯಿ ಪಾತಮ್ಮ, ಅಣ್ಣ, ತಮ್ಮ ಯಾರೂ ಕಾಣಿಸಿರಲಿಲ್ಲ ಶಶಿರಾಜನಿಗೆ. ಆಶ್ಚರ್ಯವಾದರೂ ಅದು ಪ್ರಶ್ನಿಸುವ ಸಮಯವಾಗಿರಲಿಲ್ಲ.


ನೀಲು ಆತನ ಗೆಳತಿಯಲ್ಲ. ಬದಲಾಗಿ, ಆತನ ಮನೆ ಕೆಲಸಕ್ಕೆ ಬರುತ್ತಿದ್ದವರ ಮಗಳು. ಆತನಿಗೆ 14 ವರ್ಷವಿದ್ದಾಗ ಏಳು ವರ್ಷದ ನೀಲುವಿನ ಪರಿಚಯವಾಗಿತ್ತು. ಹಾಗೆ ಶುರುವಾದ ಪರಿಚಯದಿಂದ ಮುಂದೆ ವಯೋಸಹಜ ಸ್ನೇಹಕ್ಕೆ ಹಾತೊರೆಯುತ್ತಿದ್ದ ಶಶಿರಾಜ. ನೀಲುವಿಗೆ ಆತಂಕವಿದ್ದರೂ, ಶಶಿರಾಜನಿಗೆ ಆತಂಕವಿರಲಿಲ್ಲ. ಅವರ ಸ್ನೇಹ ಹಾಗೆಯೇ ಮುಂದುವರಿದು ಪ್ರೇಮಕ್ಕೂ ತಿರುಗಿತ್ತು. ಅದು ಶಶಿರಾಜನಿಂದ ಹೆಚ್ಚೇ ಇತ್ತು. ಕಳಲೆ ಗುಡ್ಡದ ಬಸದಿಯಲ್ಲಿ ಆಗಾಗ ಅವರ ಭೇಟಿಯಾಗುತ್ತಿದ್ದದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಓದು ನಿಲ್ಲಿಸಿದ್ದ ಅವಳನ್ನು ತನ್ನದೇ ರೀತಿಯಲ್ಲಿ ಓದಲು ಪ್ರೋತ್ಸಾಹಿಸುತ್ತಿದ್ದ. ಆದರೆ, ಅದು ಅಷ್ಟು ಸುಲಭವಿರಲಿಲ್ಲ.


ಶಶಿರಾಜ ಹಾಗೂ ನೀಲುವಿಗೆ ಕೇವಲ ಅಂತಸ್ತಿನ ವ್ಯತ್ಯಾಸ ಮಾತ್ರವಲ್ಲ ಜಾತಿಯ ವ್ಯತ್ಯಾಸವೂ ಇತ್ತು. ನೀಲು ಓದಿರದಿದ್ದರೂ ಅವಳಿಗಿದ್ದ ಲೋಕಜ್ಞಾನದಿಂದ ಅವಳ ಮಿತಿಯ ಅರಿವಿತ್ತು. ಶಶಿರಾಜ ಬ್ಯಾಂಕಿನಲ್ಲಿ ಕೆಲಸ ಸಿಕ್ಕು ಮುಂಬೈಗೆ ಹೊರಟಿದ್ದಾಗ ನೀಲುವನ್ನು ತನ್ನೊಡನೆ ಬರಲು ಆಹ್ವಾನಿಸಿದ್ದ. ಅದು ಕೇವಲ ಬಾಯಿ ಮಾತಿನದಲ್ಲ, ಅವಳನ್ನು ಮದುವೆಯಾಗುವ ಆಶ್ವಾಸನೆ ಸಹ. ಅದಾದ ನಾಲ್ಕು ತಿಂಗಳ ನಂತರ ಬಂದವನು ಅವಳನ್ನು ಕರೆದೊಯ್ಯುತ್ತೇನೆಂದುಕೊಂಡಿದ್ದ. ಅಷ್ಟರಲ್ಲಿಯೇ ನೀಲುವಿನ ತಂದೆಯ ಸಾವಾಗಿತ್ತು. ಈಗ ನೀಲು ಶಶಿರಾಜನ ಮನೆಯಲ್ಲಿ ಕೆಲಸದವಳಾಗಿ ಕೆಲಸ ಮಾಡುತ್ತಿದ್ದಳು. ಅವನ ತಾಯಿ ಆಕೆಯನ್ನು ಒಪ್ಪುವುದು ಸಾಧ್ಯವೇ ಇರಲಿಲ್ಲ. ಆದರೂ.. ಶಶಿರಾಜ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ತಂದೆ ಸತ್ತ ಸಂದರ್ಭದಲ್ಲಿ ತಾಯಿಯಿಂದಲೂ ಬೇರ್ಪಡಿಸುವುದು ಅವನಿಗೆ ಸರಿ ಕಾಣದ್ದರಿಂದ ವರ್ಷದ ರಜೆಯಲ್ಲಿ ನೀಲುವನ್ನು ಕರೆದೊಯ್ಯಲು ತೀರ್ಮಾನಿಸಿದ್ದ.


ತನ್ನ ತಂದೆ ಸತ್ತಾಗ ಊರಿಗೆ ಬಂದಾಗ ಆತನಿಗೆ ತಿಳಿದ ಸತ್ಯವೆಂದರೆ.. ನೀಲುವಿನ ಗುಡಿಸಲಿನ ಅರ್ಧ ಗೋಡೆ ಕಂಡಿತ್ತು. ಅದಕ್ಕಿಂತಲೂ ಹೆಚ್ಚು ದಿಗ್ಭ್ರಮೆಗೊಳಿಸಿದ್ದು ಆಕೆಯ ಸಾವು. ನೀಲು ಬಸದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.. ಆಕೆಗೆ ಮೂರು ತಿಂಗಳಾಗಿತ್ತು ಎಂಬ ಸತ್ಯ. ಇದು ಆತನನ್ನು ಮತ್ತಷ್ಟು ಜರ್ಜರಿತಗೊಳಿಸಿತು. ಅದರಲ್ಲಿಯೂ ತನ್ನ ತಾಯಿ ವಸುಧಮ್ಮನ ಅನುಮಾನ ತನ್ನ ಕಡೆಗೆ ತಿರುಗಿದಾಗ ಶಶಿರಾಜ ಮತ್ತಷ್ಟು ಕುಗ್ಗಿ ಹೋಗಿದ್ದ. 


ತಂದೆಯ ಶ್ರಾದ್ಧ ಮುಗಿದ ನಂತರವೂ ಆತ ಬೊಂಬೈಗೆ ಹೊರಡದಿದ್ದಾಗ ತಾಯಿ, ಅಣ್ಣ ಉಪೇಂದ್ರ ಹಾಗೂ ಶೋಭತ್ತಿಗೆಯ ಒತ್ತಾಯವು ಆತನನ್ನು ಬೇಗನೆ ಕಳಿಸುವ ಹುನ್ನಾರದಂತೆ ಕಾಣುತ್ತಿತ್ತು. ತಂಗಿ ಭಾಮಿನಿಯದ್ದು ಯಾವಾಗಲೂ ಗಂಭೀರ ಭಾವ. ಮತ್ತೊಬ್ಬ ತಂಗಿ ಶಾಂತಲಾಳಿಂದ ಮನೆಯ ವಿಷಯ ತಿಳಿಯುತ್ತಿತ್ತು. 


ತಂದೆಯ ಸಾವಿನ ಹಿಂದೆ ಅಡಗಿರುವ ರಹಸ್ಯ ಏನೆಂಬುದರ ಹಿಂದೆ ಬಿದ್ದವನಿಗೆ ತಿಳಿದದ್ದೇನು..? ಆತನ ತಂದೆಯ ಸಾವು ಸಂಭವಿಸಿದ್ದು ಹೇಗೆ..? ಅಜ್ಜನ ಕಾಲದ ವೈಭವದ ಬದುಕು ಹೇಗಿತ್ತು..? ಅಂದು ಎಷ್ಟೋ ಜನರು ಹಾಕಿದ್ದ ಶಾಪಕ್ಕೂ ತಂದೆಯ ಸಾವಿಗೂ ಏನಾದರೂ ನಂಟಿತ್ತೇ..?


ನೀಲುವಿನಂತೆ ಕಾಣುತ್ತಿದ್ದ ನೀರಜಾ ಆಗಾಗ ಬಸದಿ ಬೆಟ್ಟದಲ್ಲಿ ಶಶಿರಾಜನಿಗೆ ಸಿಗುತ್ತಿದ್ದಳು. ಅದು ಆತನಿಗೆ ನೀಡಿದ ಅನುಭವವೇನು..? ಆಕೆ ಹೇಳಿದ ಸತ್ಯವೇನು..? ಆ ಎಳೆ ಹಿಡಿದು ಹೊರಟವನಿಗೆ ಸಿಕ್ಕ ನೋಟವೇನು..?


ಇದು ಶಶಿರಾಜನಿಂದ ಕಂಡ ಸನ್ನಿವೇಶವಾದರೂ.. ಆತನ ಅಣ್ಣ ಉಪೇಂದ್ರನಿಂದ, ತಾಯಿ ವಸುಧಮ್ಮನಿಂದ ಹಾಗೂ ತಂಗಿಯಿಂದ, ನೀರಜಳಿಂದ ಬೇರೆ ಬೇರೆ ನೋಟವೇ ಸಿಗುತ್ತವೆ. 


ಇಲ್ಲಿ ಒಂದೇ ಸನ್ನಿವೇಶಕ್ಕೆ ವಿವಿಧ ನೋಟಗಳಿವೆ ಹಾಗೂ ಮರುಓದಿನಲ್ಲಿ ಕಾದಂಬರಿ ಬೇರೆಯೇ ರೀತಿಯಲ್ಲಿ ಅರ್ಥವಾಗುತ್ತದೆ. ದೃಷ್ಟಿಕೋನ ಬದಲಾಗುವುದು ಸಹಾ ಕಾರಣವೇನೋ.. ಈ ಕಾದಂಬರಿಯ ಓದು ಸರಾಗವಾದರೂ.. ಅರ್ಥೈಸಿಕೊಳ್ಳುವಿಕೆ ಸರಳತೆ ಹಾಗೂ ಸಂಕೀರ್ಣತೆಯ ನಡುವಿನಲ್ಲಿದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ