ಭಾನುವಾರ, ಏಪ್ರಿಲ್ 26, 2026

ಮೈಸೂರ್ ಸ್ಪೆಷಲ್ ಮಾವಿನಕಾಯಿ ಚುರುಮುರಿ (ಪುಸ್ತಕ ಯಾನ - 362)


ಪುಸ್ತಕದ ಶೀರ್ಷಿಕೆ : ಮೈಸೂರ್ ಸ್ಪೆಷಲ್ ಮಾವಿನಕಾಯಿ ಚುರುಮುರಿ

ಲೇಖಕರು : ಧರ್ಮಶ್ರೀ ಬಿ. ಅಯ್ಯಂಗಾರ್

ಪ್ರಕಾಶಕರು : ಇನ್ಸ್ಪೈರ್ ಬುಕ್ಸ್ 

ಪ್ರಥಮ ಮುದ್ರಣ : ಫೆಬ್ರವರಿ 2025

ಪುಟಗಳು : 80

ಬೆಲೆ : 80 ರೂ.


ಮೈಸೂರ್ ಸ್ಪೆಷಲ್ ಮಾವಿನಕಾಯಿ ಚುರುಮುರಿ ಧರ್ಮಶ್ರೀ ಬಿ. ಅಯ್ಯಂಗಾರ್ ಅವರ ಸಣ್ಣ ಕಥೆಗಳ ಸಂಗ್ರಹ. ಇವರು ಅಪಾರ್ಥ ಮಂಜರಿ ಹಾಗೂ ಮಕ್ಕಳಿಗಾಗಿ ಭಾಗವತದ ಕಥೆಗಳು ಪುಸ್ತಕವನ್ನು ಸಹ ಬರೆದಿದ್ದಾರೆ. ಇದು ನಾನು ಓದಿದ ಅವರ ಮೊದಲ ಪುಸ್ತಕ. ಈ ಕಥಾ ಸಂಕಲನವು 10 ಸಣ್ಣ ಕಥೆಗಳನ್ನು ಒಳಗೊಂಡಿದೆ. ಇವು 10 ವರ್ಷಗಳ ಅವಧಿಯಲ್ಲಿ ಬರೆದ 10 ಕಥೆಗಳು. ಇದರಲ್ಲಿ ಮೂರು ಕಥೆಗಳು ಅನುವಾದಿತ ಕಥೆಗಳು.


ವಿವಾಹ ಭೋಜನವಿದು ಬಫೆ ವರ್ಸಸ್ ಬಾಳೆಲೆ : ಸುಬ್ರಾಮ ಹಾಗೂ ಶ್ರೀಧರ ಅಕ್ಷರಶಃ ತಿಂಡಿಪೋತರು. ಅವರ ಆಸಕ್ತಿಗಳೇ ಅವರಿಬ್ಬರನ್ನು ಒಂದೆಡೆ ಸೇರಿಸಿದ್ದೆಂದರೂ ತಪ್ಪಾಗಲಾರದು. ಅವರ ತಿಂಡಿಪೋತಿತನ ಎಷ್ಟರ ಮಟ್ಟಿಗೆ ಎಂದರೆ ಆಹ್ವಾನವಿಲ್ಲದ ಕಾರ್ಯಕ್ರಮಗಳಿಗೂ ಹೋಗಿ ಉಂಡು ಬರುವಷ್ಟರಮಟ್ಟಿಗೆ. ಅದೂ ಸರ್ವಧರ್ಮದ ಕಾರ್ಯಕ್ರಮಗಳಿಗೂ ಅನ್ವಯ. ಜನಕ್ಕೆ ಇವರ ಈ ಬಾಯಿಚಪಲದ ಅರಿವಿದ್ದ ಕಾರಣಕ್ಕೆ ವಿವಾಹವೂ ತಡವಾಗಿತ್ತು. ಶ್ರೀಮಂತ ಸುಬ್ರಾಮ ಹಾಗೂ ಲೆಕ್ಚರರ್ ಶ್ರೀಧರ ಇವರಿಬ್ಬರಿಗೂ ಭಿನ್ನಾಭಿಪ್ರಾಯವಿದ್ದದ್ದು ಬಫೆ ವರ್ಸಸ್ ಬಾಳೆಲೆ ಊಟದಲ್ಲಿ. ಅವರಿಬ್ಬರ ಭಿನ್ನಾಭಿಪ್ರಾಯವೇ ಅವರಿಬ್ಬರ ಬದಲಾವಣೆಗೂ ಕಾರಣವಾದ ಚಮಕ್ ಕೊಡುವ ಕಥೆ ಇಲ್ಲಿದೆ. ಈ ಕಥೆ ತುಷಾರ ಮಾಸಪತೆಯಲ್ಲಿ ಪ್ರಕಟಿತ.


ನಾಣ್ಯ : ಹೆಡ್ಸ್ ಆರ್ ಟೈಲ್ಸ್ : ವೈದೇಹಿಯ ಗೋಲಕದಲ್ಲಿದ್ದ ಒಂದೊಂದು ನಾಣ್ಯವೂ ಒಂದೊಂದು ಕಥೆ ಹೇಳುತ್ತಿತ್ತು. ನಾಣ್ಯವೆಂದರೆ ಕೇವಲ ದುಡ್ಡಲ್ಲ.. ಆ ನಾಣ್ಯದ ಹಿಂದಿನ ಭಾವನೆಗಳು ಎನ್ನುತ್ತಾ ನಮ್ಮನ್ನು ಕಲಕಿಸುತ್ತವೆ.  ಹೆಡ್ಸ್ ಆರ್ ಟೈಲ್ಸ್ ಎನ್ನುತ್ತಾ ವಿಧಿಯ ಜೊತೆಗೆ ಆಟವಾಡುತ್ತಿದ್ದ ವೈದೇಹಿಯ ಪಂದ್ಯದ ಈ ಕಥೆ ಉದಯವಾಣಿಯಲ್ಲಿ ಪ್ರಕಟಿತ.


ಮೈಸೂರು ಸ್ಪೆಶಲ್ ಮಾವಿನಕಾಯಿ ಚುರುಮುರಿ : ಅನಾಥ ಹುಡುಗ ಈರನಿಗೆ ಮೈಸೂರಿನಲ್ಲಿ ಸೀನಣ್ಣ ಹಾಕುತ್ತಿದ್ದ ಮಾವಿನ ಕಾಯಿ ಚುರುಮುರಿ ತಿನ್ನುವ ಆಸೆ. ಆದರೆ, ಆತನ ಬಳಿ ಅಷ್ಟೂ ದುಡ್ಡಿರುತ್ತಿರಲಿಲ್ಲ. ಸೀನಣ್ಣನಿಗೂ ಹಾಗೂ ಈರನಿಗೂ ಬಂಧ ಬೆಸೆದ ಚುರುಮುರಿಯ ಈ ಕಥೆ ಉದಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿತ.


ಒಂದು ಗಿಫ್ಟಿನ ಕಥೆ : ಇದು ಗಿಫ್ಟ್ ಅಂಗಡಿಯಲ್ಲಿದ್ದ ಕ್ರಿಸ್ಟಲ್ ರಾಧಾಕೃಷ್ಣ ಗೊಂಬೆ ಹೇಳುವ ಒಂದು ಗಿಫ್ಟಿನ ಕಥೆ. ಅಂಗಡಿಯಲ್ಲಿ ತನ್ನನ್ನು ಆಯ್ಕೆ ಮಾಡಿಕೊಳ್ಳುವವರ ಮನಸ್ಥಿತಿ, ಮಾತುಕತೆ ಹಾಗೂ ಅವು ಗಿಫ್ಟ್ ಆಗಿ ಹೋದವರ ಮನೆಯಲ್ಲಿನ ಪರಿಸ್ಥಿತಿ, ಅವರ ಮನಸ್ಥಿತಿ ಹೀಗೆ ಎಲ್ಲವನ್ನು ತೆರೆದಿಟ್ಟಿರುವ ಈ ಕಥೆ ಉದಯವಾಣಿಯಲ್ಲಿ ಪ್ರಕಟಿತ.


ನಿನ್ನ ಪ್ರೀತಿಗೆ ಅದರ ರೀತಿಗೆ : ಇದು ಓ ಮನಸೇ ಪತ್ರಿಕೆಯಲ್ಲಿ ಪ್ರಕಟಿತವಾಗಿದ್ದ ಓ ಹೆನ್ರಿಯವರ ಇಂಗ್ಲಿಷ್ ಕಥೆ ಸರ್ವಿಸ್ ಆಫ್ ಲವ್ ನ ಭಾವನುವಾದ. ದೊಡ್ಡ ಸಂಗೀತಗಾರ್ತಿಯಾಗಬೇಕೆಂದುಕೊಂಡು ಬಂದ ತಾರಾ ಹಾಗೂ ಸ್ವಪ್ನ ಲೋಕವನ್ನು ಕಟ್ಟಿಕೊಂಡು ಕನಸುಗಳ ಕುಂಚವನ್ನು ಆಕೃತಿಯನ್ನಾಗಿಸುವ ಕನಸು ಕಂಡ ಆಕಾಶ್ ಇಬ್ಬರೂ ಪ್ರೇಮಿಸಿ ದಂಪತಿಗಳಾದರು. ಆದರೆ, ಮುಂದಿನ ಬದುಕು ಕಟ್ಟಿಕೊಳ್ಳಲು ಸಂಪಾದನೆಯಂತೂ ಬೇಕಿತ್ತು. ತಮ್ಮ ಕನಸುಗಳನ್ನು ತೊರೆದು ಬೇರೆ ಕನಸಿನ ಬೆನ್ನು ಹತ್ತಿದವರ ಪ್ರೀತಿ ಹಾಗೂ ಬದುಕು ಎರಡರ ನೋಟ ಇಲ್ಲಿದೆ. ಈ ಪ್ರೀತಿ ಕಣ್ಣು ತೋಯಿಸುವುದಂತೂ ಸತ್ಯ.


ನಿರುದ್ಯೋಗ : ನಿರುದ್ಯೋಗದ ಬಾಧೆ ಕಳೆಯಲೆಂದು ಪಾರ್ಕಿಗೆ ಹೋಗುತ್ತಿದ್ದವನಿಗೆ ಅಲ್ಲಿಯೇ ಆತನ ನಿರುದ್ಯೋಗ ನಿವಾರಣೆಯಾದ ರೀತಿಯೇ ವಿಭಿನ್ನ. ಒಂದು ಚೆಂದದ ಪುಟ್ಕಥೆ ಓ ಮನಸೇ ಪತ್ರಿಕೆಯಲ್ಲಿ ಪ್ರಕಟಿತ.


ಕೇಳು ಜನಮೇಜಯ : ಶ್ಯಾಮರಾಯರು ಹಾಗೂ ಅನಸೂಯ ದಂಪತಿಗಳಿಗೆ ಮನೆಯಲ್ಲಿನ ತಾತ್ಸಾರಕ್ಕೆ ಕಂಡುಕೊಂಡಿದ್ದ ಮದ್ದು ಗಮಕ ವಾಚನದ ಸಾಂಗತ್ಯ. ಶ್ಯಾಮರಾಯರಿಗೆ ಚಿಕ್ಕಂದಿನಿಂದಲೂ ಇದ್ದ ಒಂದೇ ಒಂದು ಆಸೆ ಎಂದರೆ ಒಮ್ಮೆಯಾದರೂ ರೇಡಿಯೋದಲ್ಲಿ ಹಾಡಬೇಕೆಂಬುದು. ಆ ಆಸೆ ಇಳಿವಯಸ್ಸಿನಲ್ಲಿ ನನಸಾಗುವ ದಿನವೊಂದು ಬಂದಿತ್ತು. ಅದರ ರೆಕಾರ್ಡಿಂಗ್ ಆಗಿ ಸಂಭಾವನೆಯೂ ತಲುಪಿತ್ತು. ಆದರೆ, ಕಾರ್ಯಕ್ರಮ ಪ್ರಸಾರವಾಯಿತೇ..? ಆಸೆಗಳು ನಿರಾಸೆಯಾಗುವುದಕ್ಕೂ.. ಉತ್ತುಂಗದಲ್ಲಿನ ಆಸೆಗಳು ಭ್ರಮನಿರಸನವಾಗುವುದಕ್ಕೂ ಇರುವ ವ್ಯತ್ಯಾಸವನ್ನು ನಾವಿಲ್ಲಿ ನೋಡಬಹುದು. ಉದಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿತ.


ಕಥೆಗಾರ : ಆಂಟನ್ ಚೆಕೋವ್ ಬರೆದ ಸ್ಟೋರಿ ಟೆಲ್ಲರ್ ಕಥೆಯ ಅನುವಾದವಿದು. ರೈಲಿನಲ್ಲಿ ಹೋಗುತ್ತಿರುವಾಗ ಮಕ್ಕಳಿಗೆ ಕಥೆ ಹೇಳುವ ಸಂದರ್ಭ. ಮಕ್ಕಳ ಉತ್ಸಾಹ ಹಾಗೂ ಪ್ರಶ್ನೆಗಳಿಗೆ ತಕ್ಕ ಉತ್ತರ ದೊರೆಯುವಂತೆ ಕಥೆ ಹೆಣೆಯಲು ನೈಪುಣ್ಯವೂ ಬೇಕು. ಅಂತಹ ಕಥೆಗಾರನನ್ನು ಇಲ್ಲಿ ಕಾಣಬಹುದು.


ಕಳ್ಳ : ಆಂಟನ್ ಚೆಕೋವ್ ಬರೆದ ದಿ ಥೀಫ್ ಕಥೆಯ ಭಾವಾನುವಾದ. 

"ಕೈಯಲ್ಲಿಲ್ಲದವನು ಕಳ್ಳ, ಹೊಟ್ಟೆಗಿಲ್ಲದವನು ಬಡವ" ಎನ್ನುವ ಗಾದೆ ಮಾತನ್ನು ಕೇಳಿರುತ್ತೇವೆ. ಅವರಿಗಿರುವ ಅನಿವಾರ್ಯತೆ ಹಾಗೂ ಅದನ್ನು ಒಪ್ಪಿಕೊಂಡ ಪ್ರಾಮಾಣಿಕತೆಯ ಕಳ್ಳ ಕಂಡರೂ.. ಇಲ್ಲಿ ಕಳ್ಳತನದ ಸಮರ್ಥನೆಯಾಯಿತೇನೋ ಎಂದೆನ್ನಿಸಿತು. 


ಎಲ್ಲಿಂದಲೋ ಬಂದವರು : ಒಂದು ಮುಗುಳುನಗೆಯೇ ಎಲ್ಲಿಂದಲೋ ಬಂದವರ, ಎಲ್ಲಿಯೋ ಇದ್ದವರ ಸೇತುವೆಯಾಗಬಹುದು. ನೆನಪುಗಳ ಹಸಿಯ ಅನುಭಾವದ ಗಾಢತೆ ತಾಕುತ್ತದೆ. ಇದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಿತ ಕಥೆ.


ಪಯಣದ ಅನುಬಂಧ : ಪ್ರಯಾಣದಲ್ಲಿ ಹಲವಾರು ರೀತಿಯ ಪಯಣಿಗರು ಸಿಗುತ್ತಾರೆ. ಕೆಲವರು ಅಲ್ಲಿಂದ ಪರಿಚಿತರಾಗಬಹುದು. ಕೆಲವರು ಮೇಲೆ ಅಲ್ಲಿಯೇ ಕೋಪ ಹುಟ್ಟಿಸಬಹುದು. ಆದರೆ, ಅಪರೂಪಕ್ಕೆ ಕೆಲವರು ಮನಸ್ಸಿನಲ್ಲಿ ಉಳಿದುಬಿಡುತ್ತಾರೆ. ಅಂತಹ ಪಯಣದ ಅನುಬಂಧ ಬಿಡಿಸಲಾಗದ್ದು. ಆದರೆ, ಜೀವನ ಪಯಣದಲ್ಲಿ ಎಷ್ಟು ಜನರು ಜೊತೆ ಸಾಗಬಹುದು..? ವಿವಿಧ ಆಲೋಚನೆ ಹುಟ್ಟಿಸುವ ಈ ಕಥೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಿತ. 


ಇಲ್ಲಿನ ಕಥೆಗಳನ್ನು ಪದದ ಮೂಲಕ ನೋಡುವುದಾದರೆ ಸಣ್ಣ ಕಥೆಗಳೇ.. ಆದರೆ, ಮನಸ್ಸಿನಲ್ಲುಳಿಯುವ ದೊಡ್ಡ ಕಥೆಗಳು ಎಂದರೂ ತಪ್ಪಾಗಲಾರದು. ಸರಳ, ಸುಂದರ ಭಾಷೆಯಿಂದ ಸಲೀಸಾಗಿ ಓದಿಸಿಕೊಂಡು ಹೋಗುವ ಕಥೆಗಳು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ