ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು!
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ
ಹೋಯಿತ್ತು!
ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು.
ಕೊಂದವರುಳಿದರೆ ಕೂಡಲಸಂಗಮದೇವ ?
ಇಲ್ಲಿ ಹಬ್ಬಕ್ಕಾಗಿ ಪ್ರಾಣಿಬಲಿಯನ್ನು ಕೊಡುವಾಗ ಅದು ತನ್ನ ಸಾವನ್ನು ಅಷ್ಟು ಬೇಗ ನಿರೀಕ್ಷಿಸದೆ, ದೈನಂದಿನ ಜೀವನಾರೂಢಿಯಂತೆ ತನ್ನ ಹಸಿವನ್ನು ತೀರಿಸಿಕೊಳ್ಳಲು ಅದೇ ಹಬ್ಬಕ್ಕೆ ತಂದು ಕಟ್ಟಿದ ತೋರಣಕ್ಕೆ ತಂದಿದ್ದ ತಳಿರನ್ನು ಮೇಯ್ದು ತನ್ನ ಹಸಿವನ್ನು ನೀಗಿಸಿಕೊಂಡಿತು. ಅದು ಕ್ಷಣಿಕವಾದ ಕಾರ್ಯ ಮಾತ್ರವೇ ಆದರೂ.. ಕುರಿಗೆ ಅದರ ಅರಿವಿರಲಿಲ್ಲ. ಕುರಿಯನ್ನು ಬಲಿ ಕೊಡುವ ಮನುಷ್ಯನ ಮುಂದಿನ ನಡೆಯಲ್ಲಿ ಇದೇ ರೀತಿಯನ್ನು ಕಾಣಬಹುದು. ಮನುಷ್ಯನಿಗೂ ಮುಂದೊಂದು ದಿನ ಇದೇ ರೀತಿಯ ಸಾವೇ ಕಾದಿರುತ್ತದೆ.
ಇಲ್ಲಿ ಪಾತ್ರಗಳು ಬದಲಾಗುತ್ತವಷ್ಟೇ.. ಕುರಿಯ ಜಾಗದಲ್ಲಿ ಮನುಷ್ಯನಿರುತ್ತಾನೆ ಮತ್ತು ಮನುಷ್ಯನ ಜಾಗದಲ್ಲಿ ಜವರಾಯ ಇರುತ್ತಾನೆ. ಸುಖ, ಭೋಗ, ಲಾಲಸೆಗಳಿಂದ ಆಯಾ ಕ್ಷಣಕ್ಕೆ ಬೇಕಾದುದನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಮನುಷ್ಯ ಸಾವಿನ ಅರಿವೇ ಇಲ್ಲದಂತೆ, ಅಷ್ಟಕ್ಕೂ ಸಾವಿನ ಭಯವೇ ಇಲ್ಲದಂತೆ ಬದುಕುತ್ತಾ ಸಾಗುತ್ತಾನೆ.
ಇಲ್ಲಿ ಬುದ್ಧಿವಂತ ಮನುಷ್ಯನಿಗೂ ಬುದ್ಧಿಹೀನ ಪ್ರಾಣಿಗೂ ಅಂತಹ ವ್ಯತ್ಯಾಸವೇನೂ ತೋರುವುದಿಲ್ಲ. ಆದರೆ, ಕರ್ಮವೆಂಬುದು ಯಾರನ್ನು ಬಿಡಲಾರದು. ತಾನು ಮಾಡಿದ್ದನ್ನು ತಾನೇ ಮುಂದೊಂದು ದಿನ ಉಣ್ಣುವ ಮನುಷ್ಯ ಆ ರೀತಿ ಯೋಚಿಸಲಾಗದ್ದು ಮಾತ್ರ ವಿಪರ್ಯಾಸ.
ಬಸವಣ್ಣನವರ ಈ ವಚನದಲ್ಲಿ ಪ್ರಾಣಿಬಲಿಯ ಮೂಢನಂಬಿಕೆಯನ್ನು ತೋರುತ್ತಲೇ.. ಸಾವಿನ ಅನಿವಾರ್ಯತೆ ಹಾಗೂ ಜೀವನದ ನಶ್ವರತೆಯ ಪಾಠವನ್ನು ಹೇಳಿದ್ದಾರೆ.
ಎನಿಸು ಕಾಲ ಕಲ್ಲು ನೀರೊಳಗಿದ್ದರೇನು,
ನೆನೆದು ಮೃದುವಾಗಬಲ್ಲುದೆ ?
ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ದೃಢವಿಲ್ಲದನ್ನಕ ?
ನಿಧಾನವ ಕಾಯ್ದಿದ್ದ ಬೆಂತರನ ವಿಧಿ ಎನಗಾಯಿತ್ತು
ಕಾಣಾ ಕೂಡಲಸಂಗಮದೇವ.
ನೀರಿನ ಗುಣ ಎಲ್ಲವನ್ನು ಮೃದುವಾಗಿಸುವುದೇ ಆದರೂ.. ಕಲ್ಲಿನ ಗುಣ ಕಠಿಣವಾದದ್ದು. ಅದು ಎಷ್ಟೇ ಕಾಲ ಹರಿಯುವ ನೀರಿನ ಅಡಿಯಲ್ಲಿದ್ದರೂ ಮೃದುವಾಗದು. ಅದು ತನ್ನ ಸ್ವಭಾವವನ್ನು ಎಳ್ಳಷ್ಟು ಸಹ ಬದಲಾಯಿಸಿಕೊಳ್ಳುವುದಿಲ್ಲ.
ಮನಸ್ಸಿನಲ್ಲಿ ದೃಢಭಕ್ತಿ ಇಲ್ಲದೆ ಕೇವಲ ಬಾಯಿಮಾತಿಗೆ ಅಥವಾ ಮೇಲ್ನೋಟಕ್ಕೆ ಮಾತ್ರ ಭಕ್ತಿ ತೋರಿಸುತ್ತಾ ಪೂಜಿಸಿದರೂ.. ಅವರಿಗೆ ದೇವನು ಒಲಿಯಲಾರನು. ಅಂತಹ ಭಕ್ತಿಯನ್ನು ಎಷ್ಟೇ ಕಾಲ ತೋರಿದರೂ ಅದು ವ್ಯರ್ಥ. ತನು - ಮನಗಳನ್ನು ಅರ್ಪಿಸಬೇಕು ದೇವರು ಒಲಿಯಲು. ಅದಕ್ಕಾಗಿ ಮಾನಸಿಕ ದೃಢತೆ ಬಹಳವೇ ಮುಖ್ಯ.
ಇಲ್ಲವಾದಲ್ಲಿ ಭೂಮಿಯೊಳಗೆ ಹುಗಿದಿಟ್ಟ ನಿಧಿಯನ್ನು ಕಾಯುವ ಪಿಶಾಚಿಯಂತೆ ಅಂತಹವರ ಬದುಕು ಕಾಣುವುದು. ಭೂಮಿಯೊಳಗೆ ಹುಗಿದಿಟ್ಟ ನಿಧಿಯನ್ನು ಪಿಶಾಚಿ ಕಾಯುವುದು ಎನ್ನುವ ನಂಬಿಕೆ ಇದೆ. ಅದರಿಂದ ಪಿಶಾಚಿಗೆ ಯಾವ ರೀತಿಯ ಸಹಾಯವೂ ಆಗುವುದಿಲ್ಲ. ಬದಲಾಗಿ, ಅದು ಅವಶ್ಯಕತೆ ಇರುವವರ ಕೈಗೆ ಸಿಕ್ಕರೆ ಅದಕ್ಕೊಂದು ಸಾರ್ಥಕತೆ.
ಬದಲಾಯಿಸಿಕೊಳ್ಳದ ಸ್ವಭಾವದವರ ಜೊತೆಗಿರುವುದು, ಮನಸ್ಸಿನಲ್ಲಿ ಭಕ್ತಿ ತೋರದೆ ಕೇವಲ ಢಾಂಬಿಕ ಭಕ್ತಿ ತೋರುವುದು ಹಾಗೂ ಉಪಯೋಗವಿಲ್ಲದ ಕೆಲಸವನ್ನು ಮಾಡುವುದು ಎಂದಿಗೂ ಸಾರ್ಥಕತೆಯನ್ನು ತರಲಾರದು. ಇದಕ್ಕಾಗಿ ಸಾರ್ಥಕವಾದ ಬದಲಾವಣೆ ಬಹಳಷ್ಟು ಅಗತ್ಯ. ಈ ರೀತಿಯ ಬದಲಾವಣೆಯೇ ಕೂಡಲಸಂಗಮ ದೇವನನ್ನು ಒಲಿಸಿಕೊಳ್ಳುವ ಪರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ