ಪುಸ್ತಕದ ಶೀರ್ಷಿಕೆ : ಕಪ್ಪು ಕುಲುಮೆ ( ಅಮೇರಿಕಾದ ಕಪ್ಪು ಗುಲಾಮ ಫ್ರೆಡರಿಕ್ ಡಗ್ಲಾಸ್ ನ ಆತ್ಮಕಥೆ )
ಮೂಲ ಲೇಖಕರು : ಫ್ರೆಡರಿಕ್ ಡಗ್ಲಾಸ್
ಕನ್ನಡಕ್ಕೆ : ವಿಕಾಸ್ ಆರ್ ಮೌರ್ಯ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ
ಪ್ರಥಮ ಮುದ್ರಣ : 2019
ಪುಟಗಳು : 112
ಬೆಲೆ : 110 ರೂ.
ಫ್ರೆಡರಿಕ್ ಡಗ್ಲಾಸ್ 19 ನೇ ಶತಮಾನದಲ್ಲಿನ ಕರಿಯರ ಪರವಾಗಿ ಹೋರಾಡಿದ ಹಾಗೂ ಸ್ವತಃ ಗುಲಾಮಗಿರಿಯಿಂದ ಬಿಡುಗಡೆ ಹೊಂದಲು ಹಾಗೂ ಎಲ್ಲರಿಗೂ ಸ್ವಾತಂತ್ಯ ದೊರಕಿಸಿಕೊಡಲು ಹೋರಾಟ ನಡೆಸಿದ ವ್ಯಕ್ತಿ. ಮೇರಿ ಲ್ಯಾಂಡಿನಲ್ಲಿ ಸ್ವತಃ ಗುಲಾಮನಾಗಿ ಬದುಕಿದ್ದ ಇವರು ಅದನ್ನು ಪ್ರತಿಭಟಿಸಿ ಸ್ವತಂತ್ರರಾಗುತ್ತಾರೆ. ಅದಕ್ಕೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಹುಟ್ಟಿನಿಂದಲೇ ಗುಲಾಮಗಿರಿಯನ್ನು ಒಪ್ಪಿಕೊಂಡವರು ನಂತರ ಗುಲಾಮಗಿರಿ ನಿರ್ಮೂಲನ ಆಂದೋಲನದ ಪ್ರಮುಖ ನಾಯಕರಾಗಿ ಅಮೆರಿಕಾದಲ್ಲಿ ಗುಲಾಮಗಿರಿಯನ್ನು ಕಾನೂನುಬದ್ಧವಾಗಿ ನಿಷೇಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅದಾದ ನಂತರ ಮಂತ್ರಿಯಾಗಿಯೂ ಎರಡು ವರ್ಷ ಸೇವೆ ಸಲ್ಲಿಸುತ್ತಾರೆ. ಭೂಮಿಯ ಮೇಲಿನ ಪ್ರತಿಯೊಬ್ಬ ಮಾನವರು ಸಮಾನ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಹೊಂದಬೇಕು ಎಂಬುದೇ ಇವರ ಆಶಯ.
ಫ್ರೆಡರಿಕ್ ಡಗ್ಲಾಸ್ ತಮ್ಮ ಸ್ವಕಥನವನ್ನು ಮೂರು ಭಾಗಗಳಲ್ಲಿ ಕಟ್ಟಿಕೊಡುತ್ತಾರೆ. ಈ ಪುಸ್ತಕ ಅವರ ಆರಂಭಿಕ ಸ್ವಕಥನ ಅಂದರೆ ಗುಲಾಮಗಿರಿಯಿಂದ ಅವರು ಸ್ವತಂತ್ರ ಪಡೆದು ಬದುಕು ಕಟ್ಟಿಕೊಂಡ ಪ್ರಸಂಗದವರೆಗೂ ಇದೆ.
ಹೆಣ್ಣು - ಗಂಡು ಎಂಬ ಭೇದವಿಲ್ಲದೆ ಲಕ್ಷಾಂತರ ಗುಲಾಮರು ಹೀನಾಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ಫ್ರೆಡರಿಕ್ ಗೆ ತಂದೆ ಯಾರೆಂದು ತಿಳಿದರೂ ಅವನನ್ನು ತಂದೆ ಎಂದು ಕರೆಯಲು ಹಕ್ಕಿರಲಿಲ್ಲ. ತಾಯಿ ಗುಲಾಮಳಾಗಿದ್ದ ಕಾರಣಕ್ಕೆ ಅವಳ ಪ್ರೀತಿಯಿಂದಲೂ ಸಂಪೂರ್ಣ ವಂಚಿತರಾಗಿ ಹುಟ್ಟಿನೊಂದಿಗೆ ಗುಲಾಮ ಎಂಬ ಪಟ್ಟವನ್ನು ಅಂಟಿಸಿಕೊಂಡು ಅನಾಥವಾಗಿಯೇ ಬೆಳೆದು ನಂತರ ಬಿಡಿಗಾಸಿಗೆ ತನ್ನನ್ನು ಕೊಂಡುಕೊಂಡ ಬಿಳಿಯ ಒಡೆಯರ ಮನೆಯಲ್ಲಿ, ಹೊಲದಲ್ಲಿ ಹೀಗೆ ಅವರು ಹೇಳಿದ ಕೆಲಸವನ್ನೆಲ್ಲ ಮಾಡುತ್ತಲೇ.. ಕೊಟ್ಟಷ್ಟು ಊಟ ಜೊತೆಗೆ ಸಮೃದ್ಧವಾದ ಹಿಂಸೆ, ಅವರ ಸಿಟ್ಟು, ಆಕ್ರೋಶ, ದೌರ್ಜನ್ಯಗಳನ್ನೆಲ್ಲಾ ಸಹಿಸಿಕೊಂಡೇ ಬದುಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಗುಲಾಮ ಹೆಣ್ಣು ಮಕ್ಕಳ ಅತ್ಯಾಚಾರ ಸಹ ನಡೆಯುತ್ತಿರುತ್ತದೆ. ಹೀಗಿರುವಾಗ ಅವರು ಸ್ವಾತಂತ್ರ್ಯವನ್ನು ಪಡೆಯುವುದು ಸುಲಭದ ಮಾತಲ್ಲ. ಎಲ್ಲ ಬಗೆಯ ಸ್ವಾತಂತ್ರ್ಯವನ್ನೂ ಕಳೆದುಕೊಂಡು, ಉಸಿರುಗಟ್ಟಿ ಬದುಕಿದ ಇಂತಹ ತಮ್ಮವರನ್ನು ಬೆಳಕಿನೊಳಗೆ ಕೊಂಡೊಯ್ಯಲು ಮೊದಲು ಅವರು ಬೆಳಕು ನೋಡಬೇಕಿತ್ತು.
ಫ್ರೆಡರಿಕ್ ಹುಟ್ಟಿದ್ದು ಹಿಲ್ಸ್ ಬರ್ಗ್ ಸಮೀಪದ ಟುಕಾಹೋನಲ್ಲಿ. ಮೇರಿಲ್ಯಾಂಡ್ ನಿಂದ 12 ಮೈಲಿ ದೂರದಲ್ಲಿದೆ. ಅಮ್ಮನ ಹೆಸರು ಹ್ಯಾರಿಟ್ ಬೇಲೆ. ತಂದೆ ಒಬ್ಬ ಬಿಳಿಯನೆಂಬ ಅಂದರೆ ತಾಯಿಯ ಒಡೆಯನೆಂಬ ಮಾಹಿತಿಯಿದ್ದರೂ ಖಚಿತತೆಯಿಲ್ಲ. ಮೇರಿಲ್ಯಾಂಡ್ ನಲ್ಲಿ ಗುಲಾಮ ಅಮ್ಮಂದಿರ ಮಕ್ಕಳನ್ನು ತೊಟ್ಟಿಲ ಕೂಸಾಗಿರುವಾಗಲೇ ಅವರಿಂದ ಬೇರ್ಪಡಿಸಿ ಒಂದು ವರ್ಷದ ಮಕ್ಕಳನ್ನು ಅವರೆಲ್ಲರನ್ನೂ ಅವರನ್ನು ನೋಡಿಕೊಳ್ಳಲೆಂದೇ ನೇಮಿಸಿದ್ದ ವಯಸ್ಸಾದ ಹೆಂಗಸಿನ ಬಳಿ ಬಿಡಲಾಗಿತ್ತು. ಫ್ರೆಡರಿಕ್ ಇಡೀ ಜೀವಮಾನದಲ್ಲಿ ಅಮ್ಮನನ್ನು ಕೇವಲ ನಾಲ್ಕರಿಂದ ಐದು ಬಾರಿ ನೋಡಿದ್ದರಷ್ಟೇ.. ಗುಲಾಮರಿಗೆ ಇದ್ದ ವಿಶಿಷ್ಟ ಕಾನೂನಿನಂತೆ ಗುಲಾಮರ ಮಕ್ಕಳು ತಾಯಂದಿರ ಸ್ಥಿತಿ - ಸ್ಥಾನಮಾನವನ್ನು ಅನುಸರಿಸಬೇಕಿತ್ತು. ಫ್ರೆಡರಿಕ್ ರಿಗೆ ಇಬ್ಬರು ಒಡೆಯರಿದ್ದರು. ಮೊದಲನೆಯವ ಆಂಥೋನಿ. ಇನ್ನೊಬ್ಬ ಮೇಲ್ವಿಚಾರಕ ಪ್ಲಮ್ಮರ್. ಗುಲಾಮರು ತುಟಿ ಬಿಚ್ಚಿದರೆ ಮಾರಣಾಂತಿಕವಾಗಿ ಥಳಿಸುತ್ತಿದ್ದವನು. ಆತನದ್ದು ಕ್ರೂರ ಕ್ರೌರ್ಯ. ಈ ಸಂದರ್ಭಗಳನ್ನು ಓದಲೇ ಭಯವಾಗುತ್ತದೆ. ಫ್ರೆಡರಿಕ್ ತನ್ನ ಚಿಕ್ಕಮ್ಮನಿಗೆ ನೀಡಿದ ಪೈಶಾಚಿಕ ಹಿಂಸೆಯನ್ನೇ ಅವರು ಮೊದಲು ಕಂಡದ್ದು.
ಒಡೆಯನ ಎಸ್ಟೇಟ್ ನ ಮನೆಯಲ್ಲಿ ತಿಂಗಳಿಗಾಗುವಷ್ಟು ಆಹಾರ ಮತ್ತು ವರ್ಷಕ್ಕಾಗುವ ಬಟ್ಟೆಗಳನ್ನು ಎಲ್ಲಾ ಗುಲಾಮರಿಗೆ ಹಂಚಲಾಗುತ್ತಿತ್ತು. ವರ್ಷಕ್ಕೆ ಎರಡೇ ಜೊತೆ ನಾರಿನ ಮೇಲಂಗಿ, ಒಂದು ಜೊತೆ ನಾರಿನ ನಿಲುವಂಗಿ, ಒಂದು ಜಾಕೆಟ್, ಚಳಿಗಾಲಕ್ಕೆ ಉಣ್ಣೆಯಿಂದ ಮಾಡಿದ ನಿಲುವಂಗಿ, ಒಂದು ಜೊತೆ ಕಾಲು ಚೀಲ ಇದಿಷ್ಟೇ.. ತೋಟದಲ್ಲಿ ಕೆಲಸ ಮಾಡದವರಿಗೆ ಕಾಲು ಚೀಲ, ಶೂ, ಜಾಕೆಟ್, ನಿಲುವಂಗಿಗಳನ್ನು ಕೊಡುತ್ತಿರಲಿಲ್ಲ. 10 ವರ್ಷದವರೆಗೆ ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣುಮಕ್ಕಳು ಬೆತ್ತಲೆ ಅಲೆಯುತ್ತಿದ್ದದ್ದು ಸಾಮಾನ್ಯವಾಗಿರುತ್ತಿತ್ತು. ಅರೆಬರೆ ನಿದ್ದೆಯಲ್ಲಿರುವಾಗಲೇ.. ಬೆಳಿಗ್ಗೆ ಬೇಗನೆ ಎದ್ದು ಕೆಲಸಕ್ಕೆ ಹೋಗಲೇಬೇಕಿತ್ತು, ಮಲಗಲು ಸರಿಯಾದ ಜಾಗವೂ ಇರಲಿಲ್ಲ. ಸರಿಯಾದ ಹೊದಿಕೆಯೂ ಸಿಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫ್ರೆಡರಿಕ್ ಬದುಕುತ್ತಿದ್ದದ್ದು. ಜೊತೆಗೆ ಅಲ್ಪಕಾಲದಲ್ಲಿಯೇ ಗುಲಾಮರು ಬೇರೆ ಬೇರೆ ಒಡೆಯರಿಗೆ ಕೆಲಸ ಮಾಡಬೇಕಾಗಿ ಬರುತ್ತಿತ್ತು.
ಫ್ರೆಡರಿಕ್ ನಂತರ ಕರ್ನಲ್ ಲಾಯ್ಡ್ ತೋಟದಲ್ಲಿ ದುಡಿಯಬೇಕಾಗಿ ಬರುತ್ತದೆ. ಇಲ್ಲಿ ಕ್ರೂರಿ ಮತ್ತು ಕಲ್ಲೆದೆಯ ಮಿ. ಗೋರ್ ಮೈಲ್ವಿಚಾರಣೆಯಲ್ಲಿದ್ದದ್ದು. ನಂತರ 8 ವರ್ಷವಿರುವಾಗ ಅಲ್ಲಿಂದ ಬಾಲ್ಟಿಮೋರ್ ನ ಕ್ಯಾಪ್ಟನ್ ಥಾಮಸ್ ಆಲ್ಡ್ ಬಳಿ ಹೋಗಬೇಕಾಗಿ ಬರುತ್ತದೆ. ಅಲ್ಲಿನ ಒಡತಿ ಸೋಫಿಯಾ ಅಲ್ಡ್ ಕರುಣಾಮಯಿ. ಆದರೂ.. ಅದು ಎಸ್ಟೇಟ್ ಇದು ನಗರ. ರಕ್ತ ಬಯಸುವ ಮಾತ್ರ ಚಾವಟಿ ಮಾತ್ರ ಅದೇ ಆಗಿತ್ತು. ಮಿಸೆಸ್ ಅಲ್ಡ್ ಇಂಗ್ಲೀಷ್ ಅಕ್ಷರಗಳು ಹಾಗೂ ಪದಗಳನ್ನು ಕಲಿಸಲು ಶುರು ಮಾಡಿದಾಗ ಅದನ್ನು ಗಮನಿಸಿದ ಮಿಸ್ಟರ್ ಆಲ್ಡ್ ಅಕ್ಷರ ಕಲಿಸದಂತೆ ಪತ್ನಿಯನ್ನು ನಿಯಂತ್ರಿಸುತ್ತಾನೆ. "ಇವರುಗಳಿಗೆ ಬೆರಳನ್ನು ತೋರಿಸಿದರೆ ಹಸ್ತವನ್ನು ನುಂಗಿಬಿಡುತ್ತಾರೆ. ಅಲ್ಲದೆ, ಅದು ಕಾನೂನುಬಾಹಿರ" ಎಂದು ಹೇಳಿ ತಡೆಯುತ್ತಾನೆ. ಅಂದೇ ಫ್ರೆಡರಿಕ್ ಮನಸ್ಸಿನಲ್ಲಿ ಛಲವೊಂದು ಮೂಡುತ್ತದೆ. ಈ ಅತೃಪ್ತತೆಯೇ ಮುಗ್ಧ ಭಾವನೆಗಳನ್ನು ಕೆಣಕಿ ಅಕ್ಷರವನ್ನು ಕಲಿಯುವಂತೆ ಪ್ರೇರೇಪಿಸುತ್ತದೆ.
ಎಸ್ಟೇಟ್ ನಷ್ಟು ಕೆಲಸವಿಲ್ಲದಿದ್ದ ಇಲ್ಲಿ ಅಕ್ಷರ ಕಲಿಯಲು ಸಮಯವಿತ್ತಾದರೂ ಅವಕಾಶ ಸಿಗಲಿಲ್ಲ. ಅಲ್ಲದೆ, ದಂಪತಿಗಳು ಅಂದಿನಿಂದ ಆತನನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿದರು. ಫ್ರೆಡರಿಕ್ ಬಿಳಿಯ ಹುಡುಗರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು, ತನಗೆ ತಿನ್ನಲು ಕೊಡುತ್ತಿದ್ದುದನ್ನು ಅವರಿಗೆ ನೀಡಿ ಅವರಿಂದ ಸಾಧ್ಯವಾದಷ್ಟು ಅಕ್ಷರಗಳನ್ನು ಕಲಿತು ಪುಸ್ತಕವನ್ನು ಓದಲು ರೂಢಿ ಮಾಡಿಕೊಂಡರು ಓದುತ್ತಾ ಹೋದಂತೆ.. ಗುಲಾಮಗಿರಿಯ ಸಂಕಷ್ಟಗಳು ಹಾಗೂ ಅದರ ಕ್ರೌರ್ಯ ಇನ್ನಷ್ಟು ಆಳವಾಗಿ ಆಲೋಚಿಸುವಂತೆ ಮಾಡಿತು. ಸ್ವಾತಂತ್ರ್ಯಕ್ಕಾಗಿ ಮನಸ್ಸು ಹಪಹಪಿಸುತ್ತಿತ್ತು.
ಫ್ರೆಡರಿಕ್ ಮುಂದೆ ಬಾಲ್ಟಿಮೋರ್ ನಿಂದ ಸೈಂಟ್ ಮೈಕಲ್ಸ್ ಗೆ ಕೆಲಸಕ್ಕೆ ಹೋಗಿಯಾಗಿತ್ತು. ಆದರೂ.. ಅಲ್ಲಿಯೂ ಅದೇ ನೀಚತನ ಹಾಗೂ ಕ್ರೌರ್ಯ. ಹಸಿವಿನ ಸಂಕಟ ಹಾಗೂ ಅನುಭವಗಳು ಹೆಚ್ಚು ಅನುಭವವಾಗಿದ್ದು ಇಲ್ಲಿಯೇ.. ಇದು ಅವರ ಗುಲಾಮಿ ದಿನಗಳಲ್ಲಿಯೇ ಹೆಚ್ಚಿನ ಕಠಿಣ ದಿನಗಳು. ಆಗಲೇ ಅವರು ನಿರ್ಧರಿಸಿದ್ದು.. "ಗುಲಾಮನಾಗಿ ಹುಟ್ಟಿದ್ದೇನೆ. ಆದರೆ, ಗುಲಾಮನಾಗಿ ಸಾಯಲಾರೆ" ಎಂದು.
ಥಾಮಸ್ ಆಲ್ಡ್ ಮನೆ ಬಿಟ್ಟು ಮಿಸ್ಟರ್ ಕೋಲೆ ಬಳಿ ತೆರಳಿದ ನಂತರ ಜೀವನದಲ್ಲಿ ಮೊದಲ ಬಾರಿ ಬೇಸಾಯ ಮಾಡಬೇಕಾಗಿ ಬಂದಿತ್ತು. ಕೆಲಸ ಕಲಿಯಲು ಸಮಯ ಕೊಡಲಿಲ್ಲವಾದರೂ.. ಇಲ್ಲಿ ಚಡಿಯೇಟುಗಳು ಖಾಯಂ ಜೊತೆಗೆ ಮತ್ತಷ್ಟು ಭಯಾನಕವಾಗಿದ್ದವು. ಇಲ್ಲಿ ನಡೆದ ಒಂದು ಘಟನೆಯಿಂದ ಆತ ತಪ್ಪಿಸಿಕೊಳ್ಳಲು ಅಲ್ಲಿನ ಗುಲಾಮನೊಬ್ಬನ ಮನೆಯಲ್ಲಿ ಆಶ್ರಯ ಪಡೆಯಬೇಕಾಗಿ ಬರುತ್ತದೆ. ಅಲ್ಲಿಂದ ಮುಂದೆ ಅಂತಹವರ ಸ್ನೇಹ ಶುರುವಾಗಿ ಎಲ್ಲರೂ ಅಲ್ಲಿಂದ ಪರಾರಿ ಆಗಬೇಕೆನ್ನುವ ಕನಸು ಕಾಣತೊಡಗಿದರು. ಅಷ್ಟೇ ಅಲ್ಲ.. ಸ್ವಾತಂತ್ರ್ಯ ಇಲ್ಲವೇ ಸಾವು ಎನ್ನುತ್ತಾ ದೃಢ ಮನಸ್ಸು ಮಾಡಿ ಎಲ್ಲಾ ತಯಾರಿಯನ್ನೂ ಮಾಡಿಕೊಳ್ಳುತ್ತಾರೆ. ಅಷ್ಟರಲ್ಲಾಗಲೇ.. ವಿರಾಮದ ಸಮಯದಲ್ಲಿ ಫ್ರೆಡರಿಕ್ ಅಲ್ಲಿರುವವರಿಗೆ ಅಕ್ಷರ ಕಲಿಸಲು ಶುರು ಮಾಡಿದ್ದ. ಅದು ಮೇಲಿನವರ ಕಣ್ಣು ಕೆಂಪಾಗಿಸಿತ್ತು. ಆತನಿಂದ ಉಪಕೃತರಾದವರೇ ಆತನ ಮೇಲೆ ದೂರು ನೀಡಿದ್ದರು. ಇದರಿಂದಾಗಿ ಅವರೆಲ್ಲರೂ ತಪ್ಪಿಸಿಕೊಳ್ಳುವ ಉಪಾಯ ತಪ್ಪಿ ಹೋಗಿ ಜೈಲು ಸೇರಬೇಕಾಗಿ ಬಂದಿತು. ಒಂಟಿತನದ ದೀರ್ಘಾವಧಿ ಸೆರೆಮನೆ ವಾಸವನ್ನೂ ಅನುಭವಿಸಬೇಕಾಗಿ ಬರುತ್ತದೆ.
ಕೊನೆಗೂ ಫ್ರೆಡರಿಕ್ ಜೀವನದ ಮಹತ್ವಕಾಂಕ್ಷಿ ಯೋಜನೆಯಾಗಿದ್ದ ಗುಲಾಮಗಿರಿಯಿಂದ ಸ್ವತಂತ್ರವಾಗುವ ಕನಸು ನನಸಾಗಿತ್ತು. ಆ ವಿಶಿಷ್ಟ ಸನ್ನಿವೇಶವನ್ನು ಹೇಳುತ್ತಾರೆ. ಅದನ್ನು ಇಂಚಿಂಚೂ ಹೇಳಲು ಅಸಾಧ್ಯವೆನ್ನುತ್ತಾರೆ. ಯಾವ ಅಳುಕಿಗೂ ಒಳಗಾಗದೆ ಸಂಕೋಲೆಗಳನ್ನು ಬಿಡಿಸಿಕೊಂಡು ನ್ಯೂಯಾರ್ಕ್ ತಲುಪುತ್ತಾರೆ.
ಸ್ವಾತಂತ್ರ್ಯ ಸಿಕ್ಕಾಗ ಆಭದ್ರತೆ ಹಾಗೂ ಒಂಟಿತನ ಕಾಡಿದರೂ ಮುಂದೆ ಅವುಗಳು ಸಹ ದೂರವಾಗುತ್ತವೆ. ಅವರಂತೆಯೇ ಇರುವವರು ಜೊತೆಯಾಗುತ್ತಾರೆ. ಆಗ ಗುಲಾಮಗಿರಿಯ ಕ್ರೂರತನವನ್ನು ಪ್ರಶ್ನಿಸುವ ಯಾವ ಕಾನೂನು ಇರಲಿಲ್ಲ. ಅಂತಹ ಸಮಯದಲ್ಲಿ ಗುಲಾಮಗಿರಿ ವಿರೋಧಿ ಸಭೆಗಳು ನಡೆಯುತ್ತಿರುತ್ತವೆ. ಅಲ್ಲೆಲ್ಲಾ ಸ್ವಾತಂತ್ರದ ಅಗತ್ಯತೆಯನ್ನು ಹಂಚಿಕೊಳ್ಳುತ್ತಾರೆ. ಯಾವುದು ದಾಸ್ಯ ಹಾಗೂ ಯಾವುದು ಯಶಸ್ವಿ ಜೀವನ ಎಂಬುದರ ವ್ಯತ್ಯಾಸವನ್ನು ಸ್ವತಃ ಕಂಡುಕೊಂಡದ್ದನ್ನು ಎಲ್ಲರಿಗೂ ತಿಳಿಸುತ್ತಾರೆ.
ಸ್ವಾತಂತ್ಯ ಪಡೆಯಲು ಇವರು ನಡೆಸಿದ ಹೋರಾಟ ಚಿಕ್ಕದಾಗಿ ಹೇಳಿ ಮುಗಿಯುವಂತಹದ್ದಲ್ಲ. ಇವರ ಕಷ್ಟದಾಯಕ ದಿನಗಳು, ಗುಲಾಮಿತನ, ದಾಸ್ಯದ ಬದುಕು, ಕ್ರೌರ್ಯ ಎಲ್ಲವನ್ನೂ ಮೆಟ್ಟಿನಿಂತು ಬೆಳಕು ಕಂಡ ಬಗೆ ಈ ಪುಸ್ತಕದಲ್ಲಿದೆ. ಆಸಕ್ತರು ಓದಬಹುದು
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ