ಭಾನುವಾರ, ಏಪ್ರಿಲ್ 26, 2026

ಅಮ್ಮ ನಿನ್ನ ಎದೆಯಾಳದಿಂದ (ಪುಸ್ತಕ ಯಾನ - 422)


ಪುಸ್ತಕದ ಶೀರ್ಷಿಕೆ : ಅಮ್ಮ ನಿನ್ನ ಎದೆಯಾಳದಿಂದ

ಲೇಖಕರು : ಕಿರಣ್ ಪಿ ಕೌಶಿಕ್

ಪ್ರಕಾಶಕರು : ಅವ್ವ ಪುಸ್ತಕಾಲಯ

ಪ್ರಥಮ ಮುದ್ರಣ : ಜುಲೈ 2025

ಪುಟಗಳು : 88

ಬೆಲೆ : 100 ರೂ.


ಕಿರಣ್ ಪಿ. ಕೌಶಿಕ್ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರದವರು. ಸದ್ಯಕ್ಕೆ ಈಗ ಕೇರಳದ ಎರ್ನಾಕುಲಂನ ಚಿನ್ಮಯ ವಿಶ್ವವಿದ್ಯಾಪೀಠ್ ನಲ್ಲಿ ಎಂ.ಎ ಸಂಸ್ಕೃತ ಅಧ್ಯಯನ ಮಾಡುತ್ತಿದ್ದಾರೆ.


ವಿದ್ಯಾರ್ಥಿಯಾಗಿರುವಾಗಿನಿಂದಲೇ ಸಾಹಿತ್ಯಾಸಕ್ತರು, ಇವರು ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ 'ನಂಟು' ಎಂಬ ಪ್ರಬಂಧ ಕೃತಿಯನ್ನು ಪ್ರಕಟಿಸಿದ್ದಾರೆ. 2023ರಲ್ಲಿ 'ಯಾಕೆ ?' ಎಂಬ ಕಾದಂಬರಿಯನ್ನು ಪ್ರಕಟಿಸಿದ್ದಾರೆ. 


ಅಮ್ಮನ ಹಾಗೂ ಸಂಬಂಧಗಳ ಸೂಕ್ಷ್ಮತೆಯ ಎಳೆಗಳನ್ನು ಭಾವುಕತೆ ಜೊತೆಗೆ ವಾಸ್ತವತೆಯಲ್ಲಿ ಕಟ್ಟಿಕೊಟ್ಟಿರುವ 'ಅಮ್ಮ ನಿನ್ನ ಎದೆಯಾಳದಿಂದ' ನಾನು ಓದುತ್ತಿರುವ ಇವರ ಮೊದಲನೆಯ ಕೃತಿ. 


ಸಾಮಾನ್ಯವಾಗಿ ಮನೆಯಲ್ಲಿರುವಾಗ ಹಾಗೂ ಕೇಳಿದ್ದಲ್ಲವೂ ಕಣ್ಮುಂದೆ ಬರುವಾಗ.. ಅಪ್ಪನ ಅಥವಾ ಅಮ್ಮನ ಬೆಲೆ ಅಷ್ಟಾಗಿ ಅರಿವಾಗಿರುವುದಿಲ್ಲ. ಆದರೆ, ಹಾಸ್ಟೆಲ್ ಅಥವಾ ಉದ್ಯೋಗದ ನಿಮಿತ್ತ ಪರ ಊರಿಗೆ ಹೋದಾಗ ಅಲ್ಲಿ ಅನುಭವಿಸುವ ಪಡಿಪಾಠಲುಗಳಲ್ಲಿ ಅಮ್ಮನ ಮಡಿಲೇ ಮೊದಲು ನೆನಪಾಗುವುದು. ಅಂತಹ ಸವಿ ನೆನಪುಗಳ ಹಾಗೂ ಅಮ್ಮನ ಧ್ಯಾನಗಳನ್ನು ಒಳಗೊಂಡ ಪುಸ್ತಕ ಇದು. ಪರ್ಸನಲ್ ಡೈರಿಯಲ್ಲಿ ಬರೆದುಕೊಂಡ ವಿಷಯವೇ ಎಂದು ಲೇಖಕರು ಹೇಳುತ್ತಾರಾದರೂ.. ಇದು ಓದಿದವರೆಲ್ಲರಿಗೂ ತಮ್ಮ ಅನುಭವದಲ್ಲಿ ದಕ್ಕಿಸಿಕೊಳ್ಳಬಹುದಾದ ಹಾಗೂ ಈಗಿನ ಯುವಜನತೆಗೆ ಬೇಗ ಕನೆಕ್ಟ್ ಆಗುವಂತಹ ಲೇಖನಗಳ ಗುಚ್ಛ.


ಲೇಖಕರು ಕೇರಳಕ್ಕೆ ಹೋಗುವ ಮೊದಲು "ಇಲ್ಲೇ ಓದು, ಅಷ್ಟು ದೂರ ಯಾಕ್ ಹೋಗ್ಬೇಕು ?" ಅಂತ ತಡೆದ ಅಮ್ಮನೇ "ಓದಕ್ಕಲ್ವಾ ಹೋಗು, ಇಲ್ಲಿದ್ರೆ ಅದು ಇದು ಅಂತಾ ಓದಕ್ಕಾಗಲ್ಲ" ಎಂದು ಒಪ್ಪಿಗೆ ಕೊಟ್ಟ ಅಮ್ಮನೇ ಊರಿಂದೂರಿಗೆ ಕಳುಹಿಸುವ ಪರಿ ಹಾಗೂ ಅಲ್ಲಿ ಹೋದ ನಂತರ ಅಮ್ಮ ಪ್ರತಿನಿತ್ಯ, ಪ್ರತಿಕ್ಷಣ ನೆನಪಾಗುವ ಪರಿ ವ್ಯಕ್ತವಾಗಿದೆ.


ಮೈಸೂರಿನ ಹುಡುಗ ಕೇರಳಕ್ಕೆ ಹೋದಾಗ ಮಿಸ್ ಮಾಡಿಕೊಂಡ ಸುಂದರ ಮೈಸೂರು, ಅಮ್ಮ, ಮನೆ ಹಾಗೂ ಅಮ್ಮನ ಕೈ ರುಚಿ ಜೊತೆಗೆ ದೋಸೆಯ ಸವಿರುಚಿಯನ್ನು ತೋರಿದ್ದಾರೆ.


ಚಿಕ್ಕವನಿದ್ದಾಗ ಹಠ ಮಾಡಿದ ಸಂದರ್ಭದಲ್ಲಿ ಎಷ್ಟೇ ಸಮಯವಾಗಿದ್ದರೂ ಅಮ್ಮ ತನ್ನ ಎಕ್ಸೆಲ್ ಸೂಪರ್ ಗಾಡಿಯಲ್ಲಿ ಕರೆದುಕೊಂಡು ಹೋಗಿ ಬೇಕಾದುದನ್ನು ತೆಗೆದುಕೊಟ್ಟ ದಿನಗಳು, ಆಟ-ಪಾಠ, ತರ್ಲೆ-ತುಂಟಾಟಗಳು, ಅಮ್ಮನಿಗೆ ಹೇಳದೆಯೂ ತಿಳಿಯುತ್ತಿದ್ದ ಎಡವಟ್ಟುಗಳು ಇಲ್ಲಿವೆ.

"ಅವಳೇನು ದಡ್ಡಿಯಲ್ಲ. ಜಗತ್ತಿನ ಎಂತದ್ದೇ ಕಟು ಕೆಲಸಗಳಿದ್ದರೂ ಆಕೆ ಮಾಡಬಹುದು. ಯಾಕೆಂದರೆ, ಅವಳು ಗಟ್ಟಿಗಿತ್ತಿ ಹೆಂಗಸು" ಎನ್ನುವ ಮಾತುಗಳು ಅಮ್ಮನ ಕುರಿತ ಹೆಮ್ಮೆಯನ್ನು ತೋರುತ್ತವೆ.


ಅಮ್ಮನ ಓದಿನ ಕನಸು, ಅವಳ ನನಸಾಗದ ಕನಸನ್ನು ಮಗನಲ್ಲಿ ಕಾಣುತ್ತಿದ್ದ ಅಮ್ಮ ಪ್ರತಿ ಸ್ಪರ್ಧೆಗಳಿಗೆ ಹಾಗೂ ಓದಿಗೆ ತಯಾರು ಮಾಡುವುದು ಮಾತ್ರವಲ್ಲದೇ ಬಹುಮಾನ ಬಂದಾಗ ಅವರ ಕಣ್ಣಲ್ಲಿ ಸಂತಸದಿಂದ ತುಂಬಿಕೊಳ್ಳುತ್ತಿದ್ದ ನೀರು, ಬಹುಮಾನ ಬರಲಿಲ್ಲವಾದರೆ ಸಮಾಧಾನಪಡಿಸಿ ತಿದ್ದಿ ಮತ್ತಷ್ಟು ಹುಮ್ಮಸ್ಸು ನೀಡುವ ಪರಿ.. "ಸೋಲೇ ಗೆಲುವಿನ ಸೋಪಾನ" ಎಂದು ಹೇಳಿಕೊಟ್ಟು ಪ್ರಭಾವ ಬೀರಿದ ರೀತಿ ಇಷ್ಟವಾಗುತ್ತದೆ. ಅಮ್ಮನ ಕುರಿತ ಹೆಮ್ಮೆ ಪ್ರತಿಪದದಲ್ಲಿಯೂ ವ್ಯಕ್ತವಾಗಿದೆ.


ಚಿಕ್ಕಂದಿನಲ್ಲಿ ಸಂಜೆಯ ತಿನಿಸಿಗೆ ಉಪ್ಪಿಟ್ಟನ್ನು ಮಾಡಿಕೊಟ್ಟು ಉಪ್ಪಿಟ್ಟಿನ ರುಚಿ ಹತ್ತಿಸಿದ್ದ ಅಮ್ಮನ ಕೈರುಚಿ, ಹದವಾದ ಕಾಫಿಯ ಆಸ್ವಾದವನ್ನು ಕಾಣಬಹುದು.


ಅಮ್ಮನಷ್ಟೇ ಅಥವಾ ಅಮ್ಮನಿಗಿಂತಲೂ ಕೆಲವೊಮ್ಮೆ ಹೆಚ್ಚೇ ಒಲವು ತೋರಿಸುವ ಅತ್ತೆ ಮಂಜಮ್ಮ, ಅಜ್ಜಿ, ಅಪ್ಪ, ಅಣ್ಣನ ಸವಿ ನೆನಪುಗಳು ಹಾಗೂ ಅವರ ಭಾಂದವ್ಯದ ಒಲವು ಇಲ್ಲಿ ವ್ಯಕ್ತವಾಗಿದೆ.


ಚಿಕ್ಕವನಿದ್ದಾಗ ಓದಲು ಪ್ರಾಣ ತಿನ್ನುತಿದ್ದ, ಅಮ್ಮನ ಕಿರಿಕಿರಿ ಉಂಟು ಮಾಡುತ್ತಿದ್ದ ಮಾತುಗಳು ಈಗ ಹೇಗೆ ಅನ್ನಿಸುತ್ತವೆ ಎಂದು ಹೇಳುತ್ತಲೇ.. ಓದಿನ ಸುತ್ತಮುತ್ತ ತಿರುಗುವ ಅಮ್ಮನ ಯೋಚನೆಗಳು ಜೊತೆಗೆ ಅಮ್ಮನ ಜೊತೆ ಕಾಲ ಕಳೆಯಬೇಕು ಎನ್ನುವ ಜ್ಞಾನೋದಯದ ಆಲೋಚನೆಗಳು ಪ್ರಾಮಾಣಿಕವಾಗಿ ವ್ಯಕ್ತವಾಗಿವೆ.


ಕೇರಳಕ್ಕೆ ಹೋಗಿ ಒಂದು ವರ್ಷದ ಅನುಭವ, ಊರು, ಸ್ನೇಹಿತರು, ತಂದೆ-ತಾಯಿ ಎಲ್ಲರನ್ನು ನೆನಪಿಸಿಕೊಳ್ಳುತ್ತಾ "ಮನುಷ್ಯ ಎಷ್ಟೇ ಉತ್ತುಂಗದ ಸ್ಥಾನಕ್ಕೇರಿದರೂ ತನ್ನ ಬೇರನ್ನು ಎಂದಿಗೂ ಆತ ಮರೆಯಲ್ಲ" ಎನ್ನುತ್ತಲೇ ಹೊಸ ಚಿಗುರುಗಳಾದ ಹಾಸ್ಟೆಲಿನ ದಿನಗಳು ಹಾಗೂ ಆಪ್ತ ಲೆಕ್ಚರರ್ ಗಳನ್ನು ಪರಿಚಯಿಸುತ್ತಾರೆ.


ಬಂದ ಹೊಸತರಲ್ಲಿ ಹೊಸ ಜಾಗ, ಹೊಸ ಜನರ ನಡುವೆ ಖುಷಿಯಾಗಿದ್ದರೂ ನಂತರದ ದಿನಗಳಲ್ಲಿ ಎಲ್ಲವೂ ನೆನಪಾಗಿ ಮಿಸ್ ಮಾಡಿಕೊಳ್ಳುವುದಂತೂ ಹೌದು. ಹೀಗೆ ಅಮ್ಮನಿಗೆ ಮಗ ಮನೆಯಲ್ಲಿ ಇಲ್ಲದ ಖಾಲಿತನವಿದ್ದರೆ.. ಮಗನಿಗೆ ಅಪ್ಪ-ಅಮ್ಮನ ಜೊತೆ ಇಲ್ಲದ ಅನುಭವ. ಆದರೆ, ಭವಿಷ್ಯದ ಗಟ್ಟಿತನಕ್ಕಾಗಿ ಇಂತಹ ದಿನಗಳು ಅನಿವಾರ್ಯ. ಆದರೆ, ಕೆಲವೊಮ್ಮೆ ಆಗಬಾರದ ಆತಂಕಗಳು. ಮುಂದಿನ ಭವಿಷ್ಯದ ದಿನಗಳನ್ನು ಕಟ್ಟುವ, ಅಮ್ಮನೊಟ್ಟಿಗೆ ಬದುಕುವ ಕನಸುಗಳೇ ಅದೆಷ್ಟು ಸುಂದರ.


ಅಮ್ಮನನ್ನು ಮೆಚ್ಚಿಸುವ ಸಲುವಾಗಿ ಬರೆದ ಪತ್ರ ಇದಲ್ಲವೆಂದು ಹೇಳುತ್ತಲೇ ಅಮ್ಮನಿಗೊಂದು ಸುಂದರ ಪತ್ರ ಬರೆದಿದ್ದಾರೆ.


ಅಮ್ಮನನ್ನು ಮಿಸ್ ಮಾಡಿಕೊಂಡರೆ ಮಾತನಾಡಲು ಫೋನ್ ಕಾಲ್ ಇಲ್ಲವೇ ವಾಟ್ಸಪ್ ಕಾಲ್ಗಳು ಇದ್ದರೂ.. ಇಂತಹ ಭಾವಗಳು ಅದೆಷ್ಟು ಆಪ್ತ. 


ಅಮ್ಮನನ್ನು ಕಳೆದುಕೊಂಡ ನಂತರ ವ್ಯಕ್ತಪಡಿಸುವ ಭಾವನೆಗಳಿಗಿಂತಲೂ ಈ ಭಾವಗಳು ಬದುಕಿರುವಾಗಲೇ ಅವರಿಗೆ ಮುಟ್ಟಿದರೆ ಅಮ್ಮನಿಗೆ ಅದೆಷ್ಟು ಸಂತಸವಾಗಬಹುದು..! ಅಂತಹ ಖುಷಿ ಲೇಖಕರ ಅಮ್ಮನಿಗೆ ಖಂಡಿತ ಸಿಕ್ಕಿದೆ ಎನ್ನುವೆ. 


ಈಗಷ್ಟೇ ಓದಲು ಶುರು ಮಾಡಿರುವವರು, ಓದಿನಲ್ಲಿ ಆಸಕ್ತಿ ಮೂಡಿಸಿಕೊಳ್ಳಲು ಸುಲಲಿತವಾದ ಭಾಷೆ, ಆಪ್ತ ಸಂಭಾಷಣೆಗಳಿರುವ ಈ ಪುಸ್ತಕವನ್ನು ಓದಬಹುದು. ಯುವ ಜನರಿಗೆ ಅಂತೆಯೇ.. ತಾರುಣ್ಯದ ಹೊಸ್ತಿಲಲ್ಲಿರುವ ಮಕ್ಕಳ ಅಮ್ಮಂದಿರಿಗೂ ಬೇಗ ಕನೆಕ್ಟ್ ಆಗುವಂತಹ ಪುಸ್ತಕ. ಆರಾಮಾಗಿ ಓದಿಸಿಕೊಂಡು ಹೋಗುತ್ತದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ