ಪುಸ್ತಕದ ಶೀರ್ಷಿಕೆ : ಬದಲಾದರೆ ಯೋಚನೆ ನಿಮ್ಮದೇ ಗೆಲುವು
ಲೇಖಕರು : ಡಾ. ನಾಗ ಎಚ್. ಹುಬ್ಳಿ
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2021
ಪುಟಗಳು : 146
ಬೆಲೆ : 150 ರೂ.
ಈ ಕೃತಿಯಲ್ಲಿನ ಹೆಚ್ಚಿನ ಬರಹಗಳು ಮಂಗಳ ವಾರಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿವೆ. ವ್ಯಕ್ತಿತ್ವ ವಿಕಸನದ ಕುರಿತಾಗಿ ಹಲವು ಪುಸ್ತಕಗಳಿದ್ದರೂ.. ಎಷ್ಟೆಲ್ಲಾ ವಿಚಾರಗಳು ಪ್ರಸ್ತಾಪವಾಗಿದ್ದರೂ.. ಪ್ರಸ್ತಾಪವಾಗುವ ವಿಚಾರಗಳು ಇನ್ನೂ ಹಲವಾರು ಇರುತ್ತವೆ. ಹಾಗೆಯೇ ಅದನ್ನು ದಾಟಿಸುವ ಶೈಲಿಯೂ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಹೀಗೆ ವ್ಯಕ್ತಿತ್ವ ವಿಕಸನಕ್ಕೆ ಸ್ಪೂರ್ತಿದಾಯಕವಾಗಿರುವ ಕಥೆಗಳನ್ನು ಇಲ್ಲಿ ಓದಬಹುದು. ಈ ಕೃತಿಯಲ್ಲಿ ಇಂತಹ 47 ಸ್ಪೂರ್ತಿದಾಯಕ ಕಥೆಗಳನ್ನು ಕಾಣಬಹುದು. ನನಗೆ ಇಷ್ಟವಾದ, ವಿಶೇಷವೆನಿಸಿದ ಕೆಲವು ವಿಚಾರಗಳ ಮೇಲೆ ಬೆಳಕು ಚೆಲುವ ಪ್ರಯತ್ನ ಮಾಡುವೆ.
"ಗೆಲುವು ಇರುವುದು ಕೇವಲ ನಮ್ಮ ನಡೆಯಲ್ಲಿ ಅಲ್ಲ; ಬದಲಿಗೆ ನಮ್ಮ ಯೋಚನಾ ವಿಧಾನದಲ್ಲಿ ಎನ್ನುವುದನ್ನು ನಾವು ಅರಿತುಕೊಳ್ಳಲೇಬೇಕು. ಹಾಗಿದ್ದಾಗ ಮಾತ್ರ ಗೆಲುವು ನಮ್ಮದಾಗಬಹುದು." ಎನ್ನುತ್ತಾರೆ ಲೇಖಕರು.
* "ಯಾವುದೇ ಘಟನೆ ಅಥವಾ ಅದರ ಪರಿಣಾಮ ನಮ್ಮ ಕೈನಲ್ಲಿ ಇಲ್ಲ; ಆದರೆ, ಅದನ್ನು ಯಾವ ರೀತಿಯಲ್ಲಿ ನಿಭಾಯಿಸಬಹುದು ಎನ್ನುವುದು ನಮ್ಮ ಕೈನಲ್ಲಿ ಇರುತ್ತದೆ" ಎಂದು ಹೇಳುತ್ತಾ 'ಚಿಂತೆ ಮತ್ತು ಒತ್ತಡಕ್ಕೆ ಮನಸ್ಸಿನಲ್ಲಿ ಜಾಗ ನೀಡಬೇಡಿ' ಎನ್ನುತ್ತಾರೆ.
ಮನೋವೈಜ್ಞಾನಿಕ ವಿಷಯದ ಪ್ರಾಧ್ಯಾಪಕರು ಮಾನಸಿಕ ಒತ್ತಡವನ್ನು ನಿಭಾಯಿಸುವ ಉಪಾಯಗಳನ್ನು ಬೋಧಿಸುವಾಗ ಒಂದು ಗ್ಲಾಸ್ ನಲ್ಲಿರುವ ನೀರನ್ನು ಇದು ಎಷ್ಟು ಭಾರವಾಗಿರಬಹುದು ಎಂದು ವಿದ್ಯಾರ್ಥಿಗಳನ್ನು ಕೇಳುತ್ತಾರೆ. ಅದಕ್ಕೆ ಬಂದ ವಿವಿಧ ಉತ್ತರಗಳು ಹಾಗೂ ನಮ್ಮ ಜೀವನದ ಚಿಂತೆ ಮತ್ತು ಒತ್ತಡಗಳನ್ನು ನೀರಿನ ಗ್ಲಾಸಿಗೆ ಹೋಲಿಸುತ್ತಾ.. ಸ್ವಲ್ಪ ಸಮಯದವರೆಗೆ ಮನಸ್ಸಿನಲ್ಲಿಟ್ಟುಕೊಂಡ ವಿಚಾರಗಳು ಹಗುರವೆನಿಸುತ್ತವೆ. ಅದೇ ಅವುಗಳನ್ನು ಹೆಚ್ಚು ಕಾಲ ಮನಸ್ಸಿಗೆ ತೆಗೆದುಕೊಂಡರೆ ನಿಭಾಯಿಸುವುದು ಯಾವ ರೀತಿಯಲ್ಲಿ ಕಷ್ಟ ಎಂಬುದನ್ನೂ ಹೇಳುತ್ತಾರೆ.
* ಉತ್ತಮ ಕಾರ್ಯಕ್ಕೆ ಪ್ರೋತ್ಸಾಹವೇ ಪ್ರೇರಣೆ :
19ನೇ ಶತಮಾನದ ಖ್ಯಾತ ಚಿತ್ರ ಕಲಾವಿದ ಗ್ಯಾಬ್ರಿಯಲ್ ರೊಜೆಟಿಯವರ ಉದಾಹರಣೆಯನ್ನು ನೀಡುತ್ತಾರೆ. ಒಬ್ಬ ವ್ಯಕ್ತಿ ಬಂದು ಕೆಲವು ಚಿತ್ರಗಳನ್ನು ತೋರಿಸಿದಾಗ ಅವುಗಳನ್ನು ದಿಟ್ಟಿಸಿ, ಗಮನವಿಟ್ಟು ನೋಡಿದವರು ಅವುಗಳನ್ನು ಬಿಡಿಸಿದವನಲ್ಲಿ ಯಾವುದೇ ಪ್ರತಿಭೆ ಇಲ್ಲ ಎಂಬ ನಿಲುವಿಗೆ ಬರುತ್ತಾರೆ. ಹಾಗೆಂದು, ಆ ವ್ಯಕ್ತಿಯ ಮನಸ್ಸಿಗೆ ನೋವನ್ನುಂಟು ಮಾಡಲು ಇಷ್ಟವಿರಲಿಲ್ಲ ಅಥವಾ ಸುಳ್ಳು ಹೇಳಲು ಇಷ್ಟವಿರಲಿಲ್ಲ. ಕೊನೆಗೆ ಈ ಚಿತ್ರಗಳಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನೂ ಕಾಣಿಸುವುದಿಲ್ಲ ಎನ್ನುತ್ತಾರೆ. ಆ ವ್ಯಕ್ತಿ ಅದನ್ನು ನಿರೀಕ್ಷಿಸಿದವಂತೆ ಮತ್ತಷ್ಟು ಬೇರೆ ಚಿತ್ರಗಳನ್ನು ಕೊಟ್ಟು ಯುವ ಕಲಾವಿದ ಬಿಡಿಸಿದ ಹಳೆಯ ಚಿತ್ರಗಳು. ಇವು ಹೇಗಿವೆ..? ಎನ್ನುತ್ತಾರೆ. . ಅವುಗಳನ್ನು ಗಮನಿಸಿ ಇದು ಬಹಳ ಪ್ರತಿಭಾವಂತನ ಚಿತ್ರಗಳು ಆತ ಇನ್ನಷ್ಟು ಶ್ರಮ ವಹಿಸಿದರೆ ಹಾಗೂ ನೀವು ಪ್ರೋತ್ಸಾಹಿಸಿದರೆ ಮಹಾನ್ ಕಲಾವಿದನಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ. ವಿಪರ್ಯಾಸವೆಂದರೆ, ಆತನೇ 30 ವರ್ಷಗಳ ಹಿಂದೆ ಬಿಡಿಸಿದ್ದ ಚಿತ್ರಗಳು ಆ ಸಮಯದಲ್ಲಿ ರೊಜೆಟಿಯವರು ಪ್ರೋತ್ಸಾಹದ ಮಾತುಗಳನ್ನಾಡದೆ ಅವಹೇಳನ ಮಾಡಿ ತಿರಸ್ಕರಿಸಿದ್ದರು. ಈ ವಿಚಾರ ತಿಳಿದಾಗ ಅನ್ಯಾಯವಾಗಿ ಒಬ್ಬ ಕಲಾವಿದನ ಭವಿಷ್ಯವನ್ನು ಹಾಳು ಮಾಡಿದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಒಂದು ಪ್ರೋತ್ಸಾಹ ಮತ್ತೊಬ್ಬರ ಭವಿಷ್ಯದ ಮೇಲೆ ಅದೆಷ್ಟು ಪರಿಣಾಮ ಬೀರುತ್ತದೆ ಅಲ್ಲವಾ..?
* 'ಇನ್ನೊಬ್ಬರ ಕೆಲಸದಲ್ಲಿನ ಕೊರತೆಯನ್ನು ಹುಡುಕುವುದು ಅಥವಾ ಅದನ್ನು ನಿಂದಿಸುವುದು ಬಹಳ ಸುಲಭ ಆದರೆ ಆ ಕೊರತೆಯನ್ನು ಸ್ವತಃ ದೂರ ಮಾಡುವುದು ಬಹಳ ಕಠಿಣ.' ಇಂತಹ ವಿಚಾರಗಳಲ್ಲಿ 'ಯೋಗ್ಯ ವ್ಯಕ್ತಿಯ ಸಲಹೆಯಿಂದ ಮಾತ್ರ ಸಮಸ್ಯೆಗೆ ಪರಿಹಾರ' ದೊರೆಯುತ್ತದೆ.
ಹೆಸರಾಂತ ಕಲಾವಿದ ತನ್ನ ಸುಂದರ ಕಲಾಕೃತಿಯನ್ನು ಮಾರ್ಗದ ಪಕ್ಕದಲ್ಲಿಟ್ಟು ಈ ಚಿತ್ರದಲ್ಲಿ ಯಾವುದಾದರೂ ಲೋಪ ಕಂಡು ಬಂದರೆ ಅಲ್ಲಿ ಸಣ್ಣ ಗುರುತನ್ನು ಮಾಡಿ ಎಂದು ವಿನಂತಿಸಿಕೊಳ್ಳುತ್ತಾನೆ. ತನ್ನ ಚಿತ್ರಗಳಲ್ಲಿರುವ ಕೊರತೆಗಳನ್ನು ತಿಳಿದುಕೊಂಡು ಇನ್ನಷ್ಟು ಉತ್ತಮ ಕಲಾಕೃತಿಯನ್ನು ರೂಪಿಸಬಹುದು ಎನ್ನುವುದು ಆತನ ದೂರಲೋಚನೆ. ಆದರೆ, ಆ ಕಲಾಕೃತಿ ಅದರ ಮೇಲೆ ಹಾಕಿದ ಅನೇಕ ಗುರುತುಗಳಿಂದ ಸೌಂದರ್ಯವನ್ನೇ ಕಳೆದುಕೊಂಡಿರುತ್ತದೆ. ಆತ ದುಃಖಿತನಾದ ಸಂದರ್ಭದಲ್ಲಿ ಗೆಳೆಯ ಮತ್ತೊಂದು ಸಲಹೆ ಸೂಚಿಸುತ್ತಾನೆ. ಆ ಸೂಚನೆ ಏನು ಹಾಗೂ ಅದರಿಂದ ಈ ಸಮಸ್ಯೆ ಬಗೆಹರಿದದ್ದು ಹೇಗೆ? ಓದಿ ನೋಡಿ ಇಂತಹ ಅತ್ಯಮೂಲ್ಯವಾದ ಸಲಹೆಗಳು ಯೋಗ್ಯ ವ್ಯಕ್ತಿಯಿಂದ ಮಾತ್ರ ಸಿಗುತ್ತದೆ.
* "ಒಂದು ವೇಳೆ ನಾವು ಸೂಕ್ತ ಸಮಯದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳದೇ ಹೋದರೆ, ವಿವಿಧ ವಿಷಮ ಪರಿಸ್ಥಿತಿಗಳಿಂದ ಹಾಗೂ ಜನರಿಂದ ಆರ್ಥಿಕ, ಶಾರೀರಿಕ ಅಥವಾ ಭಾವನಾತ್ಮಕ ಬಿಕ್ಕಟ್ಟುಗಳನ್ನು ಎದುರಿಸ ಬೇಕಾಗಬಹುದು..."
ಇದಕ್ಕೆ ಒಂದು ಕಪ್ಪೆಯನ್ನು ನೀರಿನ ಒಳಗೆ ಹಾಕಿ ಅದನ್ನು ಕುದಿಸುತ್ತಾ ಹೋದಾಗ ಅದರ ಪರಿಣಾಮವೇನು..? ಕಪ್ಪೆ ಏನು ಮಾಡುತ್ತದೆ..? ಎನ್ನುವ ನಿದರ್ಶನವನ್ನು ನೀಡುತ್ತಾ 'ನಮ್ಮೊಳಗೇ ಅಡಗಿದೆ ಪರಿಸ್ಥಿತಿಗಳನ್ನು ಬದಲಿಸುವ ಸಾಮರ್ಥ್ಯ' ಎಂದು ಹೇಳುತ್ತಾರೆ.
* "ನಮ್ಮ ಜೀವನದಲ್ಲಿ ಹಲವಾರು ಬಾರಿ ಬೀಳುತ್ತೇವೆ, ಸೋಲುತ್ತೇವೆ. ಆದರೆ ಒಂದು ವಿಷಯವನ್ನು ನೆನಪಿಡಿ, ನಮ್ಮ ಜೀವನದಲ್ಲಿ ಏನೇ ನಡೆದಿರಲಿ ಅಥವಾ ಭವಿಷ್ಯದಲ್ಲಿ ಏನೇ ನಡೆಯುವುದಿರಲಿ, ನಮ್ಮ ಮೌಲ್ಯವು ಎಂದಿಗೂ ಕಡಿಮೆಯಾಗುವುದಿಲ್ಲ..." ಎಂದು ಹೇಳುತ್ತಾ
"ಕಳೆದು ಹೋದ ನಿನ್ನೆಯ ನಿರಾಸೆಗಳು, ಮುಂಬರುವ ನಾಳೆಯ ಸ್ವಪ್ನಗಳನ್ನು ನಾಶ ಮಾಡುವುದಕ್ಕೆ ಎಂದಿಗೂ ಬಿಡಬಾರದು. ಯಾವತ್ತೂ ನಾವು ನೆನಪಿನಲ್ಲಿ ಇಡಬೇಕಾದ ವಿಷಯವೇನೆಂದರೆ, ನಮ್ಮ ಜೀವನ ಹಾಗೂ ನಮ್ಮಲ್ಲಿ ಅಡಗಿರುವ ಪ್ರತಿಭೆಗಳೇ ಈ ಜಗತ್ತಿನಲ್ಲಿ ಅತ್ಯಂತ ಮೌಲ್ಯಯುತ ವಸ್ತುಗಳಾಗಿರುತ್ತವೆ." ಅದರ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾ ಪ್ರತಿಭೆಯ ಮೌಲ್ಯವನ್ನು ನೋಟಿನ ಮೌಲ್ಯದ ನಿದರ್ಶನದೊಂದಿಗೆ ತೋರಿಸುತ್ತಾರೆ.
* ಒಬ್ಬ ಮಹಿಳೆಯು ಪ್ರತಿದಿನ ಕೆರೆಯೊಂದರ ದಡದಲ್ಲಿ ಕುಳಿತು ಆಮೆಯ ಬೆನ್ನನ್ನು ಸ್ವಚ್ಛಗೊಳಿಸುತ್ತಿರುತ್ತಾಳೆ. ಒಬ್ಬ ಹುಡುಗ ಅವಳನ್ನು ಪ್ರತಿದಿನವೂ ಗಮನಿಸುತ್ತಾ ಅವಳ ಈ ಕಾರ್ಯಕ್ಕೆ ಕಾರಣವನ್ನು ಕೇಳಿದಾಗ ಅಚ್ಚರಿಗೊಳ್ಳುತ್ತಾನೆ. ನೀವು ಮಾಡುತ್ತಿರುವ ಕೆಲಸದಿಂದ ಕಡಿಮೆ ಆಮೆಗಳು ಈ ಸೌಲಭ್ಯ ಪಡೆದುಕೊಳ್ಳುತ್ತವೆ. ಆದರೆ, ಹೆಚ್ಚಿನ ಆಮೆಗಳ ಗತಿಯೇನು..? ಎಂದು ಕೇಳಿದಾಗ.. ಅವಳು "ನನ್ನ ಈ ಸಣ್ಣದಾದ ಕಾರ್ಯದಿಂದ ದೊಡ್ಡ ಬದಲಾವಣೆಯೇನೂ ಆಗುವುದಿಲ್ಲ ನಿಜ. ಆದರೆ, ಈ ಆಮೆಯ ಜೀವನವಂತೂ ಬದಲಾಗುತ್ತದೆಯಲ್ಲವೇ? ಸಣ್ಣ ಬದಲಾವಣೆಗಾಗಿಯೇ ನಾವೇಕೆ ಕೆಲಸವನ್ನು ಆರಂಭಿಸಬಾರದು? ಎಂದು ಹೇಳಿದಾಗ ಮನ ಪರಿವರ್ತನೆಯಾದ ಆ ಹುಡುಗನೂ ಅವಳ ಕಾರ್ಯಕ್ಕೆ ಕೈಜೋಡಿಸುತ್ತಾನೆ. 'ಸದುದ್ದೇಶದ ಯಾವ ಕಾರ್ಯವೂ ವ್ಯರ್ಥವಾಗುವುದಿಲ್ಲ' ಎನ್ನುವ ಸಂದೇಶ ನೀಡುವ ಕಥೆ.
* "ನಾವು ಯೋಚಿಸುವ ವಿಧಾನದ ಮೂಲಕವೇ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ನಮ್ಮ ಯೋಚನೆ ಬದಲಾದರೆ ಮಾತ್ರ ನಮ್ಮ ಜಗತ್ತು ಬದಲಾಗುತ್ತದೆ. ಆದ್ದರಿಂದ ನಾವು ಸದಾ ಸಕಾರಾತ್ಮಕವಾಗಿಯೇ ಯೋಚಿಸಬೇಕು.." ಎಂದು ಹೇಳುತ್ತಾ ಇಬ್ಬರು ಸಾಧುಗಳ ಉದಾಹರಣೆಯನ್ನು ಕೊಡುತ್ತಾರೆ ಒಬ್ಬ ಸಾಧು ನಕಾರಾತ್ಮಕ ಆಲೋಚನೆಯಿಂದ ಕೂಡಿದ್ದರೆ, ಇನ್ನೊಬ್ಬ ಸಾಧು ಸಕಾರಾತ್ಮಕ ಆಲೋಚನೆಯಿಂದ ಕೂಡಿರುತ್ತಾನೆ. ಇಬ್ಬರಲ್ಲಿ ಯಾರ ಆಲೋಚನೆ ಬದಲಾಯಿತು ಮತ್ತು ಅವರ ಮೇಲೆ ಯಾವ ಪರಿಣಾಮವಾಯಿತು ಓದಿ ನೋಡಿ.
" 'ಕಠಿಣ ದುಡಿಮೆಗಿಂತ ಕೌಶಲ್ಯಪೂರ್ಣ ದುಡಿಮೆ ಹೆಚ್ಚು ಮಹತ್ವಪೂರ್ಣ' ಎನ್ನುವುದಕ್ಕೆ ಉದಾಹರಣೆಯಾಗಿ ಒಬ್ಬ ಮರ ಕಡಿಯುವ ಕೆಲಸವನ್ನು ಶುರು ಮಾಡಿದವನು ಅತಿ ಹುರುಪಿನಿಂದ ಕೆಲಸ ಮಾಡಿದರೂ ದಿನೇ ದಿನೇ ಕಡಿಯುವ ಮರಗಳು ಕಡಿಮೆಯಾಗುತ್ತಿರುತ್ತವೆ. ಅದಕ್ಕೆ ಕಾರಣ ಕೊಡಲಿಯನ್ನು ಹರಿತಗೊಳಿಸಿಕೊಳ್ಳದೆ ಇರುವುದು. ನಂತರ ಅವನಿಗೆ ತನ್ನ ತಪ್ಪಿನ ಅರಿವಾಗಿ ಅದನ್ನು ತಿದ್ದಿಕೊಳ್ಳುತ್ತಾನೆ. ಹೀಗೆ "ಯಾವುದೇ ಕೆಲಸದಲ್ಲಿ ಯಾದರೂ ಸತತವಾದ ಪರಿಶ್ರಮ ಬೇಕೇಬೇಕು. ಆದರೆ ಅದರ ಜೊತೆಯಲ್ಲಿಯೇ ಕೌಶಲ್ಯ ಪ್ರದರ್ಶನಕ್ಕೂ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಗಾಣದ ಎತ್ತಿನ ದುಡಿಮೆಯಾಗುತ್ತದೆ" ಎನ್ನುವ ಸಂದೇಶವೂ ಇಲ್ಲಿದೆ.
ಈ ಪುಸ್ತಕದಲ್ಲಿ ಇಂತಹ ಹಲವಾರು ವ್ಯಕ್ತಿತ್ವ ವಿಕಸನದ ಪಾಠಗಳು ಬದುಕಿನ ರೀತಿಯನ್ನು ಬದಲಿಸಿಕೊಳ್ಳುವ ಆಲೋಚನೆಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ ಲೇಖಕರು. ಇವುಗಳನ್ನು ಅರಿತು ತಿದ್ದಿಕೊಳ್ಳುವ ವಿಚಾರವನ್ನು ತಿದ್ದಿಕೊಂಡರೆ ಬದುಕು ಮತ್ತಷ್ಟು ಸಹನೀಯವಾಗುತ್ತದೆ. ಅಲ್ಲದೆ, ನಮ್ಮ ವ್ಯಕ್ತಿತ್ವ ಮತ್ತಷ್ಟು ಚಂದವಾಗಿ ರೂಪಗೊಳ್ಳುತ್ತವೆ. ನಕಾರಾತ್ಮಕ ಆಲೋಚನೆಗಳು ಬಂದಾಗಲೂ ಮತ್ತೆ ಮತ್ತೆ ಓದಬಹುದಾದಂತಹ ಪುಸ್ತಕ.
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ