ಪುಸ್ತಕದ ಶೀರ್ಷಿಕೆ : ಅಗ್ನಿ ಪುಷ್ಪ
ಮೂಲ ಲೇಖಕರು : ಮಹಾಶ್ವೇತಾದೇವಿ
ಅನುವಾದಕರು : ಡಾ. ನಿರುಪಮಾ
ಪ್ರಕಾಶಕರು : ವಿಕ್ರಮ್ ಪ್ರಕಾಶನ
ಮರು ಮುದ್ರಣ : 2023
ಪುಟಗಳು : 148
ಬೆಲೆ : 140 ರೂ.
ಅಗ್ನಿ ಪುಷ್ಪ ಇದು ಮಹಾ ಶ್ವೇತಾದೇವಿಯವರ '1084ರ ತಾಯಿ ?' ಎಂಬ ಬಂಗಾಲಿ ಕಾದಂಬರಿಯ ಅನುವಾದ.
ಇದು ಸುಜಾತ ಎಂಬ ತಾಯಿಯ ನೋವನ್ನು ಹಾಗೂ ಆಕೆಯ ಭಾವಗಳನ್ನು ಸ್ಪಷ್ಟವಾಗಿ ಕಟ್ಟಿಕೊಡುವ ಕೃತಿ. 'ಹತ್ತು ಮಕ್ಕಳ ತಾಯಿಯಾದರೂ ಸತ್ತ ಮಗನನ್ನು ಮರೆಯುವುದಿಲ್ಲ.' ಎಂಬ ಗಾದೆ ಮಾತೇ ಇದೆ. ತನ್ನ ನಾಲ್ವರು ಮಕ್ಕಳಲ್ಲಿ ಆಪ್ತನಾಗಿದ್ದ, ಪ್ರೀತಿಯ ಕಿರಿ ಮಗ ವ್ರತಿ ಚಟರ್ಜಿಯ ಗತವನ್ನು, ಜೊತೆಜೊತೆಗೆ ತನ್ನ ಬದುಕನ್ನು ಸುಜಾತ ತೆರೆದಿಡುತ್ತಾರೆ.
ಜನವರಿ 17 ಸುಜಾತಾಳ ಬದುಕಿನಲ್ಲಿ ಬಹಳ ಬದಲಾವಣೆಯನ್ನು ಮೂಡಿಸಿದ ದಿನಾಂಕ. ಮಗ ವ್ರತಿ ಚಟರ್ಜಿ ಹುಟ್ಟಿದ್ದು ಜನವರಿ 17, ಸತ್ತದ್ದು ಕೂಡ ಜನವರಿ 17ರಂದೇ... ಆದರೆ, 2೦ ವರ್ಷಗಳ ವ್ಯತ್ಯಾಸವಿದೆ. ಆತ ಹುಟ್ಟಿದ ದಿನವೂ ಆಕೆ ಒಂಟಿಯಾಗಿಯೇ ನರ್ಸಿಂಗ್ ಹೋಂಗೆ ಹೋಗಿ ಹೆರಿಗೆ ಮಾಡಿಸಿಕೊಂಡಿದ್ದಳು. ಮೊದಲ ಮಗ ಜ್ಯೋತಿ, ಎರಡನೆಯವಳು ನೀಪಾ, ಮೂರನೆಯ ಮಗಳಾದ ತುಲೀ ಹುಟ್ಟಿದ ಆರು ವರ್ಷದ ನಂತರ ಹುಟ್ಟಿದವನೇ ವ್ರತಿ. ಅತ್ತೆಯ ಅಸಡ್ಡೆ ಜೊತೆಗೆ ಗಂಡನ ನೆರವೂ ಸಿಕ್ಕಿರಲಿಲ್ಲ.
ಜನವರಿ 17ರಂದು ಕರೆ ಮಾಡಿದ ಆಫೀಸರ್ 'ಕಾಂಟಾ ಪುಷ್ಕರ್'ಗೆ ಬರಲು ಹೇಳಿಡಿದರು. ಆಗಲೂ ಸುಜಾತ ಒಂಟಿಯೇ. ಗಂಡ ದಿವ್ಯನಾಥ ಮಗ ಸತ್ತು ಹೋಗಿದ್ದಾನೆಂದು ತಿಳಿದೊಡನೆ ಆ ಸಮಾಚಾರವನ್ನು ಹೇಗೆ ಅಡಗಿಸಬೇಕೆಂದು ಯೋಚಿಸುತ್ತಿದ್ದ. ದೊಡ್ಡ ಮಗನೂ ತಂದೆಯ ದಾರಿಯನ್ನೇ ಹಿಡಿದಿದ್ದ. ವ್ರತಿಯ ಸಾವಿನೊಂದಿಗೆ ಸುಜಾತಾಳ ಮನದಲ್ಲಿ ಅವಳ ಗಂಡನೂ ಸತ್ತಿದ್ದ. ದಿವ್ಯನಾಥನಂತೂ ಯಾರ್ಯಾರನ್ನೋ ಹಿಡಿದು ಮಾರನೇ ದಿನದ ವರ್ತಮಾನ ಪತ್ರಿಕೆಯಲ್ಲಿ ನಾಲ್ಕು ಜನ ತರುಣರು ಸತ್ತ ಸುದ್ದಿ ಪ್ರಕಟವಾಗಿದ್ದರೂ ತನ್ನ ಮಗ ವ್ರತಿ ಚಟರ್ಜಿಯ ಹೆಸರನ್ನು ಮರೆಮಾಚುವುದರಲ್ಲಿ ಸಫಲವಾಗಿದ್ದ. ಅದಾದ ಮೂರು ತಿಂಗಳು ಮಂಕು ಕವಿದಂತೆ ಹಾಸಿಗೆ ಹಿಡಿದಿದ್ದ ಸುಜಾತ ಮೂರು ತಿಂಗಳ ನಂತರ ಹೇಗೋ ಚೇತರಿಸಿಕೊಂಡು ಬ್ಯಾಂಕಿನಲ್ಲಿನ ತನ್ನ ಉದ್ಯೋಗಕ್ಕೆ ಹಾಜರಾಗಿದ್ದಳು. ಅವಳು ಉದ್ಯೋಗ ಪಡೆದದ್ದು ಹಾಗೂ ದುಡಿಯಲು ಹೋದ ದಿನಗಳ ಪಡಿಪಾಟಲು ಬೇರೆಯೇ ಇದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಎರಡು ದಶಕಗಳಲ್ಲಿ 1083 ಜನ ಹತರಾಗಿದ್ದಾಗ 1084 ಯವನೇ ವ್ರತಿ. ಸತ್ತ ತರುಣರ ಪಟ್ಟಿ ಬರೆದರೆ ಅದರ ವ್ರತಿಯ ಹೆಸರು ಕಾಣಿಸುತ್ತದೆಯೇ ಹೊರತು ವರ್ತಮಾನ ಪತ್ರಿಕೆಗಳಲ್ಲಿ ಆ ಹೆಸರೇ ಕಾಣಸಿಗುವುದಿಲ್ಲ. ಹಾಗೆ ಮಾಡಿದ್ದು ಆತನ ತಂದೆ.
ವುತಿಯ ಸಾವು ಎಷ್ಟು ಕ್ರೂರವಾಗಿತ್ತೆಂದರೆ "ಯಾವುದೋ ಕತ್ತಿಯಿಂದಲೋ ಅಥವಾ ಬೇರೆ ಆಯುಧದಿಂದಲೋ ಬಲವಾದ ಹಿಡಿಯಿಂದ ಕೊಚ್ಚಿ ಹಾಕಿದ ಹಾಗೆ ಮುಖ, ಮೂಗು, ಕಣ್ಣು ಆಕಾರ ತಿಳಿಯದ, ಹಿಟ್ಟಿನ ಮುದ್ದೆಯಂತೆ ಜಜ್ಜಿ ಹಾಕಿರುವ ಮುಖ. ಮುಖವನ್ನು ಸರಿಯಾಗಿ ಬೆರಳಿನಿಂದ ಸ್ಪರ್ಶಿಸೋಣವೆಂದರೆ ಒಂದು ಅಂಗುಲದಷ್ಟಾದರೂ ನುಣುಪಾದ ಚರ್ಮ ಉಳಿದಿರಲಿಲ್ಲ. ಎಲ್ಲಾ ಮಾಂಸದ ಮುದ್ದೆಯಂತೆ" ಆಗಿತ್ತು. ಮುಖವೇ ಹೀಗಿದ್ದರೆ.. ಇನ್ನು ದೇಹದ ಕಥೆ ಕೇಳುವುದು ಬೇಡ.
ಮನೆಯಲ್ಲಿ ವ್ರತಿಯ ಫೋಟೋ ತೆಗೆದು ಹಾಕಲಾಗಿತ್ತು. ಮೂರನೇ ಮಹಡಿಯ ಆತನ ಕೊನೆಗೆ ಬೀಗ ಹಾಕಲಾಗಿತ್ತು. ಅವನಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ಅಲ್ಲಿಡಲಾಗಿತ್ತು. ಆದರೆ, ಶೆಲ್ಫ್ ನಲ್ಲಿದ್ದ ಅವನ ಪುಸ್ತಕಗಳು, ಸೂಟ್ಕೇಸ್ ಅನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರು.
ವ್ರತಿ ಅಂತಹ ಸಾವನ್ನು ಅನುಭವಿಸುವುದನ್ನು ತಡೆಯಲು ತಾನೇನು ಮಾಡಬೇಕಾಗಿತ್ತು.. ತನ್ನ ಕರ್ತವ್ಯದಲ್ಲಿ ಏನು ಲೋಪವಾಗಿತ್ತು ಎಂದು ಯೋಚಿಸುತ್ತಲೇ ಸುಜಾತ ಎಲ್ಲವನ್ನೂ ತಿರುಗಿ ಪರಾಮರ್ಶಿಸುತ್ತಿದ್ದಳು.
ದಿವ್ಯನಾಥನಿಗೆ ವ್ರತಿಯನ್ನು ಕಂಡರೆ ಅಸಹ್ಯ. 'ಮದರ್ಸ್ ಚೈಲ್ಡ್' ಎನ್ನುತ್ತಿದ್ದ. ನನ್ನ ಮೇಲೆ ದ್ವೇಷ ಹುಟ್ಟಿಸಿದ್ದು ನೀನೇ ಎಂದು ಸುಜಾತಳಿಗೆ ಹೇಳುತ್ತಿದ್ದ. ಅಮ್ಮನ ಮಗ ತನ್ನ ತಾಯಿಯೂ ಗುರುತಿಸಲಾಗದಷ್ಟು ಬದಲಾಗುತ್ತಿದ್ದ. ಆ ಬದಲಾವಣೆಯ ಮೇಲೆ ಬಲವಾದ ಸಂದೇಹ ಸುಜಾತಾಳಿಗೆ ಏಕೆ ಬರಲಿಲ್ಲ..?
ಜ್ಯೋತಿಗೆ ಈಗಾಗಲೇ ಮದುವೆಯಾಗಿ ಸೊಸೆ ಬಿ ನೀ ಮನೆ ತುಂಬಿದ್ದಳು ಹಾಗೂ ಮೊಮ್ಮಗ ಸುಮನ್ ಇದ್ದನು. ನೀಪಾಳಿಗೂ ವಿವಾಹವಾಗಿತ್ತು. ತುಲೀಯ ನಿಶ್ಚಿತಾರ್ಥ ಜನವರಿ 17ರಂದೇ ನಿಶ್ಚಯವಾಗಿದ್ದು ವಿಪರ್ಯಾಸ.
ನಂದಿನಿ ವ್ರತಿಯನ್ನು ಪ್ರೀತಿಸಿದ ಹುಡುಗಿ. ಸುಜಾತ ಆಕೆಯನ್ನು ನೋಡಿರಲಿಲ್ಲ. ಆದರೆ ಚಿಕ್ಕಂದಿನಿಂದ ವ್ರತಿಯನ್ನು ನೋಡಿಕೊಳ್ಳಲು ಇದ್ದ ಹೇಮಾಳಿಗೆ ಅವಳ ಕುರಿತು ಗೊತ್ತಿತ್ತು. ನಂದಿನಿಯಿಂದ ಬಂದ ಕರೆ ಸುಜಾತಾಳಿಗೆ ನಂದಿನಿಯನ್ನು ಭೇಟಿಯಾಗಲು ಒಂದು ಅವಕಾಶವನ್ನು ಒದಗಿಸಿತ್ತು.
ಸುಜಾತರಿಗೆ ಈಗ ಅಪೆಂಡಿಸೈಟಿಸ್ ಕಾಡಿಸುತ್ತಿತ್ತು. ಆಪರೇಷನ್ ಗೆ ಇನ್ನೂ ಸರಿಯಾದ ಸಮಯ ಕೂಡಿ ಬಂದಿರಲಿಲ್ಲ. ಅದರಲ್ಲಿ ರಿಸ್ಕ್ ಫ್ಯಾಕ್ಟರ್ ಎಷ್ಟಿತ್ತು ಎಂಬುದನ್ನು ಸುಜಾತ ಈಗಾಗಲೇ ತಿಳಿದುಕೊಂಡಿದ್ದಳು.
ವ್ರತಿಯ ವಿಚಾರಕ್ಕಾಗಿ ಸುಜಾತ ಗಂಡನನ್ನು, ಅತ್ತೆಯನ್ನು ಧಿಕ್ಕರಿಸಿ ನಡೆಯುತ್ತಿದ್ದಳು. ಉಳಿದ ಮಕ್ಕಳು ತನಗೆ ಇಷ್ಟ ಬಂದಂತೆ ಸ್ವೇಚ್ಛೆಯಾಗಿರುವಾಗ ವ್ರತಿಯನ್ನು ಅವೆಲ್ಲದರಿಂದ ದೂರವಿರಿಸಿ ಕಾಪಾಡಿಕೊಂಡು ಬಂದಿದ್ದಳು. ಎಲ್ಲರಿಗಿಂತ ವ್ರತಿಗೆ ಹಠಮಾರಿತನ, ಛಲ ಹೆಚ್ಚಾಗಿಯೇ ಇತ್ತು. ತಂದೆಯ ಕುರಿತು ಆತನಿಗೆ ಗೊತ್ತಾಗಿದ್ದ ಸತ್ಯ, ಅವೆಲ್ಲವೂ ಗೊತ್ತಿದ್ದರೂ ತಂದೆಯನ್ನು ಬೆಂಬಲಿಸುತ್ತಿರುವ ಉಳಿದವರೊಡನೆ ಆತ ಬೆರೆಯಲು ಇಚ್ಚಿಸುತ್ತಿರಲಿಲ್ಲ. ಅಷ್ಟೇ ಅಲ್ಲದೆ ಮತ್ತೊಂದು ಕಾರಣವೂ ಇತ್ತು.
ಸುಜಾತ ಅಂದು ನಂದಿನಿಯನ್ನು ಭೇಟಿಯಾಗುವ ಮೊದಲು ಸಮೂವಿನ ಮನೆಗೆ ಹೋಗಿದ್ದಳು. ಒಂದು ವರ್ಷದ ಹಿಂದೆಯೂ ಅಲ್ಲಿಗೆ ಹೋಗಿದ್ದಳು. ಮತ್ತೆ ಮತ್ತೆ ಸಮೂ, ಪಾರ್ಥ, ವ್ರತಿಯರನ್ನು ಸಮೂವಿನ ತಾಯಿಯ ಮಾತಿನಲ್ಲಿ ಕಣ್ತುಂಬಿಸಿಕೊಳ್ಳಲು. ಆದರೆ, ಅದಾದ ನಂತರ ಅವಳಿಗೆ ಅಂತಹ ಕ್ಷಣಗಳು ಮತ್ತೆ ದೊರೆಯಲಿಲ್ಲ. ಅದಕ್ಕೆ ಕಾರಣ ಅಂತಸ್ತು, ಸಾಮಾಜಿಕ ಸ್ಥಿತಿಗತಿಗಳು ಮಾತ್ರವಲ್ಲದೆ ಬೇರೆಯ ಕಾರಣವೂ ಇದ್ದಿತು. ಅದೇನು..?
ಅಷ್ಟಕ್ಕೂ ರಾತ್ರಿ ನಡೆದದ್ದರೂ ಏನು..? ವ್ರತಿ ಹಾಗೂ ಸಹಚರರು ಬಲಿಯಾದದ್ದು ಯಾವ ಕಾರಣಕ್ಕೆ ಹಾಗೂ ಹೇಗೆ..? ಸಮೂನ ತಂದೆ ಆ ಸಂದರ್ಭದಲ್ಲಿ ಏನೆಲ್ಲಾ ಮಾಡಿದರೂ ಅವರನ್ನು ಉಳಿಸಲಾಗಲಿಲ್ಲ. ಘೋರ ಮಾರಣಹೋಮ ಎಷ್ಟು ಜನರ ಬಾಳಲ್ಲಿ ದುರಂತಗಾಥೆಯನ್ನು ಬರೆದಿತ್ತು..? ವ್ರತಿಗೆ ಮೋಸ ಮಾಡಿದ್ದು ಯಾರು?
ನಂದಿನಿಯನ್ನು ಭೇಟಿಯಾದಾಗ... ವ್ರತಿಗೆ ಯಾವೆಲ್ಲಾ ಸತ್ಯಗಳು ಗೊತ್ತಿದ್ದವು ಹಾಗೂ ಆತನ ಮನಸ್ಸು ಯಾವ ರೀತಿ ಇತ್ತು ಎಂಬುದರ ಕೆಲ ಚಿತ್ರಣಗಳು ಸುಜಾತರಿಗೆ ತಿಳಿಯುತ್ತಾದರೂ ಈಗ ಪರಿಸ್ಥಿತಿಯನ್ನು ಬದಲಾಯಿಸುವಂತಿರಲಿಲ್ಲ. ಆದರೆ, ನಂದಿನಿಯಾ ಪರಿಸ್ಥಿತಿಯೂ ಅವಳಿಗೆ ಸಹಾಯಕವಾಗಿರಲಿಲ್ಲ. ನಂದಿನಿ ಹೇಗಿದ್ದಳು..? ಯಾವೆಲ್ಲಾ ವಿಚಾರಗಳನ್ನು ತೆರೆದಿಟ್ಟಳು..?
ಸುಜಾತ ಮರಳಿ ಬಂದಾಗ ಮಗಳು ತುಲೀ ಹಾಗೂ ಬಿನೀ ನಡುವೆ ಆಗಿದ್ದ ಮಾತಿನ ಚಕಮಕಿಗಳು ಹೇಮಾಳ ಮೂಲಕ ಈಕೆಗೆ ಮುಟ್ಟಿದ್ದು ಹೇಗೆ..? ಸುಜಾತ ಅಂದು ಯಾವ ಕಾರಣಕ್ಕಾಗಿ ನಿಶ್ಚಿತಾರ್ಥದ ತಯಾರಿಗಳಲ್ಲಿ ಪಾಲ್ಗೊಳ್ಳದೆ ಹೊರಗಿದ್ದಳು..?
ತುಲೀಯನ್ನು ವಿವಾಹವಾಗಲಿದ್ದ ಹುಡುಗ ಟೋನಿ ಕಪಾಡಿಯ ಹೇಗಿದ್ದ..? ಅದೇ ತಾರೀಖಿನಂದು ನಿಶ್ಚಿತಾರ್ಥವನ್ನು ನಿಶ್ಚಯಿಸಿದ್ದು ಯಾರು ಹಾಗೂ ಹೇಗೆ..? ಅಂದು ನಡೆದ ಸಮಾರಂಭದಲ್ಲಿ ಸುಜಾತಾಳ ಉಪಸ್ಥಿತಿ ಹೇಗಿತ್ತು..?
ಸುಜಾತಾಳ ನೋವು ಕೇವಲ ಅಪೆಂಡಿಸೈಟಿಸ್ ನದ್ದು ಮಾತ್ರವಲ್ಲ, ಅವಳಿಗೆ ಬಂದ ನೋವು ವ್ರತಿ ಹುಟ್ಟಿದಾಗ ಬಂದ ನೋವಿನ ನೆನಪನ್ನೇ ಮಾಡಿಸುತ್ತಿತ್ತು. 24 ಗಂಟೆಯ ಚಿತ್ರಣದ ಸುಜಾತಾಳ ಪ್ರತಿ ನೋವೂ ನಮಗೂ ಕಾಡುತ್ತಲೇ ಸಾಗುತ್ತದೆ. ಕಾದಂಬರಿ ಓದುವಾಗ ಹಾಗೂ ಓದಿದ ನಂತರ ತಲ್ಲಣ ಹುಟ್ಟಿಸುತ್ತಲೇ ಇರುವ ಕಾದಂಬರಿ ಇದು.
ಬಂಗಾಳದ ಪರಿಸರ, ಹೆಸರುಗಳನ್ನು ಹೊರತುಪಡಿಸಿದರೆ ಕನ್ನಡದ್ದೇ ಎನ್ನಬಹುದಾದಷ್ಟೇ ಚೆಂದವಾಗಿ ಅನುವಾದ ಮೂಡಿಬಂದಿದೆ. ಅಷ್ಟು ಸುಲಭಕ್ಕೆ ಮರೆಯಲಾಗದ ಓದು ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ