ಪುಸ್ತಕದ ಶೀರ್ಷಿಕೆ : ಸಂಗತ ಬದುಕು - ಸಾಧನೆ
ಲೇಖಕರು : ಗೀತಾ ಶೆಣೈ
ಪ್ರಕಾಶಕರು : ಸ್ನೇಹಾ ಪ್ರಿಂಟರ್ಸ್
ಪ್ರಥಮ ಮುದ್ರಣ : 2020
ಪುಟಗಳು : 88
ಬೆಲೆ : 70 ರೂ.
ಈ ಪುಸ್ತಕದಲ್ಲಿ ಇಬ್ಬರು ಸಾಧಕಿಯರ ಜೀವನ ಚಿತ್ರಣವಿದೆ. ಅವರ ಬದುಕು-ಸಾಧನೆ ನಿಜಕ್ಕೂ ನಮ್ಮೆಲ್ಲರಿಗೂ ಮಾದರಿ. ಇವರ ಜೀವನ ಚಿತ್ರಣದ ಭಾಗಗಳಲ್ಲಿ ನನಗೆ ಇಷ್ಟವಾದ ಹಾಗೂ ಆಸಕ್ತಿ ಮೂಡಿಸಿದ ಪ್ರಸಂಗಗಳನ್ನು ಉಲ್ಲೇಖಿಸ ಬಯಸುತ್ತೇನೆ. ಇವರಿಬ್ಬರು ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದು ದೇಶ-ವಿದೇಶಗಳಲ್ಲಿಯೂ ಪ್ರಸಿದ್ಧರಾಗಿರುವ ಸಾಧಕಿಯರು.
ಯು.ಕೆ. ಚಂದ್ರಭಾಗಾದೇವಿ
ಕರ್ನಾಟಕದ ಮೂಲೆಮೂಲೆಗೂ ನೃತ್ಯ ಪ್ರಸಾರ ಮಾಡಿ ಜನಸಾಮಾನ್ಯರು ನೃತ್ಯವನ್ನು ತಿಳಿದುಕೊಳ್ಳುವಂತೆ, ಕಲಿಯುವಂತೆ ಮಾಡಿದ ಹಾಗೂ ನೃತ್ಯದ ಕುರಿತು ಇದ್ದ ಪೂರ್ವಗ್ರಹ ಪೀಡಿತ ಮನಸ್ಥಿತಿ ದೂರವಾಗುವಂತೆ ಮಾಡಿದ ಅಪರೂಪದ ಕಲಾವಿದೆ ಚಂದ್ರಭಾಗಾದೇವಿ.
ಭಾರತೀಯ ನೃತ್ಯ ಕಲೆಯ ಪುನರುತ್ಥಾನದ ಸಂದರ್ಭದಲ್ಲಿ ನೃತ್ಯವನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿ ಆಯ್ಕೆ ಮಾಡಿಕೊಂಡವರು ಯು.ಕೆ. ಚಂದ್ರಭಾಗಾದೇವಿ ಹಾಗೂ ಇವರಿಗೆ ತಕ್ಕ ಪತಿ ಹಾಗೂ ಪ್ರೋತ್ಸಾಹಕರಾಗಿದ್ದು ಪ್ರೊಫೆಸರ್ ಯು.ಎಸ್ ಕೃಷ್ಣರಾವ್. ಇವರು ಸಹ ಅವರೊಂದಿಗೆ ನೃತ್ಯ ಪ್ರದರ್ಶಕರಾಗಿ, ನೃತ್ಯ ಸಂಯೋಜಕರಾಗಿ ಹಾಗೂ ಹಲವಾರು ನವೀನ ನೃತ್ಯ ಪ್ರಯೋಗಗಳನ್ನು ಪ್ರಾಕೀಕ್ಷೆಗಳನ್ನು ನಡೆಸಿ ಪ್ರತಿಭಾವಂತ ಶಿಷ್ಯ ಸಮೂಹವನ್ನು ಸೃಷ್ಟಿಸುವಲ್ಲಿ ಸಂಪೂರ್ಣ ಸಹಕಾರ ನೀಡುತ್ತಾರೆ.
1921 ರಲ್ಲಿ ಆಗಸ್ಟ್ 11ರಂದು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ರಮಾನಂದರಾಯರು ಹಾಗೂ ಸೀತಾದೇವಿಯವರ ಚೊಚ್ಚಲ ಮಗುವಾಗಿ ಹುಟ್ಟಿದವರು ಚಂದ್ರಭಾಗಾ. ಮದುವೆಯಾಗಿ ಐದು ವರ್ಷಗಳು ಕಳೆದ ಬಳಿಕ ಅಜ್ಜಿಯ ಹರಕೆಯಿಂದ ಚೊಚ್ಚಲ ಮಗುವಾಗಿ ಹುಟ್ಟಿದ ಮಗುವಿಗೆ ಪಂಡರಾಪುರದ ಭೀಮಾವತಿಯ ನದಿಯ ಹೆಸರನ್ನೇ ಇಟ್ಟರು. ತಂದೆ ಪಡುಕೋಣೆ ರಮಾನಂದರಾಯರು ಕನ್ನಡದ ಪ್ರಮುಖ ಲೇಖಕರು. ತಾಯಿ ಸೀತಾದೇವಿ ಹೊಸಗನ್ನಡ ಸಾಹಿತ್ಯದ ಮೊದಲ ಹಂತದ ಪ್ರಮುಖ ಲೇಖಕಿ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಂದ್ರಭಾಗಾ ತನ್ನ ತಂಗಿ-ತಮ್ಮಂದಿರನ್ನು ತಾಯಿಯಂತೆ ಪೋಷಿಸಿದವರು. ಮನೆಯಲ್ಲಿ ಕಲಾವಿದರನ್ನು, ಬರಹಗಾರರನ್ನು ಹತ್ತಿರದಿಂದ ನೋಡಿ ತಿಳಿಯುವ ಅವಕಾಶವಿತ್ತು. ಚಂದ್ರಭಾಗಾ ಅಭಿನಯ ಹಾಗೂ ನೃತ್ಯಗಳಿಗೆ ಮಾರು ಹೋಗುತ್ತಾರೆ. ಶಿವರಾಮ ಕಾರಂತರಿಂದಲೇ ಮೆಚ್ಚುಗೆ ಪಡೆದುಕೊಂಡ ಚಂದ್ರಭಾಗಾದೇವಿಯವರಿಗೆ ಮುಂದೆ ಪುತ್ತೂರಿನ ಅಜ್ಜನ ಮನೆಯಲ್ಲಿ ನೃತ್ಯ ಗುರು ರಾಮಕೃಷ್ಣ ಪ್ರಭು ಅವರಿಂದ ನೃತ್ಯಪಾಠ ಸಿಗುತ್ತದೆ.
ಹುಡುಗಿ ಹೀಗೆ ನೃತ್ಯಕ್ಕೆ ಅಂಟಿಕೊಂಡಿದ್ದರೆ ಮದುವೆಗೆ ಗಂಡು ಸಿಗುವುದು ಕಷ್ಟ ಎಂದು ಕಟುವಾಸ್ತವದ ಕಡೆಗೆ ಬೊಟ್ಟು ತೋರಿಸಿದಾಗ ನೃತ್ಯ ಮುಂದುವರಿಸುವ ಇವರ ಆಸೆಗೆ ತಣ್ಣೀರು ಎರಚಿದಂತಾದರೂ ಅದು ಮತ್ತೆ ಚಿಗುರಿ.. ಅವರ ಬದುಕಿನಲ್ಲಿ ಕೃಷ್ಣರಾವ್ ಅವರ ಪ್ರವೇಶವಾಯಿತು. ಅವರ ವಿವಾಹವೇ ಒಂದು ವಿಭಿನ್ನ ಅನುಭೂತಿ. ಅದರ ಕುರಿತು ಓದಿ ನೋಡಿ.
ಇವರಿಬ್ಬರಿಗೂ ನೃತ್ಯದ ಕುರಿತ ಆಸಕ್ತಿ ಬಹಳವೇ ಇತ್ತು. ದಂಪತಿಗಳಿಗೆ ಎರಡು ವರ್ಷದ ಪುಟ್ಟ ಮಗುವಿದ್ದಾಗಲೂ.. ತಂಜಾವೂರಿಗೆ ಹೋಗಿ ನೃತ್ಯ ಕಲಿಯುವ ಅವಕಾಶ ಸಿಕ್ಕಾಗ ಗುರು ಮೀನಾಕ್ಷಿ ಸುಂದರಂ ಪಿಳೈ ಅವರೇ ಈ ವಿಚಾರ ತಿಳಿದು ತಮ್ಮ ಹಳ್ಳಿ ಪಂದನಲ್ಲೂರನ್ನು ಬಿಟ್ಟು ತಂಜಾವೂರಿಗೆ ಬಂದು ನೃತ್ಯ ಶಿಕ್ಷಣ ನೀಡಲು ನಿರ್ಧರಿಸಿ, ದಂಪತಿಗಳನ್ನು ಎದುರುಗೊಳ್ಳುತ್ತಾರೆ. ನೃತ್ಯ ಪಾಠದ ಅವಧಿ ಕಡಿಮೆ ಕಷ್ಟದಲ್ಲ. ಕಠಿಣ ನೃತ್ಯಭ್ಯಾಸದಲ್ಲಿ ತೊಡಗಿಕೊಂಡಿದ್ದಾಗ ತಮ್ಮ ಮಗುವಿಗೆ ಹುಷಾರಿಲ್ಲ ಎಂದು ನೋಡಲು ಹೋದ ದಂಪತಿಗಳಿದ್ದ ರೈಲು ಭೀಕರ ಅಪಘಾತಕ್ಕೆ ಈಡಾಗುತ್ತದೆ. ಆ ಸಂದರ್ಭದಲ್ಲಿ ಗುರುಗಳು ಶಿಷ್ಯರ ಕ್ಷೇಮದ ಸುದ್ದಿ ತಿಳಿಯುವವರೆಗೂ.. 24 ಗಂಟೆಗಳು ಆಹಾರ ಮಾತ್ರವಲ್ಲ ನೀರನ್ನು ಕೂಡ ಮುಟ್ಟದೆ ಆತಂಕದಿಂದ ಇದ್ದರಂತೆ. ಇದು ಗುರು-ಶಿಷ್ಯರ ಭಾಂದವ್ಯ ಹೇಗಿತ್ತು ಎಂಬುದಕ್ಕೆ ಪುಟ್ಟ ನಿದರ್ಶನ.
ತಂಜಾವೂರಿನಿಂದ ಹಿಂತುರುಗಿದ ನಂತರ ನೃತ್ಯಕಲೆಯನ್ನೇ ಜೀವನೋಪಾಯವಾಗಿ ಇಟ್ಟುಕೊಳ್ಳುವ ಆಸೆ ಹುಟ್ಟಿ ಕೃಷ್ಣರಾವ್ ಅವರು ತಮ್ಮ ನೌಕರಿಗೆ ರಾಜಿನಾಮೆ ನೀಡುತ್ತಾರೆ. ದಂಪತಿಗಳ ಬದುಕು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಮುಂದೆ ಅವರ ಶಿಷ್ಯರು ಹೇಗಿದ್ದರು ಹಾಗೂ ನೃತ್ಯಾಭ್ಯಾಸ ಹೇಗಾಯ್ತು ಓದಿ ನೋಡಿ.
ಕೆ.ವಿ ಅಯ್ಯರ್ ಅವರ ಕಾದಂಬರಿಯನ್ನು ಆಧರಿಸಿ ನೃತ್ಯ ನಾಟಕ ಶಾಂತಲಾವನ್ನು ರೂಪಿಸುತ್ತಾರೆ. ನೃತ್ಯ ನಾಟಕದಲ್ಲಿ ರಾಜ ವಿಷ್ಣುವರ್ಧನನು ರಾಣಿಯರಾದ ಶಾಂತಲೆ ಲಕ್ಷ್ಮಿ ಮತ್ತು ಕುಮಾರನೊಂದಿಗೆ ಪಗಡೆ ಆಡುವ ದೃಶ್ಯದಲ್ಲಿ ಪಗಡೆಕಾಯಿಗಳಾಗಿ ನೃತ್ಯಪಟುಗಳು ಕಾಣಿಸಿಕೊಂಡದ್ದು ಸೃಜನಾತ್ಮಕ ಹಾಗೂ ಮನೋಹರ ದೃಶ್ಯವಾಗಿ ಜನಪ್ರಿಯವಾಗಿದೆ. ಇದು ಒಂದು ಉದಾಹರಣೆಯಷ್ಟೇ.. ನೃತ್ಯರೂಪಕಗಳ ತಯಾರಿಯಲ್ಲಿ ವಸ್ತು ಆಯ್ಕೆಯ ಜವಾಬ್ದಾರಿ ಕೃಷ್ಣರಾವ್ ಅವರದ್ದಾಗಿದ್ದರೆ.. ಇಬ್ಬರೂ ಸೇರಿ ಅದರ ಸ್ವರೂಪಕ್ಕೆ ನಿರ್ದಿಷ್ಟತೆಯನ್ನು ತರುತ್ತಿದ್ದರು. ಅಂತಿಮ ಒಪ್ಪ ನೀಡುವ ಕೆಲಸ ಚಂದ್ರಭಾಗಾ ಅವರದ್ದು. ಮೋಹಿನಿ ರೂಪ ಕೃಷ್ಣರಾವ್ ಅವರು ತನ್ನ ಪ್ರಿಯ ಪತ್ನಿಗಾಗಿ ವಿಶೇಷವಾಗಿ ಸೃಷ್ಟಿಸಿದ ರೂಪಕ.
ಗೃಹ ನೃತ್ಯಶಾಲೆ 'ಮಹಾ ಮಾಯಾ'ವನ್ನು ಸ್ಥಾಪಿಸಿ, ದೇಶ-ವಿದೇಶಗಳ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದ ಕೀರ್ತಿ ಈ ದಂಪತಿಗಳದ್ದು. ಚಂದ್ರಭಾಗಾ ಅವರ 'ಗೆಜ್ಜೆಯ ಹೆಜ್ಜೆನುಡಿ' ಕೃತಿ ಪತ್ರಸಾಹಿತ್ಯ ಪ್ರಕಾರದಲ್ಲಿ ಬರೆದ ಪ್ರವಾಸ ಕಥನ ಹಾಗೂ ಆತ್ಮಕಥಾನಕ. ಇದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
ಲೇಖಕಿ, ನೃತ್ಯಗಾತಿ, ನೃತ್ಯ ಶಿಕ್ಷಕಿ ಹೀಗೆ ಹಲವಾರು ರೀತಿಯಲ್ಲಿ ಖ್ಯಾತಿಯಾಗಿರುವ ಚಂದ್ರಭಾಗಾ ದೇವಿಯವರ ಸಂಪೂರ್ಣ ಬದುಕಿನ ಚಿತ್ರವನ್ನು ಓದಿ ನೋಡಿ.
ಜೋತ್ಸ್ನಾ ಕಾಮತ್
ಜೋತ್ಸ್ನಾ ಕಾಮತರದು ಬಹುಮುಖ ಪ್ರತಿಭೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದ ಬಾನುಲಿ ಕೇಂದ್ರದ ಪ್ರಮುಖ ಆಡಳಿತ ಹುದ್ದೆಯಲ್ಲಿದ್ದು, ಇತಿಹಾಸ ಮತ್ತು ಸಾಹಿತ್ಯ ಇವೆರಡೂ ಕ್ಷೇತ್ರಗಳಲ್ಲಿ ತಮ್ಮ ದಾಖಲೆಯನ್ನು ಸ್ಥಾಪಿಸಿದವರು. ಪ್ರಚಾರದಿಂದ ದೂರ ಉಳಿದವರು. ಸರಳ ಸ್ವಭಾವ, ಕ್ರಿಯಾಶೀಲ ಬದುಕು, ಅವರ ಉತ್ಸಾಹ ಆಸಕ್ತಿಗಳು ಎಲ್ಲರಿಗೂ ಮಾದರಿ.
ಇವರು ಹುಟ್ಟಿದ್ದು ೧೯೩೭ ಜನವರಿ 24 ರಂದು. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಾಯಿಯಲ್ಲಿ. ಇವರ ಮೇಲೆ ತಂದೆಯ ಪ್ರಭಾವ ಬಹಳವಿದೆ. ತಂದೆ ಗಣೇಶ ರಾವ್ ಬುರ್ಡೆ ಲೇಖನಗಳನ್ನು, ಮಕ್ಕಳ ಕಥೆಗಳನ್ನು ಬರೆದಿದ್ದಾರೆ. ತಂದೆ ತಾವು ಓದಿದ್ದಲ್ಲದೆ ತಮ್ಮ ಮಕ್ಕಳಲ್ಲಿ ಸಹ ಓದಿನ ಆಸಕ್ತಿ ಬೆಳೆಯುವಂತೆ ನೋಡಿಕೊಂಡರು ಎಂದು ಜೋತ್ಸ್ನಾ ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
1966 ರಲ್ಲಿ ಜೋತ್ಸ್ನಾ ವಿವಾಹ ಕೃಷ್ಣಾನಂದ ಕಾಮತ್ ಅವರೊಂದಿಗೆ ನಡೆಯುತ್ತದೆ. ಇವರಿಬ್ಬರ ದಾಂಪತ್ಯದ ಕುಡಿ ವಿಕಾಸ್ ಕಾಮತ್. ಜೋತ್ಸ್ನಾ ಅವರೇ ಹೇಳಿಕೊಳ್ಳುವಂತೆ.. ದೀರ್ಘಾವಧಿಯಲ್ಲಿ ಕೆಲಸದ ಸಂದರ್ಭದಲ್ಲಿ ಬೇರೆಬೇರೆಯಾಗಿ ಸಂಸಾರ ಹೂಡುವಂತಾದರೂ ಸಾವಿರಾರು ಮೈಲು ದೂರವಿದ್ದು ಪತ್ರ ಸಂಸಾರ ಹೂಡುವ ಪ್ರಸಂಗ ಬಂದರೂ ಅವಕಾಶ ದೊರೆತಾಗಲೆಲ್ಲ ಸಾಕಷ್ಟು ಸುತ್ತಾಡಿದ್ದೇವೆ, ಸಮಯ ಕಳೆದಿದ್ದೇವೆ ಎನ್ನುತ್ತಾರೆ.
ಉದ್ಯೋಗದ ನಿಮಿತ್ತ ಒಂಟಿಯಾಗಿ ದೂರದೂರದ ಊರುಗಳಲ್ಲಿ ಇರಬೇಕಾದ ಸಂದರ್ಭಗಳಲ್ಲಿ ಅವರಿಗೆ ಜೊತೆ ನೀಡಿದ್ದು ಓದು. ಓದು ಅವರಲ್ಲಿ ಕ್ರಮೇಣ ಬರವಣಿಗೆಯ ಹವ್ಯಾಸಗಳನ್ನು ಬೆಳೆಸಿದ್ದು.. ಕರ್ನಾಟಕದಲ್ಲಿ ಮೂರು ಭಾಷೆಗಳಲ್ಲಿ ಕೃತಿ ರಚಿಸಿದ ಬರಹಗಾರರು ವಿರಳ. ಅದರಲ್ಲಿಯೂ ಮೂರು ವಿಭಿನ್ನ ಲಿಪಿಗಳಲ್ಲಿ ಬರೆಯುವವರಂತೂ ಅತಿ ವಿರಳ. ಇಂತಹ ಅಪರೂಪದ ಬರಹಗಾರರಲ್ಲಿ ಜೋತ್ಸ್ನಾ ಕನ್ನಡ, ಇಂಗ್ಲಿಷ್ ಮತ್ತು ಕೊಂಕಣಿ ಭಾಷೆಗಳಲ್ಲಿ ಲೇಖನ ಹಾಗೂ ಕೃತಿಗಳನ್ನು ಬರೆದಿದ್ದಾರೆ.
1980 ರಿಂದ 2019ರ ವರೆಗಿನ 39 ವರ್ಷಗಳಲ್ಲಿ ಜೋತ್ಸ್ನಾ ಅವರ 19 ಕೃತಿಗಳು ಪ್ರಕಟವಾಗಿವೆ. ಅದರಲ್ಲಿ ಹೆಚ್ಚಿನ ಕೃತಿಗಳ ಕಿರುಪರಿಚಯವನ್ನು ನಾವು ಈ ಪುಸ್ತಕದಲ್ಲಿ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳನ್ನು ಓದಿ ಅರಿಯಿರಿ.
ಇಬ್ಬರು ಸಾಧಕಿಯರ ದಣಿವರಿಯದ ಸಾಧನೆ ನಿಜಕ್ಕೂ ಸ್ಪೂರ್ತಿದಾಯಕ. ಸ್ಪೂರ್ತಿದಾಯಕ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ