ಕಥೆ : ಪುಲಪೇಡಿ
ಲೇಖಕರು : ಗಂಗಾ ಪಾದೇಕಲ್
'ಪುಲಪೇಡಿ' ಎಂಬ ಕಥೆಯ ಶೀರ್ಷಿಕೆ ಕುತೂಹಲ ಮೂಡಿಸಿತ್ತು. ಈ ಕಥೆ ಓದುವವರೆಗೂ ನನಗಿದು ಅಪರಿಚಿತ ಪದವಾಗಿತ್ತು.
'ಪುಲಪೇಡಿ' ಎಂಬ ಪದ್ಧತಿ ಕೇರಳದ ಕೆಲ ಭಾಗಗಳಲ್ಲಿ 17 ನೆಯ ಶತಮಾನದ ಉತ್ತರಾರ್ಧದವರೆಗೂ ಆಚರಣೆಯಲ್ಲಿತ್ತು. ಕೆಳವರ್ಗದ ಜನ ಒಂದು ನಿರ್ದಿಷ್ಟ ತಿಂಗಳಿನ 20 ದಿನಗಳವರೆಗೆ ಮೇಲ್ಜಾತಿಯವರಿಗಿರುವ ಎಲ್ಲಾ ಸವಲತ್ತುಗಳನ್ನು ಪಡೆಯಬಹುದಾಗಿತ್ತು. ಇದರಿಂದ ಮೇಲ್ಜಾತಿಯ ಎಷ್ಟೋ ಅಮಾಯಕ ತರುಣಿಯರ ಬಾಳು ಗೋಳಾಗುತ್ತಿತ್ತು. 1695ರಲ್ಲಿ ವೀರ ಕೇರಳವರ್ಮ ಎಂಬಾತ ಈ ಪದ್ಧತಿಯನ್ನು ನಿಷೇಧಿಸಿದ್ದು ಕಲಕ್ಕೂಳಂ ತಾಲೂಕಿನ ತಿರುವಿವಾಂಕೋಡು ಶಾಸನದಿಂದ ವಿಧಿತವಾಗುತ್ತದೆ. ಶ್ರೀ ಎ. ಆರ್ ಪರಮೇಶ್ವರ ಪಿಳ್ಳೆಯವರ ಸಂಶೋಧನಾತ್ಮಕ ಗ್ರಂಥ "ಪ್ರಾಚೀನ ಶಿಲಾಲಿಪಿತಂಗಳ್" (ಪುಟ 361- 368) ರಲ್ಲಿರುವ "ಚಿಲ ಲಿನಾಚಾರಂಗಳ್" ಎಂಬ ಅಧ್ಯಾಯದಲ್ಲಿ 'ಪುಲಪೇಡಿ' ಪದ್ಧತಿಯ ವಿವರಣೆ ಇದೆ.
ಇದಿಷ್ಟು ವಿವರಗಳು ನನಗೆ ಕಥೆಯ ಪ್ರವೇಶಿಸುವಿಕೆ ಮತ್ತು ಅರ್ಥೈಸುವಿಕೆಗೆ ಅನುಕೂಲವಾದವು.
ಲಲಿತೆಗೆ ದೇಗುಲಕ್ಕೆ ಹೋಗಿ ಬರಬೇಕು ಎಂದು ಆಸೆಯಾದಾಗ ಅವ್ವೆಯನ್ನು ಕೂಗಿದಳು. ಆದರೆ, ಒಳಗಿನಿಂದ ಉತ್ತರ ಬರದಿದ್ದಾಗ ಹತ್ತಿರದಲ್ಲೇ ಇರುವ ದೇಗುಲಕ್ಕೆ ಹೋಗಲು ಒಬ್ಬಳೇ ಹೊರಟಳು. ಸಂಜೆಯ ಬೆಳಕಲ್ಲಿ ಆಕೆ ಹೊನ್ನ ಪುತ್ಥಳಿಯಂತೆಯೇ ಕಾಣುತ್ತಿದ್ದಳು. ಅವಳು ಅಂಬಲದ (ದೇವಸ್ಥಾನ) ಹೊರಸುತ್ತಿನ ಮೆಟ್ಟಿಲೇರುತ್ತಿರುವಾಗ ಆಕೆಯನ್ನೇ ಗಮನಿಸುತ್ತಿದ್ದ ಪರಯ ತರುಣ ಆಕೆಯನ್ನೇ ಗಮನಿಸುತ್ತಿದ್ದದ್ದು ಅರಿವಾಗಿ ಮನದೊಳಗೆ ಶಪಿಸಿಕೊಂಡಳು. ದೇವಿಯನ್ನು ಮುದ್ದಾದ ಗಂಡು ಮಗುವನ್ನು ಕರುಣಿಸೆಂದು ಬೇಡಿಕೊಂಡು ಹೊರಬಂದಳು.
ಅಂಬಲದಿಂದ ನಾಲ್ಕು ಮಾರು ದೂರ ಬರುವಷ್ಟರಲ್ಲಿ ಆ ಪರಯ ತರುಣ ಅವಳ ಬಲ ಹೆಗಲ ಮೇಲೆ ತನ್ನ ಕೈಯನ್ನು ಇರಿಸಿ "ಪುಲಪೇಡಿ, ಪುಲಪೇಡಿ ನಾಡನಾಡುವ ದೊರೆಯ ಆಜ್ಞೆಯಂತೆ ನಾನು ನಿಮ್ಮನ್ನು ಸೋಕಿದೆ. ಇಂದಿನಿಂದ ನೀವು ನನ್ನವರಾದಿರಿ" ಎಂದ ಘೋಷಣೆ ಕೇಳಿ ಭಯದಿಂದ ಕಲ್ಲಾದಳು.
ಆ ಕ್ಷಣವೇ ತನ್ನ ನಾಯರ್ ಕುಲದ ಶ್ರೇಷ್ಠತೆ ಮತ್ತು ಆತನ ಪರಯ ಕುಲದ ಕೀಳ್ಮೆಯು ನೆನಪಿಗೆ ಬಂತು. ಆಕೆಯಿಂದ ಹೊಡೆತ ತಿಂದರೂ ಆತ ಅಳುಕದೆ "ಕಿರಿಯ ತಂಬುರಾಟಿ, ನಾಳನಾಡುವ ದೊರೆಗಳ ಆಜ್ಞೆ ಇದೆ ಎಂಬುದನ್ನು ಮರೆಯದಿರಿ" ಎಂದನು. ಬೀದಿಯಲ್ಲಿ ಆದ ಈ ಗದ್ದಲ ಎಲ್ಲರ ಗಮನ ಸೆಳೆದಿತ್ತು. ಅವನಿಂದ ತಪ್ಪಿಸಿಕೊಂಡು ತರವಾಡಿನ (ಪೂರ್ವಜರ ಮನೆ/ ಮೂಲ ಮನೆ) ಕಡೆಗೆ ಓಡಿದಳು.
ಆಕೆಯ ಮಾವನಿಗೆ ವಿಷಯ ತಿಳಿದಾಗ ನಾಡನ್ನಾಳುವ ಅರಸಿನ ಡಂಗುರದ ವಿಷಯವನ್ನು ನಾನೇಕೆ ಮನೆಯಲ್ಲಿ ತಿಳಿಸಲಿಲ್ಲ ಎಂದು ಕಂಗೆಟ್ಟು ಯೋಚಿಸುವಾಗಲೇ.. ಅವ್ವೆಯು ಬಂದಳು. ವಿಷಯ ತಿಳಿದವಳಿಗೆ ಒಂದು ಆಶಾಕಿರಣ ಹೊಳೆಯಿತು. ಅದೆಂದರೆ, ಲಲಿತೆ ಮೂರು ತಿಂಗಳ ಬಸುರಿಯಾಗಿದ್ದು ಹುಟ್ಟುವ ಮಗು ಗಂಡಾದಲ್ಲಿ ಪುಣ್ಯಾಹದಿಂದ ಶುದ್ಧಗೊಳಿಸಿ ತರವಾಡಿನೊಳಗೆ ಕರೆದಕೊಳ್ಳಲಾಗುವುದು, ಹೆಣ್ಣಾದಲ್ಲಿ ಮಗುವಿನೊಡನೆ ಅವಳು ಪರಯನೊಂದಿಗೆ ಹೋಗಬೇಕಿತ್ತು.
ಈಗ ಲಲಿತೆಗೆ ತರವಾಡಿನಿಂದ ನಾಲ್ಕು ಮಾರು ದೂರದೊಳಗೆ ಹುಲ್ಲಿನ ಗುಡಿಸಲು ನಿರ್ಮಿತವಾಗಿತ್ತು. ಪರಯ ತರುಣ ಸೋಕಿದ್ದರಿಂದ ಲಲಿತೆ ಮೈಲಿಗೆಯಾಗಿದ್ದಳು. ಅವಳ ಜೊತೆಗೆ ಅವಳ ಸೇವೆಗೆಂದು ಹೆಣ್ಣಾಳು ಕಾವೇರಿಯನ್ನು ಮಾವ ಜೊತೆ ಮಾಡಿದ್ದರು. ಪರಯ ಕಣ್ಣನಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ತಿಳಿದು ಬೇಸರವಾಗಿತ್ತು. ಆದರೂ ಆತನ ನಿರೀಕ್ಷೆ ಬತ್ತಿರಲಿಲ್ಲ. ಮುಂದಿನ ಐದು ತಿಂಗಳಲ್ಲಿ ಆತ ತನ್ನ ಗೆಳೆಯನೊಂದಿಗೆ ಲಲಿತೆಗಾಗಿ ಅಡವಿಯ ಬಗೆಬಗೆಯ ಫಲಗಳು, ಜೇನು, ಜಿಂಕೆಯ ಕೋಡು ಹೀಗೆ ಹಲವಾರು ಕಾಣಿಕೆಗಳನ್ನು ಕಳಿಸಿಕೊಟ್ಟಿದ್ದನು. ತನ್ನ ಪೌರುಷಕ್ಕೆ ಅವಳು ಒಲಿಯಬಹುದೆಂಬ ದೂರದ ಆಸೆ.
ಲಲಿತೆಗೆ ತನ್ನ ಪತಿ ರಾಮನ್ ನಂಬೂದರಿ ಇಷ್ಟು ದಿನವಾದರೂ ತನ್ನನ್ನು ಕಾಣಲು ಬರದಿದ್ದಕ್ಕೆ ಆತಂಕವಾಗಿತ್ತು. ಆತನಿಗೆ ಪತ್ನಿ ವಾಸಂತಿಗಿಂತಲೂ ಉಪಪತ್ನಿಯಾದ ಲಲಿತೆಯಲ್ಲೇ ಹೆಚ್ಚು ಮಮತೆ ಎನ್ನುತ್ತಿದ್ದನು. ನಿಜಕ್ಕೂ ಆತನಿಗೆ ತನ್ನಲ್ಲಿ ಪ್ರೀತಿ ಇದೆಯೇ? ಎಂಬ ವಿಚಾರ ಈಗ ಲಲಿತೆಗೆ ಹೆಚ್ಚು ಚುಚ್ಚುತ್ತಿತ್ತು.
ಲಲಿತೆ ಸೇರಿದ್ದ ನಂಬೂದರಿ ಮನೆತನದ ಆಚಾರ-ವಿಚಾರ ಅವಳ ಮನಸ್ಸಿಗೆ ನೋವು ಕೊಡುವಂತಹವಾಗಿದ್ದವು. "ತಾನು ನಾಯರ್ ಕುಲದವಳಾಗಿದ್ದರಿಂದ ರಾತ್ರಿಯ ಏಕಶಯ್ಯೆಯ ಹೊರತಾಗಿ.. ಉಳಿದಂತೆ ಅವರನ್ನು ಸೋಕಬಾರದು, ತನ್ನ ಕೈಯಡಿಗೆ ಉಣ್ಣುವಂತಿಲ್ಲ. ತನ್ನ ಉದರದಲ್ಲಿ ಹುಟ್ಟಿದ ಶಿಶು ಗಂಡಾದರೆ ತರವಾಡಿನಲ್ಲಿ ಅದಕ್ಕೆ ಹಕ್ಕು, ಹೆಣ್ಣಾದರೆ ತಾಯ ಮನೆಯಲ್ಲಿಯೇ ಇರಬೇಕು." ತಾನು ರಾಮನ್ ನಂಬೂದರಿಯನ್ನು ವಿವಾಹವಾಗುವುದಿಲ್ಲವೆಂದು ಹೇಳಿದ್ದರೂ.. ಮಾವ ಅವಳ ಅದೃಷ್ಟಪರೀಕ್ಷೆ ಮಾಡಲು ಹೇಳುತ್ತಾ.. ತಲೆತಲಾಂತರಗಳಿಂದಲೂ ಬ್ರಾಹ್ಮಣರಲ್ಲೇ ನಾವು ಸಂಬಂಧ ಬೆಳೆಸಿದ್ದೆವು. ಯಾರಿಗೆ ಗೊತ್ತು ನಿನ್ನ ಅದೃಷ್ಟ ಚೆನ್ನಾಗಿದ್ದು ನಂಬೂದರಿಯ ಗಂಡು ಮಗುವಿನ ತಾಯಿಯಾಗಲು ಎಡೆಯಿದೆ ಎಂಬ ಮಾವನ ಇಚ್ಛೆಗೆ ತಲೆಬಾಗಿದ್ದಳು. ರಾಮನ್ ನಂಬೂದರಿಗೆ ವಾಸಂತಿಗಿಂತಲೂ ಉಪಪತ್ನಿಯಾಗಿ ಈಕೆ ಪ್ರಿಯವಾಗಿದ್ದಳು.
ಇವೆಲ್ಲವೂ ಅವಳಿಗೆ ನೆನಪಾಗುತ್ತಿತ್ತು. ಇನ್ನೇನು ಹೆರಿಗೆಗೆ ಒಂದು ತಿಂಗಳ ಸಮಯ ಅಷ್ಟೇ ಇದ್ದದ್ದು. ಸಂಜೆಯ ಪೂಜೆಗೆ ಮೊದಲು ಹೊಳೆಯಲ್ಲಿ ಮೀಯಲು ರಾಮನ್ ನಂಬೂದರಿ ಬರುತ್ತಾರೆ ಎಂದು ಗೊತ್ತಿದ್ದವಳು ಅಲ್ಲಿ ಅವರನ್ನು ಸಂಧಿಸಲು ಹೊರಟಿದ್ದಳು. ಏದುಸಿರು ಬಿಡುತ್ತಾ, ತನಗಾಗಿ ಬಂದಿದ್ದ ತುಂಬು ಗರ್ಭಿಣಿಯನ್ನು ಲಕ್ಷಿಸದೆ ನಡೆದ ನಂಬೂದರಿಯ ಅಲಕ್ಷ್ಯ ಲಲಿತೆಯ ಮನಸ್ಸಿಗೆ ಗೀರಿದ್ದ ಮುಳ್ಳುಕಣೆಯಾಗಿತ್ತು.
ಅದೇ ಸಂದರ್ಭದಲ್ಲಿ ದೇಗುಲದ ಆನೆ 'ರಾಜ'ನನ್ನು ಮೀಯಿಸಲೆಂದು ಮಾವಟಿಗ ಅಟ್ಟಿಕೊಂಡು ಬಂದಿದ್ದ. ಆದರೆ, ಆನೆಯ ವರ್ತನೆ ಬೇರೆಯೇ ಇದ್ದಿತು. ಮದವೇರಿದ ಆನೆ ಲಲಿತೆಯನ್ನೇ ಓಡಿಸಿಕೊಂಡು ಬಂದಿತು. ಆಸರೆಗೆಂದು ನಂಬೂದರಿ ಮರವೇರಿದ್ದ. ಲಲಿತೆಗೆ ಆಸರೆಗೆ ಕೈಯನ್ನೂ ನೀಡದೆ, ತಿರಸ್ಕಾರದಿಂದ ನೋಡಿ ಮತ್ತೆ ನಾಲ್ಕು ರೆಂಬೆಗಳಷ್ಟು ಮೇಲೇರಿದ.
ಪ್ರಜ್ಞೆ ತಪ್ಪಿದ ಲಲಿತೆಗೆ ಎಚ್ಚರವಾಗಿದ್ದು ತನ್ನ ಗುಡಿಸಲಿನಲ್ಲಿ. ಕಾವೇರಿಯಿಂದ ನಡೆದದ್ದನ್ನು ತಿಳಿದಿಳು. ಲಲಿತೆಯನ್ನು ಮುಟ್ಟಿ ಐತ ಮಾಡಿದ್ದ ಪರಯ ಅಡ್ಡ ಬಂದು ಕೆಂಪು ವಸ್ತ್ರ ತೋರಿ ಆನೆಗೆ ತನ್ನನ್ನೇ ತಾನು ಒಡ್ಡಿಕೊಂಡಿದ್ದ. ಆನೆ ಲಲಿತೆಯನ್ನು ಬಿಟ್ಟು ಅವನನ್ನು ಓಡಿಸಿಕೊಂಡು ಹೋಗಿ ತುಳಿದಿತ್ತು. ಆತ ಸತ್ತಿರಲಿಲ್ಲ, ಆದರೆ ಎದೆಗೆ ಪೆಟ್ಟಾಗಿತ್ತು.
ತಾನು ಬಿದ್ದಾಗಲೂ ನಂಬೂದರಿ ಕೆಳಗಿಳಿಯಲಿಲ್ಲ ಎಂಬುದನ್ನು ಕೇಳಿ ತಿಳಿದ ಲಲಿತೆಯ ಹೃದಯದಲ್ಲಿ ಪ್ರತಿಷ್ಠಾಪಿತನಾಗಿದ್ದ ನಂಬೂದರಿ ಅದಾಗಲೇ ಕೆಳಗುರುಳಿದ್ದ.
ಲಲಿತೆಗೆ ಹೆರಿಗೆಯಾದಾಗ ಹುಟ್ಟಿದ್ದು ಗಂಡು ಮಗು. ನೀವು ಗೆದ್ದಿರಿ ಎಂದಾಗ ಲಲಿತೆಯಿಂದ ಬಂದ ಉದ್ಗಾರ "ತಾಯಿ ಭಗವತಿ ನೀನು ನನ್ನನ್ನು ಕೊಂದೆ" ಎಂಬುದು.. ಅವಳ ಮನಸ್ಸು ಯಾರಿಗೂ ಅರ್ಥವಾಗುವಂತಿರಲಿಲ್ಲ. ಕೊನೆಗೂ ಪರಯನ ಕಾಯುವಿಕೆ ಫಲಿಸಿತ್ತು. ಆದರೆ ಆತ ಉಳಿಯಲಿಲ್ಲ.
ಈ ಹೃದಯಸ್ಪರ್ಶಿ ಕಥೆ ಮನಃಪಟಲದಲ್ಲಿ ಅಚ್ಚೊತ್ತಿದಂತೆ ಕುಳಿತುಬಿಟ್ಟಿದೆ. ಸಂಪ್ರದಾಯಗಳ ಕಟ್ಟು-ಕಟ್ಟಳೆ, ಹಳೆಯ ಪದ್ಧತಿ ಜೊತೆಗೆ ಹೆಣ್ಣಿನ ಮನದಾಳ ಎಲ್ಲವನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ ಗಂಗಾ ಪಾದೇಕಲ್ ಅವರು. ಇದು 1980ರ ಮಾರ್ಚ್ ತಿಂಗಳಿನ ಕಸ್ತೂರಿಯಲ್ಲಿ ಪ್ರಕಟಿತ ಕಥೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ