ಪುಸ್ತಕದ ಶೀರ್ಷಿಕೆ : ಪಾವನಗಂಗೆಯರು (ಗಾರ್ಗಿ )
ಲೇಖಕರು : ಡಾ. ಎಸ್. ವಿ. ಪ್ರಭಾವತಿ
ಪ್ರಕಾಶಕರು : ಶ್ರೀ ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್
ಪ್ರಥಮ ಮುದ್ರಣ : 2020
ಈ ಪುಸ್ತಕದಲ್ಲಿ ಗಾರ್ಗಿ ಹಾಗೂ ಯಶೋಧರೆ ಇಬ್ಬರ ಜೀವನಗಾಥೆ ಇದೆ. ಈಗ ಗಾರ್ಗಿಯ ಕುರಿತಾಗಿ ಮಾತ್ರವೇ ಪ್ರಸ್ತಾಪಿಸುತ್ತೇನೆ.
ವೇದ-ಪುರಾಣಗಳ ಕಾಲದಲ್ಲಿ ಬರುವ ಸ್ತ್ರೀಯರಲ್ಲಿ ಪ್ರಮುಖವಾಗಿ ಕಾಣುವ ಹೆಸರು ಗಾರ್ಗಿ. ಪಠ್ಯದಲ್ಲಿ ಈ ಮಾಹಿತಿಯನ್ನು ಬಿಟ್ಟು ಎಲ್ಲಿಯೂ ಹೆಚ್ಚಾಗಿ ಗಾರ್ಗಿಯ ಜೀವನದ ಕುರಿತ ಕಥೆಗಳನ್ನು ನಾನು ಕೇಳಿರಲಿಲ್ಲ. ಗಾರ್ಗಿಯ ಈ ಪೌರಾಣಿಕ ಕಾದಂಬರಿಯನ್ನು ಓದಿದಾಗ ಇಲ್ಲಿ ಗಾರ್ಗಿಯಷ್ಟೇ ಪ್ರಮುಖವಾಗಿ ಕಾಣುವ ಹೆಸರು ಯಾಜ್ಞವಲ್ಕನದು.
ಗಾರ್ಗಿಯನ್ನು ನಾವು ಅರಿಯುವ ಮುನ್ನ ನಮಗೆ ವ್ಯಾಸರು ಹಾಗೂ ಮಹಾಭಾರತ ಮತ್ತು ಆ ಕಾಲದ ಋಷಿಮುನಿಗಳು ಹಾಗೂ ಕಾಲಘಟ್ಟದ ಪರಿಚಯವಿದ್ದರೆ ಈ ಓದು ಸರಾಗವೆನಿಸುತ್ತದೆ.
ಬೆನ್ನುಡಿಯಲ್ಲಿ ಚಂಪಾರವರು ಪ್ರಭಾವತಿ ಮೇಡಂ ಅವರ ಒಂದು ಮಾತನ್ನು ಉಲ್ಲೇಖಿಸುತ್ತಾರೆ. "ಅವರನ್ನು ಅವರ ಮೂಲ ಸ್ವರೂಪದಿಂದ ಬಿಡುಗಡೆಗೊಳಿಸಿ ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಇಲ್ಲಿ ಪುನಃ ಸೃಷ್ಟಿಸಲಾಗಿದೆ." ಎಂದು. ಸ್ತ್ರೀಯಾಗಿ ಈ ಪಾತ್ರದ ಮನೋಭೂಮಿಕೆಯನ್ನು ನೋಡಲು ಹೋದಾಗ ನನಗೆ ಪ್ರಬುದ್ಧ ಗಾರ್ಗಿ ಕಾಣಿಸಿಕ್ಕಳು. ಇಲ್ಲಿ ಗಾರ್ಗಿಯ ಬಾಲ್ಯ ಹಾಗೂ ಜೀವನಶೈಲಿಗಿಂತ ಆಕೆಯ ಜ್ಞಾನಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ.
ಮುಖ್ಯವಾಗಿ ನಮಗೆ ಇಲ್ಲಿ ಮೂವರು ಸ್ತ್ರೀ ಪಾತ್ರಗಳು ಕಾಣಿಸಿಗುತ್ತಾರೆ. ಅವರುಗಳೇ ಗಾರ್ಗಿ, ಮೈತ್ರೇಯಿ ಹಾಗೂ ಕಾತ್ಯಾಯನಿ. ಕಾತ್ಯಾಯನಿ ಗೃಹಕೃತ್ಯದಲ್ಲಿ ತೊಡಗಿಸಿಕೊಂಡು ಜ್ಞಾನದ ಕಡೆಗೆ ಅಷ್ಟು ಲಕ್ಷ ಕೊಡದಿದ್ದರೂ.. ಯಾಜ್ಞವಲ್ಕ್ಯನಿಗೆ ಅವಳೇ ವಧುವೆಂದು ಆತನ ತಂದೆ ದೇವರಾತರು ಹಾಗೂ ಕಾತ್ಯಾಯನಿಯ ತಾತ ಬುಡಿಲರು ನಿಶ್ಚಯಿಸಿಯಾಗಿತ್ತು. ಇನ್ನು ಮೈತ್ರೇಯನ ಮಗಳು ಮೈತ್ರೇಯಿ ಹಾಗೂ ವಾಚಕ್ನುವಿನ ಮಗಳು ಗಾರ್ಗಿಯರು ತಾವು ಬ್ರಹ್ಮವಾದಿನಿಯಾಗುವವರೆಂದು ನಿಶ್ಚಯಿಸಿಕೊಂಡಿದ್ದರು.
ಇಲ್ಲಿ ಗಾರ್ಗಿಯ ಪ್ರವೇಶವಾಗುವುದು ಯಾಜ್ಞವಲ್ಕ್ಯ ಅವರನ್ನು ಜನಕನ ಸಭೆಯಲ್ಲಿ ವಾದಿಸಲು ಕರೆಸಿಕೊಂಡಾಗ. ಜನಕನ ಆಸ್ಥಾನದಲ್ಲಿ ಕಹೋಳಮುನಿಯನ್ನು ಸೋಲಿಸಿ ಆತನನ್ನು ಬಂಧಿಸಲಾಗಿತ್ತು. ಅದರ ಕಾರಣವೇನು ಓದಿ ನೋಡಿ. ಅಷ್ಟಾವಕ್ರ ಹಾಗೂ ಕಹೋಳ ಮುನಿಯ ಕಥೆ ನನಗೆ ಇಲ್ಲಿ ಬೇರೆ ರೂಪದಲ್ಲಿ ಕಂಡಿತು.
ಆದರೆ, ಮೈತ್ರೇಯಿ ಹಾಗೂ ಗಾರ್ಗಿಯರು ವಾದ ಮಾಡುವ ಪ್ರಸಂಗ ಬರುವುದಿಲ್ಲ. ಬದಲಾಗಿ ಅವರ ಪಾಂಡಿತ್ಯವನ್ನು ಪ್ರದರ್ಶಿಸುವ ಅವಕಾಶ ಸಿಗುತ್ತದೆ. ಆ ಸಂದರ್ಭದಲ್ಲಿ ಅವರ ಪಾಂಡಿತ್ಯವನ್ನು ಮೆಚ್ಚಿ ಯಾಜ್ಞವಲ್ಕ್ಯ ಮೈತ್ರೇಯಿಯ ಭುಜ ತಟ್ಟಿದಾಗ.. ಅದನ್ನು ಗಮನಿಸಿದ್ದ ಗಾರ್ಗಿ ತನಗೆ ಮಾತಿನ ಪ್ರಶಂಸೆ ಮಾತ್ರ ಸಿಕ್ಕಾಗ "ನನ್ನ ಭುಜ ತಟ್ಟುವುದಿಲ್ಲವೇ ?" ಎಂದು ಕೇಳುತ್ತಾಳೆ. ಆ ಸಂದರ್ಭದಲ್ಲಿ ಯಾಜ್ಞವಲ್ಕ್ಯ "ನಿನ್ನ ಭುಜ ತಟ್ಟುವ ಶಕ್ತಿ ನನಗಿಲ್ಲಮ್ಮ. ನಿನ್ನ ಪಾದ ಮುಟ್ಟಬೇಕಷ್ಟೇ ಎನ್ನುವ ಮಾತು ಗಾರ್ಗಿಯ ಪಾಂಡಿತ್ಯಕ್ಕೆ ಆತ ಕೊಡುವ ಬೆಲೆಯನ್ನು ಹಾಗೂ ಗಾರ್ಗಿಯ ಕುರಿತು ಆತನಿಗೆ ಇರುವ ಭಾವನೆಯನ್ನು ತೋರುತ್ತದೆ.
ಕಹೋಳ ಮುನಿಯನ್ನು ವಾದದಲ್ಲಿ ಸೋಲಿಸಿದ ಮುನಿಗಳನ್ನು ಗೆದ್ದ ಯಾಜ್ಞವಲ್ಕ್ಯ ನಮಗೆ ಜ್ಞಾನಿಯಾಗಿ ತೆರೆದುಕೊಂಡರೆ.. ವೈಶಂಪಾಯನರ ಮನಸ್ಸಿನ ಆಲೋಚನೆ ಹೀಗೂ ಇತ್ತು. "ತೈತ್ತಿರೀಯ ಉಪನಿಷತ್ತನ್ನು ಮೊದಲು ಬೋಧೆ ಮಾಡಬೇಕಾದ ಈ ಪ್ರಿಯ ಶಿಷ್ಯ, ಹಾಗೂ ಅದಕ್ಕೂ ಮೊದಲೇ ಅದನ್ನು ಕಟ್ಟಲು ಹೋದ ಕಹೋಳ ಮುನಿಗೆ ಸೋಲಾದಂತೆ ನಾಳೆ ಯಾಜ್ಞವಲ್ಕ್ಯನಿಗೂ ಗರ್ವ ಬಂದರೆ.." ಎಂಬ ಆಲೋಚನೆ ಮೂಡುತ್ತದೆ. ಅವರ ಈ ಆಲೋಚನೆ ಮುಂದೆ ಏನಾಯಿತು..?
ವ್ಯಾಸರ ಹುಟ್ಟು, ಜೀವನ ಅವರು ಬರೆದಿರುವ ಪುರಾಣಗಳು, ಮಗ ಶುಕ ಎಲ್ಲದರ ಕುರಿತು ತಿಳಿದ ನಂತರ ಈಗ ಅವರು ವೇದವ್ಯಾಸರಾದ ಕಾಲದ ಕಾಲಘಟ್ಟ ಇಲ್ಲಿದೆ.ಇದು ಜನಮೇಜಯನ ಕಾಲ. ಜನಮೇಜಯ ನಡೆಸುವ ಸರ್ಪಯಾಗದಲ್ಲಿ ವೈಶಂಪಾಯನರ ಪಾತ್ರ ಬರುವ ಸಂದರ್ಭವಿದೆ. ಈ ಸಂದರ್ಭದಲ್ಲಿ ವೈಶಂಪಾಯನರ ಮನಸ್ಥಿತಿ ಹಾಗೂ ನಡವಳಿಕೆ ಬದಲಾದದ್ದಕ್ಕೆ ಕಾರಣವೇನು? ಓದಿ ನೋಡಿ.
ವ್ಯಾಸರು ವೇದಗಳನ್ನು ವಿಭಾಗಿಸಿ ತಮ್ಮ ನಾಲ್ವರು ಶಿಷ್ಯರಿಗೆ ವಹಿಸುತ್ತಾರೆ. ಆ ಶಿಷ್ಯರು ಯಾರು? ಅದಕ್ಕೆ ಸಹಾಯಕರಾದವರು ಯಾರು..? ಅದರ ಕುರಿತ ಶಿಷ್ಯರುಗಳ ಮಾತುಕತೆ ಹೀಗೆ ಹಲವಾರು ಜ್ಞಾನದಾಯಕ ಸನ್ನಿವೇಶಗಳನ್ನು ಇಲ್ಲಿ ಓದಬಹುದು. ತಾಳೆಗರಿಯ ಮೇಲೆ ಲಿಪಿಯಲ್ಲಿ ದಾಖಲು ಮಾಡಲು ಪ್ರೇರಣೆಯಾದದ್ದು ಯಾರು..? ಆರ್ಯ, ದ್ರಾವಿಡರ ಉಲ್ಲೇಖಗಳು ಎಲ್ಲವೂ ಇಲ್ಲಿವೆ.
ಇಲ್ಲಿ ಯಾಜ್ಞವಲ್ಕ್ಯ ಮದುವೆ ಕಾತ್ಯಾಯನಿಯೊಂದಿಗೆ ಆದರೂ.. ಮೈತ್ರೇಯಿಯೂ ಆತನ ಸಖ್ಯವನ್ನು ಪಡೆಯುತ್ತಾಳೆ. ಇದರ ಮರ್ಮವೇನು..? ಯಜುರ್ವೇದದ ವಿಭಾಗಕ್ಕೂ ಯಾಜ್ಞವಲ್ಕ್ಯನ ವಿವಾಹ ಇರುವ ಸಂಬಂಧವೇನು..? ಆತನಿಗೆ ತಪಸ್ಸು ಫಲಿಸಿದ್ದು ಯಾವಾಗ..?
ಇದರೊಟ್ಟಿಗೆ ಇಲ್ಲಿ ಸ್ಮೃತಿಗಳನ್ನು ರಚಿಸುವ ಹಾಗೂ ಅದಕ್ಕೆ ಉಂಟಾದ ವಾದಗಳನ್ನು ಗಮನಿಸಬಹುದು.
"ಈ ಸ್ಮೃತಿಗಳನ್ನು ನೀವಲ್ಲದೇ ಸ್ತ್ರೀಯರೇ ಬರೆದಿದ್ದರೆ ಇದರ ಆಯಾಮವೇ ಬೇರೆಯಾಗುತ್ತಿತ್ತು. ಅಲ್ಲವೇ ಮಹರ್ಷಿಗಳೇ" ಎನ್ನುವ ಮಾತಿಗೆ
ಮನು "ಬರೆಯಿರಮ್ಮ ಬರೆಯಿರಿ. ವೇದಗಳ ಮಂತ್ರಗಳನ್ನೇ ಬರೆದವರು ನೀವು. ಬರೆಯುವುದನ್ನು ತಡೆಯಲು ನಾನು ಯಾರು?" ಎಂದು ಹೇಳಿದನಾದರೂ ಅದರ ಹಿಂದೆ ಚರ್ಚೆಯೊಂದು ನಡೆದಿತ್ತು. ಆ ಚರ್ಚೆ ಯಾವುದರ ಕುರಿತಾಗಿತ್ತು ಓದಿ ನೋಡಿ.
ಯಜುರ್ವೇದದ ವಿಭಾಗವಾಗುತ್ತಿರುವ ಸಂದರ್ಭದಲ್ಲಿ ವ್ಯಾಸರು ಹಾಗೂ ವೈಶಂಪಾಯನರು ಯಾಜ್ಞವಲ್ಕ್ಯ ಹಾಗೂ ಹಲವಾರು ಶಿಷ್ಯರು ಸೇರಿದರು ಅಲ್ಲಿ ಗಾರ್ಗಿಯ ಅನುಪಸ್ಥಿತಿ ಕಾಣುತ್ತದೆ.
ಅದಕ್ಕೆ ಕಾರಣವಾದದ್ದು ಯಾಜ್ಞವಲ್ಕ್ಯನ ವಿವಾಹ, ವಾಚಕ್ನು ತನ್ನ ಮಗಳನ್ನು ಯಾಜ್ಞವಲ್ಕ್ಯನ ಆಶ್ರಮದಿಂದ ಜನಕರ ರಾಜ್ಯದ ಕಡೆಗೆ ಕರೆದೊಯುತ್ತಿದ್ದರು. ಮನಸ್ಸಿನ ಬಯಕೆಯನ್ನು ತುಳಿದು ಮೆಟ್ಟಿ ಅದುಮಿಡುವ ಅನನ್ಯಶಕ್ತಿ ಇದ್ದ ಗಾರ್ಗಿ ಯಾಜ್ಞವಲ್ಕ್ಯನ ವಿವಾಹದ ನಂತರ ದಿನೇದಿನೇ ಕುಸಿಯುತ್ತಿರುವುದನ್ನು ಕಂಡು, ಅಸಹನೀಯ ವೇದನೆ ಅನುಭವಿಸುತ್ತಿರುವುದನ್ನು ಕಂಡು ಕೊರಗಿದ್ದ ವಾಚಕ್ನು ಜನಕನ ಆಸ್ಥಾನದ ಆಹ್ವಾನ ತಿಳಿಯುತ್ತಲೇ ಆ ಚರ್ಚೆಗೆ ಅವಳನ್ನು ಕರೆದೊಯ್ಯುತ್ತಿದ್ದ. ಈ ಸಂದರ್ಭದಲ್ಲಿ ಗಾರ್ಗಿಯ ಮನಸ್ಸಿನಲ್ಲಿ ಯಾಜ್ಞವಲ್ಕ್ಯನ ಬಗ್ಗೆ ಇದ್ದ ಅಭಿಪ್ರಾಯವೇನು..?
ಯಾಜ್ಞವಲ್ಕ್ಯನ ಜೊತೆಗೆ ವಾದಕ್ಕೆ ಹೋಗಿದ್ದ ಗಾರ್ಗಿ ಈ ಬಾರಿ ಬದಲಾದ ಪರಿಸ್ಥಿತಿಯಲ್ಲಿ ಆತನ ಎದುರುಬದುರಾಗಿ ವಾದಕ್ಕೆ ನಿಲ್ಲುವವಳಿದ್ದಳು. ಅದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಸ್ನೇಹಿತೆಯರು ಕೆಲ ಉಪದೇಶಗಳನ್ನು ನೀಡಿದ್ದರು. ಅದರಲ್ಲಿ ಒಂದು
"ಅವನಿಗೆ ಗೊತ್ತಿಲ್ಲದಿರುವ ವಿಷಯಗಳನ್ನು ಪ್ರಶ್ನಿಸಿ ಅವನನ್ನು ಸೋಲಿಸಬೇಕೇ ಹೊರತು ಅವನಿಗೆ ಚೆನ್ನಾಗಿ ಗೊತ್ತಿರುವ ದ್ಯುಲೋಕ ಇತ್ಯಾದಿಗಳ ಬಗ್ಗೆ ಅಲ್ಲ." ಎಂದು.
ಆ ಸಂದರ್ಭದಲ್ಲಿ "ಸ್ತ್ರೀಯರ ಸೌಂದರ್ಯ ವಾರ್ಧಕ್ಯಗಳ ಬಗ್ಗೆ ಅವನನ್ನು ಕೇಳುವ ಹೀನಸ್ಥಿತಿ ನನಗಿನ್ನೂ ಬಂದಿಲ್ಲ." ಎಂದು ವಾಮಮಾರ್ಗಕ್ಕಿಳಿಯದ ಗಾರ್ಗಿ ಉತ್ತರಿಸುವ ಕೆಚ್ಚು ಇಷ್ಟವಾಗುತ್ತದೆ.
ಯಾಜ್ಞವಲ್ಕ್ಯ ಹಾಗೂ ಗಾರ್ಗಿಯರ ವಾದದ ಸೊಗಸು ಇಬ್ಬರ ಪ್ರಶ್ನೋತ್ತರಗಳು ಎಲ್ಲವನ್ನು ಓದಿ ಸವಿಯಿರಿ. ಅಲ್ಲದೆ, ಈ ವಾದದಲ್ಲಿ ಗೆದ್ದವರು ಯಾರು ಹಾಗೂ ಸೋತವರು ಯಾರು? ನೀವೇ ಓದಿ ನೋಡಿ.
ಬಹಳ ತಾಳ್ಮೆಯಿಂದ ಓದಬೇಕಾದ ಹಾಗೂ ಹಲವಾರು ಜ್ಞಾನದಾಯಕ ವಿಚಾರಗಳನ್ನು ತಿಳಿಯುವ ಓದು ನಮ್ಮಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಇಲ್ಲಿ ಗಾರ್ಗಿಯ ಜೀವನದ ಕೆಲ ವಿಚಾರಗಳನ್ನಷ್ಟೇ ಪ್ರಸ್ತಾಪಿಸಿದ್ದೇನೆ. ಗಾರ್ಗಿಯ ಮನಸ್ಥಿತಿ ಹಾಗೂ ನಡೆಯ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುವ ಯಾಜ್ಞವಲ್ಕ್ಯನನ್ನು ನೀವೇ ಓದಿ ಅರೆಯಿರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ