ಭಾನುವಾರ, ಏಪ್ರಿಲ್ 26, 2026

ಸಣ್ಣ ಕತೆಗಳು ೪ (ಪುಸ್ತಕ ಯಾನ - 407)


ಪುಸ್ತಕದ ಶೀರ್ಷಿಕೆ : ಸಣ್ಣ ಕತೆಗಳು ೪

ಲೇಖಕರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ)

ಪ್ರಕಾಶಕರು : ಜೀವನ ಕಾರ್ಯಾಲಯ

ಪ್ರಥಮ ಮುದ್ರಣ : 1934

ಮೂರನೇ ಮುದ್ರಣ : 1954 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 91


ಶ್ರೀನಿವಾಸ ಎಂಬ ಅಂಕಿತನಾಮದಿಂದ ಬರೆಯುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕತೆಗಳು ಜನಪ್ರಿಯ. ಈ ಕಥಾಸಂಕಲನದಲ್ಲಿ ಆರು ಸಣ್ಣ ಕತೆಗಳಿವೆ. ಇದರಲ್ಲಿ ಜೋಗ್ಯೋರ ಅಂಜಪ್ಪನ ಕೋಳೀಕತೆ ನಮಗೆ ಪಿ.ಯು.ಸಿ ಯಲ್ಲಿ ಕನ್ನಡ ಪಠ್ಯದಲ್ಲಿತ್ತು.


ಮೇಲೂರಿನ ಲಕ್ಷ್ಮಮ್ಮ : 

ಆಕೆ ಮಾತನಾಡುವ ಶೈಲಿ ಹಾಗೂ ಜನರನ್ನು ಗಮನಿಸದೆ ಮಾತನಾಡುವ ರೀತಿಗೆ ಆಕೆ ಕುರುಡಿ ಇಲ್ಲವೇ ಹುಚ್ಚಿ ಎಂದುಕೊಂಡಿದ್ದರು. ಆದರೆ, ಆಕೆ ಬೀದಿಯ ಹುಚ್ಚಿಯಂತೆ ಕಂಡಿರಲಿಲ್ಲ. ಒಂದು ಬಟ್ಟೆಯ ಗಂಟಿತ್ತಾದರೂ.. ಆಕೆ ಎಲ್ಲೋ ತಪ್ಪಿಸಿಕೊಂಡು ಬಂದಿರುವಂತೆ ಕಾಣುತ್ತಿತ್ತು. ಆಕೆ ಕುರುಡಿ ಎನ್ನುವುದು ಹೌದು. ಮಾತನಾಡಿಸಿದಾಗ ಮಾತು ಸಮಂಜಸವಾಗಿಯೇ ಬಂದಿತ್ತು. ತನ್ನ ಮಕ್ಕಳಿಗೆ ಹರಸುವ, ಆರತಿ-ಅಕ್ಷತೆಯ ಮಾತನ್ನಾಡಲಿಲ್ಲ. ಬದಲಾಗಿ ಆಕೆಯ ಪರಿಚಯವನ್ನೇ ಅವಳು ಹೇಳಿಕೊಂಡಿದ್ದಳು. ಆಕೆಯ ಮಾತಿನ ಕುರಿತು ಕೇಳಿದಾಗಲೂ.. "ಮೊದಲ ಮೂರು ಮಾತು ವಿವೇಕದ ಮಾತು, ಕೊನೆಯ ಮೂರೂ ಯಾವುದೋ ನೆನಪಿನ ಹುಚ್ಚು ಮಾತು" ಎಂದಿದ್ದಳು. ಆಕೆ ಮೇಲೂರಿನ ಸುಬ್ಬರಾಮಯ್ಯನವರ ಮಗಳು ಲಕ್ಷ್ಮಮ್ಮ. ರೂಪವಂತೆ, ಬುದ್ಧಿಶಾಲಿ. ಆದರೆ, ಹುಟ್ಟುಗುರುಡು. ಲಕ್ಷ್ಮಮ್ಮನವರ ಬಾಲ್ಯದಿಂದ ಆಕೆಯ ಜೀವನ ಹಾಗೂ ಅಂದಿನ ಸ್ಥಿತಿಯವರೆಗೂ ಆಕೆಯ ಅಣ್ಣ ಹೇಳಿದ ಕಥೆ ಇಲ್ಲಿದೆ.. 

ಮೂರು ತಿಂಗಳ ಹಿಂದಿನ ಈ ಘಟನೆಯನ್ನು ನೆನಪಿಸಿಕೊಳ್ಳುವಾಗ ಅವರು ಬ್ರಹ್ಮ ಬರಹವನ್ನು ತಮ್ಮ ಕಿರಿಯ ಮಗ.. ಇನ್ನೂ ಅಕ್ಷರ ಬರೆಯಲು ಬರೆದ ಶಾಮುವಿನ ಬರಹಕ್ಕೆ ಹೋಲಿಸಿದ್ದೇಕೆ..? ಓದಿ ನೋಡಿ.


ಪೆನುಕೊಂಡೆಯ ಕೃಷ್ಣಮೂರ್ತಿ : 

ಇದು ಚಾರಿತ್ರಿಕ ಕಥನ. ವಿಜಯನಗರವನ್ನು ಹಾಳು ಮಾಡಿದ ಸುಲ್ತಾನರು ಪೆನುಕೊಂಡೆಯನ್ನೂ ಸುಮ್ಮನೆ ಬಿಡಲಿಲ್ಲ. ಶ್ರೀರಂಗನ ಕಾಲದಲ್ಲಿ ಎರಡು ಸಲ ಸೋತು ಬಂದಿದ್ದರಾದರೂ ಅವರ ಪ್ರಯತ್ನ ನಿಂತಿರಲಿಲ್ಲ. ರಾಜ ಶ್ರೀರಂಗನ ತಾಯಿ ದಕ್ಷ ರಾಣಿ ಲಕ್ಷುಮಾಂಬೆ. ಆಕೆ ರಾಷ್ಟ್ರಧರ್ಮಗಳನ್ನು ಪಾಲಿಸುತ್ತಾ, ಮಗನಿಗೆ ರಾಜ್ಯಭಾರದ ಹಲವು ಪಟ್ಟುಗಳನ್ನು ಕಲಿಸಿಕೊಟ್ಟವಳು. ಅರಮನೆಯ ಆವರಣದಲ್ಲಿ ದೇವಾಲಯ ಹಾಗೂ ದೇವರ ಮೂರ್ತಿಗಳನ್ನು ಕಟ್ಟಿಸುವಾಗ ಒಂದು ಕೃಷ್ಣ ವಿಗ್ರಹಕ್ಕೆ ಮನಸೋತು ಅದಕ್ಕೆ ಸಣ್ಣ ಮಂದಿರವನ್ನು ಮಾಡಿಸಿದ್ದಳು. ಅದು ಆಕೆಯ ಇಷ್ಟ ಮೂರ್ತಿ. ಅದರ ಜೊತೆಗೆ ಬಂಗಾರದ ಕೊಳಲು ಇದ್ದಿತು. ಮಗನಿಗೆ ತಕ್ಕ ವಧುವನ್ನು ನೋಡಿ ವಿವಾಹ ಮಾಡಿದ್ದಳಾದರೂ.. ವಿಲಾಸಿನಿಯೊಬ್ಬಳು ಆತನ ಮನಸ್ಸಲ್ಲಿ, ಕಕ್ಷೆಯಲ್ಲಿ ನೆಲೆಯಾದಳು. ಇದೇ ಸಂದರ್ಭದಲ್ಲಿ ಪೆನುಕೊಂಡೆಯ ಮೇಲೆ ಅಕ್ರಮಣವಾದಾಗ ಅತ್ತೆ-ಸೊಸೆಯರಿಬ್ಬರೂ ಕೃಷ್ಣನ ವಿಗ್ರಹದ ಸಮೇತ ಹೊರಟದ್ದು ಎಲ್ಲಿಗೆ..? ಅವರು ಪತ್ತೆಯಾದ ಪ್ರಸಂಗ ಹೇಗಿದೆ..? ಓದಿ ನೋಡಿ.


ವೆಂಕಟಶಾಮಿಯ ಪ್ರಣಯ : 

ಗೆಳೆಯನ ಊರಿನಲ್ಲಿ ಚೆಂದದ ತೋಪಿನ ನಡುವೆ ಗಿಡಗಳು ಪಂಚವಟಿಯನ್ನೇ ಮಾಡಿದೆ ಎಂದು ಶ್ಲಾಘಿಸುತ್ತಿರುವಾಗ ಅಲ್ಲಿ ಆ ಊರಿನ ನಾಯಿಂದನ ಮಗ ವೆಂಕಟಶಾಮಿಯ ಗೋರಿಯೂ ಇದೆಯೆಂಬ ವಿಚಾರ ತಿಳಿಯುತ್ತದೆ. ಆ ಕುರಿತು ತಿಳಿದದ್ದೆಂದರೆ.. ಅವನು ಸಾಯುವಾಗ ತನ್ನ ತಂದೆಯ ಬಳಿ ಒಂದು ಮಾತು ತೆಗೆದುಕೊಂಡಿದ್ದ. ಅವನ ಆ ಮಾತಿನಂತೆಯೇ ಅವನನ್ನು ಅಲ್ಲಿ ಸಮಾಧಿ ಮಾಡಲಾಗುತ್ತದೆ. ಅವನ ಅಕಾಲ ಮೃತ್ಯುಗೆ ಮುಂಚಿನ ಅವನ ಪ್ರೇಮ ಪ್ರಸಂಗವೊಂದು ತೆರೆದುಕೊಳ್ಳುತ್ತಾ ಹೋಗುತ್ತದೆ. ದೊಂಬರ ಹುಡುಗಿ ಹಾಗೂ ವೆಂಕಟಶಾಮಿಯ ಪ್ರೇಮಕತೆ ಮುಗಿದು ಬಹಳ ಕಾಲವಾಗಿದೆ ಎಂದು ಹೇಳಿದರೂ.. ಈ ಕಥೆ ಓದಿದಾಗ ಅವನಿಗಾಗಿಯೂ.. ಅವನನ್ನು ಕಳೆದುಕೊಂಡ ಹುಡುಗಾಗಿಯೂ ಮನಸ್ಸು ಮರುಗುತ್ತದೆ ಎಂಬ ನಂಬಿಕೆಯಲ್ಲಿಯೇ ಲೇಖಕರು ಈ ಕಥೆಯನ್ನು ಹೇಳುತ್ತಾರೆ.


ಮಲೆನಾಡಿನ ಒಂದು ಪಿಶಾಚ : 

ರಾಮರಾಯರ ಜೊತೆ ಒಮ್ಮೆ ಪ್ರಯಾಣ ಮಾಡುತ್ತಿದ್ದಾಗ ಪಿಶಾಚಿಗಳನ್ನು ಕುರಿತ ಒಂದು ಮಾತುಕತೆಯಲ್ಲಿ ಅವರ ಸ್ನೇಹಿತರು ತೀರ್ಥಹಳ್ಳಿಯ ಪ್ರಾಂತ್ಯದಲ್ಲಿ ಇದ್ದಾಗ ಕೇಳಿದ ಒಂದು ಕಥೆಯನ್ನು ಹೇಳುತ್ತಾರೆ. ಆ ಕಥೆಯನ್ನು ಇಲ್ಲಿ ಹೇಳಿದ್ದಾರೆ. ತೀರ್ಥಹಳ್ಳಿಯಾಚೆ, ಮಲೆನಾಡಿನ ಗುಡ್ಡಗಳ ಮಧ್ಯೆ, ಕಾಡುಗಳ ಮಧ್ಯದಲ್ಲಿದ್ದ ಹಳ್ಳಿಗೆ ನರಸಿಂಹನ್ ಪೋಸ್ಟ್ ಮಾಸ್ಟರ್ ಆಗಿ ನೇಮಕವಾಗುತ್ತಾರೆ. ಪೋಸ್ಟ್ ಮಾಸ್ಟರ್ ಹುದ್ದೆಗೆ ಎಂತಹ ಗತ್ತು ಇತ್ತು ಎಂಬುದನ್ನು ಕಥೆ ಓದಿಯೇ ತಿಳಿಯಿರಿ. ಆ ಸಂದರ್ಭದಲ್ಲಿ ನರಸಿಂಹನ್ ಪತ್ನಿ ಗರ್ಭಿಣಿಯಾಗಿದ್ದಳು. ಊರಿನ ಹಿರಿಯರು ಆಕೆ ಅಲ್ಲಿಗೆ ಬರುವುದು ಬೇಡ, ಮಗುವಾದ ನಂತರವೇ ಮಗುವಿನೊಡನೆ ಆಕೆ ಬಂದರೆ ಸರಿಯಾಗುತ್ತದೆ ಎಂದು ಹೇಳುತ್ತಾರೆ. ಹಾಗೆ ಹೇಳಲು ಒಂದು ಕಾರಣವಿತ್ತು. ಅದೇ ಬಾಣಂತಿ ಪಿಶಾಚ. ನರಸಿಂಹನ್ ಮೊದಲಿಗೆ ಇದನ್ನು ನಂಬದಿದ್ದರೂ.. ನಂಬಿದರೂ .. ಆಕೆಗೆ ಆರೈಕೆ ಮಾಡುವವರು ಯಾರೂ ಇಲ್ಲದ್ದರಿಂದ ಆತನಿಗೆ ಪತ್ನಿಯನ್ನು ಕರೆತರದೆ ಗತ್ಯಂತರವಿರಲಿಲ್ಲ. ಮುಂಭಾಗದಲ್ಲಿ ಪೋಸ್ಟ್ ಆಫೀಸ್, ಹಿಂಭಾಗದಲ್ಲಿ ಮನೆ ಇದ್ದುದರಿಂದ ಅವರು ಆದಷ್ಟು ಕಾಳಜಿ ಮಾಡುತ್ತಿದ್ದರು. ಜೊತೆಗೆ ಒಂದು ಹೆಂಗಸನ್ನೂ ನೇಮಿಸಿದ್ದರು. ಇದನ್ನು ದಾಟಿ ಪಿಶಾಚಿಯ ಅನುಭವವಾಯಿತೇ..? ಈ ಹಾರರ್ ಕಥೆ ಓದಿನೋಡಿ.


ಜೋಗ್ಯೋರ ಅಂಜಪ್ಪನ ಕೋಳೀಕತೆ :

ಊರಿನ ಹಳೆಯ ಮುದುಕರಲ್ಲಿ ಹಿರಿಯ ತಲೆ ಜೋಗ್ಯೋರ ಅಂಜಪ್ಪ. ಆತನ ವಿಸ್ತಾರವಾದ ಅನುಭವದ ಫಲವಾಗಿ ಅವನು ಕೊಡುವ ಬುದ್ಧಿವಾದ ಒಳ್ಳೆಯದಾಗಿಯೇ ಇರುತ್ತಿತ್ತು. "ವಯಸ್ಸಿನಲ್ಲಿ ಜಾಂಬವಂತನಾಗಿದ್ದ ಹಾಗೆ ಅಂಜಪ್ಪ ಬುದ್ಧಿಯಲ್ಲಿ ಹನುಮಂತ ". ಇಂತಹ ಅಂಜಪ್ಪ ರಂಗಪ್ಪನಿಗೆ ಬೆಂಚು ಮ್ಯಾಜಿಸ್ಟ್ರೇಟ್ ಕೆಲಸ ಸಿಕ್ಕಿದಾಗ ಹೇಳುವ ಕಿವಿಮಾತು.. 

ಜನರು ಎದುರಿಗೆ ಬಂದಾಗ ಇವರು ಸತ್ಯವಂತರು, ಇವರು ಕಳ್ಳರು ಅಂತ ಸರಿಯಾಗಿ ತಿಳಿದು ಶಿಕ್ಷೆ ಕೊಡಬೇಕು. ಪೊಲೀಸರು, ಲಾಯರುಗಳು ಹೇಳುವ ಮಾತು ಕೇಳಿಬಿಟ್ಟು ಶಿಕ್ಷೆ ಕೊಡಬಾರದೆಂದು. 

ಆ ಮಾತನಾಡಲು ಅಂಜಪ್ಪನಿಗೆ ಒಂದು ಹಿನ್ನೆಲೆಯೇ ಇತ್ತು. ಅಂಜಪ್ಪ ಕೋಳಿ ಕದ್ದನೆಂದು ಅವರು ಫಿರ್ಯಾದು ಮಾಡಿದರೆ ಕೋಳಿ ಕದಿಯಲಿಲ್ಲವೆಂದು ಈತ. ಆದರೆ, ಕೋಳಿಯಂತೂ ಅಂಜಪ್ಪನ ಜೋಳಿಗೆಯಲ್ಲಿತ್ತು. ಅದರ ಮರ್ಮವೇನು..? ಅಂಜಪ್ಪ ತಪ್ಪಿತಸ್ಥನೆಂದು ಸಾಬೀತಾದ ಬಗೆ ಹೇಗೆ ಓದಿ ನೋಡಿ. 


ಪಂಡಿತನ ಮರಣಶಾಸನ :

ಚಿಕ್ಕದೇವರಾಜ ಒಡೆಯರು ರಾಜಪದವಿಗೆ ಬಂದ ನಂತರ ವಿಶಾಲಕ್ಷ ಪಂಡಿತನು ಅವರ ಮುಖ್ಯ ಪ್ರಧಾನರಾಗುತ್ತಾರೆ. ಅವರು ಮತದಿಂದ ಜೈನ, ಜಾತಿಯಿಂದ ಬ್ರಾಹ್ಮಣ. 

ಚಿಕ್ಕಂದಿನಲ್ಲಿ ವಿಶಾಲಾಕ್ಷ ಪಂಡಿತರು ಒಡೆಯರ ಜಾತಕವನ್ನು, ಹಸ್ತರೇಖೆಗಳನ್ನು ನೋಡಿ "ನೀನು ರಾಜನಾಗುತ್ತೀಯ" ಎಂದು ಭವಿಷ್ಯ ನುಡಿದಿದ್ದರು. ದೊರೆಯಾಗಲು ಬೇಕಾದ ಸಾಧನೆ ಮಾಡುವ ಬಗ್ಗೆ ಹೇಳುತ್ತಿದ್ದರು. ಅಲ್ಲದೆ, ದೊರೆಯಾದಾಗ ನನ್ನನ್ನು ಮಂತ್ರಿಯಾಗಿಟ್ಟುಕೊಳ್ಳಬೇಕೆಂದು ಕೇಳಿದ್ದರು ಒಡೆಯರು. ಹುಡುಗುತನದಲ್ಲಿ ಒಪ್ಪಿದರು ಒಡೆಯರು. ಮುಂದೆ ಭವಿಷ್ಯ ನುಡಿದಂತೆಯೇ ಆಗಿ ಚಿಕ್ಕದೇವರಾಜ ಒಡೆಯರಾದರು. ಕೊಟ್ಟ ಮಾತಿನಂತೆಯೇ ವಿಶಾಲಾಕ್ಷ ಪಂಡಿತರು ಮುಖ್ಯ ಪ್ರಧಾನರಾದರೆ.. ತಿರುಮಲಾರ್ಯರು, ನರಸಿಂಹ ಶಾಸ್ತ್ರಿ, ಪದ್ಮರಸ ಪಂಡಿತರು ಇವರ ಜೊತೆಗೆ ಇತರ ಮಂತ್ರಿಗಳಾಗಿದ್ದರು. ಇಂತಹ ಸಂದರ್ಭದಲ್ಲಿ ನಾಲ್ವರು ವೈಷ್ಣವರು ಬಂದು ಇರುಳಾಪುರ ಗ್ರಾಮದ ವಿಚಾರವನ್ನು ತಿರುಮಲಾರ್ಯರ ಮೂಲಕ ಹೇಳಿಸುತ್ತಾರೆ. ಜೈನ ಹಾಗೂ ವೈಷ್ಣವ ದೇವಾಲಯಗಳಲ್ಲಿ ಒಂದಕ್ಕೆ ಮಾತ್ರ ಗ್ರಾಮ ನಡೆದುಕೊಳ್ಳಬೇಕಿತ್ತು. ಕ್ಲಿಷ್ಟವಾದ ಈ ಸಮಸ್ಯೆ ವಿಶಾಲಾಕ್ಷ ಪಂಡಿತರು ಹಾಗೂ ತಿರುಮಲಾರ್ಯರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸುತ್ತದೆ. ಅಂದೇ ಸಂಜೆ ಆದ ಹಲ್ಲೆಯಲ್ಲಿ ವಿಶಾಲಾಕ್ಷ ಪಂಡಿತರು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪುತ್ತಾರೆ. ಅದಕ್ಕೂ ಮುಂಚೆ ಒಡೆಯರ ಬಳಿ ಅವರು ಅರಿಕೆ ಮಾಡಿಕೊಳ್ಳುವುದೇನು..? ಮುಂದೆ, ಒಡೆಯರು ಹಾಗೆ ನಡೆದುಕೊಂಡರೆ..? ಅವರ ಮೇಲೆ ಹಲ್ಲೆ ನಡೆಸಿದವರಾರೆಂದು ಪಂಡಿತರು ಹೇಳಿದರೇ ಓದಿ ನೋಡಿ.


ಮಾಸ್ತಿಯವರ ಕೆಲವು ಕಥೆಗಳನ್ನು ಓದಿದ್ದರೂ ಅವರ ಹಾರರ್ ಕಥೆಯನ್ನು ನಾನು ಓದಿದ್ದು ಇದೇ ಮೊದಲು . ಚೆಂದದ ಕಥೆಗಳ ಓದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ