ಪುಸ್ತಕದ ಶೀರ್ಷಿಕೆ : ಇನ್ನೊಂದು ತುಂಬುಗಣ್ಣ ನಗು
ಮೂಲ ಲೇಖಕರು (ಮಲೆಯಾಳಂ) : ಸಿ. ರಾಧಾಕೃಷ್ಣನ್
ಕನ್ನಡ ಅನುವಾದಕರು : ಪಾರ್ವತಿ ಜಿ. ಐತಾಳ್
ಪ್ರಕಾಶಕರು : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪ್ರಥಮ ಮುದ್ರಣ : 2021
ಪುಟಗಳು : 562
ಬೆಲೆ : 400 ರೂ.
ಮಲಯಾಳದ ಸುಪ್ರಸಿದ್ಧ ಲೇಖಕ ಡಾ. ಸಿ. ರಾಧಾಕೃಷ್ಣನ್ ಅವರ 'ಇನಿಯೊರು ನಿರಕಣ್ ಚಿರಿ' ಕಾದಂಬರಿಯನ್ನು ಪಾರ್ವತಿ ಜಿ. ಐತಾಳ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಅನುವಾದ ಎಷ್ಟು ಪಕ್ವವಾಗಿದೆ ಎಂದರೆ ಎಲ್ಲಿಯೂ ಅಪರಿಚಿತ ಪದಗಳಂತೆ ಭಾಸವಾಗದೆ.. ಕನ್ನಡದ್ದೇ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ.
ಸಿ. ರಾಧಾಕೃಷ್ಣನ್ ಅವರು ಸಾಹಿತ್ಯ, ವಿಜ್ಞಾನ, ಆಧ್ಯಾತ್ಮ ಹಾಗೂ ತತ್ವಜ್ಞಾನ ಎಲ್ಲದರಲ್ಲಿಯೂ ಸಮಾನ ಆಸಕ್ತರು. ಈ ಕಾದಂಬರಿಯೂ ಅವೆಲ್ಲವನ್ನು ಮಿಳಿತವಾಗಿಸಿರುವ ಕಥಾವಸ್ತುವನ್ನು ಹೊಂದಿದೆ. ಅದರಲ್ಲಿಯೂ ರಾಜಕೀಯದ ಕುರಿತ ನೇರವಾದ ಉಲ್ಲೇಖಗಳು ನಿಜಕ್ಕೂ ನನಗೆ ಅಚ್ಚರಿ ಹುಟ್ಟಿಸಿತು.
"ನಗುವಿನೆಡೆಯಲಿ ಅಳಲು, ಅಂದರೆ ನಗುತ್ತಲೇ ಅಳಲು ನಮ್ಮಿಂದ ಸಾಧ್ಯವಿಲ್ಲ.. ಆದರೆ ಅಳುತ್ತ ನಗಬಹುದು.
ಒಂದು ತುಂಬುಗಣ್ಣಿನ ನಗು."
ಎಂಬ ಲೇಖಕರ ಮಾತು ಅದೆಷ್ಟು ಅರ್ಥಪೂರ್ಣವಲ್ಲವೇ..!
ಈ ಕಥೆಯಲ್ಲಿ ಅರ್ಜುನ್ ಬಾಬೂ ಹಾಗೂ ಊರ್ಮಿಳ ನಮ್ಮನ್ನು ಆವರಿಸುತ್ತಾರೋ ಅಥವಾ ಸಿದ್ಧಾರ್ಥ ತಾಪ ಹಾಗೂ ಅನಿ ಆವರಿಸುತ್ತಾರೋ ಎಂದರೆ ಉತ್ತರ ಕಷ್ಟ. ಏಕೆಂದರೆ, ಇಲ್ಲಿ ಈ ಇಬ್ಬರು ವ್ಯಕ್ತಿಗಳು ಒಬ್ಬರೇ..! ಅರ್ಜುನ್ ಬಾಬೂ ಸಿದ್ದಾರ್ಥ ತಾಪನಾಗಿ ಬದುಕಿದರೆ.. ಊರ್ಮಿಳ ಅನಿತ(ಅನಿ)ಳಾಗಿ ಬದಲಾಗುತ್ತಾಳೆ. ತಮ್ಮದೇ ಆದ ಕಾರಣಕ್ಕೆ ವೇಷ ಮರೆಸಿಕೊಂಡು ಬದುಕುತ್ತಿದ್ದ ಜೀವಗಳ ಕತೆ ಇಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ ಒಬ್ಬ ಬರಹಗಾರನ ಮೂಲಕ ತೆರೆದುಕೊಳ್ಳುತ್ತಾ ಹೋಗುತ್ತದೆ.
ಅನಿಯ ಚಿಕಿತ್ಸೆಗೆಂದು ಸಿದ್ದಾರ್ಥ ತಾಪ ಬಂದಿದ್ದನಾದರೂ.. ಆತ ಭೇಟಿ ಮಾಡುವುದು ಹಿಂದೆ ತನ್ನೊಡನೆ ದೆಹಲಿಯಲ್ಲಿ ಕಿರಿಯ ಸಹೋದ್ಯೋಗಿಯಾಗಿದ್ದ, ಈಗ ಬರಹಗಾರನಾಗಿದ್ದ ನಿರೂಪಕನನ್ನು. ಆಗ ಸಿದ್ದಾರ್ಥ ತಾಪ ಬಿಚ್ಚಿಟ್ಟಿದ್ದ ಘನಗೋರ ಸತ್ಯವೆಂದರೆ.. ಆತ ನಿಜವಾಗಿಯೂ ಸಿದ್ಧಾರ್ಥ ತಾಪನಲ್ಲ. ಬದಲಾಗಿ ಪೊಲೀಸರು ಬಿರುಸಿನ ಶೋಧ ನಡೆಸುತ್ತಿರುವ ಮತ್ತು ತಲೆಮರೆಸಿಕೊಂಡಿರುವ ಅರ್ಜುನ್. ಆದರೆ, ಅಷ್ಟು ವರ್ಷಗಳ ಕಾಲ ಸಿದ್ದಾರ್ಥ ತಾಪನಾಗಿ ಬದುಕಿದ್ದವನು ಈಗ ಇದ್ದಕ್ಕಿದ್ದಂತೆ ತನ್ನ ಐಡೆಂಟಿಟಿಯನ್ನು ಬಿಚ್ಚಿಡುವ ಅವಶ್ಯಕತೆ ಇರಲಿಲ್ಲವಾದರೂ.. ಮನಸ್ಸಾಕ್ಷಿ ಹಾಗೂ ಮತ್ತೊಂದು ಕಾರಣಕ್ಕಾಗಿ ಕಥೆ ತೆಗೆದುಕೊಳ್ಳುತ್ತಾ ಹೋಗುತ್ತದೆ. ಇಲ್ಲಿ ಸಿದ್ದಾರ್ಥ ತನ್ನ ಕಥೆಯನ್ನು ನೇರವಾಗಿ ಹೇಳುವುದಿಲ್ಲ. ಬದಲಾಗಿ ಡೈರಿಯ ಮೂಲಕ ತೆರೆದಿಡುವ ಕಥೆ ಮೂರು ಹಂತಗಳಲ್ಲಿ ಬೇರೆಯದ್ದೇ ಕಥಾಸ್ವರೂಪವನ್ನು ತೋರುತ್ತವೆ.
ಊರ್ಮಿಳಾ ಆದಿವಾಸಿ ಮೂಲದ ಹುಡುಗಿ. ಕ್ರಾಂತಿಕಾರಿ ಸಂಘಟನೆಗೊಂಡಕ್ಕೆ ಸೇರಿಕೊಂಡ ಅರ್ಜುನ್, ನಿಖಿಲ್, ಶಂಕರ್ ಅವಿನಾಶ್, ವಾಲ್ಮೀಕಿ ಹೀಗೆ ಹಲವಾರು ಜನರ ಜೊತೆಗೂಡಿ ಆದಿವಾಸಿ ಗ್ರಾಮದಲ್ಲಿ ತಂಗಿದ್ದ ದಿನಗಳಲ್ಲಿ.. ಆತನ ಚಿಕಿತ್ಸೆಗೆಂದು ಉಳಿದುಕೊಂಡದ್ದು ಇದೇ ಊರ್ಮಿಳಾಳ ತಾತನ ಆಶ್ರಯದಲ್ಲಿ. ಮುಂದೆ ಸಿದ್ಧಾರ್ಥನ ಬದುಕು ಬದಲಾಗುವ ಸಂದರ್ಭ ಬರುತ್ತದೆ. ಆತ ಸ್ಥಳ ಬದಲಾಯಿಸಿದ್ದು, ಮಾತ್ರವಲ್ಲದೆ ತನ್ನ ನಿಜರೂಪವನ್ನು ಮರೆಮಾಚಿ ಅದಾಗಲೇ ಸತ್ತುಹೋಗಿದ್ದ ಭಾಗಶಃ ತನ್ನಂತೆಯೇ ಕಾಣುತ್ತಿದ್ದ ಸಿದ್ದಾರ್ಥ ತಾಪ ಎನ್ನುವಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುತ್ತಾನೆ. ಅದಕ್ಕೆ ಸಹಾಯ ಮಾಡಿ, ಆತನ ಬೆನ್ನಿಗೆ ನಿಂತವರು ಮುಖ್ಯವಾಗಿ ಮೂವರು. ಆ ಕಾಂಟಾಕ್ಟ್ ಸಿಕ್ಕಿದ್ದು ಆತನ ತಂದೆಯ ಮೂಲಕ. ಆತನ ತಂದೆ ಡಾಕ್ಟರ್ ಅಗಸ್ತ್ಯ ದೆಹಲಿಯಲ್ಲಿದ್ದಾಗ ಅವರ ಸ್ನೇಹಿತರಾಗಿದ್ದವರು ಸ್ವತಃ ಕ್ರಾಂತಿಕಾರಿಗಳು ಆದ ಸ್ವಾಮೀಜಿ, ಡಾಕ್ಟರ್ ಸೇನ್ ಮತ್ತು ದೆಹಲಿಯ ದೊಡ್ಡ ಪತ್ರಿಕೆಯ ಸಂಪಾದಕರು. ಆದರೆ, ಆತನ ತಂದೆಯನ್ನೂ ಸೇರಿದಂತೆ ಆತ ತನ್ನ ಕುಟುಂಬವನ್ನು ಪೂರ್ಣವಾಗಿ ಕಳೆದುಕೊಂಡಾಗಿತ್ತು. ಹಾಗಾಗಿ, ಆತನಿಗೆ ಅದು ಹೊಸ ಜನ್ಮ. ತಂದೆಯಂತೆಯೇ ಪೋಷಿಸಿದವರು ಆ ಮೂವರು.
ಅರ್ಜುನನ ತಂಗಿ ಅನುರಾಧಳ ಬದುಕಿನಲ್ಲಾದ ದುರ್ಘಟನೆ ಏನು ? ತನ್ನ ಮಗನಾದ ಅಶೋಕ್ ನನ್ನು ಅನುರಾಧಾಳೇ ಕೊಲ್ಲಬೇಕಾಗಿ ಬಂದದ್ದೇಕೆ ?
ಊರ್ಮಿಳಾ ಬದುಕು ಸುಖದ ಸುಪ್ಪತ್ತಿಗೆಯೇನಾಗಿರಲಿಲ್ಲ. ಆದರೆ, ಅದು ಕಷ್ಟವೂ ಆಗಿರಲಿಲ್ಲ. ಆಕೆಯ ದಿನಗಳು ಎಲ್ಲಾ ಆದಿವಾಸಿಗಳಂತೆ ಸಾಗುತ್ತಿದ್ದವು. ಆದರೆ, ಗ್ರಾಮದ ಸರಣಿ ಅನಾಹುತಗಳ ಕಾರಣದಿಂದಾಗಿ ಆಕೆಯ ತಾತನನ್ನು ಭೂಕಬಳಿಕೆಯ ಗುಂಪಿನವರು ಚಿತ್ರಹಿಂಸೆ ನೀಡುವಾಗ, ಆಕೆಯ ತಾಯಿ-ತಂಗಿ ಗುಡಿಸಲಿನಲ್ಲಿಯೇ ಸುಟ್ಟು ಹೋದರೆ, ಈಕೆಯ ಮೇಲೆ ಕ್ರೂರವಾದ ಅತ್ಯಾಚಾರವಾಗಿತ್ತು. ತಂದೆಯ ಸಾವು ಸ್ವಾಭಾವಿಕವೇನಾಗಿರಲಿಲ್ಲ. ಹೀಗೆ ಎಲ್ಲರನ್ನೂ ಕಳೆದುಕೊಂಡವಳನ್ನು ಪೊಲೀಸರು ರಕ್ಷಿಸಬಹುದಾಗಿದ್ದರೂ.. ರಕ್ಷಿಸದೆ, ಅಪಾಯದ ಸ್ಥಿತಿಗೆ ದೂಡಿದ್ದಾಗ ದೈಹಿಕ ಹಾಗೂ ಮಾನಸಿಕವಾಗಿಯೂ ಜರ್ಜರಿತಳಾಗಿದ್ದವಳು ಅರ್ಜುನ್ ಹಾಗೂ ನಿಖಿಲ್ ರ ಪ್ರಯತ್ನದಿಂದ ಸ್ವಾಮೀಜಿಯ ಆಶ್ರಮದಲ್ಲಿ ಪುನರ್ಜನ್ಮ ಪಡೆಯುತ್ತಾಳೆ. ಅಷ್ಟರಲ್ಲಾಗಲೇ ಅರ್ಜುನ್ ತಾಪನಾಗಿ ಬದಲಾಗಿಯಾಗಿತ್ತು.
ಆದಿವಾಸಿ ಹುಡುಗಿಯೊಬ್ಬಳನ್ನು ನಾಗರೀಕ ಸಮಾಜದಲ್ಲಿ ಮತ್ತೆ ಮನುಷ್ಯನನ್ನಾಗಿಸಲು ಆಕೆಯ ಮಾನಸಿಕ ಸ್ಥಿತಿಯನ್ನು ಸರಿಪಡಿಸಲು ಹಾಗೂ ವಿಕಲಾಂಗರ ಆಶ್ರಮದಲ್ಲಿ ಸೇವಾಮನೋಭಾವನೆಯಲ್ಲಿ ಬದುಕುವಂತೆ ಮಾಡಲು ಅವಳಿಗೆ ಸಿಕ್ಕ ಸಾಂತ್ವನ ಚಿಕ್ಕದಲ್ಲ. ಹೀಗೆ ಸ್ವಾಮೀಜಿಯ ಪ್ರೇರಣೆಯಿಂದ ಅಕ್ಷರ ಕಲಿತು ತನ್ನ ಮಾನಸಿಕ ಬಿಡುಗಡೆಗಾಗಿ ಆಕೆ ಊರ್ಮಿಳಾ (ಅನಿತಾ) ಬರೆದ ಡೈರಿ ಒಂದೆಡೆಯಾದರೆ.. ಸಿದ್ದಾರ್ಥ ತಾಪ ಎನ್ನುವ ಪತ್ರಕರ್ತನಾಗಿದ್ದ ಅರ್ಜುನ ಬರೆದಿದ್ದ ಡೈರಿ ಒಂದೆಡೆ.
ಮುಖಚಹರೆ ಬದಲಾಗಿದ್ದರೂ ಕೇವಲ ಆತನ ಇರುವಿಕೆ, ಬರುವಿಕೆಗಳೇ, ಆತನನ್ನು ಪೂಜ್ಯಭಾವದಿಂದ ಪ್ರೇಮಿಸುತ್ತಿದ್ದ ಅನಿತಾಳಿಗೆ ಆತನೇ ತನ್ನ ಬಾಬು ಎಂಬ ಸತ್ಯ ಸ್ವಾಮೀಜಿಯಿಂದ ಖಾತ್ರಿಯಾಗುತ್ತದೆ. ಆಕೆಗೆ ಮಕ್ಕಳಾಗದು ಎನ್ನುವ ಸತ್ಯದ ಅರಿವಿದ್ದರೂ.. ಇಬ್ಬರು ಸಂಗಾತಿಗಳಾಗಿ ಜೀವನ ನಡೆಸಲು ಅನುವಾಗುತ್ತಾರೆ. ಅವರಿಬ್ಬರ ನಡುವಿನ ಪರಿಶುದ್ಧ ಪ್ರೇಮ ಗಾಢವಾಗಿ ತಾಕುತ್ತದೆ. ಹೇಳದೆಯೂ ಅರಿತುಕೊಳ್ಳುವ ಭಾವಗಳು, ಕಣ್ಣೋಟದಲ್ಲಿಯೇ ಆಲೋಚನೆಗಳ ವಿನಿಮಯ ಹೀಗೆ ಆತ್ಮ ಸಾಂಗತ್ಯದ ಪ್ರೀತಿಯ ರೂಪು ಇಲ್ಲಿದೆ.
ಈ ಎರಡೂ ಡೈರಿಗಳು ಅವರು ಬದಲಾಗುವ ಹಾಗೂ ಕ್ರಾಂತಿಯ ದಿನಗಳಲ್ಲಿ ಅವರ ಭವಣೆಗಳನ್ನು ಚಿತ್ರಿಸುವ ಚಿತ್ರಣಗಳನ್ನು ತೆರೆದಿಡುತ್ತೇವೆ. ಇಲ್ಲಿಯವರೆಗೂ ಓದಿದಾಗ ಮುಂದೆ ಇವರಿಬ್ಬರ ಬದುಕು ಸಾಗುವ ಚಿತ್ರಣದ ನಿರೀಕ್ಷೆ ಮಾತ್ರವಿತ್ತು ನನಗೆ.
ಅರ್ಜುನ ಡೈರಿ ಪತ್ರಿಕೆಯಲ್ಲಿ ಪ್ರಕಟವಾದಾಗ ಪತ್ರಿಕೆ ಎದುರಿಸಿದ ಭೀಕರ ಸನ್ನಿವೇಶ ಏನಿತ್ತು..?
ಮುಂದೆ ಯಾರಿಗೂ ಗೊತ್ತಿಲ್ಲ ಎಂದುಕೊಂಡಿದ್ದ ವಿಚಾರ ಸ್ವಾಮಿಯ ಮೂಲಕ ಧುತ್ತನೆ ಎದುರಿಗೆ ನಿಂತಿತ್ತು. ಆಂತರಿಕ ವಿಭಾಗದಲ್ಲಿ ಕೆಲವು ಕೆಲಸಗಳನ್ನು ಮಾಡಿಸಿಕೊಳ್ಳಲು ಆತನ ಹಾಗೂ ಅನಿಯ ಗತವನ್ನು ನೆನಪಿಸಿದ್ದರು. ಇಲ್ಲಿಂದ ಶುರುವಾಗಿದ್ದು ಚದುರಂಗದಾಟ. ಎರಡು ಪಡೆಗಳ ನಡುವೆ ತಾಪ ಸಿಕ್ಕಿ ಬೀಳುತ್ತಾನೆ ಎಂದುಕೊಂಡರೆ ವಿಷಕ್ಕೆ ಪ್ರತಿವಿಷ ಸಿದ್ಧಪಡಿಸುವಂತೆ ಆತ ಹಾಗೂ ಆತನ ಗುಂಪಿನವರು ಹೆಣೆಯುವ ಚತುರೋಪಾಯಗಳು.. ಇಲ್ಲಿ ಎರಡು ಗುಂಪಿನವರ ಚದುರಂಗದಾಟ ಅಧಿಕಾರದ ವಿಚಾರಕ್ಕೆ ಮಾತ್ರವಾ..? ಇಲ್ಲಿ ಸೋತವರು ಯಾರು..? ಗೆದ್ದವರು ಯಾರು..? ಓದಿ ನೋಡಿ.
ಭಾರತದ ರಾಜಕೀಯದ ಎಷ್ಟೋ ಪ್ರಸಂಗಗಳು ಇಲ್ಲಿ ಉಲ್ಲೇಖವಾಗಿವೆ. ಅದರಲ್ಲಿಯೂ ಪ್ರತಿಷ್ಠಿತ ಕುಟುಂಬವೊಂದರ ನೇರ, ದಿಟ್ಟ ಉಲ್ಲೇಖ ಅಚ್ಚರಿ ತರಿಸಿತು. ರಾಜಕೀಯದ ಬದಲಾವಣೆಯ ಗಾಳಿಯ ಬಿಸಿಯನ್ನು ತೆರೆದಿಟ್ಟಿದೆ. ಪ್ರತಿಷ್ಠಿತ ಕುಟುಂಬದ ನಡೆ, ಅಧಿಕಾರ ಬದಲಾವಣೆಯ ಮೀನಿನಂತಹ ಹೆಜ್ಜೆ ಗುರುತುಗಳ ದಿನಗಳ ಕುರಿತು ನೀವೇ ಓದಿ ನೋಡಿ.
"ಋತು ಬದಲಾವಣೆಯ ಲಕ್ಷಣಗಳ" ದಿನಗಳಲ್ಲಿ
ತಪ್ಪಿಸಬೇಕೆಂದರೂ ಯಾವುದನ್ನೂ ತಪ್ಪಿಸಲಾಗದು. ರಾಜಕೀಯದ ಷಡ್ಯಂತ್ರಗಳ ಜೊತೆಗೆ ಹದಗೆಡುತ್ತಾ ಸಾಗಿದ ಅನಿಯ ಆರೋಗ್ಯ ಮುಂದೆ ಬೇರೆಯ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ. ಎಲ್ಲಾ ಡೈರಿಗಳನ್ನು ಓದಿದ ನಂತರ ನಿರೂಪಕನಿಗೆ ಕಾಡಿದ ಪ್ರಶ್ನೆಯೇ ನಮಗೂ ಕಾಡುತ್ತದೆ. ಇಲ್ಲಿ ನಿರೂಪಕನ ಸಹಾಯ ಬೇಕಿದ್ದಾದರೂ ಏತಕ್ಕೆ..?
ಅರ್ಜುನನ ಚಂದ್ರಮಾವನ ಮಗನೇ ಪೊಲೀಸ್ ಅಧಿಕಾರಿಯಾಗಿ ಹಲವು ವರ್ಷಗಳಿಂದ ಆತನಿಗಾಗಿ ಹುಡುಕುತ್ತಿರುತ್ತಾನೆ. ಇಲ್ಲಿನ ಹುಡುಕಾಟ ಪ್ರತೀಕಾರಕ್ಕೆ. ಆ ಪ್ರತೀಕಾರದ ಮೂಲವೇನು..?
ಅರ್ಜುನ್ ಶರಣಾಗಲು ಹೋದರೂ ಆತ ಹಿಂದೆ ಸರಿಯುವುದು ಏತಕ್ಕೆ..? ಅಷ್ಟು ಮಾತ್ರವಲ್ಲ.. ಅಷ್ಟು ವರ್ಷ ಸಂಕೀರ್ಣವಾಗಿ ಕಾಡಿದ ಸಮಸ್ಯೆ ಸರಳವಾಗಿದ್ದು ನಿಜಕ್ಕೂ ರಕ್ತ ಸಂಬಂಧದ ಕಾರಣಕ್ಕಾ..? ಓದಿ ನೋಡಿ.
ಅನಿಯ ಅಂತ್ಯ ನನಗೆ ಬಹಳವಾಗಿ ಕಾಡಿತು. ಅನಿಯನ್ನು ಹಾಕಿಯ ಹುಟ್ಟೂರಿನ ಮಣ್ಣಿನ ಮೇಲೆ, ಪ್ರಕೃತಿಯ ಮಡಿಲಲ್ಲಿ ಬಿಟ್ಟು ಬರುವ ಅರ್ಜುನನ್ನು ಕಂಡು ಸಿಟ್ಟು ಬಂದಿತ್ತು. ಆದರೆ, ಅರ್ಜುನನ ದೃಷ್ಟಿಯಿಂದ ನೋಡಿದಾಗ ಆಕೆಯನ್ನು ಪ್ರಕೃತಿಯಲ್ಲಿ ಒಂದಾಗಿಸಿದ ಬಗೆ, ನಿರ್ಮಲ ಪ್ರೇಮ, ಆದಿವಾಸಿಗಳು ಹಾಗೂ ಪ್ರಕೃತಿಯ ಅನುಸಂಧಾನದ ಅರಿವಾದರೂ ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಒಪ್ಪಲು ಕಷ್ಟವೇ..!
ನಿರೂಪಕರಿಂದ ಅರ್ಜುನ ಪಡೆದ ಸಹಾಯವೇನು..? ಅರ್ಜುನನ ಮುಂದಿನ ಬದುಕು ಹೇಗೆ ಸಾಗಿತು..? ಅರ್ಜುನ ತಾನು ಕ್ರಾಂತಿಯ ಬಗ್ಗೆ ತೆಗೆದುಕೊಂಡು ತಪ್ಪು ಹೆಜ್ಜೆಗಳ ಬಗ್ಗೆ ಪಶ್ಚತ್ತಾಪ ವ್ಯಕ್ತಪಡಿಸುವುದೇಕೆ..? ಅವು ಯಾವುವು?
"ದುಃಖಗಳಿರದಿರುವುದು ಸಂತೋಷವಲ್ಲ. ಸಂತೋಷವು ಒಳಗಿನಿಂದ ಚಿಮ್ಮುವ ಚಿಲುಮೆ. ಅದಕ್ಕೆ ತಳವಿಲ್ಲ." ಅಂತ್ಯದಲ್ಲಿ ತಾನು ಸಂತುಷ್ಟನಾಗಿರುವುದು ಏತಕ್ಕೆ ಎಂಬುದನ್ನು ಅರ್ಜುನ ಹೇಳಿದ್ದು ಆತನ ಇಡೀ ಚರ್ಯೆಗೆ ಉತ್ತರದಂತಿದೆ.
ಯಾವುದೇ ಶಿಕ್ಷಣವಿಲ್ಲದ ಒಬ್ಬಳು ಆದಿವಾಸಿ ಹೆಣ್ಣುಮಗಳಾದ ಅನಿ ತೆಗೆದುಕೊಳ್ಳುವ ಗಟ್ಟಿ ನಿರ್ಧಾರಗಳು, ಆಕೆಯ ಆಲೋಚನೆಯ ರೀತಿ, ಧ್ವನಿ, ಸೇವಾ ಮನೋಭಾವ, ತನ್ನ ಮಾನಸಿಕ ಕ್ಲೇಶಗಳನ್ನು ಕಳೆದುಕೊಂಡ ರೀತಿ, ಜ್ಞಾನದ ಮಟ್ಟ ಅರ್ಜುನನಿಗೆ ಬೆನ್ನೆಲುಬಾಗಿ ನಿಂತದ್ದು ಹಾಗೂ ಆತನಿಗೆ ಆಕೆಯ ವ್ಯಕ್ತಿತ್ವ ಎತ್ತರವೆನಿಸುವಂತೆ ಮಾಡಿದ್ದು ಮಾತ್ರವಲ್ಲ.. ನನಗೂ ಇಡೀ ಕಾದಂಬರಿಯಲ್ಲಿ ಅನಿ ಆವರಿಸಿಕೊಂಡಳು.
ಇಡೀ ಕಾದಂಬರಿಯಲ್ಲಿ ನನಗೆ ಕಂಡದ್ದು ಹೋರಾಟ. ಮನುಷ್ಯ ಹೇಗೂ ಬದುಕಬಹುದು. ಆದರೆ, ಹಠಾತ್ತನೆ ಬದಲಾಗುವ ದಾರಿಗಳು, ಬದಲಾಗುವ ಪರಿಸ್ಥಿತಿಗಳು, ಬದಲಾಯಿಸುವ ಪರಿಸರ, ಎಲ್ಲವನ್ನು ಮೀರಿ ಬದುಕುವ ಹೋರಾಟ ಹಾಗೂ ಬದುಕನ್ನೇ ಹೋರಾಟ ಮಾಡಿಕೊಂಡವರ ಚಿತ್ರಣ ಇಲ್ಲಿ ಶಕ್ತವಾಗಿ ಚಿತ್ರತವಾಗಿದೆ.
ಈ ಪುಸ್ತಕ ಓದಿದ ನಂತರ ಇಲ್ಲಿ ಬರುವ ಒಂದು ಮಾತಿನಂತೆಯೇ ನನ್ನ ಭಾವನೆಯೂ ಇದೆ.
"ಅದೇ ಮೌನ. ಯಾರೂ ಏನೂ ಮಾತನಾಡದ ಮಧ್ಯಂತರ."
Viduthalai ಸಿನಿಮಾ ಕೂಡಾ ನೆನಪಾಯಿತು. ಅದು ಇಲ್ಲಿಯ ಶೇಕಡಾ ೫ ರಷ್ಟು ಮಾತ್ರವೇ..
ಈ ಕಾದಂಬರಿ ಮಲಯಾಳಂ ಮೂಲದ್ದಾಗಿದ್ದರೂ ಭೌಗೋಳಿಕ, ರಾಜಕೀಯ ಚಿತ್ರಣ ಇಡಿ ದೇಶದ್ದು. ಒಂದು ಸೃಷ್ಟಿಯ ಜಾಡು ಹಿಡಿದು ಬರೆಯಲ್ಪಟ್ಟ ಕಾದಂಬರಿ. ಇಲ್ಲಿ ನಾನು ಪ್ರಸ್ತಾಪಿಸಿದ್ದು ಅದರಲ್ಲಿನ ಪುಟ್ಟ ಹನಿಗಳಷ್ಟೇ.. ಬಹಳ ಚಂದದ ಅನುವಾದ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ