ಪುಸ್ತಕದ ಶೀರ್ಷಿಕೆ : ಕೈತುತ್ತು
ಲೇಖಕರು : ಸುನಂದಾ ಬೆಳಗಾಂವಕರ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2009
ಎರಡನೇ ಮುದ್ರಣ : 2012 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 136
ಬೆಲೆ : 95 ರೂ.
"ಕೈತುತ್ತು ನೀಡಿದ ಅಜ್ಜಿಯ ಕೈ ಅವಳ ರೂಪಕ್ಕಿಂತ ಹೆಚ್ಚು ಸುಂದರ ಶಿವ ಸತ್ಯ." ಎನ್ನುತ್ತಲೇ ತಮ್ಮ ಅಜ್ಜಿಯ ವಿರಾಟ್ ರೂಪದರ್ಶನವನ್ನು ಮಾಡಿಸುತ್ತಾರೆ ಲೇಖಕಿ. ಕೈತುತ್ತು ನಿಜಕ್ಕೂ ಲಲಿತ ಪ್ರಬಂಧ ಮಾತ್ರವಲ್ಲ.. ಇದು ಕಾವ್ಯಮಯವಾಗಿ ಬರೆದಿರುವ ಗದ್ಯ. ಅನುಭವದ ಮೂಸೆಯಿಂದ ಆಯ್ದ ಆಪ್ತ ನುಡಿಗಳು, ಅಂದಿನ ಜೀವನ ಸಂಸ್ಕೃತಿ, ಮನೋಭಾವ ಎಲ್ಲದರ ಚಿತ್ರಣ ಇಲ್ಲಿದೆ.
'ಚಿತ್ತದ ಹುತ್ತದಲ್ಲಿ ಹೆಪ್ಪುಗಟ್ಟಿದ ವಿಷ' ಈ ಪ್ರಬಂಧ ಓದಿ ಮನಸ್ಸು ಕದಡಿದ್ದು ಅದೆಷ್ಟು ಹೊತ್ತೋ ಗೊತ್ತಿಲ್ಲ. ಆ ಘಟನೆ ನೆನೆದರೆ ಈಗಲೂ ತಲ್ಲಣವೇ.. ಈ ಕೈತುತ್ತು ಪ್ರಬಂಧ ಮಾಲೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಜ್ಜಿಯ ಸಮಗ್ರ ಜೀವನವನ್ನು ಸಾಧ್ಯವಾದಷ್ಟರ ಮಟ್ಟಿಗೆ ನಾವು ಇಲ್ಲಿ ಕಂಡುಕೊಳ್ಳಬಹುದು. ಈ ಲಲಿತ ಪ್ರಬಂಧಗಳಲ್ಲಿ ಇಷ್ಟವಾದ ಕೆಲವಿಚಾರಗಳನ್ನು ಅಷ್ಟೇ ನಾನು ಇಲ್ಲಿ ಉಲ್ಲೇಖಿಸುತ್ತೇನೆ. ಇದರಲ್ಲಿ ಒಟ್ಟು ಹನ್ನೆರಡು ಅಧ್ಯಾಯಗಳಿವೆ.
ಅಂತಿಂಥವಳಲ್ಲ ಈ ಅಜ್ಜಿ :
ಮಜ್ಜಿಗೂಟಕೆ ಲೇಸು, ಮಜ್ಜನಕೆ ಮಡಿ ಲೇಸು
ಕಜ್ಜಾಯ ತುಪ್ಪ ಉಣಲೇಸು
ಮನೆಗೊಬ್ಬ ಅಜ್ಜಿ ಲೇಸೆಂದ ಸರ್ವಜ್ಞ
ಎಂಬ ಸರ್ವಜ್ಞ ವಚನವನ್ನು ಉಲ್ಲೇಖಿಸುತ್ತಲೇ 'ಅಜ್ಜಿಯ ಮೇಲೆ ಬರೆಯುವುದು ಗುಡ್ಡಕ್ಕೆ ಕೈ ಹಾಕಿದಂತೆ' ಎನ್ನುತ್ತಾರೆ. ಅಜ್ಜ ಪ್ರೇಮದಿಂದ ಅವರನ್ನು 'ಬಾಯವರ' , ' ಸರಕಾರ' ಎನ್ನುತ್ತಾ ಹೋಗುತ್ತಿದ್ದರಂತೆ. ಬ್ರಿಟಿಷರ ಆಡಳಿತ ಕಾಲದಲ್ಲಿ ವಿಕ್ಟೋರಿಯಾ ಮಹಾರಾಣಿ ಎಂದು ಕರೆತದ್ದು ಉಂಟಂತೆ. 'ವಜ್ರಾದಪಿ ಕಠೋರಾನಿ, ಮೃದೂನಿ ಕುಸುಮಾದಪಿ' ಎಂಬಂತಹ ಅಜ್ಜಿ ಇವರು. ಪ್ರೀತಿಯುಳ್ಳ, ಕರ್ತವ್ಯಪ್ರಜ್ಞ ಹೆಣ್ಣುಮಗಳು.
"ಅಜ್ಜಿ ಅರಿಷಡ್ವರ್ಗಗಳನ್ನು ಗೆದ್ದವಳಲ್ಲ, ಶಾಪಗ್ರಸ್ತ ದೇವತೆಯಂತೆ ಭೂಮಿಗಿಳಿದವಳಲ್ಲ, ಅವಳು ಮನುಷ್ಯಳು. ಕೇವಲ ಮನುಷ್ಯಳು. ಹೆಣ್ಣಾಗಿ ಹುಟ್ಟಿದ ಮೇಲೆ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ತಿಳಿದ ವಿವೇಕಿ" ಎನ್ನುತ್ತಾ ಅಜ್ಜಿಯ ಕುರಿತು ಹಲವಾರು ಮಾತುಗಳನ್ನು ಹೇಳುತ್ತಾರೆ.
ಜಾತಿ-ಮತ, ಪಂಥದ ಸಂಕುಚಿತ ಭಾವನೆಯಿಲ್ಲದ, ಶ್ರೀಮಂತ-ಬಡವರೆಂಬ ಭೇದವಿಲ್ಲದ, ಅತಿ ಆದರ, ಅನಾದರಗಳನ್ನು ತೋರದ ಅಜ್ಜಿ. ಬದುಕಿನ ಮೌಲ್ಯಗಳನ್ನು ತನ್ನ ಕರ್ತವ್ಯದಿಂದ ತಿಳಿಸಿದ ಆಕೆಯ ತೀಕ್ಷ್ಣ ಮಾತಿನಷ್ಟೇ.. ಮೃದು ಮನದವಳು. ಅಂತಹ ಒಂದು ನಿದರ್ಶನ ಹಾಲಿನವನ ಮೂಲಕ ವ್ಯಕ್ತವಾಗಿದೆ.
ನೆಲಮುಗಿಲಿನಂಥಾ ದಾಂಪತ್ಯ : ಅಜ್ಜನ ಅಂಗೈಯಲ್ಲಿ ತೂತು. ಅಜ್ಜಿಯದ್ದು ವಜ್ರಮುಷ್ಠಿ. ಅವರಿಬ್ಬರ ಜೀವನತತ್ವಗಳು ಬೇರೆ. ಆದರೆ, ನೆಲ್ಲಿ ತಿಂದು ನೀರು ಕುಡಿದಂತೆ ಅವರ ಸಂಸಾರ ಎನ್ನುತ್ತಾ ಅಜ್ಜಿಯ ಜೊತೆಗೆ ಅಜ್ಜನ ನೆನಪನ್ನು ಬಿಚ್ಚಿಡುತ್ತಾರೆ. ಅಜ್ಜನ ಕರ್ತವ್ಯನಿಷ್ಠೆಯಲ್ಲಿ ಅಜ್ಜಿಯ ಪಾತ್ರವನ್ನು ಹಲವಾರು ಜನರ ಮಾತುಗಳು ಇಲ್ಲಿ ಉಲ್ಲೇಖವಾಗಿವೆ.
ತಾಯಿ ಗಂಗವ್ವನ ಏನೆಂದು ನೆನೆಯಲೆ... : ಅಜ್ಜನ ತಾಯಿಯ ಹೆಸರು ಗಂಗಾ. ಅಜ್ಜಿಯೊಡನೆ ಅಜ್ಜ, ಅಜ್ಜನೊಡನೆ ಮುತ್ತಜ್ಜಿಯ ಸ್ಮೃತಿ ಸಕ್ಕರೆ ಸರ ಪೋಣಿಸಿದಂತೆ ಎನ್ನುತ್ತಾ ಮಧ್ವಾಚಾರ್ಯರ ಸತಿ ಗಂಗೆ ಹಾಗೂ ಆಕೆಯ ಮಕ್ಕಳ ಜೊತೆಗೆ ಸೊಸೆ ಅಕ್ಕವ್ವನ ದರ್ಶನ ಮಾಡಿಸುತ್ತಾರೆ. ಗಂಗಾಬಾಯಿಯ ಅಡುಗೆಯ ಕೈರುಚಿ, ಕಷ್ಟವನ್ನು ಕಷ್ಟವೆಂದು ತೋರದೆ ಅನುಸರಿಸಿಕೊಂಡು ಹೋಗುವ ಬಗ್ಗೆ, "ಹೆಣ್ಣು ಎನ್ನುವ ಮಾತು, ತಾಯಿ ಎನ್ನುವ ಮಾತು ಎರಡಲ್ಲ. ಒಂದೇ" ಎಂದು ಬಾಳಿದ ಗಂಗಾಬಾಯಿಯ ಚಿತ್ರಣ ಇಲ್ಲಿದೆ.
ಬಿಸಿಲು ನೆರಳಿನ ಬಾಲ್ಯ : ಅಜ್ಜಿಯ ಬಾಲ್ಯ ಎಲ್ಲರ ಬಾಲ್ಯದಂತಲ್ಲ. ಹುಟ್ಟಿದೊಡನೆ ತಾಯಿಯನ್ನು, ಎರಡು ವರ್ಷ ತುಂಬವ ಮೊದಲೇ ತಂದೆಯನ್ನು ಕಳೆದುಕೊಂಡು ಅಕ್ಕವ್ವ ಬೆಳೆದದ್ದು ತಂದೆ ಹನುಮಂತರಾಯರ ತಮ್ಮ ಸೊಂಡೂರ ಪಾಂಡುರಂಗರ ಜೊತೆಗೆ ಹಾಗೂ ಅವರ ಪತ್ನಿ ರಾಧಾಬಾಯಿ ಅವರ ಪ್ರೀತಿಯಿಂದ. ತಬ್ಬಲಿ ಮಗುವೆಂದು ಭಾವಿಸದಿದ್ದರೂ.. ಕಕ್ಕನ ಶಿಸ್ತಿನ ನಡುವೆಯೇ ಬೆಳೆದವರು. ಅವರ ಬಿಸಿಲು-ನೆರಳಿನ ಬಾಲ್ಯದ ಕುರಿತು ನೀವೇ ಓದಿ.
ಚಿತ್ತದ ಹುತ್ತದಲ್ಲಿ ಹೆಪ್ಪುಗಟ್ಟಿದ ವಿಷ : ಸೊಂಡೂರ ರಾಯರ ಕುವರಿ ಗೌರಿ ಕುರಿತ ಲಾವಣಿಯೊಂದನ್ನು ಹೇಳುತ್ತಲೇ ಅಜ್ಜಿ ಹೇಳಿದ ಆಕೆಯ ಅಕ್ಕನ ಚಿತ್ರಣ ಮನಕಲಕಿಸಿದ್ದಂತೂ ಹೌದು. ಇಂದಿಗೂ ಅದನ್ನು ನೆನೆದರೆ ತಲ್ಲಣವೇ. ಈ ಅಧ್ಯಾಯದ ಕುರಿತು ಹೆಚ್ಚು ಬಿಚ್ಚಿಡಲಾರೆ.
ತುಂಗೆ ದಡದ ಮಹಿಷಿ : ಕಕ್ಕ ಪಾಂಡುರಂಗರ ಮನೆಯಲ್ಲಿ ಅಕ್ಕವ್ವನ ಲಗ್ನದ ಮಾತು. ಅಕ್ಕವ್ವನ ಲಗ್ನದ ಸಂದರ್ಭದಲ್ಲಿ... ಕೃಷ್ಣಪ್ಪ ತನ್ನ ಸೋದರಮಾವನ ಕಡೆಯಿಂದ ಅಕ್ಕವ್ವವನ್ನು ಕೇಳಿಸಿದ್ದನಾದರೂ.. ಹಣದಾಸೆಗೆ ಅಂತಹ ವಯಸ್ಸಾದವನಿಗೆ ಕಟ್ಟುವುದರ ಕುರಿತ ಕಕ್ಕನ ಆಲೋಚನೆಗಳು, ಅಕ್ಕವ್ವ ಸೂಚಿಸಿದ ವರ.. ಸರಸ್ವತಿ ಪುತ್ರನಿಗಾಗಿ ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿದ ಅಕ್ಕವ್ವನಿಗೆ ಒಲಿದದ್ದು ತುಂಗೆಯ ತಡದ ಮಹಿಷಿಯ ವರ. ಅಧ್ಯಾಯದಲ್ಲಿ ದೊಡ್ಡವರ ಆಲೋಚನೆಗಳು, ಹಣವೋ..? ಗುಣವೋ..? ಎಂಬ ದ್ವಂದ್ವ ಎಲ್ಲವೂ ವ್ಯಕ್ತವಾಗಿದ್ದು.. ಗೆದ್ದದ್ದು ಯಾವುದು..? ಹೇಗೆ ಓದಿ ನೋಡಿ.
ಹೂವಾಯಿತು ಮನ : ಮಹಿಷಿ ಅಶ್ವತ್ಥ ನಾರಾಯಣನ ದೆಸೆಯಿಂದ ಗಂಗತ್ತಿ ಹಾಗೂ ರಾಧಾಬಾಯಿ ಇಬ್ಬರೂ ಬೀಗಿತ್ತಿಯರಾದ ಸಂದರ್ಭ. ಅಕ್ಕವ್ವನ ಮನೆಯಲ್ಲಿ ಹಾಗೂ ಗಂಗತ್ತಿಯ ಮನೆಯಲ್ಲಿನ ಆ ಕ್ಷಣದ ಚಿತ್ರಣ ಇಲ್ಲಿದೆ.
ಬಡತನ ಹಾಸಲುಂಟು, ಹೊದೆಯಲುಂಟು : ಅಕ್ಕವ್ವ ಬೇಡಿದ್ದ, ಬಯಸಿದ್ದ ಅತ್ತೆಮನೆಯಲ್ಲಿ ನಿತ್ಯ ದಾರಿದ್ರ್ಯ. ಆದರೆ, ಗುಣಕ್ಕೆ ಎಂದಿಗೂ ಬಡತನವಿರಲಿಲ್ಲ. ಅತ್ತೆ-ಮಾವ ಬದುಕಿನ ಮೂಸೆಯಲ್ಲಿ ಬೆಂದು ಚಿನ್ನವಾಗಿದ್ದವರು. ಅಕ್ಕವ್ವನ ಅತ್ತೆಮನೆಯ ಅಂದರೆ ಗಂಗಾಬಾಯಿಯವರ ವೈವಾಹಿಕ ಜೀವನದಿಂದ ಮುಂದಿನ ಚಿತ್ರಣ ಇಲ್ಲಿ ಸಿಗುತ್ತದೆ.
ಸೀತೆಗೆ ತಪ್ಪದು ವನವಾಸ : ಭೋಗವ್ವ / ಅಕ್ಕವ್ವನಾಗಿದ್ದವಳು ಈಗ ರಾಮಾಚಾರ್ಯರ ಮಡತಿ ಸೀತಾ, ಸೀತಾಬಾಯಿ, 'ಸಿಹಿ ತಾ' ಆದ ಸಂದರ್ಭಗಳು. ಸೀತೆ ಹೆಸರು ಇಟ್ಟುಕೊಂಡ ಅಜ್ಜಿಗೂ ಜೀವನದಲ್ಲಿ ಕಷ್ಟ ತಪ್ಪಲಿಲ್ಲ. ಸೀತೆ ಕಥೆಯಾದಳು, ವ್ಯಥೆಯಾದಳು. ತ್ರೇತಾಯುಗವಾದರೆ ಏನು..? ಕಲಿಯುಗವಾದರೆ ಏನು..? ಹೆಣ್ಣು ಹೆಣ್ಣೇ. ಸೀತೆ ಸೀತೆಯೇ.. ಸೀತಾಬಾಯಿಯೇ ಎನ್ನುತ್ತಾ ರಾಮಾಚಾರ್ಯರಿಗೆ ಅದೃಷ್ಟ ತಂದ ಸೀತಾಬಾಯಿಯನ್ನು ಪರಿಚಯಿಸುತ್ತಾರೆ.
ಅರಮನೆಯ ಸಿರಿದೇವಿ : ಅತ್ತೆಯಿಂದ ಕಲಿತದ್ದು, ಕಕ್ಕಿಯ ಕೈಕೆಳಗೆ ಕೆಲಸ ಮಾಡಿ ಅವಳು ಮಾಡಿದ್ದನ್ನು ನೋಡಿ ಅರಗಿಸಿಕೊಂಡದ್ದು ಇದು ಅವಳ ಬಾಲ್ಯದ ದಿನಗಳಾದರೆ.. ಮುಂದೆ ಅನೇಕರಿಂದ ಅನೇಕ ವಿಷಯಗಳನ್ನು ಕಲಿತು ಅಳವಡಿಸಿಕೊಂಡ ಶಿಸ್ತಿನ ಜೀವನ, ಕಲಿಯಲು ತೆರೆದ ಮನಸ್ಸು, ತಾರುಣ್ಯದಿಂದ ವೃದ್ಧಾಪ್ಯದವರೆಗೂ ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸಿದ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಅಜ್ಜಿಯ ಬುತ್ತಿ ಹಾಗೂ ಕೈತುತ್ತು ಹೆಚ್ಚು ತಾಳುತ್ತದೆ.
ಗಾಡಿ ಉರುಳಿಸುವ ಗಾಲಿ : ಗಂಗತ್ತಿ ತೀರಿಕೊಂಡ ನಂತರ, ಅವರ ಹಿರಿಯ ಮಗನೂ ತೀರಿಕೊಂಡ ನಂತರ ಮನೆಯಲ್ಲಿ ಹೆಚ್ಚು ಸಂಬಳ ತರುತ್ತಿದ್ದ ರಾಮಾಚಾರ್ಯರಿಗೆ ಹೊಣೆಗಾರಿಕೆ ಹೆಚ್ಚೇ ಇತ್ತು. ಪತಿಯ ಹೊಣೆಗಾರಿಕೆಗೆ ಹೆಗಲಾಗಿ ನಿಂತ ಅವರು ಅಂದಿನ ದಿನಗಳನ್ನು ಕಳೆದದ್ದು ಹೇಗೆ ಓದಿ ನೋಡಿ.
"ಪ್ರಪಂಚ ಮಿಥ್ಯವೆಂದು ಆಡುವುದು ಸುಲಭ. ನಡೆಯುವುದು ಕಠಿಣ. ಪ್ರಪಂಚ ಶೇಷ ಬಿಡದೆ ಉರಿಯುವ ಕರ್ಪೂರದಂತೆ. ಪ್ರಾಪಂಚಿಕರು ಪ್ರಪಂಚದಲ್ಲಿಯೇ ಪರಮೇಶ್ವರನನ್ನು ಕಾಣಬೇಕು. ಅವರಿಗೆ ಮನೆಯೇ ಕಾಶಿ, ಬದರಿ. ಅವರಿಗೆ ಒಣ ವೇದಾಂತ, ವೈರಾಗ್ಯ ಸಲ್ಲದು ಎಂದವಳ ವಾದ" ಎನ್ನುವ ಮಾತು ಅಜ್ಜಿಯ ಪ್ರಾಪಂಚಿಕ ದೃಷ್ಟಿಯನ್ನು ತೋರುತ್ತದೆ.
ಗೂಡು ಬಿಟ್ಟು ಹಾರಿದ ಹಕ್ಕಿ : ಗಂಡನ ಹಾಗೂ ತನ್ನಿಬ್ಬರ ಮಕ್ಕಳ ಸಾವುಗಳನ್ನು ಕಣ್ಮುಂದೆ ನೋಡಿದ್ದ ಅಜ್ಜಿಗೆ ಕೆಲ ಕಾಲ ಉತ್ಸಾಹದ ಸೆಲೆ ಮಾಯವಾಗಿದ್ದರೂ.. ಎಂದಿಗೂ ತನ್ನ ಕರ್ತವ್ಯಕ್ಕೆ ಚ್ಯುತಿ ಬರೆದಂತೆ ಬದುಕಿದ್ದವರು. ಅವರ ಅಂತ್ಯದ ದಿನಗಳು ಇಲ್ಲಿವೆ.
ಇಷ್ಟು ಬೇಗ ಅಜ್ಜಿಯ ದಿವ್ಯ ರೂಪ ಮುಗಿದು ಬಿಟ್ಟಿತೇ ಎನ್ನಿಸುವಂತೆ ಮಾಡಿದ ಅಕ್ಕವ್ವ ಹಾಗೂ ಗಂಗತ್ತಿಯ ಚಿತ್ರಣಗಳು ನಿಜಕ್ಕೂ ಅಂದಿನ ಅವರ ಪ್ರೀತಿಯ ಸವಿಯನ್ನು ಉಂಡವರೇ ಭಾಗ್ಯವಂತರು ಎನ್ನಿಸುವಂತೆ ಮಾಡಿತು. ಇಂತಹ ಅಜ್ಜಿ ನಮ್ಮ ಮನೆಯಲ್ಲಿನ ಅಜ್ಜಿಯನ್ನು ನೆನಪಿಸಿದ್ದೂ ಹೌದು. ಚೇತೋಹಾರಿ ಹಾಗೂ ಮತ್ತಷ್ಟು ಸ್ಪೂರ್ತಿ ತುಂಬುವ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ