ಭಾನುವಾರ, ಏಪ್ರಿಲ್ 26, 2026

ವೃತ್ತವಿಲಾಸನ ವಿಚಿತ್ರ ಕತೆಗಳು (ಪುಸ್ತಕ ಯಾನ - 381)


ಪುಸ್ತಕದ ಶೀರ್ಷಿಕೆ : ವೃತ್ತವಿಲಾಸನ ವಿಚಿತ್ರ ಕತೆಗಳು

ಲೇಖಕರು : ಡಾ|| ಜಿ. ಪಿ. ರಾಜರತ್ನಂ

ಪ್ರಕಾಶಕರು : ಸಪ್ನ ಬುಕ್ ಹೌಸ್

ಪ್ರಥಮ ಮುದ್ರಣ : 1973

ಎರಡನೇ ಮುದ್ರಣ : ಮಾರ್ಚ್ 2024

ಪುಟಗಳು : 67

ಬೆಲೆ : 50 ರೂ. 


ಸುಬ್ಬಣ್ಣ ಹಾಗೂ ಶಂಕರು ಅಣ್ಣ- ತಮ್ಮಂದಿರು. ಶಂಕರು ಕಥೆ ಕೇಳುವ ಸಂದರ್ಭದಲ್ಲಿ ಹಾಗೂ ಅಣ್ಣನ ಜೊತೆ ಮಾತುಕತೆ ನಡೆಯುತ್ತಿರುವಾಗ ನಯಸೇನ ಧರ್ಮಾವೃತದ ಕುರಿತು ಉಲ್ಲೇಖ ಬರುತ್ತದೆ. ಹಾಗೆಯೇ.. 'ಸಮಯ ಪರೀಕ್ಷೆ' ಕಾವ್ಯ ಬರೆದಿರುವ ಬ್ರಹ್ಮಶಿವನ ಉಲ್ಲೇಖವೂ ಬರುತ್ತದೆ. ಇವರಿಬ್ಬರ ಕಾವ್ಯದಲ್ಲಿನ ಸಾಮಾನ್ಯ ಅಂಶದಂತೆ ಜೈನ ಧರ್ಮದ ದೊಡ್ಡತನವನ್ನು ತೋರಿಸುವುದಕ್ಕೆ ವೃತ್ತವಿಲಾಸ 'ಧರ್ಮ ಪರೀಕ್ಷೆ' ಕಾವ್ಯ ಬರೆದಿರುವುದನ್ನು ಅವರ ತಂದೆ ಮೃತ್ಯುಂಜಯ ಶಾಸ್ತ್ರಿಗಳು ಮಕ್ಕಳಿಗೆ ಹೇಳುತ್ತಾರೆ. ಈ ಕಾವ್ಯಗಳೆಲ್ಲದರ ಸಾಮಾನ್ಯ ಅಂಶವೇನು ಎಂದು ಓದಿ ಅರಿಯಿರಿ. 


ಸಂಸ್ಕೃತದಲ್ಲಿ ಅಮಿತಗತಿ ಅನ್ನುವವನು ಬರೆದಿರುವ ಧರ್ಮಪರೀಕ್ಷೆ ನೋಡಿಕೊಂಡು ವೃತ್ತವಿಲಾಸ ಕನ್ನಡದಲ್ಲಿ ಬರೆದ ಎಂಬ ಮಾತು ಬಂದಾಗ ಸಂಸ್ಕೃತ ಮತ್ತು ಪ್ರಾಕೃತದ ಕಾವ್ಯಗಳ, ಧರ್ಮಪರೀಕ್ಷೆಯ ವಿಚಾರವನ್ನು ಹೇಳುತ್ತಾರೆ. ಹೀಗೆ ತಂದೆ- ಮಕ್ಕಳ ಮಾತುಕತೆ ನಡೆಯುತ್ತಲೇ ಶಂಕರುಗೆ ವೃತ್ತವಿಲಾಸನ ವಿಚಿತ್ರ ಕಥೆಗಳನ್ನು ಕೇಳುವ ಆಸೆಯಾಗುತ್ತದೆ. ಮಗನ ಆಸೆಗೆ ಇಂಬು ಕೊಡುವಂತೆ ತಂದೆಯೂ ವೃತ್ತವಿಲಾಸನ ವಿಚಿತ್ರ ಕಥೆಗಳನ್ನು ನಿರೂಪಿಸುತ್ತಾ ಹೋಗುತ್ತಾರೆ. 


ಪುಷ್ಪದಂತ ಎನ್ನುವ ಗುರುಗಳ ಹತ್ತಿರ ಮನೋವೇಗ ಹಾಗೂ ಪವನವೇಗ ಎನ್ನುವ ಇಬ್ಬರು ರಾಜಕುಮಾರರು ವಿದ್ಯೆ ಕಲಿಯುತ್ತಿದ್ದರು. ಗುರುಗಳು ಹೇಳಿಕೊಡುತ್ತಿದ್ದ ಜೈನಧರ್ಮದಲ್ಲಿ ಮನೋವೇಗನಿಗೆ ನಂಬಿಕೆ ಬೇಗ ಬಂದಿತ್ತು. ತಿಳುವಳಿಕೆಯೂ ಬಂದಿತು. ಆದರೆ, ತನ್ನ ಸ್ನೇಹಿತನಾದ ಪವನವೇಗನಿಗೆ ಇನ್ನೂ ಜೈನಧರ್ಮದಲ್ಲಿ ನಂಬಿಕೆ ಉಂಟಾಗಲಿಲ್ಲ. ಸ್ನೇಹಿತನಿಗೆ ಧರ್ಮದಲ್ಲಿ ನಂಬಿಕೆ ಉಂಟಾಗಬೇಕಾದರೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದ. ಮನೋವೇಗ ಆಕಾಶದಲ್ಲಿ ಸಂಚಾರ ಮಾಡಲು ವಿಮಾನದಲ್ಲಿ ಆತನನ್ನು ಕರೆದುಕೊಂಡು ಹೊರಟ. ಹಾಗೆ ಹೊರಟವರು ಮೊದಲು ತಲುಪಿದ್ದು ಪಾಟಲೀಪುತ್ರಕ್ಕೆ.


ನಂತರ, ಅಲ್ಲಿನ ಪಂಡಿತರೊಡನೆ ವಾದಕ್ಕೆ ನಿಲ್ಲುತ್ತಾರೆ. ಅದರಿಂದ ಜಯಪತ್ರಗಳನ್ನು ಗಳಿಸುತ್ತಾರೆ. ಜಯಪತ್ರಗಳನ್ನು ಗಳಿಸಲು ಜ್ಞಾನವು ಅವಶ್ಯಕತೆಗಾಗಿತ್ತು. ಜೊತೆಗೆ, ವಾಕ್ಚಾತುರ್ಯವೂ ಬೇಕಿತ್ತು. ಅದನ್ನು ಇಬ್ಬರೂ ಕೂಡಿಯೇ ಮಾಡುತ್ತಾರೆ. ಹೀಗೆ ಪಾಟಲೀಪುತ್ರದ ನಾಲ್ಕು ದಿಕ್ಕಿನ ಬ್ರಹ್ಮಭವನಗಳಲ್ಲಿ ನಡೆದ ಕಥೆಗಳನ್ನು ಶಾಸ್ತ್ರಿಗಳು ಮಕ್ಕಳಿಗೆ ಹೇಳುತ್ತಾರೆ. ಈ ಕಥೆಗಳು ಧರ್ಮದಲ್ಲಿನ ಕುಂದುಕೊರತೆಗಳನ್ನು ವಿಡಂಬನೆಯಂತೆ ಆಡುವ ವಿಚಿತ್ರವಾದ ಕಥೆಗಳಿವೆ. 


ಪವನವೇಗ ತನ್ನ ಮಿಥ್ಯಾ ದೃಷ್ಟಿಯನ್ನು ತೊರೆದನೇ ಓದಿ ನೋಡಿ. 


ಪ್ರತಿಯೊಂದು ಬ್ರಹ್ಮಭವನದಲ್ಲಿಯೂ ಎರಡೆರಡು ದಡ್ಡರ ಕಥೆಗಳನ್ನು ಹೇಳುತ್ತಾರೆ. ಅಲ್ಲಿ ದಡ್ಡರಿಲ್ಲ ಎಂದು ಖಚಿತಪಡಿಸಿಕೊಂಡು ನಂತರವೇ ಅವರು ತಮ್ಮ ವಿಚಿತ್ರ ಕಥೆಗಳಿಂದ ವಾದಕ್ಕೆ ನಿಲ್ಲುವುದು. ಹೀಗೆ ದಡ್ಡರ ಕಥೆಗಳು ವಿಡಂಬನಾತ್ಮಕವಾಗಿ ಹೆಣೆಯಲ್ಪಟ್ಟಿವೆ. ಅದರಲ್ಲಿ ಒಂದನ್ನು ಮಾತ್ರ ಚಿಕ್ಕದಾಗಿ ನಾನಿಲ್ಲಿ ಉಲ್ಲೇಖಿಸುತ್ತೇನೆ.


ಸಾಗರದತ್ತ ಎನ್ನುವ ವ್ಯಾಪಾರಿ ಸಮುದ್ರ ಪ್ರಯಾಣ ಮಾಡುವಾಗ ಹಾಲು ಕೊಡುವ ನೂರು ಹಸುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೊರಡುತ್ತಾನೆ. ಹಾಗೆ, ತನ್ನ ಪ್ರಯಾಣದ ಮಧ್ಯದಲ್ಲಿ ಸಿಗುವ ದ್ವೀಪದಲ್ಲಿ ಇಳಿದಾಗ ಅಲ್ಲಿ ಬಹಳ ತೆಂಗಿನ ಮರಗಳನ್ನು ಕಾಣುತ್ತಾನೆ. ಅಲ್ಲಿನ ಜನ ಹಸುವನ್ನೇ ನೋಡಿರುವುದಿಲ್ಲ. ಅವರೆಲ್ಲರಿಗೂ ಆತ ಹಸುಗಳ ಪರಿಚಯ ಮಾಡಿಸಿ ಹಾಲು, ಮೊಸರು, ಬೆಣ್ಣೆ, ತುಪ್ಪ ದೊರಕುತ್ತದೆ ಎಂದು ಪರಿಚಯಿಸುತ್ತಾನೆ. ಅವೆಲ್ಲದರ ರುಚಿ ತೋರಿಸುತ್ತಾನೆ. ಅದಕ್ಕೆ ಮರುಳಾದ ದ್ವೀಪದ ರಾಜ ಹಸುಗಳನ್ನೆಲ್ಲ ತಮಗೆ ಮಾರಿಬಿಡಲು ಕೇಳುತ್ತಾನೆ. ಆ ಹಸುಗಳನ್ನೆಲ್ಲ ಮಾರಿದ ಸಾಗರದತ್ತ ಊರಿಗೆ ಹೊರಟ. 


ಮಾರನೇ ದಿನ ಆ ದೊರೆ ಹಸುಗಳ ಮುಂದೆ ಹಾಲಿಗೊಂದು ಪಾತ್ರೆ, ಮೊಸರಿಗೊಂದು ಪಾತ್ರೆ, ಬೆಣ್ಣೆಗೊಂದು ಪಾತ್ರೆ, ತುಪ್ಪಕ್ಕೊಂದು ಪಾತ್ರೆ ಹೀಗೆ ನಾಲ್ಕು ಪಾತ್ರೆಗಳಿಟ್ಟು ಹಸುಗಳನ್ನು ಕೇಳುತ್ತಾನೆ. ಎಷ್ಟು ಬೇಡಿದರೂ ಏನೂ ಕೊಡದಿರುವಾಗ ಕೋಪದಿಂದ ಅವುಗಳನ್ನು ಒಡೆದು ತನ್ನ ದ್ವೀಪದಿಂದ ಓಡಿಸಿಬಿಡುತ್ತಾನೆ. 


ಇಂತಹ ಹಲವಾರು ದಡ್ಡರ ಕಥೆಗಳು ಇಲ್ಲಿ ಸಿಗುತ್ತವೆ. 


"ಜಾಣತನದಲ್ಲಿ ಒಂದು ಸಾವಿರ ತರಹ ಜಾಣತನ ಇರುವ ಹಾಗೆಯೇ ದಡ್ಡತನದಲ್ಲಿಯೂ ಸಾವಿರಾರು ತರಹ ದಡ್ಡತನ ಉಂಟು." ಎಂದು ಮೃತ್ಯುಂಜಯ ಶಾಸ್ತ್ರಿಗಳು ಹೇಳುವ ಮಾತು ಎಷ್ಟು ಸತ್ಯವಲ್ಲವಾ ಎನಿಸುತ್ತದೆ. 


ಕೆಲವೊಂದು ದಡ್ಡರ ಕಥೆಗಳು ಓದಿದಾಗ ಇಷ್ಟು ದಡ್ಡತನವೂ ಇರುತ್ತದಾ ಎನ್ನಿಸಿತು. ವಿಡಂಬನಾತ್ಮಕ ಕಥೆಗಳನ್ನು ನೀವೇ ಓದಿ ನೋಡಿ. 


ಇದನ್ನು ಮಕ್ಕಳ ಸಾಹಿತ್ಯ ಪ್ರಭೇದವೆಂದು ವಿಂಗಡಿಸಲಾಗಿದ್ದರೂ.. ಇದು ಮಕ್ಕಳು ಓದಿದಾಗ ಅವರಿಗೆ ಸಿಗುವ ಸಂದೇಶಕ್ಕಿಂತಲೂ.. ನಮ್ಮ ಓದಿಗೆ ಸಿಗುವ ಆಲೋಚನೆಯೇ ಬೇರೆ ಎನ್ನಿಸಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ