ಪುಸ್ತಕದ ಶೀರ್ಷಿಕೆ : ಬಿಡುಗಡೆ
ಲೇಖಕರು : ವೀಣಾ ಶಾಂತೇಶ್ವರ
ಪ್ರಕಾಶಕರು : ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್
ಪ್ರಥಮ ಮುದ್ರಣ : 1994
ಪುಟಗಳು : 96
ವೀಣಾ ಶಾಂತೇಶ್ವರ ಅವರ ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.
ಬಿಡುಗಡೆ : ಈ ಕಥೆ ಓದುತ್ತಿದ್ದಾಗ ಸರೋಜಾಳ ಬದುಕು ಎಷ್ಟು ಸುಂದರವಾಗಿದೆಯಲ್ಲವಾ..! ಅರ್ಥೈಸಿಕೊಂಡು ನಡೆಯುವ ಹಾಗೂ ಇಚ್ಛೆಯನ್ನರಿತು, ಸತಿಗೆ ಕಷ್ಟ ಕೊಡದಂತೆ, ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಗಂಡ ಸಿಗುವುದು ಎಷ್ಟು ಅದೃಷ್ಟವಲ್ಲವೇ..! ಎಂದುಕೊಳ್ಳುತ್ತಿರುವಾಗಲೇ ಕಥೆ ತಿರುವು ತೆಗೆದುಕೊಳ್ಳುತ್ತದೆ. ಸರೋಜಾಳ ಪತಿಗೆ ನಿನ್ನೆ ರಾತ್ರಿ 10 ಗಂಟೆಗೆ ಹೃದಯಘಾತವಾಗಿ ಸತ್ತಾಗಿತ್ತು. ಈಗ ಬೆಳಗ್ಗಿನ 9 ಗಂಟೆ ದಾಟಿದೆ. ಅಷ್ಟು ಹೊತ್ತು ಸರೋಜ ನೆನಪಿಸಿಕೊಂಡದ್ದೇನು..? ತನ್ನ ಜೊತೆಗೆ 35 ವರ್ಷ ಬಾಳಿದಾತ ಮೂರು ಮಕ್ಕಳ ತಂದೆಯಾಗಿ ಹೊಣೆ ಹುಟ್ಟದ್ದೆಷ್ಟು? ಎಲ್ಲರಿಗಿಂತಲೂ ಹೆಚ್ಚು ದುಃಖ ಅವಳಿಗೆ ಆಗಬೇಕಿತ್ತು. ಆದರೆ, ಅವಳಿಗೆ ಬಿಡುಗಡೆಯ ಭಾವ ಹುಟ್ಟಿದ್ದೇಕೆ ಈ ಕಥೆ ಆಕೆಯನ್ನು ಮಾತ್ರವಲ್ಲ.. ನಮ್ಮನ್ನೂ ವಾಸ್ತವದ ಲೋಕದಲ್ಲಿ ಎಚ್ಚರಿಸುತ್ತದೆ.
ಹೀಗೊಂದು ಕತೆ : ಇಂದಿನ ದಿನಗಳಲ್ಲಿ ಲಿವಿಂಗ್ ರಿಲೇಶನ್ ಎಂದು ಕರೆಯಬಹುದಾದಂತಹ ಸಂಕೀರ್ಣ ಸಂಬಂಧ ಇಲ್ಲಿದೆ ಅದು ಶುರುವಾದ ರೀತಿ ಹಾಗೂ ಬೇಡಿಕೆ, ನಿರಾಕರಣೆ ಇಲ್ಲದ, ಅವಶ್ಯಕತೆ ಇಲ್ಲದ, ಕೊರತೆಯೂ ಇಲ್ಲದ, ನಿರೀಕ್ಷೆಯಿಲ್ಲದ, ನಿರಾಶೆಯೂ ಇಲ್ಲದ ಒಂದು ಬದುಕನ್ನು ಇಲ್ಲಿ ಚಿತ್ರಿಸುತ್ತಾ ಹೋಗುತ್ತಾರೆ. ಹೀಗೆ ಹತ್ತು ವರ್ಷ ಜೊತೆಯಾಗಿ ಸುಖವಾಗಿ ಬದುಕು ಕಳೆದಿದ್ದವರಿಗೆ ಆಕೆ ಗರ್ಭಿಣಿ ಎಂದು ತಿಳಿದ ಸಂದರ್ಭದಿಂದ ಶುರುವಾದ ತಲ್ಲಣಗಳು ಹಾಗೂ ತಿರುವು ತೆಗೆದುಕೊಳ್ಳುವ ಕಥೆ ಇದು.
ಅನಾಥೆ : ಭಗಿನಿ ಸೇವಾ ಸಮಾಜದ ವಾರ್ಷಿಕೋತ್ಸವದಲ್ಲಿ ಸೇವಾ ಸಮಾಜದ ಅನಾಥಾಲಯದ ಮೇಲ್ವಿಚಾರಕಿಯಾದ ಕಮಲಮ್ಮ ದೇಸಾಯಿಯ ವರ್ತನೆ ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರೆ, ಇಂದಿನ ಕಾರ್ಯಕ್ರಮ ಅನಾಥಾಲಯದ ಹುಡುಗಿಯಾಗಿದ್ದ ಕೋಮಲೆಗೆ ವಿಪರೀತ ಹೆದರಿಕೆ ತಂದಿತ್ತು. ಅದಕ್ಕೆ ಕಾರಣವೂ ಇಲ್ಲದ್ದಿಲ್ಲ. ಹಿಂದೆ ನಡೆದ ಹಲವಾರು ಇಂತಹ ಘಟನೆಗಳಿಗೆ ಮುಗ್ಧ ಮನಸ್ಸಿನ ಆಲೋಚನೆಗಳು ಅರ್ಥೈಸಿಕೊಂಡ ಪರಿ ಆಕೆಯನ್ನು ಹೆದರಿಸಿತ್ತು. ಅಂದು ಅತಿಥಿಯಾಗಿ ಬಂದಿದ್ದವರು ಯಾರು..? ಕೋಮಲೆಯ ಬದುಕು ಅಂದು ಏನಾಯಿತು ..? ಅನಾಥಾಲಯದ ಒಂದು ಕರಾಳ ಮುಖದ ಕ್ಷಣಗಳು ಇಲ್ಲಿದೆ.
ನಿರಾಕರಣೆ : ದುಷ್ಯಂತ ಹಾಗೂ ಶಕುಂತಲೆಯ ಪೌರಾಣಿಕ ಕಥೆಯನ್ನು ಶಕುಂತಲೆಯ ದೃಷ್ಟಿಕೋನದಲ್ಲಿ ಚಿತ್ರಿಸಿರುವ ಕಥೆ ಇದು. ಮುನಿಗಳ ಶಾಪದಂತಹ ಬಾಹ್ಯ ಕಾರಣಗಳಿಂದ, ಉಂಗುರ ಕಳೆದು ಹೋಯಿತೆಂಬ ನೆಪದಿಂದ.. "ತಾನು ಪ್ರೀತಿಸಿದ, ಕೂಡಿದ ಹೆಣ್ಣನ್ನು ದೂರ ಮಾಡುವುದಾದರೆ ಆ ಪ್ರೀತಿಗೆ ಅರ್ಥವೇನು..?" ಎಂದು ಕೇಳುವ ಶಕುಂತಲೆಯ ದಿಟ್ಟತನ ಹಾಗೂ ಮಗ ಭರತನಿಗಾಗಿ ಆಕೆ ತೆಗೆದುಕೊಳ್ಳುವ ದಿಟ್ಟ ಹೆಜ್ಜೆ ಇಲ್ಲಿದೆ.
ರಾಧವ್ವ : ಹನುಮಪುರವೆಂಬ ಹಳ್ಳಿಯ ಹನುಮಂತ ದೇವರ ದರ್ಶನಕ್ಕೆ ಪ್ರತಿ ವರ್ಷವೂ ಹೋದಾಗ ತಂದೆ-ತಾಯಿ ಇಬ್ಬರೂ ಶ್ರದ್ದೆ, ಭಕ್ತಿ, ನಂಬಿಕೆಯಿಂದ ಉತ್ಸವ ಮಾಡಿಸುತ್ತಿದ್ದರು. ಎಲ್ಲಾ ಜಾತಿಯವರಿಗೂ ಜಾತಿಭೇದ ಮಾಡದೆ ಊಟೋಪಚಾರ, ದಾನ, ಧನ ಸಹಾಯ ಎಲ್ಲವನ್ನೂ ಮಾಡುತ್ತಿದ್ದ ಅಮ್ಮನ ಜೊತೆಗಾತಿಯಾಗಿದ್ದ ರಾಧವ್ವನ ಕಥೆ ಇದು. ಕಷ್ಟಕಾರ್ಪಣ್ಯಗಳನ್ನು ಬಾಯಿಬಿಟ್ಟು ಆಡದೆ, ದೇವರನ್ನು ದೂಷಿಸದೆ, ತನ್ನ ಬದುಕಿಗೆ ಬೇಸರಗೊಳ್ಳದೆ ಅಮ್ಮನ ಕುರಿತು ವಿಶಿಷ್ಟ, ವಿಚಿತ್ರ ಭಕ್ತಿ ತೋರಿಸುವ ರಾಧವ್ವ ಅಮ್ಮ ಹನುಮಪುರಕ್ಕೆ ಕಾಲಿಟ್ಟ ಕ್ಷಣದಿಂದ ತಿರುಗಿ ಹೊರಡುವವರೆಗೂ ಬೆಂಬಿಡದ ಸಂಗಾತಿಯಾಗುತ್ತಿದ್ದವಳು. ಇಂತಹ ನಿಷ್ಕಲ್ಮಶ ಮನಸ್ಸಿನ ರಾಧವ್ವ ಎಂದಿಗೂ ತನ್ನ ಕಷ್ಟವನ್ನು ಮುಂದು ಮಾಡಿಕೊಂಡು ಸ್ವಾರ್ಥಪರಳಾಗಿ ಸಹಾಯ ಬೇಡಿದವಳಲ್ಲ. ಮುಂದೆ ಅಮ್ಮ ತೀರಿಕೊಂಡು ರಾಧವ್ವನಿಗೆ ಕ್ಯಾನ್ಸರ್ ಬಂದಿದೆ ಎಂದು ತಿಳಿದ ನಂತರ ಮುಂದೇನು ಎಂಬ ಆಲೋಚನೆಯಿಂದ ಮುಂದಿನ ವರ್ಷದ ಹನುಮಾಪುರದ ಉತ್ಸವಕ್ಕೆ ಹೋದಾಗ ತಿಳಿಯುವ ವಿಚಾರ ಅಸಹಾಯಕತೆಯನ್ನು ತೋರುತ್ತದೆ. ನಿಷ್ಠ, ನಿಷ್ಕಲ್ಮಶ ಮನಸ್ಸಿನ ರಾಧಮ್ಮನಂತಹವರು ಎಷ್ಟು ವಿರಳವಲ್ಲವೇ..!
ಒಲವೇ ಜೀವನ : ಸತೀಶ ಕುಲಕರ್ಣಿ ನೇರ ನಡೆ-ನುಡಿಯ, ಪ್ರಾಮಾಣಿಕ ಕಷ್ಟಜೀವಿ ಕೆಲಸಗಾರನೆಂದು ಬ್ಯಾಂಕಿನಲ್ಲಿಯೇ ಹೆಸರು ಪಡೆದಿದ್ದ. ಆತನ ಮೇಲೆ ಮೋಹ ಹುಟ್ಟಿದ ಸಹೋದ್ಯೋಗಿ ಕುಸುಮ ಪಾಟೀಲ ಆತನಿಗೆ ತನ್ನ ಪ್ರೀತಿಯನ್ನು ತಿಳಿಸಿದಾಗ ನೇರವಾಗಿ, ನಿಷ್ಠುರವಾಗಿ ನಿರಾಕರಿಸಿ ಅದಕ್ಕೆ ಕಾರಣವನ್ನು ಸ್ಪಷ್ಟವಾಗಿ ತಿಳಿಸಿದ್ದ. ಆತನಿಗೆ ಪ್ರೇಮವಾಗಿತ್ತು. ಅವಳೇ ಶೋಭನಾಯಕ. ಅದೇ ಬ್ಯಾಂಕಿನ ಇನ್ನೊಂದು ಶಾಖೆಯ ಆ ಕಚೇರಿಯಲ್ಲಿ ಕ್ಲರ್ಕ್ ಆಗಿದ್ದ ಗಂಭೀರ ಸ್ವಭಾವದ ಹುಡುಗಿ. ಅವಳ ಮನೆಗೂ ಸಾಕಷ್ಟು ಸಲ ಓಡಾಡಿದ ನಂತರ ಇನ್ನೇನು ಮದುವೆಯ ವಿಚಾರವಾಗಿ ನಿರ್ಧರಿಸಬೇಕು ಎನ್ನುವಾಗ ಕುಸುಮಾ ಪಾಟೀಲ ಸತೀಶ ಹೇಳಿದ ಎಲ್ಲಾ ಮಾರ್ಪಾಡುಗಳೊಂದಿಗೆ ತಿರುಗಿ ಬಂದಿದ್ದಳು. ಶೋಭಾಳನ್ನು ನಿರಾಕರಿಸಲು ಇದ್ದ ಒಂದೇ ಕಾರಣ ಇಟ್ಟುಕೊಂಡು ಆತ ಆಲೋಚಿಸುತ್ತಿದ್ದ. ಇಲ್ಲಿ ಒಲವು ಯಾರ ಜೀವನದಲ್ಲಿ ಯಾವೆಲ್ಲಾ ಮಾರ್ಪಾಡುಗಳನ್ನು ತಂದಿತು ಓದಿ ನೋಡಿ.
ತಾರಾ ಮ್ಯಾಡಮ್ ಮತ್ತು ತತ್ವಗಳು : ಹೊಸದಾಗಿ ಚಾರ್ಜು ತೆಗೆದುಕೊಂಡಿದ್ದ ಇಲಾಖೆಯ ನಿರ್ದೇಶಕರಿಗೆ ಆಫೀಸಿನ ಸಹಾಯಕ ನಿರ್ದೇಶಕಿ ಡಾ|| ತಾರಾ ಪೋಕಳೆ ತನ್ನನ್ನು ತಾನು ಪರಿಚಯಿಸಿಕೊಂಡದ್ದು ತನ್ನ ತತ್ವಗಳೊಂದಿಗೆ. ತನ್ನ ತತ್ವಗಳನ್ನು ತನಗೆ ಬೇಕಾದಂತೆ ಬಳಸಿಕೊಂಡು, ಆಫೀಸಿನಲ್ಲಿ ಹೆಚ್ಚಿನವರ ಮೇಲೆ ಅವರ ನೆಗೆಟಿವ್ ಗಳನ್ನು ಹೇಳಿ ಇಲಾಖೆಯ ನಿರ್ದೇಶಕರಿಗೆ ಕಂಪ್ಲೇಂಟ್ ಮಾಡುತ್ತಿದ್ದ ತಾರಾ ಮೇಡಂ ತತ್ವಗಳೇ ಆಕೆಗೆ ಮುಳುವಾದ ಕಥೆ ಇಲ್ಲಿದೆ. ಮಾಡಿದ್ದುಣ್ಣೋ ಮಹಾರಾಯ ಎನ್ನುವ ಮಾತಿಗೆ ಹೊಂದುವ ಕಥೆ ಇದು.
ದ. ಬ್ರಾ. ಕೃಷ್ಟಪ್ಪ : ಕೃಷ್ಟಪ್ಪನಿಗೆ ತಾಲೂಕು ಆಫೀಸಿನಲ್ಲಿ ಗುಮಾಸ್ತೆಯ ಕೆಲಸವಿತ್ತು. ಓದಿದ ಹಲವಾರು ವರ್ಷ ಕೆಲಸಕ್ಕಾಗಿ ಅಲೆದು ಅಲೆದು ಸುಸ್ತಾಗಿ, ಲಂಚ ಕೊಡಲು ಸಾಧ್ಯವಿಲ್ಲದೆ, ಸಂಸಾರ ನಿರ್ವಹಣೆಗೆ ಬಹಳ ಪಾಡುಪಟ್ಟಿದ್ದ. ಆದರೆ, ಅವನ ಹಿಂದಿನವರು ಹೀಗಿರಲಿಲ್ಲ. ಬದಲಾದ ತಲೆಮಾರುಗಳಲ್ಲಿ ಜಾತೀಯತೆ ತಂದ ಬದಲಾವಣೆಗಳೇನು ಎಂಬುದನ್ನು ಇಬ್ಬರ ಬದುಕಿನ ತುಲನೆಯನ್ನು ಇಲ್ಲಿ ಕಾಣಬಹುದಾಗಿದೆ. ಕಥೆಯ ಶೀರ್ಷಿಕೆಯ ಕುರಿತು ಕುತೂಹಲವಿದೆಯೇ..? ಹಾಗಿದ್ದಲ್ಲಿ ದ. ಬ್ರಾ. ಕೃಷ್ಟಪ್ಪ ಎಂದರೆ ಏನಿರಬಹುದು ಎಂದು ತಿಳಿಯಲು ಕಥೆ ಓದಿ.
ಮರೀಚಿಕೆ : ಮಿನಿಗೆ ಒಂದು ಫ್ರೆಂಚ್ ಕಥೆ ನೆನಪಾಗುತ್ತಿತ್ತು. ಪ್ಯಾರಿಸಿನಲ್ಲಿಯ ಚರ್ಚ್ ಒಂದರಲ್ಲಿ ಅಕಸ್ಮಾತ್ ಭೇಟಿಯಾದ ಫ್ರೆಂಚ್ ಯುವಕ, ಐರಿಶ್ ಯುವತಿ ಪ್ರಾರ್ಥನೆ ಸಲ್ಲಿಸಿ ಹೊರಬಂದು ಇಬ್ಬರು ಒಂದಿಡೀ ದಿನ ಕಳೆದು ಮುಂಜಾನೆ ಅಪರಿಚಿತರಂತೆ ದೂರವಾಗುವ ಸಂದರ್ಭ. ಇಬ್ಬರಿಗೂ ಜೀವನ ಸುಂದರವಾದಂತೆ ಅನ್ನಿಸುತ್ತಿದ್ದ ಆ ಕಥೆಯ ಹಾಗೆ ತನ್ನ ಜೀವನದಲ್ಲಿಯೂ ರಾತ್ರಿ ಪ್ರಯಾಣದಲ್ಲಿ ಅಂತಹಾ ಯಾವುದಾದರೂ ಒಂದು ಅಪರಿಚಿತ ಹಾಗೂ ಬದುಕಿಗೆ ತಿರುವು ಕೊಡುವಂತಹ ಭೇಟಿ ಸಾಧ್ಯವಾಗುತ್ತದೆಯೇ ಎಂದು ಯೋಚಿಸುತ್ತಿದ್ದವಳಿಗೆ ಸಹಪ್ರಯಾಣಿಕ ಯಾವ ರೀತಿಯಲ್ಲಿ ಭಾಸವಾದ..? ಮಿನಿಯ ಜೀವನದಲ್ಲಿ ಅಂತಹ ಯಾವುದಾದರೂ ಪವಾಡ ನಡೆಯಿತೇ ಓದಿ ನೋಡಿ.
ಧೈರ್ಯದ ಮನುಷ್ಯ : ಪೆರುಮಾಳ್ ಸಾಮಾನ್ಯ ಮಿಲಿಟರಿಯವರಿಗಿಂತ ಭಿನ್ನವಾಗಿದ್ದ. ಯಾವಾಗಲೂ ಏನಾದರೂ ಹೇಳಿ ಕುತೂಹಲಗೊಳಿಸುತ್ತಿದ್ದ. ಆತ್ಮೀಯತೆ ತೋರುತ್ತಿದ್ದ. ಯುದ್ಧದ ಬಗೆಗೆ ಮಾತ್ರವಲ್ಲದೆ, ಮನುಷ್ಯ ಜೀವನದ ಅನೇಕ ಆಳವಾದ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದ. ಆತನ ಧೈರ್ಯ, ಸಾಹಸಗಾಥೆಗಳು ಹಾಗೂ ರೋಚಕವಾದ ಅನುಭವವನ್ನು ಕೇಳುವುದೇ ಒಂದು ಸೊಗಸಾದ ಅನುಭವ. ಧೈರ್ಯಸ್ತ ಮನುಷ್ಯನೆಂದೇ ಬಿಂಬಿತವಾಗಿದ್ದ ಪೆರುಮಾಳ್ ತನ್ನ ಹಾಸಿಗೆ ಮೇಲೆ ಕೂತು ಹ್ಯಾಂಡ್ ಗ್ರನೈಡ್ ಅನ್ನು ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣವೇನು..? ವೃತ್ತಿಜೀವನದಲ್ಲಿ ಸಾಹಸಿಯಾಗಿದ್ದ ಮನುಷ್ಯನ ವೈಯಕ್ತಿಕ ಜೀವನ ಹೇಗಿತ್ತು..? ಓದಿನೋಡಿ.
ಈ ಕಥಾಸಂಕಲನದಲ್ಲಿ ಹೆಚ್ಚಿನ ಕಥೆಗಳು ಮುಖ್ಯವಾಗಿ ಗಂಡು ಹಾಗೂ ಹೆಣ್ಣುಗಳ ಬದುಕಿನ ಹೊಸ ಆಯಾಮಗಳನ್ನು ಒಳತೋಟಿಗಳನ್ನು ಸಮರ್ಥವಾಗಿ ಹಿಡಿದಿಟ್ಟಿವೆ. ಸರಾಗವಾದ ಓದು ಇದಾದರೂ ಕಥೆಗಳು ಆಲೋಚನೆಗೆ ದೂಡುತ್ತವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ