ಭಾನುವಾರ, ಏಪ್ರಿಲ್ 26, 2026

ಮಂಜುಳ ಗಾನ (ಪುಸ್ತಕ ಯಾನ - 414)



ಪುಸ್ತಕದ ಶೀರ್ಷಿಕೆ : ಮಂಜುಳ ಗಾನ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 1992

ಎರಡನೇ ಮುದ್ರಣ : 2012 (ನನ್ನ ಓದಿಗೆ ಸಿಕ್ಕಿದ್ದು)


ಇದು ಬೆಳ್ಳಿ ತೋರಣ, ಹೂವೆಲ್ಲ ಚೆಲುವಾಯ್ತು ಮತ್ತು ಮಂಜುಳ ಗಾನ ಮೂರು ಕಾದಂಬರಿಗಳ ಸಂಯುಕ್ತ ಸಂಪುಟ.


ಇಂದು ನಾನು ಆಯ್ಕೆ ಮಾಡಿಕೊಂಡಿರುವ ಕಾದಂಬರಿ ಮಂಜುಳ ಗಾನ.


ಈ ಕಾದಂಬರಿಯ ನಾಯಕಿ ಮಂಜುಳ. ರಾಮರಾಯರು ಹಾಗೂ ಸರೋಜಮ್ಮನವರ ಇಬ್ಬರು ಮಕ್ಕಳಲ್ಲಿ ಮಂಜುಳ ಹಿರಿಯವಳು. ಆಕೆಯ ತಮ್ಮ ಕೇಶವ. 


ರಾಮರಾಯರಿಗೆ ಇಬ್ಬರು ಸಹೋದರಿಯರು. ಅಕ್ಕ ಶ್ರೀಮಂತಿಕೆಯಿದ್ದ ಕಮಲಮ್ಮ. ಇಬ್ಬರ ಮನೆಯಲ್ಲಿಯೂ ತೀರಾ ಹೊಕ್ಕುಬಳಕೆ ಇರಲಿಲ್ಲ. ತಂದೆಯ ಸ್ವಂತ ಅಕ್ಕನೇ ಆಗಿದ್ದರೂ ಆರೇಳು ವರ್ಷದ ಹಿಂದೆ ಮುಂಜಿಗೆಂದು ಹೋಗಿದ್ದಾಗ ಆಗಿದ್ದು ಕಹಿ ಅನುಭವ. ಆದರೆ, ಈಗ ಅವರ ಮನೆಯಲ್ಲಿಯೇ ಇರಲೆಂದು ಮಂಜುಳ ಹೊರಟಿದ್ದಳು. ಸ್ವತಃ ತಂದೆಯೇ ಬಿಟ್ಟು ಬರಲು ಹೊರಟಿದ್ದರು.


ರಾಮರಾಯರ ತಂಗಿ ಇಂದಿರ. ಬಡವಳಾದರೂ ಅಣ್ಣನ ಮನೆಗೆ ಎಂದಿಗೂ ಬರಿಗೈಯಲ್ಲಿ ಬಂದವಳಲ್ಲ. ಅಣ್ಣ-ಅತ್ತಿಗೆ ಮುಂದೆ ಭವಣೆಯನ್ನು ಹೇಳಿಕೊಳ್ಳುತ್ತಿದ್ದರೂ ಅದು ಸಾಂತ್ವನಕ್ಕಷ್ಟೇ. ಆಕೆಗೆ ಮೂವರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ಮೊದಲನೆಯವನು ಅಚ್ಯುತ ಹಾಗೂ ಕಡೆಯವನು ಆನಂದ. "ಅಚ್ಯುತನಿಗೆ ನಮ್ಮ ಮಂಜುನೆ ಹೆಂಡತಿ", "ಮಂಜು ನನ್ನ ಸೊಸೆ" ಎಂದು ಅಪ್ಯಾಯಮಾನದಿಂದ ಯಾವಾಗಲೂ ಹೇಳಿಕೊಳ್ಳುತ್ತಿದ್ದರು ಇಂದಿರಮ್ಮ. 


ಆದರೆ ಸರೋಜಮ್ಮನದ್ದು ವ್ಯವಹಾರಿಕವಾದ ನೋಟ ಹಾಗೂ ಮಾತುಗಳು. ಮುಂದೆ ನಿಧಾನವಾಗಿ ಇಂದಿರೆ ತನ್ನ ಗಂಡನ ಮನೆಯ ಕಷ್ಟಗಳನ್ನೆಲ್ಲ ಮೆಟ್ಟಿನಿಂತು ಅವರೆಲ್ಲರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಷ್ಟು ಸಲೀಸಾಗಿದ್ದಳು. ಇಂದಿರಮ್ಮ ಹಾಗೂ ಸರೋಜಮ್ಮನ ಸಂಬಂಧ ಹಾರ್ದಿಕವಾಗಿಯೇ ಇತ್ತು.


ಶಿಕ್ಷಕನಾಗಿದ್ದ ಆಕೆಯ ಮಗ ಅಚ್ಯುತನಿಗೆ ಇವಳನ್ನು ಕೊಡಬೇಕೆಂದು ಮೊದಲೇ ಮಾತಾಗಿದ್ದರೂ ಸದ್ಯಕ್ಕೆ ಆ ಮದುವೆ ಮುರಿದಂತಾಗಿತ್ತು. ಮದುವೆಯ ಮಾತು ಮುಂದಕ್ಕೆ ಹೋಗಿತ್ತು. ಅದಕ್ಕೆ ಕಾರಣ ಮಂಜುಳೆಯ ತಾಯಿಯೇ ಅಥವಾ ಇಂದಿರಮ್ಮನೇ ಓದಿ ನೋಡಿ. 


ಮಂಜುಳೆಗೆ ಕಮಲಮ್ಮನ ಮನೆಯಲ್ಲಿಯೇ ವಾಸ್ತವ್ಯಕ್ಕೆ ಸ್ಥಳ ಸಿಕ್ಕಿತ್ತು. ಆದರೆ, ಅವರ ಮನೆಯ ಅಡುಗೆ ಕೆಲಸವೆಲ್ಲವನ್ನೂ ಆಕೆ ಪೂರೈಸಬೇಕಿತ್ತು. ಅದಾದ ನಂತರ ಒಂದು ಶಾಲೆಯಲ್ಲಿ ಶಿಕ್ಷಕಿಯ ಕೆಲಸ. ಎಲ್. ಕೆ. ಜಿ ಯ ಶಿಕ್ಷಕಿಯಾಗಿ ಮಕ್ಕಳನ್ನು ನೋಡಿಕೊಳ್ಳುವ ಆಕೆ ಅಲ್ಲಿನ ಆಯಾ ಹೊನ್ನಮ್ಮನನ್ನು ಸರಿಪಡಿಸಬೇಕಿತ್ತು. ಇಂಗ್ಲಿಷ್ ನ ಮಾರ್ಕ್ಸ್ ಕಡಿಮೆ ಇದ್ದಿದ್ದರಿಂದ ಸಂಜೆ ಒಂದು ಗಂಟೆ ಡಾ. ಸಿಲ್ವಿಯ ಇಂಗ್ಲಿಷ್ ಕೋಚ್ ಕೊಡುತ್ತಿದ್ದರು. ಅದರಲ್ಲಿಯೂ ಮುಂದುವರಿಯಬೇಕಿತ್ತು. 


ಮಂಜುಳ ಕಮಲಮ್ಮನ ದಬ್ಬಾಳಿಕೆ, ಅಧಿಕಾರಶಾಹಿ ಮನೋಭಾವವನ್ನು ತಡೆದುಕೊಂಡರೂ ಆಕೆಯ ಮಗ ರಾಜೇಂದ್ರನ ನಿರ್ಭೀತ ಪುಂಡಾಟಕೆ, ಹಾಸ್ಯಕ್ಕೆ ಸಿಡಿಮಿಡಿಕೊಳ್ಳುತ್ತಿದ್ದಳು. ಆದರೂ.. ಅದೆಲ್ಲವನ್ನೂ ತಡೆದುಕೊಂಡು ತನ್ನ ಕೆಲಸವನ್ನು ಪೂರೈಸಿ, ಹೊನ್ನಮ್ಮನನ್ನು ಬದಲಾಯಿಸಿ ಶಾಲೆಯಲ್ಲಿ ಚಿಕ್ಕ ಮಕ್ಕಳೆಲ್ಲರ ಮೇಲ್ವಿಚಾರಣೆಯಲ್ಲಿ ಗೆದ್ದು ಅವರ ಪೋಷಕರು ಹಾಗೂ ಪ್ರಿನ್ಸಿಪಾಲರ ಮನ ಗೆದ್ದಳು. 


ಅಚ್ಚುತನಿಂದ ಬಂದಿದ್ದ ಕಾಗದ ಅವಳಿಗೆ ಆತನ ಮನಸ್ಥಿತಿಯನ್ನು ಮನದಟ್ಟು ಮಾಡಿಸಿತ್ತು. ಮನೆಯ ಗೃಹಪ್ರವೇಶಕ್ಕೆಂದು ಊರಿಗೆ ಹೋದಾಗ ಆಕೆಯ ತಾಯಿಯ ನಡೆ, ಸ್ವಾರ್ಥ ಆಕೆಯ ನಿಜವಾದ ಮುಖದರ್ಶನವನ್ನು ಮಾಡಿಸಿತ್ತು. ಅವರೆಡರ ಮುಂದೆ ಸದ್ಯಕ್ಕೆ ತಾನಿದ್ದ ಮನೆಯ ಸ್ಥಿತಿಯೇ ಉತ್ತಮವೆಂಬ ಭಾವನೆಯೂ ಬಂದಿತ್ತು. ಇಲ್ಲಿ ಮಂಜುಳೆಗೆ ಮಂಜುಳೆಯೇ ಪ್ರತಿಸ್ಪರ್ಧಿ. 


ಮಂಜುಳೆಯ ಶ್ರದ್ಧೆಯ ದುಡಿತ, ತಾಳ್ಮೆ ಜೊತೆಗೆ ಕಷ್ಟಸಹಿಷ್ಣತೆಯನ್ನು ಕಂಡು ಆಕೆಯನ್ನು ಬಿಟ್ಟುಕೊಡಲು ಶಾಲೆಯವರು ಸಿದ್ದರಿರಲಿಲ್ಲ. ಅವಳ ಕಥೆ ಗೊತ್ತಾಗಿ ಪ್ರಿನ್ಸಿಪಾಲ್ ಮಿಸ್ ಎಲಿಸಾ ಅಚ್ಯುತನಿಗೂ ಅದೇ ಶಾಲೆಯಲ್ಲಿ ಕೆಲಸ ಕೊಡಲು ಒಪ್ಪಿದ್ದರು. ಶಾಲೆಯ ಆವರಣದಲ್ಲಿಯೇ ಇದ್ದ ಬಾಡಿಗೆ ಮನೆ ಜೊತೆಗೆ ಪರಿಚಿತರೊಬ್ಬರ ಟ್ಯುಟೋರಿಯಲ್ ನಲ್ಲಿ ಮಂಜುಳಳಿಗೆ ಕೆಲಸವನ್ನೂ ಕೊಡಿಸುವೆನೆಂದು ಹೇಳಿದ್ದರು. 


ಇತ್ತ ಅಪಘಾತದಲ್ಲಿ ತನ್ನ ಕಾಲು ಮುರಿದುಕೊಂಡಿದ್ದ ಅಚ್ಯುತನ ವಿಚಾರ ಗೊತ್ತಾದಾಗ ಆತನಿಗೆ ಆಪರೇಷನ್ ಮಾಡಿಸಿದರೆ ಕಾಲು ಬರುತ್ತದೆ ಎಂದು ಗೊತ್ತಾಗಿತ್ತು. ಅದಕ್ಕೂ ಅವರ ಮನೆಯಲ್ಲಿ ಬಡತನ. ಅದೆಲ್ಲವನ್ನು ನಿಭಾಯಿಸಿ, ಯಾರ ಅಪ್ಪಣೆಗೂ ಕಾಯದೆ ಗಂಡಿನ ತಂದೆ-ತಾಯಿ, ತಮ್ಮನ ಉಪಸ್ಥಿತಿಯಲ್ಲಿ ಮದುವೆಯಾಗಿ ಶಾಲೆಯ ಕ್ವಾರ್ಟಸ್ ಮ ಪುಟ್ಟ ಮನೆಯಲ್ಲಿ ಸಂಸಾರ ಹೂಡಿದ್ದಳು ಮಂಜುಳ. 


ಇಷ್ಟಕ್ಕೇ ಆಕೆಯ ಕಷ್ಟದ ಪರಂಪರೆ ತೀರಿತೇ..?

ಇಲ್ಲ. ಹಾಗಾಗಲಿಲ್ಲ..! 

ಒಂದು ಮಜಲು ಮುಗಿದು, ಮತ್ತೊಂದು ಶುರುವಾಗಿತ್ತು ಅಷ್ಟೇ. 


ಅಚ್ಯುತನ ಆಪರೇಷನ್ ಮಾಡಿದ ಡಾಕ್ಟರ್ ಆತನಿಗೆ ನೀಡಿದ್ದ ಎಚ್ಚರಿಕೆ ಏನಿತ್ತು..?


ಮಂಜುಳಳ ತಾಯಿ ಸರೋಜಮ್ಮ ಮಗಳನ್ನು ನೋಡಲೆಂದು ಬಂದವರು ಆಡಿದ ಮಾತುಗಳು ಅಚ್ಯುತನ ಮೇಲೆ ಬೀರಿದ ಪರಿಣಾಮವೇನು..?


ಅಚ್ಯುತನ ತಾಯಿ ಆತನಿಂದ ಬಯಸುತ್ತಿದ್ದುದೇನು..? ರಾಜೇಂದ್ರ ಹಾಗೂ ಕಮಲಮ್ಮರಿಂದ ಮಂಜುಳಳಿಗೆ ಏನಾದರೂ ತೊಂದರೆಯಾಯಿತೇ..?


ಹಲವಾರು ಕಾರಣಗಳು ಸೇರಿ ಮಂಜುಳಾ ಹಾಗೂ ಅತ್ಯುತನ ದಾಂಪತ್ಯ ಜೀವನದಲ್ಲಿ ಅಪಸ್ವರ ಏಳುತ್ತದೆ. ಮುಂದೆ ಅಚ್ಚುತ ತನ್ನ ತಂದೆ-ತಾಯಿ, ತಮ್ಮನನ್ನು ತನ್ನ ಮನೆಗೆ ಮಂಜುಳಳ ಒಪ್ಪಿಗೆಯನ್ನೂ ಕೇಳದೆ ಇರಿಸಿಕೊಳ್ಳುತ್ತಾನೆ. ಆಗ ಮಂಜುಳಾಳ ಪರಿಸ್ಥಿತಿ ಹೇಗಿತ್ತು..?


ಮಂಜುಳಳಿಗೆ ಆಪ್ತರಾದ ಸುಧಾಕರ ಹಾಗೂ ಶಾಂತ ದಂಪತಿಗಳು ಆಕೆಗೆ ಪರಿಚಿತರಾಗಿದ್ದು ಹೇಗೆ..?


ಪರೋಪಕಾರ ಮಾಡಿದರೂ.. ತನ್ನ ಬದುಕನ್ನು ತಾನೇ ಕಟ್ಟಿಕೊಂಡರೂ.. ನಿಶ್ಚಿಂತೆಯಾಗಿರುವ ದಾರಿ ಸಿಕ್ಕದಾದಾಗ ಮಂಜುಳ ತಳೆದ ನಿರ್ಧಾರವೇನು..?


ಇಲ್ಲಿ "ಕ್ಷಮಿಸುವುದೇ ದೈವತ್ವ" ಎಂಬ ಮಾತು ಬರುತ್ತದೆ. ಕ್ಷಮೆ, ಸಹನೆ ಎಲ್ಲವನ್ನೂ ಮೀರಿದ ಹಂತ ತಲುಪಿದಾಗ ತನ್ನ ಸಂಸಾರವನ್ನು ಸರಿಪಡಿಸಿಕೊಳ್ಳಲು ಮಂಜುಳಾಳ ನಡೆ ಏನಿತ್ತು..? ತಿಳಿಯಲು ಓದಿ ಈ ಕಾದಂಬರಿಯನ್ನು.


ಈ ಕಾದಂಬರಿಯಲ್ಲಿ ಗೋಪಾಲಪ್ಪನ ಸಂಸಾರ ನನಗೆ ಆದರ್ಶ ಸಂಸಾರ ಎನ್ನಿಸಿತು. ಹೆಂಡತಿಯನ್ನು ಮನಸಾರೆ ಪ್ರೀತಿಸಿ, ತಂದೆ-ತಾಯಿಯನ್ನು ಧರ್ಮೋಚಿತವಾಗಿ ಪಾಲಿಸಿದ ಗೋಪಾಲಪ್ಪ, ತಾಯಿ ದುಷ್ಟಳಾಗಿ ಸೊಸೆಯನ್ನು ಹಿಂಸಿಸಿದರೆ ತಾಯಿಗೆ ಬುದ್ಧಿ ಹೇಳಿ ಕೈಹಿಡಿದ ಹೆಂಡತಿಗೆ ರಕ್ಷಣೆ ನೀಡುವ ಹೊಣಿಗಾರಿಕೆಯನ್ನು ಹೊತ್ತ ಗೋಪಾಲಪ್ಪ, ಮುಪ್ಪಿನ ದಿನಗಳಲ್ಲಿ ತಾವೇ ಅವಲಂಬಿಗಳು ಎಂದು ಗೊತ್ತಾದಾಗ ಸೊಸೆಯನ್ನು ಮನೆಯ ರಾಣಿಯಂತೆ ಕಂಡಾಗಲೂ ಅವರನ್ನು ನಿಕೃಷ್ಟವಾಗಿ ಕಾಣದ ಗೋಪಾಲಪ್ಪ ಆದರ್ಶವಾಗುತ್ತಾನೆ. ಕಾದಂಬರಿಯಲ್ಲಿ ಎರಡರಿಂದ ಮೂರು ಪುಟಗಳಲ್ಲಿ ಬರುವ ಗೋಪಾಲಪ್ಪನ ಸಂಸಾರ ಅಚ್ಚಳಿಯದಂತೆ ಮನಸ್ಸಿನಲ್ಲಿ ದಾಖಲಾಗುತ್ತದೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ