ಪುಸ್ತಕದ ಶೀರ್ಷಿಕೆ : ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ
(ಮಾಯಾ ಏಂಜೆಲೊ ಅವರ ಆತ್ಮಕತೆಯ ಅನುವಾದ)
ಲೇಖಕರು : ಎಂ. ಆರ್. ಕಮಲ
ಪ್ರಕಾಶಕರು : ಕಥನ ಪ್ರಕಾಶನ
ಪ್ರಥಮ ಮುದ್ರಣ : 2007
ಮರು ಮುದ್ರಣ : 2009 ( ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 186
ಬೆಲೆ : 80 ರೂ.
ಆಫ್ರಿಕನ್ - ಅಮೆರಿಕನ್ ಮಹಿಳಾ ಸಾಹಿತ್ಯವನ್ನು ಪರಿಚಯಿಸುವ ನಿಟ್ಟಿನಲ್ಲಿ ಎಂ. ಆರ್. ಕಮಲ ಅವರು 'ಕಪ್ಪು ಹಕ್ಕಿಯ ಬೆಳಕಿನ ಹಾಡು' ಮಾಲಿಕೆಯನ್ನು ಹೊರತಂದಿದ್ದಾರೆ. ಕತ್ತಲ ಹೂವಿನ ಹಾಡು, ಕಪ್ಪು ಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ, ನನ್ನ ಕಥೆ ಈ ಮಾಲಿಕೆಯ ಇತರ ಪುಸ್ತಕಗಳು.
ಮಾಯಾ ಏಂಜೆಲೊ ಅವರ 'ಐ ನೋ ವೈ ದ ಕೇಜ್ಡ್ ಬರ್ಡ್ ಸಿಂಗ್ಸ್' ಆತ್ಮಕತೆಯ ಅನುವಾದ, ಮಾಯಾರ ಒಂದಿಷ್ಟು ಕವಿತೆಗಳು ಹಾಗೂ ಅವರ ಕೆಲ ಸಂದರ್ಶನಗಳನ್ನು ಈ ಪುಸ್ತಕದಲ್ಲಿ ಓದಬಹುದಾಗಿದೆ. 2007 ರ ಕರ್ನಾಟಕ ಅನುವಾದ ಆಕಾಡೆಮಿ ಪ್ರಶಸ್ತಿ ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗಳು ದೊರೆತಿವೆ.
ಕಪ್ಪು ಜನಾಂಗದ ಮಹಿಳೆಯೊಬ್ಬಳು ತನ್ನ ನೋವುಗಳನ್ನು ಮೆಟ್ಟಿ ನಿಂತ, ಅವಮಾನಗಳನ್ನು ತನ್ನದೇ ರೀತಿಯಲ್ಲಿ ಧಿಕ್ಕರಿಸಿದ, ಬದುಕು ಕಟ್ಟಿಕೊಂಡು ಮಾದರಿಯಾದ ಬಗೆ ಮಾತ್ರವಲ್ಲದೆ, ಈಕೆಯ ಅದ್ಭುತ ಕಾವ್ಯಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಆಸಕ್ತಿ ಮೂಡಿಸುವ ಕೆಲ ಅಂಶಗಳನ್ನು ಉಲ್ಲೇಖಿಸುವೆ. ಪೂರ್ತಿ ಪುಸ್ತಕವನ್ನು ಓದಿಯೇ ಸವಿಯಬೇಕು.
ಮಾಯಾ ಎಂಬ ಹೆಸರಿಗೂ ಮುನ್ನ ಮಾರ್ಗರೇಟ್ ಜಾನ್ಸನ್ ಆಗಿದ್ದವರು. ತನ್ನಣ್ಣ ಬೈಲಿ ಜಾನ್ ಸನ್ ಜೊತೆಗೆ ಮೂರು ವರ್ಷವಿದ್ದಾಗಲೇ ಕ್ಯಾಲಿಫೋರ್ನಿಯಾ ಲಾಂಗ್ ಬೀಚ್ ನಿಂದ ಆರ್ಕಾನ್ಸ್ ನ ಸ್ಟ್ಯಾಂಪ್ಸ್ ನಲ್ಲಿದ್ದ ಅಜ್ಜಿ (ತಂದೆಯ ತಾಯಿ) ಮನೆಗೆ ಬರಬೇಕಾಗುತ್ತದೆ. ಇದಕ್ಕೆ ಕಾರಣ ತಂದೆ-ತಾಯಿಯ ವಿಚ್ಛೇದನ. ಅಜ್ಜಿ ಶ್ರೀಮತಿ ಆ್ಯನಿ ಹೆಂಡರ್ ಸನ್ ಹಾಗೂ ಚಿಕ್ಕಪ್ಪ ವಿಲ್ಲಿಯ ಜೊತೆಗೆ ಬಾಲ್ಯದ ದಿನಗಳು ಶುರುವಾಗುತ್ತವೆ.
ಅಷ್ಟಕ್ಕೂ ಅಜ್ಜಿಯ ಮನೆಗೆ ಬಂದದ್ದೇ ಸಾಹಸಗಾಥೆಯಂತಿದೆ. ಸುಮಾರು ಇಪ್ಪತ್ತೈದು ವರ್ಷಗಳಿಂದ ಅಂಗಡಿಯೊಂದನ್ನು ನಡೆಸುತ್ತಿದ್ದ ಅಜ್ಜಿಯ ಹಾಗೂ ಚಿಕ್ಕಪ್ಪನ ಒಡನಾಟ, ವ್ಯಾಪಾರ - ವ್ಯವಹಾರ, ಅಂಗಡಿಯ ಸುತ್ತಮುತ್ತಲಿನ ಕೂಲಿಕಾರರ ಮಾತು, ಕಿರುಚಾಟ, ನಗು, ಅಜ್ಜಿಯ ಹಾಡುಗಳು ಇವೆಲ್ಲವೂ ಬಾಲ್ಯವನ್ನು ಸಮೃದ್ದವಾಗಿಸಿದರೂ.. ನಿಗ್ರೋಗಳ ದಯನೀಯ ಪರಿಸ್ಥಿತಿ ಮರುಕ ಹಾಗೂ ಭಯ ಹುಟ್ಟಿಸುತ್ತದೆ.
ಮಾರ್ಗರೇಟ್ ಬಾಲ್ಯದಲ್ಲಿ ಹೆಚ್ಚಿನಂಶ ಆವರಿಸಿದ್ದು ಅಣ್ಣ ಬೈಲಿ. ಬೈಲಿಯ ದಿನಚರಿ, ಚಾಕಚಕ್ಯತೆ, ಮಾರ್ಗರೇಟ್ ಳ ರೂಪವನ್ನು ಟೀಕಿಸಿದವರಿಗೆ ಬೈಲಿ ಕೊಡುತ್ತಿದ್ದ ಪ್ರತ್ಯುತ್ತರ, ಇಬ್ಬರ ವಿಭಿನ್ನ ಓದು ಎಲ್ಲವನ್ನೂ ಹೇಳುತ್ತಾರೆ.
ಅಜ್ಜಿ ಕೊಳಕು ಮತ್ತು ನಿರ್ಲಜ್ಜತೆಯ ದ್ವೇಷಿ. ಓದುವುದರ ಕುರಿತು ಅಜ್ಜಿಯ ಬುದ್ಧಿಮಾತು, ಆಕೆಯೇ ಹೊಲೆದ ಬಟ್ಟೆಗಳು, ಆಕೆಗಿದ್ದ ಗೌರವಯುತ ಸ್ಥಾನಮಾನ, ಸ್ಟ್ಯಾಂಪ್ಸ್ ನಲ್ಲಿ ಮಿಸೆಸ್ ಎಂದು ಕರೆಸಿಕೊಳ್ಳುತ್ತಿದ್ದ ಒಬ್ಬಳೇ ಹೆಣ್ಣುಮಗಳು. ಹೆಳವನಾಗಿದ್ದ ವಿಲ್ಲಿ ಚಿಕ್ಕಪ್ಪನನ್ನು ಪೋಷಿಸುತ್ತಿದ್ದ ರೀತಿ ಗೌರವ ಹುಟ್ಟಿಸುತ್ತವೆ. ಆರ್ಥಿಕ ಇಳಿತದ ಸ್ಥಿತಿ ' ಡಿಪ್ರೆಶನ್ ' ನಲ್ಲಿ ಆಕೆಯ ವ್ಯಾವಹಾರಿಕ ಬುದ್ಧಿವಂತಿಕೆಯ ನಡೆ ಎಲ್ಲವೂ ಪ್ರಭಾವಿಸುವುದನ್ನು ಕಾಣಬಹುದಾಗಿದೆ.
"ಸ್ಟ್ಯಾಂಪ್ಸ್ ನಲ್ಲಿ ಸಂಪೂರ್ಣ ಪ್ರತ್ಯೇಕತೆಯನ್ನು ಪಾಲಿಸುತ್ತಿದ್ದರಿಂದ ಅದೆಷ್ಟೋ ಕಪ್ಪು ಮಕ್ಕಳು ಅವರನ್ನು ನೋಡಿಯೇ ಇರಲಿಲ್ಲ. ಬಿಳಿಯರು ನೋಡಲು ಮಾತ್ರ ಭಿನ್ನವಾಗಿದ್ದಷ್ಟೇ ಭಯಕ್ಕೆ ಕಾರಣವಲ್ಲ.. ಅಧಿಕಾರ, ದರ್ಪ, ದುಡ್ಡು ಎಲ್ಲವೂ.." ಎಂಬುದು ವರ್ಣಭೇದ ನೀತಿಯ ದರ್ಶನ ಮಾಡಿಸುತ್ತದೆ.
ಅಪ್ಪ-ಅಮ್ಮ ಸತ್ತೇ ಹೋಗಿದ್ದಾರೆ ಎಂದುಕೊಂಡಿದ್ದ ಮಕ್ಕಳಿಬ್ಬರಿಗೂ ಕ್ರಿಸ್ ಮಸ್ ಉಡುಗೊರೆ ಜೊತೆಗೆ ಬಂದ ಅಪ್ಪ ಬೈಲಿ ಕ್ಯಾಲಿಫೋರ್ನಿಯಾಗೆ ಹೋಗುತ್ತಿದ್ದೇವೆ ಎಂದು ತಿಳಿಸಿದಾಗ "ನಡೆಯುತ್ತಿದ್ದೇನೆ ಎಂಬ ಭಾವಕ್ಕಿಂತ ನೆಗೆಯುತ್ತಿದ್ದೇನೆ" ಎಂಬ ಭಾವ ತುಂಬಿಕೊಂಡಿದ್ದವಳಿಗೆ ಅಮ್ಮನ ಮನೆಯಲ್ಲಿ ಬಿಟ್ಟು ಹೋದಾಗ ದುಃಖವಾಗಲಿ, ಸಂತೋಷವಾಗಲಿ ಇರಲಿಲ್ಲ. "ಆತ ನನಗೆ ಅಪರಿಚಿತನಂತೆ ಕಂಡಿದ್ದ ಮತ್ತು ಅಪರಿಚಿತರ ಮನೆಯಲ್ಲಿ ಬಿಟ್ಟು ಹೋಗಿದ್ದ." ಎನ್ನುವ ಮಾತು ತಂದೆ-ತಾಯಿಯ ಆಪ್ತತೆಯೇ ಇಲ್ಲದ ಮಾಯಾರ ಮಾತಿನಲ್ಲಿ ಕಾಣುತ್ತದೆ.
ಸೇಂಟ್ ಲೂಯಿಸ್ ನ ಅಮ್ಮನ ಮನೆಯಲ್ಲಿ ಬೇಕ್ಸ್ ಟರ್ ಅಜ್ಜಿ, ಸೋದರ ಮಾವಂದಿರಾದ ಟುಟ್ಟಿ, ಟಾಮ್, ಇರಾ ಅವರುಗಳ ಕ್ರೂರತೆ, ಆಪ್ತ ಮಾವನಾದ ಟಾಮಿ, ಅಮ್ಮನ ಸ್ನೇಹಿತ ಮಿಸ್ಟರ್ ಫ್ರೀಮನ್, ಅಲ್ಲಿನ ಶಾಲೆಯಲ್ಲಿನ ಕಲಿಕೆ, ಆಹಾರ ಪದ್ಧತಿಗಳಲ್ಲಿನ ವ್ಯತ್ಯಾಸ ಎಲ್ಲವನ್ನು ಹೇಳುತ್ತಲೇ.. ರೀಟಿ ತನ್ನ ಮೇಲಾದ ಅತ್ಯಾಚಾರದ ಕುರಿತು ಹೇಳುವಾಗ ತಲ್ಲಣವಾಗುತ್ತದೆ. ಅರಿಯದ ವಯಸ್ಸಿನಲ್ಲಿ ಆದ ಆ ಘಟನೆ, ಆ ಘಟನೆಯ ಹಿಂದಿನ ಕೈ ನ್ಯಾಯಾಲಯದ ವಾದ-ಪ್ರತಿವಾದಗಳು ವಿಚಲಿತಗೊಳಿಸಿದ ಬಗೆ ಹೇಗಿತ್ತೆಂದರೆ ಆಕೆ ಮೌನವಾಗಿರಲು ಶುರು ಮಾಡಿದ್ದಳು. ಅಷ್ಟಕ್ಕೂ ಅದಕ್ಕೆಲ್ಲ ಕಾರಣ ಯಾರು ಓದಿ ನೋಡಿ.
"ನಾನು ಮೌನವಾಗಿರುವುದನ್ನು ಕಲಿಯಬೇಕೆಂದರೆ ಜಿಗಣೆಗಂತೆ ಸದ್ದು ಗಳಿಗೆ ಅಂಟಿಕೊಳ್ಳಬೇಕು. ನಾನೀಗ ಪ್ರಕೃತಿಯ ಪ್ರತಿ ಸದ್ದನ್ನು ಆಲಿಸಲಾರಂಭಿಸಿದೆ. ಅದೆಲ್ಲವನ್ನು ಒಂದೊಂದಾಗಿ ನನ್ನ ಕಿವಿಯಲ್ಲಿ ತುಂಬಿಕೊಂಡೆ. ಹೊರಗಿನ ಪ್ರಪಂಚ ಸ್ಥಬ್ಧವಾದಂತೆ ತೋರಿತು. ಮನೆಯ ಛಾವಣಿಯೇ ಹಾರಿಹೋಗುವಂತೆ ನಗುತ್ತಿದ್ದವರ ಮಧ್ಯೆ ಕಲ್ಲಿನಂತೆ ನಿಂತುಬಿಡುತ್ತಿದ್ದೆ. ಎಲ್ಲ ಸದ್ದುಗಳನ್ನು ಕಿವಿಯಲ್ಲಿ ತುಂಬಿಕೊಂಡ ಮೇಲೆ ಅಲ್ಲಿ ಮೌನ ಆವರಿಸಿದಂತೆ ತೋರುತ್ತಿತ್ತು." ಎಂಬ ಮನಸ್ಥಿತಿಯಲ್ಲಿದ್ದ ರೀಟಿ.
ಅಜ್ಜಿಯೇ ಸ್ಟ್ಯಾಂಪ್ ಗೆ ಕರೆಸಿಕೊಂಡಳೊ ಅಥವಾ ಮಾಯಾಳ ಮೌನವೇ ಸೇಂಟ್ ಲೂಯಿಸ್ ಕುಟುಂಬದಲ್ಲಿ ಅಸಹನೆ ಮೂಡಿಸಿತೋ ತಿಳಿಯದು ಎನ್ನುತ್ತಲೇ ಬೈಲಿಗೆ ಬೇಜಾರಾಗಿದೆ ಎಂಬುದನ್ನು ಬಿಟ್ಟರೆ ನಾನು ತಲೆಕೆಡಿಸಿಕೊಳ್ಳಲಿಲ್ಲ ಎನ್ನುತ್ತಾ ಮತ್ತೆ ಅಜ್ಜಿಯನ್ನು ಸೇರುತ್ತಾರೆ.
ಮರಳಿ ಬಂದ ನಂತರ ಆಕೆ ಮೇಲೆ ಪ್ರಭಾವ ಬಿರಿದ್ದು ಮಿಸೆಸ್ ಫ್ಲವರ್ಸ್.
"ನಿನ್ನನ್ನು ಮಾತಾಡೋ ಹಾಗೆ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ, ಮನುಷ್ಯ ತನ್ನ ಭಾವನೆಗಳನ್ನು ಹಂಚಿಕೊಳ್ಳೋಕೆ ಭಾಷೆ ಬೇಕೇಬೇಕು ಅನ್ನೋದನ್ನು ಜ್ಞಾಪಕ ಇಟ್ಟುಕೋ. ಪ್ರಾಣಿಗಳಿಗಿಂತ ಮನುಷ್ಯ ವಿಭಿನ್ನವಾಗಿರೋದೇ ತನ್ನ ವಾಕ್ ಶಕ್ತಿಯಿಂದ ನ" ಎನ್ನುತ್ತಲೇ 'ಟೇಲ್ ಆಫ್ ಟು ಸಿಟೀಸ್' ಹಾಗೂ ಕವನಗಳ ರುಚಿ ಹತ್ತಿಸಿದ ಫ್ಲವರ್ಸ್ ನಮಗೂ ಆಪ್ತವಾಗುತ್ತಾರೆ.
10ನೇ ವಯಸ್ಸಿನಲ್ಲಿ ಬಿಳಿಯ ಹೆಂಗಸು ಮಿಸೆಸ್ ವಯೋಲ ಕ್ಯುಲಿಮನ್ ಮನೆ ಪಾಠಶಾಲೆಯಾಯಿತು. ಆದರೆ, ಅಲ್ಲಿ ತನ್ನ ಹೆಸರಿನ ಅಸ್ತಿತ್ವವನ್ನೇ ಬದಲಿಸಲು ಹೊರಟಾಗ ಮಾರ್ಗರೇಟ್ ತನ್ನದೇ ರೀತಿಯಲ್ಲಿ ಪ್ರತಿಭಟಿಸಿದ್ದೇಗೆ ಓದಿ ನೋಡಿ.
ಪ್ರಪಂಚದಲ್ಲೆಲ್ಲಾ ಪ್ರಸಿದ್ಧನಾದ ಹೆವಿ ವೈಟ್ ಚಾಂಪಿಯನ್ ಜೋ ಲೂಯಿಸ್ ವಿಶ್ವ ಚಾಂಪಿಯನ್ ಆದ ಸಂದರ್ಭದಲ್ಲಿ ಜನರ ನಿರೀಕ್ಷೆಗಳೇನಿದ್ದವು? ಆತನ ಗೆಲುವನ್ನು ಎಲ್ಲರೂ ಸಂಭ್ರಮಿಸಿದ ಬಗೆ ಹೇಗೆ..? "ವಿಶ್ವ ಚಾಂಪಿಯನ್ ಒಬ್ಬ ಕಪ್ಪು ಹುಡುಗ. ಯಾರೋ ಕಪ್ಪು ತಾಯಿಯೊಬ್ಬಳ ಮಗ." ಆದರೆ, ಆತ ಕಪ್ಪು ಜನರಿಗೆ ನೀಡಿದ ಶಕ್ತಿ ಹೇಗಿತ್ತು..?
'ಜೇನ್ ಐರ್' ಳ ನೆನಪು ಮೂಡಿಸಿದ ಲೂಯಿಸಿ ಆಪ್ತ ಹಾಗೂ ಏಕೈಕ ಗೆಳತಿಯಾದ ನೆನಪುಗಳು ಆಹ್ಲಾದಮಯ.
ಗ್ರಾಜುಯೇಷನ್ ದಿನ ಸಂಭ್ರಮದಿಂದಲೇ ಇದ್ದಳಾದರೂ ಆ ಸಮಾರಂಭ ಮುಗಿಯುವ ಹೊತ್ತಿಗೆ ಆದ ಜ್ಞಾನೋದಯವೇನು? ಅಷ್ಟಕ್ಕೂ ಅಲ್ಲಿ ನಡೆದ ಯಾವ ಘಟನೆ ಮಾರ್ಗರೇಟ್ ಳನ್ನು ಹೆಚ್ಚು ಯೋಚಿಸುವಂತೆ ಮಾಡಿತು..?
ಹೀಗೆ ಅಲ್ಲಿ ನಡೆದ ಹಲವಾರು ಘಟನೆಗಳು ಅದರಲ್ಲಿಯೂ ಹಲ್ಲು ನೋವೆಂದು ಹೋದಾಗ ನಿಗ್ರೋಗಳಿಗೆ ಚಿಕಿತ್ಸೆ ಕೊಡುವುದಿಲ್ಲ ಎನ್ನುವ ಡಾಕ್ಟರ್.. ಸ್ಪಷ್ಟವಾಗಿ "ನಾನು ನಾಯಿ ಬಾಯಲ್ಲಿ ಬೇಕಾದರೂ ಕೈ ಇಡ್ತೀನಿ. ಆದರೆ, ನಿಗ್ರೋ ಬಾಯಲ್ಲಿ ಅಲ್ಲ" ಎನ್ನುವ ಮಾತು ಕಪ್ಪು ಜನರ ನಿಕೃಷ್ಟ ಸ್ಥಿತಿಯನ್ನು ತೋರುತ್ತದೆ.
ಮತ್ತೆ ಅಮ್ಮನೊಂದಿಗೆ ಫ್ಯಾನ್ ಫ್ರಾನ್ಸಿಸ್ಕೊದಲ್ಲಿ ವಾಸಿಸುವ ದಿನಗಳು, ಅಜ್ಜಿ ಆಕೆ ಹಾಗೂ ಬೈಲಿಯನ್ನು ಪೋಷಕರ ಬಳಿ ಕಳಿಸಿದ್ದೇಕೆ..? ಅಪ್ಪನ ಕುಟುಂಬದೊಂದಿಗಿನ ಕ್ಯಾಲಿಫೋರ್ನಿಯಾದ ದಿನಗಳು ಹೇಗಿದ್ದವು..? ಕ್ಲಿಡೆಲ್ ಡ್ಯಾಡಿಯೊಟ್ಟಿಗೆ ಬೆಳೆದ ಆಪ್ತತೆ ಹೇಗಿತ್ತು
"ಪ್ರತಿ ಮನುಷ್ಯನು ಬೆಚ್ಚಗಿನ ಗೂಡಿಂದ ಆಚೆಗೆ ಬಂದು ಸಮುದ್ರಕ್ಕೆ ಬೀಳಬೇಕು." ಎನ್ನುವ ಅಮ್ಮನ ಆಲೋಚನೆಯಂತೆ ಬೈಲಿ ಹೊರಟದ್ದೆಲ್ಲಿಗೆ..? ಮುಂದೆ ಮಾಯಾಳ ಬದುಕು ಬದಲಾದ ಬಗೆ ಹೇಗಿತ್ತು..? ತಪ್ಪು-ಸರಿಗಳಾಚೆ, ಮೇಲು-ಕೀಳನ್ನು ಎದುರಿಸಿ ಗಟ್ಟಿಯಾಗಿ ನಿಂತ ಮಾಯಾ ಏಂಜೆಲೊ ಬದುಕನ್ನು ಓದಿ ನೋಡಿ.
*****************
ಮಾಯಾ ಅವರ ಕವಿತೆಗಳಲ್ಲಿ ಕಾಡುವ ಕೆಲ ಸಾಲುಗಳು :
ಇತಿಹಾಸದ ಪುಟಗಳಲ್ಲಿ ನೀ ನನ್ನ ತುಂಬಬಹುದು
ನಿನ್ನ ಕಹಿ ಮಾತುಗಳಿಂದ, ತಿರುಚಿದ ಸತ್ಯಗಳಿಂದ
ಮಣ್ಣಂತೆ ನೀ ನನ್ನ ತುಳಿಯಬಹುದು
ಆದರೂ, ಧೂಳ ಕಣವಾಗಿ ನಾ ಮೇಲೇಳುತ್ತೇನೆ
( ...... ಆದರೂ ಮತ್ತೆ ನಾನು ಮೇಲೇಳುತ್ತೇನೆ ಕವಿತೆಯಿಂದ)
**********************
ಎಲ್ಲ ಒಗಟುಗಳು ಒಂಟಿ
ಒಂಟಿತನವೆಲ್ಲವೂ ಯಾತನೆ
ನಾನಿಲ್ಲಿ ಹಂಚಿಕೊಂಡಿದ್ದು
ಒಂದಿಷ್ಟನ್ನೆ
(ಸಂಭಾವಿತ ಹೆಣ್ಣು ನೊಂದು ನುಡಿಯುತ್ತಾಳೆ ಕವಿತೆಯಿಂದ)
*********************
"ನನಗೆ ನಗದೇ ಇರೋ ಜನಗಳ ಮಧ್ಯೆ ಉಸಿರು ಕಟ್ಟಿದಂತಿರುತ್ತೆ. ನಗದೇ ಇರುವಂತಹದ್ದೇನಾಗಿರುತ್ತೆ ಅನ್ನೋದೆ ಆರ್ಥವಾಗೋದಿಲ್ಲ. ನಮ್ಮ ಎಲ್ಲ ಕಾಯಿಲೆಗಳಿಗೂ ನಿಜವಾದ ಔಷಧಿಯೆಂದರೆ ನಗುವೇ. ಮನಸ್ಸು, ಆತ್ಮ, ದೇಹಕ್ಕೆ ನಗುವಿನ ಅವಶ್ಯಕತೆಯಿದೆ."
( ಬೆಲ್ ಹುಕ್ಸ್, ಮೆಕ್ ಲಾಯ್ಡ್ ಅವರು ಮಾಡಿದ ಸಂದರ್ಶನದಲ್ಲಿ ಮಾಯಾ ಏಂಜೆಲೊ ಅವರ ಮಾತುಗಳು)
*********************
ಬಿಬಿಸಿಐ ಸಂದರ್ಶನದಲ್ಲಿ ಮಾಯಾ ಅವರಿಗೆ ಹೊಸ ಜನಾಂಗಕ್ಕೆ ಕಿವಿಮಾತುಗಳನ್ನು ಕೇಳಿದಾಗ ಅವರ ಮಾತುಗಳು ಇಂತಿವೆ.
"ಜೀವನದಲ್ಲಿ ಸೋಲಿನೊಂದಿಗೆ ಸೆಣೆಸಬೇಕೇ ಹೊರತು ಸೋತಿದ್ದೀನಿ ಅಂದುಕೊಳ್ಳಬಾರದು. ಬದುಕಿನಲ್ಲಿ ನಡೆಯುವ ಘಟನೆಗಳು ಮನುಷ್ಯರನ್ನು ಬದಲಿಸಬೇಕು, ಸೋತು ಸುಣ್ಣವಾಗಿಸಬಾರದು. ನಮ್ಮೆಲ್ಲರಲ್ಲೂ ಅಮೂಲ್ಯವಾದುದ್ದೇನೋ ಇದೆ. ಅದನ್ನು ಸಂರಕ್ಷಿಸಿಕೊಳ್ಳಬೇಕು. ಯಾರಿಗೂ ಇನ್ನೊಬ್ಬರ ಶಾಂತಿಯನ್ನು ಕದಡುವ ಹಕ್ಕಿಲ್ಲ. ಯಾರ ಮೇಲೂ ಯುದ್ದಕ್ಕೆ ನಿಲ್ಲುವ ಹಕ್ಕಿಲ್ಲ. 'ನಾನು ಎಲ್ಲರಂತೆ ಒಬ್ಬ ಮನುಷ್ಯ. ನನಗಿಂತ ಮೇಲಾಗಲಿ, ಕೀಳಾಗಲಿ ಇರಲು ಸಾಧ್ಯವಿಲ್ಲ' ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
*******************
ಮತ್ತೊಂದು ಸಂದರ್ಶನದಲ್ಲಿ "ಮಕ್ಕಳಿಗೆ ಓದಿನ ಪ್ರೀತಿಯನ್ನು ಕಲಿಸೋದು ಹೇಗೆ?" ಎಂಬ ಪ್ರಶ್ನೆಗೆ
"ಅವರಿಗೆ ಮೊದಲಿಗೆ ಕವಿತೆಯ ಬಗ್ಗೆ ಪ್ರೀತಿ ಬೆಳೆಸಬೇಕು. ಅದಕ್ಕೆ ಮೊದಲು ಧ್ವನಿಯನ್ನು, ಭಾಷೆಯನ್ನು, ಕಥೆಗಳನ್ನು ಪ್ರೀತಿಸುವುದನ್ನು ಕಲಿಸಬೇಕು. ಮಕ್ಕಳಿಗೆ ಪ್ರತೀ ರಾತ್ರಿ ಏನನ್ನಾದರೂ ಓದಿ ಹೇಳ್ತಾ ಇದ್ದರೆ ಅವರಿಗೆ ಓದೋದು ಅಭ್ಯಾಸವಾಗಿಬಿಡುತ್ತೆ. ಅವರು ನಂಗಿವತ್ತು ಓದೋದು ಇಷ್ಟವಿಲ್ಲ ಎಂದರೂ ಅವರ ಮುಂದೆ ಒಂದು ಪುಸ್ತಕ ಹಿಡೀಬೇಕು. ಈಗಾಗಲೇ ಓದುವ ಹುಚ್ಚನ್ನು ಬೆಳೆಸಿರ್ತೀವಲ್ಲ. ಅವರು ತಕ್ಷಣ ಪುಸ್ತಕ ತಗೊಳ್ತಾರೆ."
"ಅದನ್ನು ಯಾವಾಗ ಶುರು ಮಾಡಬೇಕು ?"
"ಗರ್ಭದಲ್ಲಿದ್ದಾಗಲೇ. ಹುಟ್ಟಿದ ಮೇಲೆಯೂ ಹಾಡೋದನ್ನು, ಮಾತಾಡೋದನ್ನು ಮತ್ತು ಅವರೊಂದಿಗೆ ನಗುವುದನ್ನು ಮುಂದುವರಿಸಬೇಕು."
ಹೀಗೆ ಹಲವಾರು ಚೆಂದದ ಪ್ರಶ್ನೆಗಳಿಗೆ ಸೊಗಸಾದ ಉತ್ತರಗಳನ್ನು ನೀಡುವುದನ್ನು ಕಾಣಬಹುದು.
ಒಂದು ಓದು ಬದುಕಿಗೆ ಹಾಗೂ ಮತ್ತೊಂದು ಓದಿಗೆ ದಾರಿದೀಪವಾಗುವಂತೆ ಈ ಪುಸ್ತಕ ಓದಿದ ನಂತರ ಈ ಸರಣಿಯ ಬೇರೆ ಪುಸ್ತಕಗಳನ್ನೂ ಓದುವ ಆಸಕ್ತಿ ಮೂಡಿದೆ.
ಚೆಂದದ ಅನುವಾದದಿಂದ ಆಫ್ರಿಕನ್ - ಅಮೆರಿಕನ್ ಮಹಿಳಾ ಸಾಹಿತ್ಯವನ್ನು ಪರಿಚಯಿಸಿದ ಕಮಲ ಮೇಡಂಗೆ ಧನ್ಯವಾದಗಳು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ