ಭಾನುವಾರ, ಏಪ್ರಿಲ್ 26, 2026

ಆತ್ಮಸಖಿ (ಪುಸ್ತಕ ಯಾನ - 421)


ಪುಸ್ತಕದ ಶೀರ್ಷಿಕೆ : ಆತ್ಮಸಖಿ 

ಲೇಖಕರು : ಸವಿತಾ ಮಾಧವ ಶಾಸ್ತ್ರಿ, ಗುಂಡ್ಮಿ

ಪ್ರಕಾಶಕರು : ನ್ಯೂ ವೇವ್ ಬುಕ್ಸ್

ಪ್ರಥಮ ಮುದ್ರಣ : 2025

ಪುಟಗಳು : 148

ಬೆಲೆ : 170 ರೂ.


ಇದು ಲೇಖಕಿ ಸವಿತಾ ಮಾಧವ ಶಾಸ್ತ್ರಿ ಅವರ ಮೂರನೆಯ ಪುಸ್ತಕ. ಎರಡನೆಯ ಕಥಾ ಸಂಕಲನ. ಇವರ ಮತ್ತೆರಡು ಪುಸ್ತಕಗಳು ಅರುಂಧತಿ ಎಂಬ ಕಥಾಸಂಕಲನ ಮತ್ತು ನೀರ್ ದೋಸೆ ಎಂಬ ಪ್ರಬಂಧ ಸಂಕಲನ.


ಈ ಕಥಾ ಸಂಕಲನದಲ್ಲಿ ಒಟ್ಟು 15 ಕಥೆಗಳಿವೆ.


ಮೋಹದ ಹೆಂಡತಿ ತೀರಿದ ಬಳಿಕ... : ಹೆಂಡತಿ ಇರುವವರೆಗೂ ಮಗ ಅಥವಾ ಸೊಸೆಯ ಮೇಲೆ ಯಾವುದಕ್ಕೂ ಅವಲಂಬಿತವಾಗಿಲ್ಲದಿರುವವರು ಹೆಂಡತಿ ತೀರಿಕೊಂಡ ನಂತರ ಮಗ-ಸೊಸೆಯ ನಿಜಬಣ್ಣವನ್ನು ಅರಿಯುತ್ತಿದ್ದರು. ಮೊದಲೆಲ್ಲಾ ಮನೆಯಲ್ಲಿ ಅವರ ಗೌರವಕ್ಕೆ ಸ್ಥಾನಮಾನಕ್ಕೆ ಧಕ್ಕೆ ಬರದಂತೆ ಎಲ್ಲರೂ ನಡೆದುಕೊಳ್ಳುತ್ತಿದ್ದಕ್ಕೆ ಕಾರಣ ತನ್ನ ಪ್ರತಿಷ್ಠೆ, ಈ ಬಂಗಲೆ, ಸಂಪತ್ತು ಎಂಬ ಭ್ರಮೆಯಲ್ಲಿದ್ದವರಿಗೆ ಈಗ ಅದಕ್ಕೆ ಕಾರಣ ಹೆಂಡತಿ ಎಂಬುದು ಅರಿವಾಗಿದ್ದ ಸಂದರ್ಭ. ನರಹರಿರಾಯರಿಗೆ ಈ ಸಂದರ್ಭದಲ್ಲಿ ಅರಿವಾದ ಸತ್ಯ ಯಾವ ರೀತಿ ನಡೆದುಕೊಳ್ಳುವಂತೆ ಮಾಡುತ್ತದೆ..? ಮಗ-ಸೊಸೆ, ಮೊಮ್ಮಗನ ಜೊತೆಗೆ ಬದುಕು ಎಲ್ಲಿಗೆ ಬಂದು ನಿಲ್ಲುತ್ತದೆ ಓದಿ ನೋಡಿ.


ಯಾವ ಜನ್ಮದ ಮೈತ್ರಿ : ಮನೆಯ ಮುದ್ದಿನ ಕಣ್ಮಣಿಯಾಗಿದ್ದ ಮೈತ್ರಿ ತನ್ನ ಗಂಡ ತೀರಿಕೊಂಡು ಎರಡು ವರ್ಷಗಳು ಕಳೆಯುತ್ತಾ ಬಂದರೂ ಮರುಮದುವೆಗೆ ಒಪ್ಪದೇ ಇದ್ದವಳು ತನಗಿಂತ 25 ವರ್ಷ ಹಿರಿಯರಾಗಿದ್ದ ಚಿದಾನಂದರಾಯರನ್ನು ಮದುವೆಯಾಗಲು ಮನಸ್ಸು ಮಾಡಿದ್ದಳು. ಮೈತ್ರಿಯ ಮನೆಯಲ್ಲಿ ಇದಕ್ಕೆ ವಿರೋಧವಿತ್ತು. ಮೈತ್ರಿ ಅಂತಹ ನಿರ್ಧಾರ ತಳೆಯಲು ಕಾರಣವೇನು? ಅಷ್ಟಕ್ಕೂ ದಾಂಪತ್ಯಕ್ಕೆ ಮುಖ್ಯವಾಗಿರುವುದು ಏನು..? ಎಂಬುದನ್ನು ಹೇಳುವ ಕಥೆ ಇದು.


ಮುಕ್ತಾ : ಮುಕ್ತಾ ಮನೆಗೆಲಸಕ್ಕೆ ಬರುತ್ತಿದ್ದವಳು. ಅವಳ ಮದುವೆಯಾದ ನಂತರ ಅವಳ ಜಾಗಕ್ಕೆ ಗೀತಾ ಬಂದಾಗಿತ್ತು. ಆದರೆ ಗೀತಾಳ ಕೆಲಸ ಅಷ್ಟಾಗಿ ಸರಿಹೋಗುತ್ತಿರಲಿಲ್ಲ. ಜೊತೆಗೆ ರಜೆಗಳು ಹೆಚ್ಚು. ಇಂತಹ ಸಂದರ್ಭದಲ್ಲಿಯೇ ಮುಕ್ತಾ ಮತ್ತೆ ತವರಿಗೆ ವಾಪಾಸು ಬಂದಿದ್ದಳು. ಅಂತೆಯೇ ಮನೆ ಕೆಲಸಕ್ಕೂ .. ಆದರೂ, ಹಿಂದಿನ ಆಪ್ತತೆ ಇರಲಿಲ್ಲ. ಆದರೆ, ಅವಳ ಬದುಕಿನ ಸತ್ಯ ಅನಾವರಣವಾದ ಪರಿ ಹೇಗಿತ್ತು..? ಏನಿತ್ತು ..? ಓದಿನೋಡಿ ಮುಕ್ತಾಳ ಕಥೆ.


ಆಸರೆ : ತಂದೆ ಹಾಗೂ ತಾಯಿ ಎರಡೂ ಆಗಿ ಸಾಕಿದ್ದ ತನ್ನ ತಾಯಿ ಮಾಧವಿಯವರನ್ನು ಬಿಟ್ಟು ತಾನು ಬೇರೆ ಇರುವುದಿಲ್ಲವೆಂದು ಶೈಲೇಶ್ ತನ್ನನ್ನು ಪ್ರೀತಿಸಿ ಮದುವೆಯಾಗುತ್ತಿದ್ದ ಭುವಿಗೆ ಮೊದಲೇ ತಿಳಿಸಿ ಹೇಳಿದ್ದ. ಆಕೆ  ಮಾಧವಿಯವರೊಡನೆ ಹೊಂದಿಕೊಂಡು ಹೋಗಬೇಕಿತ್ತು. ಆದರೂ.. ಕೆಲವು ವಿಚಾರಗಳನ್ನು ಬದಲಿಸಲು ಸಾಧ್ಯವಾಗದಿದ್ದಾಗ ಚುಚ್ಚುಮಾತುಗಳಂತೂ ಇದ್ದೇ ಇತ್ತು. ತನ್ನ ಅತ್ತೆಯ ಅನುಪಸ್ಥಿತಿಯಲ್ಲಿ.. ಅತ್ತೆಯನ್ನು ಮನೆಯಿಂದ ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ ಎಂದು ಗೊತ್ತಿದ್ದವಳು ಅವರು ಪಂಚಪ್ರಾಣವನ್ನೇ ಇಟ್ಟುಕೊಂಡಿದ್ದ ಅವರ ಜೀವನ ಕಟ್ಟಿಕೊಟ್ಟಿದ್ದ ಹೊಲಿಗೆ ಮೆಷಿನ್ ಅನ್ನು ಹೊರಸಾಗಿಸಿದ್ದಳು. ಮುಂದೆ ಏನಾಯ್ತು ಓದಿ ನೋಡಿ.


ಪ್ರೇತಬಾಧೆ : ಮಹಿಮಾರಿಗೆ ಪ್ರೇತಬಾಧೆ ಶುರುವಾಗಿತ್ತು. ಮೊದಲಿಗೆ ಇದು ಮನೋವೈದ್ಯರ ಬಳಿ ಹೋದರೆ ಗುಣವಾಗುತ್ತದೆಂದು ಆಕೆಯ ಪತಿ ಜಯರಾಮ ಆಕೆಯನ್ನು ಕರೆದೊಯ್ದರು. ಆದರೆ, ಅದಾಗಲಿಲ್ಲ. ಮತ್ತೊಮ್ಮೆ ಹೋಗಲು ಮಹಿಮಾ ಸಿದ್ಧವಿರಲಿಲ್ಲ. ಆದರೆ, ಮನೋವೈದ್ಯರ ತಂದೆಯಾಗಿದ್ದ ಜ್ಯೋತಿಷಿಯ ಬಳಿ ಹೋದಾಗ ಇದಕ್ಕೆ ಸಿಕ್ಕ ಪರಿಹಾರವೇನು..? ಸಮಸ್ಯೆ ಪರಿಹಾರವಾಯಿತೇ ಓದಿ ನೋಡಿ.


ಬದುಕು ಇನ್ನೂ ಇದೆ... : ಬ್ಯಾಂಕ್ ಉದ್ಯೋಗಿಯಾಗಿದ್ದ ರಾಜೀವ ಹಾಗೂ ನೃಹಿಣಿಯಾಗಿದ್ದ ಪದ್ಮ ಇಬ್ಬರ ಸುಖೀ ದಾಂಪತ್ಯಕ್ಕೆ ಒಬ್ಬಳೇ ಮಗಳು ಸಂಜನಾ. ತಾನು ಕೆಲಸಕ್ಕೆ ಹೋಗಬೇಕೆಂದು ಆಶಿಸಿದ್ದರೂ ತಂದೆಗೆ ಮಗಳು ನೌಕರಿಗೆ ಹೋಗುವುದು ಇಷ್ಟವಿಲ್ಲದೆ ಒಳ್ಳೆಯ ವರನನ್ನು ನೋಡಿ ವಿವಾಹ ಮಾಡಿಕೊಟ್ಟಿದ್ದರು. ಎಲ್ಲವೂ ಸರಿಯಾಗಿದ್ದ ಕರ್ಣ ಹಾಗೂ ಸಂಜನಾರ ದಾಂಪತ್ಯ ಮಗುವಾದ ನಂತರ ಹಳಿ ತಪ್ಪಿತ್ತು. ಅದಕ್ಕೆ ಕಾರಣವೇನು..? ಸಂಜನಾಳ ಅನುಮಾನ ನಿಜವೇ.. ಬದುಕು ಮುಗಿದೇ ಹೋಯಿತು ಎಂದುಕೊಂಡವಳಿಗೆ ಬದುಕು ಇನ್ನೂ ಇದೆ ಎಂದು ಭರವಸೆ ತುಂಬಿದವರಾರು ಓದಿನೋಡಿ.


ಬೃಂದಾ : ಯೂಟ್ಯೂಬರ್ ಆಗಿದ್ದ ಬೃಂದಾಳಿಗೆ ಪ್ರತಿವರ್ಷ ಸಾಧಕ ಮಹಿಳೆಯರಿಗೆ ಮಹಿಳಾ ದಿನಾಚರಣೆ ಎಂದು ಕೊಡುತ್ತಿದ್ದ "ಸ್ತ್ರೀ ರತ್ನ" ಪ್ರಶಸ್ತಿ ಬಂದಿತ್ತು. ಆದರೆ, ಆಕೆ ಅವಳ ಅತ್ತಿಗೆಯನ್ನು ಈ ಸಮಾರಂಭಕ್ಕೆ ಕಳುಹಿಸಿ, ಭಾಷಣದ ಆಡಿಯೋವನ್ನು ಕಳುಹಿಸಿ ಪ್ರಶಸ್ತಿಗೆ ಕುಂದು ಬರದಂತೆ ಅದರ ಗೌರವಕ್ಕೆ ತಕ್ಕಂತೆ ನಡೆದುಕೊಂಡಿದ್ದಳು. ಅವಳ ಅನುಪಸ್ಥಿತಿಯ ಹಿಂದಿದ್ದ ಮಹತ್ತರವಾದ ಕಾರಣವೇನು ಓದಿನೋಡಿ.


ಇರುವುದೆಲ್ಲವ ಬಿಟ್ಟು... : ಹೆಚ್ಚಿನವರ ದಾಂಪತ್ಯದಲ್ಲಿರುವಂತೆ ಶರ್ಮಿಳಾಗೆ ತನ್ನ ಗಂಡನ ಕುರಿತಾಗಿ ಹೆಚ್ಚೇ ಅಸಮಾಧಾನಗಳಿದ್ದವು. ಅತ್ತೆ-ಮಾವ ಇಲ್ಲದೆ ಪ್ರತಿಯೊಂದು ಕೆಲಸಕ್ಕೂ ಆಳು-ಕಾಳುಗಳಿರುವ, ಬೇಕಾದಾಗ ತವರುಮನೆಗೆ ಹೋಗಿ ಬರಬೇಕಾದ ಸೌಲಭ್ಯವಿದ್ದು .. ಎಲ್ಲಾ ರೀತಿಯಿಂದಲೂ ಸುಖವಾಗಿರಬಹುದಾದ ಶರ್ಮಿಳಾ ಆಪ್ತ ಗೆಳತಿಯೊಡನೆ ವರ್ಷಕೊಮ್ಮೆಯಾದರೂ ತನ್ನ ಮನವನ್ನು ತೆರೆದಿಡುತ್ತಿದ್ದಳು. ಪ್ರೀತಿಯ ಹಂಬಲಕ್ಕೆ ಮರುಳಾಗಿ ಆಕೆ ಇರುವುದೆಲ್ಲವ ಬಿಟ್ಟು ಹೊರಟಳೇ ಅಥವಾ ತನ್ನನ್ನು ತಾನು ತಿದ್ದಿಕೊಂಡಳೇ ಓದಿ ನೋಡಿ.


ರೀಲ್ಸ್ ರಾಣಿ : ಲಲಿತಾ ಕೆಲಸದವರ ಮೇಲೆ ಹೋದಲ್ಲಿ ಬಂದಲ್ಲೆಲ್ಲಾ ಹುಕುಂ ಚಲಾಯಿಸುತ್ತಿದ್ದಳು. ಹೀಗಿದ್ದಾಗ ಬಂದ ಕೆಲಸದವರು ಹೆಚ್ಚಿನ ದಿನ ಉಳಿಯುತ್ತಿರಲಿಲ್ಲ. ಹೊಸದಾಗಿ ಬಂದದ್ದು ಶೈಲು. ನಂತರ ತಿಳಿದದ್ದು ಆಕೆಯ ರೀಲ್ಸ್ ಕುರಿತಾಗಿ. ರೀಲ್ಸ್ ರಾಣಿ ಶೈಲೂವಿನ ಮಾತುಗಳು ಲಲಿತಾಳ ಆಲೋಚನೆಯನ್ನು ಬದಲಿಸಿದವೇ..? ಆಕೆ ಶೈಲೂ ಕೆಲಸದ ಶೈಲಿಗೆ ಹಾಗೂ ಹವ್ಯಾಸಕ್ಕೆ ಹೊಂದಿಕೊಂಡಳೇ ಓದಿನೋಡಿ. ಆಧುನಿಕ ಜೀವನಶೈಲಿಯ ಹಾಸ್ಯ ಪ್ರಭೇದಕ್ಕೆ ಸೇರಿಸಬಹುದಾದ ಕಥೆ.


ನೀಲು : ಒಂದಾನೊಂದು ಕಾಲದಲ್ಲಿ ಮನೆಯ ತೋಟದ ಕೆಲಸಕ್ಕೆ ಬರುತ್ತಿದ್ದ ಹೆಣ್ಣಾಳು ನೀಲು ಈಗ ತನ್ನ ಮಗ ಕೆಲಸಕ್ಕೆ ಸೇರಿ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಮನೆಯನ್ನು ಕಟ್ಟಿಸಿ ಕೊಟ್ಟಿದ್ದ. ಈಗ ಬಂದದ್ದು ಆಕೆಯ ಮನೆಯ ಗೃಹಪ್ರವೇಶಕ್ಕೆ ಆಹ್ವಾನಿಸುವುದಕ್ಕೆ. ವನಜಮ್ಮ ತಮ್ಮ ಆಕೆಯ ಬದುಕನ್ನು ತುಲನೆ ಮಾಡುತ್ತಿದ್ದರು. ನೀಲುವಿನ ಮಗ ರಾಘು ಹಾಗೂ ತನ್ನ ಮಗ ಅಭಿಷೇಕ ಇಬ್ಬರು ಒಂದೇ ಓರಿಗೆಯವರು. ಆದರೆ, ಬದಲಾಗದ ತಮ್ಮ ಪರಿಸ್ಥಿತಿ ಹಾಗೂ ಇನ್ನು ಕಟ್ಟಿಗೆ ಸಿಲುಕುತ್ತಿದ್ದ ದಿನಗಳಲ್ಲಿ ನೀಲು ಮತ್ತೆ ನೆರವಾದಳೇ.. ಮಾನವೀಯತೆಯ ಕಥೆ ಇದು.


ಪವಿ ಟೈಲರ್ : ಪ್ರೀತಿ ಮಾಡಿ ಅತ್ತ ತವರಿನ ಬೆಂಬಲವೂ ಇಲ್ಲದೆ, ಇತ್ತ ಗಂಡನ ಮನೆಯವರ ಆಸರೆಯೂ ಇಲ್ಲದೆ, ಉದ್ಯೋಗವೂ ಇಲ್ಲದೆ ಅತಂತ್ರವಾಗಿದ್ದ ಬದುಕಿಗೆ ಆಕೆಗೆ ದಾರಿದೀಪವಾಗಿದ್ದು ಹೊಲಿಗೆ ಮಿಷನ್. ಹೀಗೆ ಪವಿತ್ರ ಟೈಲರ್ ಜನಪ್ರಿಯವಾಗುತ್ತಿದ್ದಾಗಲೇ ಕರೋನಾ ಸಮಯದಲ್ಲಿ ಆಕೆಗೆ ಅಂಟಿಕೊಂಡ ಸಾಹಿತ್ಯದ ಹುಚ್ಚು ಆಕೆಯನ್ನು ಹೊಲಿಗೆಯಿಂದ ವಿಮುಖಗೊಳಿಸಿತೇ ಅಥವಾ ಬದುಕಿನ ದಿಕ್ಕನ್ನೇ ಬದಲಿಸಿತೇ? ಪವಿ ಟೈಲರ್ ಕಥೆ ಏನಿದೆ ಓದಿ ನೋಡಿ.


ಅಸೂಯೆ ಬಿಡು ಮನವೇ : ಮುಖ ನೋಡಿ ಮೊಳ ಹಾಕಬಾರದು ಎನ್ನುವ ಮಾತು ಇಲ್ಲಿ ನಿಜವಾಗುತ್ತದೆ. ಮನೆ ಕೆಲಸಕ್ಕೆ ಬರುತ್ತಿದ್ದ ನೇತ್ರಮ್ಮನಿಗೆ ಹುಷಾರಿಲ್ಲದಿರುವಾಗ ಆಕೆಯ ಅನುಪಸ್ಥಿತಿಯಲ್ಲಿ ಆಕೆಯ ಮಗಳು ಕೆಲಸಕ್ಕೆ ಬಂದಿದ್ದಳು. ಸಹನಾ ಹಾಗೂ ಮನೆಯೊಡತಿಯ ಮಗ ನಿಹಾರ್ ಇಬ್ಬರೂ ಪಿಯುಸಿ ಸೈನ್ಸ್, ಆದರೆ, ಸಹನಾ ಸರಕಾರಿ ಕಾಲೇಜು. ಸಹನಾ ಕೇಳಿದ್ದು ತಾನು ಅಲ್ಲಿಯೇ ಓದಿ ಹೋಗಲು ನಿಹಾರ್ ನ ಸ್ಟಡಿ ಮೆಟೀರಿಯಲ್ಸ್, ಕ್ವೆಶ್ಚನ್ ಬ್ಯಾಂಕ್ ಗಳು. ಆದರೆ, ಮಗನ ನೆಪ ಹೇಳಿ ಅದನ್ನು ನಿರಾಕರಿಸುತ್ತಿದ್ದವಳಿಗೆ ಫಲಿತಾಂಶ ಅಚ್ಚರಿ ತಂದಿತ್ತು. ಆ ಅಚ್ಚರಿಯೇನು..? ಅಂದು ಕ್ವೆಶ್ಚನ್ ಬ್ಯಾಂಕ್ ಸ್ಟಡಿ ಮೆಟೀರಿಯಲ್ಸ್ ಕೊಟ್ಟಿದ್ದರೆ ಏನಾಗುತ್ತಿತ್ತು ಓದಿನೋಡಿ.


ಆತ್ಮಸಖಿ : ಸೌದಾಮಿನಿಯ ಗಂಡ ಶೇಷಗಿರಿ ಪ್ರತಿಷ್ಠಿತ ಕಾಲೇಜೊಂದರಲ್ಲಿ ಮ್ಯಾಥ್ಸ್ ಲೆಕ್ಚರರ್ ಜೊತೆಗೆ ಅಸಾಧ್ಯ ಓದುಗ, ವಿಮರ್ಶಕ, ಖ್ಯಾತ ಕಥೆಗಾರ. ಸೌದಾಮಿನಿ ಆತನ ಜೊತೆಗೆ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದದ್ದು ಇಲ್ಲವೇ ಇಲ್ಲ ಎನ್ನಬಹುದು. ಆದರೆ, ಅವರ ಮಗಳು ಸ್ವರಾ ಈ ಬಾರಿ ಸೌದಾಮಿನಿಯ ಬೆನ್ನು ಬಿದ್ದು ಸಾಹಿತ್ಯದ ಕಾರ್ಯಕ್ರಮಕ್ಕೆ ಹೊರಡಿಸಿದ್ದೇಕೆ..? ಇದರಿಂದ ಸೌದಾಮಿನಿ ಹಾಗೂ ಶೇಷಗಿರಿ ಇಬ್ಬರ ದಾಂಪತ್ಯ ಮತ್ತಷ್ಟು ಹತ್ತಿರವಾದದ್ದು ಹೇಗೆ ಓದಿ ನೋಡಿ.


ಸೆಕೆಂಡ್ ಇನ್ನಿಂಗ್ಸ್ : ಶ್ರೀನಾಥ್ ಹಾಗೂ ನಿರ್ಮಲ ಇಬ್ಬರ ವಿವಾಹದ ಕಥೆ ವಿಚಿತ್ರ. ಈಗ ಅವರಿಬ್ಬರ ದಾಂಪತ್ಯಕ್ಕೆ ಇಳಿವಯಸ್ಸಿನ ಸಮಯ. ಈ ಸಂದರ್ಭದಲ್ಲಿ ಅವರು ತಮ್ಮ ಸೆಕೆಂಡ್ ಇನ್ನಿಂಗ್ಸ್ ಅನ್ನು ಬದುಕಲು ಅಲ್ಲಲ್ಲ.. ಆಚರಿಸಿಕೊಂಡು ಇತರರಿಗೂ ಮಕ್ಕಳಿಗೂ ಅಚ್ಚರಿಯಾಗುವಂತೆ ಬದುಕಲು ಹೊರಟ ಬಗೆ ಹೇಗೆ ಓದಿ ನೋಡಿ.


ಕನಸೊಂದಿದ್ದರೆ ಸಾಕೇ... : ಹಳ್ಳಿಯಲ್ಲಿಯೇ ಬೆಳೆದ ಶೋಭಾ ಚಿಕ್ಕವಳಿದ್ದಾಗ ಅಪರೂಪಕ್ಕೊಮ್ಮೆ ಆಕಾಶದಲ್ಲಿ ಹಾರುವ ವಿಮಾನ ನೋಡಿ ಕನಸು ಕಾಣುತ್ತಿದ್ದಳು. ತಾನು ಬದುಕಿನಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಹೋಗಬೇಕೆಂದು. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಆ ಕನಸು ಮತ್ತಷ್ಟು ಬಲಿಯುತ್ತಾ ಸಾಗಿತು. ಈಗ ಮಗಳು ಕರೆ ಮಾಡಿ ತಾನು ಗರ್ಭಿಣಿ ಎಂದು ತಿಳಿಸಿದಾಗ ಬಾಲ್ಯದಿಂದಲೇ ಕಂಡ ಕನಸೊಂದು ಕೊನೆಗೂ ನನಸಾಗುವ ಕಾಲ ಕೂಡಿ ಬಂತು ಎಂದುಕೊಳ್ಳುವಾಗಲೇ ಅದು ನನಸಾಗಲಿಲ್ಲ. ಅದರ ಬದಲಾಗಿ ತನ್ನ ಕನಸನ್ನು ಶೋಭಾ ನನಸು ಮಾಡಿಕೊಂಡ ಬರಿಯೇ ವಿಭಿನ್ನ, ವಿಚಿತ್ರ. ಅದು ಹೇಗೆ ಓದಿ ನೋಡಿ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ