ಪುಸ್ತಕದ ಶೀರ್ಷಿಕೆ : ಪಚ್ಚೆ ರೆಸಾರ್ಟ್
ಲೇಖಕರು : ಯು. ಆರ್. ಅನಂತಮೂರ್ತಿ
ಪ್ರಕಾಶಕರು : ಅಭಿನವ ಪ್ರಕಾಶನ
ಪ್ರಥಮ ಮುದ್ರಣ : 2011
ಮೂರನೇ ಮುದ್ರಣ : 2017 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 64
ಬೆಲೆ : 6೦ ರೂ.
ಯು. ಆರ್. ಅನಂತಮೂರ್ತಿ ಅವರು ತಮ್ಮ ಎಂಟು ಕವಿತೆಗಳು ಹಾಗೂ ಎರಡು ಕಥೆಗಳನ್ನು ಸೇರಿಸಿ ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.
ಪಚ್ಚೆ ರೆಸಾರ್ಟ್ ಸಂಕಲನದ ಕುರಿತು ಯು. ಆರ್ ಅನಂತಮೂರ್ತಿಯವರು ಹೀಗೆ ಬರೆದುಕೊಂಡಿದ್ದಾರೆ. "ಇಹದ ಹಂಗಿಗೆ ಸಿಕ್ಕಿಬಿದ್ದೂ ಬಿಡಿಸಿಕೊಳ್ಳುವ ಶೋಧವಾಗಿದೆ. ಜಗದ ಅನುರಾಗಿಯಾದವನಿಗೆ ಕಳೆದು ಹೋಗುವುದು ಯಾವುದೂ ಇಲ್ಲ. ಮನುಷ್ಯ ಬೌದ್ಧಿಕವಾಗಿ ಎಷ್ಟೇ ಎತ್ತರವನ್ನು ಸಾಧಿಸಿದರೂ ಕಳೆದುಹೋಗಲಾರದ ಕೆಲವು ಭಾವನೆಗಳೂ ನಮ್ಮೊಳಗೆ ಅಡಕವಾಗಿದ್ದು ಅವಕಾಶ ಸಿಕ್ಕಾಗಲೆಲ್ಲಾ ಧಿಗ್ಗನೆದ್ದು ನಮ್ಮನ್ನು ಸಮ್ಮೋಹನಗೊಳಿಸುತ್ತಿರುತ್ತವೆ. ಈ ಸಮ್ಮೋಹಕ ಅಂಶಗಳೇ ನಮ್ಮಲ್ಲಿ ಮಗುತ್ವವನ್ನು ಜಾಗೃತಗೊಳಿಸಿ ಜಗತ್ತನ್ನು ಹೊಸದಾಗಿ ನೋಡುವಂತೆ ಮಾಡುತ್ತವೆ."
ಎತ್ತಣಿಂದೆತ್ತಣ ಸಂಬಂಧ ? :
ಭಾರತದ ರಾಯಭಾರಿಯಾಗಿದ್ದ ಸುರೇಶ್ ಕುರುಪ್ ಅವರ ಪತ್ನಿ ಉಮಾ. ಭಾರತದಲ್ಲಿ ಬಿಸಿನೆಸ್ ಕುದುರಿಸಲು ಭಾರತದ ರಾಯಭಾರಿಯಾಗಿದ್ದ ಸುರೇಶ್ ಕುರುಪ್ ನ ಆತ್ಮೀಯ ಸಹಾಯಕರು ಹಾಗೂ ಹಿತೈಷಿಗಳನ್ನು ಸೇರಿಸಿ ಆಗಾಗ ಔತಣಕೂಟ ಮಾಡುತ್ತಿದ್ದರು. ಭಾರತದ ಎಲ್ಲ ಪ್ರದೇಶಗಳಿಂದ ಬಂದ ಇವರನ್ನು ಕನ್ನಡತಿ ಉಮಾ ಕರೆಯುವುದು 'ಜಗ ಜಂಗಮರು' ಎಂದು.
ಉಮಾ ಭಾರತದ ಪ್ರಸಿದ್ಧ ನರ್ತಕಿ. ಐ.ಎ.ಎಸ್ ಮಾಡಿ ಕೆಲಸದಲ್ಲಿದ್ದವಳು, ನರ್ತನಕ್ಕಾಗಿ ಕೆಲಸ ಬಿಟ್ಟಳು. ಗಂಡನ ಜೊತೆ ಬದುಕಬೇಕೆಂದು ತನ್ನ ಆಫೀಷಿಯಲ್ ಕೆರಿಯರ್ ಬಿಟ್ಟಳು ಎಂದರೆ ಅವಳು ಒಪ್ಪುವುದಿಲ್ಲ. ಹಾಗಿದ್ದರೆ ಉಮಾಳ ಹಿನ್ನಲೆಯೇನು ಹಾಗೂ ಈಗ ಉಮಾ ತನ್ನ ಪತಿಗೆ ಯಾವ ರೀತಿಯಲ್ಲಿ ನೆರವಾಗುತ್ತಿದ್ದಾಳೆ..? ಪ್ಯಾರಿಸ್ ನಲ್ಲಿ ಆಕೆ ಹೇಗಿದ್ದಾಳೆ..? ಓದಿ ನೋಡಿ
ಆಲ್ಬರ್ಟ್ ಹಾಗೂ ಮೇರಿ ಇಬ್ಬರೂ ಆ ಔತಣಕೂಟದಲ್ಲಿ ಉಮಾ ಹಾಗೂ ಕುರುಪ್ ಜೊತೆಗೆ ಒಂದು ವ್ಯವಹಾರದ ಆಸಕ್ತಿ ತೋರುತ್ತಾರೆ. ಇಂಡಿಯಾ ಜೊತೆಗೆ ವ್ಯವಹರಿಸುವುದರಲ್ಲಿ ಅವರಿಗೆ ಗುಪ್ತ ಉದ್ದೇಶವಿದೆ ಎಂಬುದನ್ನು ತೆರೆದಿಡುತ್ತಾರೆ. ಅವರಿಬ್ಬರ ಬಿಸಿನೆಸ್ ನ ಉದ್ದೇಶ ಏನಿತ್ತು..? ಉಮಾ ಇದೆಲ್ಲದನ್ನು ಯಾವ ಭಾವದಲ್ಲಿ ತೆಗೆದುಕೊಂಡಳು..? ಆಲ್ಬರ್ಟ್ ಹಾಗೂ ಮೇರಿಯರ ಉದ್ದೇಶ ಏನಾಯ್ತು..?
"ನೃತ್ಯವೇ ಆಗಿ ಬಿಡುವ ನರ್ತಕಿ ನೀನಲ್ಲ. ನಿನಗೆ ಬೇಕಾದ್ದು ಕ್ಷೇಮದ ಯಶಸ್ಸಿನ ಬದುಕು" ಎಂದು ಉಮಾಳಿಗೆ ಹೇಳಿದ್ದವರಾರು..?
ಎಲ್ಲದಕ್ಕೂ ಉತ್ತರ ತಿಳಿಯಲು ಈ ಕಥೆ ಓದಿ ನೋಡಿ.
ಪಚ್ಚೆ ರೆಸಾರ್ಟ್ :
ಮೂವತ್ತು ವರ್ಷಗಳಿಂದ ಆಕೆಯನ್ನು ನೋಡಿರದಿದ್ದರೂ ಎಲ್ಲಾ ಹೆಣ್ಣುಗಳಲ್ಲೂ ಅಷ್ಟಿಷ್ಟು ಭಾಗೇರತಿ ಆತನಿಗೆ ಕಾಣುತ್ತಿದ್ದಳು. ಬಾಲ್ಯಕಾಲದ ಗೆಳತಿಯವಳು. ವಿಸ್ಮಯದ ಭಾಗೇರತಿ. ಆತನ ಹಲವು ಅಪರೂಪದ ಕಥೆ, ಕಾದಂಬರಿಗಳ ಹಿಂದಿನ ಗುಪ್ತ ಪ್ರೇರಣೆ ಅವಳು. ಈಗ ಅದೇ ಭಾಗೇರತಿ ನಾಗಭೂಷಣನಿಗೆ ತಟ್ಟನೆ ಎದುರಾಗಿದ್ದಳು.
ಈಗ ಭಾನೇರತಿ ಸವ್ಯಸಾಚಿನ್ ನ ಪತ್ನಿ. ಆತನೇ ನಾಗಭೂಷಣನನ್ನು ಏರ್ ಟಿಕೆಟ್ ಬುಕ್ ಮಾಡಿ ಕಲ್ಕತ್ತಾದಿಂದ ಕರೆಸಿಕೊಂಡಿದ್ದ. ಅದೂ ಆಕೆಯ 45ನೇ ವರ್ಷದ ಹುಟ್ಟು ಹಬ್ಬದ ಉಡುಗೊರೆಯಾಗಿ. ಸವ್ಯಸಾಚಿನ್ ಅಪ್ಪಟ ಐರೋಪ್ಯ ಸಭ್ಯ ಎನ್ನುತ್ತಾ ಆತನನನ್ನು ನೋಡುವ ಮೊದಲೇ ನಾಗಭೂಷಣನಿಗೆ ಪರಿಚಯಿಸುತ್ತಾಳೆ ಭಾಗೇರತಿ.
ನಾಗಭೂಷಣ ಹುಟ್ಟಿ ಬೆಳೆದ, ಮಲೆನಾಡಿನ ಹೆಂಚಿನ ಮನೆಯನ್ನು ಪಚ್ಚೆ ರೆಸಾರ್ಟ್ ನ ಒಂದು ಅಂಗವಾಗಿ ರಿನೋವೇಟ್ ಮಾಡಲಾಗಿತ್ತು. ಅದನ್ನು ಅವನಿಗೆ ಅರ್ಪಿಸುವ ಸಲುವಾಗಿ ಆತನನ್ನು ಕರೆಸಲಾಗಿತ್ತು. ಆದರೆ, ಈ ಕಾಗದ ಹೊತ್ತು ತಂದದ್ದು ಶಶಿ ಎಂಬ ಹೆಸರನ್ನು. ಶಶಿ ಭಾಗೇರತಿ ಹಾಗೂ ಸವ್ಯಸಾಚಿನ್ ಪುತ್ರ. ಭಾರತದಲ್ಲಿ ಆರು ಇಕೋ ಫ್ರೆಂಡ್ಲಿ ರೆಸಾರ್ಟ್ ಗಳ ಒಡೆಯ.
ಭಾಗೇರತಿಯ ಪ್ರೀತಿಯಾರ್ಥಕ್ಕಾಗಿ ಅವಳ ಗಂಡ ಹಾಗೂ ಮಗ ಸುತ್ತಲಿನ ಮನೆಯ ಜಾಗವನ್ನು ಕೊಂಡಿದ್ದರು. ಅದಕ್ಕೆ ಮಲೆನಾಡಿನ ಸೊಗಡನ್ನು ಉಳಿಸುವ ಕಾರಣದಿಂದ ಹಾಗೂ ಅತಿಥಿಗಳ ಶಾಂತಿಗಾಗಿ ಪಚ್ಚೆ ರೆಸಾರ್ಟ್ ಅನ್ನು ನಿರ್ಮಿಸಿದ್ದರು.
ಬಾಲ್ಯದ ಸಂಗತಿಗಳನ್ನು ಮೆಲುಕು ಹಾಕುತ್ತಲೇ.. ಆ ನೆನಪುಗಳು ಜೊತೆಗೆ ಅಂದಿನ ದಿನಗಳ ವರ್ತನೆಗಳನ್ನು ಒಬ್ಬರಿಗೊಬ್ಬರು ಹೇಳಿಕೊಂಡು ಇಂದಿನ ಬದಲಾದ ವ್ಯಾವಹಾರಿಕ ಚಿತ್ರಣಕ್ಕೆ ಸ್ಪಂದಿಸುವ ರೀತಿ ಹೇಗಿದೆಯೆಂದು ಕಥೆ ಓದಿ ನೋಡಿ.
ನಾವು ಕಥಾ ಸಂಕಲನ, ಕವಿತೆಗಳ ಸಂಗ್ರಹವನ್ನು ಪ್ರತ್ಯೇಕ ಪುಸ್ತಕಗಳಲ್ಲಿ ಓದಿರುತ್ತೇವೆ. ಆದರೆ, ಇಲ್ಲಿ ಕತೆ ಹಾಗೂ ಕವಿತೆಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಪ್ರಕಾಶಕರು ಈ ಕುರಿತು ಅರ್ಜೆಂಟೈನಾದ ಲೇಖಕ ಬೋರ್ ಬೋರ್ಹೆಸ್ ನನ್ನು ನೆನೆಯುತ್ತಾರೆ. "ತನ್ನ ಕೃತಿಗಳ ಮೂಲಕ, ವಿಚಾರಗಳ ಮೂಲಕ ಇದು ಗದ್ಯ, ಇದು ಪದ್ಯ ಎಂಬುದನ್ನೆ ಒಡೆದು ಇದೊಂದು ಅನನ್ಯ ಕೃತಿ ಎಂದಷ್ಟೆ ಪ್ರಸ್ತುತ ಪಡಿತಸುತ್ತಾನೆ ಬೋರ್ಹೆಸ್. ಇದು ಸೃಜನಶೀಲ, ಇದು ಸೃಜನಶೀಲ ಅಲ್ಲ ಎಂಬ ಗೋಡೆಯನ್ನು ಆತ ಕೆಡುವುತ್ತಾನೆ" ಎಂದು ಉಲ್ಲೇಖಿಸಿದ್ದಾರೆ.
ಈ ಕೃತಿಯಲ್ಲಿ ಎಂಟು ಕವಿತೆಗಳಿವೆ.
ಸಾವಿನ ಮುಹೂರ್ತ : ಈ ಕವಿತೆಯಲ್ಲಿ ಸಾವಿನ ಮುಹೂರ್ತಗಳು ಹಲವಾರಿವೆ. ಅದೇ ಮುಹೂರ್ತದಲ್ಲಿ ಮತ್ತೆ ಜೀವಂತಿಕೆಯನ್ನು ತೋರುತ್ತಾರೆ. ಪರಿಸರದ ಚಿತ್ರಣ, ಆಸ್ಪತ್ರೆಯ ಚಿತ್ರಣ ಎರಡನ್ನೂ ಕಾಣಬಹುದಾಗಿದೆ. ಈ ಕವಿತೆಯ ಒಂದೆರಡು ಸಾಲುಗಳು ಹೀಗಿವೆ.
ತನ್ನ ಹಸಿರಿನ ಕಾಯಕದಿಂದ ನಿವೃತ್ತವಾಗಿ ಉದುರುವ ಒಣಗಿದೆಲೆ
ಚಿಗುರುವ ಭರವಸೆಯಲ್ಲಿ ಸಿಪ್ಪೆ ಸಿಡಿದು ಚಿಮ್ಮುವ ಬೀಜ
ಅಮ್ಮ ನೆನೆಯುತ್ತೇನೆ : ಈ ಕವಿತೆ ನನಗೆ ಲಂಕೇಶರ ಅವ್ವ ಕವಿತೆಯನ್ನು ನೆನಪಿಸಿತು. ಒಂದೆರಡು ಸಾಲುಗಳನ್ನು ಗಮನಿಸುವುದಾದರೆ..
ನನ್ನ ಹಡೆದ ಗಂಡುಭೀರಿ ತುಂಟಿ
ಇರುತ್ತಲೇ ಇರುತ್ತ
ಅದೊಂದು ದಿನ ಸುಮ್ಮನೆ ಹೊರಟು ಹೋದದ್ದನ್ನು
ಬರ್ನಿಂಗ್ ಹ್ಯಾಮ್ ನಲ್ಲಿ ಮೈಸೂರು ಮಲ್ಲಿಗೆ :
ಹಸಿರೇಮುಡಿದಂತೆ ಮೂಡಿದೆ, ಅತ್ತ ಮೊಗ್ಗೂ ಅಲ್ಲದಂತೆ, ಇತ್ತ ಬಿರಿದ ಹೂವೂ ಆಗದಂತೆ ಪ್ರಾಯಕ್ಕೆ ಬರಲಿರುವ ಬಾಲೆಯಂತೆ ನಾಚಿದೆ.
ಈ ಲೋಕದಲ್ಲಿ ಆಲೋಕ :
ಮರಾಠಿ ಕವಿ ವಿಂದಾ ಕರಂದೀಕರ್ ಓದಿದ್ದನ್ನು ಕೇಳಿಸಿಕೊಂಡ ನೆನಪಿನಲ್ಲಿ ಈ ಲೋಕದಲ್ಲಿ ಆಲೋಕ ಎಂಬ ಕವಿತೆಯನ್ನು ಬರೆಯುತ್ತಾರೆ. ಸಂತ ಕವಿ ತುಕಾರಾಮ ಹಾಗೂ ಆತನನ್ನು ನೋಡಲು ಬಂದ ಭವ್ಯ ಮರ್ತ್ಯ ಕವಿ ಶೇಕ್ಸ್ ಪಿಯರ್ ಇಬ್ಬರ ಭೇಟಿಯ ಕುರಿತ ಕವಿತೆ ಇದು.
ರಾಜ ಮತ್ತು ಸಂತ : ಗಾಂಧಿಗೆ ನೆಹರು ಹೇಳಿರಬಹುದಾದೊಂದು ದೃಷ್ಟಾಂತ ಕಥೆ ಎನ್ನುತ್ತಾ.. ಕಥನ ಕವಿತೆಯೊಂದನ್ನು ತೆರೆದಿರುತ್ತಾರೆ ಅದರ ಒಂದೆರಡು ಸಾಲುಗಳು ಇಂತಿವೆ.
ಕರುನಾಳು ಬುದ್ಧ ಧ್ಯಾನಮುದ್ರೆಯಲ್ಲಿ ಮೌನಿಯಾದ.
ಹಿಂಸೆಯಿಂದ ಹಿಮ್ಮೆಟ್ಟುವ ಬಯಕೆ ಯೋಧರಿಗೆ ಸಹಜವಲ್ಲವೆ?
ಸಂಸಾರದ ದುಃಖವನ್ನು ದಿನ ರಾತ್ರಿ ಎನ್ನದೆ ನಿದ್ದೆಗೆಟ್ಟು
ಅನುಭವಿಸುವವರು ಸಾಲಗಾರರಲ್ಲವೇ ?
ಬುದ್ಧನ ಉಪದೇಶ ಈ ದುಃಖಿಗಳಿಗೆ ಅಗತ್ಯವಲ್ಲವೆ?
ಪ್ರೇಮದ ಗುಟ್ಟು : ಪ್ರೇಮ ಇರುವುದು ಹೇಗೆ, ಪ್ರೇಮವನ್ನು ಆಡಿ ತೋರಿಸಿದಾಗ ಹೇಗಿರುತ್ತದೆ ಹಾಗೂ ಏನಾಗುತ್ತದೆ ಎಂಬುದನ್ನು ಕಟ್ಟಿಕೊಟ್ಟಿರುವ ಕವಿತೆ ಇದು. ವಿಲಿಯಂ ಬ್ಲೇಕ್ ನ 'ಲವ್ ಸೀಕ್ರೆಟ್, ಕವಿತೆಯ ಅನುವಾದ.
ವಿಷವೃಕ್ಷ : ಇದು ವಿಲಿಯಂ ಬ್ಲೇಕ್ ನ ' ಎ ಪಾಯ್ಸನ್ ಟ್ರೀ ' ಕವಿತೆಯ ಅನುವಾದ. ಅದರ ಒಂದೆರಡು ಸಾಲುಗಳು ಇವು.
ಗೆಳೆಯನ ಮೇಲೆ ಸಿಟ್ಟು ಬಂತು
ಒದರಿ ಬಿಟ್ಟೆ. ಸಿಟ್ಟು ಹೋಯ್ತು
ವೈರಿ ಮೇಲೆ ಸಿಟ್ಟು ಬಂತು
ಬಚ್ಚಿಟ್ಟುಕೊಂಡೆ; ಬೆಳೀತ ಹೋಯ್ತು
ಮನದಲ್ಲಿ ಹೆಮ್ಮರವಾಗುವ ವೈರತ್ವದ ಕುರಿತು ಕಟ್ಟಿಕೊಟ್ಟಿರುವ ಕವಿತೆ ಇದು.
ಮೂರ್ಖರು : ಜಗತ್ತನ್ನು ಗೆದ್ದು ಹಿಡಿತದಲ್ಲಿಟ್ಟುಕೊಳ್ಳಲು ಹೊರಟವರ ಹಠ, ಘನವಂತರು ಎಂದುಕೊಂಡು ಬದುಕುವ ಮಂದಿ ಹಾಗೂ ತಣ್ಣಗೆ ಇದ್ದುಬಿಡುವವರ ಕುರಿತು ಯಾವ ಯಾವ ಭಾವಗಳಿವೆ ತಿಳಿಯಲು ಕವಿತೆ ಓದಿ ನೋಡಿ. ಇದು ಬರ್ಟೋಲ್ಟ್ ಬ್ರೆಕ್ಟ್ ನ ಪದ್ಯವೊಂದರ ಪ್ರೇರಣೆ ಎಂದು ಹೇಳಿದ್ದಾರೆ.
ಕವಿತೆಗಳ ಒಳಾರ್ಥಗಳು ಒಬ್ಬೊಬ್ಬರು ಓದಿದಾಗ ಒಂದೊಂದು ರೀತಿ ತೆರೆದುಕೊಳ್ಳುತ್ತಾ ಹೋಗುತ್ತವೆ. ನಿಮ್ಮ ಓದಿಗೆ ಈ ಕವಿತೆಗಳು ಹೇಗೆ ದಕ್ಕಬಹುದು ಓದಿ ನೋಡಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ