ಭಾನುವಾರ, ಏಪ್ರಿಲ್ 26, 2026

ಕರುನಾಡ ಹುಲಿ ಧೊಂಡಿಯ (ಪುಸ್ತಕ ಯಾನ - 412)


ಪುಸ್ತಕದ ಶೀರ್ಷಿಕೆ : ಕರುನಾಡ ಹುಲಿ ಧೊಂಡಿಯ 

ಲೇಖಕರು : ಕ. ವೆಂ. ನಾಗರಾಜ

ಪ್ರಕಾಶಕರು : ರಾಷ್ಟ್ರೋತ್ಥನ ಸಾಹಿತ್ಯ

ಪ್ರಥಮ ಮುದ್ರಣ : ಆಗಸ್ಟ್ 2019

ಎರಡನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 142

ಬೆಲೆ : 100 ರೂ. 


ಬ್ರಿಟಿಷರ ಒಡೆದು ಆಳುವ ನೀತಿಗೆ ದೇಶೀಯ ರಾಜರುಗಳ ಮಧ್ಯೆ ಕಂದಕ ಉಂಟಾದ ಸಂದರ್ಭ. ಆಗ ಅಲ್ಲೆಲ್ಲಾ ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುತ್ತಾ ಸಾಗುತ್ತಿದ್ದ ಅವರುಗಳ ಹುನ್ನಾರವನ್ನು ಮುರಿಯುವ ವಿವೇಕ ಹಾಗೂ ಪ್ರಬುದ್ಧತೆ ತೋರಿದ, ಜೊತೆಗೆ ದೇಶೀಯ ರಾಜರುಗಳು ಹಾಗೂ ಪಾಳೆಯಗಾರರನ್ನು ಎಚ್ಚರಿಸುವ ಪ್ರಯತ್ನ ಮಾಡಿದ ಕೆಚ್ಚೆದೆಯ ವೀರರ ಸಾಲಿನಲ್ಲಿ ಪ್ರಮುಖವಾಗಿರುವ ಕರುನಾಡ ಹುಲಿ ಧೊಂಡಿಯನ ಜೀವನಗಾಥೆ ಹಾಗೂ ಸಾಹಸಗಾಥೆಯ ಚಿತ್ರಣ ಇಲ್ಲಿದೆ. 


ಇಂದಿನ ಕರ್ನಾಟಕದ ಚೆನ್ನಗಿರಿಯ ಧೊಂಡಿಯ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ನಡೆಸಿದ್ದಲ್ಲದೆ.. ತನ್ನ ಪ್ರಯತ್ನದಲ್ಲಿ ಮರಾಠರ, ನಿಜಾಮನ ಹಾಗೂ ಟಿಪ್ಪುವಿನ ಸಹಾಯವನ್ನು ಪಡೆಯಲು ಪ್ರಯತ್ನಿಸಿದ್ದ. ಆದರೆ, ಬ್ರಿಟಿಷರ ಕುಟಿಲತೆ, ಮರಾಠರು ಮತ್ತು ನಿಜಾಮರ ಸಿಗದ ಬೆಂಬಲ, ಅಲ್ಲದೇ.. ಟಿಪ್ಪುವಿನಿಂದ ಸಿಕ್ಕ ಹಿಂಸೆ ಎಲ್ಲದರ ನಡುವೆ.. ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಧೊಂಡಿಯನನ್ನು ಹಿಡಿಯಲು ಗವರ್ನರ್ ಜನರಲ್ ಮಾರ್ಕ್ವಿಸ್ ವೆಲ್ಲೆಸ್ಲಿಯ ಸಹೋದರ ಲೆಫ್ಟಿನೆಂಟ್ ಕರ್ನಲ್ ಆರ್ಥರ್ ವೆಲ್ಲೆಸ್ಲಿ ತನಗೆ ನಿಯೋಜಿಸಿದ ಮತ್ತೊಂದು ಪ್ರಮುಖ ಕಾರ್ಯ ಅಂದರೆ ಬಟೇವಿಯಾ ದೇಶವನ್ನು ತಮ್ಮ ಸಾಮ್ರಾಜ್ಯದ ತೆಕ್ಕೆಗೆ ಸೇರಿಸಿಕೊಳ್ಳುವ ಕಾರ್ಯಯೋಜನೆಯ ಮುಖ್ಯಸ್ಥನ ಸ್ಥಾನವನ್ನು ಬದಿಗೊತ್ತಿ.. ಧೊಂಡಿಯ ವಾಘನನ್ನು ಹಿಡಿಯಲು ತಂತ್ರ ರೂಪಿಸುತ್ತಾನೆ. ಆಂಗ್ಲರ ನಿದ್ದೆ ಕೆಡಿಸಿದ್ದ ಧೊಂಡಿಯನ ಸಾಹಸ ಹೇಗಿತ್ತು ಎಂಬುದೇ ರೋಚಕ.


ಧೊಂಡಿಯ ಹುಟ್ಟಿದ್ದು ಚೆನ್ನಗಿರಿಯ ಮರಾಠ ಮನೆತನದ ದಂಪತಿಯ ಮಗ. ಬಾಲ್ಯದಿಂದಲೂ ಅಮ್ಮನಿಂದ ಹಾಗೂ ತನ್ನ ಗುರುವಿನಿಂದ ಧೊಂಡಿಯ ಹಲವಾರು ಬಾರಿ ಕೆಳದಿ ರಾಣಿ ಚೆನ್ನಮ್ಮನ ಕುರಿತಾಗಿ ಕೇಳುತ್ತಲೇ ಬೆಳೆದಿದ್ದ. ಧೊಂಡಿಯನಿಗೆ ಕಥೆ ಇದ್ದರೆ ಅದು ಚೆನ್ನಮ್ಮನ ಕಥೆಯೊಂದೇ. ದೇಶಪ್ರೇಮ ಹಾಗೂ ಕ್ಷಾತ್ರ ತೇಜಸ್ಸಿನ ಆತನಿಗೆ ತನ್ನ ಮೆಚ್ಚಿನ ಕುದುರೆ ಬೆಳ್ಳಿ ಎಂದರೆ ಬಹಳವೇ ಪ್ರೀತಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮನೆಯಲ್ಲಿ ಹಾಗೂ ಗುರುಗಳಿಂದ ದೇಶಪ್ರೇಮದ ಪಾಠ ಸಿಗುತ್ತಿತ್ತು. ಕುದುರೆ ಸವಾರಿಯಲ್ಲಿ ನಿಷ್ಣಾತನಾಗಿದ್ದ ಧೊಂಡಿಯ.


ಧೊಂಡಿಯ ಹಾಗೂ ಆತನ ಗೆಳೆಯ ರಾಮೋಜಿಗೆ ಅಶ್ವದಳದಲ್ಲಿ ಸೇರಬೇಕೆಂಬ ಮನಸಿದ್ದರೂ ಪರಿಸ್ಥಿತಿ ಅದಕ್ಕೆ ಅನುಕೂಲವಾಗಿರಲಿಲ್ಲ. ಬಿದನೂರಿನ ಕಷ್ಟದ ದಿನಗಳಲ್ಲಿ, ರಾಣಿಯ ಬಂಧನದ ಸಂದರ್ಭದಲ್ಲಿ ರಾಮೋಜಿ ಹಾಗೂ ಧೊಂಡಿಯ ಎಲ್ಲಿದ್ದರು ಹಾಗೂ ಆ ಸಂದರ್ಭ ಹೇಗಿತ್ತು..? ಬಿದನೂರಿನ ಪ್ರವೇಶದ್ವಾರದಲ್ಲಿ 'ಹೈದರ್ ನಗರ' ಎಂದು ನೇತು ಹಾಕಲಾಗಿದ್ದ ಫಲಕವನ್ನು ನೋಡಿ ಅವರ ಮುಂದಿನ ನಡೆ ಏನಾಯ್ತು..?


"ಆಳಾಗಬಲ್ಲವನು ಅರಸಾಗಬಲ್ಲ" ಎನ್ನುವ ಗಾದೆಯಂತೆ ಧೊಂಡಿಯ ಆಳಿನಂತೆ ದುಡಿದು, ಅರಸನಾಗುವ ಕನಸು ಕಾಣುತ್ತಿದ್ದ. ಹಾಗೆಂದು ಆತ ಆಸೆಪಡುತ್ತಿದ್ದದ್ದು ರಾಜ ವೈಭೋಗಕ್ಕಲ್ಲ. ಬದಲಾಗಿ, ಸೈನ್ಯ ಕಟ್ಟಿ ವಿರೋಧಿಗಳಿಗೆ ಹೆಡೆಮುರಿ ಕಟ್ಟುವುದಕ್ಕಾಗಿ. 


ಹೈದರಾಬಾದಿನ ನಿಜಾಮರು ಮತ್ತು ಮರಾಠರು ಮೈಸೂರಿನ ಮೇಲೆ ದಾಳಿ ಮಾಡುವ ಸಂಭವವಿತ್ತು. ಅಂತಹ ಸಂದರ್ಭದಲ್ಲಿ ಸಹಾಯಕ್ಕೆಂದು ಕರೆಸಿದ ಹೈದರಾಲಿ ಮುಂದೆ ಒಡೆಯರ್ ಕುಟುಂಬದಲ್ಲಿನ ಮುಸುಕಿನ ಗುದ್ದಾಟಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು ಮುಂಚೂಣಿಕೆ ಬಂದದ್ದೇಗೆ..? ಇದರ ಅರಿವು ಒಡೆಯರ್ ಮನೆತನಕ್ಕೆ ಆಗಲಿಲ್ಲವೇ..? 


ಇಂತಹ ಕಾಲಘಟ್ಟದಲ್ಲಿ ಹೈದರಾಲಿಯ ಸೈನ್ಯವನ್ನೇ ಸೇರುತ್ತಾನೆ ಧೊಂಡಿಯ. ವಿಷ್ಣು ಪಂಡಿತನ ಮಾರ್ಗದರ್ಶನದಲ್ಲಿ ಧೊಂಡಿಯನ ಕಾಯಕ ಆರಂಭವಾಗುತ್ತದೆ. ಧೊಂಡಿಯನ ಚುರುಕುತನ, ವೀರಾವೇಷ, ಜೊತೆಗಾರರನ್ನು ಅಪಾಯದಿಂದ ಪಾರು ಮಾಡಲು ಆತ ಮುನ್ನುಗುತ್ತಿದ್ದ ರೀತಿ ಎಲ್ಲವೂ ಸೆಳೆಯುತ್ತವೆ. 


ಹೈದರಾಲಿಯ ಸಾವಿನ ನಂತರ ಬ್ರಿಟಿಷರು ಅದರ ಲಾಭ ಪಡೆಯುವ ದೃಷ್ಟಿಯಿಂದ ಬಿದನೂರಿಗೆ ಬ್ರಿಟಿಷ್ ಪಡೆಯನ್ನು ಕಳುಹಿಸುತ್ತಾರೆ. ಟಿಪ್ಪುವಿನಿಂದಲೂ ಬಿದನೂರನ್ನು ಬಿಡಿಸುವ ಅವಕಾಶ ಒದಗಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದ ಧೊಂಡಿಯ. ದೊಡ್ಡ ಸೈನ್ಯದಿಂದ ಹೊರಬರಲು ಸೂಕ್ತ ಅವಕಾಶ, ಸಂದರ್ಭಕ್ಕಾಗಿ ಕಾಯುತ್ತಿದ್ದ. ಬ್ರಿಟಿಷರು ಹಾಗೂ ಮೈಸೂರು ಸೈನ್ಯಗಳ ನಡುವೆ ನಡೆಯುತ್ತಿದ್ದ ಯುದ್ಧಗಳಲ್ಲಿ ಕೆಲವೊಮ್ಮೆ ಅವರು ಮೇಲುಗೈ ಸಾಧಿಸಿದರೆ, ಕೆಲವೊಮ್ಮೆ ಇವರು. ಆದರೆ, ಇಬ್ಬರಿಂದಲೂ ಬಿದನೂರನ್ನು ರಕ್ಷಿಸಬೇಕೆನ್ನುವ ಕನಸು ಕಂಡಿದ್ದ. ಆಂತೆಯೇ ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಾ.. ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕಿದ್ದ. 


ಆತನಂತೆಯೇ ಕನಸುಳ್ಳವರು ಹಾಗೂ ಟಿಪ್ಪುವಿನ ಸೇನೆಯಿಂದ ಹೊರಬರಲು ಸಿದ್ಧರಾಗಿದ್ದವರು ರಾಮೋಜಿ ಹಾಗೂ ಧೊಂಡಿಯನ ಜೊತೆ ಸೇರಿ ಲಕ್ಷ್ಮೇಶ್ವರದತ್ತ ಹೊರಟರು. ಲಕ್ಷ್ಮೇಶ್ವರದ ದೇಸಾಯಿಯಿಂದ ಇವರಿಗೆ ಸಿಕ್ಕ ಪ್ರತಿಕ್ರಿಯೆಯೇನು..?


ಶೀಘ್ರ ನಿರ್ಧಾರ ತೆಗೆದುಕೊಳ್ಳುವ, ಅಷ್ಟೇ ತ್ವರಿತಗತಿಯಲ್ಲಿ ಕಾರ್ಯಗತಗೊಳಿಸುವ ಮತ್ತು ಶತ್ರುವಿನ ಬಲಾಬಲಗಳನ್ನು ತಿಳಿದು ಚಾಕಚಕ್ಯತೆಯಿಂದ ಗೆಲುವು ಸಾಧಿಸುವ ಗುಣಗಳೊಂದಿಗೆ ಅವನ ದೃಢಕಾಯ, ಕಂಚಿನ ಕಂಠಗಳಿಂದ ಆತನಿಗೆ 'ಹುಲಿ' ಎನ್ನುತ್ತಿದ್ದರು ಅವರೆಲ್ಲರ ಅಭಿಮಾನದ ನುಡಿಗಳಿಂದ ಧೊಂಡಿಯ ಈಗ 'ಧೊಂಡಿಯ ವಾಘ್' ಆಗಿದ್ದ. 


ಸೈನ್ಯ ಕಟ್ಟಿದ್ದ ಧೊಂಡಿಯನ ಕಾರ್ಯಕ್ಷೇತ್ರ ಹೇಗಿತ್ತು..? ಅಲ್ಲದೆ, ಮರಾಠರ ಕಡೆಯಿಂದ ಪ್ರತಿರೋಧ ಬರುವ ಸಂದರ್ಭವನ್ನು ಊಹಿಸಿ ಆತ ಮರಾಠರ ಪ್ರತಿನಿಧಿ ಧೋಂಡೋಪಂತ್ ಗೋಖಲೆಯವರ ಬಳಿ ಸಂಧಾನಕ್ಕಾಗಿ ದೂತರನ್ನು ಕಳುಹಿಸಿದರೂ ಅಲ್ಲಿಂದ ಇವರಿಗೆ ಸಿಕ್ಕದ್ದು ಮರಾಠರ ಪ್ರಹಾರ. ಇದಕ್ಕೆ ಕಾರಣವೇನು..? ಮುಂದೆ ಇದಕ್ಕೆ ಧೊಂಡಿಯ ಯಾವ ರೀತಿಯ ಪ್ರತಿಕಾರ ತೆಗೆದುಕೊಂಡ..?


ಟಿಪ್ಪುವಿನೊಂದಿಗೆ ಸಂಧಾನಕ್ಕೆ ಹೋದಾಗಲೂ ಆ ಸಂಧಾನ ಫಲಿಸುವುದಿಲ್ಲ. ಬದಲಾಗಿ ಆತನನ್ನು ಬಲಪ್ರಯೋಗದಿಂದ ಮತಾಂತರಗೊಳಿಸಲು ನೋಡುತ್ತಾರೆ. ಅದಕ್ಕೂ ಮುಂದೆ ಹೋಗಿ ಭೂತಳದ ನರಕದಂತಿದ್ದ ಜೈಲಿನಲ್ಲಿ ಆತನನ್ನು ಸೆರೆಯಾಳಾಗಿಸುತ್ತಾರೆ. 


ಧೊಂಡಿಯ ಹಾಗೂ ರಾಮೋಜಿ ಈ ದಿನಗಳನ್ನು ಕಳೆದದ್ದೇಗೆ..? ಈ ದಿನಗಳಲ್ಲಿ ಅವರು ತಪ್ಪಿಸಿಕೊಂಡು ಹೋಗಲಾಗದಿದ್ದರೂ.. ಅಲ್ಲಿ ಸಹಾಯ ಪಡೆದದ್ದೇಗೆ..? ಟಿಪ್ಪುವಿನ ಪತನವಾದ ನಂತರ ಧೊಂಡಿಯ ಬಂಧಮುಕ್ತನಾಗುತ್ತಾನಾದರೂ ಅದಕ್ಕೆ ಮುಖ್ಯವಾದ ವ್ಯಕ್ತಿ ಬೇರೆಯೇ ಇರುತ್ತಾರೆ. ಆ ವ್ಯಕ್ತಿ ಯಾರು?


ಧೊಂಡಿಯ ತನ್ನ ಸಂಗಡಿಗರೊಂದಿಗೆ ಮತ್ತೆ ಚೆನ್ನಗಿರಿಗೆ ಬರುತ್ತಾನೆ. ಅಷ್ಟೇ ಅಲ್ಲದೆ ತನ್ನ ಆತ್ಮಬಲದಿಂದ ಮತ್ತೆ ಸೈನ್ಯವನ್ನು ಕಟ್ಟುತ್ತಾನೆ. ಆತನ ಸಾಹಸಯಾತ್ರೆ ಮತ್ತಷ್ಟು ಬಲಗೊಳ್ಳುತ್ತದೆ. 'ಉಭಯ ಲೋಕಾಧೀಶ್ವರ' ಎಂಬ ಬಿರುದು ಆತನಿಗೆ ಸೇರಿಕೊಳ್ಳುತ್ತದೆ.


ಶಿಕಾರಿಪುರದ ಹುಚ್ಚುರಾಯಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ವಿಜಯದಶಮಿಯ ದಿನ ತಾಲೂಕಿನ ದಂಡಾಧಿಕಾರಿಗಳು ಒಂದು ಖಡ್ಗದಲ್ಲಿ ಬಾಳೆಕಂದು ಕತ್ತರಿಸುತ್ತಾರೆ. ಅದು ಅಂದು ಧೊಂಡಿಯ ದೇವರ ಪಾದದಲ್ಲಿರಿಸಿದ ಖಡ್ಗ. ಈ ಹಿನ್ನೆಲೆಯೇನು ಓದಿ ನೋಡಿ. 


ಧೊಂಡಿಯ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿದ ಪ್ರಸಂಗಗಳಾವುವು..? ಬಹುಮಾನದ ಆಸೆ ತೋರಿದರೂ ಜನರು ಆತನ ಗುಟ್ಟು ಬಿಟ್ಟುಕೊಡುವುದಿಲ್ಲ. ಸ್ವಯಂ ಸ್ಪೂರ್ತಿಯಿಂದ ಆತನಿಗೆ ನೆರವಾಗುವ ಎಷ್ಟೋ ಮಂದಿ ಅಜ್ಞಾತ ಸ್ವಾತಂತ್ರ್ಯವೀರರನ್ನು ಇಲ್ಲಿ ಕಾಣಬಹುದು. 


ಈ ಪುಸ್ತಕದ ಕೊನೆ ಕೊನೆಯಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿದ ಧೊಂಡಿಯ ಪಾರಾಗಲಿ ಮುಂದೆ ಪ್ರಾರ್ಥಿಸುವಂತಾಗುತ್ತದೆ. ಆತನ ಅಂತಿಮ ಹಣಾಹಣಿ ಹೇಗಿತ್ತು ಹಾಗೂ ಆತ ಹುತಾತ್ಮನಾದ ಬಗೆ ಹೇಗೆ..?


ಆತನೊಬ್ಬನನ್ನು ಮಣಿಸಲು ಎಷ್ಟು ದೀರ್ಘ ಸಮಯ ಹಿಡಿಯಿತು ಹಾಗೂ ಅದು ಎಷ್ಟು ಕಷ್ಟದ ಹಾದಿಯಾಗಿತ್ತು ಎಂಬ ಮಾತುಗಳನ್ನು ಇಲ್ಲಿ ಬ್ರಿಟಿಷರ ದೃಷ್ಟಿಯಲ್ಲಿ ಕಾಣಬಹುದು. 


ಸ್ವಾತಂತ್ರ್ಯದ ಹಾದಿಯಲ್ಲಿ ನಡೆದ ವೀರನ ಮೈನವಿರೇಳಿಸುವ ಸಾಹಸದ ಕ್ಷಣಗಳಿವೆ ಇಲ್ಲಿ. ವೀರನೊಬ್ಬನ ಬದುಕಿನ ಹಾದಿಯ ಚಿತ್ರಣ ಇಲ್ಲಿದೆ. ಯುವಜನತೆ ಓದಲೇಬೇಕಾದ ವೀರನ ಸಾಹಸವಿದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ