ಭಾನುವಾರ, ಏಪ್ರಿಲ್ 26, 2026

ಮಾದಕ ವಸ್ತು ನಿರ್ಮೂಲನೆ

ದಾರಿ ತಪ್ಪಿರುವ ಯುವ ಜನಾಂಗವನ್ನು ನೋಡಿದಾಗ ಅವರ ಬಾಲ್ಯದ ಪರಿಸ್ಥಿತಿ ಹೇಗಿರಬಹುದು ಎಂದು ಪರಾಮರ್ಶಿಸುವಂತಾಗುತ್ತದೆ. 

ಬಾಲ್ಯದಲ್ಲಿ ಮನೆಯ ವಾತಾವರಣ ಹಾಗೂ ಸಿಕ್ಕ ಶಿಕ್ಷಣ ಸಹ ಅವರ ಬದುಕಿನಲ್ಲಿ ಬದಲಾವಣೆಯ ಹಾದಿಯನ್ನು ತರಬಲ್ಲದು. ಅದು ಸಕಾರಾತ್ಮಕವಾಗಿಯೂ ಹೌದು.. ನಕಾರಾತ್ಮಕವಾಗಿಯೂ ಹೌದು. ನಕಾರಾತ್ಮಕ ಬೆಳವಣಿಗೆ ಎಂದಾಕ್ಷಣ ದುಶ್ಚಟಗಳ ದಾಸರಾಗಿರುವ ಯುವ ಜನತೆಯ ನೆನಪಾಗುತ್ತದೆ. ಧೂಮಪಾನ, ಮಧ್ಯಪಾನಕ್ಕಿಂತಲೂ ಅಪಾಯಕಾರಿಯಾಗಿ ಭಾಸವಾಗುವುದು ಮಾದಕ ದ್ರವ್ಯದ ವ್ಯಸನ. ಈ ವ್ಯಸನ ಎಷ್ಟು ಅಪಾಯಕಾರಿ ಎಂದರೆ.. ಅದು ತಕ್ಷಣವೇ ಜೀವಕ್ಕೆ ಕುತ್ತು ತರಬಲ್ಲದು, ಖಿನ್ನತೆಗೆ ದೂಡಬಲ್ಲದು. ಅಷ್ಟೇ ಅಲ್ಲದೆ, ಅದರ ಪರಿಣಾಮ ಮನೆಯವರು, ಸುತ್ತಮುತ್ತಲಿನವರ ಹಾಗೂ ಸಮಾಜದ ಮಾತನ್ನು ಕೇಳುವಂತಾಗಬಹುದು. ಹೀಗೆ ದಾರಿ ತಪ್ಪಿದವರನ್ನು ಸರಿದಾರಿಯಲ್ಲಿ ನಡೆಸದಿದ್ದರೆ ಅವರ ಭವಿಷ್ಯವೇ ಅಂಧಕಾರದಲ್ಲಿ ಸಿಲುಕಿ ಹೋಗಬಹುದು. ಇಂತಹ ಒಂದು ಘಟನೆಯನ್ನು ಮನೋವೈಜ್ಞಾನಿಕ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಗಿರಿಮನೆ ಶ್ಯಾಮರಾವ್ ಅವರು.


ನನ್ನ ಆಯ್ಕೆಯ ಪುಸ್ತಕದ ಶೀರ್ಷಿಕೆ : ಅನಾಥ ಹಕ್ಕಿಯ ಕೂಗು

ಲೇಖಕರು : ಗಿರಿಮನೆ ಶ್ಯಾಮರಾವ್  

ಪ್ರಕಾಶಕರು : ಗಿರಿಮನೆ ಪ್ರಕಾಶನ

ಪ್ರಥಮ ಮುದ್ರಣ : 2017

ಪುಟಗಳು : 152

ಬೆಲೆ : 130 ರೂ.


ಈ ಕಾದಂಬರಿಯಲ್ಲಿ ನಿರೂಪಣೆ ಆಕಾಶ್ ಎಂಬ ಪುಟ್ಟ ಹುಡುಗನ ದೃಷ್ಟಿಯಿಂದ ನಿರೂಪಿತವಾಗಿದೆ. ಆತನೇ ತನ್ನ ಜೀವನದ ಕಥಾನಕವನ್ನು ತೆರೆದಿಡುವಂತೆ ಹಾಗೂ ಆತನ ಭಾವನೆಯನ್ನು ಬಿಚ್ಚಿಡುವಂತೆ..


ಆ ಘಟನೆಗೂ ಮುನ್ನ ಕೊಂಚ ಹಿನ್ನೆಲೆ : 

ಉದ್ಯೋಗಸ್ಥ ತಂದೆ - ತಾಯಿಯ ಮುದ್ದಿನ ಮಗನಾಗಿದ್ದ ಆಕಾಶ್ ಮುಂದೆ ಪೋಷಕರ ವಿಚ್ಛೇದನದ ಕಾರಣದಿಂದ ತಾಯಿ ಸುಚಲಾಳ ಬಳಿ ಉಳಿಯಬೇಕಾಗಿ ಬರುತ್ತದೆ. ಮೊದಮೊದಲು ತಂದೆ ಬಂದು ಮಾತನಾಡಿಸುತ್ತಿದ್ದರು. ಅವರಿಗೂ ಮದುವೆಯಾಗುತ್ತದೆ. ತಾಯಿ ಸುಚಲಾ ಕೂಡ ಮತ್ತೊಂದು ಮದುವೆಯಾಗುತ್ತಾರೆ. ಸುಚಲಾಳ ಗಂಡನನ್ನು ತಂದೆ ಎಂದು ಒಪ್ಪಿಕೊಳ್ಳಲಾಗದ ಮನಸ್ಥಿತಿಯಲ್ಲಿ ಆಕಾಶ್ ಇರುತ್ತಾನೆ. ಬುದ್ಧಿವಂತನಾಗಿದ್ದವನು ಓದಿನಲ್ಲಿ ಸಹ ಆತ ಹಿಂದುಳಿದುಬಿಡುತ್ತಾನೆ. ಅದೇ ಸಂದರ್ಭದಲ್ಲಿ ಸುಚಲಾಳಿಗೆ ಮನಸ್ಸಿಲ್ಲದಿದ್ದರೂ ಎರಡನೇ ಪತಿಯ ಮಾತಿನಂತೆ ಅದೇ ಊರಿನಲ್ಲಿದ್ದ ಹಾಸ್ಟೆಲ್ ನಲ್ಲಿ ಮಗನನ್ನು ಬಿಡಬೇಕಾಗಿ ಬರುತ್ತದೆ. 


ಮಗನ ಜೊತೆಗಿರಲಾಗದ ಸಂದಿಗ್ಧಕ್ಕೆ ಅಪ್ಪ ಹಾಗೂ ಅಮ್ಮ ಇಬ್ಬರೂ ಮಗನನ್ನು ನೋಡಲು ಬಂದಾಗಲೆಲ್ಲಾ ಆತನ ಕೈಯಲ್ಲಿ ಆತನ ಖರ್ಚಿಗಾಗಿ ಹಣ ನೀಡುತ್ತಿರುತ್ತಾರೆಎಂ ಆಗ ಆಕಾಶ್  ಇನ್ನೂ ಐದನೇ ತರಗತಿ ಓದುತ್ತಿದ್ದ. ಹಾಸ್ಟೆಲ್ ನಲ್ಲಿ ಇಟ್ಟರೆ ಹಣ ಕದಿಯುತ್ತಾರೆ ಎಂಬ ಕಾರಣಕ್ಕಾಗಿ ಪಕ್ಕದ ಗೂಡಂಗಡಿಯ ಅಂಕಲ್ ಕೈಯಲ್ಲಿ ಹಣ ನೀಡಲು ಶುರುವಿಟ್ಟ. ತನಗೆ ಬೇಕಾದದ್ದನ್ನು ಇಲ್ಲಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದಾಗ.. ಆತನ ವೈಯಕ್ತಿಕ ಜೀವನದ ವಿವರ, ಅವನ ಮನಸ್ಥಿತಿ ಗೊತ್ತಿದ್ದ ಆ ಗೂಡಂಗಡಿಯ ವ್ಯಕ್ತಿ ಆತನ ದುಃಖಕ್ಕೆ ಆಸರೆಯಾಗುವಂತೆ ಮಾತನಾಡಿಸಲಾಯಿಸಿ ಚಾಕಲೇಟ್ ಎನ್ನುವ ಹೆಸರಲ್ಲಿ ಡ್ರಗ್ಸ್ ನೀಡುತ್ತಾನೆ. 


ರಾತ್ರಿ ಊಟವಾದ ನಂತರ ಒಂದನ್ನೇ ತಿನ್ನಬೇಕು ಎನ್ನುವ ನಿಬಂಧನೆ ಯೊಂದಿಗೆ ಆತನಿಗೆ ಚಾಕಲೇಟ್ ರೂಢಿ ಮಾಡಿಸುತ್ತಾನೆ. ತನ್ನ ತಂದೆ ಹಾಗೂ ತಾಯಿಯ ಪ್ರೀತಿ ದೊರಕದ ಆಕಾಶ್ ಭ್ರಮಾಲೋಕದಲ್ಲಿ ಅವರ ಜೊತೆ ತಾನು ಕಾಲ ಕಳೆಯುತ್ತಾ ಮನದಾಸೆಗಳು ನೆರವೇರಿದಂತೆ ಖುಷಿಯಾಗಿರುತ್ತಾನೆ. ಮಾದಕ ದ್ರವ್ಯದ ವ್ಯಸನಕ್ಕೆ ಒಳಗಾಗುತ್ತಾನೆ. ಅಷ್ಟೇ ಅಲ್ಲದೆ, ತನ್ನಂತೆಯೇ ಇದ್ದ ತನ್ನ ಗೆಳೆಯ ವಿಕಾಸ್ ನಿಗೂ ಅದರ ರುಚಿ ಹತ್ತಿಸುತ್ತಾನೆ. ಪಾಪ ಆ ಹುಡುಗನೂ ತನ್ನಂತೆಯೇ ತಂದೆ - ತಾಯಿಯ ಪ್ರೀತಿ ಇಲ್ಲದವನು ಎಂದುಕೊಂಡು ಸಹಾನುಭೂತಿ ತೋರುತ್ತಾನೆ. ಆತನ ತಂದೆ-ತಾಯಿಯೂ ವಿಚ್ಛೇದನ ಪಡೆದಿದ್ದವರು. 


ಮುಂದೆ ಆ ಗೂಡಂಗಡಿಯ ವ್ಯಕ್ತಿ ಹೆಚ್ಚಿನ ಹಣ ಪಡೆದು ಹೆಚ್ಚಿನ ಡೋಸೇಜ್ ಇರುವ ಡ್ರಗ್ಸ್ ಅನ್ನು ನೀಡಲು ಶುರು ಮಾಡುತ್ತಾನೆ. ಈತನ ಮನೆಯಂತೆ ಯಾವಾಗಬೇಕೆಂದರೆ ಆಗ ಹಣ ಕೊಡದ ವಿಕಾಸ್ ಮನೆಯವರಿಂದ ಶಾಲಾ ಪ್ರಿನ್ಸಿಪಲ್ ಹಾಗೂ ಪೊಲೀಸರಿಗೆ ಈ ವಿಚಾರ ತಿಳಿಯುತ್ತದೆ. ಆಕಾಶ್ ನ ತಂದೆಯನ್ನು ಕರೆಸಿ ಈ ವಿಚಾರ ತಿಳಿಸಿದಾಗ ಅವರು ಮುಂದೆ ಮಗನ ನಂಟನ್ನೇ ಕಡಿದುಕೊಂಡು ಬಿಡುತ್ತಾರೆ. ಆತ ಇದ್ದಿದ್ದರೆ, ಬುದ್ಧಿ ಹೇಳಿದ್ದರೆ ಸರಿಯಾಗುತ್ತಿತ್ತೇನೋ.. ಆದರೆ, ಹಾಗಾಗುವುದಿಲ್ಲ. 


ಮುಂದೆ ಶಾಲೆಯಲ್ಲಿಯೂ ಶಿಕ್ಷಕರು ಆತ ಏನಾದರೂ ತಪ್ಪು ಮಾಡಿದಾಗ ಪ್ರತಿ ಬಾರಿಯೂ ಅವನ ಡ್ರಗ್ಸ್ ವಿಚಾರವನ್ನು ಎತ್ತಿ ಆಡುತ್ತಿರುತ್ತಾರೆ. ಅದು ಮುಗ್ಧ ಮನಸ್ಸಿನ ಮೇಲೆ ಪರಿಣಾಮ ಬೀರಿ ಟೆಸ್ಟ್ ನಲ್ಲಿಯೂ ಸರಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗದಾಗ ಆತನ ತಾಯಿ ಯನ್ನು ಕರೆಸಿ ಮಾತನಾಡಿ ಪ್ರಿನ್ಸಿಪಲ್ ಆತನನ್ನು ಮನೋವೈದ್ಯರ ಬಳಿ ಕರೆದೊಯ್ಯುವಂತೆ ಹೇಳುತ್ತಾರೆ. ಮುಂದೆ ಡಾಕ್ಟರ್ ವೇದವ್ಯಾಸ್ ಅವರ ಆಪ್ತಸಲಹೆಗಳು, ಚಿಕಿತ್ಸೆ ಶುರುವಾಗುತ್ತದೆ. 


ಇಲ್ಲಿ ಮಕ್ಕಳಿಗೆ ಡ್ರಗ್ಸ್ ನೀಡುತ್ತಿದ್ದ ಆ ಗೂಡಂಗಡಿಯ ವ್ಯಕ್ತಿಯನ್ನು ಪೊಲೀಸರು ಬಂಧಿಸುತ್ತಾರೆ. ಆದರೆ, ಅಷ್ಟರೊಳಗಾಗಿ ಆತ ಕೆಲವು ಮಕ್ಕಳ ಮೇಲೆ ಡ್ರಗ್ಸ್ ನ ಪ್ರಭಾವ ಬೀರಿರುತ್ತಾನೆ. 


ಈ ಮಾದಕ ದ್ರವ್ಯದ ವ್ಯಸನವನ್ನು ಮೂಲದಿಂದಲೇ ಬುಡಸಮ ಮಾಡದಿದ್ದರೆ.. ಅದು ತನ್ನ ಕಬಂಧಬಾಹುವನ್ನು ಎಲ್ಲೆಡೆಯೂ ಚಾಚಬಲ್ಲದು. ಅದರಲ್ಲಿಯೂ ಅರಿಯದ ಮಕ್ಕಳಿಗೆ ಅವರು ಇಷ್ಟಪಡುವ ಚಾಕಲೇಟ್ ಅಥವಾ ಬೇರಾವುದೋ ರೂಪದಲ್ಲಿ ಆಮಿಷ ತೋರಿ ಅದನ್ನು ಚಟವಾಗಿಸುವ ದುರ್ಜನರೂ ಇಲ್ಲದ್ದಿಲ್ಲ. ಕಾದಂಬರಿಯಲ್ಲಿ ಈ ಸಂದರ್ಭದಲ್ಲಿ ಮಗು ಹೆಚ್ಚಿನ ಚಟ ಹತ್ತಿಸಿಕೊಳ್ಳದೆ ಬೇಗ ಮುಗಿದು ಹೋಯಿತು. ಆದರೆ, ಈ ಘಟನೆ ಆತನ ಮೇಲೆ ಬೀರಿದ ಪ್ರಭಾವ ವಿಭಿನ್ನವಾದದ್ದು. 


ಬುದ್ಧಿ ಹೇಳುವ ತಂದೆ, ಶಿಕ್ಷಣ ನೀಡುವ ಶಿಕ್ಷಕರೇ ಆ ಅವನ ತಪ್ಪನ್ನು ಎತ್ತಿ ಆಡಿದಾಗ ಮಗುವಿನ ಮನಸ್ಸು ಮನಸ್ಥಿತಿ ಹೇಗಿರಬೇಡ.. ಒಳ್ಳೆಯ ಸೈಕಿಯಾಟಿಸ್ಟ್ ದೊರೆತಿದ್ದಕ್ಕೆ ಸರಿಯಾಯ್ತು. ಇಲ್ಲದಿದ್ದರೆ..?! ಇಂತಹ ಸಂದರ್ಭಗಳನ್ನು ಯೋಚಿಸಲೂ ಭಯವಾಗುತ್ತದೆ. ಮಕ್ಕಳನ್ನು ಎಷ್ಟು ಜೋಪಾನ ಮಾಡಿ ಬೆಳೆಸಿದರೂ ಸಾಲದು. ಅದರಲ್ಲಿಯೂ ಅವರ ಭವಿಷ್ಯ ರೂಪುಗೊಳ್ಳುವಾಗ ಇಂತಹ ಚಟಗಳಿಗೆ ಬಲಿಯಾದರಂತೂ ಬಹಳವೇ ಕಷ್ಟ. ಮಕ್ಕಳ ಕೈಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಹಣ ನೀಡುವುದು ಅಪಾಯಕಾರಿಯೇ.. ತಾವು ಮಾದಕ ದ್ರವ್ಯದ ಜಾಲಕ್ಕೆ ಒಳಗಾಗುತ್ತಿದ್ದೇವೆ ಎಂಬ ಅರಿವೇ ಇಲ್ಲದ ಮುಗ್ಧ ಮನಸ್ಸುಗಳು ಇಂತಹ ಕಠೋರ ಸಂದರ್ಭಗಳನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಮಕ್ಕಳ ಮಾತುಗಳನ್ನು ಕೇಳಿಸಿಕೊಳ್ಳುತ್ತಾ.. ಅವರಿಗೆ ಇದರ ಬಗ್ಗೆ ಅರಿವು ಮೂಡಿಸುತ್ತಾ.. ಸ್ನೇಹಿತರ ಬಳಗವನ್ನು ಗಮನಿಸುತ್ತಾ.. ಮಾರ್ಗದರ್ಶನ ಮಾಡಿದರೆ ಇಂತಹ ಸಂದರ್ಭಗಳು ಎದುರಾಗುವುದಿಲ್ಲ ಎನ್ನುವುದು ನನ್ನ ಅನಿಸಿಕೆ


ಮಾದಕ ದ್ರವ್ಯದ ವ್ಯಸನ ಇಲ್ಲಿ ಎಷ್ಟು ಬೇಗ ಕೊನೆಯಾಯಿತೋ ಹಾಗೆ ಬುಡ ಸಮೇತ ನಿರ್ಮೂಲನೆಯಾಗಲಿ ಎಂದು ಬಯಸೋಣ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ