ಪುಸ್ತಕದ ಶೀರ್ಷಿಕೆ : ನಿರಾಶ್ರಿತೆ
ಲೇಖಕರು : ಎಚ್. ವಿ. ಸಾವಿತ್ರಮ್ಮ
ಪ್ರಕಾಶಕರು : ಕಾವ್ಯಾಲಯ
ಪ್ರಥಮ ಮುದ್ರಣ : 1949
ಪುಟಗಳು : 153
ಎಚ್. ವಿ. ಸಾವಿತ್ರಮ್ಮನವರ ಈ ಕಥಾ ಸಂಕಲನದಲ್ಲಿ ಒಟ್ಟು 12 ಕತೆಗಳಿವೆ.
ನಿರಾಶ್ರಿತೆ : ಹುಟ್ಟುತ್ತಲೇ ತಂದೆ-ತಾಯಿಗಳನ್ನು ಕಳೆದುಕೊಂಡಿದ್ದ ಚಂದ್ರನನ್ನು ಸೋದರಮಾವ ಪ್ರೀತಿಯಿಂದ ಸಾಕಿದ್ದರು. ಅವರ ಒಬ್ಬಳೇ ಮಗಳು ತುಳಸಿಯನ್ನು ಕೊಟ್ಟು ವಿವಾಹ ಮಾಡಿದರು. ಆತ ವೈದ್ಯನಾಗಿದ್ದನು. ರಾವಲ್ಪಿಂಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಾಗ ಯೌವ್ವನದ ಹುಚ್ಚು ಹಟದಿಂದ ಅಲ್ಲಿಯೇ ಕೆಲಸಕ್ಕೆ ಸೇರಿ ಪತ್ನಿಯನ್ನೂ ಕರೆದೊಯ್ದಿದ್ದನು. ಪುಟ್ಟ ಮಗು ರಾಧೆಯೊಂದಿಗೆ ಸಂತೃಪ್ತಿಯಿಂದ ಜೀವನ ನಡೆಸುತ್ತಿದ್ದ ಗಳಿಗೆಗಳು.. ಅಹಿಂಸೆಯಿಂದ ಸ್ವಾತಂತ್ರ್ಯವೂ ಬಂದಿದ್ದ ಸಂದರ್ಭ. ಆದರೆ, ಅಂದು ಸಂಜೆ ಆತ ಕೆಲಸದಿಂದ ಬರುವಷ್ಟರಲ್ಲಿ ನಗರದಲ್ಲಿ ಉಂಟಾದ ಗಲಭೆಯಿಂದ ಮನೆ ಉರಿದು ರಾಧೆ ಆತನ ಕಣ್ಮುಂದೆ ಸುಟ್ಟು ಕರಕಲಾಗಿದ್ದಳು. ತುಳಸಿಯ ಪತ್ತೆಯಿರಲಿಲ್ಲ. ದಿಕ್ಕುಗಾಣದೆ ಮಾವನ ಮನೆಗೆ ಬಂದು ನಿರಾಶ್ರಿತರ ಸೇವೆ ಮಾಡುತ್ತಿದ್ದ. ಮಹಾತ್ಮರ ಮಾತಿನಲ್ಲಿಯೂ ಭರವಸೆ ಇಡುತ್ತಿದ್ದ. ತುಳಸಿ ಸಿಗುವಳೆಂದು ಅವರೂ ಹೇಳಿದರು. ಅವಳ ಮೇಲೆ ವಿಚಾರಣೆ ಮಾಡಬಾರದೆಂದು ಹೇಳಿದ್ದರು. ತುಳಸಿ ಸಿಗುತ್ತಾಳೆ. ಆದರೆ, ಅವಳಿಗೆ ಆಶ್ರಯ ಸಿಗುತ್ತದೆಯೇ..? ಓದಿ ನೋಡಿ.
ಪುನರ್ಜನ್ಮ : ಗೋಪುವಿನ ತಂದೆಗೆ ಈಗ ಇದ್ದದ್ದು ಎರಡನೇ ಹೆಂಡತಿ. ಗೋಪುವಿನ ತಾಯಿಯ ಮೇಲೆ ಅವಳ ಸವತಿಯ ದೆವ್ವ ಬರುತ್ತಿದ್ದದು ಗೋಪುವಿಗೆ ಬಹಳ ದಿಗಿಲು ಹುಟ್ಟಿಸುತ್ತಿತ್ತು. ಮುಂದೆ ಪ್ರತಿ ಶುಕ್ರವಾರ ಗೋಪುವಿನ ಮೈಮೇಲೆ ನರಸಿಂಹದೇವರು ಬರಲು ಶುರು ಮಾಡಿದ್ದರಿಂದ ಶಾಲೆ ತೊರೆಯಬೇಕಾಗಿ ಬಂದಿತು. ಪಕ್ಕದ ಮನೆಯಲ್ಲಿದ್ದ ಗರ್ಭಿಣಿ ರೇವತಿ ಓದಿದ ಹುಡುಗಿಯಾಗಿದ್ದರೂ ಭಯ ತಪ್ಪಿರಲಿಲ್ಲ. ರೇವತಿ ಗೋಪುವಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದಳಾದರೂ ಅವಳಿಗೆ ಆತನ ಮೇಲೆ ಶುಕ್ರವಾರ ಬರುತ್ತಿದ್ದ ದೇವರ ಅವತಾರ ಕಂಡು ಭಯವೇ..! ಒಂದು ಶುಕ್ರವಾರ ನಡೆದ ಘಟನೆಯಿಂದ ರೇವತಿ ಹಾಗೂ ಗೋಪು ಈ ಇಬ್ಬರಿಗೂ ಪುನರ್ಜನ್ಮ ನೀಡಿತು. ಆ ಘಟನೆಯನ್ನು ಓದಿ ನೋಡಿ.
ಜಾತಿಯ ಬಲಿ : ಹಸನನ ಜೀವನದಲ್ಲಿ "ಬರಬಾರದು, ಮಾಡಬಾರದು" ಎನ್ನುವ ಪದಗಳೇ ಪದೇಪದೇ ಕೇಳಿ ಬರುತ್ತಿದ್ದಕ್ಕೆ ಕಾರಣ ಆತ ತಬ್ಬಲಿ. ದೂರದ ಸಂಬಂಧಿಯೊಬ್ಬರ ಮನೆಯಲ್ಲಿ ಆಶ್ರಯ ಸಿಕ್ಕಿತು. ಆ ಮನೆಯ ಯಜಮಾನಿ ರಶೀದಾಳಿಗೆ ಮಕ್ಕಳಿಲ್ಲವಾದರೂ ಹಸನನನ್ನು ಕಂಡರೆ ಅಷ್ಟಕ್ಕಷ್ಟೇ.. ಪಕ್ಕದ ಮನೆಯ ಲಲಿತೆಯ ಜೊತೆಗೆ ಹಸನನ ಸ್ನೇಹ ಬಲಿತಿತ್ತು. ಊರಿನಲ್ಲಿ ಶುರುವಾಗಿದ್ದ ಜಾತಿಜಗಳದ ಕಿಚ್ಚಿಗೆ ರಶೀದಾ ಮತ್ತು ಅವಳ ಪತಿ ಊರು ಬಿಟ್ಟಿದ್ದರು. ಆ ಸಂದರ್ಭದಲ್ಲಿ ಹಸನ ಲಲಿತೆಯ ಜೊತೆಗೆ ಪೇಟೆಗೆ ಹೋಗಿದ್ದ. ಇವನು ಇಲ್ಲಿಯೇ ಉಳಿದು ಹೋದ. ಪುಟ್ಟ ಮಗುವಿನ ಮುಂದಿನ ಬದುಕು ಹಾಗೂ ನಿಷ್ಕಲ್ಮಶ ಸ್ನೇಹದ ನಡುವೆ ಜಾತಿ ಬಲಿ ಪಡೆದುಕೊಂಡದ್ದು ಯಾರನ್ನು ಓದಿ ನೋಡಿ.
ಪಶ್ಚಾತ್ತಾಪ : ಸುಬ್ಬು ತನ್ನ ಪತ್ನಿ ಶಾರದೆಯ ಮಡಿಯನ್ನು ಕಂಡು ಆಕೆ ಆಧುನಿಕ ಜೀವನಕ್ಕೆ ಹೊಂದಿಕೊಂಡಿರಬಾರದೇ ಎಂದು ಪೇಚಾಡುತ್ತಿದ್ದರೂ ಶಾರದೆ ಬದಲಾಗಿರಲಿಲ್ಲ. ಆಗಾಗ ಹೋಗುತ್ತಿದ್ದ ತನ್ನ ಗೆಳೆಯ ವಿಶ್ವನ ನಾದಿನಿ, ವಿಧವೆಯಾಗಿದ್ದ ಪಾರ್ವತಿಯ ಮೇಲೆ ಆತನಿಗೆ ಮೋಹವುಂಟಾಗಿ ನಂತರ ಅವಳೊಡನೆ ವಿವಾಹವೂ ಆಗುತ್ತದೆ. ಕೆಲಕಾಲದ ನಂತರ ಸುಬ್ಬು ತನ್ನ ಪತ್ನಿ ಶಾರದೆಯ ಬಳಿ ಬಂದು ಕ್ಷಮೆ ಬೇಡಿದ್ದಕ್ಕೆ, ಆ ಪಶ್ಚಾತ್ತಾಪಕ್ಕೆ ಕಾರಣವಿತ್ತೇ ಓದಿ ನೋಡಿ.
ಕಲ್ಯಾಣಿ : ಹಳ್ಳಿಗೆ ಹಳ್ಳಿಯೇ ಪಾಳು ಬಿದ್ದಂತಾಗಿದ್ದ ಸಂದರ್ಭದಲ್ಲಿ ಕಲ್ಯಾಣಿಯ ಮನಸ್ಥಿತಿಯೂ ಅಂತೆಯೇ ಇತ್ತು. ಪತಿ ಕೇಶವನ ಅಂಗಡಿ ಸುಟ್ಟು ನಾಶವಾದ ದಿನದಿಂದ ಆರ್ಥಿಕ ಪರಿಸ್ಥಿತಿ ಕೆಡುತ್ತಾ ಬಂದಿತ್ತು. ಮನೆಗೂ ಕ್ಷಾಮ ಆವರಿಸುತ್ತಿತ್ತು. ಯಾವ ಸಂದರ್ಭದಲ್ಲಿ ಹೇಗೋ ಎನ್ನುವಾಗ ಒಂಟಿಯಾಗಿದ್ದ ಅವಳ ಮನೆಯ ಬಾಗಿಲು ತಟ್ಟಿದ ಹೆಂಗಸನ್ನು ಕಂಡು.. ಆಕೆ ಮುಸಲ್ಮಾನರೆಂದು ತಿಳಿದೂ ಆಕೆಗೆ ಆಶ್ರಯ ನೀಡಿದಳು. ಮನೆಗೆ ಬಂದ ಗುಂಪೊಂದರಿಂದ ದಾಳಿಗೊಳಗಾದವರು ಯಾರು..? ಅಷ್ಟಕ್ಕೂ ಕೇಶವನ ಹೇಯ ಕೃತ್ಯವಾದರೂ ಹೇಗಿತ್ತು ಓದಿ ನೋಡಿ.
ಗುರುಪೀಠ : ಹತ್ತು ವರ್ಷದ ಲಕ್ಷಣವಾಗಿದ್ದ ಹುಡುಗ ಮಾಧವನಿಗೆ ಬುದ್ಧಿ ಬರುವ ಮುಂಚೆಯೇ ಗುರುಗಳ ದೃಷ್ಟಿ ಬಿದ್ದು ಆತ ಸನ್ಯಾಸತ್ವ ಸ್ವೀಕರಿಸುವಂತಾಯಿತು. ಅರಿಯದ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಎಳೆಯ ಮನಸ್ಸಿನ ಮೇಲೆ ಯಾವೆಲ್ಲಾ ಪರಿಣಾಮ ಬೀರಿತು..? ಆತನ ತಂದೆ-ತಾಯಿಯರ ಮನಸ್ಥಿತಿ ಹೇಗಿತ್ತು..? ಮುಂದೊಂದು ದಿನ ಆತನಿಗೆ ಆತನ ಸುಪ್ತ ಮನಸ್ಸಿನ ಆಸೆಗಳನ್ನು ಚೇತನಗೊಳಿಸಿದ ಗೌರಿ ಎದುರಾದ ಸಂದರ್ಭ ಹೇಗಿತ್ತು? ಮಾಧವನಿಗೆ ಮುಖ್ಯವಾದದ್ದು ಗುರುಪೀಠವೋ ಅಥವಾ ತನ್ನ ಪ್ರೀತಿಯೋ..? ಆತ ಯಾವ ನಿರ್ಧಾರ ತಳೆದನು ಓದಿ ನೋಡಿ.
ಚಿರದುಃಖಿ : ಕಿಟ್ಟನಿಗೆ ಇದ್ದ ಏಕ ಮಾತ್ರ ಬಂದು ಆತನ ಚಿಕ್ಕಪ್ಪ. ಆತನನ್ನು ಆತನ ಭಯ ಎಲ್ಲರೊಡನೆ ಬೆರೆಯಲು ಬಿಡುತ್ತಿರಲಿಲ್ಲ. ಆಟ-ಪಾಠ, ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಪುಸ್ತಕದಲ್ಲಿ ಮುಳುಗಿ ಹೋಗುತ್ತಿದ್ದವನ ಕೀರ್ತಿ ಎಲ್ಲೆಡೆ ಪಸರಿಸಿತ್ತು. ಓದಿನಲ್ಲಿ ಆತ ಎಂದೆಂದೂ ಮುಂದೆ ನ ಆತನಿಗೆ ಗೆಳೆಯನಾದ ಶಂಕರ ಆತನ ಸ್ವಭಾವವನ್ನು ಕೊಂಚಮಟ್ಟಿಗೆ ಬದಲಿಸಲು ಕಾರಣನಾಗುತ್ತಾನೆ. ಮುಂದೆ ಕಿಟ್ಟಿಯ ಕಣ್ಣುಗಳು ಬಹಳ ಕೆಟ್ಟಿರುವವೆಂದು ಅವುಗಳನ್ನು ಪೀಡಿಸಿದರೆ ತೀರಾ ಕುರುಡಾಗುವ ಸಂಭವವಿದೆ ಎಂದು ಹೇಳಿದಾಗ ಆತನ ಕನಸು ಮಣ್ಣುಪಾಲಾಗಿ ಹೋಗಿತ್ತು. ಮುಂದೆ ಚಿಕ್ಕಪ್ಪನ ಮನೆಯನ್ನು ಸೇರಿದವನಿಗೆ ಮತ್ತೊಂದು ಆಘಾತ ಕಾದಿತ್ತು. ಅತ್ತೆಯ ಮಗಳೇ ಆಗಿದ್ದ, ಚಿಕ್ಕಂದಿನಿಂದಲೂ ಇವನಿಗೆಂದೇ ನಿಶ್ಚಯ ಮಾಡಿದ್ದ ಮೀನಾಕ್ಷಿಯನ್ನು ಆತನ ಗೆಳೆಯ ಶಂಕರನಿಗೆ ವಿವಾಹ ಮಾಡಿಕೊಡಲು ನಿಶ್ಚಯಿಸಿದರು ಚಿಕ್ಕಮ್ಮ. ಮೀನಾಕ್ಷಿಯ ಮನಸ್ಸು ಯಾರ ಮೇಲಿತ್ತು..? ಯಾರ ಹಣೆಬರಹ ಹೇಗೆ ಬದಲಾಯಿತು..? ಇಲ್ಲಿ ಚಿರದುಃಖಿಯಾದವರು ಯಾರು?
ಸೋದರಿಕೆ : ಮಾಧವರಾಯರಿಗೆ ಅವರ ಮಗಳು ನಳಿನಿಯನ್ನು ತಂಗಿಯ ಮಗ ರಂಗನಿಗೆ ಕೊಟ್ಟು ಮದುವೆ ಮಾಡಿಕೊಡಲು ಇಷ್ಟವಿರಲಿಲ್ಲ. ಹಾಗಾಗಿ ಬೇರೆಯವರೊಡನೆ ವಿವಾಹ ನಿಶ್ಚಯಿಸಿದ್ದರು. ನನಗೆ ಕಾರಣ ತಂಗಿಯ ಗಂಡನ ವರ್ತನೆ. ಆತನ ಮಗನು ಆತನಂತೆಯೇ ನಡೆದುಕೊಳ್ಳಬಹುದು ಎಂಬ ಹೆದರಿಕೆಯಿಂದ.. ರಂಗನ ಸಹಪಾಠಿಯಾಗಿದ್ದ ರಾಮಚಂದ್ರನೊಡನೆ ನಳಿನಿಯ ವಿವಾಹ ನೆರವೇರುತ್ತದೆ. ಮಾಧವರಾಯರ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ರಂಗ ಸೇಡು ತೀರಿಸಿಕೊಂಡನೇ ..? ಒಂದು ಸಂಜೆಯ ಘಟನೆ ಇಡೀ ಕಥೆಯನ್ನು ಬದಲಿಸುತ್ತದೆ ಇಲ್ಲಿ.
ಆತ್ಮಾರ್ಪಣೆ : ಸಾಮಿ ಓದಿ ಒಳ್ಳೆಯ ಕೆಲಸ ಹಿಡಿದರೆ ತಮಗೆ ಅನುಕೂಲವಾಗುತ್ತದೆಂದು.. ಬುದ್ಧಿವಂತನಾದ ಆತನಿಗೆ ಎಲ್ಲಾ ಅನುಕೂಲವನ್ನು ತಂದೆ-ತಾಯಿ ಮಾಡಿಕೊಟ್ಟರೆ ತನಗೆ ರಾಷ್ಟ್ರಪ್ರೇಮ ಎಚ್ಚರವಾಗಿ ರಾಷ್ಟ್ರ ಸೇವೆಗೆ ಮನ ತುಡಿಯುತ್ತಿತ್ತು. ಪರೀಕ್ಷೆಯ ಸಮಯದಲ್ಲಿ ಓದು, ಪರೀಕ್ಷೆಯನ್ನು ಬಿಟ್ಟು ಆತ ರಾಷ್ಟ್ರಸೇವೆಗೆ ನಿಂತಿದ್ದನು. ಒಮ್ಮೆಯಾದರೆ ಸರಿ. ಎರಡು ಬಾರಿಯೂ ಹಾಗೆಯೇ ಆದಾಗ ತಂದೆ ತಾಯಿಯ ವರ್ತನೆ ಹೇಗಿತ್ತು ಓದಿ ನೋಡಿ.
ಬಹಿಷ್ಕೃತೆ : ಡಾಕ್ಟರ್ ಥಾಮಸ್ ತಮ್ಮಲ್ಲಿ ವಿಶ್ವಾಸವಾಗಿದ್ದ ಪುಟ್ಟಣ್ಣನಿಗೆ ಬ್ರಾಹ್ಮಣ ವಿಧವೆಯ ಹೆಣ್ಣು ಮಗುವೊಂದನ್ನು ತಾವು ಅನಾಥಾಲಯಕ್ಕೆ ಸೇರಿಸಿಕೊಳ್ಳಲು ಹೊರಟಿರುವದಾಗಿ ಹೇಳುತ್ತಿದ್ದಾಗ ಅವರ ಅತ್ಯಭಿಮಾನ ಚುಚ್ಚಿದಂತಾಗಿತ್ತು. ಪುಟ್ಟಣ್ಣ ಆಗಲೇ ಆ ಮಗುವನ್ನು ನೋಡಿ ತಾನೇ ಸಾಕಿಕೊಳ್ಳಲು ನಿರ್ಧರಿಸಿ ಪತ್ನಿ ರುಕ್ಮಿಣಿಯನ್ನು ಒಪ್ಪಿಸುತ್ತಾನೆ. ಮಗ ಪ್ರಭಾಕರನೊಂದಿಗೆ, ಜಯ ಮಗಳಂತೆ ಬೆಳೆಯುತ್ತಾಳೆ. ಆದರೆ ವಿವಾಹದ ಸಂದರ್ಭ ಬಂದಾಗ ಅವಳ ಹುಟ್ಟಿನ ರಹಸ್ಯ ರಹಸ್ಯವಾಗಿಯೇ ಉಳಿದು ಹೋದಾಗ, ಸಮಾಜದಲ್ಲಿ ನಿರೀಕ್ಷಿತ ಬದಲಾವಣೆ ಕಾಣದಿದ್ದಾಗ ಆಕೆಯನ್ನು ವಿವಾಹವಾದವರು ಯಾರು? ಪುಟ್ಟಣ್ಣನ ಪ್ರಯತ್ನ ಏನಾಯ್ತು ಓದಿ ನೋಡಿ.
ಅಸಡ್ಡೆಯೋ ಅಕ್ಕರೆಯೋ? : ರಾಮು ಹಾಗೂ ಇಂದು ದಂಪತಿಗಳ ವಿವಾಹದ ನಂತರದ ಬದುಕಿನಲ್ಲಿ ಅವರಿಬ್ಬರ ನಡವಳಿಕೆಗಳು ಮತ್ತೊಬ್ಬರ ಮುನಿಸಿಗೆ ಕಾರಣವಾಗುತ್ತಿದ್ದ ಸಂದರ್ಭಗಳು. ಮುನಿಸನ್ನು ಮರೆತು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೊಂದು ಮುನಿಸು. ಹೀಗೆ ಅವರಿಬ್ಬರ ಮನದ ಭಾವಗಳು ಅಸಡ್ಡೆಯೋ ಅಥವಾ ಅಕ್ಕರೆಯೋ ಎಂದು ಪರಸ್ಪರರ ಭಾವದಲ್ಲಿ ಹೆಣೆಯಲಾಗಿರುವ ಕಥೆ ಇದು.
ಮಾಯದ ನೆನಪು : ಒಂಬತ್ತು ವರ್ಷದ ಲಕ್ಷ್ಮಿಗೆ ಶ್ಯಾಮ "ಎಷ್ಟು ದಿನ ಬಿಟ್ಟು ಬಂದರೂ ನಿನ್ನನ್ನೇ ಮದುವೆಯಾಗುತ್ತೇನೆ" ಎಂದು ಆಣೆ ಮಾಡಿ ಹೊರಟದ್ದು ಆಗ ಅರ್ಥವಾಗಿರಲಿಲ್ಲ. ಅದರ ಗಾಂಭೀರ್ಯವೂ ತಿಳಿದಿರಲಿಲ್ಲ. ಇದಾವುದೂ ಅರಿವಿರದ ಲಕ್ಷ್ಮಿಯ ತಂದೆ ನಂಜಪ್ಪ ಆಕೆಯನ್ನು ಶ್ರೀನಾಥನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಲಕ್ಷ್ಮಿಯ ರೂಪವನ್ನು ಮೆಚ್ಚಿದ ಶ್ರೀನಾಥ ಮುಂದೆ ಆಕೆಯ ಗುಣವನ್ನು ಮೆಚ್ಚುತ್ತಾನೆ. ಆದರೆ, ಆ ವಿವಾಹ ಹೆಚ್ಚು ಕಾಲ ಉಳಿಯುವುದಿಲ್ಲ ಶ್ಯಾಮನೂ ಒಬ್ಬಂಟಿಯಾಗಿ ಆತನ ಬದುಕು ದುಸ್ತರವಾಗಿದ್ದ ಸಂದರ್ಭ. ಇಲ್ಲಿ ಮಾಯದ ನೆನಪಾಗಿ ಉಳಿಯುವುದು ಯಾವುದು ಎಂಬುದನ್ನು ಹೇಳಿದಿರುವ ಕಥೆ ಇದು.
ಹೆಚ್. ವಿ. ಸಾವಿತ್ರಮ್ಮನವರು ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭ ಹಾಗೂ ಆಗಿನ ಕಾಲಘಟ್ಟದಲ್ಲಿ ಇದ್ದ ಸಮಸ್ಯೆಗಳನ್ನು ಕಥೆಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಜಾತಿ-ಮತಗಳ ಭೇದಗಳು, ಗಲಾಟೆ, ದೊಂಬಿಗಳು ಸ್ವಾತಂತ್ರ್ಯಕ್ಕಾಗಿ ತಮ್ಮನ್ನೇ ಅರ್ಪಿಸಿಕೊಳ್ಳುವ ಯುವಕರು ಇವರೆಲ್ಲರ ಮನದ ತುಮುಲಗಳು ಜೊತೆಗೆ ಇವರ ಮನೆಯ ಪರಿಸರ, ತಾಯಿ-ತಂದೆಯರ ಮನಸ್ಥಿತಿ ಎಲ್ಲದರ ಜೊತೆಗೆ ವಾಸ್ತವದ ಚಿತ್ರಣವಿದೆ. ಹೆಚ್ಚಿನ ಕಥೆಗಳು ಸುಖಾಂತ್ಯವಾಗಿಲ್ಲ. ಯಾವಾಗಲೂ ನಾವು ಸುಖಾಂತ್ಯವನ್ನೇ ನಿರೀಕ್ಷಿಸಲಾಗದು. ಏಕೆಂದರೆ, ವಾಸ್ತವದ ಕಹಿ ಕಾಣುತ್ತದೆ. ಸಮಾಜದ ಓರೆ-ಕೋರೆಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿರುವ ಕಥಾಸಂಕಲನ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ