ಭಾನುವಾರ, ಏಪ್ರಿಲ್ 26, 2026

ಅಕ್ಕಮಹಾದೇವಿ

ಭಕ್ತಿ ಕೇವಲ ದೇವರ ಆರಾಧನೆಗೆ ಮಾತ್ರವಲ್ಲದೆ.. ಸಮಾಜದ ಓರೆ - ಕೋರೆಗಳನ್ನು ತಿದ್ದಲು ಆಡು ಮಾತಿನಲ್ಲಿ ಜನರಿಗೆ ಸಂದೇಶ ತಲುಪಿಸಲು, ಜ್ಞಾನ ಹಾಗೂ ವೈರಾಗ್ಯವನ್ನು ಪಸರಿಸಲು ಕೇವಲ ತಮ್ಮ ಸಂದೇಶದ ಮೂಲಕ ಮಾತ್ರವಲ್ಲದೆ ಹಲವಾರು ವಚನ, ಕೀರ್ತನೆ, ಸುಳಾದಿ, ಉಗಾಭೋಗಗಳ ಮೂಲಕ ಸಾಹಿತ್ಯ ರೂಪದಲ್ಲಿ ಸಮಾಜದಲ್ಲೆಲ್ಲಾ ಪಸರಿಸಿತು. ಇಂತಹ ಭಕ್ತಿ ಸಾಹಿತ್ಯಕ್ಕೆ ಹಲವಾರು ಜನರು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಹಾಗೆಂದು, ಅವರು ಸಾಮಾಜಿಕವಾಗಿ ಸಂದೇಶಗಳನ್ನು ನೀಡುವುದಕ್ಕೆ ಮಾತ್ರ ಹೊರಟವರಲ್ಲ. ಮೊದಲಿಗೆ ತಮ್ಮನ್ನು ತಾವು ಬದಲಿಸಿಕೊಂಡು ಭಕ್ತಿಗೆ ಸಮರ್ಪಿಸಿಕೊಂಡವರು. ಪುರಂದರದಾಸರು ಹಾಗೂ ಕನಕದಾಸರ ಬದುಕಲ್ಲಿ ಇಂತಹ ಘಟನೆಗಳನ್ನು ಕಾಣಬಹುದು


ಮಹಿಳೆಯಾಗಿ ಸಂಸಾರವನ್ನು ಮಾತ್ರವಲ್ಲದೆ, ಉಟ್ಟ ಬಟ್ಟೆಯನ್ನು ತ್ಯಜಿಸಿ ಕೇಶಾಂಬರಿಯಾಗಿ ಭಕ್ತಿ, ವೈರಾಗ್ಯದಿಂದ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿ ಹೊರಟ ಅಕ್ಕಮಹಾದೇವಿಯನ್ನು ಭಕ್ತಿಯ ಪರಾಕಾಷ್ಠೆಯ ಪ್ರತಿರೂಪವಾಗಿ ಕಾಣಬಹುದು. ಮೋಹ, ಮಾಯೆಯನ್ನು ಮೀರಿ ನಿಲ್ಲುವುದು ಸುಲಭವಲ್ಲ. ಅಂತಹದರಲ್ಲಿ ಚಿಕ್ಕಂದಿನಿಂದಲೂ ಅಕ್ಕಮಹಾದೇವಿ ಬೆಳೆದ ವಾತಾವರಣ, ತಂದೆ ನಿರ್ಮಲ ಹಾಗೂ ತಾಯಿ ಸುಮತಿಯರು ಆಕೆಗೆ ಕೊಡಿಸಿದ ಶಿಕ್ಷಣ, ಶಿವಪುತ್ರಪ್ಪನವರ ಶಿಕ್ಷಣ, ಗುರುಲಿಂಗ ದೇವರ ಮಾರ್ಗದರ್ಶನ ಎಲ್ಲವೂ ಆಕೆಗೆ ಉಸಿರುಸಿರಲ್ಲಿಯೂ ಶಿವನನ್ನೇ ಧ್ಯಾನಿಸುವಂತೆ ಮಾಡುತ್ತವೆ. ನಿರ್ವಾಹವಿಲ್ಲದೆ ರಾಜ ಕೌಶಿಕನನ್ನು ವಿವಾಹವಾಗಿ ಆತನ ಮೂರು ತಪ್ಪುಗಳನ್ನು ಕ್ಷಮಿಸಿ ನಂತರ ಅರಮನೆಯಿಂದ ಅನುಭವ ಮಂಟಪಕ್ಕೆ ತೆರಳುತ್ತಾಳೆ. ಇದು ಅವಳಿಟ್ಟ ಭಕ್ತಿಯ ಹಾದಿಯಲ್ಲಿ ನಡೆಯುವ ಮುನ್ನಿನ ಹಿನ್ನಲೆ.


ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ

ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ.

ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು 

ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ!

ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು

ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು!


" ಅಕ್ಕ ಕೇಳವ್ವ ನಾನೊಂದು ಕನಸು ಕಂಡೆ " ಎನ್ನುವ ವಚನದಲ್ಲಿ ಕನಸಿನಲ್ಲಿಯೂ ಕಂಡ ಚೆನ್ನಮಲ್ಲಿಕಾರ್ಜುನನ ರೂಪವನ್ನೇ ನೆನೆಯುವ ಪರಿ ಭಕ್ತಿಯ ಪರಾಕಾಷ್ಠೆಯನ್ನು ತೋರುತ್ತದೆ. ನಿಜ ಭಕ್ತಿ ಇದ್ದಾಗ ಭಕ್ತಿಯ ರೂಪವೇ ಎಲ್ಲೆಲ್ಲೂ ಕಾಣುತ್ತದೆ. ನಿಜ ಭಕ್ತಿ ಇದ್ದಾಗ ಮನಸ್ಸು ಬೇರೆಡೆಗೆ ಹೋಗುವ ಬದಲು ಆರಾಧ್ಯದೈವವನ್ನೇ ನೆನೆಯುತ್ತದೆ. ಬೇರೆ ವಿಚಾರಕ್ಕೆ ಮನಸ್ಸು ಕೊಟ್ಟು ಬುದ್ಧಿ ಹಾಳು ಮಾಡಿಕೊಳ್ಳುವವರಿಗೆ ಇದು ಸಂದೇಶದಂತೆಯೂ ಇದೆ.


ಇಹಕ್ಕೊಬ್ಬ ಗಂಡನೆ ಪರಕ್ಕೊಬ್ಬ ಗಂಡನೆ ? 

ಲೌಕಿಕ್ಕೊಬ್ಬ ಗಂಡನೆ ಪಾರಮಾರ್ಥಕ್ಕೊಬ್ಬ ಗಂಡನೆ ? 

ಎನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ 

ಮಿಕ್ಕಿನ ಗಂಡರೆಲ್ಲ ಮುಗಿಲಮರೆಯ ಬೊಂಬೆಯಂತೆ


ಎನ್ನುತ್ತಾ ಚೆನ್ನಮಲ್ಲಿಕಾರ್ಜುನನನ್ನೇ ಹುಡುಕಿ ಅಕ್ಕನಿಗೆ ದಾರಿಯಲ್ಲಿ ಅಡಿಗಡಿಗೂ ಎದುರಾದ ಸಂಕಷ್ಟಗಳು ಹಲವಾರು. 


ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ ? 

ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯಾ ? 

ಸಂತೆಯೊಳಗೊಂದು ಮನೆಯ ಮಾಡಿ

ಶಬ್ದಕ್ಕೆ ನಾಚಿದಡೆಂತಯ್ಯಾ ? 

ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ

ಲೋಕದೊಳಗೆ ಹುಟ್ಟಿದ ಬಳಿಕ 

ಸ್ತುತಿನಿಂದೆಗಳು ಬಂದಡೆ 

ಮನದಲ್ಲಿ ಕೋಪವ ತಾಳದೆ 

ಸಮಾಧಾನಿಯಾಗಿರಬೇಕು


ಎಂಬ ವಚನದ ಮೂಲಕ ನಾವು ಎಲ್ಲಿ ಹೋದರೂ.. ಕಷ್ಟಗಳು ಬಂದೇ ಬರುತ್ತವೆ. ಹಾಗೆಂದು, ಅವುಗಳಿಗೆ ಅಂಜಿಕೊಂಡಿದ್ದರೆ ಸಾಧನೆಗೆ ಅಥವಾ ಬದುಕಿನಲ್ಲಿ ಮುಂದೆ ಸಾಗುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಸ್ತುತಿ ನಿಂದೆಗಳು ಬಂದಾಗ ಅದಕ್ಕೆ ಕೋಪ ಮಾಡಿಕೊಳ್ಳದೆ ಮನಸ್ಸನ್ನು ಸಮಾಧಾನವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಎನ್ನುತ್ತಾ ಸಮಾಜದಲ್ಲಿ ಬದುಕುವ ರೀತಿಯನ್ನು ಹೇಳುತ್ತಾರೆ.


ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ

ಎಲುವಿನ ತಡಿಕೆ, ಕೀವಿನ ಹಡಿಕೆ ಸುಡಲೀ ದೇಹವ ; 

ಒಡಲುವಿಡಿದು ಕೆಡದಿರು

ಚೆನ್ನಮಲ್ಲಿಕಾರ್ಜುನನನರಿಯದ ಮರುಳೆ


ಮನುಷ್ಯನ ದೇಹದ ಬಾಹ್ಯ ಸೌಂದರ್ಯಕ್ಕಿಂತಲೂ ಅಂತರಂಗದ ಸೌಂದರ್ಯದ ಅರಿವು ಮಾಡಿಸುವ ಈ ವಚನ ಆ ಅಂತರಂಗದ ಅರಿವು ಮೂಡಿಸಿಕೊಳ್ಳಲು ಹೇಳುತ್ತಿದೆ.


ಆಕೆ ಒಂಟಿಯಾಗಿ ಹೊರಟಾಗ ಕಾಡು - ಮೇಡುಗಳಲ್ಲಿ, ಊರು, ಹಳ್ಳ - ಕೊಳ್ಳಗಳಲ್ಲಿ ಅಲೆಯುವ ಪರಿಸ್ಥಿತಿ ಇರುತ್ತದೆ. ಆಕೆಯನ್ನು ಕಾಮದ ದೃಷ್ಟಿಯಿಂದ ನೋಡುವರೂ ಇದ್ದರು. ಆಗ ಆಕೆ ಮಾತಿನಲ್ಲೇ ಅವರನ್ನು ಮಣಿಸಿದ ಸಂದರ್ಭ ಒಂದು ಇದೆ. 

"ಬರಿ ಮೈಯಲ್ಲಿ ಇದ್ದವರೆಲ್ಲಾ ಜಾರಿಣಿಯರಲ್ಲ.. ನೀವು ಚಿಕ್ಕಂದಿನಲ್ಲಿ ನಿಮ್ಮ ತಾಯಿಯನ್ನು ಹೀಗೆ ನೋಡಿಲ್ಲವೇ..?" ಎನ್ನುತ್ತಾ.. ಹೆಣ್ಣನ್ನು ಮಾತೃಸ್ವರೂಪಿಯಾಗಿ ಕಾಣುವ ಪಾಠವನ್ನು ಹೇಳುತ್ತಾರೆ. ಬದಲಾವಣೆಯ ಹಾದಿ ತೋರುತ್ತಾರೆ. 


ಭಾನುವಿನಂತಿಪ್ಪುದು ಜ್ಞಾನ

ಭಾನುಕಿರಣದಂತಿಪ್ಪುದು ಭಕ್ತಿ

ಭಾನುವನುಳಿದು ಕಿರಣಂಗಳಿಲ್ಲ

ಕಿರಣಂಗಳನುಳಿದು ಭಾನುವಿಲ್ಲ 

ಜ್ಞಾನವಿಲ್ಲದ ಭಕ್ತಿ

ಭಕ್ತಿಯಿಲ್ಲದ ಜ್ಞಾನವೆಂತಿಪ್ಪುದು 

ಚೆನ್ನಮಲ್ಲಿಕಾರ್ಜುನಾ 


ಜ್ಞಾನ ಹಾಗೂ ಭಕ್ತಿಗಳೆರಡೂ ಒಂದನ್ನೊಂದು ಅಗಲಿ ಇರಲಾರವು ಎನ್ನುತ್ತಾ ಜ್ಞಾನವನ್ನು ಸೂರ್ಯನಿಗೂ.. ಭಕ್ತಿಯನ್ನು ಸೂರ್ಯನ ಕಿರಣಕ್ಕೂ ಹೋಲಿಸುತ್ತಾರೆ. ಭಕ್ತಿ ಇಲ್ಲದೆ ಜ್ಞಾನವಿಲ್ಲ ಹಾಗೂ ಜ್ಞಾನವಿಲ್ಲದೆ ಭಕ್ತಿಯಿಲ್ಲ ಎಂದು ಜ್ಞಾನವಿಲ್ಲದೆ ಕೇವಲ ಡಾಂಭಿಕ ಭಕ್ತಿಯನ್ನು ತೋರ್ಪಡಿಸುವವರಿಗೂ ಹಾಗೂ ನಾನು ಜ್ಞಾನಿಯೆನ್ನುತ್ತಾ ಭಕ್ತಿಯನ್ನು ಅಲ್ಲಗಳೆಯವವರೆಗೂ ಅರಿವಾಗಿಸುತ್ತಾರೆ.


ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ?

ಧನವಿದ್ದು ಫಲವೇನು ದಯವಿಲ್ಲದನ್ನಕ್ಕ ? 

ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ ? 

ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ ? 

ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ ಚೆನ್ನಮಲ್ಲಿಕಾರ್ಜುನಾ ? 


ನೆರಳು ಕೊಡದ ಮರ, ದಯೆ ಇಲ್ಲದೆ ಕೇವಲ ಹಣ ಇಟ್ಟುಕೊಂಡಿರುವ ಮನುಷ್ಯ, ಹಾಲು ಕೊಡದ ಹಸು, ಗುಣವಿಲ್ಲದ ರೂಪ, ಚೆನ್ನಮಲ್ಲಿಕಾರ್ಜುನ ಇಲ್ಲದ ಅಕ್ಕಮಹಾದೇವಿ ಎಲ್ಲವೂ ಫಲವಿಲ್ಲದೆ ಬರಡು ಎನ್ನುತ್ತಾ ದಯೆಯೇ ಧರ್ಮದ ಮೂಲ ಎನ್ನುವ ಬಸವಣ್ಣನವರ ತತ್ವವನ್ನು ಎತ್ತಿ ಹಿಡಿಯುತ್ತಾರೆ.


ಹೀಗೆ ಹಲವಾರು ವಚನಗಳನ್ನು ಸರಳ ಭಾಷೆಯಲ್ಲಿ, ಸರಳವಾಗಿ ಕಟ್ಟುತ್ತಾ.. ಜನಮಾನಸಕ್ಕೆ ಮುಟ್ಟಿಸುತ್ತಾರೆ ಅಕ್ಕಮಹಾದೇವಿ.


ಅಕ್ಕನ ವಚನಗಳಲ್ಲಿ ಲೌಕಿಕ, ಪಾರಮಾರ್ಥಿಕ ಅರ್ಥವಿರುವ ವಚನಗಳು ಕಂಡರೂ.. ಅದರಲ್ಲಿ ಬಂಡಾಯವೇ ಕಾಣುತ್ತದೆ ಎನ್ನುತ್ತಾರೆ ವಿಮರ್ಶಕರು. ಕೌಶಿಕನನ್ನು ಎಂದರೆ ಸಾರ್ವಭೌಮತ್ವವನ್ನು ಧಿಕ್ಕರಿಸಿ ನಡೆಯುವ ಅಕ್ಕನ ನಡೆಯನ್ನು, ಗಂಡು - ಹೆಣ್ಣು ಎಂಬ ಭೇದ ತೊರೆದು ಸಾಗುವ ಅಕ್ಕಮಹಾದೇವಿಯನ್ನು ಇದಕ್ಕೆ ಸಮೀಕರಿಸುತ್ತಾರೆ. ಆದರೆ, ನನಗೆ ನಿಸರ್ಗದತ್ತ ಸಾಗುವ ದೈವತ್ವವನ್ನು ಬೇರೆಯ ರೂಪದಲ್ಲಿ ತೋರುವ ಅಕ್ಕಮಹಾದೇವಿಯ ರೂಪ ಕಾಣುತ್ತದೆ. 


ಈ ಎಲ್ಲವೂ ಭಕ್ತಿಯ ಮುಖೇನ ವೈರಾಗ್ಯವನ್ನು, ಮುಕ್ತಿ ಮಾರ್ಗವನ್ನು ತೆರೆದಿಡುತ್ತದೆ. ಭಕ್ತಿ ಸಾಹಿತ್ಯ ಮನುಷ್ಯ ಬದುಕುವ ರೀತಿಯನ್ನು ಅಂದರೆ ಜ್ಞಾನ, ಭಕ್ತಿ, ನಂಬಿಕೆ, ದಯೆ ಹೀಗೆ ಎಲ್ಲಾ ಪಥದ ಮೂಲಕ ಮುಕ್ತಿಯತ್ತ, ದೈವತ್ವದತ್ತ ಸಾಗುವ ಪರಿಯನ್ನು ತೋರುತ್ತಾರೆ.


ಆಕರಗಳು :

೧. ಲೇಖಕಿ ಬ್ಲಾಗ್ 

೨. ಅಕ್ಕ ಮಹಾದೇವಿ - ಅಕ್ಕ ಕೇಳವ್ವ ನಾನೊಂದು ಕನಸು ಕಂಡೆ - ಸು. ರುದ್ರಮೂರ್ತಿ ಶಾಸ್ತ್ರಿ


೩. ಅಕ್ಕ ಮಹಾದೇವಿ ವಚನಗಳು - ಸಮಗ್ರ ವಚನ ಸಾಹಿತ್ಯ - ಕಣಜ

೪. ಅಕ್ಕಮಹಾದೇವಿ - ವಸುಂಧರಾ ಶ್ರೀಧರ್


೫. ಗೂಗಲ್ ನಿಂದ ಕೆಲ ಮಾಹಿತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ