ಭಾನುವಾರ, ಏಪ್ರಿಲ್ 26, 2026

ವೃತ್ತಿ ಬದುಕಿನ ಹಿನ್ನೋಟ (ಪುಸ್ತಕ ಯಾನ - 388)


ಪುಸ್ತಕದ ಶೀರ್ಷಿಕೆ : ವೃತ್ತಿ ಬದುಕಿನ ಹಿನ್ನೋಟ

ಲೇಖಕರು : ಸಿ. ಬಿ. ಶೈಲಾ ಜಯಕುಮಾರ್

ಪ್ರಕಾಶಕರು : ಅಮೃತ ಪ್ರಕಾಶನ

ಪ್ರಥಮ ಮುದ್ರಣ : 2024

ಪುಟಗಳು : 124

ಬೆಲೆ : 150 ರೂ. 


ನೈಜ ಅನುಭವಗಳು ಕೃತಿ ರೂಪದಲ್ಲಿ ದಾಖಲೆಗೊಂಡಾಗ ಅದು ಇತರೆರಿಗೆ ವೃತ್ತಿಯ ವಿಭಿನ್ನ ಅನುಭವಗಳನ್ನು ಅಂತೆಯೇ ಆತ್ಮಕತೆಯ ಒಂದು ಭಾಗವನ್ನು ತೆರೆದಿಟ್ಟಂತಾಗುತ್ತದೆ. ಹೀಗೆ ತಮ್ಮ ವೃತ್ತಿಯಲ್ಲಿ ಸಿಕ್ಕ ಹೆಚ್ಚಿನ ಅನುಭವಗಳನ್ನು ಲೇಖಕಿ ಈ ಕೃತಿಯಲ್ಲಿ 30 ಲೇಖನಗಳಾಗಿ ತೆರೆದಿಟ್ಟಿದ್ದಾರೆ. 


ಶಿಕ್ಷಕಿಯಾಗಬೇಕೆಂಬ ಹಂಬಲ ಉಳಿಯಲು ಬಾಲ್ಯದಲ್ಲಿ ಹಾಗೂ ಶಾಲೆಯಲ್ಲಿ ಕಂಡ ಶಿಕ್ಷಕರು ಬಹು ಮುಖ್ಯರಾಗುತ್ತಾರೆ. ಹಾಗೆ ಮರೆಯಬಾರದ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಲೇ.. "ಎಲ್ಲಿಯೂ ಯಾವ ಕೆಲಸವೂ ಸಿಗದೇ ನಾನು ಶಿಕ್ಷಕ ವೃತ್ತಿಗೆ ಸೇರಿದವಳಲ್ಲ. ನನ್ನ ಶಿಕ್ಷಕರಂತೆ ಆಕರ್ಷಕವಾಗಿ ಬೋಧಿಸಬೇಕೆಂದು ಪ್ರಾಮಾಣಿಕವಾಗಿ ಬಯಸಿದವಳು ನಾನು" ಎಂದು ತಮ್ಮ ಕನಸು ನನಸಾದ, ನನಸಾಗಿಸಿಕೊಂಡ ಕನಸಿನ ಕುರಿತು ಹೇಳುತ್ತಾರೆ. 


"ದೇಶಾಭಿಮಾನ, ನಿಷ್ಠೆ, ಶ್ರದ್ಧೆಗಳನ್ನು ಮೈಗೂಡಿಸಿಕೊಂಡು ಇಂತಹದೇ ಮೌಲ್ಯಗಳನ್ನು ನನ್ನ ವಿದ್ಯಾರ್ಥಿಗಳಲ್ಲಿಯೂ ಬೆಳೆಸಬೇಕೆಂಬ ಆಸೆ, ಕನಸು ಹೊತ್ತು ನೂರಾನೆ ಬಲದಿಂದ ಈ ವೃತ್ತಿಗೆ ಅಡಿಯಿರಿಸಿದೆ" ಎನ್ನುತ್ತಾರೆ ಲೇಖಕಿ. 


ಅಪ್ಪನಿಲ್ಲದ ಅಸಹಾಯಕತೆ, ಅಮ್ಮನ ಕೊನೆಗಾಣದ ಆತಂಕದ ನಡುವೆಯೂ ಅಂತಿಮ ಬಿ.ಎಯಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ತಿ.ನಂ.ಶ್ರೀ ಸ್ವರ್ಣ ಪದಕ ಪಡೆದದ್ದು.. ನಂತರ ವಿವಾಹವಾಗಿ ಮಗಳನ್ನು ಬೆಳೆಸುತ್ತಲೇ ಪದವಿಯ ನಂತರದ ಆರನೇ ವರ್ಷದಲ್ಲಿ ಬಿ.ಎಡ್ ಕೋರ್ಸ್ ಗೆ ಸೇರಿ ಪ್ರೌಢಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗುತ್ತಾರೆ. ಅದೂ ಸಂದರ್ಶನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು. ಪತಿಯ ಒತ್ತಾಸೆ ಹಾಗೂ ಬೆಂಬಲದಿಂದ ಸ್ವಾವಲಂಬಿಯಾಗಿ, ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು, ಪ್ರಾಪಂಚಿಕ ಜ್ಞಾನ ಹೆಚ್ಚಿಸಿಕೊಳ್ಳಲು ಶಿಕ್ಷಕಿಯಾಗಿ ವೃತ್ತಿ ಜೀವನ ಶುರುಮಾಡುತ್ತಾರೆ. 


1990 ಏಪ್ರಿಲ್ 6 ರಂದು ಓಲ್ಡ್ ಮಿಡ್ಲ್ ಸ್ಕೂಲ್ ಎಂದೇ ಹೆಸರಾಗಿದ್ದ ಮಾಧ್ಯಮಿಕ ಶಾಲೆಯಲ್ಲಿ ಪದವೀಧರ ಮುಖ್ಯೋಪಾಧ್ಯಾಯಿನಿಯಾಗಿ ವೃತ್ತಿ ಜೀವನ ಆರಂಭಿಸುತ್ತಾರೆ. "ದೀಪ ಉರಿಯುತ್ತಿದ್ದರೆ ತಾನೇ ಇನ್ನೊಂದು ದೀಪ ಹಚ್ಚಲು ಸಾಧ್ಯ" ಎನ್ನುತ್ತಲೇ ವೃತ್ತಿ ಬದುಕಿನ ಆರಂಭದಲ್ಲಿ ಹಾಗೂ ನಂತರ ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳುವಾಗ, ಚಾರ್ಜ್ ತೆಗೆದುಕೊಳ್ಳುವಾಗ ಇದ್ದ ಅನೇಕ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದಲೇ ಬಗೆಹರಿಸಿಕೊಳ್ಳುತ್ತಾ.. ಶ್ರದ್ದೆ, ಏಕಾಗ್ರತೆ ಹಾಗೂ ಬದ್ಧತೆಯಿಂದ ಪಾಠ ಮಾಡುತ್ತಾ ವಿದ್ಯಾರ್ಥಿಗಳ ಜೊತೆಗೆ ಸಂಭ್ರಮಿಸಿದ ದಿನಗಳನ್ನು ನೆನೆಯುತ್ತಾರೆ. ಯಾವುದಕ್ಕೂ ಜಗ್ಗದೆ, ಯಾರ ಮುಲಾಜಿಗೂ ಒಳಗಾಗದೆ ಕೆಲಸ ಮಾಡುತ್ತಿದ್ದಾಗ ಬಂದ ಸನ್ಮಾನ, ದುಮ್ಮಾನಗಳು ದಾಖಲಾಗಿವೆ. ಎಂ ಎಡ್ ಪರೀಕ್ಷೆ ಬರೆಯುವ ಸಂದರ್ಭದಲ್ಲಿಯೇ ವರ್ಗಾವಣೆ ಆದೇಶವು ಸಿಕ್ಕಿ ಚಾರ್ಜ್ ತೆಗೆದುಕೊಳ್ಳಲು ಹೋದದ್ದು, ಪಯಣದ ದಣಿವು ಆಯಾಸದ ನಡುವೆಯೇ ಪರೀಕ್ಷೆ ಬರೆದದ್ದು ಹಾಗೂ ಅವರ ಪತಿಯ ಬೆಂಬಲ ಎಲ್ಲವನ್ನೂ ನೆನೆಯುತ್ತಾರೆ. 


ವೃತ್ತಿ ಬದುಕಿನ ಎರಡನೇ ಅಧ್ಯಾಯವಾಗಿ 1992 ರಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಹ ಶಿಕ್ಷಕಿಯಾಗಿ ವೃತ್ತಿ ಶುರು ಮಾಡುತ್ತಾರೆ. ಅಲ್ಲಿ ಪ್ರಚಂಡ ವಿದ್ಯಾರ್ಥಿಗಳೊಂದಿಗೆ, ಕಲಿಯುವ ಹುಮ್ಮಸ್ಸಿನೊಂದಿಗೆ ಅವರ ಸಂದೇಹಗಳನ್ನು ಬಗೆಹರಿಸುತ್ತಾ.. ವಿದ್ಯಾರ್ಥಿಗಳನ್ನು ತಿದ್ದುತ್ತ ತಮ್ಮನ್ನೂ ತಿದ್ದಿಕೊಳ್ಳುತ್ತಾ.. "ಅವರನ್ನು ಎತ್ತರೆತ್ತರಕ್ಕೆ ಬೆಳೆಸುತ್ತಾ ನಾವು ಬೆಳೆಯುವುದು ಶಿಕ್ಷಕ ವೃತ್ತಿ ಅಲ್ಲವೇ..?" ಎನ್ನುತ್ತಾರೆ.


ಪರೀಕ್ಷಾ ಮೇಲ್ವಿಚಾರಣ ಕಾರ್ಯ ಮಾಡುವಾಗ ಬರುವ ಮಾತುಗಳು ಹಾಗೂ ಅವುಗಳು ಇವರ ಭಾವನೆಗಳನ್ನು ಪಕ್ಟವಾಗಿಸಿದ ಪರಿ, ಅಂಚೆ ಶಿಕ್ಷಣದಲ್ಲಿ ಅವರದಲ್ಲದ ಭಾಷೆಯಲ್ಲಿ ಕ್ರಮಬದ್ಧ ಅಧ್ಯಯನವಿಲ್ಲದೆ ಸೂಕ್ತ ಮಾರ್ಗದರ್ಶಕರಿಲ್ಲದೆಯೂ ಎಂ ಎ ಮುಗಿಸಿದ ಸಂದರ್ಭ, ಅಪ್ಪನನ್ನು ಕಳೆದುಕೊಂಡ 20 ವರ್ಷದ ನಂತರ ತಾಯಿಯನ್ನು ಕಳೆದುಕೊಂಡ ದಿನಗಳ ಪರಿಸ್ಥಿತಿ, ದುಃಖವೇ ಶಕ್ತಿಯಾಗಿ ರಾಜಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದನ್ನು ಹೇಳುತ್ತಾರೆ.


ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲಿಯೂ ಅವರ ಪ್ರೌಢಿಮೆ ಎಷ್ಟಿತ್ತು ಎಂದರೆ "ಕನ್ನಡ ಶಿಕ್ಷಕಿಯಂತೆ, ಇಂಗ್ಲಿಷ್ ನಿರೂಪಣೆ ಸೊಗಸಾಗಿ ನಿರ್ವಹಿಸಿದರು" ಎನ್ನುವ ಪ್ರಶಂಸೆ ಸಿಕ್ಕ ದಿನಗಳು. ಅಂತೆಯೇ ವಿದ್ಯಾರ್ಥಿಯೊಬ್ಬನಿಂದಾದ ಅನುಚಿತ ವರ್ತನೆ ಹಾಗೂ ಅದು ಮೂಡಿಸಿದ ಆಲೋಚನೆ ಇವುಗಳ ನಡುವೆ ಸಾಧನೆ ತೋರಿದ ಹಲವು ವಿದ್ಯಾರ್ಥಿಗಳ ಉದಾಹರಣೆಗಳು, ಶಿಕ್ಷಕ ವೃತ್ತಿಯಲ್ಲಿ ಅವರಿಗೆ ಸಿಕ್ಕ ನೆಮ್ಮದಿಯ ಭಾವವನ್ನು ತೆರೆದಿಡುತ್ತವೆ. 


ಶಿಕ್ಷಕ ವೃತ್ತಿಯಲ್ಲಂತೂ ಹಲವು ರೀತಿಯ ವಿದ್ಯಾರ್ಥಿಗಳು ಸಿಗುತ್ತಾರೆ. ಸುಳ್ಳು ಹೇಳಿ ಇವರಲ್ಲಿಯೇ ಪಾಪಪ್ರಜ್ಞೆ ಮೂಡಿಸಿದ ವಿದ್ಯಾರ್ಥಿ ಒಂದಡೆಯಾದರೆ, ಅಮ್ಮನಂತೆಯೇ ಭಾವಿಸಿ ಇವರ ಬಳಿ ಕಷ್ಟ ಹೇಳಿಕೊಂಡು ಇವರ ಸಹಾಯ ಪಡೆದ ಹಲವು ವಿದ್ಯಾರ್ಥಿಗಳ ಉದಾಹರಣೆಗಳನ್ನು ನಾವಿಲ್ಲಿ ಕಾಣಬಹುದು. ಇದು ಸಮಾಜದ ಕೆಲ ವಿಭಿನ್ನ ಸಮಸ್ಯೆಗಳನ್ನು ದರ್ಶನ ಮಾಡಿಸುತ್ತದೆ.


ಬಿ.ಎಡ್ ಕಾಲೇಜಿನಲ್ಲಿ ಡೆಪ್ಯುಟೇಷನ್ ಮೇಲೆ ಕೆಲಸ ಮಾಡಿದಾಗ ಅಲ್ಲಿ ಸಿಕ್ಕ ಅನುಭವ ಹಾಗೂ ಅಲ್ಲಿನ ವಿದ್ಯಾರ್ಥಿಗಳ ಸಹಕಾರಗಳು, ನಿರೂಪಕಿಯಾಗಿ, ಉಪನ್ಯಾಸಕಿಯಾಗಿ, ಉದ್ಗೋಷಕಿಯಾಗಿ ಮಾತ್ರವಲ್ಲದೆ ಪತ್ರಕರ್ತಳಾಗುವ ಕನಸನ್ನು 1997ರಲ್ಲಿ ಡಿಪ್ಲೋಮ ಇನ್ ಜರ್ನಲಿಸಂ ಕೋರ್ಸಿಗೆ ಅಂಚೆ ಮೂಲಕ ಸೇರಿ ಅದನ್ನು ಪಾಸ್ ಮಾಡಿಕೊಂಡದ್ದು.. ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದು, ಕುಗ್ರಾಮಕ್ಕೆ ಪ್ರತಿದಿನವೂ ಬಸ್ಸಿಗೆ ಹೋಗುವ ಅನುಭವಗಳು, ಬಸ್ಸಿನ ಪ್ರಯಾಣ, ಹಳ್ಳಿಯ ಜನರ ಸಹಕಾರ ಹೀಗೆ ಎಲ್ಲವೂ ದಾಖಲಾಗಿದೆ.


ಪುಣಿಯ ಯಶಾಡ ವಸತಿಯುತ ತರಬೇತಿ ಕೇಂದ್ರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಹೋಗಿದ್ದು ಹಾಗೂ ಅದರ ಹಿನ್ನೆಲೆ, ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ಮುಂದೆ ಉಪನ್ಯಾಸಗಳನ್ನು ನೀಡಿದ್ದು.. ಅದಕ್ಕೆ ಪ್ರಾಚಾರ್ಯರ ಸಹಕಾರ ಹೇಗಿತ್ತು..? ಹೊಂದಾಣಿಕೆ ಎಂಬುದು ವೃತ್ತಿ ಬದುಕಿನಲ್ಲಿ ಹೇಗಿರುತ್ತದೆ ಹಾಗೂ ಹೇಗಿರಬೇಕು ಎನ್ನುವುದನ್ನು ಹೇಳುತ್ತಾರೆ. 


ಬಾಲಕಿಯರ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಅಲ್ಲಿ ಆದ ಅನುಭವಗಳು.. ರೇಖಾ, ಸ್ಮಿತಾ, ಸುಮಿತ್ರ ಹೀಗೆ ಹಲವಾರು ವಿದ್ಯಾರ್ಥಿನಿಯರು ನೀಡಿದ ಹಲವು ಅನುಭವಗಳು ಹಾಗೂ ಅವರ ಸಮಸ್ಯೆಗೆ ಸಿಕ್ಕ ಪರಿಹಾರಗಳು ಇಲ್ಲಿವೆ.

 ಇಂತಹ ಎಷ್ಟೋ ರೇಖಾ, ಸ್ಮಿತಾ, ಸುಮಿತ್ರಾರ ಘಟನೆಗಳು ಅವರ ವೃತ್ತಿ ಬದುಕಿನಲ್ಲಿ ಕಂಡಿರಬಹುದು. "ಸಮಸ್ಯೆಗೆ ಹೆದರಿ ಪಲಾಯನ ಮಾಡುವುದಕ್ಕಿಂತ ಸಮಸ್ಯೆಗೆ ಮುಖಾಮುಖಿಯಾಗುವುದೇ ಅರ್ಧ ಪರಿಹಾರ ಸಿಕ್ಕಂತೆ ಅಲ್ಲವೇ..?" ಎನ್ನುತ್ತಲೇ ಅವರ ಸಮಸ್ಯೆಗಳಿಗೆ ಇವರು ಪರಿಹಾರ ಮಾಡಲು ನಿಂತ ಪ್ರಸಂಗಗಳನ್ನು ಹೇಳುತ್ತಾರೆ.


ಪರೀಕ್ಷಾ ಮೇಲ್ವಿಚಾರಣೆ ಹಾಗೂ ಸ್ಕ್ವಾಡ್ ಆಗಿ ಕಾರ್ಯನಿರ್ವಹಿಸಿದ ದಿನಗಳು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿರ್ಣಾಯಕ ಪಾತ್ರ ವಹಿಸುವ ಮೌಲ್ಯಮಾಪನ ಜಗತ್ತು, ಎಷ್ಟೇ ಓದಿದ್ದರೂ.. ಮೌಲ್ಯಮಾಪಕರು ಗಂಡು-ಹೆಣ್ಣಿನ ವೇತನದ ಕುರಿತು ಮಾತನಾಡುವ ರೀತಿ ಇನ್ನು ಬದಲಾಗಿಲ್ಲದ ಅವರ ಆಲೋಚನೆ ಹಾಗೂ ವ್ಯವಸ್ಥೆಯನ್ನು ತೋರುತ್ತಾರೆ.


ಇಲ್ಲಿ ಶೈಲಾ ಜಯಕುಮಾರ್ ಅವರು ಅಂತಃಕರಣದ ಶಿಕ್ಷಕಿಯಾಗಿ.. ಅಪರಿಮಿತ ಅನುಭವವನ್ನು ತಮ್ಮದೇ ಶಬ್ದ ಲಾಸ್ಯಗಳಿಂದ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.


ತನ್ನತನವನ್ನು ಉಳಿಸಿಕೊಳ್ಳುವ ಸವಾಲಿನ ಕೆಲಸವನ್ನು ನಿರ್ವಹಿಸಿದ ಶಿಕ್ಷಕಿಯಾಗಿ, ವೃತ್ತಿಯ ಮೇಲಿನ ಅಪರಿಮಿತ ಪ್ರೀತಿ ಹಾಗೂ ಅದರಿಂದ ಪಡೆದ ಅನುಭವಗಳು ಅವರನ್ನು ರೂಪಿಸಿದ ರೀತಿ, ವಿದ್ಯಾರ್ಥಿಗಳು ಇಂದಿಗೂ ಅವರನ್ನು ಕಾಣುವ ಪರಿ ಎಲ್ಲವೂ ಶಿಕ್ಷಕಿಯಾಗಿ ಅವರು ಸಮರ್ಥವಾಗಿ ನಿಭಾಯಿಸಿರುವ ಪರಿಯನ್ನು ತೆರೆದಿಟ್ಟಿದ್ದಾರೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ