ಪುಸ್ತಕದ ಶೀರ್ಷಿಕೆ : ಜೇನ್ ಏರ್
ಮೂಲ ಲೇಖಕರು : ಶಾಲೆಟ್ ಬ್ರಾಂಟಿ
ಕನ್ನಡ ಅನುವಾದಕರು : ಶ್ಯಾಮಲಾ ಮಾಧವ
ಪ್ರಕಾಶಕರು : ತೇಜು ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2014
ಪುಟಗಳು : 492
ಬೆಲೆ : 300 ರೂ.
ಪಾಶ್ಚಾತ್ಯ ಸಾಹಿತ್ಯದ ಕೃತಿಗಳನ್ನು ಓದಲು ಅಸಾಧ್ಯವಾದವರಿಗೆ ಅನುವಾದಿತ ಪುಸ್ತಕಗಳು ವಿಭಿನ್ನ ಓದಿನಲೋಕವನ್ನು ತೆರೆದಿಡುತ್ತವೆ. ಹೀಗೆ ಶಾಮಲಾ ಮಾಧವ ಅವರ ಸರಳ ಹಾಗೂ ಚೆಂದದ ಅನುವಾದ ಜೇನ್ ಏರ್ ಎನ್ನುವ ಆತ್ಮಕಥಾನಕ ಕಾದಂಬರಿಯನ್ನು ಕಾಡುವಂತೆ ಮಾಡುತ್ತದೆ.
ಜೇನ್ ಏರ್ ಕಾದಂಬರಿಯ ಮೂಲ ಲೇಖಕಿ , ಶಾಲೆಟ್ ಬ್ರಾಂಟಿಯ ತಂದೆಯ ಪ್ಯಾಟ್ರಿಕ್ ಬ್ರಾಂಟಿ ಪ್ರತಿಭಾವಂತ ಶಿಕ್ಷಕರು. ಅವರಿಗೆ ನಾಲ್ವರು ಮಕ್ಕಳು. ಶ್ಯಾಮಲಾ ಮಾಧವ ಅವರು ಅನುವಾದಿಸಿರುವ 'ವದರಿಂಗ್ ಹೈಟ್ಸ್' ಖ್ಯಾತಿಯ ಎಮಿಲಿ ಶಾಲೆಟ್ ನ ಸಹೋದರಿ.
ಶಾಲೆಟ್ ಬ್ರಾಂಟಿಯ ಜೇನ್ ಏರ್, ಅವರ ಜೀವನದ ಹಲವು ಘಟನೆಗಳ ಪ್ರೇರಿತ ಕಥಾರೂಪ. ಆ ಘಟನೆಗಳು ಯಾವುವು ಎಂಬುದನ್ನು ಈ ಕಾದಂಬರಿಯ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ. ಮೂಲ ಕೃತಿ 1847ರಲ್ಲಿ ಪ್ರಕಟವಾಗಿತ್ತು.
ಜೀನ್ ಏರ್ ಮೊದಲ 10 ವರ್ಷ ಕಥಾನಕ ಆಕೆಯ ಕಟ್ಟುಹಾಕಿದಂತಹ ವಿಧೇಯ ಬಾಲ್ಯದ ಚಿತ್ರಣ. ಶ್ರೀಮತಿ ರೀಡ್ ಈಗ ಆಕೆಯ ಪಾಲಕಿಯಾಗಿದ್ದವರು. ಅವರಿಗೆ ಮೂವರು ಮಕ್ಕಳು. ಎಲಿಜಾ, ಜಾನ್ ಹಾಗೂ ಜಾರ್ಜಿಯಾನಾ. ಜಾನ್ ಈಕೆಗಿಂತ ನಾಲ್ಕು ವರ್ಷ ದೊಡ್ಡವನು. ಅವರೆಲ್ಲರೂ ವಾಸಿಸುತ್ತಿದ್ದ ನಿವಾಸ ಗೇಟ್ ಶೆಡ್ ಹಾಲ್. ಅಷ್ಟಕ್ಕೂ ಆಕೆ ಮತ್ತು ಮಕ್ಕಳೊಂದಿಗೆ ಹೇಳಿಕೊಳ್ಳುವಂತಹ ಆತ್ಮೀಯತೆ ಇರಲಿಲ್ಲ. ಜೇನ್ ತಾಯಿ-ತಂದೆಯಿಬ್ಬರೂ ಸತ್ತಿದ್ದರಿಂದ ಆಕೆ ತನ್ನ ಸೋದರಮಾವ ರೀಡ್ ರಿಂದ ಪೋಷಿಸಲ್ಪಡುತ್ತಿದ್ದಳು. ಅವರು ತೀರಿಹೋಗುವ ಮುನ್ನ ತಮ್ಮ ಪತ್ನಿಯಿಂದ ಆಕೆಯ ಪೋಷಣೆಯ ಕುರಿತಾಗಿ ಭಾಷೆ ತೆಗೆದುಕೊಂಡಿದ್ದರಿಂದ ಜೇನ್ ಅಲ್ಲಿ ಇರಬೇಕಾಯಿತು.
ಎಲ್ಲದಕ್ಕೂ ವಿಧೇಯಳಾಗಿಯೇ ಇರುತ್ತಿದ್ದ ಜೇನ್ ಒಂದು ದಿನ ಜಾನ್ ತನ್ನ ಮೇಲೆ ಏರುತ್ತಿದ್ದ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಿದಾಗ ಆಕೆಗೆ ಸಿಕ್ಕ ಶಿಕ್ಷೆ ಆಕೆಯ ಅಂತರಾತ್ಮಕ್ಕಾದ ಆಘಾತ. ಎಲ್ಲರ ದೃಷ್ಟಿಯಲ್ಲಿಯೂ ಈಕೆಯದ್ದೇ ತಪ್ಪೆಂಬಂತೆ ಕಂಡದ್ದು, ಬಿಂಬಿಸಿದ್ದು ಆಕೆ ವಿಧೇಯಳಾಗಿ ಇರದಿದ್ದು.
ಇದಾದ ನಂತರ ಮಿಸೆಸ್ ರೀಡ್ ಜೊತೆಗೂ ಮಾತಿನ ಚಕಮಕಿಯಾಯಿತು. ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನ ಬಳಿ ತನ್ನ ಕಥೆಯನ್ನೆಲ್ಲ ಹೇಳಿಕೊಂಡಿದ್ದರಿಂದ ಆಕೆಯನ್ನು ಅವರ ಸಲಹೆಯಂತೆ ಶಾಲೆಗೆ ಕಳುಹಿಸಲು ಸಿದ್ಧರಾದರು. ಬೆಸ್ಸಿ ಮಾತ್ರ ಗೇಟ್ ಶೆಡ್ ಹಾಲ್ ನಲ್ಲಿ ಆಕೆಯ ಆಪ್ತಳಾಗಿದ್ದವಳು. ಮುಂದೆ ಆಕೆಯ ಸಂಪರ್ಕ ದೊರೆಯಿತೇ ಓದಿ ನೋಡಿ.
ಲೋವುಡ್ ವಸತಿಶಾಲೆ ನಡೆಸುತ್ತಿದ್ದ ಬ್ರಾಕ್ ಲ್ ಹರ್ಸ್ಟ್ ಮೇಲೆ ಮಿಸೆಸ್ ರೀಡ್ ರವರ ಪ್ರಭಾವವಿತ್ತು. ಆ ಶಾಲೆಯಲ್ಲಿ ಆಕೆಗೆ ಮೊದಲಿಗೆ ಸಿಕ್ಕ ನೋವುಗಳು ಹಾಗೂ ಕಠಿಣ ದಿನಗಳಾಚೆಗೂ ಮಿಸ್ ಟೆಂಪಲ್ ನಂತಹ ಶಿಕ್ಷಕಿ ಹಾಗೂ ಹೆಲೆನ್ ಬರ್ನ್ಸ್ ನಂತಹ ಸಹೃದಯ ಗೆಳತಿ ಸಿಗುತ್ತಾರೆ. ವಿಪರ್ಯಾಸವೆಂದರೆ, ಅಲ್ಲಿ ಸಾಂಕ್ರಾಮಿಕ ರೋಗ ಬಂದಾಗ ಹೆಲೆನ್ ನಿಧನಳಾಗುತ್ತಾಳೆ. ಅದರಲ್ಲಿಯೂ ಮಿಸ್ ಟೆಂಪಲ್ ಈಕೆಯ ಮೇಲೆ ಬೀರಿದ ಪ್ರಭಾವ ಹಾಗೂ ಅವರಿದ್ದ ರೀತಿ ಈಕೆಯನ್ನು ಸೆಳೆಯುವ ಪರಿ ಗಾಢವಾದ ಪ್ರಭಾವವನ್ನುಳಿಸಿ ಮೊದಲಿದ್ದ ಜೇನ್ ಳನ್ನು ಪ್ರಬುದ್ಧಳಾಗಿಸುತ್ತದೆ. ಲೋವುಡ್ ವಸತಿಶಾಲೆಯಲ್ಲಿ ಆಕೆ ಕಲಿತು ನಂತರ ಎರಡು ವರ್ಷ ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಾಳೆ. ಒಟ್ಟಾರೆ ಅಲ್ಲಿದ್ದದು 8 ವರ್ಷ.
ಅಲ್ಲಿನ ಕೆಲಸ ಏಕತಾನತೆಯಂತಾದಾಗ ಮುಂದಿನ ಕೆಲಸಕ್ಕಾಗಿ ಆಕೆ ಜಾಹೀರಾತೊಂದನ್ನು ನೀಡುತ್ತಾಳೆ. ಆಗ ಆಕೆ ಹೊರಟು ನಿಂತದ್ದು ಥಾರ್ನ್ ಫೀಲ್ಡ್ ಗೆ. ಅಲ್ಲಿ ಮಿಸೆಸ್ ಫೇರ್ ಫಾಕ್ಸ್ ಆಕೆಯನ್ನು 'ಅಡೀಲ್'ನ ಗವರ್ನೆಸ್ ಆಗಿ ನೇಮಕ ಮಾಡಿರುತ್ತಾರೆ. ಥಾರ್ನ್ ಫೀಲ್ಡ್ ನ ಒಡೆಯ ರಾಚೆಸ್ಟರ್ ಗೆ ಮಗು ಆಡೀಲ್ ಜೊತೆಗಿದ್ದದ್ದು ವಿಚಿತ್ರ ಬಂಧ. ತಾಯಿ ಇಲ್ಲದ ತಂದೆಯಿಂದ ಅಸ್ಟೀಕೃತಳಾಗಿದ್ದ ಆ ಮಗುವನ್ನು ಹೆಚ್ಚೇ ಹಚ್ಚಿಕೊಳ್ಳುತ್ತಾಳೆ ಜೇನ್.
ಅಷ್ಟೂ ವರ್ಷ ಗೇಟ್ ಶೆಡ್ ಹಾಲ್ ಗೆ ಹೋಗದಿದ್ದವಳು ಆಂಟ್ ರೀಡ್ ಮರಣಶಯ್ಯೆಯಲ್ಲಿರುವಾಗ ಅಲ್ಲಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಅಲ್ಲಿ ಅವರು ಮರಣ ಹೊಂದುತ್ತಾರೆ. ಅದಕ್ಕೂ ಮುಂಚೆ ಈಕೆಯನ್ನು ನೋಡಬಯಸಿದ್ದಾದರೂ ಏಕೆ..? ಇವಳಿಗೆ ಸಿಕ್ಕ ಹೊಸ ಸಂಬಂಧಿ ಯಾರು..? ಎಲಿಜಾ, ಜಾನ್, ಜಾರ್ಜಿಯಾನ ಈಗ ಹೇಗಿದ್ದರು..? ಓದಿ ನೋಡಿ.
ರಾಚೆಸ್ಟರ್ ಜೊತೆಗೆ ಜೇನ್ ಬಂಧ ಬೆಳೆಯುತ್ತಲೇ ಹೋಗುತ್ತದೆ. ಮುಂದೆ ಅದು ವಿವಾಹದ ಪ್ರಸ್ತಾಪಕ್ಕೆ ತಿರುಗಿ ವಿವಾಹ ಇನ್ನೇನು ಆಗಿಯೇ ಬಿಟ್ಟಿತು ಎನ್ನುವ ಸಂದರ್ಭದಲ್ಲಿ ಅಡ್ಡಿ ಉಂಟಾಗುತ್ತದೆ. ಅತ್ಯಂತ ಶ್ರೀಮಂತನಾಗಿದ್ದ ಮಿಸ್ಟರ್ ರಾಚೆಸ್ಟರ್ ಜೊತೆಗೆ ಮಿಸ್ ಇನ್ ಗ್ರಾಮ್ ಎಂಬ ಚೆಲುವೆಯ ಹೆಸರು ತಳುಕಿ ಹಾಕಿಕೊಂಡಿರುತ್ತದೆ. ಅವರ ಒಡನಾಟಕ್ಕೂ ಜೇನ್ ಸಾಕ್ಷಿಯಾಗಿರುತ್ತಾಳೆ. ಅಷ್ಟೇನೂ ರೂಪವತಿಯಲ್ಲದ, ಅಂತಸ್ತಿನಲ್ಲೂ ಸಮಾನವಿಲ್ಲದ ಜೇನ್ ಳನ್ನು ವಿವಾಹವಾಗುತ್ತೇನೆಂದು ಹೇಳುವ ನಡೆ ಅನುಮಾನವನ್ನು ಹುಟ್ಟುಹಾಕುತ್ತದೆ. ಮಿಸೆಸ್ ಫೇರ್ ಪಾಕ್ಸ್ ಈ ಕುರಿತು ಎಚ್ಚರಿಕೆಯನ್ನು ನೀಡಿರುತ್ತಾರೆ.
ಥಾರ್ನ್ ಫೀಲ್ಡ್ ನಲ್ಲಿ ಹಲವಾರು ನಿಗೂಢಗಳಿರುತ್ತವೆ, ಅದರಲ್ಲಿ ಇದೂ ಒಂದು. ಅಲ್ಲಿನ ಪೈಶಾಚಿಕ ನಗು, ರಾಚೆಸ್ಟರ್ ಅನ್ನು ಕೊಲ್ಲುವ ಪ್ರಯತ್ನ, ಮೇಸನ್ ಮೇಲಿನ ಹಲ್ಲೆ ಇದೆಲ್ಲದರ ಹಿಂದಿನ ಕಥೆಯೇನು..?
ವಿವಾಹ ಮುರಿದು ಬಿದ್ದ ನಂತರ ರಾತ್ರೋರಾತ್ರಿ ಆಕೆ ತನ್ನ ಕನಿಷ್ಠ ಅಗತ್ಯತೆಯ ವಸ್ತುಗಳೊಡನೆ ಥಾರ್ನ್ ಫೀಲ್ಡ್ ಅನ್ನು ತೊರೆಯುತ್ತಾಳೆ. ಗೇಟ್ ಶೆಡ್ ಜೊತೆಗೆ ಆಕೆಗೆ ಅಷ್ಟೇನೂ ನಂಟಿಲ್ಲದಿದ್ದರೂ.. ಆಕೆಯನ್ನು ಹೆಚ್ಚು ಪ್ರಭಾವಿಸಿದ್ದು ಥಾರ್ನ್ ಫೀಲ್ಡ್. ಅದನ್ನು ಯಾರಿಗೂ ಹೇಳದೆ ಬಿಡುವ ಆಕೆಯ ಮನಸ್ಸಿನ ತಲ್ಲಣ, ತಳಮಳಗಳು ಹಾಗೂ ವಿಟ್ ಕ್ರಾಸ್ ನಲ್ಲಿ ಇಳಿದಾಗ ಬರಿಗೈಯಾದ ಆಕೆ ಅನುಭವಿಸಿದ ಕಷ್ಟದ ಪರಂಪರೆಗಳು ನಮ್ಮನ್ನು ತಲ್ಲಣಗೊಳಿಸುತ್ತವೆ.
ಪಾದ್ರಿಯಾಗಿದ್ದ ಮಿಸ್ಟರ್ ಸೇಂಟ್ ಜಾನ್, ಡಯಾನಾ, ಮೇರಿ ಎಂಬ ಗವರ್ನೆಸ್ ಆಗಲಿದ್ದ ಸಹೋದರ-ಸಹೋದರಿಯರು ಹಾಗೂ ಚಿಕ್ಕಂದಿನಿಂದಲೂ ಅವರ ಆರೈಕೆ ಮಾಡುತ್ತಿದ್ದ ಹನ್ನಾ ಈಗ ಮೂರ್ ಹೌಸ್ ನಲ್ಲಿದ್ದರು. ಅಸಹಾಯಕ ಪರಿಸ್ಥಿತಿಯಲ್ಲಿ ಜೇನ್ ಬಂದು ಸೇರಿದ್ದು ಇಲ್ಲಿಗೆ. ಆಕೆ ತನ್ನ ಹೆಸರನ್ನು ಸೇರಿದಂತೆ ಹಿಂದಿನ ಯಾವ ವಿಚಾರಗಳನ್ನೂ ಅವರ ಬಳಿ ತೆರೆದಿಡಲಿಲ್ಲ. ಮಾನವೀಯತೆಯ ಮೂರ್ತಿಗಳಂತಿದ್ದ ಎಲ್ಲರೂ ಆಕೆಗೆ ಆಪ್ತರಾದರು. ಮುಂದೆ ಮೊರ್ಟೆನ್ ನ ಹಳ್ಳಿಯ ಶಾಲೆಯಲ್ಲಿ ಅಧ್ಯಾಪಕಿಯಾಗಿ ಜೇನ್ ಕಾರ್ಯನಿರ್ವಹಿಸುತ್ತಾಳೆ. ಸೇಂಟ್ ಜಾನ್ ಇಂಗ್ಲೆಂಡ್ ನಿಂದ ಭಾರತಕ್ಕೆ ಹೋಗಿ ಅಲ್ಲಿ ಮಿಶನರಿಯಾಗಿ ಸೇವೆ ಸಲ್ಲಿಸುವವರಿದ್ದರು. ಅಪ್ರತಿಮ ಸುಂದರಿ ಹಾಗೂ ಶ್ರೀಮಂತೆ ರೋಸ್ ಮಂಡ್ ಆಲಿವರ್ ಳ ಪ್ರೀತಿಯನ್ನು ನಿರಾಕರಿಸಿ..!
ಇವರೆಲ್ಲರೂ ಪರಸ್ಪರ ಸಂಬಂಧಿಗಳಾಗಿದ್ದರು.. ಜೇನ್ ನ ತಂದೆಯ ತಂಗಿಯ ಮಕ್ಕಳು ಈ ಮೂವರು ಎಂಬ ಸತ್ಯ ವಿಚಿತ್ರ ಸಂದರ್ಭವೊಂದರಲ್ಲಿ ಅರಿವಾಗುತ್ತದೆ. ತನಗರಿವಿಲ್ಲದಂತೆ ತಾನು ನೋಡದ ಚಿಕ್ಕಪ್ಪನ ಸಂಪತ್ತಿಗೆ ಏಕೈಕ ವಾರಸುದಾರಳಾಗಿದ್ದ ಜೇನ್ ಅದನ್ನು ಈ ಮೂವರೊಡನೆ ಹಂಚಿಕೊಳ್ಳುತ್ತಾಳೆ.
ಸೇಂಟ್ ಜಾನ್ ನನ್ನು ಅಣ್ಣನಂತೆ ಕಂಡಿದ್ದ ಜೇನ್ ಗೆ ಆತನಿಂದ ವಿವಾಹದ ಪ್ರಸ್ತಾಪ ಬರುತ್ತದೆ. ಆತನ ಪತ್ನಿಯಾಗಲು ಆಕೆ ಒಪ್ಪಿದಳೇ..? ತಾನೇ ರಾತ್ರೋರಾತ್ರಿ ತೊರೆದು ಬಂದಿದ್ದ ಥಾರ್ನ್ ಫೀಲ್ಡ್ ಹಾಗೂ ರಾಚೆಸ್ಟರ್ ನನ್ನು ಹುಡುಕಿಕೊಂಡು ಹೊರಟವಳಿಗೆ ತಿಳಿದ ಸತ್ಯವೇನು..? ಮುಂದೆ ಅವಳ ನಡೆ ಏನಿತ್ತು..? ಎಲ್ಲವನ್ನೂ ತಿಳಿಯಲು ಓದಿ ಶ್ಯಾಮಲಾ ಮಾಧವ ಅವರ ಚೆಂದದ ಅನುವಾದದ ಆತ್ಮಕಥಾನಕ ಕಾದಂಬರಿಯನ್ನು.
ತಾನೆಂದೂ ಕ್ಷಮಿಸುವುದಿಲ್ಲವೆಂದು ತಾನು ಲೋವುಡ್ ವಸತಿ ಶಾಲೆಗೆ ಹೋಗುವ ಮುನ್ನ ಅಂದುಕೊಂಡಿದ್ದ ಜೇನ್ ಳ ಗಟ್ಟಿ ನಿರ್ಧಾರವನ್ನು ವಿಚಲಿತಗೊಳಿಸಿದ್ದು ಹೆಲ್ಲನ್ ನ ಸಮಾಧಾನಯುತ ಹಾಗೂ ವಿನಮ್ರತೆಯುಳ್ಳ ನಡೆಯೇ..? ಟೆಂಪಲ್ ರ ಮಾನವೀಯ ನಡೆಯೇ..? ಪರಿಪಕ್ವವಾದ ಜೇನ್ ಆಲೋಚನೆಗಳೇ..? ಅಥವಾ ಮರಣಶಯ್ಯೆಯಲ್ಲಿ ಆಕೆ ಇದ್ದ ಪರಿಸ್ಥಿತಿಯೇ..?
ಮಿಸ್ಟರ್ ರಾಚೆಸ್ಟರ್ ಕಠಿಣರಾದಸ್ಟು ಈಕೆ ತನ್ನ ಸ್ವಾಭಿಮಾನವನ್ನು ಬಿಡುವುದಿಲ್ಲ. ಗಂಡಿನ ವಿನಮ್ರ ಕೋರಿಕೆ ಆಕೆಯಲ್ಲಿ ಕರುಣೆ ಹುಟ್ಟಿಸುವುದಿಲ್ಲ. ಬದಲಾಗಿ ಪ್ರೀತಿಯ ವ್ಯಾಖ್ಯಾನ ಅವಳಲ್ಲಿ ಬೇರೆಯೇ ಇರುತ್ತದೆ.
ತನ್ನಂತೆಯೇ ಸರಳವಾಗಿದ್ದ ಸೇಂಟ್ ಜಾನ್ ನಲ್ಲಿ ಆಕೆ ನಿರ್ದಯತೆಯನ್ನು ಗುರುತಿಸಿದರೂ... ಆತನ ಕೆಲಸಗಳಿಗೆ ಈಕೆ ಸಹಾಯಕಳಾಗಿ ನಿಲ್ಲುತ್ತಾಳೆ. ಅದು ಸಂಬಂಧಕ್ಕೆ ಕೊಟ್ಟ ಗೌರವವೇ ಅಥವಾ ಆತನ ಧ್ಯೇಯಕ್ಕೆ ಒತ್ತಾಸೆಯಾಗಿ ನಿಲ್ಲುವ ನಿರ್ಧಾರವೇ..? ಆಕೆಯಷ್ಟೇ ಸರಳನಾಗಿದ್ದವನು ಆಕೆಯಲ್ಲಿ ಪ್ರೇಮವನ್ನು ಹುಟ್ಟುಹಾಕಲು ವಿಫಲವಾದದ್ದೇಕೆ..?
ಆತ್ಮಸಾಂಗತ್ಯದ ಪ್ರೀತಿ ಮತ್ತು ವಿವಾಹವನ್ನು ಬಯಸುವ ಹೆಣ್ಣಾಗಿ ಕಾಣುವ ಜೇನ್ ಕಠಿಣಳಾಗಬೇಕಾದ ಕಡೆ ಕಠಿಣವಾಗಿ, ಮೃದುವಾಗಬೇಕಾದ ಕಡೆ ಮೃದುವಾಗಿ.. ಪಕ್ವವಾದ ಹೆಣ್ಣಾಗಿ ಕಾಣಿಸುತ್ತಾಳೆ.
ಚಿಕ್ಕಪ್ಪನ ಅಪರಿಮಿತ ಸಂಪತ್ತಿಗೆ ತಾನು ಏಕೈಕ ವಾರಸುದಾರಳಾಗಬಹುದಾಗಿದ್ದರೂ.. ಎಲ್ಲರೊಡನೆ ಹಂಚಿಕೊಳ್ಳುವ ಅವಳ ಗುಣ, ನಿಷ್ಕಲ್ಮಶ ಪ್ರೀತಿಗೆ ಹಾತೊರೆಯುವ ಮನಸ್ಸು, ಸರಳತೆಯ ಪ್ರಬುದ್ಧ ಜೇನ್ ಮೊದಲಿಂದಲೂ ಹೆಚ್ಚು ಇಷ್ಟವಾಗುತ್ತಾಳೆ. ಇಲ್ಲಿ (ಓದುಗರೊಡನೆ) ಆಕೆ ತನ್ನ ಕಷ್ಟದ ಪರಂಪರೆಯನ್ನೇ ಹೇಳಿಕೊಂಡರೂ .. ಮತ್ತೊಬ್ಬರೊಡನೆ ತನ್ನ ಜೀವನದ ಘಟನೆಗಳನ್ನು ಹಂಚಿಕೊಳ್ಳುವಾಗ ಅದೇನೂ ಕಷ್ಟವಲ್ಲ ಎಂಬಂತೆ, ಕಡಿಮೆಯಂತೆ ಹೇಳಿಕೊಳ್ಳುವಾಗ, ಮತ್ತೊಬ್ಬರಲ್ಲಿ ಅದು ಅನುಕಂಪವನ್ನು ಹುಟ್ಟಿಸಬಾರದು ಎನ್ನುವ ಆಕೆಯ ಆಲೋಚನೆ ಪ್ರಬುದ್ಧವೆನ್ನಿಸಿತು.
ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಷ್ಟು ಪ್ರಬುದ್ಧಳಾದವಳಿಗೆ ತಂದೆ-ತಾಯಿಯ ಮಾರ್ಗದರ್ಶನವಿರಲಿಲ್ಲ. ತನ್ನವರೆನ್ನುವವರಿಲ್ಲದೆ ಬೆಳೆದ ಆಕೆಯನ್ನು ಮತ್ತೊಬ್ಬರ ವ್ಯಕ್ತಿತ್ವ ಪ್ರಭಾವಿಸಿತು. ಒಳ್ಳೆಯ ಪ್ರಭಾವವೇ ಆಕೆಯ ಮೇಲಾದದ್ದು ಖುಷಿಯ ಸಂಗತಿ. ಮಿಸ್ ಟೆಂಪಲ್, ಹೆಲನ್, ಮಿಸಸ್ ಫೇರ್ ಫಾಕ್ಸ್, ಡಯಾನಾ, ಮೇರಿ, ಬೆಸ್ಸಿ, ಹನ್ನಾ ಈ ಎಲ್ಲಾ ಪಾತ್ರಗಳ ಹರವು ಚಿಕ್ಕದಾಗಿದ್ದರೂ ಪ್ರಭಾವ ದೊಡ್ಡದಾಗಿದೆ ಎನ್ನಿಸಿತು.
ಭಾರತವೆಂದರೆ ಕಡುಬಿಸಿಲಿನ ದೇಶ, ಅಲ್ಲದೆ ಅಲ್ಲಿ ಧರ್ಮಪ್ರಚಾರಕ್ಕೆ ಹೋದವರು ಮರಳಿ ಬರುವುದಿಲ್ಲ (ಸಾಂಕ್ರಮಿಕ ರೋಗಗಳ ಹೆಚ್ಚಾಗಿದ್ದ ಸಂದರ್ಭ) ಎಂಬ ಮಾತೊಂದು ಇಲ್ಲಿ ಬರುತ್ತದೆ. ಪಾಶ್ಚಾತ್ಯರಿಗೆ ಆಗ ಭಾರತದ ಮೇಲಿದ್ದ ನೋಟವನ್ನು ಇದರಿಂದ ಅರಿಯಬಹುದು.
ಇಲ್ಲಿ ಸರ್ ನೇಮ್ ನಿಂದ ಸಂಬೋಧಿಸುವ ರೀತಿ, ಹುದ್ದೆಗಳು, ಇಂಗ್ಲೆಂಡ್ ನ ಚಳಿಯ ವಾತಾವರಣವನ್ನು ಹೊರತುಪಡಿಸಿದರೆ ನಮ್ಮದೇ ನೆಲದ್ದು ಎನ್ನಿಸಬಹುದಾದ ಆತ್ಮಕಥಾನಕ ಕಾದಂಬರಿ. ಮೂಲಭಾಷೆಯ ಸೊಗಡು, ವಾತಾವರಣವನ್ನು ಉಳಿಸಿಕೊಂಡು ಶಕ್ತವಾಗಿ ಕಟ್ಟಿಕೊಟ್ಟಿರುವ ಅನುವಾದ ಇಲ್ಲಿದೆ. ಬಹಳ ಚೆಂದದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ