ಭಾನುವಾರ, ಏಪ್ರಿಲ್ 26, 2026

ವಸುಂಧರ (ಪುಸ್ತಕ ಯಾನ - 368)



ಪುಸ್ತಕದ ಶೀರ್ಷಿಕೆ : ವಸುಂಧರ 

ಲೇಖಕರು : ಸಾಯಿಸುತೆ 

ಪ್ರಕಾಶಕರು : ಸುಧಾ ಎಂಟರ್ಪ್ರೈಸಸ್

ಪ್ರಥಮ ಮುದ್ರಣ : 1977

ಏಳನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 112

ಬೆಲೆ : 90 ರೂ.


ಸೀತಾರಾಮಯ್ಯನವರ ಅನಾರೋಗ್ಯ, ಸಾವಿನೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಶ್ಯಾಮರಾಯರು ಅನಾರೋಗ್ಯದಲ್ಲಿದ್ದ ತಮ್ಮ ಬಾಲ್ಯದ, ಆಪ್ತ ಸ್ನೇಹಿತನನ್ನು ಕರೆದೊಯ್ಯಲು ಬಂದವರು ಆತನ ಅಂತ್ಯಸಂಸ್ಕಾರ ಮುಗಿಸಿ, ಅವರಿಗೆ ಮಾತು ಕೊಟ್ಟಂತೆ ಅವರ ಒಬ್ಬಳೇ ಮಗಳು ವಸುಂಧರಳನ್ನು ತನ್ನೊಡನೆ ಕರೆದೊಯ್ಯಲು ಸಿದ್ಧವಾಗುತ್ತಾರೆ. 


ವಸುಂಧರ ಕೂಡ ತನ್ನ ತಂದೆಯ ಕೊನೆಯಾಸೆಯಂತೆ ಮಾವ ಎಂದು ಸಂಬೋಧಿಸುತ್ತಿದ್ದ ಶ್ಯಾಮರಾಯರ ಜೊತೆ ಹೊರಡುತ್ತಾಳೆ. ವಸುಂಧರಳ ತಾಯಿಯ ತಾಯಿ ಪಾರ್ವತಮ್ಮನವರು ತಮ್ಮ ಮಗನಿಗೆ ಆಕೆಯನ್ನು ವಿವಾಹ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಾರಾದರೂ.. ಅದು ನಿಷ್ಪಲವಾಗುತ್ತದೆ. 


ಶಾಮರಾಯರು ವಸುಂಧರಳನ್ನು ಗೆಳೆಯನ ಮಗಳಂತಲ್ಲದೆ, ತನ್ನ ಮಗಳಂತೆಯೇ ಜೋಪಾನ ಮಾಡಿದರು. ಮನೆಯ ಪ್ರತಿ ಕೆಲಸದವರಿಗೂ ವಸುಂಧರ ಅಣತಿಯಂತೆಯೇ ನಡೆಯಬೇಕು ಎಂದು ಆಜ್ಞೆ ಮಾಡಿದರು. ತಂದೆಯ ಸಾವಿನಿಂದ ಸಾವರಿಸಿಕೊಂಡು ವಸುಂಧರ ಕಾಲೇಜಿಗೆ ಸೇರಿದಳು. ಕಾಲೇಜಿನ ವಿಷಯಗಳನ್ನು ರಾಯರ ಜೊತೆ ಹಂಚಿಕೊಳ್ಳುತ್ತಿದ್ದಳು. ಫ್ಯಾಕ್ಟರಿ ಕೆಲಸದಲ್ಲಿ ನೆರವಾಗುತ್ತಿದ್ದಳು.  ತಂದೆ - ಮಗಳ ಈ ಬಾಂಧವ್ಯ ಆಪ್ತತೆ ಹೆಚ್ಚಾಗುತ್ತಲೇ ಹೋಗುತ್ತದೆ. 


ಶ್ಯಾಮರಾಯರಿಗೆ ಇದ್ದದ್ದು ಒಬ್ಬನೇ ಮಗ ಶೇಖರ್. ಅವರ ಪತ್ನಿ ತೀರಿಕೊಂಡಾಗ ಚಿಕ್ಕ ಹುಡುಗನಾಗಿದ್ದವನನ್ನು .. ರಾಯರು ಎಷ್ಟೇ ಹೇಳಿದರು ಕೇಳದೆ ಅವನ ಸೋದರಮಾವ, ಸೋದರತ್ತೆ ಮುಂಬೈಗೆ ಕರೆದುಕೊಂಡು ಹೋದವರು ದೊಡ್ಡವನಾದ ಮೇಲೂ ಇಲ್ಲಿಗೆ ಕಳಿಸಿರಲಿಲ್ಲ. ಶೇಖರನಿಗೂ ಇಲ್ಲಿನ ಕುರಿತು ಒಲವೇನೂ ಇರಲಿಲ್ಲ. ವಿದ್ಯಾಭ್ಯಾಸ ಪೂರೈಸಿ ವಿದೇಶಕ್ಕೆ ಹೋಗಿದ್ದವನು ಸಂಪೂರ್ಣವಾಗಿ ಎಲ್ಲವನ್ನೂ ಮರೆತೇ ಬಿಡುತ್ತಾನೆ ಎನ್ನುವಷ್ಟರಲ್ಲಿ ತಂದೆಯ ಆರೋಗ್ಯ, ಫ್ಯಾಕ್ಟರಿ ಎಲ್ಲವುಗಳ ಬಗ್ಗೆ ವಿಚಾರಿಸಿ, ಪತ್ರ ಬರೆದು ಈಗ ಅವರ ಜೊತೆ ಬಂದು ನೆಲೆಸುವ ಆಸೆ ವ್ಯಕ್ತಪಡಿಸಿದ್ದ. ಅದಕ್ಕೆ ಕಾರಣವೇನು..?


ವಸುಂಧರಳ ಬದುಕಲ್ಲಿ ವಾಸುದೇವ್ ಹಾಗೂ ಲಲಿತಮ್ಮ ಬರುವ ಆಶಯ ವ್ಯಕ್ತಪಡಿಸಿದ್ದರು. ಅಷ್ಟಕ್ಕೂ ಲಲಿತಮ್ಮ ಹಾಗೂ ವಾಸುದೇವ್ ಯಾರು..? ಅವರು ವಸುಂಧರಳ ಕುರಿತು ಅಸ್ಥೆ ತೋರುವುದಕ್ಕೆ ಕಾರಣವಾದರೂ ಏನು..? 


ಶೇಖರ್ ಮನೆಗೆ ಬರುವ ಹಿಂದಿನ ದಿನವೇ ಬಾಂಬೆಯಿಂದ ಅವನ ಸೋದರಮಾವ ಮಧುಸೂದನ, ಅವರ ಪತ್ನಿ ಸರೋಜ, ಮಗಳು ರೇಖಾ ಹಾಗೂ ಮಗ ಸುರೇಶನೊಂದಿಗೆ ಅವನನ್ನು ಸ್ವಾಗತಿಸಲು ರಾಯರ ಮನೆಗೆ ಬಂದಾಗಿತ್ತು. ಶೇಖರ ಆತ್ಮೀಯತೆ ತೋರಿದರೂ.. ಆತ ತಂದೆಯ ಬಳಿ ಬಂದದ್ದು ಅವರಿಗೆ ಇಷ್ಟವಿರಲಿಲ್ಲ. ಅಲ್ಲದೆ, ಆತನ ಪ್ರೀತಿಗೆ ಉದಾಸೀನವಾಗಿಯೇ ಪ್ರತಿಕ್ರಿಯಿಸಿದರು. ರೇಖಾ ಹಾಗೂ ಶೇಖರ್ ಇಬ್ಬರೂ ವಿವಾಹವಾಗುತ್ತಾರೆ ಎನ್ನುವ ದೂರದಾಸೆಯಲ್ಲಿದ್ದವರಿಗೆ ಶೇಖರ್ ನೀಡಿದ ಕಾರಣ ಮತ್ತಷ್ಟು ಬೇಸರ ಹುಟ್ಟಿಸಿತು. ಶೇಖರನ ನಡೆ ಸಂಪೂರ್ಣವಾಗಿ ಮಾರ್ಪಾಟಾಗಿರುವುದು ಮತ್ತಷ್ಟು ನಿಚ್ಚಳವಾಗಿ ಕಾಣಿಸಿತ್ತು. 


ವಸುಂಧರ ತಮ್ಮಲ್ಲಿಗೆ ಬಂದಿರುವುದಕ್ಕೆ ಶೇಖರ್ ಯಾವ ರೀತಿ ಪ್ರತಿಕ್ರಿಸುತ್ತಾನೋ ಎಂಬ ಭಯ ರಾಯರಲ್ಲಿ ಇದ್ದರೂ.. ಆತ ತನ್ನ ನಡವಳಿಕೆಯಿಂದ ತಂದೆಯ ಮಗನೇ ಎಂದು ನಿರೂಪಿಸಿದ. ರಾಯರ ಯಾಂತ್ರಿಕ ಜೀವನ ಬದಲಾಗಿರುವ ರೀತಿ ಹಾಗೂ ಅವರ ಮೇಲೆ ವಸುಂಧರಳ ಪ್ರಭಾವ ಎಷ್ಟಿದೆ ಎಂಬುದು ಆತನಿಗೂ ವೇದ್ಯವಾಗಿತ್ತು. 


ಸಂಕೋಚ ಸ್ವಭಾವದ ಹುಡುಗಿ ವಸುಂಧರ ಮನೆಯಲ್ಲಿ ಹೊಸಬರ ಜೊತೆ ಬೆರೆಯುವುದು ಸ್ವಲ್ಪ ಕಷ್ಟವೇ ಆಯಿತು. ಅದರಲ್ಲಿಯೂ ಸುರೇಶ ಆಕೆಯ ಜೊತೆ ನಡೆದುಕೊಂಡ ರೀತಿ ಆಕೆಗೆ ಇಷ್ಟವಾಗಲಿಲ್ಲ. ವಸುಂಧರ ಹೆಚ್ಚಾಗಿ ಇದಕ್ಕೆ ಗಮನಕೊಡದೆ, ತನ್ನ ಪಾಡಿಗೆ ತಾನು, ತನ್ನ ಕಾಲೇಜು ಎಂಬಂತಿದ್ದಳು. 


ಶೇಖರ್ ರೇಖಾಳನ್ನು ಈಗಲೇ ಮದುವೆಯಾಗುವುದಿಲ್ಲ ಎಂದದ್ದು ರೇಖಾಳ ಅಹಂಗೆ ಪೆಟ್ಟು ಬಿದ್ದಂತಾಗಿತ್ತು. ಆದರೆ, ಮಧುಸೂದನ ಹಾಗೂ ಅವನ ಪತ್ನಿ ಆಸೆ ಬಿಟ್ಟಿರಲಿಲ್ಲ. ಜೊತೆಗೆ, ರೇಖಾಳನ್ನು ಈ ಮನೆಗೆ ಸೊಸೆಯಾಗಿ ತಂದುಕೊಂಡರೆ, ವಸುಂಧರಳನ್ನು ಸುರೇಶನಿಗೆ ತಂದುಕೊಳ್ಳುತ್ತೇವೆ. ತಬ್ಬಲಿ ಹುಡುಗಿಗೆ ದಾರಿಯಾಗಲಿ ಎನ್ನುವ ಮಾತು ಹೇಳಿದ್ದರು. ಆ ಮಾತು ಸ್ವತಃ ರಾಯರಿಗೆ ಇಷ್ಟವಾಗಲಿಲ್ಲ. 


ಸಂಕೋಚ ಸ್ವಭಾವದ ವಸುಂಧರ ಶೇಖರನೊಡನೆ ಮೊದಮೊದಲು ಅಷ್ಟಾಗಿ ಬೆರೆಯುತ್ತಿರಲಿಲ್ಲ. ಒಂದೇ ಮನೆಯಲ್ಲಿ ಇದ್ದರೂ ಪರಕೀಯರಂತಿರುತ್ತಿದ್ದರು. ಆದರೆ ಶೇಖರನ ಆತ್ಮೀಯತೆ ನಿಧಾನವಾಗಿ ಅವಳನ್ನು ಸ್ನೇಹಮಯಿಯಾಗುವಂತೆ ಮಾಡಿತು. ವಸುಂಧರಳ ಅನಾರೋಗ್ಯ ಅವರಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಿದ್ದು. ಆ ಪ್ರಸಂಗಗಳು ಹಿತವಾಗಿ ಚಿತ್ರಿತವಾಗಿವೆ. ಹಾಗೆಂದು, ಆಕೆ ಸಿಕ್ಕಾಪಟ್ಟೆ ಹರಟುತ್ತಲೂ ಇರಲಿಲ್ಲ ಅಥವಾ ಸಂಕೋಚಪಡುತ್ತಲೂ ಇರಲಿಲ್ಲ. ಅನಾರೋಗ್ಯದಿಂದ ಆ ವರ್ಷ ಅವಳ ಪರೀಕ್ಷೆಗೂ ತೊಂದರೆಯಾಯಿತು.


ರೇಖಾಳ ಪ್ರಕರಣವಿಲ್ಲದಿದ್ದರೆ ವಸುಂಧರಳನ್ನು ಸೊಸೆಯಾಗಿ ಮಾಡಿಕೊಳ್ಳುವುದಕ್ಕೆ ತುದಿಕಾಲಿನಲ್ಲಿ ನಿಂತಿರುತ್ತಿದ್ದರು ರಾಯರು. ಆದರೆ, ರೇಖಾ ಹಾಗೂ ಶೇಖರ್ ಒಟ್ಟಿಗೆ ಬೆಳೆದವರು. ಸುಮ್ಮನೆ ತೋರಿಕೆಗೆ ಶೇಖರ್ ಮದುವೆಯಾಗುವ ಉತ್ಸಾಹ ತೋರದಿದ್ದರೂ ಮಾವನ ಮಗಳಲ್ಲಿ ಪ್ರೀತಿ ಇರಬಹುದು. ಅದನ್ನು ತಪ್ಪಿಸಿ ಇಬ್ಬರಲ್ಲೂ ದ್ವೇಷ ಕಟ್ಟಿಕೊಳ್ಳಬಾರದು ಎಂದು ಸುಮ್ಮನಾಗಿದ್ದರು.


ಮಧುಸೂದನರು ಮತ್ತೆ ಮಗಳೊಂದಿಗೆ ಬಂದರು. ಅವರಿಗಿನ್ನೂ ಆಸೆ ಕಳೆದಿರಲಿಲ್ಲ. ಅಲ್ಲದೆ ಈ ಬಾರಿ ವಸುಂಧರಳನ್ನು ಕಂಡು ಅವರು ಹಾಗೂ ಅವರ ಪತ್ನಿ, ಮಗಳಿಗೂ.. ರೇಖಾಳಿಗಿಂತ ವಸುಂಧರಳ ಮೇಲೆ ಶೇಖರ್ ತೋರುತ್ತಿದ್ದ ಆತ್ಮೀಯತೆ ಕಂಡು ಆತ ಮದುವೆಗೆ ಒಪ್ಪದಿರಲು ಅವಳೇ ಕಾರಣ ಎನ್ನುತ್ತಿದ್ದರು. ಅದು ನಿಜವಲ್ಲದಿದ್ದರೂ.. ವಸುಂಧರಳಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟವೇ ಆಯಿತು. 


ಈ ಪರಿಸ್ಥಿತಿಯನ್ನು ತಿಳಿಯಾಗಿಸಲು ರೇಖಾಳನ್ನು ಬಾಂಬೆಗೆ ಕರೆದೊಯ್ಯಲು ರಾಯರ ಬಳಿ ಶೇಖರ್ ಕೇಳಿಕೊಂಡಾಗ ವಸುಂಧರಳಿಗೂ ಬಾಂಬೆ ತೋರಿಸಿಕೊಂಡು ಬರುತ್ತೇನೆ ಎಂದು ಅವಳನ್ನು ಜೊತೆಗೆ ಕರೆದೊಯ್ದರು. ಅಲ್ಲಿ ಆಕೆ ಲಲಿತಮ್ಮನವರ ಮನೆಯಲ್ಲಿ ಉಳಿಯುವ ಪ್ರಸಂಗ ಬರುತ್ತದೆ. ಶ್ಯಾಮರಾಯರು ಶೇಖರ್ ಬಂದು ಆಕೆಯನ್ನು ಕರೆದುಕೊಂಡು ಬರುತ್ತಾನೆ ಎಂದು ಊರಿಗೆ ಹೊರಟು ಬಂದರು. ಶೇಖರ್ ಹಾಗೂ ವಸುಂಧರ ಅಲ್ಲಿಂದ ಬಂದಾಗ ಶ್ಯಾಮರಾಯರ ಅನಾರೋಗ್ಯದ ಸುದ್ದಿ ಕಾದು ಕೂತಿತ್ತು. ಅವರ ಬರುವಿಕೆಗೆ ಕಾಯುತ್ತಿದ್ದರೇನೋ ಎನ್ನುವಂತೆ ಅವರ ಉಸಿರು ನಿಂತಿತ್ತು. 


ಈ ಎಲ್ಲದರಿಂದ ಶೇಖರ್ ಹಾಗೂ ವಸುಂಧರ ಚೇತರಿಸಿಕೊಂಡರೇ..? ಇದೇ ಸಂದರ್ಭವನ್ನು ಮುಂದೆ ಮಾಡಿಕೊಂಡು ಮಧುಸೂದನರ ಕುಟುಂಬ ಆ ಮನೆಯಲ್ಲಿ ನೆಲೆಯೂರುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಸಿಕ್ಕ ಫಲವೇನು..? 


ವಸುಂಧರ ಅಲ್ಲಿಯೇ ಇರಲು ಶೇಖರ್ ಒಪ್ಪುವನೇ..? ಅಥವಾ ವಸುಂಧರಳಿಗೆ ಅಲ್ಲಿಯೇ ಉಳಿಯುವ ಮನಸ್ಸಾಗುತ್ತದೆಯೇ..?


ವಸುಂಧರಳ ಗೆಳತಿ ವಸಂತ ಅವಳ ಬದುಕಲ್ಲಿ ವಹಿಸುವ ಮುಖ್ಯ ಪಾತ್ರವಾದರೂ ಏನು..? ಲಲಿತಮ್ಮ ಹಾಗೂ ವಾಸುದೇವ್, ವಸುಂಧರಳ ಅಜ್ಜಿ ಇವರೆಲ್ಲರೂ ಈ ಪರಿಸ್ಥಿತಿಯನ್ನು ಯಾವ ರೀತಿ ನೋಡುತ್ತಾರೆ ಹಾಗೂ ವಸುಂಧರಳ ಬಳಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ..?


ಶ್ಯಾಮರಾಯರು ಕಟ್ಟಿ ಬೆಳೆಸಿದ ಫ್ಯಾಕ್ಟರಿ ಮುಂದೆ ಏನಾಗುತ್ತದೆ..? ವಸುಂಧರ ಮನೆ ನಿರ್ವಹಣೆ ಹಾಗೂ ಫ್ಯಾಕ್ಟರಿ ನಿರ್ವಹಣೆಯಲ್ಲಿ ತೋರಿದ ಅಸ್ಥೆ ಅವಳ ಬದುಕಲ್ಲಿ ಮುಂದೆ ಏನಾದರೂ ಪರಿಣಾಮ ಬೀರುತ್ತದಾ..?


ತಾಯಿಯ ಆರೈಕೆ, ನೆರಳಿನಲ್ಲಿ ಬೆಳೆಯದೆ ಹೋದರೂ.. ತಾನೇ ತಾಯಿಯಂತೆ ಎಲ್ಲರನ್ನೂ ಸಲಹಿದ ವಸುಂಧರಳ ಜೀವನಗಾಥೆ ಇಲ್ಲಿದೆ. ಬದುಕು ಹಾಗೂ ಅನಿವಾರ್ಯತೆ ಮೃದುವಾಗಿದ್ದವರನ್ನೂ ಎಷ್ಟು ಗಟ್ಟಿಗಿತ್ತಿಯನ್ನಾಗಿಸುವುದು ಎನ್ನುವ ನಿದರ್ಶನವೂ ಇಲ್ಲಿ ಕಾಣುತ್ತದೆ. ಚೆಂದದ ಕಾದಂಬರಿಯ ಸುಂದರ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ