ಭಾನುವಾರ, ಏಪ್ರಿಲ್ 26, 2026

ಕರುಣಾ ಹತ್ಯೆ (ಪುಸ್ತಕ ಯಾನ - 402)


ಪುಸ್ತಕದ ಶೀರ್ಷಿಕೆ : ಕರುಣಾ ಹತ್ಯೆ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸುಧಾ ಶಿಶುಸಾಹಿತ್ಯ ಮಾಲೆ

ಪ್ರಥಮ ಮುದ್ರಣ : 1988

ದ್ವಿತೀಯ ಮುದ್ರಣ : 2009 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 208

ಬೆಲೆ : 75 ರೂ. 


ಕರುಣಾ ಹತ್ಯೆ ಕಾದಂಬರಿ ತಮಿಳಿನ ಖ್ಯಾತ ಸಾಹಿತಿಯಲ್ಲೊಬ್ಬರಾದ ಶ್ರೀಮತಿ ಶಿವಶಂಕರಿ ಅವರ ಮೂಲಕೃತಿ. ಚಿತ್ರಲೇಖ ಮೇಡಂ ಅವರ ಭಾಷಾಂತರ ಹೇಗಿದೆ ಎಂದರೆ ಎಲ್ಲಿಯೂ ಇದು ಅನುವಾದ ಎಂದೇ ಅನ್ನಿಸದ ಕಾದಂಬರಿ. ತಮಿಳುನಾಡಿನ ಸ್ಥಳಗಳ ಹೆಸರುಗಳನ್ನು ಹೊರತುಪಡಿಸಿದರೆ ನಮ್ಮ ಕನ್ನಡದ್ದೇ ಕೃತಿ ಎಂಬಂತೆ ಭಾಸವಾಗುತ್ತದೆ. 


ಕರುಣ ಹತ್ಯೆ, ಮರ್ಸಿ ಕಿಲ್ಲಿಂಗ್, ದಯಾ ಮರಣ ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಈ ವಿಷಯ ಇಂದಿಗೂ ಕ್ಲಿಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳುವಂತೆ ವಿಚಾರ. ಇಂದಿಗೂ ಬಹುಚರ್ಚಿತ ವಿಷಯ. 


ಜನನಿ ಹಾಗೂ ಸತ್ಯರದ್ದು ಅನುರೂಪವಾದ ದಾಂಪತ್ಯ. ಇಬ್ಬರಲ್ಲಿಯೂ ಎಷ್ಟು ಅನ್ಯೋನ್ಯತೆ ಇತ್ತೋ.. ಅಷ್ಟೇ ಮನಸ್ಸನ್ನು ಬಿಚ್ಚಿ ಮಾತನಾಡಿಕೊಳ್ಳುವ ಪರಿಪಾಠವೂ ಇತ್ತು. ದಾಂಪತ್ಯವೆಂದರೆ ಹೀಗಿರಬೇಕು ಎಂದೆನಿಸುವಂತೆ ಮಾಡುವ ಇವರ ದಾಂಪತ್ಯದ ಚಿತ್ರಣ ಇಲ್ಲಿದೆ. 


ಜನನಿ ಭರತನಾಟ್ಯ ಕಲಾವಿದೆಯಾದರೆ.. ಸತ್ಯ 'ಮಿತ್ರಾ' ಪತ್ರಿಕೆಯಲ್ಲಿ ಸಂಪಾದಕನಾಗಿ ಕೆಲಸ ಮಾಡುತ್ತಿದ್ದ. ಸತ್ಯನಲ್ಲಿ ಕೆಲಸದ ಕುರಿತ ನಿಷ್ಠೆ, ನಿಲುವುಗಳು ಹೇಗಿದ್ದವೋ.. ಜನನಿಯಲ್ಲಿ ನೃತ್ಯ, ಕೆಲಸದ ಕುರಿತ ಆಸಕ್ತಿ, ಎಲ್ಲವನ್ನೂ ತಿಳಿದುಕೊಳ್ಳುವ ಉತ್ಸಾಹ ಅಂತೆಯೇ ಇದ್ದವು. ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೇಮಕ್ಕೆ ನಂತರ ದಾಂಪತ್ಯಕ್ಕೆ ಮುನ್ನುಡಿ ಬರೆದ ಸುಂದರ ಕಥಾಹಂದರವನ್ನು ನೀವೇ ಓದಿ ನೋಡಿ.


ಇವರ ಅನುರೂಪದ ದಾಂಪತ್ಯದ ನಡುವೆ ಅವರು ಕಂಡ, ಭೇಟಿ ನೀಡಿದ ಪ್ರಸಂಗಗಳನ್ನು ಇಬ್ಬರು ಚರ್ಚಿಸುವಾಗ ಇಬ್ಬರ ನಿಲುವುಗಳೂ ಕೆಲವೊಮ್ಮೆ ಭಿನ್ನಾಭಿಪ್ರಾಯವಾಗಿದ್ದರೆ.. ಕೆಲವೊಮ್ಮೆ ಒಂದೇ ತೆರನಾದದ್ದು. ಹಾಗೆ ಕೊಂಡಿಯಾದ ಎಷ್ಟು ವಿಚಾರಗಳನ್ನು ಕಾದಂಬರಿಯಲ್ಲಿ ಕನೆಕ್ಟ್ ಮಾಡಿರುವ ಬಗೆ ಇಷ್ಟವಾಗುತ್ತದೆ. 


ಜನನಿ ತನ್ನ ನೃತ್ಯ ಕಾರ್ಯಕ್ರಮವೆಂದು ಹೋಗಿದ್ದಾಗ ವರ್ಣವನ್ನು ಮುಗಿಸಿ ಸಭೆಗೆ ವಂದನೆ ಸಲ್ಲಿಸಿ ಗ್ರೀನ್ ರೂಂಗೆ ಹೋಗುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀಲಿ ಪರದೆಯನ್ನು ಕಟ್ಟಿದ ಹಗ್ಗ ಕಿತ್ತು ಹೋಗಿ, ಪರದೆಯೊಂದಿಗೆ ಇದ್ದ ದಪ್ಪವಾದ ಕಂಬ ಬಹಳ ಎತ್ತರದಿಂದ ಬಿದ್ದಾಗ ಜನನಿ ಅದರಡಿಯಲ್ಲಿ ಸಿಲುಕಿದಳು. ಆಗ ಹೋದ ಪ್ರಜ್ಞೆ ಇನ್ನೂ ಬಂದಿರಲಿಲ್ಲ. ನಾಮಗಿರಿಯಮ್ಮನಿಂದ ವಿಷಯ ತಿಳಿದ ಸತ್ಯ ಅಲ್ಲಿಗೆ ಬರುವಷ್ಟರಲ್ಲಿ ಜನನಿಗೆ ಚಿಕಿತ್ಸೆ ಶುರುವಾಗಿತ್ತು. ನಂತರ ಆಕೆಯನ್ನು ಮತ್ತೆ ಜತನದಿಂದ ಮದ್ರಾಸಿಗೆ ಕರೆತಂದು ಖ್ಯಾತ ನ್ಯೂರೋ ಸರ್ಜನ್ ಬಳಿಯಲ್ಲಿ ಚಿಕಿತ್ಸೆ ಕೊಡಿಸುವ ಸಂದರ್ಭದಲ್ಲಿ ತಿಳಿಯುವ ವಿಚಾರವೆಂದರೆ.. ಮೆದುಳಿನಲ್ಲಿ ಅಲ್ಲಲ್ಲೇ ರಕ್ತನಾಳಗಳು ಛೇದಗೊಂಡು, ಸಣ್ಣಸಣ್ಣ ಹೆಪ್ಪುಗಟ್ಟಿದ ರಕ್ತದ ಉಂಡೆಗಳಾಗಿವೆ. ಅವು ಮದುಳಿನ ಮೇಲಿನ ಭಾಗದಲ್ಲಿರದೆ, ಆಳದಲ್ಲಿರುವುದರಿಂದ ಬ್ರೈನ್ ಸೆಲ್ ಗಳನ್ನು ಬಿಡಿಸಿ ಶಸ್ತ್ರಚಿಕಿತ್ಸೆ ನಡೆಸುವುದು ಅಪಾಯಕಾರಿಯಾಗಿತ್ತು. 


ಇದಕ್ಕಿರುವ ಉಪಾಯವೆಂದರೆ ಸೂಕ್ತ ಔಷಧಿಗಳನ್ನು ನೀಡುತ್ತಾ ರಕ್ತದ ಉಂಡೆಗಳು ಹೆಪ್ಪುಗಟ್ಟಿರುವುದು ಕರಗುವವರೆಗೂ ಕಾಯುವುದಷ್ಟೇ.. ಅಂದರೆ, ಅಲ್ಲಿಯವರೆಗೂ ಜನನಿ ಕೋಮಾದಲ್ಲಿಯೇ ಇರಬೇಕಾದ ಪರಿಸ್ಥಿತಿ. ಈ ಪರಿಸ್ಥಿತಿಯಲ್ಲಿ ಆಕೆಯನ್ನು ಕಟ್ಟೆಚ್ಚರದಿಂದ ನೋಡಿಕೊಳ್ಳಬೇಕಿತ್ತು. ಅದಕ್ಕೆ ಮನೆಯಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿ ನರ್ಸ್ ಅನ್ನು ಇಟ್ಟಿದ್ದರು. ಸತ್ಯ ಖುದ್ದಾಗಿ ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದ. ಆಕೆಗೆ ಇಷ್ಟವಾದ ಹಾಡುಗಳನ್ನು ಪ್ಲೇ ಮಾಡುವುದು, ಕಾಲಿಗೆ ಗೆಜ್ಜೆ ಕಟ್ಟುವುದು ನೃತ್ಯ ವೇದಿಕೆಯಂತಹ ಪರಿಸರವನ್ನು ಸೃಷ್ಟಿಸುವುದು, ಕಣ್ಣಿಗೆ  ವೇದಿಕೆಯ ಮೇಲೆ ಇರುವಂತಹ ಬೆಳಕು ಬೀಳಿಸುವುದು ಹೀಗೆ..


ಸತ್ಯನ ತಾಯಿ ಲಕ್ಷ್ಮಿ ಅವರು ತನ್ನ ಪ್ರೀತಿಯ ಸೊಸೆ ಹುಷಾರಾಗಲು ತುಂಬು ಮನಸ್ಸಿನಿಂದ ದೇವರ ಸೇವೆಯನ್ನೆಲ್ಲಾ  ಮಾಡುತ್ತಿದ್ದರು. ತನ್ನ ಮಗನ ಸ್ಥಿತಿಗೆ ಮರುಗುತ್ತಿದ್ದರು. ಆದರೆ, ಎಂದಿಗೂ ಋಣಾತ್ಮಕ ಮಾತುಗಳನ್ನು ಆಡಿದವರಲ್ಲ. 


ಹೀಗೆ ನಿರಂತರವಾಗಿ 10 ತಿಂಗಳು ಜನನಿ ಕೋಮಾ ಸ್ಥಿತಿಯಲ್ಲಿದ್ದಳು.


ಹಿಂದೆ ಜನನಿ ಹಾಗೂ ಸತ್ಯ ಇಬ್ಬರು ಸುಂದರ್ ಲಾಲನ ನಾಯಿ ದೀನ ಪರಿಸ್ಥಿತಿಯಲ್ಲಿ ಇರುವಾಗ ಡಾಕ್ಟರ್ ಹೇಳಿದ ಮರ್ಸಿ ಕಿಲ್ಲಿಂಗ್ ಅಂದರೆ ಕರುಣಾ ಹತ್ಯೆ ಎಷ್ಟು ಸರಿ ಎಂಬ ವಾದ ಮಾಡಿದ ಮಾತುಗಳೆಲ್ಲವೂ ಸತ್ಯನಿಗೆ ನೆನಪಾಗುತ್ತದೆ. ಇಷ್ಟಕ್ಕೂ.. ನಿರಂತರ 9 ತಿಂಗಳು ಆಕೆಯನ್ನು ಮಗುವಿನಂತೆ ಜೋಪಾನ ಮಾಡುತ್ತಿದ್ದವನಿಗೆ ಇಂತಹ ಮನಸ್ಥಿತಿಯಲ್ಲಿ ಆ ಮಾತುಗಳು ನೆನಪಾದ ಪ್ರಸಂಗವಾದರೂ ಏನಿತ್ತು ಓದಿ ನೋಡಿ. 


ಬಬಲ್ ಬಾಯ್ ನಂತಹ ಮಗು ನನಗೆ ಏನಾದರೂ ಹುಟ್ಟಿದರೆ ಈ ಪ್ರಪಂಚವೇ ಒಂದಾಗಿ ನಿಂತು ವಿರೋಧವನ್ನು ತೋರಿದರೂ.. ಅವನು ಈ ರೀತಿ 50 ವರ್ಷ ಬದುಕುವುದಕ್ಕಿಂತಲೂ, ಎರಡು ದಿನಗಳು ಸಂತೋಷವಾಗಿದ್ದು ಸ್ವತಂತ್ರವಾಗಿ ಸಾಯಲಿ. ಎಂದು ಹೇಳಿದ ಜನನಿಯ ಮಾತುಗಳು 


ಬ್ಯಾತ ನಟಿ ಸಾವಿತ್ರಿಯ ಕುರಿತು ಲೇಖನ ಪ್ರಕಟವಾದಾಗ ನಡೆದ ಸಂಭಾಷಣೆಯಲ್ಲಿ ಜನನಿ 

"ವಿಚಾರ ಮಾಡಿ ನೋಡಿದರೆ ಹೀಗೆ ಪ್ರಜ್ಞೆ ಇಲ್ಲದ 'ವೆಜಿಟೇಬಲ್' ನ ಹಾಗೆ ಬಿದ್ದಿರುವುದು ಬಹಳ ಕ್ರೂರವಾದ ವಿಷಯವೆನಿಸುತ್ತದೆ. ಕೋಮಾದಲ್ಲಿ ಬಿದ್ದು 60 ವರ್ಷ ಕಾಲ ಬದುಕಿದ್ದು ತಾನು ಹಿಂಸೆಗೆ ಒಳಗಾಗಿ, ಪರರನ್ನು ಹಿಂಸೆ ಒಳಗಾಗುವಂತೆ ಮಾಡುವುದರ ಬದಲು ಕೈ ಕಾಲು ಗಟ್ಟಿಯಾಗಿದ್ದು, ಬುದ್ಧಿ ನೆಟ್ಟಗಿರುವಾಗಲೇ 40 ವರ್ಷಗಳಾದರೂ ಸಾಕು, ತಟ್ಟನೆ ಹೋಗಿಬಿಡಬೇಕು. ಅದಕ್ಕೆ ನಾನು ರೆಡಿ.," ಎಂದು ಉದ್ವಿಗ್ನಳಾಗಿ ಮಾತನಾಡಿದ್ದ ಮಾತುಗಳು 


ಇವೆಲ್ಲವೂ ಸತ್ಯವನ್ನು ಪ್ರೇರೇಪಿಸಿ.. ಜನನಿಯ ಕರಣಾ ಹತ್ಯೆಯನ್ನು ಮಾಡಲು ಪ್ರೇರೇಪಿಸಿದ ವೇ..? 


ಸತ್ಯ ಜನನಿಯನ್ನು ಕರುಣಾ ಹತ್ಯೆಗೈಯ್ಯಲು ಸಿದ್ದನಾಗಿದ್ದು ಹೌದು. ಆದರೆ, ಆತ ಬಹಳಷ್ಟು ತಳಮಳಗೊಂಡಿದ್ದ. ಅದಕ್ಕೆಂದು ಮೀಸಲಾಗಿಟ್ಟಿದ್ದ ದಿನ ಮಧುರಾಂತಕ ರಾಮನ ಪವಾಡವೋ ಅಥವಾ ವಿಧಿ ಲಿಖಿತವೋ ಎಂಬಂತೆ ಅದು ಮುಂದೂಡುತ್ತಲೇ ಹೋಗಿ.. ಮನೆ ಸೇರುವಷ್ಟರಲ್ಲಿ ಮನೆಯ ಮುಂದೆ ಬಹಳಷ್ಟು ಜನರು ಸೇರಿದ್ದರು. ತಾನಂದುಕೊಂಡ ದಿನವೇ ಜನನಿಯೇ ತನ್ನ ಮನಸ್ಸನ್ನು ಅರಿತಂತೆ ಜೀವ ಬಿಟ್ಟಳೇ ಎಂದುಕೊಳ್ಳುವಷ್ಟರಲ್ಲಿಯೇ.. ಅಲ್ಲಿ ನಡೆದಿದ್ದ ಘಟನೆ ಸತ್ಯನನ್ನು ಬಹಳವಾಗಿ ಅಲುಗಿಸಿಬಿಡುತ್ತದೆ.


ಜನನಿ ಚೇತರಿಸಿಕೊಳ್ಳುತ್ತಾಳೆ, ಅದರ ನಂತರ ಜನನಿ ಸಂಪೂರ್ಣವಾಗಿ ಗುಣಮುಖವಾಗುತ್ತಾಳೆ. ಆದರೆ, ಸತ್ಯ ದಿನೇ ದಿನೇ ನಶಿಸುತ್ತಲೇ ತನ್ನ ಕೆಲಸದ ಮೇಲಿನ ಹಾಗೂ ಜೀವನದ ಮೇಲಿನ ಆಸಕ್ತಿಯನ್ನೇ ತೊರೆದವನಂತೆ ಬೇರಾವುದೋ ರೀತಿಯಲ್ಲಿ ಎಲ್ಲದರಿಂದ ದೂರವಾಗುತ್ತಲೇ ಸಾಗುತ್ತಾನೆ.


ಇದೆಲ್ಲದಕ್ಕೂ ಪರಿಹಾರ ಏನಿತ್ತು..? ಜನನಿ ಬದುಕಿದ್ದೇ ಸತ್ಯನ ಪಾಲಿಗೆ ಮುಳುವಾಯಿತೇ ಅಥವಾ ಬೇರೇನಾದರೂ ಕಾರಣವಿತ್ತೇ..?


ಜನನಿ ಸತ್ಯನ ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಳೇ ಅಥವಾ 10 ತಿಂಗಳ ಅಂತರ ಅವರಿಬ್ಬರನ್ನು ಮತ್ತಷ್ಟು ದೂರವಾಗಿಸಿತೇ ಓದಿ ನೋಡಿ. 


ಮರು ಓದಿನಲ್ಲಿಯೂ ನನಗೆ ಬಹಳವಾಗಿ ಕಾಡಿದ ಕಾದಂಬರಿ ಇದು. ಹಲವಾರು ಮನೋವೈಜ್ಞಾನಿಕ ವಿಚಾರಗಳನ್ನು, ವೈದ್ಯಕೀಯ ಭಾಷೆಯನ್ನು ಕ್ಲಿಷ್ಟವಾಗದಂತೆ, ಜೊತೆಗೆ ಭಾವನೆಗಳಲ್ಲಿಯೂ ಕಾಡುವಂತೆ ಮಾಡಿದ ಕಾದಂಬರಿ ಇದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ