ಭಾನುವಾರ, ಏಪ್ರಿಲ್ 26, 2026

ಸುಚೇಷ್ಟೆ (ಪುಸ್ತಕ ಯಾನ- 383)


ಪುಸ್ತಕದ ಶೀರ್ಷಿಕೆ : ಸುಚೇಷ್ಟೆ

ಲೇಖಕರು : ಡಾ. ಸುಚೇತಾ ಪೈ

ಪ್ರಕಾಶಕರು : ಕಂದೀಲು ಪ್ರಕಾಶನ

ಪ್ರಥಮ ಮುದ್ರಣ : 2022

ಪುಟಗಳು : 180

ಬೆಲೆ : 120 ರೂ.


ಈ ಪುಸ್ತಕವನ್ನು ' ತಮ್ಮ ಹಾಸ್ಯಪ್ರಜ್ಞೆಯಿಂದ ಜೀವನವನ್ನು ಸಹ್ಯ ಮಾಡುವ ಎಲ್ಲಾ ತುಂಟ ಮನಸ್ಸುಗಳಿಗೆ ' ಅರ್ಪಿಸಿದ್ದಾರೆ. ತಮ್ಮನ್ನು ತಾವೇ ವಾರೆನೋಟದಿಂದ ನೋಡಿಕೊಂಡು ಹಾಸ್ಯ ಬರಹವನ್ನು ಬರೆದು, ಅನುಭವಕಥನವನ್ನೇ ಇಷ್ಟು ಆಸಕ್ತಿದಾಯಕವನ್ನಾಗಿಸಿದ್ದಾರೆ. ಇಲ್ಲಿನ ಕೆಲವು ಘಟನೆಗಳು ನಮ್ಮ ಬದುಕಿನಲ್ಲಿಯೂ ನಡೆದಿರಬಹುದಾದರೂ.. ಹೀಗೆ ಹಾಸ್ಯಲೇಖನವನ್ನಾಗಿಸುವುದು ಎಲ್ಲರಿಗೂ ಒಲಿಯುವ ಕಲೆಯಲ್ಲ. 


ಇಲ್ಲಿ ಸುಚೇಷ್ಟೆಗಳು ಗೋಳು ಎಂದಲ್ಲ. ಲೇಖಕಿ ಅವರ ಕಷ್ಟದಲ್ಲಿಯೂ.. ತಾವೂ ನಕ್ಕು, ನಮ್ಮನ್ನೂ ನಗಿಸುವಷ್ಟು ವಿಶೇಷವಾದ ವಿಚಾರಗಳಿವೆ. ಇಲ್ಲಿ ಅವರ ಜೀವನದ ಕಥನಗಳು ಇದ್ದರೂ.. ಅದು ಬಾಲ್ಯದಿಂದ ಇಂದಿನವರೆಗಿನ ಆರ್ಡರ್ ನಲ್ಲಿಲ್ಲ. ಒಂದು ರೀತಿ ಚದುರಿದ ಚಿತ್ರಗಳಂತೆ ಕಾಣುವ ಪ್ರಸಂಗಗಳು ಈ ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಒಂದು ಸುಂದರ ಫಜಲ್ ಅನ್ನು ಜೋಡಿಸಿದಂತೆ ಕಂಡಿತು.


ಆರು ಬೆರಳಿನ ಬಾಲೆ : ಬಾಲು, ಸುನೀತಾಗೆ ನಾನೇ ಹಿರಿಯ ಸಂತಾನ. ಹುಟ್ಟಿದ್ದು ಕೆಳದಿ ಚೆನ್ನಮ್ಮನ ಕೋಟೆಯ ಹೊರಗೆ, ನಗರದಲ್ಲಿ ಎಂದು ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ಬಗೆಯಲ್ಲಿಯೇ ತಂದೆ-ತಾಯಿ ಹಾಗೂ ಊರಿನ ಕುರಿತಾಗಿ ಹೇಳಿಕೊಳ್ಳುವುದನ್ನು ಗಮನಿಸಿದಾಗಲೇ ಬರಹದ ಶೈಲಿ ಆಸಕ್ತಿ ಮೂಡಿಸುತ್ತದೆ. ಹುಟ್ಟಿದಂದಿನಿಂದ ಇದ್ದ ಆರನೇ ಬೆರಳಿನ ಕುರಿತು ಹೀಗೆ ಹೇಳುತ್ತಾರೆ. "ಆರನೇ ಬೆರಳು ನನ್ನ ತರಹವೇ - ತಲೆ ಹರಟೆ". ಹೀಗೆ ಆರು ಬೆರಳಿನಿಂದ ಉಂಟಾಗುವ ದೊಡ್ಡ ಪಜೀತಿ ಎಂದರೆ.. ಅವರು ಶೂ ಹಾಗೂ ಚಪ್ಪಲಿ ಕೊಳ್ಳುವುದು. ಹಲವಾರು ಕಾರಣಗಳಿಗೆ ಊರೂರು, ಶಾಲೆಗಳನ್ನು ಸುತ್ತುತ್ತಿದ್ದಾಗ ಭಾಷಾ ಸಮಸ್ಯೆಯಂತೆಯೇ ಅವರಿಗೆ ಚಪ್ಪಲಿಯ ಸಮಸ್ಯೆಯೂ ಉಂಟಾದ ಬಗೆಯನ್ನು ಚೆಂದವಾಗಿ ಕಟ್ಟಿಕೊಡುತ್ತಾರೆ. ಶಾಲೆಯಿಂದ ಹಿಡಿದು ಕೆಲಸಕ್ಕೆ ಹೋಗುವಾಗ ನಾನಾ ಸಂದರ್ಭದ ನಾನಾ ಚಿತ್ರಣ ಇಲ್ಲಿದೆ.


ಕುತೂಹಲದ ಬೆಕ್ಕು : ಚಿಕ್ಕಂದಿನಲ್ಲಿ ತಮ್ಮ-ತಂಗಿಯ ಜೊತೆಗೆನ ಒಡನಾಟ, ಮಾಡಿದ ತರಲೆ-ತುಂಟಾಟಗಳನ್ನು ಹೇಳುತ್ತಲೇ.. ನಾನಂತೂ ಮುಂದಿನ ಜನ್ಮದಲ್ಲಿ ಬೆಕ್ಕಾಗಿ ಹುಟ್ಟಬಯಸುತ್ತೇನೆ ಎನ್ನುತ್ತಾರೆ. ಅದು ಏಕೆಂದು ನೀವೇ ಓದಿ ನೋಡಿ.


ಸಾಹಸ ಸರಮಾಲೆ : ಇವರು 5 ವರ್ಷದವರಿರುವಾಗ 4 ವರ್ಷದ ತಮ್ಮನ ಜೊತೆ. ಮನೆಯಲ್ಲಿ ಹೇಳಿಕೊಟ್ಟದ್ದು.. "ಪರಿಚಯವಿಲ್ಲದವರೊಡನೆ ಮಾತನಾಡಕೂಡದು. ಅವರು ನಿಮ್ಮನ್ನು ಕರೆದುಕೊಂಡು ಹೋಗಿ ಕೈ-ಕಾಲು ಮುರಿದು, ಕಣ್ಣು ಕುರುಡು ಮಾಡಿ ಭಿಕ್ಷಾಟನೆಗೆ ಕಳುಹಿಸುತ್ತಾರೆ." ಎಂದು. ಹುಷಾರಿನಲ್ಲಿಯೇ ಮಕ್ಕಳು ಇರಲಿ ಎಂಬ ಸಂದರ್ಭದಲ್ಲಿ ಎರಡೆರಡು ಬಾರಿ ಕಳೆದು ಹೋದ ಘಟನೆಗಳು ಸಾಹಸಗಥೆಯಾಗಿ ಚಿತ್ರಿತವಾಗಿದೆ. ಅಷ್ಟೇ ಅಲ್ಲದೆ.. ಈ ಚಿತ್ರಣ ಮುಂದೆಯೂ ಮುಂದುವರಿದ ಪ್ರಸಂಗಗಳಿವೆ. 


ಊಟದ ಡಬ್ಬಿ : ಸುಚೇತಕ್ಕನ ಈ ಸಾಹಸದ ಜೊತೆ ಊಟ ಹಾಗೂ ಊಟದ ಡಬ್ಬಿಯ ಪರಿಪಾಠಲುಗಳನ್ನು ಕಾಣಬಹುದು. ಒಂದು ದಿನ ಶಾಲೆಗೆ ಇಷ್ಟಪಟ್ಟು ಕೊಂಡು ಹೋಗಿದ್ದ ಟಿಫನ್ ಬಾಕ್ಸ್ ನಿಂದ ಇವರಿಷ್ಟದ ಹೋಳಿಗೆ ಮಾಯವಾಗಿದ್ದು ಹೇಗೆ ಎಂಬ ಸತ್ಯ ಅವರಿಗೆ ಎಷ್ಟೋ ವರ್ಷಗಳ ನಂತರ ತಿಳಿದ ಸಂದರ್ಭವೇನು..? ಓದಿ ನೋಡಿ.


ಆ ರಂಗು : ಹೆಣ್ಣು ಮಕ್ಕಳ ' ಆ ' ದಿನಗಳ ಕಲೆಯಾಗುವ ಕ್ಷಣಗಳ ಮುಜುಗರ, ರಂಗಿನ ಕುರಿತು ಹೇಳುತ್ತಲೇ ಕೆಲ ಮುಜುಗರದ ಸಂದರ್ಭಗಳನ್ನು ಹೇಳುತ್ತಾರೆ. ಜೊತೆಗೆ ಅವರ ಚಿಕ್ಕತ್ತೆಯನ್ನು ನೆನೆಸಿಕೊಂಡು ಇಂದಿಗೂ ಅವರಿಗೆ ಚಿಕ್ಕತ್ತೆ ಎಂದರೆ ನೆನಪಾಗುವುದು ಆ ವೈವಾ ಮಾತ್ರವಂತೆ. ಆ ವೈವಾ ಮಾತುಕತೆಯನ್ನು ನೀವೇ ನೋಡಿ.


ಕೇಶಪಾಶ : "ಕೂದಲಿಗೆ ಸಂಬಂಧಿಸಿದಂತೆ ಸತ್ತಕೋಶಗಳಿಗೆ ನಾವು ಮಾಡುವ ಅನಗತ್ಯ ಯೋಚನೆ, ಕಾಲಹರಣವನ್ನು ತಲೆಯೊಳಗಿನ ಕೋಶಗಳನ್ನು ಜೀವಂತವಾಗಿ ಚುರುಕಾಗಿಡಲು ಉಪಯೋಗಿಸಿಕೊಂಡರೆ ಚೆನ್ನಾಗಿರುತ್ತೆ." ಎಂಬ ಮಾತನ್ನು ಅಧ್ಯಾಯದ ಕೊನೆಯಲ್ಲಿ ಹೇಳುತ್ತಾರೆ. ಇವರ ನೀಳ ಜಡೆ ಚಾಪ್ ಆಫ್ ಆದದ್ದು ಏಕೆ ಹಾಗೂ ಅದರ ಡಿಮ್ಯಾಂಡ್ ಹೇಗಿತ್ತು..? ಕೂದಲನ್ನು ಕತ್ತರಿಸಿಕೊಂಡ ನಂತರ ಗೌರಿ ಲಂಕೇಶ್ ರ ಹತ್ಯೆಯಾದ ಸಂದರ್ಭದಲ್ಲಿ ಇವರನ್ನು ಅವರೊಂದಿಗೆ ಸಮೀಕರಿಸುತ್ತಿದ್ದಾಗ ಆದ ಅನುಭವಗಳನ್ನು ನೀವೇ ಓದಿ ನೋಡಿ.


ಕನ್ನಡದೊಡನೆ ನಾನು : ಭಾಷಾ ಸಮಸ್ಯೆಯ ಸಂದರ್ಭಗಳನ್ನು ಹೇಳುತ್ತಲೇ.. ಅವುಗಳನ್ನು ನಿವಾರಿಸಿಕೊಂಡ ಬಗೆ ಹಾಗು ಶಿಕ್ಷಕರು ಅವುಗಳಿಗೆ ಸಹಕಾರ ನೀಡಿದ ಸಹೃದಯತೆ ಜೊತೆಗೆ ಕನ್ನಡದ ಭಾಷಾಪ್ರೇಮ ಇರುವ ಸಂದರ್ಭಗಳನ್ನು ಹೇಳುತ್ತಾರೆ. ಕನ್ನಡದ ಸಿಹಿನುಡಿಯ ಸಂಭ್ರಮ ಇಲ್ಲಿ ವ್ಯಕ್ತವಾಗಿದೆ. ಇಲ್ಲಿ ಸವಿಗನ್ನಡದ ಕಂಪನ್ನು ಆಸ್ವಾದಿಸಬಹುದಾಗಿದೆ.


 ಬಸ್ ಮಹಾಭಾರತ : ಇಂದಿನ ಬಿ.ಎಂ.ಟಿ.ಸಿ ಆಗ ಬಿ.ಟಿ.ಎಸ್ ಆಗಿದ್ದ ಸಂದರ್ಭ. ಆದರೆ, ಪ್ರತಿದಿನ ಇವರು ಓಡಾಡುವಾಗ ಅದನ್ನು ' ಬಿಟ್ಟರೆ ತಿರುಗಿ ಸಿಗಲ್ಲ', 'ಬೆಂಗಳೂರು ಟಾರ್ಚರ್ ಸರ್ವಿಸ್' ಎಂದು ಕರೆಯುತ್ತಿದ್ದರು. ಕಾಲದ ಜೊತೆಗೆ ಆದ ಬದಲಾವಣೆಗಳು, ಬಸ್ ನಲ್ಲಿ ಓಡಾಡುವ ಸಂದರ್ಭದಲ್ಲಿ ಅವರು ಎದುರಿಸುತ್ತಿದ್ದ ಪ್ರಶ್ನೆಗಳು, ಸಹ ಯಾತ್ರಿಕರ ನೋಟಗಳು ಎಲ್ಲವೂ ಇಲ್ಲಿದೆ.


ಪಾಕ ಪ್ರವೀಣೆ : "ನನಗೆ ಪುಸ್ತಕದಲ್ಲಿದ್ದ ತಿನಿಸುಗಳು ಬಹಳ ಇಷ್ಟವಾಗುತ್ತಿದ್ದವೇ ಹೊರತು ತಟ್ಟೆಯ ಮೇಲಿದ್ದ ಆಹಾರ ಮಾತ್ರ ರುಚಿಸುತ್ತಿರಲಿಲ್ಲ." ಎನ್ನುತ್ತಾ ಅವರ ಆಹಾರ ಪ್ರೇಮವನ್ನು ಹೇಳುತ್ತಲೇ ಅಡುಗೆಯ ಸಾಧನೆಯನ್ನು ಹೇಳುತ್ತಾರೆ. ಕರಗುವ ಬಣ್ಣಗಳಿರುವ ತಿನಿಸುಗಳ ಇಷ್ಟ, ಅಡುಗೆ ಮಾಡಲು ಹೋಗಿ ಮಾಡಿದ ಸಾಹಸಗಳು, ಆ ಸಾಹಸಕ್ಕೆ ಆಹಾರವಾದವರು, ಪೇಚಾಟ ಹೀಗೆ ಎಲ್ಲವೂ ನಗೆ ಉಕ್ಕಿಸುತ್ತವೆ. ಆದರೆ, ಅಡುಗೆಯಲ್ಲೂ ಕ್ರಮೇಣ ಹದ ಸಾಧಿಸಿದ ಬಗೆಯನ್ನೂ ಹೇಳುತ್ತಾರೆ.


ಅವಳಿಯಲ್ಲದ ಜವಳಿ : ಸುಚೇತಾ ಪೈ ಜವಳಿ ಎನ್ನುವ ಹೆಸರಿನ ಲೇಖಕಿಗೆ ಅವರ ಜೊತೆಗೆ ಅವರಂತೆಯೇ ಇದ್ದ ಸ್ನೇಹಿತೆ ಸಿಕ್ಕಿದ್ದು ಹಾಗೂ ಹತ್ತಿರವಾದದ್ದನ್ನು ಹೇಳುತ್ತಲೇ ಆ ಗೆಳತಿ ಸುಧಾ ಹಾಗೂ ಇವರ ಚಹರೆಗಳ ಹೋಲಿಕೆ, ನಡೆನುಡಿಗಳನ್ನು ಪರಿಚಯಿಸುತ್ತಾರೆ. ಎಷ್ಟೋ ಬಾರಿ ಇವರನ್ನು ಅವರೆಂದು, ಅವರನ್ನು ಇವರೆಂದು ಗುರುತಿಸಿ ಅವರ ಬೈಗುಳವನ್ನು ಇವರಿಗೂ.. ಹೊಗಳಿಕೆಯನ್ನು ಅವರಿಗೂ ಕೊಟ್ಟ ಸಂದರ್ಭದಲ್ಲಿ ಏನೇನಾಗುತ್ತಿದ್ದವು ಓದಿ ನೋಡಿ.


ವೈದ್ಯೆಯಾಗಬೇಕಿದ್ದವಳು... ಡಾಕ್ಟರ್: ಡಾ. ಸುಚೇತಾ ಪೈ ಎಂದು ಶೀರ್ಷಿಕೆಯಲ್ಲಿ ಕಂಡ ಹೆಸರನ್ನು ಗಮನಿಸಿದವರು, ಎರಡು ಡಾಕ್ಟರ್ ಗಳ ನಡುವಿನ ಹೋಲಿಕೆ ಗೊತ್ತಿದ್ದರೆ ಮಾತ್ರ ಇದನ್ನು ಕಂಡುಹಿಡಿಯಬಹುದು. ಇಲ್ಲದಿದ್ದರೆ ಕಷ್ಟವೇ.. ಆಯುರ್ವೇದ ಕೋರ್ಸಿಗೆ ಸೇರಿ ಡಾಕ್ಟರ್ ಆಗಬೇಕಿದ್ದವರು ನಂತರ ಡಾಕ್ಟರೇಟ್ ಪಡೆದು ಮತ್ತೊಂದು ಸಾಹಸಗಾಥೆಗೆ ಮುನ್ನುಡಿ ಹಾಡಿದ್ದು ಹೇಗೆ ಓದಿ ನೋಡಿ.


ಅನಾರೋಗ್ಯ ಭಾಗ್ಯ : ಅನಾರೋಗ್ಯದಲ್ಲೂ ತಮ್ಮನ್ನು ತಾವು ಜೀವಂತಿಕೆಯಿಂದ ಇಟ್ಟುಕೊಂಡ ಬಗೆಗಳು, ದೇಹಕ್ಕೆ ಆದ ಅಪಘಾತಗಳನ್ನು ಸಹ ಸಂಕಟಗಳೆಂದು ಭಾವಿಸದೆ, ಅದನ್ನು ಲವಲವಿಕೆಯಿಂದಲೇ ಕಟ್ಟಿಕೊಟ್ಟಿರುವ ಬಗೆಯಂತೂ ನಿಜಕ್ಕೂ ಅಚ್ಚರಿಗೊಳಿಸಿತು. ' ಪ್ಯಾಸೆಂಜರ್ ಪ್ರಪೋಸಸ್, ಡ್ರೈವರ್ ಡಿಸ್ಪೋಸಸ್' ಎನ್ನುವ ಘಟನೆಯಂತೂ ಅವರ ಕಷ್ಟದ ಜೀವನವನ್ನೂ ಜೀವಂತಿಕೆಯಿಂದ ತೆಗೆದುಕೊಳ್ಳುವ ದಿನಗಳನ್ನು, ಸಮಯವನ್ನು ಸದುಪಯೋಗಪಡಿಸಿಕೊಂಡ ಬಗೆಯನ್ನು ಕೇಳುವಾಗ ಅಚ್ಚರಿ ಹುಟ್ಟಿಸುತ್ತದೆ. ಆದರೆ, ಹೇಳುವ ಭಾಷೆಯಂತೂ ಶುದ್ಧ ಲವಲವಿಕೆಯ ಹಾಸ್ಯ. 


ಓ ಮೈ ಗಾಡ್ (ಕ್ರಾನ್) : ಅನಾರೋಗ್ಯವೇ ಭಾಗ್ಯ ಓದಿ ಇದನ್ನು ಓದಿದಾಗ ಎಷ್ಟು ವೈವಿಧ್ಯಮಯವಾಗಿ ಕೊರೊನಾ ದಿನಗಳನ್ನು ಕಟ್ಟಿಕೊಟ್ಟಿದ್ದಾರೆ ಎನ್ನಿಸಿತು. ಕೇವಲ ಅವರ ಅನುಭವವನ್ನು ಮಾತ್ರ ಹೇಳದೆ, ಬೇರೆಯವರ ಕಣ್ಣಲ್ಲಿಯೂ ಒಮಿಕ್ರಾನ್, ಡೆಲ್ಟಾ, ಕರೋನ ಹೀಗೆ ಎಲ್ಲವೂ ವ್ಯಕ್ತವಾದ ಬಗೆ ಇಷ್ಟವಾಯಿತು. 


ಪುಟ್ಟ ಪುಟ್ಟ ಫನ್ ಗಳಂತೆ ಹಾಗೂ ಹಲವಾರು ಶೀರ್ಷಿಕೆಗಳು, ಪಂಚ್ ಲೈನ್ ಗಳು ಬಹಳ ಇಷ್ಟವಾದವು. ಬಾಲ್ಯದ ನೆನಪುಗಳು, ಹೆಣ್ಣು ಮಕ್ಕಳು ಎದುರಿಸುವ ಪ್ರಶ್ನೆಗಳು, ವಿಭಿನ್ನತೆಯತ್ತ ಹೆಜ್ಜೆ ಹಾಕಿದಾಗ ಎದುರಾಗುವ ಸಂಕಷ್ಟಗಳು, ಅನಾರೋಗ್ಯ ಹಾಗೂ ಕಷ್ಟದ ದಿನಗಳನ್ನು ಮೆಟ್ಟಿನಿಂತ ಬಗೆ ಹೀಗೆ ಎಲ್ಲವೂ ಸುಚೇತಕ್ಕನ ಸುಚೇಷ್ಟೆಯಿಂದ ಓದಿಸಿಕೊಂಡು ಹೋಗುತ್ತದೆ.  ಅಷ್ಟಕ್ಕೂ ನಾನಿಲ್ಲಿ ಸುಚೇತಕ್ಕ ಎಂದದ್ದು, ಲೇಖಕಿ ಅವರನ್ನವರು ಕರೆದುಕೊಳ್ಳುವ ಹೆಸರಿನಿಂದಲೇ.. ಅವರನ್ನು ಅವರೇ ಸುಚೇತಕ್ಕ ಎಂದು ಕರೆದುಕೊಳ್ಳಲು ಕಾರಣವೇನು..? ಎಲ್ಲವನ್ನು ತಿಳಿಯಲು ಈ ಪುಸ್ತಕ ಓದಿ ನೋಡಿ. ತಾಜಾ ಹಾಸ್ಯ ಹಾಗೂ ಲವಲವಿಕೆಯ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ