ಭಾನುವಾರ, ಏಪ್ರಿಲ್ 26, 2026

ಅಸೀಮ ಕಿರಣ (ಪುಸ್ತಕ ಯಾನ - 353)


ಪುಸ್ತಕದ ಶೀರ್ಷಿಕೆ : ಅಸೀಮ ಕಿರಣ

ಲೇಖಕರು : ವಿಜಯಶ್ರೀ

ಪ್ರಕಾಶಕರು : ರಾಜಲಕ್ಷ್ಮಿ ಪ್ರಕಾಶನ

ಪ್ರಥಮ ಮುದ್ರಣ : ಏಪ್ರಿಲ್ 1996

ಪುಟಗಳು : 234


ಲೇಖಕಿಯೇ ಲೇಖಕಿಯ ನುಡಿಯಲ್ಲಿ ಉಲ್ಲೇಖಿಸಿರುವ ವಿಷಯ ಇದು. ಈ ಕಾದಂಬರಿಯ ಕಥಾವಸ್ತು ಅವರಿಗೆ ಹೊಳೆದದ್ದು ಕನಸಿನಲ್ಲಿಯೇ.. ಅದನ್ನು ಅಕ್ಷರ ರೂಪಕ್ಕಿಳಿಸಿ ಚೆಂದವಾಗಿ ಕಟ್ಟಿಕೊಟ್ಟಿರುವ ಕಾದಂಬರಿ ಇದು. ಅವರಿಗೆ ಎಷ್ಟೋ ಬಾರಿ ಕನಸೇ ಕಾದಂಬರಿಗಳಿಗೆ ಕಥಾವಸ್ತುವನ್ನು ಒದಗಿಸಿಕೊಟ್ಟಿದೆಯಂತೆ. ವಾಸ್ತವಕ್ಕೆ ಹತ್ತಿರವಿರುವ ಕನಸುಗಳು ಲೇಖಕಿಯ ಮನಸ್ಸಿನ ಆಲೋಚನೆಗಳೇ ಎನ್ನಿಸಿತು. 


ಅಸೀಮ ಎಂದರೆ ಅಪಾರ, ಎಲ್ಲೆಯಿಲ್ಲದ, ಅನಿರ್ದಿಷ್ಟವಾಗಿ ವಿಸ್ತರಿಸುವ, ಅಮಿತ, ಮೇರೆ ಮೀರಿದ ಎಂಬ ಅರ್ಥಗಳಿವೆ. ಇಲ್ಲಿ ತನ್ನ ಒಳ್ಳೆಯತನದಿಂದ ಅಮಿತ ಪ್ರೀತಿ, ಕಾಳಜಿ ತೋರಿದ ಹುಡುಗಿ ಬಕುಳಾ ಕಾಣುತ್ತಾಳೆ. ಆದರೆ, ಈ ಪ್ರೀತಿ, ಕಾಳಜಿಗೆ ಸಿಕ್ಕ ಬೆಲೆ ಏನು.. ಆ ಮನೆಗೆ ಅಸೀಮ ಕಿರಣವಾದವಳ ಬದುಕು ಕೂಡಾ ಅಷ್ಟೇ ಬೆಳಕಾಗಿತ್ತೇ ಅಥವಾ ಆಕೆ ಕತ್ತಲಲ್ಲಿದ್ದು ಎಲ್ಲರಿಗೂ ಪ್ರಕಾಶ ಬೀರಿದಳೇ ಎಂಬುದರ ಕುರಿತ ಕಥಾನಕ ಇದು. 


ಮನೆಯಲ್ಲಿನ ಬಡತನ ಬಕುಳಾ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಹಿಂದೆ ಬಿದ್ದಿರಲಿಲ್ಲ. ಬೇಜವಾಬ್ದಾರಿ ಹಾಗೂ ಕೋಪಿಷ್ಠ ತಂದೆಗಿಂತ ಕಷ್ಟ ಪಡುವ ಅಮ್ಮನಿಗೆ ಸಹಾಯ ಮಾಡಲು ನೋಡುತ್ತಿದ್ದವಳಿಗೆ ತಂಗಿ - ತಮ್ಮಂದಿರ ಜವಾಬ್ದಾರಿಯಿತ್ತು. ಹಾಗೆಂದು ಶ್ರೀಮಂತ ಬದುಕಿಗೆ ಆಸೆ ಪಟ್ಟವಳಲ್ಲ. ಮನೆಪಾಠ ಹೇಳುತ್ತಿದ್ದ ಕೆಲವು ಮನೆಗಳಲ್ಲಿ ತೋರುತ್ತಿದ್ದ ನಡವಳಿಕೆ ಆಕೆಗೆ ಶ್ರೀಮಂತರ ಕುರಿತು ಅಂತಹ ಒಳ್ಳೆಯ ಭಾವನೆಯನ್ನೇನೂ ಬೆಳೆಯಗೊಟ್ಟಿರಲಿಲ್ಲ. ಈಗ ತಮ್ಮ ನೆರೆಯವರಾದ ಈಶ್ವರಪ್ಪ ಹಾಗೂ ಸಾವಿತ್ರಮ್ಮ ದಂಪತಿಗಳ ಕಡೆಯಿಂದ ಶ್ರೀಮಂತರ ಮನೆಯಲ್ಲಿನ ಕೆಲಸದ ಪ್ರಸ್ತಾಪ ಬಂದಿತ್ತು. ಆಕೆಯ ಒಳ್ಳೆಯತನವನ್ನು ಕಂಡು ಅವರು ಈ ಕೆಲಸಕ್ಕೆ ಇವಳೇ ಸೂಕ್ತವೆಂದುಕೊಂಡಿದ್ದರು. ಮದುವೆಯ ವಯಸ್ಸಿಗೆ ಬಂದ ಹುಡುಗಿಯನ್ನು ಹಾಗೆ ಬೇರೆಯವರ ಮನೆಗೆ ಕೆಲಸಕ್ಕೆ ಕಳುಹಿಸುವ ಮನಸ್ಸಿಲ್ಲದಿದ್ದರೂ.. ನಿರಾಕರಿಸುವಂತೆಯೂ ಇರಲಿಲ್ಲ ತಾಯಿಗೆ. ಬಕುಳಾಳಿಗೂ ಇನ್ನೂ ಯಾವುದೇ ಕೆಲಸ ಸಿಗದಿದ್ದ ಕಾರಣ ನೋಡೋಣವೆಂದು ಅಲ್ಲಿಗೆ ಹೊರಟಳು.


ಆದರೆ, ಇಷ್ಟೂ ದಿನದ ಶ್ರೀಮಂತ ಮನೆಯವರ ನಡೆಗಿಂತ ವಿಭಿನ್ನವಾದ ಮನೆಯೊಂದು ಸಿಕ್ಕಿತ್ತು ಅವಳ ಪಾಲಿಗೆ.  ಆ ಮನೆಯಲ್ಲಿ ಈಶ್ವರಪ್ಪನವರು ಮೊದಲು ಪೌರೋಹಿತ್ಯ ಮಾಡುತ್ತಿದ್ದರು. ಬಕುಳಾ ಹೋಗುತ್ತಿದ್ದದ್ದು ಆ ಮನೆಯ ಮೇಲ್ವಿಚಾರಣೆಗೆಂದು. ಮನೆಯಲ್ಲಿ ಕೆಲಸಕ್ಕೆ ಬೇಕಾದ ಆಳುಗಳಿದ್ದರು. 


ಮನೆಯ ಯಜಮಾನಿ ಸ್ವರೂಪಾದೇವಿ. ಅವರ ಅನಾರೋಗ್ಯದ ಕಾರಣದಿಂದ ಹೆಚ್ಚಾದ ಜವಾಬ್ದಾರಿಗಳನ್ನು ನಿಭಾಯಿಸಲು ಈಕೆಯನ್ನು ನೇಮಿಸಿಕೊಳ್ಳಲಾಗಿತ್ತು. ಆಕೆಯ ಅಂತಃಕರಣ ಬಕುಳಾಳಿಗೆ ಹಿಡಿಸಿದರೆ, ಈಕೆಯ ನಯ - ವಿನಯ ಅವರಿಗೆ ಹಿಡಿಸಿತ್ತು. ಅವರ ಪತಿ ಪ್ರತಾಪ್. ಉದ್ಯಮಿಗಳಾಗಿದ್ದ ಅವರು ಗಂಭೀರ ಸ್ವಭಾವದವರು. ಕೆಲವು ಕೆಲಸಗಳಂತೂ ಅವರು ನಿರೀಕ್ಷಿಸಿದಷ್ಟೇ ಅಚ್ಚುಕಟ್ಟಿನಿಂದ ಸಾಗಬೇಕಿತ್ತು. ಆ ದಂಪತಿಗಳಿಗೆ ಮೂವರು ಮಕ್ಕಳು. ಮಗಳಿಗೆ ಈಗಾಗಲೇ ವಿವಾಹವಾಗಿ ವಿದೇಶದಲ್ಲಿದ್ದಳು. ಹಿರಿಯ ಮಗ ಆದಿತ್ಯನಿಗೆ ವಿವಾಹವಾಗಿ ಪತ್ನಿ ತೀರಿಕೊಂಡಿದ್ದಳು. ಅವರಿಬ್ಬರ ದಾಂಪತ್ಯದ ಫಲವೇ ಮಕ್ಕಳು ಮಯೂರ್ ಹಾಗೂ ಮಿಲನ. ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಬೇಕಾದದ್ದೇ ಬಕುಳಾಳ ಮುಖ್ಯ ಕೆಲಸ. ರವಿಚಂದ್ರ ಆದಿತ್ಯನ ತಮ್ಮ. ಇನ್ನೂ ಎಂಜಿನಿಯರಿಂಗ್ ಓದುತ್ತಿದ್ದ. ಆತ ಹಾಸ್ಟೆಲ್ ನಲ್ಲಿ ಇದ್ದುದರಿಂದ ರಜೆಗೆ ಮಾತ್ರ ಮನೆಗೆ ಬರುತ್ತಿದ್ದ.


ಮಕ್ಕಳ ಮನಸ್ಸನ್ನು ಪ್ರೀತಿಯಿಂದ ತಿದ್ದುತ್ತಾ, ಅವರ ಊಟ - ತಿಂಡಿ ಓದಿನ ಕಡೆ ಗಮನ ಹರಿಸುತ್ತಾ ಅವರ ಮನಗೆಲ್ಲುತ್ತಾಳೆ. ದೊಡ್ಡವರ ಮನ ಗೆದ್ದರೂ.. ಮಕ್ಕಳ ಮನಸ್ಸು ಗೆಲ್ಲುವುದೇ ಕಷ್ಟ. ಇದರಿಂದ ಅವರ ತಂದೆ ಆದಿತ್ಯನಿಗೂ ಸಮಾಧಾನವಾಗುತ್ತದೆ. ಸೂಕ್ಷ್ಮವಾಗಿ ಗಮನಿಸುತ್ತಾ ಹೋದವನಿಗೆ ಅವಳ ಪ್ರತಿ ಚರ್ಯೆಯೂ ಗತಿಸಿದ ಪತ್ನಿ ಅಮೂಲ್ಯಳ ನೆನಪು ತರುತ್ತದೆ. ಆತನ ಅನ್ಯಮನಸ್ಕತೆಗೆ ಸ್ನೇಹದಿಂದ ಸಮಾಧಾನಿಸುತ್ತಿರುತ್ತಾಳೆ ಬಕುಳಾ. 


ಅಮೂಲ್ಯ ತೋಟದಲ್ಲಿ ಬೆಳೆಸಿದ ಹೂಗಳನ್ನು, ಗಿಡಗಳನ್ನು ಆರೈಕೆ ಮಾಡುವ ಪರಿ, ಮಕ್ಕಳನ್ನು ಮಮತೆಯಿಂದ ನೋಡಿಕೊಳ್ಳುತ್ತಿದ್ದದ್ದು, ಕಾಲಿಲ್ಲದ ಸ್ವರೂಪದೇವಿಯನ್ನು ಆರೈಕೆ ಮಾಡುವ ಪರಿ, ಪ್ರತಾಪ್ ಅವರ ಶಿಸ್ತನ್ನು ಪಾಲಿಸುವಂತಹ ಕಾರ್ಯಗಳು, ಉಳಿದವರೊಡನೆ ನಯ - ವಿನಯದಿಂದ ನಡೆದುಕೊಳ್ಳುತ್ತಿದ್ದ ರೀತಿ, ತರಾವರಿಯ ಅಡುಗೆಗಳು ಹೀಗೆ ಪ್ರತಿಯೊಂದರಲ್ಲೂ ಶಿಸ್ತು ಮತ್ತು ಅಚ್ಚುಕಟ್ಟುತನದಿಂದ ಮನಗೆದ್ದಿದ್ದವಳ ನೆಮ್ಮದಿ ಕದಡಿದ್ದು ರವಿಚಂದ್ರ ಹಾಗೂ ಮಾಯಾಳ ಆಗಮನದಿಂದ ಎಂದರೂ ತಪ್ಪಾಗಲಾರದು. 


ಮಾಯಾ ಸ್ವರೂಪದೇವಿಯವರ ಅಣ್ಣನ ಮಗಳು. ಆದಿತ್ಯನಿಗೆ ಈಗ ಆಕೆಯನ್ನು ವಿವಾಹ ಮಾಡಬಹುದು ಎನ್ನುವ ದೂರಾಲೋಚನೆಯೊಂದಿಗೆ ಸ್ವರೂಪದೇವಿಯವರು ಆಕೆಯನ್ನು ಕರೆಸಿಕೊಂಡಿರುತ್ತಾರೆ. ಮೊದಲು ಆಕೆ ಆದಿತ್ಯನನ್ನು ಇಷ್ಟಪಟ್ಟಿದ್ದರೂ.. ಆದಿತ್ಯ ಅಮೂಲ್ಯಳನ್ನು ಇಷ್ಟಪಟ್ಟಿರುತ್ತಾನೆ. ಆದಿತ್ಯ ಹಾಗೂ ಸ್ವಾಭಿಮಾನಿ ಅಮೂಲ್ಯರ ಪ್ರೇಮಗಾಥೆಯನ್ನು ನೀವೇ ಓದಿ ನೋಡಿ. ಆಕೆ ಮನೆಯವರೆಲ್ಲರ ಮನಗೆದ್ದ ಪರಿಯೇ ಚೆನ್ನ. ಅದನ್ನು ಓದಿ ತಿಳಿಯಿರಿ.

ಮಾಯಾಳಿಗೆ ಎರಡನೇ ಮದುವೆಯಾಗಲು ಇಷ್ಟವಿಲ್ಲದಿದ್ದರೂ ಆಕೆ ಅಲ್ಲಿಗೆ ಬಂದಿದ್ದಕ್ಕೆ ಕಾರಣವೇನಿತ್ತು..?


ಮಿತಭಾಷಿ ಹಾಗೂ ನಿರ್ಲಿಪ್ತನಂತಿದ್ದ ಆದಿತ್ಯ ಆಕೆಯನ್ನು ಉಪೇಕ್ಷಿಸಿದ್ದನು. ಆದರೆ, ಸ್ವರೂಪದೇವಿಯವರಿಗೆ ದೂರದ ಆಸೆ ಇದ್ದೇ ಇತ್ತು. ರವಿಚಂದ್ರನ ಜೊತೆಗೆ ಆಕೆಯ ಸ್ನೇಹ, ಸಲುಗೆ ಹೆಚ್ಚಿತ್ತು. ಆದರೆ, ಆತ ಆಕೆಗಿಂತ ಚಿಕ್ಕವನಾಗಿದ್ದರಿಂದ ಆತನ ಜೊತೆ ವಿವಾಹ ಸಾಧ್ಯವಿರಲಿಲ್ಲ. ಮಕ್ಕಳ ಜೊತೆಗೂ ಬೆರೆಯುವ ಪ್ರಯತ್ನವನ್ನು ಮಾಯಾ ಮಾಡಲಿಲ್ಲ. 


ರವಿಚಂದ್ರ ಆದಿತ್ಯನಂತಲ್ಲ. ಆತನ ರೂಪವೇ ಆದರೂ ವ್ಯತಿರಿಕ್ತವಾದ ನಡತೆ. ಆತನ ಶ್ರೀಮಂತಿಕೆಯ ದರ್ಪ, ಉದ್ಧಟತನ, ಅಹಂಕಾರಗಳು ಆತನನ್ನು ಮನೆಯ ಇತರರಿಗಿಂತ ವಿಭಿನ್ನವಾಗಿತ್ತು. ಅಮೂಲ್ಯ ಇದ್ದಾಗ ಆತ ಕೊಂಚ ಬದಲಾಗಿದ್ದನಾದರೂ.. ಈಗ ಆತ ಮೊದಲಿನಂತಿರಲಿಲ್ಲ.


ಮಾಯಾ ಹಾಗೂ ರವಿಚಂದ್ರ ಇಬ್ಬರಿಗೂ ಬಕುಳಾಳಿಗೆ ಮನೆಯಲ್ಲಿ ಸಿಗುತ್ತಿದ್ದ ಮರ್ಯಾದೆ ಹಾಗೂ ಗೌರವವನ್ನು ಸಹಿಸಲು ಕಷ್ಟವಾಗಿತ್ತು. ಉಳಿದವರು ಆಕೆಯನ್ನು ಮನೆಯವರಂತೆ ಆದರಿಸಿದರೂ.. ಇವರಿಬ್ಬರೂ ಆಕೆಯನ್ನು ಕೆಲಸದಂತೆ ನಡೆಸಿಕೊಂಡರು. ಇದು ಬಕುಳಾ ಮನಸ್ಸಿಗೆ ಘಾಸಿ ಮಾಡಿತು ಹಾಗೂ ಆಕೆಯ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಿತು. ಸ್ವರೂಪಾದೇವಿ ಹಾಗೂ ಆದಿತ್ಯರ ಸಾಂತ್ವನ ಆಕೆಯನ್ನು ಅದೇ ಮನೆಯಲ್ಲಿ ಉಳಿಯುವಂತೆ ಮಾಡಿತು. ಆಕೆ ರಜೆ ತೆಗೆದುಕೊಂಡು ಆಕೆಯ ಮನೆಯ ಹೋದಾಗ ಮಕ್ಕಳು ಹುಡುಕಿಕೊಂಡು ಅಲ್ಲಿಗೆ ಹೋದ ಪ್ರಸಂಗ ಆಕೆಯ ಕುರಿತು ಮಕ್ಕಳು ಇಟ್ಟಿರುವ ಪ್ರೀತಿ, ಗೌರವವನ್ನು ತೋರುತ್ತದೆ.


ಮುಂದೆ ಮಾಯಳ ತಂದೆ ಮತ್ತು ಮಾಯಾ ಆಕೆ ಹಾಗೂ ಆದಿತ್ಯನ ನಡೆಯ ಕುರಿತ ಅನುಮಾನದ ಬೀಜವನ್ನು ಸ್ವರೂಪಾದೇವಿಯವರ ಮನಸ್ಸಿನಲ್ಲಿ ಬಿತ್ತಲು ಪ್ರಯತ್ನಿಸಿದ ಫಲವೇನು..?


ರವಿಚಂದ್ರ ತನ್ನ ಗೆಳೆಯರೊಡನೆ ಬಂದಾಗ ಆದ ಪ್ರಸಂಗವೊಂದು ಬಕುಳಾ ಮನೆ ಬಿಟ್ಟು ಹೋಗುವಂತೆ ಮಾಡಿದ್ದರ ಫಲ ಸ್ವರೂಪಾದೇವಿಯ ಮೇಲಾಯಿತು. ಆ ಪ್ರಸಂಗವೇನು..? ಅದರ ಪರಿಣಾಮವೇನು..?


ಮನೆ ಮಗಳಂತಿದ್ದ ಬಕುಳಾ ಮನೆಸೊಸೆಯಾಗಿ ಬರುವ ಪ್ರಸ್ತಾಪ ಬಂದದ್ದು ಯಾರಿಂದ..? ಇದಕ್ಕೆ ಬಕುಳಾ ಪ್ರತಿಕ್ರಿಯೆ ಏನು.?


ಅಸೀಮ ಕಿರಣವಾದ ಬಕುಳಾಳ ಕತೆಯನ್ನು ನೀವೇ ಓದಿ ನೋಡಿ .


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ