ಭಾನುವಾರ, ಏಪ್ರಿಲ್ 26, 2026

ವಲಯ ಕಲಹ (ಪುಸ್ತಕ ಯಾನ - 379)


ಪುಸ್ತಕದ ಶೀರ್ಷಿಕೆ : ವಲಯ ಕಲಹ

ಲೇಖಕರು : ಡಾ. ಕೆ. ಎನ್. ಗಣೇಶಯ್ಯ

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2025

ಪುಟಗಳು : 96

ಬೆಲೆ : 130 ರೂ.


ಈ ಕಥಾಸಂಕಲನದಲ್ಲಿ ಎರಡು ನೀಳ್ಗತೆಗಳಿವೆ. ವಲಯ ಕಲಹ ಮತ್ತೊಂದು ಪರಾಂಗನಾ ಪುತ್ರ. ಎಂದಿನಂತೆ ವಿಜ್ಞಾನ, ಚರಿತ್ರೆಗಳ ಜೊತೆಗೆ ಕಲ್ಪನೆಯನ್ನು ಬೆರೆಸಿ, ಅಲ್ಲಲ್ಲಿ ಮಾಹಿತಿಯ ಸೋರ್ಸ್ ಗಳನ್ನು ನೀಡುತ್ತಾ ಅವುಗಳು ಹೀಗಿರಬಹುದಾ ಎಂಬ ವಿಭಿನ್ನ ಆಲೋಚನೆ ಹುಟ್ಟಿಸುವ ಕಥೆಗಳು.


ವಲಯ ಕಲಹ :

ಧರ್ಮ, ವಿಜ್ಞಾನ ಮತ್ತು ಕಲೆಯ ನಡುವಿನ ಗೋಡೆಯನ್ನು ಮಿಳಿತಗೊಳಿಸುವ ಹಾಗೂ ಅವು ಗೋಡೆಗಳಲ್ಲ ಬದಲಾಗಿ ಅವೆಲ್ಲವೂ ಒಂದೇ ವಲಯಗಳ ವಿಭಿನ್ನತೆಗಳು ಎಂದು ಅರ್ಥೈಸುತ್ತಾರೆ.


ಭಾರತವು ಚಂದ್ರನ ವಲಯದಲ್ಲಿ ಒಂದು ಸ್ವಯಂ ನಿಗ್ರಹದ ಯಂತ್ರವನ್ನು ಇಳಿಸಿದಾಗ ಸಾಧನೆಯ ವಿಜಯೋತ್ಸವವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಬೇಕಿದ್ದ ಸಂದರ್ಭದಲ್ಲಿ.. ಕೆಲವು ಚಿಂತಕರು ಹುಟ್ಟಿ ಹಾಕಿದ ವಿವಾದ ಇಂತಿದೆ. ನಮ್ಮ ಇಸ್ರೋ ವಿಜ್ಞಾನಿಗಳೇಕೆ ತಿರುಪತಿಯಲ್ಲಿ ಪೂಜೆ ಮಾಡಿಸಿದರು..? ಅವರ ಅಧ್ಯಕ್ಷರೇಕೆ ದೇವಾಲಯದಲ್ಲಿ ಅರ್ಚನೆ ಮಾಡಿಸಿದರು..? ಎಂಬ ಕ್ಷುಲ್ಲಕ ವಾದಗಳನ್ನು ಬೆಳೆಸಿ ಅವರ ಶ್ರದ್ಧೆ, ನಂಬಿಕೆಗಳನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಮೂಡಿದ ಆಲೋಚನೆಗಳು ಈ ಕಥೆಯಾಗಿ ಬೆಳೆದು ಬಂದಿದೆ ಎನ್ನುತ್ತಾರೆ ಲೇಖಕರು. 


ಕ್ರಿ.ಶ 2030 ರಲ್ಲಿ ಡಾ. ಚಂದನಾ ಪೂನಾದ ಒಂದು ದೇವಾಲಯದಲ್ಲಿ ಪೂಜೆ ಮುಗಿಸಿಕೊಂಡು ಬಂದಾಗ ಅವಳಿಗಾಗಿ ಕಾದಿದ್ದ ಸುದ್ದಿ ಆಕೆಗೆ ಸಿಟ್ಟು ಹಾಗೂ ಅಸಹಾಯಕತೆಯನ್ನು ತರಿಸಿತ್ತು. ಈ ಪ್ರಸಂಗ ಅವಳ ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲದೆ ಅವಳ ವೃತ್ತಿ ಬದುಕಿನಲ್ಲಿಯೂ ಪ್ರತಿಫಲಿಸಿತ್ತು. 


ದೇಶದ ಅಂತರಿಕ್ಷ ಯೋಜನೆಗಳಲ್ಲಿ ಪ್ರಮುಖವಾದ ಹೆಜ್ಜೆ ಇಡುತ್ತಿದ್ದ ಇಸ್ರೋದಲ್ಲಿ ರಹಸ್ಯವಾಗಿ ನಡೆಯಬೇಕಿದ್ದ ಕಾರ್ಯಯೋಜನೆಯಲ್ಲಿ 49 ಮಂದಿಯಲ್ಲಿ ಆಯ್ಕೆಯಾಗಿ ಸದ್ಯ ಕೊನೆಯ ಸುತ್ತಿನ ಐವರಲ್ಲಿ ಈಕೆಯೂ ಒಬ್ಬಳಾಗಿದ್ದಳು. ಅದರಲ್ಲಿ ನಾಲ್ವರು ಮಾತ್ರ ಆಯ್ಕೆಯಾಗಲಿದ್ದರು. ಈಕೆ ಒಬ್ಬಳೇ ಹುಡುಗಿಯಾಗಿದ್ದಳು ಹಾಗೂ ಒಬ್ಬ ಹೆಣ್ಣುಮಕ್ಕಳನ್ನು ಕಳುಹಿಸಿ ಪ್ರಪಂಚಕ್ಕೆ ನಮ್ಮ ಹೆಣ್ಣುಮಕ್ಕಳ ದಿಟ್ಟತನ ಮತ್ತು ಮೇಧಾವಿತನವನ್ನು ತೋರಿಸಿಕೊಡಲು ಪ್ರಯತ್ನಿಸುತ್ತಿದ್ದ ಇಸ್ರೋದಲ್ಲಿ ಚಂದನಾ ಆಯ್ಕೆಯಾಗುವ ಸಾಧ್ಯತೆ ಬಹಳವಿತ್ತು. ಆದರೆ, ಆಕೆ ಮಾಡಿದ ಒಂದು ತಪ್ಪು ಆಕೆಯ ವೃತ್ತಿ ಬದುಕಿನ ಮೇಲೆ ಹೇಗೆ ಪರಿಣಾಮ ಬೀರಿತು..? 


ವಿಜ್ಞಾನ ಹಾಗೂ ನಂಬಿಕೆಗಳ ನಡುವಿನ ನಮ್ಮ ಪ್ರಶ್ನೆಗಳು, ವಿಜ್ಞಾನಿಗಳು ಹಾಗೂ ಅದನ್ನು ಪ್ರಶ್ನಿಸುವವರ ದೃಷ್ಟಿಕೋನ ಎರಡರಲ್ಲೂ ಚಿತ್ರಿತವಾಗಿರುವ ಕಥೆ ಇದು. 

ವಿಜ್ಞಾನಿಗಳು ದೇವರಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದ ಮಾತ್ರಕ್ಕೆ ಹುಟ್ಟುವ ಪ್ರಶ್ನೆಗಳು ಹಾಗೂ ವಿಜ್ಞಾನ ಹಾಗೂ ಧರ್ಮದ ಆವರಣಗಳು ಹೇಗಿದೆ ಹಾಗೂ ಅವುಗಳ ಪರ-ವಿರೋಧಗಳ ಚರ್ಚೆ ಇಲ್ಲಿದೆ. ಇದರಲ್ಲಿ ಗೆದ್ದದ್ದು ಯಾರು, ಯಾವುದು, ಹೇಗೆ..? ಓದಿ ನೋಡಿ.


ಇದಿಷ್ಟೇ ಅಲ್ಲದೆ ಈ ಕಥೆಯಲ್ಲಿ ಊಹಿಸಲಾಗದ ಈ ತಿರುವು ಕತೆಯನ್ನು ಮತ್ತಷ್ಟು ಕುತೂಹಲಗೊಳಿಸುತ್ತದೆ. ಓದಿ ನೋಡಿ.


ಪರಾಂಗನಾ ಪುತ್ರ : 

ರಾಷ್ಟ್ರಕೂಟರ ಚರಿತ್ರೆಯ ಸುತ್ತವೇ ಈ ಕಥೆಯನ್ನು ಹೆಣೆದಿದ್ದರೂ ಈ ಕಥೆಯ ಮೂಲ ಉದ್ದೇಶ ಬೇರೆಯೇ ಆಗಿದೆ ಎನ್ನುತ್ತಾರೆ ಲೇಖಕರು. ಇದು ಸಾಮಾಜಿಕ ಜಿಜ್ಞಾಸೆಯನ್ನು ಹುಟ್ಟು ಹಾಕುವ ಉದ್ದೇಶದಿಂದ ಬರೆದ ಕಥೆ ಎನ್ನುತ್ತಾರೆ. ಮನುಷ್ಯ ಸಮಾಜಜೀವಿ ಆಗಿರದಿದ್ದರೆ ಅವನ ಜೀವನ ಪದ್ಧತಿ ಹೇಗಿರಬಹುದು ಎಂದು ಸೂಚಿಸುವ ಉದ್ದೇಶದಿಂದ ಕಥೆಯಲ್ಲಿ ಅಂತಹ ಕಾಲ್ಪನಿಕ ಲೋಕದ ವ್ಯಕ್ತಿಯನ್ನು ನೆಲೆಯಾಗಿಸುವ ಪ್ರಯತ್ನ ಎಂದಿದ್ದಾರೆ. ಹೀಗಾಗಿ ಅಲ್ಲಿ ಶಾಸನ, ಚರಿತ್ರೆ ಮತ್ತಿತರ ವಿವರಗಳನ್ನು ಕೇವಲ ನಿಮಿತ್ತವೆಂದು ಭಾವಿಸಬೇಕು ಎಂದಿದ್ದಾರೆ.


ಶಾಸನಗಳ ಬಗೆಗಿನ ತರಗತಿಯಲ್ಲಿ ಪ್ರಾಧ್ಯಾಪಕಿ ಡಾ. ಇಂದ್ರಾಣಿ ಮುದ್ಗಲ್ ರವರು ಹಳೆಗನ್ನಡ ಭಾಷೆಯಲ್ಲಿರುವ, ಮಧ್ಯಪ್ರದೇಶದಲ್ಲಿನ ರಾಷ್ಟ್ರಕೂಟರ ಮುಮ್ಮಡಿ ಕೃಷ್ಣನ ಕಾಲಕ್ಕೆ ಸಂಬಂಧಿಸಿದ್ದ ಜೂರಾ ಶಾಸನದ ಬಗ್ಗೆ ವಿವರಿಸುತ್ತಿದ್ದರು. ಆದರೆ, ಅವರ ವಿದ್ಯಾರ್ಥಿನಿ ಸಂಜನಾ ಅದರ ಬಗ್ಗೆ ತನಗೆ ಈಗಾಗಲೇ ಮೂಡಿದ್ದ ಕೆಲವು ಪ್ರಶ್ನೆಗಳನ್ನು ಅವರಿಗೆ ತರಗತಿಯ ನಂತರ ಕೇಳಿದಾಗ ಆ ಶಾಸನದ ಕುರಿತ ಹಲವಾರು ಮಾಹಿತಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಇದರಲ್ಲಿ ಮುಖ್ಯವಾಗಿ ಕಥೆಯಂತೆ ಮುಮ್ಮಡಿ ಕೃಷ್ಣನ ಬಿರುದಾವಳಿಗಳ ಜೊತೆಗೆ ಆತನನ್ನು ಪರಂಗನಾ ಪುತ್ರ ಎಂದರೆ ಪರಾಂಗನೆಯನ್ನು ತಾಯಿಯಂತೆ ಕಾಣುವ ಆತನ ಗುಣಗಳನ್ನು ವಿವರಿಸಲಾಗಿದೆ. 


ಚರಿತ್ರೆಯ ಬೇರಾವ ರಾಜನಿಗೆ ಆಗಲಿ ಅಥವಾ ಇದೇ ರಾಜನ ಬೇರಾವ ಶಾಸನದಲ್ಲಿ ಆ ಗುಣವಿಶೇಷ ಉಲ್ಲೇಖಗೊಳ್ಳದೆ ಇರುವ ಕಾರಣ ಆಕೆಯಲ್ಲಿ ಇದ್ದ ಕುತೂಹಲವನ್ನು ಕೆರಳಿಸುತ್ತದೆ. ಹಾಗಾಗಿ ಇದು ಸಂಶೋಧನಾತ್ಮಕ ಪ್ರಬಂಧವಾಗಿ, ಕಥಾರೂಪದ ವರದಿಯಂತೆ ಕಾಣಸಿಗುತ್ತದೆ. 


ಮನುಷ್ಯ ಸಮಾಜದಲ್ಲಿ ಬದುಕದಿದ್ದರೆ ಅವನ ರೀತಿ-ನೀತಿಗಳು ಹೇಗಿರುತ್ತಿದ್ದವು ಹಾಗೂ ಅಂತಹ ಜನರು ನಾಡಿನ ರೀತಿ- ನೀತಿಗಳಿಗೆ ಹೊಂದಿಕೊಳ್ಳಲು ಹೊರಟಾಗ ಅಲ್ಲಿ ಯಾವ ರೀತಿಯ ಜನರು ಎದುರಾದರೆ ಹೇಗಿರಬಹುದು ಎಂಬುದರ ಚಿತ್ರಣವನ್ನು ಕಾಣಬಹುದಾಗಿದೆ. ಈ ಚಿತ್ರಣಕ್ಕೂ ಪರಾಂಗನಾ ಪುತ್ರ ಎಂಬ ಶಾಸನಕ್ಕೂ ಇರುವ ಕೊಂಡಿಯಾದರೂ ಏನು ಓದಿ ನೋಡಿ.


ಕಥೆಯ ಕುರಿತು ಹೆಚ್ಚು ಹೇಳುವುದಿಲ್ಲ. ಆದರೆ, ಇಲ್ಲಿ ಅರಮನೆಯ ಹಿರಿಯ ಅಧಿಕಾರಿ ಸಾಂಭೋಜಿ ಕಾರ್ವೆಯವರ ತಾಳ್ಮೆ, ಸಮಯೋಚಿತ ನಿರ್ಧಾರಗಳು, ಅವರ ಜಾಣ್ಮೆ, ಅನುಭವ ಎಲ್ಲವೂ ಇಷ್ಟವಾಗುತ್ತದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ