ಸಾಯಿಸುತೆಯವರ ಕಾದಂಬರಿಗಳಲ್ಲಿ ಹಲವಾರು ವಿಶೇಷ ಗುಣಗಳು ಕಂಡುಬರುತ್ತವೆ. ಕೌಟುಂಬಿಕ ಮೌಲ್ಯಗಳು, ನೈತಿಕತೆ, ಸ್ವಾಭಿಮಾನ, ಸರಳತೆ, ಗೌರವ, ಅನ್ಯೋನ್ಯತೆ, ಕಾಳಜಿ, ಗಟ್ಟಿತನ ಹೀಗೆ ಹೆಸರಿಸುತ್ತಾ ಹೋಗಬಹುದು.
ನನಗೆ ಇವರ ಕಾದಂಬರಿಗಳ ಹಿಂಬದಿಯಲ್ಲಿ ಕೊಡುವ ಬ್ಲರ್ಬ್ ಗಳು ಹೆಚ್ಚು ಇಷ್ಟವಾಗುತ್ತದೆ. ಲೇಖಕಿಯ ಆಲೋಚನೆ, ಧೀಮಂತ ವ್ಯಕ್ತಿತ್ವಗಳು ಹಾಗೂ ಬರಹಗಾರರ ಅಣಿಮುತ್ತುಗಳು ಜೊತೆಗೆ ಇಲ್ಲಿ ಉಲ್ಲೇಖವಾಗಿರುತ್ತದೆ. ವಸುಂಧರ ಕಾದಂಬರಿಯ ಅಂತಹ ಉಕ್ತಿಯನ್ನು ಉಲ್ಲೇಖಿಸಿ ನಂತರ ಕಾದಂಬರಿ ಹಾಗೂ ಅದರಲ್ಲಿ ನಾನು ಮೆಚ್ಚಿದ ಒಂದು ಪಾತ್ರದ ವಿಶೇಷ ಗುಣವನ್ನು ಬರೆಯುತ್ತಾ ಹೋಗುವೆ. ಒಂದೇ ಕಾದಂಬರಿಯಲ್ಲಿ ಹಲವಾರು ವಿಶೇಷ ಗುಣಗಳು ಇಷ್ಟವಾದರೂ.. ಇಂದು ನಾನು ಒಂದು ಕಾದಂಬರಿಗೆ ಒಂದು ಪಾತ್ರದ ವಿಶೇಷ ಗುಣದಂತೆ ಮಾತ್ರ ಪರಿಚಯಿಸುವೆ.
'ಪುಸ್ತಕಗಳು ಜ್ಞಾನ ನೀಡುವ ಕಲ್ಪವೃಕ್ಷ. ಹಸುವನ್ನು ಕರೆದು ನೋಡು, ಪುಸ್ತಕವನ್ನು ತೆರೆದು ನೋಡು. ಪುಸ್ತಕಗಳು ಇಲ್ಲದ ಕೊಠಡಿ ಆತ್ಮವಿಲ್ಲದ ದೇಹದಂತೆ. ಪ್ರಪಂಚದಲ್ಲಿ ಮರಣವಿಲ್ಲದ ವಸ್ತುಗಳೆಂದರೆ ಪುಸ್ತಕ.'
"ಹೌದು, ಪುಸ್ತಕಗಳು ನಮ್ಮ ನಿಜವಾದ ಸಂಗಾತಿಗಳು. ಅವುಗಳ ಆತ್ಮೀಯತೆ ನಮ್ಮನ್ನ ಒಳಗಿಂದ ಒಳಗೆ ದೃಢಗೊಳಿಸುತ್ತದೆ. ಆ ಪೋಷಕಾಂಶಗಳಿಂದ ಮಾನಸಿಕವಾಗಿ ಸದೃಢಗೊಳ್ಳಬಹುದು. ಬಹು ಎತ್ತರಕ್ಕೆ ಒಯ್ಯುತ್ತೆ.
ನನ್ನ ದಣಿದ ಮನಸ್ಸಿಗೆ ಪ್ರೇರಕ ಪೂರಕ ಶಕ್ತಿ, ಉತ್ಸಾಹ ತುಂಬುವುದು ಪುಸ್ತಕಗಳೇ.."
ಎನ್ನುವ ಸಾಯಿಸುತೆಯವರು ತಮ್ಮ ಕಾದಂಬರಿಗಳಿಂದ ನಮ್ಮ ಮನಸ್ಸಿಗೂ ಪ್ರೇರಕ ಶಕ್ತಿಯಾಗಿ ಉತ್ಸಾಹ ತುಂಬುತ್ತಿರುವುದು ನಿಜ.
1. ವಸುಂಧರ

ಶ್ಯಾಮರಾಯರ ವಾತ್ಸಲ್ಯ :
ಸೀತಾರಾಮಯ್ಯನವರ ಬಾಲ್ಯಮಿತ್ರರಾದ ಶ್ಯಾಮರಾಯರು ಮಿತ್ರನ ಕೊನೆಯ ಆಸೆಯಂತೆಯೇ ಆತನ ಮಗಳು ವಸುಂಧರಾಳನ್ನು ಅವಳ ಇಚ್ಛೆಯ ಪ್ರಕಾರವೇ ಓದಿಸಿ, ಅವಳನ್ನು ಸರಿಯಾದವರ ಕೈಯಲ್ಲಿಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಬಂಧು - ಬಾಂಧವರ ಜೊತೆ ಅವಳನ್ನು ಕಳಿಸಬಾರದೆನ್ನುವ ಸೀತಾರಾಮಯ್ಯನವರ ಮಾತಿಗೆ ಬೆಲೆ ಕೊಟ್ಟಂತೆ.. ಅವಳನ್ನು ಅಡಿಗಡಿಗೆ ರಕ್ಷಣೆ ಮಾಡುತ್ತಾ ತಮ್ಮ ಮನೆಗೆ ಕರೆದೊಯ್ಯುತ್ತಾರೆ. ತಂದೆಯನ್ನು ಕಳೆದುಕೊಂಡ ಮಗುವನ್ನು ಸಮಾಧಾನ ಮಾಡುವುದು ಸುಲಭವಲ್ಲ. ಸೂಕ್ತಿಗಳನ್ನು ಹೇಳುತ್ತಾ ತಮ್ಮ ಮನೆ ಬೃಂದಾವನದಲ್ಲಿ ಮಗಳಂತೆಯೇ ನೋಡಿಕೊಳ್ಳುತ್ತಾ.. ತಮ್ಮ ಮನೆಯಲ್ಲಿ ಕೆಲಸದಲ್ಲಿದ್ದ ಪ್ರತಿಯೊಬ್ಬರಿಗೂ ಇನ್ನೂ ವಸುಂಧರಳ ಮಾತಿನಂತೆ ನಡೆಯಬೇಕು ಎನ್ನುವ ಅಣತಿ ನೀಡುತ್ತಾರೆ. ಆಕೆಯನ್ನು ಕಾಲೇಜಿಗೆ ಸೇರಿಸಿ ಅವಳನ್ನು ಕಣ್ಣಿನಂತೆ ಜೋಪಾನ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಅವಳಿಗೆ ಒಡವೆಯನ್ನು ಮಾಡಿಸಿಕೊಡುತ್ತಾರೆ.
ಸ್ವಂತ ಮಕ್ಕಳಿಗೆ ಮಾತ್ರವೇ ತಮ್ಮ ವಾತ್ಸಲ್ಯ ಎನ್ನುವ ಸ್ವಾರ್ಥಕ್ಕಿಂತ ಇಲ್ಲಿ ನಿಸ್ವಾರ್ಥಿಯಾಗಿ ಗೆಳೆಯನ ಮಗಳನ್ನೇ ತನ್ನ ಮಗಳಂತೆ ಕಾಣುವ.. ಅಲ್ಲದೆ ತನ್ನ ನಿಲುವನ್ನು ಅವಳ ಮೇಲೆ ಹೇರದೆ, ಅವಳ ಆಲೋಚನೆಗೆ ತಕ್ಕಂತೆ ಅವಳನ್ನು ಬಿಡುವ ಅವಳ ತೀರ್ಮಾನವನ್ನು ಕೇಳುವ, ಅವಳ ಕಾಲೇಜಿನ ದಿನಚರಿಗಳನ್ನು ಕೇಳುವ ವಾತ್ಸಲ್ಯಭರಿತ ಮಾವನಾಗಿ ಓದುಗರ ಮನದಲ್ಲಿ ನೆಲೆ ನಿಲ್ಲುತ್ತಾರೆ.
2. ಧವಳ ನಕ್ಷತ್ರ
ರೋಹಿಣಿ ಹಾಗೂ ಶ್ರೀಕಾಂತ ಶಶಿಕಾಂತ ನಿಶಾಂತ್ ಬಾಪಟ್ ರ ಸ್ವಾಭಿಮಾನ ಹಾಗೂ ಸರಳತೆ :
ಮಧ್ಯಮ ವರ್ಗದ ಬದುಕು ನಡೆಸುವವರೆಗೂ.. ಶ್ರೀಮಂತಿಕೆಯಲ್ಲಿದ್ದು ಅಂತಹ ಬದುಕಿಗೆ ಹೊಂದಾಣಿಕೆ ಮಾಡಿಕೊಳ್ಳುವವರೆಗೂ ವ್ಯತ್ಯಾಸವಿದೆ. ಇಲ್ಲಿ ರೋಹಿಣಿ ಹಾಗೂ ಬಾಪಟ್ ಇಬ್ಬರ ಬದುಕೂ ಸರಳತೆಯಲ್ಲಿಯೇ ಸಾಗುತ್ತದೆ. ಪರಶುರಾಮ್ ರವರು ಶ್ರೀಮಂತಿಕೆಯಲ್ಲಿಯೇ ಬದುಕು ಸಾಗಿಸಿದ್ದರು. ಮಗಳು ರೋಹಿಣಿಯ ಬಾಲ್ಯವೆಲ್ಲವೂ ಕಳೆದದ್ದು ಹಾಗೆಯೇ.. ಆದರೆ, ವಾಸ್ತವ ಬದಲಾಗಿತ್ತು. ಆಳುಗಳು, ಕಾರು ಯಾವುದೂ ಇಲ್ಲದಿದ್ದರೂ ತಂದೆಯ ಮನಸ್ಸಿಗೆ ಘಾಸಿಯಾಗದಂತೆ ನಿಭಾಯಿಸುತ್ತಾ ಸ್ವಾಭಿಮಾನಿಯಾಗಿ ದುಡಿಯಲು ರಘುವೀರ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಅಪ್ಪ ಹಾಗೂ ಅತ್ತೆಯನ್ನು ಸಾಕುತ್ತಲೇ.. ತಂದೆಯ ಸೂಕ್ಷ್ಮ ಆರೋಗ್ಯವನ್ನು ಯಾರ ಹಂಗಿಗೂ ಬೀಳದಂತೆ ನಿಭಾಯಿಸುತ್ತಿದ್ದಳು.
ಬಾಪಟ್ ಹಿನ್ನೆಲೆ ಕಾದಂಬರಿಯ ಕೊನೆಯಲ್ಲಿ ತಿಳಿಯುತ್ತದೆ. ಆತ ಇದ್ದ ಶ್ರೀಮಂತ ಹಿನ್ನೆಲೆಯನ್ನು ಬಿಟ್ಟು ಪ್ರೈವೇಟ್ ಪ್ರೆಸ್ಸೊಂದರಲ್ಲಿ ಕಾಂಪೋಸಿಟರ್ ಆಗಿ ಕೆಲಸ ಮಾಡುತ್ತಾ.. ರೋಹಿಣಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ.. ಅವಳ ಪ್ರತಿಯೊಂದು ಕೆಲಸದಲ್ಲಿಯೂ ಸಹಾಯ ಮಾಡುತ್ತಿದ್ದ.
ಸರಳತೆ ಹಾಗೂ ಸ್ವಾಭಿಮಾನವನ್ನು ರೂಢಿಸಿಕೊಳ್ಳುವುದರ ಮೂಲಕ ಹಣವೇ ಎಲ್ಲವೂ ಅಲ್ಲವೆನ್ನುವ ಅವರಿಬ್ಬರ ಧೀಮಂತಿಕೆ ಧವಳ ನಕ್ಷತ್ರವನ್ನು ಅಜರಾಮರವನ್ನಾಗಿಸುವುದು ವಿಶೇಷ.
3. ಪ್ರಿಯ ಸಖೀ
ಪಾರ್ವತಿಯ ಸಂಸ್ಕಾರಯುತ ನಡವಳಿಕೆ :
ಕೂಡುಕುಟುಂಬ, ಸಂಸ್ಕಾರಯುತ ಕುಟುಂಬದಲ್ಲಿ ಬೆಳೆದ ಪಾರ್ವತಿ ಶ್ರೀಮಂತ ಮನೆತನದ ದೇವದಾಸನನ್ನು ಮದುವೆಯಾಗಿ ಅರಮನೆಗೆ ಕಾಲಿಟ್ಟರೂ.. ಅದು ಅಹಂಕಾರವನ್ನು ಮೂಡಿಸದೆ, ಕೀಳಾಗಿ ಯೋಚಿಸುವಂತೆ ಮಾಡದೆ, ಆಕೆಯನ್ನು ಸಮಾನಚಿತ್ತದಿಂದ ನಡೆದುಕೊಳ್ಳುವಂತೆ ಮಾಡುತ್ತದೆ. ಮನೆಯಲ್ಲಿ ಆಳುಕಾಳುಗಳಿದ್ದರೂ ಮಾವನ ಕಾಳಜಿಯನ್ನು ತಾನೇ ಮಾಡುತ್ತಾ.. ಹೃದಯಘಾತವಾಗಿದ್ದ ಅವರನ್ನು ಹುಷಾರಾಗಿ ನೋಡಿಕೊಳ್ಳುತ್ತಾ, ದೇವದಾಸನ ತಂಗಿ ವಿನುತಾ ಹಾಗೂ ತಮ್ಮ ಪ್ರಶಾಂತನನ್ನು ತಾಯಿಯ ಸ್ಥಾನದಲ್ಲಿ ನಿಂತು ಪೋಷಿಸುತ್ತಾ ಧೈರ್ಯ ತುಂಬುತ್ತಾ, ಆತ್ಮವಿಶ್ವಾಸ ಮೂಡಿಸುತ್ತಾಳೆ. ಅಲ್ಲದೆ, ಆ ಮನೆಗೆ ಹಿತೈಷಿಗಳಾಗಿದ್ದ, ವಕೀಲರೂ ಆಗಿದ್ದ ರಾಗಮೌಳಿ ಹಾಗೂ ಅವರ ಪತ್ನಿ ವೈದೇಹಿಯವರಿಗೆ ಮಗಳಂತೆಯೇ ಆಗಿಹೋಗುತ್ತಾಳೆ. ಚಿಕ್ಕ ವಯಸ್ಸಿನಲ್ಲಿ ಈ ಸಂಸ್ಕಾರಯುತ ನಡೆ ಹಾಗೂ ಮನೆಯ ಹಾಗೂ ಜವಾಬ್ದಾರಿಯ ನಿರ್ವಹಣೆ ಸುಲಭವಲ್ಲ. ಹಾಗೆಯೇ, ಅದು ಹೊರೆಯಲ್ಲ. ಪ್ರೀತಿ ತುಂಬಿದ ಘನತೆಯುತ ನಡೆ ಎಂಬುದನ್ನು ನಿರೂಪಿಸುತ್ತಾ.. ಮನದಲ್ಲಿ ನೆಲೆ ನಿಲ್ಲುತ್ತಾಳೆ.
4. ಮುಗಿಲ ತಾರೆ
ಭಾಷ್ಯಂರವರ ಜವಾಬ್ದಾರಿಯುತ ನಡೆ :
ಭಾಷ್ಯಂರವರು ತಂದೆಯಾಗಿ ಹಾಗೂ ಮಾವನಾಗಿ ತಮ್ಮ ಜವಾಬ್ದಾರಿಯುತ ನಡೆಯಿಂದ ವಿಶೇಷವಾಗಿ ನೆನಪಿನಲ್ಲುಳಿಯುತ್ತಾರೆ. ಚೈತ್ರ ಸಂಸಾರಿಕ ಜೀವನವನ್ನು ಮುರಿದುಕೊಂಡು ಬಂದಾಗ ಆಕೆ ಏನೂ ಹೇಳದಿದ್ದರೂ.. ಅರ್ಥ ಮಾಡಿಕೊಂಡವರು ಹಾಗೂ ಆಕೆಯ ಬೆನ್ನಿಗೆ ನಿಂತವರು ಭಾಷ್ಯಂ. ಮಗಳ ಮನಸ್ಥಿತಿ ಕುಸಿಯದಂತೆ, ಮತ್ತೆ ಸಮಾಜದ ಎದುರಿಗೆ ಸ್ಪರ್ಧೆಗೆ ಇಳಿಯುವಂತೆ, ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳುವಂತೆ ಮುಂದೆ ಓದಲು ಪ್ರೇರೇಪಿಸಿದವರು ಹಾಗೂ ತನ್ನ ಮಗಳು ಎಂದಿಗೂ ತಪ್ಪು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಬಲವಾಗಿ ನಂಬಿದವರು. ಇಂತಹ ತಂದೆ ಬಹಳ ಅಪರೂಪ.
ತನ್ನ ಎರಡನೇ ಮಗಳು ಸ್ಮಿತಾಳ ಗಂಡ ಸಂದೀಪನ ಮನೆಯಲ್ಲಿ ಕೂಡು ಕುಟುಂಬವಾಗಿದ್ದಾಗ ಆತ ಯಾವುದೇ ಜವಾಬ್ದಾರಿಯನ್ನು ತಾನಾಗಿಯೇ ತೆಗೆದುಕೊಳ್ಳಲು ಮುಂದೆ ಹೋಗದಿದ್ದಾಗ.. ಬುದ್ಧಿವಂತಿಕೆಯಿಂದ ಮಾತಲ್ಲಿಯೇ ತಿದ್ದಿದವರು. "ಪ್ರಯೋಜನವಿಲ್ಲದ ವಸ್ತುವನ್ನು ಯಾರೂ ಗೌರವಿಸಲಾರರು. ಅದು ವ್ಯಕ್ತಿಯ ಜೀವನಕ್ಕೂ ಅನ್ವಯಿಸುತ್ತೆ." ಎಂಬ ಮಾತಷ್ಟೇ ಸಾಕಿತ್ತು ಸಂದೀಪನಿಗೆ ಜವಾಬ್ದಾರಿಯನ್ನು ಅರಿವಾಗಿಸಲು.
ಹೆಣ್ಣುಮಕ್ಕಳ ತಂದೆಯಾಗಿ ಅವರ ಭವಿಷ್ಯವನ್ನು ಗಟ್ಟಿಗೊಳಿಸಲು ಇಂತಹ ಜವಾಬ್ದಾರಿಯುತ ನಡೆ ಅತ್ಯವಶ್ಯಕ.
5. ಸಮನ್ವಿತ
ಸಮನ್ವಿತಳ ಸಮಚಿತ್ತತೆ ಹಾಗೂ ದೃಢತೆ :
ಸಮನ್ವಿತ ಹಾಗೂ ಅಪ್ರಮೇಯರ ವಿವಾಹವಾದ ಮರುಕ್ಷಣವೇ ಅಪ್ರಮೇಯನ ಬಂಧನವಾಗಿತ್ತು. ಅಲ್ಲದೆ, ಆತನ ಮೇಲಿದ್ದ ಆರೋಪ ಎಂತಹವರನ್ನೂ ಅನುಮಾನಿಸುವಂತೆ ಮಾಡುತ್ತಿತ್ತು. ಹಿರಿಯರೇ ನೋಡಿ ನಿಶ್ಚಯಿಸಿದ್ದ ವಿವಾಹ. ಬೇರೆ ಹೆಣ್ಣಾಗಿದ್ದರೆ ಕುಸಿದೇ ಹೋಗುತ್ತಿದ್ದಳು. ಆದರೆ, ಸಮನ್ವಿತ ಅದನ್ನು ವಿವಾಹವೆಂದೇ ಪರಿಗಣಿಸದೆ ಬದುಕಬಹುದಾಗಿದ್ದರೂ.. ಆಕೆಗಿದ್ದ ಸಂಸ್ಕಾರ ಹಾಗೆ ಮಾಡಗೊಡಿಸಲಿಲ್ಲ. ಅಲ್ಲದೆ, ತಾನೇ ಹಿರಿಯರೆಲ್ಲರಿಗೂ ಸಮಾಧಾನಗೊಳಿಸುತ್ತಾ.. ಅಪರಿಚಿತ ವ್ಯಕ್ತಿಯಾಗಿದ್ದವನ ಜೊತೆ ಬಾಳುವ ತೀರ್ಮಾನ ಕೈಗೊಳ್ಳುತ್ತಾಳೆ. ಆಕೆಗೆ ಪೋಷಕರಿಂದ ಸಿಕ್ಕ ಸ್ವಾತಂತ್ರ್ಯವೂ ಅವಳ ಗಟ್ಟಿ ನಿಲುವನ್ನು ಮತ್ತಷ್ಟು ದೃಢವಾಗಿರಿಸಿಕೊಳ್ಳಲು, ಎಂತಹ ಸಮಸ್ಯೆಗೆ ಬಂದರೂ ಅದನ್ನು ಸಮಚಿತ್ತತೆಯಿಂದ ನಿವಾರಿಸಿಕೊಳ್ಳಲು ದಾರಿಯಾಗಿಸಿತು ಎಂದರೂ ತಪ್ಪಾಗಲಾರದು. ಇದು ಆ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಅಪರೂಪದಲ್ಲೇ ಅಪರೂಪವಾದ ನಡೆ.
6. ನಿಶಾಂತ್
ನಿಶಾಂತ್ ನ ಸಾಧನೆಯ ಹಂಬಲ ಮತ್ತು ಸ್ವಾಭಿಮಾನ :
ಹೆತ್ತ ತಾಯಿ ಕಲ್ಯಾಣಿಯ ಮೆಟ್ಟಿಲ ಮೇಲೆ ಬಿಟ್ಟು ಅನಾಥವಾಗಿಸಿದರೂ ಊರಿನ ತಾಯಂದಿರೇ ಆತನ ತಾಯಿಯರಾಗಿ ಪೋಷಿಸಿದರು. ಉಸ್ತಾದ್ ಚಿಕ್ಕಣ್ಣನವರ ಕೈಗೆ ಸಿಕ್ಕು ನಿಶಾಂತ್ ಆದನು. ಆ ಪ್ರೀತಿ-ಪ್ರೇಮ ಉಸ್ತಾದರ ಮಾತಿಗೆ ವಿದ್ಯೆಗೆ ಬೆಲೆಕೊಟ್ಟು ಹಳ್ಳಿಯಲ್ಲಿ ಉಳಿದಿದ್ದರೆ ಗರಡಿಯಲ್ಲಿ ಸಾಧನೆ ಮಾಡುತ್ತಿದ್ದನೇನೋ.. ಆದರೆ, ಓದುವ ಹಾಗೂ ಸಾಧಿಸುವ ಹಂಬಲದಿಂದ ಆತ ಅಲ್ಲಿಂದ ಹೊರಟು ನಿಂತ. ಆದರೆ, ಸಿಕ್ಕಿದ್ದೆಲ್ಲವೂ ಅವಮಾನ. ಆದರೆ, ಸ್ವಾಭಿಮಾನದ ಹಾದಿಯನ್ನು ಬಿಡದೆ, ಶರ್ಮರ ಮನೆಯವರಿಂದಾದ ಅವಮಾನಗಳನ್ನು ಮೆಟ್ಟಿನಿಂತು ಪ್ರತಿಬಾರಿ "ಸಾಯೋಕಲ್ಲ. ಬದುಕೋಕೆ ಬಂದಿರೋದು" ಎನ್ನುತ್ತಾ.. ತನ್ನ ಚಿಂತನೆ, ನಡೆ-ನುಡಿ ಎಲ್ಲದರಿಂದ ಸಾಧನೆಯ ಹಾದಿಯತ್ತ ನಡೆದವನಿಗೆ ಆತ ನಿರೀಕ್ಷಿಸದ ಆತನ ಬದುಕಿನ ಸತ್ಯ ಎದುರಾಗುತ್ತದೆ. ಆದರೆ, ಇಲ್ಲಿ ಮೇಲುಗೈ ಸಾಧಿಸಿ ಓದುಗರ ಮನದಲ್ಲುಳಿಯುವುದು ಆತನ ಸಾಧನೆಯ ಹಂಬಲ ಹಾಗೂ ಸ್ವಾಭಿಮಾನ.
7. ನನ್ನೆದೆಯ ಹಾಡು
ಅನಿರುದ್ಧನ ವಿಶಾಲ ಚಿಂತನೆ :
ಈ ಕಾದಂಬರಿಯಲ್ಲಿ ಇದು ಅತಿ ದೊಡ್ಡ ಪಾತ್ರವಲ್ಲವಾದರೂ.. ತೂಕವುಳ್ಳ ಪಾತ್ರವೆಂದೆನ್ನಿಸಿತು.
ಅನಿರುದ್ಧ ವಿದೇಶದಲ್ಲಿದ್ದು ಓದಿ ಬಂದವನು. ಕಾರು ಕೆಟ್ಟು ನಿಂತ ಅನಿರೀಕ್ಷಿತ ಸಂದರ್ಭದಲ್ಲಿ ನೋಡಿದ ಶ್ರೀದೇವಿಯನ್ನು ಇಷ್ಟಪಟ್ಟು ವಿವಾಹವಾಗಲು ಬಯಸಿ ವಿವಾಹವಾಗುತ್ತಾನೆ.
ಅನಿರುದ್ಧ ಬಹಳ ವಿವೇಕಿ ಹಾಗೂ ತಿಳಿದಿದ್ದವನು. "ಜಗತ್ತೇ ಪರಿಶುದ್ಧ ಪ್ರೀತಿಗಾಗಿ ಆತುರದಿಂದ ಹಾತೊರೆಯುತ್ತಿದೆ. ಪ್ರತಿಫಲವನ್ನು ಅಪೇಕ್ಷಿಸದೆ ನಾವು ಅದನ್ನು ಹಂಚಬೇಕು. ಕೊಡು ಕೊಡು ಪ್ರತಿಫಲಾಪೇಕ್ಷೆ ಇಲ್ಲದೆ" ಎಂಬ ಸ್ವಾಮಿ ವಿವೇಕಾನಂದರ ಮಾತು ಸೆಳೆದಿತ್ತು. ಪ್ರೀತಿ ಎನ್ನುವ ಪದವನ್ನು ಒಂದು ಚೌಕಟ್ಟಿನಲ್ಲಿರಿಸಿ ನೋಡಲು ಇಷ್ಟವಾಗಲಿಲ್ಲ. ಪ್ರೀತಿ ಸರ್ವವ್ಯಾಪಿ ಆನಂದಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು ಎಂದು ನಂಬಿದ್ದವನು. ಶ್ರೀದೇವಿಯನ್ನು ಯಾರಾದರೂ ಪ್ರೀತಿಸರಬಹುದಾ ಎನ್ನುವ ಪ್ರಶ್ನೆ ಆತನ ಮನಸ್ಸಲ್ಲಿ ಹುಟ್ಟಿದರೂ.. ಆಕೆಯ ತಾಯಿ ವನಜಾಕ್ಷಮ್ಮನ ಹಿನ್ನೆಲೆ ಸಂದೇಹ ತರಬಹುದಾದರೂ.. ಅದಕ್ಕೆ ಆಸ್ಪದ ಕೊಡದಂತೆ ಆಕೆಯನ್ನು ಪ್ರೀತಿಯಿಂದ ನೋಡಿಕೊಂಡವನು.
8. ವಿವಾಹ ಬಂಧನ
ಅನುರಾಧಾಳ ತಾಳ್ಮೆಯ ತಪಸ್ಸು :
ಅನುರಾಧ ಹಾಗೂ ಶಶಿಧರನ ವಿವಾಹವಾದರೂ.. ಶಶಿಧರನಿಗೆ ಇದು ತಂದೆ-ತಾಯಿಗೆ ತೃಪ್ತಿ ನೀಡುವ ವಿವಾಹ ಮಾತ್ರವೇ.. ಆತನಿಗೆ ಈ ವಿವಾಹ ಇಷ್ಟವಿರಲಿಲ್ಲ. ಆದರೆ, ಎಲ್ಲರ ಕಣ್ಮಣಿಯಾಗಿ ಬೆಳೆದಿದ್ದ ಅನುರಾಧಳಿಗೆ ಅವನ ಈ ನಡೆ, ಮೌನ, ನಿರ್ಲಿಪ್ತತೆ ಚುಚ್ಚುವಂತಿದ್ದರೂ.. ಎಲ್ಲವೂ ಒಂದಲ್ಲ ಒಂದು ದಿನ ಸರಿಯಾಗುತ್ತದೆ ಎನ್ನುವ ಭಾವದಲ್ಲಿಯೇ ದಿನ ಕಳೆಯುತ್ತಿದ್ದಳು. ಗಂಡನ ಮನೆಯವರಿಗೆ ಅದರ ಸುಳಿವು ಬಿಟ್ಟುಕೊಡದಿದ್ದರೂ ಅವರಿಗೆ ಇದರ ಅರಿವಿತ್ತು. ಆಕೆಯ ದೃಢಚಿತ್ತ, ಮೌನ, ಅಚ್ಚುಕಟ್ಟುತನ ಹೀಗೆ ಕೆಲಸದಿಂದಲೇ ಆತನ ಮನಸಳೆಯುತ್ತಿದ್ದಳು. ಅನುರಾಧಾಳ ಒಳ್ಳೆಯತನ ಹಾಗೂ ತಾಳ್ಮೆ ಶಶಿಧರನ ಪ್ರತಿ ನಡೆಗೂ ಉತ್ತರವಾಗುತ್ತಲೇ ಹೋಗುತ್ತದೆ. ರಘುವಿನ ಮುದ್ದಿನ ತಂಗಿ ಇಷ್ಟು ಕಷ್ಟ ಅನುಭವಿಸಿದವಳೇ ಅಲ್ಲ. ಆದರೆ, ಇಂತಹ ಪರಿಸ್ಥಿತಿಯನ್ನು ಹಂಚಿಕೊಳ್ಳದಿದ್ದರೂ.. ಯಾರ ಮಾರ್ಗದರ್ಶನವಿಲ್ಲದಿದ್ದರೂ.. ಸ್ವತಃ ತಾಳ್ಮೆ ತಂದುಕೊಂಡು ತಪಸ್ಸಿನಂತೆ ಕಾಯುವುದು ಸುಲಭದ ಮಾತಲ್ಲ. ಸಣ್ಣಪುಟ್ಟ ಮುನಿಸಿಗೆ ಮನಸ್ಸು ಮುರಿದು ಹೋಗುವಾಗ ದಂಪತಿಗಳಲ್ಲಿ ಒಬ್ಬರಿಗಾದರೂ ಇಂತಹ ತಾಳ್ಮೆ ಅವಶ್ಯಕ. ಅನುರಾಧ ತನ್ನ ತಾಳ್ಮೆಯಿಂದಲೇ ಮನಸ್ಸಿನಲ್ಲಿ ನೆಲೆಯಾಗುತ್ತಾಳೆ. ನಮಗೂ.. ಶಶಿಧರನಿಗೂ..
ಸಾಯಿಸುತೆಯವರ ಸಾಮಾಜಿಕ ಕಾದಂಬರಿಗಳು ಹಲವಾರು ವಿಶೇಷ ಗುಣಗಳಿಂದ ಮನಸ್ಸಿನಲ್ಲಿ ನೆಲೆ ನಿಲ್ಲುತ್ತವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ